ಹೆರುವ ಒಡಲಿನ ಬೇಗುದಿ..

- ಬಸೂ

gurmehar-kaur-fb.jpg.image.975.568ಇಂಡಿಯಾ ಪಾಕಿಸ್ತಾನಗಳ
ನಡುವೆ ಎಷ್ಟಾಯಿತು ಯುದ್ಧ?
ರಕ್ತ ಕಣ್ಣೀರ ಹೊರತು
ಮತ್ತೇನೂ ಹರಿಯದ ಯುದ್ಧದಲಿ
ನೆಹರು ಸತ್ತರೆ?
ಅವರ ಸಂಬಂಧಿಕರು ಸತ್ತರೆ?

ಬಾವುಟ ಭಕ್ತಿಯ ಕಾರ್ಗಿಲ್ ಕದನದಲಿ
ಸೈನಿಕರು ಎಷ್ಟು ದಿನ ಕಾದಾಡಿದರು?
ಶವ ಪೆಟ್ಟಿಗೆಯ ಹೊರತು
ಮತ್ತೇನೂ ದೊರಕದ ಯುದ್ಧದಲಿ
ಊರೂರಿಗೆ ತಲುಪಿದ
ಶವಪೆಟ್ಟಿಗೆಯಲ್ಲಿ ವಾಜಪೇಯಿ ಹೆಣವಿತ್ತೆ?
ಅವರ ಸಂಬಂಧಿಕರು ಹುತಾತ್ಮರಾದರೆ?
ಮುಷರಫ್ ಹೆಣವಾಗಿ ಹೋದನೆ?

ಜೀವ ಉಳಿಸುವ ಸರ್ಜಿಕಲ್ ಪದಕ್ಕೆ
ದಾಳಿಯ ಮೊನಚು ಅಂಟಿಸಿದ ಪ್ರಭುಗಳೆ
ಎಷ್ಟು ತಾಸು ಮದ್ದುಗುಂಡುಗಳು ಸಿಡಿದವು
ರಣಹದ್ದಿನ ಕೇಕೆಯ ಹೊರತು
ಮತ್ತೇನೂ ಕೇಳಿಸದ ಯುದ್ಧದಲಿ
ಮೋದಿಯ ಕೊನೆಯುಸಿರು ಹೋಯಿತೆ?
ಅವರ ಹೆಂಡತಿಯ ಹೃದಯ ಸ್ಥಬ್ಧವಾಯಿತೆ?
ನವಾಜ್ ಶರೀಫ್ ಜೀವ ತೆತ್ತನೆ?

ಮಗಳೇ, ಗುರ್ ಮೆಹರ್ ಕೌರ್,
ಯುದ್ಧಕೋರನಿಗೆ ಯಾವ ದೇಶ?
ಯಾವ ನೆಲ? ಯಾವ ಪಕ್ಷ?
ನಿನ್ನ ಅನಾಥ ನಿಟ್ಟುಸಿರು ಕೇಳುವ
ಪ್ರಶ್ನೆಗೆ ಯಾರು ಉತ್ತರಿಸಿಯಾರು?

ತಂದೆ ಕಳಕೊಂಡ ಮಗಳಷ್ಟೇ
ಮತ್ತೆ ಯುದ್ಧವಾಗದಿರಲೆಂದು ಪ್ರಾರ್ಥಿಸಬಲ್ಲಳು..
ಬಾ ಮಗಳೆ ಯುದ್ಧವಿಲ್ಲದ
ಗಡಿಗಳಿಲ್ಲದ
ನಿನ್ನ ಕನಸಿಗೆ ಬಣ್ಣ ತುಂಬು
ಈ ನೆಲದಲಿ ನೀನು
ಆ ನೆಲದಲಿ ಇನ್ಯಾರೋ
ನಿನ್ನ ಬಳಗ ಹೆಚ್ಚಿಸು
ಜೊತೆಯಾಗುತ್ತಾಳೆ ನಿನ್ನ ಕೂಡ ನನ್ನ ಮಗಳೂ.

ನನಗಿಷ್ಟೇ ಗೊತ್ತು ಮಗಳೆ
ಹೆರುವ ಒಡಲಷ್ಟೆ ಅನಾಥಗೊಳುವ ನೋವ ಅರಿಯಬಲ್ಲದು.

Leave a Reply

Your email address will not be published.