ಹೊಸ ಹೆಜ್ಜೆ

-ಮಾಲಾ ಸಿ. ಎಸ್.

ಹೊರಗಡೆ ಸ್ಕೂಟರ್ ನಿಂತ ಶಬ್ಧ ಕೇಳಿದ ನಳಿನಾ ರೂಮಿನ ಕಿಟಕಿಯಿಂದ ಬಗ್ಗಿ ನೋಡಿದಳು. ಬಂದಿದ್ದವರು ಅಣ್ಣ ಮಧು ಹಾಗೂ ಅವನ ಸ್ನೇಹಿತ ರಾಘವ. ಇಷ್ಟು ಹೊತ್ತು ತಡೆದಿದ್ದ ದುಃಖದ ಕಟ್ಟೆ ಒಡೆಯಿತು. ಮಂಡಿಗೆ ಮುಖವಾನಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹೊರಗಡೆ ಅತ್ತೆ ಮತ್ತು ಮಾವನವರ ಧ್ವನಿ ಕೇಳಿಸುತ್ತಿತ್ತು. ನಳಿನಾ ಬಿಕ್ಕಳಿಕೆಗಳ ನಡುವೆಯೂ ಅದಕ್ಕೆ ಗಮನ ಕೊಟ್ಟಳು.

“ಅದಕ್ಕೇ ನಾವು ಹೇಳಿದ್ದು, ನಾಳೆ ಕುಂಕುಮ, ಬಳೆ ತೆಗೆಯೋ ಶಾಸ್ತ್ರ ಒಂದು ಆಗೋಗ್ಲಿ. ಆಮೇಲೆ ನಿಮ್ಮ ಮನೆಗೆ ಕಳಿಸೋ ಯೋಚನೆ ಮಾಡೋಣ ಅತ್ತೆಯ ನಿಷ್ಟುರ ದನಿ.
“ನೀವು ಏನೇ ಹೇಳಿ ಅಮ್ಮ ನಾನು ಇದಕ್ಕೆ ಒಪ್ಪೋಲ್ಲ. ಕುಂಕುಮ ಬಳೆ, ಹೂವು ಇವೆಲ್ಲಾ ಮದುವೆಗಿಂತ ಮೊದಲು ಅವಳು ಧರಿಸುತ್ತಿದ್ದಳು. ಮುಂದೆನೂ ಹಾಕೋದ್ರಲ್ಲಿ ಯಾವ ತೊಂದ್ರೇನೂ ಇಲ್ಲ” ಅಣ್ಣಯ್ಯನ ವಿನಯಪೂರ್ವಕ ಧ್ವನಿ.

“ಅಯ್ಯೊಯ್ಯೋ ಎಂಥಾ ಮಾತಾಡ್ತೀರಿ ನೀವು? ಗಂಡಾನೇ ಹೋದ್ಮೇಲೆ ಆ ಸೌಭಗ್ಯನಾ ಉಳಿಸ್ಕೊಂಡು ಯಾವ ರಾಜ್ಯ ಆಳ್ಬೇಕು ಅವ್ಳು? ನಾವಿದಕ್ಕೆಲ್ಲಾ ಒಪ್ಪೋಲ್ಲ” ಅತ್ತೆ ತಾರಕ ಸ್ವರದಲ್ಲಿ ಹೇಳಿದರು.
ನೋಡೀಮ್ಮಾ ಈಗ ಕಾಲ ಬದಲಾಗಿದೆ. ಹಿಂದಿನ ಶಾಸ್ತ್ರಗೀಸ್ತ್ರಗಳೆಲ್ಲಾ ಒಂದೊಂದಾಗಿ ಕಳಚ್ಕೊಂಡು ಹೋಗ್ತಾ ಇರೋವಾಗ ನಾವು ಅಂಥಾ ಅರ್ಥವಿಲ್ಲದ ಸಂಪ್ರದಾಯಗಳನ್ನು ಅನುಸರಿಸೋದ್ರಲ್ಲಿ ಅರ್ಥ ಇಲ್ಲ ಅಲ್ವೆ?” ನೀವೇನೇಳ್ತೀರಿ ಮಾವ?” ಅಣ್ಣನ ಧ್ವನಿ.
ಏನಪ್ಪಾ ನೀವಾ ಹೇಳ್ತಾ ಇರೋದು? ಸಂಪ್ರದಾಯನೇ ಬೇಡಾ ಅಂತ ನೋಡಪ್ಪ ಮಧು ನಿಮಗೆ ಶಾಸ್ತ್ರಗಳ ಸೂಕ್ಷ್ಮ ತಿಳಿಯೋಲ್ಲ. ನೀವೆಲ್ಲಾ ಸುಮ್ನಿರಿ ಸಂಪ್ರದಾಯಗಳನ್ನು ಸುಮ್ನೇ ಮಾಡಿಲ್ಲ ನಾಳೆ ನಡೆಯೋ ಶಾಸ್ತ್ರ ನಡೀಲೇಬೇಕು” ಮಾವನ ನಿರ್ಧಾರದ ಧ್ವನಿ.
ಅದು ಮಾತ್ರ ಸಾಧ್ಯವಿಲ್ಲ ಮಾವ. ನಾನು ಹೇಳಿದ್ದು ಅರ್ಥವಿಲ್ಲದ ಸಂಪ್ರದಾಯಗಳನ್ನು ಕಿತ್ತುಹಾಕಬೇಕಂತ ಅಷ್ಟೇ. ನಾನು ನನ್ನ ಕೈಲಾದ ಮಟ್ಟಿಗೆ ಇದನ್ನು ತಪ್ಪಿಸೋಕೆ ಅಂತಾನೇ ಇಷ್ಟು ದೂರ ಬಂದಿರೋದು” ಅಣ್ಣ ಹೇಳುತ್ತಿದ್ದ.

