ಹೀಗೇಕೆ ಯೋಚಿಸಬಾರದು ? ಹಿಂದಿರುಗಿ ನೋಡಿದಾಗ !

ನಾ ದಿವಾಕರ

Parliament of India (5)70 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಅವಲೋಕಿಸುವಾಗ ಎರಡು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಬ್ರಿಟೀಷ್ ವಸಾಹತುಶಾಹಿಯಿಂದ ಬಿಡುಗಡೆ ಹೊಂದಿದ ನಂತರ ತನ್ನದೇ ಆದ ಪ್ರಜಾತಾಂತ್ರಿಕ ಗಣತಂತ್ರ ವ್ಯವಸ್ಥೆಯನ್ನು ರೂಪಿಸಿಕೊಂಡ ಭಾರತೀಯ ಪ್ರಭುತ್ವದ ಅಂತರಾಳ ಮತ್ತು ಆಂತರ್ಯದ ಧೋರಣೆಯನ್ನು ಗ್ರಹಿಸಲು ಇದು ಮುಖ್ಯವಾಗುತ್ತದೆ. ಮೊದಲನೆಯ ಅಂಶವೆಂದರೆ ಸ್ವತಂತ್ರ ಭಾರತದ ಪ್ರಭುತ್ವದ ಮೂಲ ಲಕ್ಷಣಗಳು ಸಾರ್ವಭೌಮ ಜನತೆಗೆ ಪ್ರಪ್ರಥಮ ಬಾರಿಗೆ ಪರಿಚಯವಾದದ್ದು 1948ರಲ್ಲಿ, ಶ್ರೀಕಾಕುಳಂ ದಂಗೆಯ ಸಂದರ್ಭದಲ್ಲಿ. ಪ್ರತಿರೋಧದ ದನಿಗಳನ್ನು ಅಡಗಿಸಲು, ಕ್ರಾಂತಿಯ ಕಿಡಿಗಳನ್ನು ದಮನಿಸಲು ಸ್ವತಂತ್ರ ಭಾರತದ ಸರ್ಕಾರ ಅನುಸರಿಸಿದ ಮಾರ್ಗಗಳು ಪ್ರಜಾತಂತ್ರ ವ್ಯವಸ್ಥೆಗೆ ಶೋಭೆ ತರುವಂತಹುದಾಗಿರಲಿಲ್ಲ ಎನ್ನುವುದು ಕಟು ಸತ್ಯ. ಹಾಗೆಯೇ ಪ್ರಭುತ್ವ ವಿರೋಧಿ ದನಿಗಳನ್ನು ದಮನಿಸುವ ನಿಟ್ಟಿನಲ್ಲಿ ವಸಾಹತು ಧೋರಣೆ ದಟ್ಟವಾಗಿದ್ದುದೂ ಅಷ್ಟೇ ಸತ್ಯ.

