ಹೆಣ್ಣಿನ ಮೌನಕ್ಕೆ ಕೊರಳಾದ ಬರೆಹಗಳು

-ಅಕ್ಷತಾ ಹುಂಚದಕಟ್ಟೆ

ಶಿವಮೊಗ್ಗೆಯ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಇರ್ಷಾದ್ ಉಪ್ಪಿನಂಗಡಿ ಅವರ ಲೇಖನಗಳ ಸಂಕಲನ `ಸ್ವರ್ಗದ ಹಾದಿಯಲ್ಲಿ’ ಕೃತಿ ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ಸಂಕಷ್ಟಗಳಿಗೆ ದನಿಯಾಗುತ್ತದೆ. ಆ ಕೃತಿಗೆ ಪ್ರಕಾಶಕರ ಮಾತುಗಳನ್ನು ಬರೆದಿರುವ ಅಕ್ಷತಾ ಹುಂಚದಕಟ್ಟೆ ಮಹಿಳೆಯರ ಅಸ್ಮಿತೆ ಮತ್ತು ದನಿಯನ್ನು ದಮನ ಮಾಡುವಲ್ಲಿ ಯಾವ ಧರ್ಮವು ಹಿಂದೆಬಿದ್ದಿಲ್ಲ ಎಂಬುದನ್ನು ಸೋದಾಹರಣವಾಗಿ ನಿರೂಪಿಸಿದ್ದಾರೆ.
ಒಂದು ಬೆಳಗ್ಗಿನ ಜಾವ. ಎಂದಿನಂತೆ ವಾಕ್ ಹೋಗಲು ಸಹ್ಯಾದ್ರಿ ಕಾಲೇಜಿನ ಗೇಟ್ ತೆರೆಯುತ್ತಿದ್ದೆ. ಅಷ್ಟರಲ್ಲೇ ಹಿಂದಿನಿಂದ ಒಬ್ಬರು ಓಡಿಬಂದು ಏನೋ ಅವಘಡ ಆಗಿದೆಯೇನೋ ಅನ್ನೋ ರೀತಿಯಲ್ಲಿ `ಅಕ್ಕಾ, ಅಕ್ಕಾ ‘ ಎಂದು ಜೋರಾಗಿ ಗಾಬರಿಯ ದನಿಯಲ್ಲಿ ಕರೆದರು. ನಾನು ಬೆಚ್ಚಿ ಏನಾಯ್ತೊ ಎಂದುಕೊಂಡು ಕೇಳಿದರೆ `ಅಕ್ಕ, ನೀವು ಹಣೆಗಿಟ್ಟಿಲ್ಲ’ ಎಂದರು ಏನೋ ಅವಘಡವಾದಂತೆ. ಅದನ್ನು ಹೇಳಲು ಅವರು ನನ್ನನ್ನು ಬೆಂಬೆತ್ತಿಕೊಂಡು ಬಂದಿದ್ರು. ನಾನು ಬರುತ್ತಿದ್ದ ಸಿಟ್ಟನ್ನು ಅದುಮಿಕೊಂಡು ಅವರ ಹಣೆಯನ್ನೇ ದೃಷ್ಟಿಸುತ್ತಾ `ನೀವು ಇಟ್ಟಿಲ್ವಲ್ಲ?’ ಎಂದೆ. ಅವರು ನನ್ನ ಉತ್ತರದಿಂದ ತಬ್ಬಿಬ್ಬಾಗಿ ನನ್ನನ್ನೇ ಹುಚ್ಚಿಯಂತೆ ನೋಡಿದರು. ಆಗುತ್ತಿದ್ದ ಅವಘಡವನ್ನು ತಪ್ಪಿಸಲು ಬಂದರೆ ಇವಳೇನು ಹೀಗೆ ಆಡ್ತಾಳೆ ಎನ್ನುವ ಮುಖಭಾವ ಮಾಡಿಕೊಂಡು ತೆರಳಿದರು. ನನಗೂ ಅದರ ಬಗ್ಗೆ ಯಾಕಷ್ಟು ರೇಜಿಗೆ ಎಂದರೆ `ನಿನ್ನ ಹಣೆಯನ್ನ ನಾಯಿ ನೆಕ್ಕಿದೆಯೇ?’ ಎಂದು ಹಿರಿಯರೊಬ್ಬರು ಜಬರಿಸಿ ಕೇಳಿದ್ದು, ನಾನು ಏನಾಯ್ತೋ ಎಂದು ಬೆದರಿದ್ದು ನೆನಪಿದೆ ನನಗೆ. ಆಗಿನ್ನೂ ನನಗೆ ಐದಾರು ವರುಷ. ಆ ಹಿರಿಯರು ಹಾಗೆ ಕೇಳಿದ್ದು ನಾನು ಹಣೆಗಿಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ. ನಾನಷ್ಟೇ ಅಲ್ಲ, ಈ ವಿಷಯದಲ್ಲಿ ಪ್ರಜ್ಞಾಪೂರ್ವಕವಾಗಿ ಅಲ್ಲ, ಅಕಸ್ಮಾತ್ ಮರೆತು ಹೋಗಿ ಖಾಲಿ ಹಣೆಯಾದ ಕಾರಣಕ್ಕೆ ಬಯ್ಯಿಸಿಕೊಂಡ, ಪೆಟ್ಟು ತಿಂದ ಎಷ್ಟೋ ಹೆಣ್ಣುಮಕ್ಕಳು ಇದ್ದಾರೆ.

