ಹುತಾತ್ಮ ಭಗತ್ ಸಿಂಗ್ ಏಕೆ ನೆನಪಾಗುತ್ತಾನೆ ?

ನಾ ದಿವಾಕರ

ಒಂದು ನಿರ್ದಿಷ್ಟ ಧ್ಯೇಯ ಮತ್ತು ಆದರ್ಶಗಳಿಗಾಗಿ ಹೋರಾಡಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವ್ಯವಸ್ಥೆಯ ಬದಲಾವಣೆಗಾಗಿ ಅವಿರತ ಶ್ರಮಿಸಿ ಪ್ರಭುತ್ವದ ಧೂರ್ತತನಕ್ಕೆ ಬಲಿಯಾಗುವ ಪ್ರಾಮಾಣಿಕ ಹೋರಾಟಗಾರರನ್ನು ಹುತಾತ್ಮ ಎಂದು ಬಣ್ಣಿಸಬಹುದು. ವ್ಯಕ್ತಿಗತ ಸೈದ್ಧಾಂತಿಕ ನೆಲೆಯಲ್ಲಿ ಹುತಾತ್ಮ ಎಂಬ ಪದಕ್ಕೆ ನಾನಾ ಅರ್ಥಗಳು ಮೂಡುತ್ತವೆ, ನಾನಾ ಗರಿಗಳು ಕೆದರುತ್ತವೆ. ಭಾರತದ ಕ್ಷುದ್ರ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಮುನ್ನಡೆಗೆ ಚಿಮ್ಮುಹಲಗೆಯಾಗಿ ಪರಿಣಮಿಸಿದೆ. ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಅನುಕೂಲಸಿಂಧು ರಾಜಕಾರಣದ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿರುವ ಸಂದರ್ಭದಲ್ಲಿ ಹುತಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

bhagat-singhಆದರೆ ಹುತಾತ್ಮ ಎನ್ನುವ ಔನ್ನತ್ಯವನ್ನು ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ಆತ್ಮಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಸಂಗ್ರಾಮಿಗಳು ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್‍ಸಿಂಗ್. ಏಕೆಂದರೆ ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ. ಭಾರತದ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ದಮನಕಾರಿ ಧೋರಣೆಯ ವಿರುದ್ಧ ಸಮರ ಸಾರಿದ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವುದನ್ನು ಕಂಡಿದ್ದರೂ ನವೀಕೃತ ಆಡಳಿತ ವ್ಯವಸ್ಥೆಯ ಅವಕೃಪೆಗೆ ಬಲಿಯಾಗುತ್ತಿದ್ದರೇನೋ ಎಂಬ ಅನುಮಾನ, ಪ್ರಸ್ತುತ ಸಮಾಜೋ ರಾಜಕೀಯ ವ್ಯವಸ್ಥೆಯನ್ನು ಗ್ರಹಿಸುವ ಪ್ರಜ್ಞಾವಂತರಿಗೆ ಮೂಡುವುದು ಸಹಜ.