“ಗಂಡ ಸತ್ತವಳಿಗೆ ಅಲಂಕಾರ ಎಲ್ಲಾ ಯಾಕೇಂತಾ? ಅವ್ಳೇನು ಬೇರೆಯವರನ್ನ ಮೆಚ್ಚಿಸ್ಬೇಕಾ? ಅಥವಾ ಬೇರೆಯವರ ಜೊತೆ ಸಂಸಾರ ಮಾಡ್ಬೇಕಾ? ಅತ್ತೆಯ ಕೊಂಕುನುಡಿ.
“ಯಾಕಾಗ್ ಬಾರ್ದು ತಾಯಿ, ಇನ್ನು ಚಿಕ್ಕ ವಯಸ್ಸು. ಇಪ್ಪತ್ಮೂರನೇ ವಯಸ್ಸಿನಲ್ಲೇ ಗಂಡನ್ನ ಕಳ್ಕೊಂಡಿದ್ದಾರೆ. ಮದುವೆಯಾದ ಆರು ತಿಂಗಳಿಗೇ ನಿಮ್ಮ ಮಗ ಹೋಗಿದ್ದಾರೆ ನಳಿನಾ ಇಷ್ಟ ಪಟ್ಟರೆ ನೀವೆಲ್ಲಾ ಆಶೀರ್ವಾದಿಸಿದರೆ ಅವ್ರು ಹೊಸ ನಾಳು ಯಾಕೆ ಪ್ರಾರಂಭಿಸಬಾರದು?” ಅಣ್ಣನ ಸ್ನೇಹಿತ ರಾಘವನ ದನಿ ಕೇಳಿ ನಳಿನಾಳಿಗೆ ಶಾಕ್ ಹೊಡೆದಂತಾಯಿತು.
ಅಯ್ಯೋ ನಿಮ್ಮ ನಾಲಿಗೆಗೊಂದಿಷ್ಟು, ಇನ್ನೂ ನನ್ನ ಮಗ ಸತ್ತು ಹತ್ತು ದಿನ ಆಗೋಕೆ ಗತಿ ಇಲ್ಲ ಅವ್ಳಿಗೆ ಇನ್ನೊಂದ್ ಮದುವೆ ಅಂತಿದಿಯಲ್ಲೋ ನಿನ್ ನಾಲಿಗೆ ಸೇದೋಗ. ಕೇಳಿದ್ರೆಂದ್ರಿ ಇವ್ರ ಮಾತ್ನ ಸೊಸೆಗೆ ಇನ್ನೊಂದ್ ಮದ್ವೆ ಮಾಡೋಕೊರಟಿದ್ದಾರೆ ಇವ್ರು. ಇದ್ದೂ ಇದ್ದೂ ಒಳ್ಳೇ ಕಡೆ ಸಂಬಂಧ ಮಾಡಿದ್ದಾಯ್ತು ಎನ್ನುತ್ತಾ ತಾರಕ ಸ್ವರದಲ್ಲಿ ಅಳತೊಡಗಿದರು.

“ಯಾವ ಲೋಕ ಸೂರೆ ಹೋಯ್ತು ಅಂತಾ ಹೀಗೆ ಕಿರಿಚಾಡ್ತಾ ಇದ್ದೀರಾ? ನನ್ನ ತಂಗಿ ಕುಂಕುಮ, ಹೂವು ತೆಗಿಯೋದು ನನಗಿಷ್ಟ ಇಲ್ಲ. ಅವ್ಳು ಇಷ್ಟ ಪಟ್ರೂ ಇದು ನಡೆಯೋದಿಲ್ಲ. ಅದನ್ನು ತಪ್ಪಿಸೋಕೆ ನಾವಿಲ್ಲಿಗೆ ಬಂದಿರೋದು” ಎಂದು ನುಡಿದ ಮಧು ಸರಕ್ಕನೆ ರೂಮಿನೊಳಗೆ ನುಗ್ಗಿ ನಳಿನಾಳನ್ನು ಹೊರಗೆ ಕರೆತಂದ.
“ ನೋಡಿ. ಇವ್ಳ ಮುಖನಾದ್ರೂ ನೋಡಿ. ನಿಮ್ಮ ಮಗಳೇ ಈ ಸ್ಥಿತಿಲಿದ್ರೆ ನೀವು ಈ ರೀತಿ ನಡ್ಕೋತಾ ಇದ್ರ? ಎಂದು ಆದ್ರ್ರತೆಯಿಂದ ಕೇಳಿದ.
ತಕ್ಷಣ ನಳಿನಾಳ ಮಾವ “ನಿನ್ನ ಹೆಂಡ್ತಿಗೆ ಈ ಸ್ಥಿತಿ ಬಂದ್ರೆ ಅವ್ಳಿಗೆ ಬೇರೆ ಮದ್ವೆಯಾಗಲೀಂತ ನೀನು ಬಯಸ್ತೀಯಾ? ಎಂದು ಪ್ರಶ್ನೆಸಿದರು. ಮಧು ತಡವರಿಸದೆ, “ಖಂಡಿತಾ ನಾನು ಅವ್ಳು ಯಾವ್ದೇ ಶಾಸ್ತ್ರ ಸಂಪ್ರದಾಯ ಅನುಸರಿಸಬೇಕಾಗಿಲ್ಲ. ಧೈರ್ಯವಾಗಿ ಬೇರೆ ಮದ್ವೆ ಮಾಡ್ಕೋಬಹುದು” ಎಂದನು.
ನಳಿನಾಳ ಮಾವ “ನೋಡಪ್ಪಾ, ನಿನ್ನ ತಂಗಿ ನಮ್ಮ ಮನೇಲೇ ಇರ್ಬೇಕು ಅಂದ್ರೆ ಖಂಡಿತಾ ನಾವು ಮಾಡೋ ಶಾಸ್ತ್ರಾನಾ ಮಾಡಿಸ್ಕೋಬೇಕು. ಇಲ್ದೇ ಇದ್ರೆ ಹತ್ತು ಜನರೆದ್ರು ನಮ್ಮ ಮಾನ ಮಾರ್ಯಾದೆ ಹಾಳಾಗಿ ಹೋಗುತ್ತೆ” ಎಂದರು.
“ನಿಮ್ಮ ಮನೇಲಿದ್ರೆ ತಾನೇ! ಅವ್ಳನ್ನ ನಮ್ಮ ಮನೇಗೆ ಕರ್ಕೊಂಡು ಹೋಗ್ತೀನಿ. ದಯವಿಟ್ಟು ಇವೆಲ್ಲಾ ಶಾಸ್ತ್ರಗಳನ್ನು ರದ್ದು ಮಾಡಿ” ಎಂದು ಹೇಳಿ ನಳಿನಾಳನ್ನು ಹೆಚ್ಚು-ಕಡಿಮೆ ಎಳೆದುಕೊಂಡು ಹೊರಗೆ ಕರೆದೊಯ್ದ.