ನಾವು ಹೈಸ್ಕೂಲ್‍ನಲ್ಲಿ ಓದುತ್ತಾ ಇರುವಾಗ ಅಲ್ಲಿ ದಿನವೂ ಹೂ ಮುಡಿದುಕೊಂಡು ಬರಬೇಕು, ಹಣೆಗಿಡಬೇಕು, ಬಳೆ ತೊಟ್ಟು ಬರಬೇಕು, ಜಡೆ ಹೆಣೆದುಕೊಂಡು ಬರಬೇಕು ಎಂಬೆಲ್ಲ ಕಟ್ಟುನಿಟ್ಟಿನ ನಿಯಮಗಳಿದ್ದವು. ನಿಯಮ ಪಾಲಿಸದಿದ್ದರೆ ಹೊಡೆತ ತಿನ್ನಬೇಕಿತ್ತು. ಆದರೆ ಇಂಥ ನಿಯಮಗಳ್ಯಾವುವೂ ಹುಡುಗರಿಗಿಲ್ಲದೆ ಅವರು ನಿರಾಳವಾಗಿದ್ದರು. ಇವೆಲ್ಲ ಯಾ ಪಾಟಿ ನಮ್ಮನ್ನು ಬಂಧಿಸಿದ್ದವೆಂದರೆ ಆಟ, ಪಾಠದಲ್ಲಿ ನಮಗೆ ನಿರ್ಭಿಡೆಯಿಂದ, ನಿಸ್ಸಂಕೋಚವಾಗಿ ಪಾಲ್ಗೊಳ್ಳಲು ಸಾಧ್ಯವೇ ಆಗಲಿಲ್ಲ. ನಮ್ಮ ಗಮನವೆಲ್ಲ ಬಳೆ, ಹೂ, ಜಡೆ ಮೇಲೆ ಇದ್ದು….ಎಲ್ಲಿ ಬಳೆ ಒಡೆಯತ್ತೋ? ಹೂ ಉದುರಿ ಬೀಳತ್ತೋ? ಕುಂಕುಮ ಅಳಿಸುತ್ತೋ ಎಂದು ಸದಾ ಕಾಲ ಎಚ್ಚರಿಕೆಯಿಂದ ಅಲ್ಲಲ್ಲ ಭಯಭೀತಿಯಿಂದಿರುತ್ತಿದ್ವಿ.

