ಹೊಟ್ಟೆಬಾಕತನ

-ಎನ್.ರವಿಶಂಕರ್

shiva_templeನನಗೂ ಉಪವಾಸಕ್ಕೂ ಬಲುದೂರ. ಕರುಳುಗಳು ತಲೆ ಎತ್ತಿ ಕಾಲಕಾಲಕ್ಕೆ ಏನು ಬೀಳುತ್ತೋ ಎಂದು ಕಾಯುತ್ತಾ ಇರುತ್ತವೆ. ಅಂತವಕ್ಕೆ ಮೆದುಳು ಏನಾದರೂ ‘ಇವತ್ತು ಉಪವಾಸ ನಿಮಗೆ’ ಎಂದು ಸಂಕೇತ ನೀಡಿದರೆ ಸಾಕು . . . ಹೊಟ್ಟೆಗೆ ಏನೂ ಬೀಳುವುದಿಲ್ಲವೆಂಬ ಬೀಕರ ಕಲ್ಪನೆ ಮಾತ್ರಕ್ಕೆ ಅವು ತತ್ತರಿಸಿ, ಒಣಗಿ, ಮುರುಟಿ ಹೋದಾವು.

ಇಂತಾ ನನಗೆ ಈ ವರ್ಷದ ಶಿವರಾತ್ರಿಯಂದು ನನ್ನ ಹೆಂಡಂತೆ‘ಉಪವಾಸ ಮಾಡುವಂತೆ’ ತಾಕೀತು ಮಾಡಿದಳು. ನಾನೂ ಸಹ ಮಾಡಿದರಾಯಿತು ಎನ್ನುವ ಉಪೇಕ್ಷೆಯಿಂದ ‘ಆಯಿತು’ ಎಂದು ಹೇಳಿಬಿಟ್ಟೆ. ಬೆಳಿಗ್ಗೆ 10 ಗಂಟೆ ಆಯಿತು. ಹೂ ಹೂಂ .. ತಿಂಡಿ ಇಲ್ಲ. 11ಕ್ಕೆ, ‘ಮನೆಯಲ್ಲಿ ಬೇಜಾರು . . . ಹೋಗಲಿ ದೇವಸ್ಥಾನಕ್ಕಾದರೂ ಹೋಗಿ ಬರುವಾ’ ಎಂದು ಹೆಂಡಂತಿಯನ್ನು ಹೊರಡಿಸಿದೆ. ಇವತ್ತಾದರೂ ಯಜಮಾನರಿಗೆ ದೇವರು ಒಳ್ಳೆಯ ಬುದ್ದಿ ಕೊಟ್ಟಿದ್ದಾನೆ ಎನ್ನುತ್ತಾ ನನ್ನ ಹೆಂಡಂತಿ, ‘ನಡೆಯಿರಿ’ ಎಂದಳು.

ಮೊದಲಿಗೆ ಸಹಕಾರ ನಗರದ ಗಣೇಶನ ದೇವಸ್ಥಾನ. ಆ ಆಯ್ಯನವರು ಬರೀ ತೀರ್ಥ ಕೊಟ್ಟು ಸಾಗು ಹಾಕಿದರು. ಪ್ರಸಾದ ಇನ್ನೂ ಮಾಡಿರಲಿಲ್ಲವೇನೋ. ನಿರಾಸೆ ಆಯಿತು. ದಿನಾ, ಕಚೇರಿಗೆ ಹೋಗುವಾಗ‘ಮುತ್ತುರಾಯಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ’ ಎನ್ನುವ ಬ್ಯಾನರ್ ಕೊಡಿಗೇಹಳ್ಳಿಯ ಸರ್ಕಲ್ ನಲ್ಲಿ ರಾರಾಜಿಸುತ್ತಿದುದನ್ನು ನೋಡಿದ್ದೆ. ‘ಇಲ್ಲೊಂದು ದೇವಸ್ಥಾನ ಜೀರ್ಣೋದ್ಧಾರ ಆಗಿದೆ. ಬಾ ಹೋಗಿ ಬರೋಣ’ ಎಂದು ಪತ್ನಿಯನ್ನು ಅಲ್ಲಿಗೆ ಕರೆದೊಯ್ದೆ. ಸ್ವಲ್ಪ ಮಾತ್ರ ಗೇಟ್ ತೆಗೆದಿದ್ದರು. ನಾನೇ ತೆಗೆದೆ. ಬಾಗಿಲು ಹಾಕಿದ್ದರು. ಬಾಗಿಲ ಸರಳುಗಳ ನಡುವೆಯೇ ದೇವರನ್ನು ನೋಡಿ ನನ್ನ ಮಡದಿ ಕೃತಾರ್ಥಳಾದಳು. ಆಕೆ ಇನ್ನೊಂದು ದಿಕ್ಕಿಗೆ ತಿರುಗಿ ನೋಡಿ, ನನ್ನತ್ತ ನೋಡಿದಳು … ನಾನೂ ಆಕೆಯ ಪ್ರಶ್ನಾರ್ಥಕ ವದನವನ್ನು ಅನುಸರಿಸಿ, ಆಕೆಯ ದೃಷ್ಟಿ ಹೋಗಿದ್ದೆಡೆ ನೋಡಿದೆ. ಅದು ಸ್ಮಶಾಣ. ಆ ದೇವಸ್ಥಾನ ಸ್ಮಶಾಣದಲ್ಲಿತ್ತೋ, ಸ್ಮಶಾಣದ ಪಕ್ಕದಲ್ಲಿತ್ತೋ ನಾನು ಆ ಮೊದಲು ನೋಡಿರಲಿಲ್ಲ. ಹನುಮಂತ ದೇವರು ಚೆನ್ನಾಗಿದೆ ಎಂದು ಸಮಾಧಾನಿಸಿ ಕರೆದೊಯ್ದೆ. ಅಲ್ಲೂ ಪ್ರಸಾದ ಇರಲಿಲ್ಲವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ.