ಇಂದು ಭಗತ್ ಸಿಂಗ್ ಎಲ್ಲ ರಾಜಕೀಯ ಪಕ್ಷಗಳಿಗೂ ಆದರ್ಶಪ್ರಾಯನಾಗಿದ್ದಾನೆ. ಎಲ್ಲ ಸಂಘಟನೆಗಳೂ ಈ ಹುತಾತ್ಮನ ಆದರ್ಶಗಳಿಂದ ಪ್ರೇರೇಪಣೆ ಪಡೆಯುತ್ತವೆ. ಎಡಪಂಥೀಯ ಸಂಘಟನೆಗಳಿಗೆ ಭಗತ್ ಸಿಂಗ್‍ನ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಅಪ್ಯಾಯಮಾನವಾದರೆ ಬಲಪಂಥೀಯರಿಗೆ ಅವರದೇ ಆದ ಸೀಮಿತ ಚೌಕಟ್ಟಿನ “ ದೇಶಪ್ರೇಮ-ದೇಶಭಕ್ತಿ ” ಅವನನ್ನು ಆರಾಧಿಸುವಂತೆ ಮಾಡುತ್ತದೆ. ಭಗತ್ ಸಿಂಗ್ ಗಲ್ಲುಶಿಕ್ಷೆಗೊಳಗಾಗದೆ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ತಾನು ಬಯಸಿದ ಪರಿವರ್ತನೆಯನ್ನು ತರಲು ಯತ್ನಿಸಿದ್ದಲ್ಲಿ ಬಹುಶಃ ಈ ಆರಾಧ್ಯ ದೈವದ ಪಟ್ಟ ಅವನಿಗೆ ದೊರೆಯುತ್ತಿಲಿಲ್ಲವೇನೋ. ಬಹುಶಃ ವಿಶ್ವದ ಇತಿಹಾಸ ಪಠ್ಯಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚೆ ಗುವಾರನನ್ನು ಕಡೆಗಣಿಸಿರುವಂತೆಯೇ ಭಗತ್‍ಸಿಂಗ್‍ನನ್ನೂ ಕಡೆಗಣಿಸಲಾಗುತ್ತಿತ್ತು. ಒಂದು ಅರ್ಥದಲ್ಲಿ ಭಗತ್ ಸಿಂಗ್ ಹುತಾತ್ಮನಾಗಿದ್ದು “ ದೇಶಭಕ್ತಿ ”ಯ ವಕ್ತಾರರಿಗೆ ಒಂದು ವರದಾನವಾಗಿ ಪರಿಣಮಿಸಿತು. ಹಾಗಾಗಿಯೇ ಕೇಸರೀಕರಣಗೊಂಡ ಕೆಂಪುಕೋಟೆಯ ತ್ರಿವರ್ಣ ಧ್ವಜದ ನೆರಳಲ್ಲಿ ವಿಜೃಂಭಿಸುವ ಭಗತ್ ಸಿಂಗ್ ಸೋಮನಾಥ ರಥಯಾತ್ರೆಯಲ್ಲೂ ವಿಜೃಂಭಿಸುತ್ತಾನೆ.

ಸಮಕಾಲೀನ ಸಂದರ್ಭದಲ್ಲಿ, ಭಗತ್ ಸಿಂಗ್ ಹುತಾತ್ಮನಾಗಿ ಎಂಟು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ಈ ದಿಟ್ಟ ಹೋರಾಟಗಾರನನ್ನು ಸ್ವಾತಂತ್ರ್ಯ ಸಂಗ್ರಾಮಿ ಎಂಬ ಸೀಮಿತ ಚೌಕಟ್ಟಿನೊಳಗೆ ಬಂಧಿಸುವುದು ಹುತಾತ್ಮನಿಗೆ ಅಪಚಾರ ಎಸಗಿದಂತೆಯೇ ಸರಿ. ಏಕೆಂದರೆ ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. ವ್ಯಕ್ತಿಯ ಸಾವು ಅವನ ಆದರ್ಶಗಳನ್ನು ಅಂತ್ಯಗೊಳಿಸುವುದಿಲ್ಲ ಎಂಬ ಭಗತ್‍ಸಿಂಗ್‍ನ ಮುತ್ತಿನಂತಹ ನುಡಿಗಳು ಎಷ್ಟು ಸತ್ಯ. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ಆದರ್ಶಗಳು, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ. ಭಗತ್ ಸಿಂಗ್ ಕೇವಲ ತನ್ನ ಒಂದು ಉದ್ದೇಶಕ್ಕಾಗಿ ಅಥವಾ ತನ್ನ ಎಡಪಂಥೀಯ ಧೋರಣೆಗಳ ಅಸ್ತಿತ್ವವನ್ನು ಉಳಿಸಿಲೆಂದೇ ಹುತಾತ್ಮನಾಗಲಿಲ್ಲ. ಅಥವಾ ತನ್ನದೇ ಆದ ರಾಜಕೀಯ ಭೂಮಿಕೆಗಾಗಿ, ಅಧಿಕಾರ ರಾಜಕಾರಣಕ್ಕಾಗಿ ಹುತಾತ್ಮನಾಗಲಿಲ್ಲ. ಇಂದು ನಾವು ಕಾಣುತ್ತಿರುವ ಪಕ್ಷ ರಾಜಕಾರಣ ಮತ್ತು ಆತ್ಮರತಿಯ ಚಿಂತನೆಗಳನ್ನು ಮೀರಿ ದೇಶದ ಯುವ ಜನತೆಗೆ, ಭವಿಷ್ಯದ ಪೀಳಿಗೆಗೆ ಸಮ ಸಮಾಜದ ಒಂದು ನಿರ್ದಿಷ್ಟ ಆಯಾಮವನ್ನು ತನ್ನ ಹೋರಾಟದ ಮೂಲಕ ಬಿಂಬಿಸಿದ್ದು ಭಗತ್ ಸಿಂಗ್‍ನ ಹೆಗ್ಗಳಿಕೆ.