Swargadahadi-3ನಮ್ಮ ಎಷ್ಟೋ ಗೆಳತಿಯರನ್ನು ಶಾಲಾ-ಕಾಲೇಜುಗಳನ್ನು ಅರ್ಧಕ್ಕೆ ಬಿಡಿಸಿ ಬಲವಂತವಾಗಿ ಮನೆಯಲ್ಲಿರಿಸಿದರು, ಮದುವೆ ಮಾಡಿದರು. ಕಾರಣಗಳೇನೆಂದು ಕೆದಕಿ-ಬೆದಕಿ ನೋಡಿದರೆ ಹೊರಬಂದ ಸತ್ಯಗಳು; ಯಾವುದೋ ಹುಡುಗ ದಾರಿಯಲ್ಲಿ ಹೋಗುವಾಗ ಒಂದು ಲವ್ ಲೆಟರ್ ಕೊಟ್ಟ, ಯಾವನೋ ಒಬ್ಬ ಅವಳು ಏನು ಪ್ರತಿಕ್ರಿಯಿಸಲಿಲ್ಲ ಎಂಬ ಕಾರಣಕ್ಕೆ ಕೆಟ್ಟದಾಗಿ ಅವಳ ಬಗ್ಗೆ ಕಥೆ ಕಟ್ಟಿದ, ಮತ್ಯಾರೋ ಇವಳ ಹೆಸರನ್ನು ಬಸ್‍ಸ್ಟಾಂಡ್‍ನ ಗೋಡೆ ಮೇಲೆ ಬರೆದು ಅವಳ ಹೆಸರಿನ ಪಕ್ಕ ಇನ್ಯಾವನದೋ ಹೆಸರು ಬರೆದರು….. ಇಂಥದ್ದೇ ಕಾರಣಗಳು ಹೆಣ್ಣುಮಕ್ಕಳ ಓದಿಗೆ ಮುಳುವಾದವು. ಅವರ ಪಾತ್ರ ಏನೂ ಇರದಿದ್ರೂ ಅವರನ್ನು ಓದಿನಿಂದ ಬಿಡಿಸಿ ಮನೆಯಲ್ಲಿ ಕೂಡಿ ಹಾಕಲಾಯಿತು. ಮನೆ ಮರ್ಯಾದಿ ಕಳೆದಳೆಂಬ ಕಾರಣಕ್ಕೆ ಬಯ್ಗುಳ, ಹೊಡೆತ ಬಡಿತಕ್ಕೆ ಸಿಲುಕಿಸಿದ್ದೂ ಇದೆ. ಅವರಿಗೆ ಇದರಲ್ಲಿ ಹೆಣ್ಣುಮಕ್ಕಳ ಅಪರಾಧ ಏನಿದೆ ಎಂದು ತಿಳಿಯದೇ ಹೋದರೂ ಅವರ ವಿದ್ಯಾಭ್ಯಾಸ, ಬದುಕಿನ ಸಂತೋಷ ಕೊನೆಗೊಂಡಿದ್ದು ನಿಜ.