ಕೊಡಿಗೇಹಳ್ಳಿಯ ಸಣ್ಣ ರಸ್ತೆಯಲ್ಲಿ ಸಾಗಿದ್ದವನಿಗೆ ವೆಂಕಟರಮಣಸ್ವಾಮಿಯ ಹಳೆಯ ದೇವಾಲಯ ಕಾಣಿಸಿತು. ಆ ದೇವಾಲಯ ಕಾಣಿಸಿತು ಎನ್ನುವುದಕ್ಕಿಂತ, ಆ ದೇವಾಲಯದ ಹೊರಗೆ ಮಕ್ಕಳು ಪ್ರಸಾದ ಹಂಚುತ್ತಿರುವುದು ಕಾಣಿಸಿ‘ಈ ದೇವಸ್ಥಾನಕ್ಕೆ ನೀನು ಹೋಗಿಲ್ಲ ಅಲ್ವಾ, ಬಹಳ ಪುರಾತನವಾದ್ದು’ ಎಂದು ಅಲ್ಲೇ ಗಸ್ಟೋ (ಸ್ಕೂಟರ್) ನಿಲ್ಲಿಸಿದೆ. ನನ್ನ ಹೆಂಡಂತಿ ದೇವರ ಮುಂದೆ ಅಂಜಲೀ ಬದ್ಧಳಾಗಿ ನಿಂತು, ಕುಲ-ಗೋತ್ರಗಳ ಪ್ರವರಗಳನ್ನೆಲ್ಲಾ ವಿವರವಾಗಿ ಅರ್ಚಕರ ಮೂಲಕ ದೇವರಿಗೆ ವರದಿ ಮಾಡುತ್ತಿದ್ದಳು. ನಾನು ಹೊರಗೆ ಬಂದೆ. ಆ ಹುಡುಗರ ಹತ್ತಿರ ಪ್ರಸಾದಕ್ಕೆ ಕೈ ಒಡ್ಡಿದೆ. ಒಂದೇ ಒಂದು ದೊನ್ನೆ ಸಜ್ಜಿಗೆ ನೀಡಿದ. ನನ್ನ ಮಡದಿಯನ್ನು ತೋರಿಸಿ, ‘ಇನ್ನೊಂದು ಕೊಡೋ’ ಅಂದೆ. ‘ಅಂಟೀ ಬರ್ಲಿ, ಕೊಡ್ತೀನಿ’ ಅಂದ. ‘ಲೇಯ್ ಅವರು ಬರೋದು ಲೇಟ್ ಆಯ್ತದೆ ಕೋಡೋ’ ಅಂದರೂ ಕೊಡದೇ ಹೋದ ಆ ಪೋರ. ನನ್ನದು ತಿಂದಿದ್ದಾಗಿತ್ತು. ಇನ್ನೊಂದು ಬೇಕಾಗಿತ್ತು. ಆ ಹುಡುಗ ಕೊಡ. ಮತ್ತೊಂದು ಸಾರಿ ಕೇಳೋಣ ಅನ್ನಿಸಿತು . . . ಇಷ್ಟು ದೊಡ್ಡ ಘಟ ಆ ಹುಡುಗನ ಹತ್ತಿರ ದೊನ್ನೆ ಸಜ್ಜಿಗೆ ಪ್ರಸಾದಕ್ಕೆ ಅಂಗಲಾಚಿ ಬೇಡುವುದೇ? ಏನು ಮಾಡುವುದು? ಅಷ್ಟರಲ್ಲಿ ಇನ್ನೊಬ್ಬ ಹುಡುಗ ಬಂದ. ‘ಅಮ್ಮ ಕರೀತಾ ಐತೆ’ ಹೋಗೋ ಅಂದಾ. ಇವನು ಅವನನ್ನು ಪ್ರಸಾದ ವಿನಿಯೋಗಕ್ಕೆ ನಿಲ್ಲಿಸಿ ಮನೆಗೆ ಹೋದ. ಆ ದೇವರೇ ಇನ್ನೊಬ್ಬ ಹುಡುಗನನ್ನು ಕಳುಹಿಸಿರಬೇಕು . . . ಅವನ ಬಳಿ ಹೋಗಿ, ‘ಪ್ರಸಾದ ಕೊಡಪ್ಪಾ’ ಅಂದೆ. ಒಂದು ದೊನ್ನೆ ಪ್ರಸಾದ ಕೊಟ್ಟ (ಅವನಿಗೆ ಅದು ‘ಒಂದು’ ನನಗೆ ‘ಇನ್ನೊಂದು’) ತಿಂದೆ. ಮನೆಯಲ್ಲಿ ಮಕ್ಕಳು ಇದ್ದಾರೆ. ಇನ್ನೊಂದು ಕೊಡು ಅಂದೆ. (ಅದು ನನಗೆ ‘ಮಗದೊಂದು’) ಮುಖ ನೋಡಿ ಇನ್ನೊಂದು ಕೊಟ್ಟ. ಸುಮ್ಮನೆ ತಗೋಂಬಂದು ಡಿಕ್ಕಿಯಲ್ಲಿ ಇಟ್ಟು, ದೂರ ನಿಂತೆ. ನನ್ನ ಮಡದಿ ವಾಪಸ್ಸು ಬರುತ್ತಿದ್ದಳು, ಪ್ರಸಾದದ ಕಡೆ ಸಂಜ್ಞೆ ಮಾಡಿ, ಸುಮ್ಮನೆ ಅವಳ್ಯಾರೋ ನನಗೆ ಗೊತ್ತಿಲ್ಲವೆಂಬಂತೆ ನಿಂತೆ. ಅವಳಿಗೂ ಪ್ರಸಾದದ ಒಂದು ದೊನ್ನೆ ಕೊಟ್ಟ. ಅವಳು ನನ್ನ ರೀತಿಯೇ ‘ಮಕ್ಕಳಿಗೆ ಒಂದು’ ಎಂದು ಕೇಳಿ, ಇನ್ನೊಂದು ದೊನ್ನೆ ಪ್ರಸಾದ ಪಡೆದಳು. ಅವಳು ಪ್ರಸಾದ ಸ್ವಲ್ಪೇ ಸ್ವಲ್ಪ ತಿಂದಾಳು. ನನ್ನ ಮಕ್ಕಳಂತೂ ಪ್ರಸಾದವನ್ನು ಮೂಸಿಯೂ ನೋಡರು. ಒಟ್ಟು ಐದು ದೊನ್ನೆ ಪ್ರಸಾದ ಸಿಕ್ಕಿದ ಹಾಗಾಯ್ತು. ಶಿವಾರ್ಪಣಮಸ್ತು ಅಂತಾ ತಿಂದು ಸ್ವಸ್ಥ ಮಲಗಿದೆ. ನನ್ನ ಹೆಂಡಂತಿಗೆ ಗೊತ್ತಿಲ್ಲದ ಹಾಗೆ ನನ್ನ ಕ್ಷುಧಾಗ್ನಿ ಶಮನವಾಯಿತು. ನಾನು ಉಪವಾಸ ಮಾಡಿದೆ ಎಂದು ನನ್ನ ಹೆಂಡಂತಿಗೂ ಸಮಾಧಾನವಾಯಿತು.