hosahrjjeಅಣ್ಣನ ಮನೆಯಲ್ಲಿದ್ದರೂ ನಳಿನಾಳಿಗೆ ಅತ್ತೆಯ ಮನೆಯ ನೆನಪೇ ಮನದ ತುಂಬಾ. ಮಧುಮಗಳಾಗಿ ಮನೆಗೆ ಅಡಿಟ್ಟಾಗ ಅದೇ ಅತ್ತೆಮಾವಂದಿರು “ಮುತೈದೆಯಾಗಿ ನೂರು ಕಾಲ ಬಾಳು ಮಗು” ಎಂದು ಹರಸಿದ್ದರು. ಗಂಡ ಸತೀಶನಂತೂ ಪ್ರೇಮದ ಹೊಳೆಯಲ್ಲೇ ಮುಳುಗಿಸಿದ್ದನು. ಒಂದು ನಿಮಿಷವೂ ಬಿಡದಂತೆ “ನಳೀ ನಳೀ” ಎಂದು ಹಿಂದೆ ಮುಂದೆ ಸುತ್ತಿದ್ದೆ ಸುತ್ತಿದ್ದು. ಅದು ಹಿತವೆನಿಸಿದರೂ ಬಾಯಿ ಮಾತಿನಲ್ಲಿ ‘ಏನಿದು? ಯಾವಾಗಲೂ ನನ್ನ ಹಿಂದೆ ಸುತ್ತಿದರೆ ನೋಡಿದವರು ಏನು ತಿಳಿದಾರು? ನಿಮ್ಮ ಹುಡುಗಾಟವೇಕೋ ಅತಿಯಾಯಿತು” ಎಂದು ಗದರುತ್ತಿದ್ದಳು. “ನೋಡಿದವರು ಏನೂ ಅಂದ್ಕೋಬಾರದು ಅಂತಾನೇ ನಾನು ನಿನ್ನ ಮದ್ವೆ ಆಗಿರೋದು ಚಿನ್ನಾ” ಎಂದು ಕೀಟಲೆ ದನಿಯಿಂದ ಹೇಳುತ್ತಿದ್ದ ಸತೀಶ.
ಒಂದು ದಿನ ಎಂದಿನಂತೆ ಬೇಗ ಮನೆಗೆ ಬರದೆ ಸತೀಶ್ ತಡವಾಗಿ ಬಂದಾಗ ತನಗೆ ಏಕೋ ಹೆದರಿಕೆಯಾಗಿತ್ತು. ‘ನೋಡಿ ನೀವು ಬೇಗ ಮನೆಗೆ ಬನ್ನಿ ನೀವಿಲ್ಲದೆ ನನಗೆ ಹೊತ್ತೇ ಹೋಗೋಲ್ಲ’ ಎಂದು ಹೇಳಿದಾಗ ‘ಬರೀ ಒಂದು ದಿನ ಬಿಟ್ಟಿರೋಕೆ ನಿನ್ನ ಕೈಲಿ ಆಗೋಲ್ಲವಲ್ಲ. ಆಕಸ್ಮಾತ್ ನಾನು ಸತ್ತೇ ಹೋದೆ ಅಂತಿಟ್ಕೋ ಆಗ ಏನ್ಮಾಡ್ತಿ? ಎಂದು ಕೇಳಿದ್ದ ಕ್ಷಣ ತಾನು ಅವನ ಬಾಯ ಮೇಲೆ ಕೈಯಿಟ್ಟು ‘ಅಂಥಾ ಕೆಟ್ಟ ಮಾತನಾಡಬೇಡಿ’ ಎಂದಿದ್ದಳು.

ಆಡಬೇಡಿ ಅಂದಾಕ್ಷಣ ಬರುವ ಸಾವನ್ನು ಯಾರಾದ್ರೂ ತಪ್ಪಿಸೋಕಾಗುತ್ತೆ ನಳೀ? ಎಂದು ಮತ್ತೆ ಪ್ರಶ್ನೆ ಮಾಡಿದ್ದ ಆ ಪ್ರಶ್ನೆಗೆ ನಳಿನಾಳ ಅಳುವೇ ಉತ್ತರವಾಯಿತು.