ಗೆಳತಿ ಭಾರತೀದೇವಿ ಕಾಲೇಜೊಂದರಲ್ಲಿ ಲೆಕ್ಚರರ್. ತನ್ನ ಓದು, ಜ್ಞಾನ, ವಿದ್ಯಾರ್ಥಿ ಪ್ರೀತಿ ಮತ್ತು ಒಡನಾಟದಿಂದ ಒಳ್ಳೆಯ ಅಧ್ಯಾಪಕಿ ಎಂದೇ ಹೆಸರು ಮಾಡಿದಾಕೆ. ಅವಳು ಚೂಡಿದಾರ್ ಹಾಕಿಕೊಂಡು ಕಾಲೇಜಿಗೆ ಹೋಗುವುದು ಹೊಸದಾಗಿ ಬಂದ ಅವರ ಕಾಲೇಜಿನ ಮಹಿಳಾ ಪ್ರಾಂಶುಪಾಲರಿಗೆ ಸಹ್ಯವಾಗಲಿಲ್ಲ. ಇದರಿಂದ ಉದ್ಯೋಗದ ಪರಿಸರ ಅಸಹನೀಯವಾಯಿತು. ಈಕೆಯ ಉಡುಗೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಇರಲಿಲ್ಲ. ಅವಳ ಸಹ ಪ್ರಾಧ್ಯಾಪಕರಿಗೆ ತೊಂದರೆ ಇರಲಿಲ್ಲ. ಆದರೂ ಸಂಸ್ಕøತಿಯ ಹೆಸರಿನಲ್ಲಿ ಅವಳ ಉಡುಗೆ ತೊಡುಗೆಯನ್ನು ನಿಯಂತ್ರಿಸಲು ನೋಡಿದರು. ಈ ಬಗ್ಗೆ ಆಕೆ ಪತ್ರಿಕೆಗಳಲ್ಲಿ ಬರೆದುಕೊಂಡಾಗ ಇಡೀ ನಾಡಿನ ಅದೆಷ್ಟೋ ಟೀಚರುಗಳು ಅವಳ ದನಿಗೆ ತಮ್ಮ ದನಿಯನ್ನು ಸೇರಿಸಿದರು. ಸಂಸ್ಕøತಿಯ ಹೆಸರಿನಲ್ಲಿ ಸೀರೆಯನ್ನು ಕಡ್ಡಾಯವಾಗಿಸಿ, ಸೀರೆಯನ್ನೇ ಉಟ್ಟುಕೊಂಡು ಬರಬೇಕು ಎಂದು ಕಟ್ಟುನಿಟ್ಟು ಮಾಡುವುದು, ತಾವು ಚೂಡಿದಾರ್ ತೊಟ್ಟು ಶಾಲಾ-ಕಾಲೇಜಿಗೆ ಹೋದಾಗ ತಮ್ಮನ್ನು ಹೀನಾಯ ಮಾತುಗಳಲ್ಲಿ ನಿಂದಿಸುವುದು, ಅವಮಾನ ಮಾಡುವುದು, ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಬೆದರಿಸುವ ಮಟ್ಟಕ್ಕೂ ಹೋಗುವುದನ್ನು ಬಿಚ್ಚಿಟ್ಟರು. ಹೌದಪ್ಪ, ಚೂಡಿದಾರ್ ಹಾಕಿಕೊಂಡು ಬಂದರೆ ವಿದ್ಯಾರ್ಥಿಗಳಿಗೂ, ಮೇಡಂಗಳಿಗೂ ವ್ಯತ್ಯಾಸವೇ ಇಲ್ಲದಂತಾಗಿ, ವಿದ್ಯಾರ್ಥಿಗಳಿಗೆ ಮೇಡಂಗಳ ಬಗ್ಗೆ ಗೌರವವೇ ಬರುವುದಿಲ್ಲ ಎನ್ನುತ್ತೀರಿ. ಅದೇ ಅಧ್ಯಾಪಕರು ಮತ್ತು ಹುಡುಗರು ಪ್ಯಾಂಟ್-ಶರ್ಟ್ ಧರಿಸಿ ಬರುತ್ತಾರೆ, ಅಲ್ಲಿ ವ್ಯತ್ಯಾಸ ಮತ್ತು ಗೌರವದ ಪ್ರಶ್ನೆಗಳೇಳುವುದಿಲ್ಲ. ಮತ್ತು ಅಧ್ಯಾಪಕಿಗೂ ವಿಧ್ಯಾರ್ಥಿನಿಯರಿಗೂ ವ್ಯತ್ಯಾಸ ಇರಬೇಕಾದ್ದು ಜ್ಞಾನ ಮತ್ತು ತಿಳವಳಿಕೆಯ ಮಟ್ಟದಲ್ಲಿ ವಿನಃ ಉಡುಗೆ-ತೊಡುಗೆಯ ವಿಷಯಕ್ಕೆ ಅಲ್ಲ ಎಂಬ ಮಾತಿಗೆ ಅವರು ಏನೂ ಪ್ರತಿಕ್ರಿಯಿಸುವುದಿಲ್ಲ. ಆದರೆ ಸೀರೆಯನ್ನು ಕಡ್ಡಾಯವಾಗಿಸಲು ಇನ್ನಷ್ಟು ಹುನ್ನಾರಗಳನ್ನು ಹುಡುಕುತ್ತಾರೆ.

ಇಷ್ಟೇ ಅಲ್ಲ ಕೆಳಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ, ಕೆಳಜಾತಿಯ ಹುಡುಗನನ್ನು ಮದುವೆಯಾದ ಕಾರಣಕ್ಕೆ ಎಷ್ಟೋ ಹೆಣ್ಣುಮಕ್ಕಳು ಇಲ್ಲಿ ತಂದೆ, ತಾಯಿ, ಅಣ್ಣ, ತಮ್ಮಂದಿರಿಂದಲೇ ಕೊಲೆಯಾಗಿ ಹೋದರು. ಸಮಾಜ ಕೂಡಾ ಇಂಥ ಘಟನೆ ನಡೆದಾಗ ಕೊಲೆಯಾದವಳ ಬಗ್ಗೆ ತುಸು ಅನುಕಂಪ ತೋರಿಸುವಂತೆ ಮಾಡಿ ಮನೆ ಮರ್ಯಾದಿ ಎಲ್ಲದಕ್ಕಿಂತ ದೊಡ್ಡದು, ಆ ಸಿಟ್ಟಿನಿಂದಲೇ ಈ ಕ್ರಿಯೆ ನಡೆದಿದೆ ಎಂಬಂತೆ ಹೆಣ್ಣುಮಕ್ಕಳ ಕೊಲೆಯನ್ನು ಸಹಜವಾಗಿ ನೋಡುವ ದುರ್ಬರತೆಯೂ ಇಲ್ಲಿದೆ.