ಒಂದ್ಸಾರಿ ಆಫೀಸ್‍ನಿಂದ ಮನೆಗೆ ಬರೋವಾಗ ಊರಿಂದಾ ಬಂದಿರೋ ‘ಗುತ್ತಿ ಕಳ್ಳೇಕಾಯಿ’ ಮೂಟೆ ಜ್ಞಾಪಕ ಬಂತು. ಆ ಕಡ್ಲೇಬೀಜ ಚಿಕ್ಕದಾದರೂ ಬಲು ರುಚಿ. ನನ್ನ ಹೆಂಡತಿ ಇವ್ರು ಕಳ್ಳೇಕಾಯೇ ತಿಂತಾ ಇರ್ತಾರೆ. ಆಮೇಲೆ ಹೊಟ್ಟೆ ಕೆಡಸಿಕೊಂಡು ಒದ್ದಾಡ್ತಾರೆ ಅಂತಾ ಆ ಮೂಟೆಯನ್ನು ಎಲ್ಲೋ ಬಚ್ಚಿಟ್ಟು, ಅದನ್ನು ‘ನಾವೊಬ್ರೇ ಏನು ತಿನ್ನೋದು, ಬೀದಿಯ ಸ್ನೇಹಿತರಿಗೆಲ್ಲಾ ಹಂಚಿದೆ’ ಅಂತಾ ಬೂಸಿ ಬಿಟ್ಟಿದ್ದಳು. ಆದರೆ ಮನೆ ಶುಚಿ ಮಾಡುವಾಗ ಅದು ಎಲ್ಲಿದೆ ಅಂತಾ ನನ್ನ ಕಣ್ಣಿಗೆ ಬಿತ್ತು. ಗೆಳೆಯ ಜಯರಾಮ್ ಸಾವಯವದ್ದು ಅಂತಾ ಕೊಟ್ಟಿದ್ದ ಬೆಣ್ಣಿಯಂತಾ ಇಕೋಲೈಟ್ ಬೆಲ್ಲದ ಡಬ್ಬರಿಯೂ ಅದರೊಂದಿಗೆ ಜ್ಞಾಪಕ ಬಂತು. ಆ ಬೆಲ್ಲ ಮೆಲ್ಲುಕೊಂಡು ಹುರಿದ ಕಳ್ಳೇಕಾಯಿ ಜೊತೆ ತಿನ್ನುವ ಪರಿ ನೆನಸಿಕೊಂಡು, ನಾನು ಮನೆ ತಲುಪುವುದಕ್ಕೆ ಮೊದಲೇ ನಮ್ಮ ಮನೆಯವರೆಗೂ ನನ್ನ ಜೊಲ್ಲು ರಸ ಹರಿದು ಬಂದಿರಬೇಕು! ಆ ಹೊತ್ತು ನನ್ನ ಡ್ರೈವರ್ ಬಹಳ ನಿದಾನವಾಗಿ ಡ್ರೈವ್ ಮಾಡ್ತಾರೆ ಅಂತಾ ಅನ್ನಿಸಿ ಅದನ್ನು ಪ್ರಕಟವಾಗಿಯೂ ಹೇಳಿಬಿಟ್ಟೆ.
ಮನೆಗೆ ಬಂದರೆ, ನನ್ನ ಹೆಂಡಂತಿ, ಅದೆಂತದೋ ಗರಿಗರಿಯಾದ ಬೇಬಿಕಾರ್ನ್ ಮಂಚೂರಿ ಹಾಗೂ ಸಾಸನ್ನು ತಟ್ಟೆಗೆ ಹಾಕಿಕೊಟ್ಟಳು. ಅದನ್ನು ತಿನ್ನುವಾಗಲೂ, ‘ಆ ಕಳ್ಳೇಕಾಯಿ ಇದ್ದರೆ ಕೊಡು’ ಅಂದೆ. ಮೂತಿ ತಿರುವಿ, ‘ರುಚಿ ರುಚಿಯಾಗಿ ವರೈಟಿ ತಿಂಡಿ ಮಾಡಿಕೊಟ್ಟರೆ, ಆ ಹಳ್ಳೀ ಗಮಾರರ ಥರಾ ಕಳ್ಳೇಕಾಯಿ ಕೇಳ್ತೀರಲ್ರೀ, ತಿನ್ರೀ ಇದನ್ನ’ ಅಂದಳು. ಈ ಆಧುನಿಕ ಕಾಲದ ಹೆಂಡಂತಿಯರಿಗೆ ಅವರ ಹೊಸರುಚಿ ನಮ್ಮ ಮೇಲೆ ಪ್ರಯೋಗಿಸಿ ಹೊಗಳಿಸಿಕೊಳ್ಳೋ ಆಸೆ. ಆದ್ರೆ, ಉಪ್ಪುಸಾರು, ಬಸ್ಸಾರು, ಹುರಳಿಕಟ್ಟಿನ ಸಾರಿನ ಜೊತೆ ಮುದ್ದೆ, ತಿನ್ನುವ ನನ್ನಂತಾ ಗವರ್ನಮೆಂಟ್ ಸ್ಕೂಲ್‍ನಲ್ಲಿ ಓದಿದವರ ಬಾಯಿ ರುಚಿ ಅವರಿಗೇನು ಗೊತ್ತು? ನಮ್ಮ ಗವರ್ನ್‍ಮೆಂಟ್ ಸ್ಕೂಲ್‍ನ ಹೊರಗೆ ಸಿಗುತ್ತಿದ್ದ ಏಳಚಿಕಾಯಿ, ಬೋರೆಹಣ್ಣು, ಸಣ್ಣಕಿತ್ತಲೆ (ಉಪ್ಪು ಹಾಕಿ ನೆಕ್ಕುತ್ತಾ ಇದ್ದರೆ, ಅದರ ರುಚಿಯ ಮಜವೇ ಬೇರೆ), ಉದ್ದುದ್ದ ಕೊಯ್ದು ಉಪ್ಪುಮಸಾಲೆಯಲ್ಲಿ ಅದ್ದಿರುತ್ತಿದ್ದ ಗಿಣಿಮೂತಿ ಮಾವಿನಕಾಯಿ ಹೋಳು, ಬೇಲದ ಹಣ್ಣು, ಬಾಯಿಗೆ ಇಟ್ಟ ತಕ್ಷಣ ಕರಗಿ ಹೋಗುತ್ತಿದ್ದ ಉಪ್ಪುಗಳ್ಳೇ, ಕರಿಕಬ್ಬು .. .. ಹೋ ಒಂದೇ, ಎರಡೇ.

