ಹೋರಾಡಿದರೆ ಜಯ ನಮ್ಮದು

-ಎ. ನರೇಂದ್ರ ಕಾರಟಗಿ

A.Narendra  Karatagi (1)ಅಕ್ಷರಶಃ ಅದು ದುರಾಡಳಿತವೆನಿಸಿತ್ತು. ಆದರೂ ಸುಧೀರ್ಘ ಶೋಷಣೆಯ ವಿರುದ್ಧ ಧ್ವನಿ ಎತ್ತಲಾರದ ಆ ಬಡ ದಲಿತ ಕುಟುಂಬಗಳು ನಿರಂತರವಾಗಿ ಜೀತದಾಳುಗಳಾಗಿ ದುಡಿಯುತ್ತಾ ಭೂಮಾಲೀಕರ ದಬ್ಬಾಳಿಕೆಗೆ ಬಸವಳಿಯಬೇಕಿತ್ತು. ಕುಟುಂಬದ ಮುಂದಿನ ತಲೆಮಾರು ಕೂಡ ಅದೇ ಸ್ಥಾನದಲ್ಲಿ ಮುಂದುವರೆದು ಜೀತಪದ್ಧತಿಯನ್ನು ಜೀವಂತವಾಗಿರಿಸಿತ್ತು.

ಹೀಗೆ ಕಟು ಬದುಕಿನ ವಾಸ್ತವ ತಿಳಿದು ಬೆಕ್ಕಸ ಬೆರಗಾಗಿದ್ದ ನನಗೆ ಅದೇ ಜನತೆಯ ಜೀವನ ಹಕ್ಕಿಗಾಗಿ ನಡೆಯುವ ಹೋರಾಟದಲ್ಲಿ ಕೈಜೋಡಿಸುವ ಆಸೆ ಬೆಟ್ಟದಷ್ಟಿತ್ತು. ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕೆಂಬ ಅಚಲ ಬಯಕೆಯೊಂದಿಗೆ ನಾನೂ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸಿದೆ. ಅಲ್ಲಿಂದ ಹೋರಾಟದ ಕುರಿತು ನನ್ನ ನಿರೀಕ್ಷೆ, ಆಲೋಚನೆಗಳು, ಅನುಭವಗಳು ಹಾಗೂ ಕಲಿತ ಪಾಠಗಳ ಬಗ್ಗೆ ಇಡಿಯಾಗಿ ಬರೆಯಬೇಕೆನಿಸಿದೆ.

??????????

ಬಳ್ಳಾರಿ ಜಿಲ್ಲೆಯ ಕಂಪ್ಲಿ ಬಳಿಯಿರುವ ನೆಲ್ಲೂಡು-ಕೊಟ್ಟಾಲ್‍ಗೆ ಶ್ರೀರಾಮರಂಗಾಪುರ(ಎಸ್.ಆರ್.ಪುರ) ಎಂದೂ ಕರೆಯುತ್ತಾರೆ. ಶ್ರೀರಾಮರಂಗಾಪುರದಲ್ಲಿ ಅಕ್ಷರಶಃ ದೌರ್ಜನ್ಯ ನಡೆಯುತ್ತಿತ್ತು. ಈ ಹಿಂದೆ ಭೂ ಮಿತಿ ಕಾಯ್ದೆಯನ್ವಯ ಪ್ರತಿಯೊಂದೂ ಕುಟುಂಬಕ್ಕೂ ಭೂಮಿ ದೊರಕಿಸುವ ನಿಟ್ಟಿನಲ್ಲಿ ಭೂ ನ್ಯಾಯ ಮಂಡಳಿಯಿಂದ ಒಂದೇ ಕುಟುಂಬಕ್ಕೆ ಸೇರಿದ ನೂರಾರು ಎಕರೆ ಭೂಮಿಯನ್ನು ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. ಅದರಂತೆ ಜಮೀನ್ದಾರಿಕೆಯನ್ನು ನಡೆಸುತ್ತಿದ್ದ ಭೀಮನೇನಿ ಕುಟುಂಬದ ಒಡೆತನಕ್ಕೆ ಸೇರಿದ110ಎಕರೆ ಭೂಮಿಯನ್ನು ಗ್ರಾಮದ 31 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿತ್ತು. ದುರಾದೃಷ್ಟವೆಂದರೆ ಆ ಹಂಚಿಕೆ ಕೇವಲ ಕಾಗದ-ಪತ್ರಗಳಿಗೆ ಮಾತ್ರ ಸೀಮಿತವಾಗಿತ್ತು.