ಆದರೆ ಇಂದು ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿರುವುದು ಭಗತ್ ಸಿಂಗ್ ಪ್ರತಿಪಾದಿಸಿದ ಉನ್ನತ ಆದರ್ಶಗಳು ಎನ್ನುವುದನ್ನು ಗಮನಿಸಬೇಕು. ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಮತ್ತು ಸತ್ಯಸಂಧತೆಯನ್ನು ಭೌಗೋಳಿಕ ಚೌಕಟ್ಟಿನಲ್ಲಿ ಬಂಧಿಸುವ ಬದಲು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿದಾಗ ಸಮಾಜ ಒಂದು ಉನ್ನತ ಧ್ಯೇಯದೆಡೆಗೆ ಸಾಗುವುದು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಭೌಗೋಳಿಕ ದೇಶಪ್ರೇಮದ ಸೀಮಿತ ಶರಪಂಜರದೊಳಗೆ ಬಂಧಿಯಾಗುತ್ತವೆ. ಭಾರತದ ಪ್ರಸ್ತುತ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸನ್ನಿವೇಶವನ್ನು ಗಮನಿಸಿದಾಗ ಭಗತ್ ಸಿಂಗ್ ಮತ್ತು ಸಂಗಾತಿಗಳು ಪ್ರತಿಪಾದಿಸಿದ ಎಲ್ಲ ಮೌಲ್ಯಗಳೂ ಅಪಮೌಲ್ಯಕ್ಕೊಳಗಾಗುತ್ತಿರುವುದು ಎದ್ದು ಕಾಣುತ್ತದೆ. ತಮ್ಮ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಗೆ ಹೆಸರಾದರೂ ಹತ್ಯೆಗೀಡಾಗುವ, ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಉನ್ನತ ಅಧಿಕಾರಿಗಳು, ಪಟ್ಟಭದ್ರ ಹಿತಾಸಕ್ತಿಗಳ, ಮತೀಯವಾದಿಗಳ, ಧರ್ಮಾಂಧರ ಕೆಂಗಣ್ಣಿಗೆ ಬಲಿಯಾಗಿ ಬದುಕಿದ್ದೂ ಶವದಂತಾಗುವ ಸಾಹಿತಿ ಕಲಾವಿದರು, ವ್ಯವಸ್ಥೆಯ ಲೋಪಗಳನ್ನು ಜನಸಾಮಾನ್ಯರ ಮುಂದಿರಿಸಿದ ಅಪರಾಧಕ್ಕಾಗಿ ಸ್ಥಾಪಿತ ವ್ಯವಸ್ಥೆಯಿಂದಲೇ ದಮನಕ್ಕೊಳಗಾಗುವ ಹೋರಾಟಗಾರರು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಒಂದು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಆಡಳಿತ ವ್ಯವಸ್ಥೆಯ, ಪ್ರಭುತ್ವದ ದಮನಕ್ಕೊಳಗಾಗುವ ಪ್ರಜ್ಞಾವಂತರು ಇವರೆಲ್ಲರೂ ತಮ್ಮೊಳಗಿನ ಬೌದ್ಧಿಕ ಶಕ್ತಿ ಮತ್ತು ಉತ್ಸಾಹಗಳು ಹುತಾತ್ಮವಾಗುವುದನ್ನು ಕಣ್ಣೆದುರಿನಲ್ಲೇ ಕಾಣುತ್ತಿದ್ದಾರೆ. ಇವರ ನಡುವೆಯೇ ಭಗತ್ ಸಿಂಗ್ ಬೌದ್ಧಿಕವಾಗಿ ಜೀವಂತವಾಗಿದ್ದರೂ ಭೌತಿಕವಾಗಿ ಕಣ್ಮರೆಯಾಗುತ್ತಿದ್ದಾನೆ.