ಸ್ವಾತಂತ್ರ್ಯದ ಕನಸು ಸಾಕಾರಗೊಂಡ ಸಂಭ್ರಮದಲ್ಲಿ ತಮ್ಮದೇ ಆದ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದ ಭಾರತದ ಸಾರ್ವಭೌಮ ಪ್ರಜೆಗಳಿಗೆ ಪ್ರಭುತ್ವ ಮತ್ತು ಸರ್ಕಾರದ ನಡುವಿನ ವ್ಯತ್ಯಾಸ ಅರಿವಾದದ್ದು 1960ರ ದಶಕದಲ್ಲಿ. ಸರ್ಕಾರದ ಜನಪರ ಕಾಳಜಿ, ಜನಪರ ಯೋಜನೆಗಳು ಮತ್ತು ದೇಶದ ಅಭಿವೃದ್ಧಿಗಾಗಿ ರೂಪಿಸಲಾದ ಹಲವಾರು ಪುರೋಗಾಮಿ ಯೋಜನೆಗಳಿಂದ ದೇಶದ ಜನಸಾಮಾನ್ಯರು, ವಿಶೇಷವಾಗಿ ಶ್ರಮಿಕ ವರ್ಗಗಳು, ಪುಳಕಿತರಾಗಿದ್ದರು. ದಾಸ್ಯದ ಸಂಕೋಲೆಯಿಂದ ವಿಮುಕ್ತರಾಗಿ ಸ್ವಾತಂತ್ರ್ಯದ ಅಲೆಯಲ್ಲಿ ತೇಲುತ್ತಿದ್ದ ಜನಸಾಮಾನ್ಯರಿಗೆ ತಮ್ಮ ಭವಿಷ್ಯದ ಕನಸು ರಂಜನೀಯವಾಗಿದ್ದುದು ಸಹಜ ಪ್ರಕ್ರಿಯೆಯಾಗಿತ್ತು. ಆದರೆ 1960ರ ದಶಕದಲ್ಲಿ ಈ ಕನಸುಗಳ ಪದರಗಳು ಒಂದೊಂದಾಗಿ ಕಳಚಲಾರಂಭಿಸಿದಾಗ ಜನಸಾಮಾನ್ಯರು ಭ್ರಮನಿರಸನಕ್ಕೊಳಗಾಗಿದ್ದರು. ಸ್ವಾತಂತ್ರ್ಯ ಪೂರ್ವದ ಆಶ್ವಾಸನೆಗಳು ಟೊಳ್ಳು ಎಂಬ ಭಾವನೆ ದಟ್ಟವಾಗತೊಡಗಿತ್ತು. ಅಭಿವೃದ್ಧಿಯ ಪಥದಲ್ಲಿ ತಾವು ಕೇವಲ ಹಾಸುಗಲ್ಲುಗಳಾಗುತ್ತಿದ್ದೇವೆಯೇ ಹೊರತು ಮೈಲಿಗಲ್ಲುಗಳಾಗುತ್ತಿಲ್ಲ ಎಂಬ ವ್ಯಸನ ಕಾಡಲಾರಂಭಿಸಿತ್ತು. ಸಮತಾವಾದ, ಸಮಾಜವಾದ ಮತ್ತು ಸಮ ಸಮಾಜದ ಕನಸುಗಳು ಕೇವಲ ಮಿಥ್ಯೆ ಎನಿಸಲಾರಂಭಿಸಿತ್ತು.

militaryಪ್ರಜಾತಂತ್ರ, ಗಣತಂತ್ರ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗಳು ರಾಜಕೀಯ ನೆಲೆಯಲ್ಲಿ ಸಾಕಾರಗೊಂಡಂತೆ ಸಾಮಾಜಿಕ ನೆಲೆಯಲ್ಲಿ ಆಗಲಿಲ್ಲ. ಜನಸಾಮಾನ್ಯರ ಆಶೋತ್ತರಗಳು ಕೇವಲ ಭ್ರಮೆಯಾಗಿಯೇ ಉಳಿದವು. ಬಡತನ ನಿವಾರಣೆ ಘೋಷಣೆಯಾಯಿತು. ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ, ದುರ್ಬಲರ ಮೇಲಿನ ಅತ್ಯಾಚಾರ ಕೊನೆಗಾಣಲಿಲ್ಲ. ಸಂಪನ್ಮೂಲಗಳ ವಿತರಣೆ ಸಮರ್ಪಕವಾಗಿ ನಡೆಯಲಿಲ್ಲ. ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಯಿತು. ಈ ಸಂದರ್ಭದಲ್ಲಿ 1960ರ ದಶಕದಲ್ಲಿ ನಡೆದ ದಂಗೆಗಳು, ಬಂಡಾಯ ಮತ್ತು ಹೋರಾಟಗಳು ಆಳುವ ವರ್ಗಗಳ ಪ್ರಜ್ಞೆಯನ್ನು ಬಡಿದೆಬ್ಬಿಸಿತ್ತು. ಈ ಹತಾಶೆಯನ್ನು ಹೋಗಲಾಡಿಸಲು ಕೂಳಿಗೆ ಕಾಳು ಎರಚುವ ನೀತಿ ಅನುಸರಿಸಲಾಯಿತು. ರಾಷ್ಟ್ರೀಕರಣ, ಭೂ ಸುಧಾರಣೆ , ಮೀಸಲಾತಿ ಮುಂತಾದ ನೀತಿಗಳು ಸತ್ಯವನ್ನು ಮರೆಮಾಚುವ ಮಂಜಿನ ಪರದೆಗಳಾಗಿ ಪರಿಣಮಿಸಿದವು. ಮತ್ತೊಂದೆಡೆ ಪ್ರಭುತ್ವ ಬ್ರಿಟೀಷ್ ಮಾದರಿಯಲ್ಲೇ ಈ ಬಂಡಾಯದ ದನಿಯನ್ನು ಅಡಗಿಸಲು ಅಧಿಕಾರ ರಾಜಕಾರಣವನ್ನು ಬಳಕೆ ಮಾಡಿಕೊಳ್ಳತೊಡಗಿತ್ತು.

1960ರ ದಶಕದ ಉತ್ತರಾರ್ಧದ ಸಂದರ್ಭ. ಎರಡು ಯುದ್ಧಗಳ ಭೀಕರ ಪರಿಣಾಮವನ್ನು ದೇಶ ಎದುರಿಸುತ್ತಿತ್ತು. ಬರಗಾಲ, ಕ್ಷಾಮ ಮತ್ತು ಹಸಿವಿನ ಹಾಹಾಕಾರ ದೇಶದೆಲ್ಲೆಡೆ ವ್ಯಾಪಿಸಿತ್ತು. ಕೃಷಿ ಉತ್ಪಾದನೆ ಸತತವಾಗಿ ಕಡಿಮೆಯಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗದ ಹಾವಳಿ ಹೆಚ್ಚಾಗುತ್ತಿತ್ತು. ಔದ್ಯಮೀಕರಣ ಪ್ರಕ್ರಿಯೆಯಲ್ಲಿ ಹಿನ್ನಡೆ ಉಂಟಾಗಿತ್ತು. ಉದ್ಯೋಗಾವಕಾಶಗಳು ಕ್ಷೀಣಿಸುತ್ತಿದ್ದವು. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ದೇಶದ ಯುವ ಜನತೆಯಲ್ಲಿ ಭ್ರಮನಿರಸನ ಉಂಟಾಗಿತ್ತು. ಯುದ್ಧಗಳ ಪರಿಣಾಮ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗಿಂತಲೂ ದೇಶದ ಸುರಕ್ಷತೆ, ಭದ್ರತೆ ಮತ್ತು ರಾಷ್ಟ್ರೀಯತೆಯ ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ದೊರೆತಿತ್ತು. ದೇಶದ ಯುವ ಜನತೆಗೆ ಭವಿಷ್ಯದ ಹಾದಿ ಕರಾಳವಾಗಿ ಕಾಣತೊಡಗಿತ್ತು. ಎರಡು ದಶಕಗಳ ಆಳ್ವಿಕೆಯಲ್ಲಿ ಸಂವಿಧಾನ ದತ್ತ ಮೀಸಲಾತಿ ನೀತಿಯೂ ಸಹ ತಮ್ಮ ನೆರವಿಗೆ ಬರಲಿಲ್ಲ ಎನ್ನುವ ವಾಸ್ತವದ ದರ್ಶನ ಪ್ರಜೆಗಳಿಗಾಗಿತ್ತು.