ನಳೀ ಎಲ್ಲಾ ಸಮಸ್ಯೆಗೂ ಅಳುವೊಂದೇ ಉತ್ತರವಾಗಲಾರದು. ನೀನು ವಿದ್ಯಾವಂತೆ. ಯೋಚನೆ ಮಾಡು ನಾಳೆ ನನಗೇನಾದ್ರೂ ಆಗೀ ಸತ್ತೇ ಅಂತ್ಲೇ ಅಂದ್ಕೋ, ಆಗ ಮಾತ್ರ ಹೀಗೆ ಅಳುತ್ತಾ ಕೂರಬೇಡ. ಖಂಡಿತಾ. ನಿನಗೆ ಪ್ರೀತಿಯಾಸರೆ ನೀಡುವ ಯಾವ ವ್ಯಕ್ತಿಯನ್ನಾದರೂ ವರಿಸುವ ಮನಸ್ಥಿತಿ ಬೆಳೆಸಿಕೋ’ ಎಂದಿದ್ದ. ಹುಸಿ ಮುನಿಸಿನಿಂದ ನಳಿನಾ “ನಾನು ಸತ್ತರೆ ನೀವು? ಎಂದು ಪ್ರಶ್ನಿಸಿದ್ದಳು. “ನಾನು ಅಷ್ಟೇ ಚಿನ್ನಾ ಖಂಡಿತಾ ಒಂದೆರಡು ದಿನ ತಿಂಗಳು ಅಥವಾ ವರ್ಷ ದುಃಖಿಸಬಹುದು ನಂತರ ಕಾಲ ಅದನ್ನು ಮರೆಸುತ್ತೆ” ಎಂದಿದ್ದ.
‘ಸರಿ ರಾಯರೇ ನಾ ಮದುವೆಯಾಗಲು ಬಯಸಿದರೂ ಇನ್ನು ಮುಂದೆ ಯಾರು ನನ್ನನ್ನು ಮದುವೆಯಾಗಲಾರರಲ್ಲ’ ಎಂದಿದ್ದಳು. ನಳಿನಾ ಏಕೆ?! ಆಶ್ಚರ್ಯದಿಂದ ಕೇಳಿದ್ದ ಸತೀಶ.
“ಯಾಕೆಂದ್ರೆ….. ನನ್ನ ‘ಅಮ್ಮಾ’ ಅಂತ ಕರೆಯೋ ನಿಮ್ಮ ಮಗು ಇನ್ನಾರು ತಿಂಗಳಲ್ಲೇ ಬರಲಿದೆ” ನಾಟಕೀಯವಾಗಿ ನುಡಿದು ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಳು.
ಹೌದ ನಳಿ?! ಎಂದು ಬಿಗಿಯಪ್ಪುಗೆಯಲ್ಲಿ ಹಿಡಿದ ಸತೀಶ ಅಷ್ಟೇ ಗಂಭೀರವಾಗಿ ‘ಮಗುವಾದಾಕ್ಷಣ
ಮದುವೆಯಾಗಬಾರದೆಂದೇನಿಲ್ಲಾ ಆ ಮಗುವಿಗೆ ತಂದೆಯಾಗಿ ನಿನಗೆ ಒತ್ತಾಸೆಯಾಗಿ ಬರುವವನನ್ನು ನೀನು ಸ್ವೀಕರಿಸಬಹುದು ಎಂದಿದ್ದ.
‘ಸುಮ್ನಿರಪ್ಪ ಈಗ ಯಾವ್ಯಾವ್ದೋ ವಿಚಾರ ಏಕೆ?’ ಎಂದು ಬಾಯಿ ಮುಚ್ಚಿಸಿದ್ದಳು.

ಆರು ತಿಂಗಳು ನಳಿನಾಳ ಬಾಳು ಹಾಲುಜೇನಿನಂತೆಯೇ ಇತ್ತು. ಆದರೆ ವಿಧಿಗೆ ಅವರ ಈ ಸುಖ ಹಿಡಿಸದಾಯಿತು. ಸ್ಕೂಟರ್ ಆಕ್ಸಿಡೆಂಟ್‍ನಲ್ಲಿ ಸತೀಶ ಸತ್ತಿದ್ದ. ನಳಿನಾಳ ಬಾಳನ್ನು ಬರಿದು ಮಾಡಿ ದೂರ ಹೋಗಿದ್ದ.
ಸತೀಶನಿಲ್ಲದ ಬದುಕು ನೀರಸವೆನಿಸಿದರೂ ನಳಿನಳಿಗೆ ಆಗಾಗ ಬದುಕುವ ಆಸೆಯನ್ನು ತಂದು ನೀಡುತ್ತಿದ್ದುದು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಸತೀಶನ ಕುಡಿ. ಒಮ್ಮೊಮ್ಮೆ ಕನ್ನಡಿಯ ಮುಂದೆ ಕುಳಿತು ತನ್ನ ಹಣೆಯಲ್ಲಿದ್ದ ಕುಂಕುಮ, ಮುಡಿಯಲ್ಲಿಯ ಹೂವನ್ನು ಕಂಡು ಕಿತ್ತೊಗೆಯಬೇಕೆನಿಸಿದರೂ ತನ್ನ ಕೈಲಾಗುತ್ತಿಲ್ಲ ಏಕೆ? ಎನಿಸಿ ಭಾರವಾದ ನಿಟ್ಟುಸಿರು ಬಿಡುತ್ತಾಳೆ. ರಾತ್ರಿ ಮಲಗಿದಾಗ ಸತೀಶನ ಮೃದು ಅಪ್ಪುಗೆ ಪಿಸುನುಡಿಗಳು ನೆನಪಾಗಿ ಮೈ ಬಿಸಿಯೇರುತ್ತದೆ. ತಾನು ಸಿಗಲಾರದುದನ್ನು ಕಳೆದುಕೊಂಡಿದ್ದೇನೆ ಎನಿಸಿ ರಾತ್ರಿಯಿಡೀ ನಿದ್ದೆಯಿರದೆ ಕಣ್ಣೀರಿನಿಂದ ದಿಂಬನ್ನು ನೆನಸಿದ್ದಾಳೆ.