ಇದಕ್ಕೆ ಕಾರಣ ಎಂದರೆ ಸಮಕಾಲೀನ ಭಾರತದಲ್ಲಿ ಉನ್ನತ ಸಮಾಜವನ್ನು ನಿರ್ಮಿಸಲು ನೆರವಾಗುವ ಎಲ್ಲ ಮೌಲ್ಯಗಳೂ ಬಿಕರಿಗಿವೆ, ಹಾಗೆಯೇ ಈ ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ನಲುಗುತ್ತಿವೆ. ಭೌತಿಕವಾಗಿ ಆತ್ಮ, ದೇಹ ಇಲ್ಲದ ಈ ಮೌಲ್ಯಗಳನ್ನು ಗಲ್ಲಿಗೇರಿಸಲು ವ್ಯವಸ್ಥೆಯ ಸಂರಕ್ಷಕರಿಗೆ ಸಾಧ್ಯವಿಲ್ಲ. ಆದರೆ ಈ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಪಂಜರದೊಳಗೆ ಬಂಧಿಸುವ ಮೂಲಕ ನಿರ್ನಾಮ ಮಾಡುವುದು ಸುಲಭಸಾಧ್ಯ. ರೋಹಿತ್ ವೇಮುಲ, ಕನ್ನಯ್ಯ ಕುಮಾರ್, ಜೆಎನ್‍ಯು ವಿವಾದ, ದಾದ್ರಿ ಘಟನೆ ಮತ್ತು ಮಾಲ್ಡಾದ ವಿದ್ಯಮಾನಗಳು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವ್ಯಾಖ್ಯೆಯನ್ನೇ ವಿಭಿನ್ನ ನೆಲೆಗೆ ಕೊಂಡೊಯ್ದಿದೆ. ರಾಷ್ಟ್ರ ಭಕ್ತಿ ಎನ್ನುವ ಬೌದ್ಧಿಕ ವಿದ್ಯಮಾನ ಇಂದು ಲೌಕಿಕತೆಯನ್ನು ಪಡೆದುಕೊಂಡಿದ್ದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಭಕ್ತಿ ಪ್ರದರ್ಶಿಸಲು ಜಯಕಾರ ಕೂಗಬೇಕಾದ ಸಂದರ್ಭ ಒದಗಿಬಂದಿದೆ. ಹಾಗಾಗಿ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಘರ್ಷವನ್ನು ದೇಶಭಕ್ತಿ-ದೇಶದ್ರೋಹದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಹುತಾತ್ಮರೆಂದು ನೆನೆಯುತ್ತಿದೆ. ಆತ್ಮವೇ ಇಲ್ಲದ ಸಮಾಜದಲ್ಲಿ ಹುತಾತ್ಮರಿಗೆ ಎಂತಹ ಸ್ಥಾನಮಾನ ಸಿಗಬಹುದು ? ಭಗತ್ ಸಿಂಗ್ ಇಂದು ಬದುಕಿದ್ದಲ್ಲಿ ? ಎಂಬ ಪ್ರಶ್ನೆ ಮೂಡಿದಾಗ ದಿಗ್ಮೂಢರಾಗುತ್ತೇವೆ.

Leave a Reply

Your email address will not be published.