ಆ ವಿಚಾರ ಅಲ್ಲೇ ಇರಲಿ. ಬೇಬಿಕಾರ್ನ ಮಂಚೂರಿ ಹಾಗೂ ಊಟ ಉಂಡರೂ, ಅದುಮಿಟ್ಟ, ಮೆದುಬೆಲ್ಲದ ಜೊತೆ ಹುರಿದ ಕಳ್ಳೇಕಾಯಿ ತಿನ್ನುವ ನನ್ನ ಆಸೆ ಈಡೇರಲಿಲ್ಲ. ರಾತ್ರಿ ಎಷ್ಟು ಹೊತ್ತಾದ್ರೂ ನಿದ್ದೆ ಬರಲಿಲ್ಲ. ಇವಳು ಮಲಗಿದ್ದಳು. ನಾನು ಮಲಗದ ನನ್ನ ಬಯಕೆಯ ಜೊತೆ ಎದ್ದೆ. ರಾತ್ರಿ ಒಂದು ಘಂಟೆ. ಈಗ ಕಳ್ಳೇಕಾಯಿ ಹುರಿದರೆ, ಇವಳ ಜೊತೆ ಪಕ್ಕದ ಮನೆಯವರೂ ಉರಿದುಕೊಳ್ಳುತ್ತಾರೆ. ಏನು ಮಾಡುವುದು? ಮಹಡಿ ಮೇಲೆ ಹೋಗಿ ಒಂದು ಬೊಗಸೆ ಕಳ್ಳೇಕಾಯಿ ತಂದೆ. ಹಾಗೇ ಬಿಡಿಸಿ ಬೆಲ್ಲದ ಜೊತೆ ತಿಂದೆ. ಹೂ ಹೂಂ. ರುಚಿ ಹತ್ತಲಿಲ್ಲ. ಏನೂ ಮಾಡುವಂತಿಲ್ಲ. ಆ ಕಡೆ ಈ ಕಡೆ ನೋಡಿದೆ. ಕೊನೆಗೆ ಅವೆನ್ ಕಾಣಿಸಿತು. ಅದರೊಳಗೆ ಕಳ್ಳೇಕಾಯಿ ಇಟ್ಟು ನಾಬ್ ತಿರುವಿದೆ. ಆದರ ಶಬ್ದಕ್ಕೆ ಇವಳೆಲ್ಲಿ ಎದ್ದಾಳೋ ಎಂದು ನೋಡುತ್ತಿದ್ದೆ. ಸದ್ಯ, ಹಾಗೇನು ಆಗಲಿಲ್ಲ. ಅವೆನ್ ಬಾಗಿಲು ತೆಗೆದ ತಕ್ಷಣ, ಅವೆನ್ ತುಂಬಾ ತುಂಬಿಕೊಂಡಿದ್ದ ದಟ್ಟ ಹೊಗೆ ನೋಡಿ ಗಾಬರಿಯಾಯ್ತು. ಸುಟ್ಟ ವಾಸನೆ ಮನೆಯೆಲ್ಲಾ ತುಂಬಿಕೊಂಡಿತು. ಆ ವಾಸನೆಗೆ ಮನೆ ಮಂದಿ ಎಲ್ಲಿ ಎದ್ದೇಳುತ್ತಾರೋ ಎಂಬು ಕಾದು ನೋಡಿದೆ. ಯಾರೂ ಎದ್ದ ಕುರುಹು ಕಾಣಲಿಲ್ಲ. (ವಿಶೇಷವಾಗಿ, ನನ್ನ ಹೆಂಡಂತಿ ಏಳುತ್ತಾಳೇನೋ ಎಂದು ಗಮನಿಸಿದೆ. ಗಾಢ ನಿದ್ದೆಯಲ್ಲಿದ್ದರೂ, ನಾನು ಟಾಯ್ಲೆಟ್ ಉಪಯೋಗಿಸಿ ಬಂದರೆ, ನಿದ್ದೆಗಣ್ಣಲ್ಲೇ, ‘ರೀ toilet flush ಮಾಡಿ ಬಂದು ಬಿದ್ಕೊಳ್ರೀ’ ಅನ್ನುವ ಇವಳು ಏನಾದರೂ ಎದ್ದುಬಿಟ್ಟಾಳು ಎನ್ನುವ ಕಷ್ಟ ನನಗೆ) ಶಬ್ದ ಮಾಡದಂತೆ ಅಡಿಗೆ ಮನೆಯಲ್ಲೇ ಕೂತೆ. ಕಳ್ಳೇಕಾಯಿ ಬಿಡಿಸಿ ಬೆಲ್ಲದ ಜೊತೆ ತಿಂದೆ. ಬಿಸಿಯಾಗಿತ್ತು ಆದರೆ, ಒಲೆಯ ಉರಿಯಲ್ಲಿ ಬೆಂದ crispyness ಇರಲಿಲ್ಲ. ಪರವಾಗಿಲ್ಲ. Something is better than nothing ಎರಡು-ಮೂರು ಬಾರಿ ತಿಂದೆ. ನಾಲ್ಕನೇ ಬಾರಿ ಬೆಲ್ಲ ಕೌರಿಕೊಂಡು ಶಬ್ದವಾಗದಂತೆ ಬಿಡಿಸಿದ್ದ ಕಳ್ಳೇಕಾಯಿಬೀಜವನ್ನು ತಲೆ ಎತ್ತಿ, ಬಾಯಿಗೆ ಹಾಕಿಕೊಳ್ಳುವಾಗ, ಅಡಿಗೆ ಮನೆ ಬಾಗಿಲಲ್ಲಿ, ನನ್ನನ್ನೇ ಉರಿಗಣ್ಣಲ್ಲಿ ನೋಡುತ್ತಾ ನಿಂತಿರುವ ನನ್ನ ಹೆಂಡಂತಿ ಕಾಣಿಸಿದಳು. ಆ ಕಳ್ಳೇಕಾಯಿಯನ್ನು ಬಾಯಿಗೆ ಹಾಕಿಕೊಂಡು, ಅವಳನ್ನು ದಾಟಿ ಸುಮ್ಮನೆ ಬಂದು ಬಿದ್ದುಕೊಂಡೆ. ಬೆಳಗಾಗುವುದನ್ನೇ ಕಾದಿದ್ದ ನನ್ನ ಹೆಂಡಂತಿ, ನನ್ನ ಬಾಯಿ ಚಪಲವನ್ನು ಆಡಾಡಿಕೊಂಡು ಕೂಗಾಡಿದಳು. ಆಮೇಲೆ ಕಣ್ಣಲ್ಲಿ ನೀರು ಬರುವಂತೆ ನಕ್ಕಳು.