ಒಬ್ಬತ್ತು ತಿಂಗಳಾ ಮುಗಿದು ಸುಖವಾಗಿ ಮೈಕಳೆದು ತನ್ನ ಮಗು ಮಡಿಲು ಸೇರಿದಾಗ ನಳಿನಾಳಿಗೆ ಏನೋ ಸಂತೋಷ. ಮಗುವನ್ನು ತೊಟ್ಟಿಲಿಗೆ ಹಾಕುವ ದಿನ ತನ್ನವರಾರೂ ಬರದೇ ಕೇವಲ ಅಣ್ಣ-ಅತ್ತಿಗೆ ಅವರ ಸ್ನೇಹಿತರಷ್ಟೇ ಬಂದಾಗ ಅವಳಿಗ್ಯಾಕೋ ದುಃಖ ಒತ್ತರಿಸಿ ಬಂತು. ‘ನಾಮಕರಣ ಶಾಸ್ತ್ರ’ ಮೂರು ತಿಂಗಳಾದ ಮೇಲೆ ಇಟ್ಟುಕೊಳೋಣ ಎಂದು ಅತ್ತಿಗೆ ಹೇಳಿದಾಗ ಇದರಲ್ಲೇನೋ ಗೂಡಾರ್ಥವಿದೆ ಎನಿಸಿತು. ಅದು ನಿಜವೆನಿಸಿದ್ದು ಅತ್ತಿಗೆಯ ಅಣ್ಣ ಬಂದ ನಂತರವೇ.
ಚಂದ್ರು ಅತ್ತಿಗೆಯ ಅಣ್ಣ. ತನ್ನ ಮದುವೆಗಿಂತ ಮೊದಲು ಚಂದ್ರನಿಗೆ ನಳಿನಾಳನ್ನು, ಮಧುವಿಗೆ ಅತ್ತಿಗೆಯನ್ನು ಕೊಟ್ಟು ಮದುವೆ ಮಾಡಬೇಕೆಂಬ ಮಾತು ಬಂದಿತ್ತು. ಆದರೆ ಅಪ್ಪ ಒಂದು ಕೊಟ್ಟು ಒಂದು ತಂದೂ ಮಾಡಬಾರದು ಎಂದು ಹೇಳಿ ಅತ್ತಿಗೆಯನ್ನು ಮನೆ ತುಂಬಿಸಿಕೊಂಡಿದ್ದರು. ನಳಿನಾಳ ಆಸೆ ಆಸೆಯಾಗಿಯೇ ಉಳಿದಿತ್ತು. ಆದರೆ ಸತೀಶನ ಒಲವು ಚಂದ್ರನನ್ನು ಮರೆಯುವಂತೆ ಮಾಡಿತ್ತು. ಈಗ ಧೀಡೀರನೇ ಚಂದ್ರ ತನ್ನ ಮುಂದೆ ಪ್ರತ್ಯಕ್ಷನಾಗಿದ್ದ.

‘ನಾನು ನಿಮಗೆ ಗುರುತು ಸಿಗಲಿಲ್ವೆ? ಚಂದ್ರ ಪ್ರಶ್ನೆಸಿದಾಗ ತಲೆತಗ್ಗಿಸಿ ‘ಗುರುತಾಗ್ದೇ ಏನು? ನೀವು ಅತ್ತಿಗೆ ಅಣ್ಣ ತಾನೆ? ಎಂದಿದ್ದಳು. ‘ಸದ್ಯ ಮರೆತಿಲ್ವಲ್ಲಾ’ ಎಂದು ಹೃದಯದ ಭಾರ ಇಳಿದಂತೆ ನಟಿಸಿದ್ದ. ಅಂದು ರಾತ್ರಿ ನಳಿನಾಳ ಮನದಲ್ಲಿ ದ್ವಂದ್ವಗಳ ದಾಳಿಯೇ ನಡೆಯಿತು. ಈ ಚಂದ್ರ ಇಷ್ಟು ದಿನ ಇಲ್ಲದವನು ಈಗ ಯಾಕೆ ಬಂದಿದ್ದಾನೆ? ನನ್ನ ನೆನಪಿನಂಗಳದ ಜೇನಿಗೆ ಕಲ್ಲೆಸೆದು ಹೃದಯವನ್ನು ಈ ರೀತಿ ಏಕೆ ಹಿಂಡುತ್ತಿದ್ದಾನೆ? ಇದು ಯಾವ ದುರುದ್ದೇಶದ ಸಾಧನೆಯೂ ಅಲ್ಲ ತಾನೆ? ಎಂದು ಪ್ರಶ್ನಿಸಿಕೊಂಡಳು. ಛೇ ತಾನೇಕೆ ಹೀಗೆ ಯೋಚಿಸುತ್ತಿದ್ದೇನೆ? ತಂಗಿಯ ಮನೆಗೆ ಅಣ್ಣ ಬರಬಾರದೆ? ತನ್ನನ್ನು ಯಾರೂ ಅವನ ಬಗ್ಗೆ ಪ್ರಶ್ನೆ ಕೇಳದಿದ್ದರೂ ತನಗೇಕೆ ಈ ಚಿಂತೆ? ಎಂದು ಸಮಾಧಾನ ಪಡುವಳು.
ಬಂದವನು ತಿಂಗಳಾದರೂ ಕದಲುವ ಸೂಚನೆಯೇ ಕಾಣಲಿಲ್ಲ. ನಳಿನಾಳ ಮನದಲ್ಲಿ ಕ್ರಮೇಣವಾಗಿ ಚಂದ್ರ ಆತನ ನಗು ಆತನ ವರ್ತನೆ ನಡವಳಿಕೆಗಳು ತುಂಬಿಕೊಳ್ಳತೊಡಗಿದವು. ‘ಇದು ತಪ್ಪಲ್ಲವೇ? ಪರಪುರುಷನನ್ನು ಹೀಗೆ ಮನದಲ್ಲಿರಿಸಿಕೊಳ್ಳುವುದು ಸರಿಯೇ? ಎನಿಸಿ ನಿಸ್ಸಾಹಾಯಕಳಾಗಿ ಕಣ್ಣೀರು ಸುರಿಸುವಳು. ತನ್ನ ಅಳಲನ್ನು ಯಾರಲ್ಲಿ ಹೇಳಿಕೊಳ್ಳುವುದು ಎಂಬುದು ತೋಚದೆ ಮಂಕಾಗುವಳು.