ಮುಟ್ಟು-ಹುಟ್ಟು ಎರಡೂ ಬಹಳ ನೈಸರ್ಗಿಕವಾದ, ಜೈವಿಕ ಕ್ರಿಯೆಗಳು ಎಂಬುದು ಜಗತ್ತಿಗೆ ಗೊತ್ತು. ಆದರೆ ಇವೆರಡು ಕಾರಣಕ್ಕೆ ನಮ್ಮನ್ನು ವಂಚಿಸಿದ್ದು ಕಮ್ಮಿ ಇದೆಯೇ? ಅಲ್ಲಿ ಹೋಗ್ಬೇಡ. ಇಲ್ಲಿ ಬರಬೇಡ. ಎಷ್ಟೊಂದು ಕಟ್ಟಳೆಗಳು. ಅದರ ಬದಲಿಗೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲ ಕಡೆ ಕಡ್ಡಾಯವಾಗಿ ಲೇಡಿಸ್ ರೂಮ್‍ಗಳನ್ನು ಕಟ್ಟಿಸಿ, ಕೈಗೆ ಸಿಗುವಂತೆ ಪ್ಯಾಡ್ಗಳನ್ನು ಇಟ್ಟು, ಬಳಸಿದ ಪ್ಯಾಡ್ ಹಾಕಲು ಒಂದು ಡಸ್ಟ್ ಬಿನ್ ಇಟ್ಟರೆ ಎಷ್ಟೊಂದು ಹೆಣ್ಣುಮಕ್ಕಳು ಇಲ್ಲಿ ಕ್ರಿಯಾಶೀಲವಾಗಿ ಕ್ರೀಡೆ, ನೃತ್ಯ, ಕೆಲಸ, ಸಾಹಸ ಎಲ್ಲದರಲ್ಲೂ ಭಾಗವಹಿಸಬಹುದು. ಆದರೆ ನಾವಿನ್ನೂ ಆ ದಿನಗಳಲ್ಲಿ ಹೊರಗೆ ಹೋಗಬಾರದು, ಯಾರನ್ನೂ ಮುಟ್ಟಿಸಿಕೊಳ್ಳಬಾರದು ಎಂಬ ಕಟ್ಟಳೆಯನ್ನೇ ಎದುರಿಸುತ್ತಿದ್ದೀವಿ. ಈ ಕಟ್ಟಳೆಯನ್ನು ಎದುರಿಸಿ ಹೋದೆವಾದರೂ ಒಂದು ಶೌಚಾಲಯಕ್ಕೂ ಎಷ್ಟೋ ಕಡೆ ಗತಿಯಿಲ್ಲವಾದ್ದರಿಂದ ಮತ್ತೆ ಆ ಕಟ್ಟಳೆಗೆ ಒಳಪಡುವುದೇ ನಮಗೆ ಲೇಸೆನಿಸುತ್ತದೆ… ಹಾಗೆ ಸಂದರ್ಭಗಳು ಏರ್ಪಡುತ್ತವೆ. ಇಲ್ಲಿ ಒಂದು ಹೆಜ್ಜೆ ಮುಂದಿಡಲು ಹೆಣ್ಣಾದವಳು ಹತ್ತು ಬಾರಿ ಯೋಚಿಸಬೇಕು.

