ನಮ್ಮ ಬಗ್ಗೆ

ಆಶಯದ ಮಾತು
ಇಂದಿನದು ‘ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ’ದ ಯುಗ. ಮಾಹಿತಿಯ ಭಾರ, ಸಂವಹನದ ವೇಗ ಒತ್ತಡಗಳ ನಡುವೆ ನೈಜವಾದ ಸಂಗತಿಗಳು ಮರೆಗೆ ಸರಿಯುತ್ತವೆ. ಸುಳ್ಳು ಸಂಗತಿಗಳೇ ಮೆರೆದು ಅಬ್ಬರದ ಸಂವಹನವು ಪೂರೈಕೆ ಮಾಡುವ ಮಾಹಿತಿ ಎಷ್ಟು ದಿಟ ಎಂಬುದನ್ನು ಪರಿಶೀಲಿಸದೆಯೇ ನಂಬುವ ಕಾಲವಿದು. ಸಮಾಜದಲ್ಲಿ ಚರ್ಚೆಯಾಗಬೇಕಾದ ನೂರಾರು ಸಂಗತಿಗಳು ಚರ್ಚೆಯಾಗದೆಯೇ ಜನರ ಅರಿವಿನಿಂದ ದೂರ ಸರಿಯುತ್ತವೆ.
ಇಂತಹ ಸಂದರ್ಭದಲ್ಲಿ ಸಮಾಜವನ್ನು ಹೆಚ್ಚು ಸಂವೇದನಾಶೀಲಗೊಳಿಸುವ ಕೆಲಸ ಮಾಡಬೇಕಾದುದು ಪ್ರಜ್ಞಾವಂತ ನಾಗರಿಕ ಸಮಾಜದ ಕೆಲಸ. ಅದು ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಿರುತ್ತದೆ. ಇಲ್ಲವಾದರೆ ಸಂವೇದನಾ ಶೂನ್ಯತೆ ಪ್ರಜಾಪ್ರಭುತ್ವವನ್ನು ಬಲಿ ತೆಗೆದುಕೊಳ್ಳುತ್ತದೆ.
ಇದನ್ನು ಅರಿತ ಸಮಾನ ಮನಸ್ಕ ಗೆಳೆಯರ ಚಿಂತನೆಯ ಫಲವೇ ‘ಅನಿಕೇತನ’ ಎಂಬ ಈ ವೆಬ್ಮ್ಯಾಗಜಿನ್. ಜನರಿಗೆ ಜನಪರ ಅರಿವು ನೀಡುವ ಮೂಲಕ ಜನರನ್ನು ಸಂವೇದನಾಶೀಲರನ್ನಾಗಿಸುವುದು ಇದರ ಆಶಯ. ಆಸಕ್ತ ಮತ್ತು ಸಂಬಂಧಪಟ್ಟ ವಿಷಯ ತಜ್ಞರಿಂದ ಲೇಖನಗಳನ್ನು ಬರೆಸಿ ನಿಯಮಿತವಾಗಿ ಪ್ರಕಟಿಸುವುದು ಇದರ ಉದ್ದೇಶ. ಲಾಭರಹಿತವಾದ ಉದ್ದೇಶವುಳ್ಳ ಒಂದು ಸಂಘಟಿತ ಪ್ರಯತ್ನ.
ರಾಜಕೀಯ, ಆಡಳಿತ, ಸಾಹಿತ್ಯ, ಕಲೆ, ಸಂಗೀತ, ನಾಟಕ, ಆರೋಗ್ಯ, ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಚಳವಳಿಗಳು, ಪರಿಸರ, ಕೃಷಿ, ಚಲನಚಿತ್ರ, ಕ್ರೀಡೆ, ವಿಜ್ಞಾನ, ಅಧ್ಯಾತ್ಮ, ಜಾನಪದ, ಇತಿಹಾಸ, ವ್ಯಂಗ್ಯಚಿತ್ರ, ಫೋಟೋಗ್ರಫಿ, ಮಾಧ್ಯಮ, ಪ್ರವಾಸ ಇತ್ಯಾದಿ ವಿಷಯಗಳನ್ನು ಕೇಂದ್ರೀಕರಿಸಿ ಉತ್ತಮ ಪ್ರಜಾತಾಂತ್ರಿಕ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಜನಪರ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ.
ಆಸಕ್ತರು ಬರೆಯುವ, ಓದುವ, ಪರಸ್ಪರ ಚರ್ಚಿಸುವ ಮೂಲಕ ಈ ಪ್ರಕ್ರಿಯೆಯಲ್ಲಿ ತಾವೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಬಳಗದ ಅಪೇಕ್ಷೆ. ಆ ಮೂಲಕ ಹೊಸತನದ ಹೊಸಮೌಲ್ಯಗಳ ಹೊಸಸಮಾಜ ಕಟ್ಟುವ ಕೆಲಸದಲ್ಲಿ ಎಲ್ಲರೂ ಜೊತೆಗೂಡಬೇಕು ಎಂಬುದು ನಮ್ಮ ಕನಸು.