ಹೆಂಡಂತಿ ಆಡಿಕೊಳ್ಳುತ್ತಾಳಂತಾ ಕೆಲವು ವಿಶೇಷ ರುಚಿಗಳನ್ನು ಬಿಡುವುದಕ್ಕಾಗುತ್ತದೆಯೇ? ಇವುಗಳಲ್ಲಿ, ಜಾತ್ರೆ, ಶ್ರಾವಣ ಮಾಸದಲ್ಲಿ ನಮ್ಮ ಮನೆದೇವರಾದ ಆವಲಕೊಂಡ ನರಸಿಂಹಸ್ವಾಮಿ ಬೆಟ್ಟದ ಬುಡದಲ್ಲಿ ಸಿಗುವ ಕಳ್ಳೇಪುರಿ, ಮಿಕ್ಸಚರ್ ಹಾಗೂ ಅದರೊಂದಿಗೆ ತೆಂಗಿನಕಾಯಿ ಚೂರುಗಳನ್ನು ಸಣ್ಣಗೆ ಉತ್ತರಿಸಿ ಸವಿಯುವ ಅವಕಾಶವನ್ನೂ ಸಹ ನಾನು ತಪ್ಪಿಸಿಕೊಳ್ಳಲಾರೆ.

ಆಫೀಸಿನಲ್ಲಿ ನಾನು ಬಹಳಾ decent, dignified. ಆದರೆ, ತಿನ್ನೋ ವಿಚಾರದಲ್ಲಿ ನಾನು ಹಾಗಿಲ್ಲ ಎನ್ನುವ ಸಂಗತಿ ನನ್ನ ಬಹಳ ಜನ ಸಹೋದ್ಯೋಗಿಗಳಿಗೆ ಗೊತ್ತಿಲ್ಲ. ಬೆಳಿಗ್ಗೆ ಮನೆಯಲ್ಲಿ ಏನು ತಿಂಡಿ ಆಗಿರುತ್ತೋ ಅದೇ ಮಧ್ಯಾಹ್ನಕ್ಕೂ ನನಗೆ ಬುತ್ತಿ. ನಾನು ನಮ್ಮ ಆಫೀಸ್‍ಗೆ ಹೋದ ಮೊದಲಲ್ಲಿ ಮಾಡಿದ ಕೆಲಸ (ಹತ್ತು ವರ್ಷಕ್ಕಿಂತಾ ಹೆಚ್ಚಿಗೆ ನಾನು ನಮ್ಮ ಆಫೀಸಿನಿಂದ ಹೊರಗೆ ಡೆಪ್ಯುಟೇಶನ್ ಮೇಲಿದ್ದೆ) . . . ಚೀಟಿ ಊಟ. ಆಂದರೆ, ಎಲ್ಲರೂ ಸೇರಿ ಎಲ್ಲರ ಮನೆಯ ಬುತ್ತಿಯನ್ನು ಹಂಚಿಕೊಂಡು ಊಟ ಮಾಡುವ ಪದ್ಧತಿ. ಆದರೆ, ಎಲ್ಲರ ಒಟ್ಟಿಗೆ ಕೂತು ನಾನು ಊಟ ಮಾಡುವುದಿಲ್ಲ. ನಮ್ಮ staff ಏನೋ,‘ಅವರು ಸಾಹೇಬ್ರು, ಅದಕ್ಕೇ ನಮ್ಮ ಜೊತೆ ಸೇರದೆಅವರ ಚೇಂಬರ್ ನಲ್ಲೇ ಕೂತು ಊಟ ಮಾಡ್ತಾರೆ’ ಅಂದ್ಕೊಂಡಿರಬಹುದು. ಹೂ.. ಹೂಂ. ಅದು ಹಾಗಲ್ಲ. ನಾನು ಊಟ ಮಾಡಿದ ಮೇಲೆ, ಆ ಕಡೆ ಈ ಕಡೆ ನೋಡ್ತೀನಿ. ಯಾರೂ ಇಲ್ಲ ಅಂತಾ confirm ಮಾಡಿಕೊಂಡು, ತಟ್ಟೆಯಲ್ಲಿ ಉಳಿದಿರೋ ರಸಂ ಅಥವಾ ಮಜ್ಜಿಗೆಯನ್ನಾ, ತಟ್ಟೆಯನ್ನು ತುಟಿಗಿಟ್ಟು ಜುರ್‍ರ್‍ರ್ ಅಂತಾ ಹೀರಿ, ಅಮೇಲೆ, ಒಂದೊಂದೇ ಕೈಬೆರಳು, ಆಮೇಲೆ ಒಟ್ಟು ಕೈ, ಆಮೇಲೆ, ತಟ್ಟೆಯನ್ನಾ . . . ಚೆನ್ನಾಗಿ ತೋರು ಬೆರಳಲ್ಲಿ ಒರಸಿ ನೆಕ್ಕದರೆ ಮಾತ್ರ, ತೇಗು ಬರೋದು.. ಊಟ complete ಅಂತಾ ಅನ್ನಿಸೋದು. ಅದಕ್ಕೆ ಆಫೀಸರ್‍ಗಿರಿ ಪಕ್ಕದಲ್ಲಿಟ್ಟು ಊಟ ಮಾಡ್ಬೇಕು. ಯಾರು ಏನಂದ್ಕೊಂಡ್ರೆ ನನಗೇನಾಗಬೇಕು, ನಾನು ಹೀಗೆ ಊಟ ಮಾಡಿದ್ರೇನೆ, ಅದು ಸಂತೃಪ್ತಿಯ ಭೋಜನ.