ಆದರೆ, ಭೂಮಿ ಪಡೆದ ಕುಟುಂಬಗಳು ವಾಸ್ತವದಲ್ಲಿ ಮಾತ್ರ ಮೂರು ತಲೆಮಾರುಗಳ ಕಾಲ ಅದೇ ಭೂಮಿಯಲ್ಲಿ ಭೀಮನೇನಿ ಕುಟುಂಬಕ್ಕೆ ಜೀತದಾಳುಗಳಾಗಿ ದುಡಿದು ಶೋಷಣೆಯ ಸಂಕೋಲೆಗೆ ಸಿಲುಕಿದ್ದರು. ಶೋಷಣೆಯಲ್ಲಿ ಬೆಂದ ಕೆಲ ಕುಟುಂಬಗಳು ಎಲ್ಲವನ್ನೂ ಕೈಚೆಲ್ಲಿ ಜೀವನ ಅರಸುತ್ತಾ ಬೇರೆ ಕಡೆ ತೆರಳಿದರೆ, ಇನ್ನೂ ಕೆಲ ಕುಟುಂಬಗಳು ಅದ್ಯಾವ ಕಾರಣಕ್ಕೋ ಶೋಷಣೆಯ ಸಂಕೋಲೆಗೆ ಒಗ್ಗಿಕೊಂಡವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಆಧುನಿಕ ಯುಗದ ಇಂದಿನ ದಿನಗಳಲ್ಲೂ ಈ ಶೋಷಣೆಯ ಸಾಮ್ರಾಜ್ಯದ ಅರಿವು ಯಾರಿಗೂ ಇರಲಿಲ್ಲ. ಬಲ್ಲವರು(ಅಧಿಕಾರಿಗಳು, ರಾಜಕಾರಣಿಗಳು, ಮಾಧ್ಯಮಗಳು) ಸಹ ಅತ್ತ ಸುಳಿಯಲೂ ಹಿಂಜರಿದಿದ್ದು ಭೀಮನೇನಿ ಕುಟುಂಬದ ದೌರ್ಜನ್ಯ ಮತ್ತು ಪ್ರಾಬಲ್ಯವನ್ನು ಬಿಂಬಿಸುತ್ತದೆ.

??????????

ಇದೆಲ್ಲಾ ಬೆಳಕಿಗೆ ಬರುತ್ತಿದ್ದಂತೆ ಶೋಷಿತರ ಪರ ಹೋರಾಟಕ್ಕೆ ಸಜ್ಜಾದ ಕರ್ನಾಟಕ ಜನಶಕ್ತಿ ಸಂಘಟನೆ(ಕೆಜೆಎಸ್)ಯ ಕೆಲ ಪ್ರಮುಖರ ಒಡನಾಟದಿಂದ ನಾನೂ ಇದರ ಬಗ್ಗೆ ತಿಳಿದುಕೊಳ್ಳುವಂತಾಗಿತ್ತು. ನಂತರ ಸುಮಾರು ದಿನಗಳ ಕಾಲ ಕೆಜೆಎಸ್ ಹಾಗೂ ಕೆಎಮ್‍ಆರ್‍ವಿ(ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ) ಸೇರಿದಂತೆ ಪ್ರಗತಿಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧತೆ ನಡೆಸಿದವು. ಅದರಂತೆ ಮೇ.9, 2014ರಂದು ಹೋರಾಟವೂ ನಡೆಯಿತು.

ಹೋರಾಟದಲ್ಲಿ ಪಾಲ್ಗೊಂಡವರಿಗೆ ಆ ಹಳ್ಳಿಯ ಜನರು ಕುಡಿಯಲು ನೀರು ಕೇಳಿದರೂ ಕೊಡಲಿಲ್ಲ. ಇನ್ನು ಹೋರಾಟದ ಅಂಗವಾಗಿ ಜಮೀನಿನಲ್ಲಿ ಉಳುಮೆ ಮಾಡಲು ಎತ್ತುಗಳನ್ನೂ ಸಹ ಯಾರೂ ಒದಗಿಸಲಿಲ್ಲ. ಇದೆಲ್ಲವನ್ನು ಸಹಿಸಿಕೊಂಡು ಕೆಜೆಎಸ್ ಹಾಗೂ ಕೆಎಮ್‍ಆರ್‍ವಿ ಹೋರಾಟ ನಡೆಸಿ ಆ ಭೂವಂಚಿತ ಕುಟುಂಬಗಳಿಗೆ ಭೂಮಿಯನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾದವು. ಅದರ ಫಲವಾಗಿಯೇ ಇಂದು ದಲಿತ ಕುಟುಂಬಗಳು ತಮ್ಮ ಭೂಮಿಯಲ್ಲಿ ಉಳುಮೆ ಮಾಡಿ ಬಿತ್ತನೆ ಮಾಡುತ್ತಿರುವುದು ಸ್ವಾತಂತ್ರ್ಯದ ಸಂಕೇತದಂತಿದೆ.

ರಾಜ್ಯದ ಚಿಂತಕರು, ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಕವಿಗಳು, ಲೇಖಕರು ಹಾಗೂ ಪ್ರಗತಿಪರ ಸಂಘಟನೆಗಳು ಸಹ ಹೋರಾಟದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಚೈತನ್ಯ ತುಂಬಿದರು. ಹೋರಾಟದ ಸ್ಥಳದಲ್ಲಿ ಕೇಳಿದ ಸಾಮಾಜಿಕ ಕಳಕಳಿಯ ಹಾಡುಗಳು, ಮಾತುಗಳು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತಿವೆ. ನನ್ನ 27ವರ್ಷಗಳ ಜೀವನದಲ್ಲಿ ನಾನು ಮೊದಲ ಬಾರಿಗೆ ಪಾಲ್ಗೊಂಡಿದ್ದ ಈ ಹೋರಾಟ ನಿಜಕ್ಕೂ ಅದ್ಭುತ, ಅವಿಸ್ಮರಣೀಯ. ನನ್ನ ಜೀವನಕ್ಕೂ ಮುನ್ನುಡಿಯಾಗುವಂತೆ ನಾನು ಹೋರಾಟವನ್ನು ಇಂದಿಗೂ ಅವಲೋಕಿಸುತ್ತಿದ್ದೇನೆ.

Leave a Reply

Your email address will not be published.