ಅಂದು ಭಾನುವಾರ ಅಣ್ಣನ ಸ್ನೇಹಿತ ಶ್ರೀಧರನ ಮದುವೆಗೆಂದು ಎಲ್ಲರೂ ಹೊರಟರು ನಳಿನಾಳನ್ನು ಬಲವಂತವಾಗಿ ಹೊರಡಿಸಿದರು. ಮದುಮಗಳು ಮೀರ ಅಲಂಕಾರ ಮಾಡಿಕೊಂಡು ಕುಳಿತಿದ್ದಳು. ಅತ್ತಿಗೆ ಕುಂಕುಮವಿಟ್ಟು ಹೂ ಮುಡಿಸಿ ಅಕ್ಷತೆ ಹಾಕಿ ಆಶೀರ್ವದಿಸಿದಳು. ನಂತರ ತನಗೆ ಹೋಗು ನೀನು ಅವಳಿಗೆ ಕುಂಕುಮ ಇಡು ಎಂದಾಗ ಮೈ ಜಿಲ್ಲನೆ ಬೆವರಲಾರಂಭಿಸಿತು. ಇಲ್ಲ ಎನ್ನುವಂತೆ ನಳಿನಾ ತಲೆಯಾಡಿಸಿದಳು ‘ಹೋಗು ನಳಿ’ ಎಂದು ಅತ್ತಿಗೆ ಬಲವಂತ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹಿರಿಯ ಮುತ್ತೈದೆ ‘ನಾನು ಹೀಗೆ ಹೇಳ್ತಿನೀಂತ ಬೇಸರ ಮಾಡ್ಕೋಬೇಡಿ. ನಿಮಗೆ ನಿಮ್ಮ ನಾದಿನಿ ಸ್ಥಿತಿ ತಿಳಿದೂ ಈ ಶುಭ ಕಾರ್ಯಕ್ಕೆ ಕರೆ ತರಬಾರದಿತ್ತು. ಬಂದರೂ ಈ ರೀತಿ ಬಲವಂತ ಪಡಿಸಬಾರದು ಎಂದಾಗ ನಳಿನಾಳಿಗೆ ನೆಲವೇ ಬಾಯ್ತೆರದು ತನ್ನನ್ನು ನುಂಗಬಾರದೆ ಎನಿಸಿತು. ಉಕ್ಕಿ ಬರುತ್ತಿದ್ದ ದುಃಖವನ್ನು ಬಾಯಿಗೆ ಕರ್ಚಿಪ್ ಹಿಡಿದು ತಡೆದಿದ್ದಳು. ಅಲ್ಲಿದ್ದವರೆಲ್ಲಾ ತನ್ನೆಡೆಗೆ ಅನಿಷ್ಟ ಎಂಬಂತೆ ನೋಡಿದಂತೆನಿಸಿತು. ಅಷ್ಟರಲ್ಲಿ ಮದುಮಗಳು ಮೀರಾ ‘ಏಕೆ ಅಷ್ಟೊಂದು ಬಲವಂತ ಮಾಡಿಸ್ಕೋತಿದೀರಾ ನಳಿನಾ? ಬನ್ನಿ, ಇಂಥ ಸಂದರ್ಭಗಳಲ್ಲಿ ನಿಮ್ಮಂಥ ಹಿತೈಷಿಗಳ ಹಾರೈಕೆಗಳೇ ನಮಗೆ ಮುಖ್ಯ’ ಎಂದಾಗ ಆಶ್ಚರ್ಯಚಕಿತಳಾದ ನಳಿನಾ ಕತ್ತೆತ್ತಿ ಮೀರಾಳನ್ನು ನೋಡಿದಳು. ಅವಳ ಕಣ್ಣುಗಳಲ್ಲಿ ಕರುಣೆ ಅನುಕಂಪಗಳು ಇರಲಿಲ್ಲ. ಎಲ್ಲರೆದುರಿಗೆ ತನ್ನನ್ನು ಅವಳು ಕರೆದ ರೀತಿ ಹೊಸಮಾರ್ಗದೆಡೆಗೆ ತನ್ನನ್ನು ಕರೆದಂತಿತ್ತು.

‘ಅಲ್ಲಾ ಕಣೆ ಮೀರಾ……… ಎಂದು ಹಿರಿಯ ಮುತ್ತೈದೆ ಗೌರಮ್ಮ ಬಾಯಿ ಹಾಕುವ ಮೊದಲೇ ನನಗೆಲ್ಲಾ ತಿಳಿದಿದೆ. ನೀವೇನೂ ಹೇಳುವ ಅವಶ್ಯಕತೆಯಿಲ್ಲ’ ಎಂದು ನಿಷ್ಟುರವಾಗಿ ನುಡಿದಳು. ಮೀರಾ ಅಷ್ಟು ಜನರೆದುರು ಮುಖಮುರಿದಂತಾದ ಆಕೆ ‘ಕಲಿತವರಿಗೆ ಹೇಳೋಕಾಗುತ್ಯೆ ಮುಂದೆ ಬರುವ ಅವಸ್ಥೆ ನಿಮಗೇ ಗೊತ್ತಾಗುತ್ತೆ’ ಎಂದು ಗೊಣಗುತ್ತಾ ಅಲ್ಲಿಂದ ಎದ್ದು ಹೋದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀಧರ್ ‘ಏಳಿ ನಳಿನಾ ಮದುಮಗಳಿಗೆ ನಿಮ್ಮ ಹಾರೈಕೆ ಮುಖ್ಯ ಎಂದು ಒತ್ತಿ ನುಡಿದಾಗ ಮನಸ್ಸನ್ನು ದೃಢಮಾಡಿಕೊಂಡು ಎದ್ದ ನಳಿನಾ ಮೀರಾಳನ್ನು ಸಮೀಪಿಸಿದಳು. ಅರಿಶಿನ ಕುಂಕುಮ ಇಡೋವಾಗ ಕೈಗಳೇಕೋ ನಡುಗುತ್ತಿರುವುದು ಗಮನಕ್ಕೆ ಬಂತು ತಾನಿದಕ್ಕೆ ಅರ್ಹಳೆ? ಎಂಬ ಭಾವ ಮನದ ಮೂಲೆಯಲಿ ಮೂಡಿತು ಕಣ್ಣು ಕತ್ತಲಿಟ್ಟು ಬಂದಂತಾಗಿ ದೊಪನೆ ಕೆಳಕ್ಕೆ ಬಿದ್ದಳು.
ಎಲ್ಲರೂ ಅವಳ ಉಪಚಾರದಲ್ಲಿ ತೊಡಗಿದರು. ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡ ಅವಳು ಮೆಲ್ಲನೆ ಕಣ್ಣು ಬಿಟ್ಟು ನೋಡಿದಳು. ತನ್ನ ಸುತ್ತ ನೆರೆದಿದ್ದವರನ್ನು ಕಂಡು ಆಕೆಗೆ ನಾಚಿಕೆಯೆನಿಸಿತು. ದಿಗ್ಗನೆ ಏಳಹೋದವಳನ್ನು ಅಣ್ಣ ‘ಸ್ವಲ್ಪ ಸುಧಾರಿಸಿಕೋ ನಳೀ. ನಿನ್ನಲ್ಲಿ ನೀನೇ ಏಕೆ ಈ ರೀತಿ ಕೆಟ್ಟ ಯೋಚನೆ ಮಾಡ್ತಿ ಹೇಳು ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದನು. ಚೇತರಿಸಿಕೊಂಡ ನಳಿನಾ ಮದುವೆ ಮುಗಿದ ನಂತರ ಮನೆಗೆ ಹಿಂದಿರುಗಿದಳು.