ಹೊಟ್ಟೆಬಾಕತನಕ್ಕೆ ಒಳ್ಳೆಯ company ಕೊಟ್ಟಿದ್ದೆಂದರೆ, ನನ್ನ ನ್ನೇಹಿತ, ‘ಬಚ್ಚೇಗೌಡ’ ಹಾಗೂ ‘ಗೋಪಾಲ್’. ನಮ್ಮನ್ನು ಆಫೀಸ್‍ನಿಂದ ಮೈಸೂರಿನ ನಮ್ಮ ಕಾಲೇಜಿನಲ್ಲಿ ಒಂದು ವರ್ಷದ ಡಿಪ್ಲಮೋ ವ್ಯಾಸಂಗಕ್ಕೆ ನಿಯೋಜಿಸಿದ್ದರು. ಆ ಅವಧಿಯಲ್ಲಿ, ಅಲ್ಲಿರುವ ಹಾಸ್ಟೆಲ್ ನಲ್ಲಿಯೇ ನಮ್ಮ ವಾಸ. ನಾವಿದ್ದಷ್ಟು ದಿನವೂ ಆ ಹಾಸ್ಟೆಲ್‍ನ ಕಿಚನ್ ಉಪಯೋಗಿಸುತ್ತಿದ್ದೆವು. ಆ ಕಿಚನ್‍ನ ಬಾಣಲೆ ಒಳ್ಳೇ ಆಲೆಮನೆಯ ಕೊಪ್ಪರಿಗೆಯಂತಿತ್ತು. ಪಲ್ಯ ಮಾಡಲು ಅರ್ಧ ಕೆ.ಜಿ. ತರಕಾರಿ ತಂದರೆ, ಒಂದು ಹಿಡಿಯಷ್ಟು ಕಾಣಿಸುತ್ತಿತ್ತು. ಅಯ್ಯೋ ಇಷ್ಟೇ ಇಷ್ಟು ಆಗುತ್ತದಲ್ಲಾ ಎಂದು ಇನ್ನೊಂದರ್ಧ ಕೆ.ಜಿ. ತಂದಾಕುವುದು. ಎಲ್ಲಾ ಪದಾರ್ಥನೂ ಹೀಗೆ. ನಮ್ಮ ಗೋಪಣ್ಣನಂತೂ ‘ಬುಡು ಬುಡು ಬೀಪನೇ’ ಅಂತಾ ಅವರ ದಾಸನದೊಡ್ಡಿ ಶೈಲಿಯಲ್ಲಿ ಹಾಡಿಕೊಂಡು, ಅವರಿಗೆ ಆಗದ ಆಫೀಸರ್‍ಗಳನ್ನು ನೆನೆದುಕೊಂಡು, ಆ ಆಫೀಸರ್‍ಗಳನ್ನು ಅಟ್ಟಾಡಿಸುವುದನ್ನು ಕಲ್ಪಿಸಿಕೊಂಡು, ಹಲ್ಲುಮುಡಿ ಕಚ್ಚಿ, ಮಂಡ್ಯ ಭಾಷೆಯಲ್ಲಿ ಬೈಯ್ದುಕೊಳ್ಳುತ್ತಾ (ಬೈಯ್ದು, ಬೈಯ್ದು, ಬೈಯ್ದೂ . . . ಅವರ ಬಾಯಿಯ ಎರಡೂ ಅಂಚಿನಲ್ಲಿ ಎಂಜಲು ಮಡುಕಟ್ಟಿ, ಒಣಗಿ, ಮೊಸರಿನಂತಾಗಿರುತ್ತಿತ್ತು) ನಾದಿದ ಚಪಾತಿ ಹಿಟ್ಟನ್ನು, ಎತ್ತಿ ಎತ್ತಿ ಪಾತ್ರೆಗೆ ಹೊಡೆದು ಹೊಡೆದು . . . ಕೊನೆಗೆ ಆ ಹಿಟ್ಟನ್ನು ಚಪಾತಿ ಮಾಡಿ, ಒಲೆ ಮೇಲೆ ಸುಟ್ಟು ತಿನ್ನುವಷ್ಟೋತ್ತಿಗೆ, ಆ ಚಪಾತಿ ಒಳ್ಳೇ ಸೋನ್‍ಪಪಡಿಯಂತೆ ಪುಡಿ ಪುಡಿಯಾಗಿ ಬಾಯಲ್ಲಿಯೇ ಕರಗಿ ಹೋಗುತ್ತಿತ್ತು. ಆ ಚಪಾತಿ ಒಲೆಯೋ ಒಂದು ಸಾರಿ ಹೊತ್ತಿಸಿದರೆ ಒಂಬತ್ತು ಚಪಾತಿ ಮಾಡಬಹುದಿತ್ತು. ಅಡಿಗೆ ಮಾಡಿ ಹೊಟ್ಟೆ ತುಂಬಾ ತಿಂದರೂ ಇನ್ನೂ ಮೂರು ಜನ ತಿನ್ನುವಷ್ಟು ಪದಾರ್ಥ ಮಿಕ್ಕಿರುತ್ತಿತ್ತು. ಬಿಸಾಡಲು ಮನಸು ಬಾರದೆ, ತಿನ್ನುವಷ್ಟು ತಿಂದು ಸಾಂಬಾರು ರಸಮ್‍ನ್ನು ಮಜ್ಜಿಗೆ ಥರಾ ಕುಡಿದು 7.30ಗೆಲ್ಲಾ ಮನೆ ಸೇರಿಕೊಂಡು ಬಾಗಿಲು ಜಡಿದುಕೊಂಡಿರುತ್ತಿದ್ದ ಮೈಸೂರಿನ ಎಕ್ಸ್‍ಟೆನ್ಷ್‍ನ್ ರಸ್ತೆಗಳಲ್ಲಿ ಬೀಡಾಡಿ ದನಗಳಂತೆ ರಾತ್ರಿಯೆಲ್ಲಾ ಓಡಾಡಿಕೊಂಡಿರುತ್ತಿದ್ದೆವು.