rohithಈ ಪ್ರಕ್ಷುಬ್ಧತೆ, ಹತಾಶ ಜನತೆಯ ಆಕ್ರೋಶ ಮತ್ತು ಸಾಮೂಹಿಕ ಅಸಮಧಾನಗಳು ಶಮನವಾಗಲು ಯುದ್ಧ ಪರಂಪರೆ ನೆರವಾಯಿತು. ದೇಶಭಕ್ತಿಯ ಉನ್ಮಾದದಲ್ಲಿ ಜನಸಾಮಾನ್ಯರು ತಮ್ಮ ಸಂಕಷ್ಟಗಳನ್ನು ಮರೆಯುವಂತಾಯಿತು. ಆದರೆ ಇದು ತಾತ್ಕಾಲಿಕ ಶಮನವಾಗಿತ್ತಷ್ಟೇ. 1971ರ ಉನ್ಮಾದ ಮತ್ತು ದೇಶಭಕ್ತಿಯ ಹಸಿವು ಕ್ರಮೇಣ ಕ್ಷೀಣಿಸತೊಡಗಿತು. ಕಾರಣ ಇಷ್ಟೆ, ಭಾವನಾತ್ಮಕ ಧೋರಣೆಗಳು ಮನುಷ್ಯನ ಹಸಿವು ನೀಗಿಸುವುದಿಲ್ಲ. ಭಾರತಮಾತೆ ಎಷ್ಟೇ ಪೂಜನೀಯಳಾದರೂ ಬದುಕಲು ಬೇಕಾಗಿದ್ದುದು ರೋಟಿ, ಕಪಡ, ಮಕಾನ್ ಎಂಬ ವಾಸ್ತವವನ್ನು ಅರಿತ ಜನ ಮತ್ತೊಮ್ಮೆ ಹತಾಶೆಗೆ ಜಾರಿದ್ದರು. 1960ರ ದಶಕದ ಬಂಡಾಯ ಮತ್ತು ಕ್ರಾಂತಿಯ ಕಿಡಿಗಳು ಸಾರ್ವಜನಿಕ ಪ್ರಜ್ಞೆಯನ್ನು ಆವರಿಸುವ ಮುನ್ನವೇ 1975 ಸಂಭವಿಸಿತ್ತು. ಸಂವಿಧಾನ ಜನಸಾಮಾನ್ಯರು ಅನುಸರಿಸಬೇಕಾದ ಸಂಹಿತೆಗಳ ಗ್ರಂಥ ಮಾತ್ರ ಎಂದು ಭಾವಿಸಿದ್ದ ಭಾರತದ ಸಾರ್ವಭೌಮ ಪ್ರಜೆಗಳಿಗೆ, ತುರ್ತುಪರಿಸ್ಥಿತಿ ಸಂವಿಧಾನದ ಮತ್ತೊಂದು ಆಯಾಮವನ್ನೂ ತೋರಿಸಿತ್ತು.