rrದಿನಗಳುರುಳಿದಂತೆ ನಳಿನಾ ಗೆಲುವಾದಳು. ಸಮಯ ಸಾದಿಸಿ ಮಧು ಒಮ್ಮೆ ‘ನಳೀ ಈಗ ಕಾಲ ಬದಲಾಗಿದೆ. ನೀನು ಎಷ್ಟು ದಿನ ಹೀಗೇ ಒಂಟಿಯಾಗಿರುತ್ತಿ ಹೇಳು. ನಿನಗೆ ಆಸರೆಯಾಗಿ ಯಾರಾದರೂ ಬೇಕೆಂದು ನಿನಗನ್ನಿಸಲ್ಲವೇ? ಎಂದು ನೇರವಾಗಿ ವಿಷಯಕ್ಕೆ ಬಂದಾಗ ಏನು ಹೇಳುವುದೆಂದು ತೋಚದೆ ಮೌನವಾಗಿ ಅವನನ್ನೇ ದಿಟ್ಟಿಸಹತ್ತಿದಳು. ಅವಳನ್ನು ನೋಡಿ ಮಧು ಮತ್ತೆ ಮುಂದುವರೆಸಿ ‘ನೋಡು ನಳಿ, ಈ ಮಗು ಚಿಕ್ಕದು. ನಾಳೆ ಬೆಳೆಯುತ್ತಾ ಹೋದಂತೆ ತಾನು ತಂದೆಯಿಲ್ಲದ ತಬ್ಬಲಿ ಎಂಬ ಭಾವ ಬರದಂತೆ ಬೆಳೆಸುವ ಹೊಣೆ ನಿನ್ನದು. ಸಮಾಜದ ಜನರಿಗೆ ನೀನು ಹೆದರುವ ಕಾರಣ ಇಲ.್ಲ ಇಂದು ನೀನು ಧೈರ್ಯವಾಗಿ ಮುನ್ನುಗ್ಗಿದರೆ ನಾಳೆ ಹಲವರಿಗೆ ನೀನು ಮಾದರಿಯಾಗ ಬಲ್ಲೆ ನಾನೇನೂ ನಿನ್ನನ್ನು ಬಲವಂತ ಮಾಡುತ್ತಿಲ್ಲ ಚೆನ್ನಾಗಿ ಯೋಚನೆ ಮಾಡಿ ನಿನ್ನ ನಿರ್ಧಾರ ತಿಳಿಸು. ಸುತ್ತಿ ಬಳಸಿ ಮಾತು ನನಗೆ ಬೇಕಿಲ್ಲ. ನಿನ್ನ ಅತ್ತಿಗೆ ಅಣ್ಣ ನಿನ್ನನ್ನು ಮದುವೆಯಾಗಲು ಸಿದ್ಧನಿದ್ದಾನೆ ಆದರೆ ನಿನ್ನ ಮೇಲೆ ಮೇಲೆ ಆತನಿಗಿರುವ ನಿರ್ಮಲ ಪ್ರೇಮ ಕಾರಣವೇ ಹೊರತು ಅನುಕಂಪ, ಕರುಣೆಯಲ್ಲ” ಎಂದು ದೀರ್ಘವಾಗಿ ಹೇಳಿದನು.

ಅಂದಿನ ರಾತ್ರಿ ದ್ವಂದ್ವಗಳಲ್ಲಿ ಕಾಲ ಕಳೆದ ನಳಿನಾ ಬೆಳಗಾಗುವುದರೊಳಗೆ ಒಂದು ನಿರ್ಧಾರಕ್ಕೆ ಬಂದಳು ಬೆಳಿಗ್ಗೆ ಎದ್ದವಳೇ ಸ್ನಾನಮಾಡಿ ಸಿದ್ದಳಾದಳು. ಅತ್ತಿಗೆಗೆ ಹೇಳಿ ಮಗುವನ್ನು ಎತ್ತಿಕೊಂಡು ಹೊರಗೆ ಹೊರಟಳು. ಅವಳ ಅತ್ತಿಗೆ ಆಶ್ಚರ್ಯದಿಂದ ಅವಳನ್ನೇ ನೋಡುತ್ತಿದ್ದಳು. ಮಧ್ಯಾಹ್ನದ ವೇಳೆಗೆ ಮರಳಿ ಬಂದ ನಳಿನಾ ಅತ್ತಿಗೆಯ ಕೈಗೆ ಒಂದು ಕವರನ್ನು ನೀಡಿ “ ನೋಡಿ ಅತ್ತಿಗೆ ಇದು ನನ್ನ ಮಗುವಿನ ಜನನ ಪ್ರಮಾಣ ಪತ.್ರ ಇದನ್ನು ತರಲೆಂದೇ ನಾನು ಆಸ್ಪತ್ರೆಗೆ ಹೋಗಿ ಅಲ್ಲಿಂದ ಪುರಸಭೆ ಕಾರ್ಯಲಯದ ಹತ್ತಿರ ಹೋಗಿ ಬಂದೆ ಎಂದು ಹೇಳಿದಳು. ಅತ್ತಿಗೆಗೆ ಅದರಲ್ಲಿ ಹೊಸತೇನೂ ಕಾಣಲಿಲ್ಲ. ಯಾವುದೊಂದು ನಿರ್ಧಾರ ಮಾಡದೇ ತಮ್ಮನ್ನೇಕೆ ಹೀಗೆ ನೋಯಿಸುತ್ತಿದ್ದಾಳೆ ಎಂದು ಯೋಚಿಸುತ್ತಾ ಆ ಕವರನ್ನು ಟೇಬಲಿನ್ನ ಮೇಲೆ ಇಟ್ಟು ‘ಕಾಫಿ ತರುತ್ತೇನೆ ಇರು’ ಎಂದು ಒಳ ನಡೆದಳು.