ನನ್ನವಳಿಗೂ ಮದುವೆಯಾದ ಹೊಸತರಲ್ಲಿ ಅಡಿಗೆ ಏನೂ ಬರುತ್ತಿರಲಿಲ್ಲ. ಈಗೇನೋ ಕಲಿತಿದ್ದಾಳೆ. ಅವಳ ರೀತಿಯೇ ಮದುವೆಯ ಹೊಸತರಲ್ಲಿ ಅಡಿಗೆಯ ವಿದ್ಯೆ ಬಾರದ ಅವಳ ತಮ್ಮನ ಹೆಂಡಂತಿಗೆ ಮೊನ್ನೆ ಹೇಳುತ್ತಿದ್ದಳು, the way to man’s heart is through his stomach ಅಂತಾ. ಆದರೆ, ಅದು ನಮ್ಮಂತಾ ಹೊಟ್ಟೆಬಾಕ ಗಂಡಂದಿರಿಗೆ ಸಂಪೂರ್ಣವಾಗಿ ಅನ್ವಯವಾಗುವುದಿಲ್ಲ ಅಂದುಕೊಂಡೆ.

ಎನ್.ರವಿಶಂಕರ್,
ಉಪ ಪ್ರಧಾನ ವ್ಯವಸ್ಥಾಪಕ,
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ.

ravi.vidya44@yahoo.in
* * *

Leave a Reply

Your email address will not be published.