ಇವೆಲ್ಲ ನೆನಪಿಸಿಕೊಳ್ಳಬಾರದು ಅಂದುಕೊಳ್ತೀವಿ. ಆದರೆ ಹೆಜ್ಜೆ ಹೆಜ್ಜೆಗೂ ಇಂಥವು ಇರಿಯುತ್ತಲೇ, ಎದಿರಾಗುತ್ತಲೇ ಇರುತ್ತವೆ. ಏಕೆಂದರೆ ಇದೆಲ್ಲ ನಾವು ಅನುಭವಿಸುತ್ತಿರುವ ವಾಸ್ತವ. ಧರ್ಮ, ಸಂಸ್ಕøತಿ, ಸಮಾಜ ಈ ಮೂರರ ಹೆಸರಿನಲ್ಲಿ, ಮೂರರ ನೆಪದಲ್ಲಿ ನಮ್ಮ ಉಡುಗೆ-ತೊಡುಗೆ, ನಡವಳಿಕೆ, ಬದುಕು ಹೀಗೆ ಎಲ್ಲವು ನಿಯಂತ್ರಿತವಾಗಿವೆ. ಹೆಣ್ಣನ್ನು ನಿಯಂತ್ರಿಸುವಲ್ಲಿ, ಅವಳ ಕ್ರಿಯಾಶೀಲತೆ, ಸೃಜನಶೀಲತೆಯನ್ನು ಮೊಟಕುಗೊಳಿಸುವಲ್ಲಿ, ಅವಳ ಬದುಕನ್ನೇ ನಿರ್ಬಂಧಿಸುವಲ್ಲಿ, ಮತ್ತು ಅವಳನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವಲ್ಲಿ ಯಾವ ಧರ್ಮವೂ ಹಿಂದೆಬಿದ್ದಿಲ್ಲ. ಎಲ್ಲ ಧರ್ಮಗಳ ಮನೋಧರ್ಮವೂ ಹೀಗೆಯೇ. ಚೂರು ಹೆಚ್ಚು-ಕಮ್ಮಿ ಇರಬಹುದು ಅಷ್ಟೇ.

ಆದರೆ ಇದೆಲ್ಲ ಗಂಡಸಿಗೆ ಹೊರತಾದ ಜಗತ್ತು. ಅವನ ಕಣ್ಣಿಗೆ ಕಾಣದ ಲೋಕ. ಆದರೆ ಇರ್ಷಾದ್, ನೀನೊಬ್ಬ ಗಂಡಾಗಿ ಹೆಣ್ಣಿನ ಮೌನಕ್ಕೆ ಕೊರಳಾದೆಯಲ್ಲ, ಹೆಣ್ಣಿನ ಪ್ರಶ್ನೆಗೆ ದನಿಯಾದೆಯಲ್ಲ ಅದು ಈ ಕಾಲದ ಅಗತ್ಯ ಮತ್ತು ಸಂವೇದನಾಶೀಲ ಗಂಡಸರು ಹೆಣ್ಣಿನ ಪ್ರಶ್ನೆಗೆ ಮಿಡಿಯುತ್ತಿರುವುದರ ಪ್ರತೀಕ. ನಿನ್ನಂತಹ ಯುವಕರ ಸಂಖ್ಯೆ ಸಾಸಿರವಾಗಲಿ. ನಿಮ್ಮಂಥವರ ದನಿ ಎಲ್ಲಿಯೂ ಅಲಕ್ಷಿತವಾಗದಿರಲಿ. ಥ್ಯಾಂಕ್ಸ್ ಇರ್ಷಾದ್, ಇಂಥ ಬರಹಗಳಿಗಾಗಿ, ಬರಹದ ಹಿಂದಿನ ಮನೋಧರ್ಮಕ್ಕಾಗಿ. ಥ್ಯಾಂಕ್ಸ್ ನಿಮಗೂ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಜೀವನ್ ಕುತ್ತಾರ್, ಸುದೀಪ್ತೋ ಮೊಂಡಲ್, ಅನೀಶಾ ಸೇಟ್ ಮತ್ತೆಲ್ಲ ಪತ್ರಕರ್ತರ ಅಧ್ಯಯನ ಕೇಂದ್ರ ಮತ್ತು ಜನನುಡಿ ಬಳಗದ ಗೆಳೆಯ-ಗೆಳತಿಯರಿಗೆ ಮತ್ತು ಬಹುಮುಖ್ಯವಾಗಿ ದಿನೇಶ್ ಅಮಿನ್‍ಮಟ್ಟು ಸರ್ ನಿಮಗೆ, ಈ ಅಭಿವ್ಯಕ್ತಿಗೆ, ಮನೋಧರ್ಮಕ್ಕೆ ಪ್ರೇರಣೆ ನೀವು.

Leave a Reply

Your email address will not be published.