ಅಷ್ಟರಲ್ಲಿ ಹೊರಗೆ ಹೋಗಿದ್ದ ಮಧು, ರಾಘವ ಮತ್ತು ಚಂದ್ರನೊಂದಿಗೆ ಮಾತನಾಡುತ್ತಾ ಒಳಗೆ ಬಂದನು. ರಾಘವ ‘ಏನು ತೀರ್ಮಾನಕ್ಕೆ ಬಂದಿರಿ ನಳಿನಿ? ಎನ್ನುತ್ತಾ ಕುಳಿತುಕೊಂಡ ‘ನಾನೂ ಅದನ್ನೇ ಕಾಯ್ತಾ ಏನೋ ಹೇಳ್ತಾಳೆ ಅಂತ ಇದ್ರೆ ಬೆಳಗಿನಿಂದ ಓಡಾಡಿಕೊಂಡು ಮಗುವಿನ ಬರ್ತ್ ಸರ್ಟಿಫಿಕೇಟ್ ತಂದಿದ್ದಾಳೆ. ನಾವ್ಯಾರೂ ತಂದ್ ಕೊಡಲ್ಲ ಅಂದಿದ್ವಾ? ಎಂದು ಮುಖ ಊದಿಸಿಕೊಂಡು ಅಲ್ಲಿದ್ದ ಕವರನ್ನ ಗಂಡನ ಕೈಗಿಟ್ಟಳು. ಮಧು ಅದನ್ನು ತೆಗೆದುನೋಡಿ ರಾಘವನಿಗೆ ಕೊಟ್ಟ. ರಾಘವ ಅದನ್ನು ತೆಗೆದು ನೋಡಿ ಚಂದ್ರನ ಕೈಗಿಟ್ಟ. ಅದನ್ನು ತೆಗೆದು ನೋಡಿದ ಚಂದ್ರನ ಕಣ್ಣುಗಳಲ್ಲಿ ಹೊಳಪು ಮೂಡಿತು. ತುಟಿಗಳಲ್ಲಿ ಮುಗುಳ್ನಗೆ ತೇಲಿತು. ಹೃದಯ ಗರಿಗೆದರಿ ಹಾರಿತು. ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ಎನ್ನುವಲ್ಲಿ ‘ಚಂದ್ರಶೇಖರ್’ ಎಂದಿತ್ತು. ಮಧು, ರಾಘವ ಇಬ್ಬರೂ ಒಟ್ಟಿಗೆ ‘ಕಂಗ್ರಾಟ್ಸ್’ ಚಂದ್ರು’ ಎಂದರು. ನಗುತ್ತಾ ಅತ್ತಿಗೆಗೆ ಏನೋ ಹೊಳೆದಂತಾಗಿ ನಳಿನಳೆಡೆಗೆ ತಿರುಗಿ ಮುಕ್ತನಗೆ ಬೀರಿದಳು.

One Response to "ಹೊಸ ಹೆಜ್ಜೆ"

 1. ಗೋದೂರು ಪ್ರಸನ್  July 16, 2016 at 12:32 pm

  ನಳಿನಿಯ ಅಣ್ಣ (ಮಧು) ನ ಪ್ರಜ್ನೆ ಹಾಗೂ ಅವನು ತನ್ನ ತಂಗಿಯ ಮೇಲೆ ಇಟ್ಟಿದ್ದ ಅಪಾರ ಪ್ರೀತಿ ಮತ್ತು ಹೆಣ್ಣಿನ ಮೇಲಿನ ಕಾಳಜಿ ಇಡೀ ವಾಸ್ತವ ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ.
  ಅಲ್ಲದೇ ತಾನು ಹಿಂದಿನ ನಿಷ್ಟೂರ ಗೊಡ್ಡು ಸಂಪ್ರದಾಯದಿಂದ ಹೊರ ಬರಬೇಕು ;ಅದು ನನ್ನ ಇನಿಯ ಸತೀಶನ ಆಸೆಯೂ ಕೂಡ ಎಂದರಿದಿದ್ದ ನಳಿನಾಳ ಹೊಸ ಹೆಜ್ಜೆ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. . . .

  ಕತೆ ತೀರಾ ಸರಳ ರೀತಿಯಲ್ಲಿರುವುದರಿಂದ ಓದಿದಾಗಲೇ ತಟ್ಟನೆಯೇ ಮನಮುಟ್ಟುತ್ತದೆ. ಇಂತಹ ಪರಿಸ್ಥಿತಿಯನ್ನು ನಮ್ಮ ಸುತ್ತಮುತ್ತಲಿಗೆ ಕಂಡೆ ಕಂಡಿರುತ್ತೇವೆ ನಿಜ .

  ಮಾಲಾ ಅವರು ಚೆಂದ ವಾಗಿ ಕತೆಯ ನಿರೂಪಣೆಯನ್ನು ಪಾತ್ರ ನಿರ್ವಹಣೆಯನ್ನೂ ಮಾಡಿದ್ದಾರೆ ಎಂಬುದು ನನ್ನ ಅಭಿಪ್ರಾಯ.

  Reply

Leave a Reply

Your email address will not be published.