ನಾಲ್ಕು ದಶಕಗಳ ನಂತರ ಭಾರತ ಮತ್ತೊಮ್ಮೆ ಇಂತಹುದೇ ಸಾಮಾಜಿಕ-ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. 1990ರ ನವ ಉದಾರವಾದ ಭಾರತವನ್ನು ವಿಶ್ವ ಭೂಪಟದಲ್ಲಿ ಉತ್ತುಂಗಕ್ಕೇರಿಸಿದೆ. ಆದರೆ ಇದು ಮಾರುಕಟ್ಟೆಯ ಆಯಾಮವಷ್ಟೆ. ಸಾಮಾಜಿಕ ನೆಲೆಯಲ್ಲಿ, ಸಾಂಸ್ಕøತಿಕ ನೆಲೆಯಲ್ಲಿ ಭಾರತ ಇನ್ನೂ ಸಿಂಧೂ ಬಯಲಿನ ಆಸುಪಾಸಿನಲ್ಲೇ ಓಡಾಡುತ್ತಿದೆ. ಪ್ರಾಚೀನ ಕಾಲದ ಅಮಾನವೀಯ ಮನೋಭಾವವನ್ನು ಇಂದಿಗೂ ಮೈಗೂಡಿಸಿಕೊಂಡಿರುವ ಒಂದು ಪ್ರಜ್ಞಾಹೀನ ಸಾಮಾಜಿಕ ವ್ಯವಸ್ಥೆ ಇಡೀ ದೇಶದ ಸಾಂಸ್ಕøತಿಕ ರಾಜಕಾರಣದ ಅಧಿಪತ್ಯ ವಹಿಸಿಕೊಂಡಿದೆ. ಹಾಗಾಗಿಯೇ ಇಲ್ಲಿ ಬದುಕು ಸಾಕೆನಿಸಿ ಆತ್ಮಹತ್ಯೆಗೆ ಶರಣಾದ 15 ಲಕ್ಷ ರೈತರ ಜೀವಕ್ಕೆ ಮೌಲ್ಯವಿಲ್ಲ. ಅತ್ಯಾಚಾಕ್ಕೊಳಗಾಗುವ ಲಕ್ಷಾಂತರ ನಿರ್ಭಯ, ಸೌಜನ್ಯರಿಗೆ ಮಾನ್ಯತೆ ಇಲ್ಲ. ಮಂದಿರ ಮಸೀದಿಗಳಲ್ಲಿ, ಪಠಾಣ್‍ಕೋಟ್-ಉರಿಗಳಲ್ಲಿ ನಡೆಯುವ ರಕ್ತ ಸಿಂಚನ ಊನ, ದಾದ್ರಿಯಲ್ಲಿ ರಂಗೋಲಿ ಹಾಕುತ್ತದೆ.  ಜಾತಿ ಆಧಾರಿತ ಹತ್ಯೆಗಳನ್ನು ಗೌರವ ಹತ್ಯೆ ಎನ್ನಲಾಗುತ್ತದೆ. ಹತ್ಯೆಗೂ ಗೌರವವಿದೆ ಎಂದರ್ಥವೇ ? ಸಾಂಸ್ಕøತಿಕ-ಸಾಮಾಜಿಕ ಘನತೆಯ ರಕ್ಷಣೆಗಾಗಿ ಹತ್ಯೆ ಗೌರವಯುತವಾಗುತ್ತದೆ.

ಪರಿಣಾಮ, ಪ್ರತಿರೋಧದ ದನಿಗಳೆಲ್ಲವೂ ಹತ್ಯೆಗೆ ಅರ್ಹವಾಗುತ್ತವೆ. ಸಾವಿನ ದಲ್ಲಾಳಿಗಳ ಬಂಡವಾಳವಾಗುತ್ತವೆ. ಮಲ್ಕನ್‍ಗಿರಿಯ ಗಿರಿ ಕಂದರಗಳಿಂದ ಕೇಳಿಬರುವ ಆಕ್ರಂದನ ಮತ್ತು ಸಿಡಿಯುವ ಕ್ರಾಂತಿಯ ಕಿಡಿಗಳಿಗೂ, ಕಂಬಾಲಪಲ್ಲಿ-ಖೈರ್ಲಂಜಿಯಲ್ಲಿ ಮೊಳಗುವ ಹತಾಶೆಯ ನುಡಿಗಳಿಗೂ ಉತ್ತರ ಒಂದೇ ಆಗಿರುತ್ತದೆ. ದಾದ್ರಿಯ ಅಖ್ಲಾಕ್, ಕರ್ನಾಟಕದ ಕಲ್ಬುರ್ಗಿ, ಮಹಾರಾಷ್ಟ್ರದ ಪನ್ಸಾರೆ-ಧಬೋಲ್ಕರ್ ಎಲ್ಲರೂ ಸಾವಿನ ಮಾರುಕಟ್ಟೆಯ ಸರಕುಗಳಂತಾಗುತ್ತಾರೆ. ಮಂದಿರ-ಮಸೀದಿಗಳಲ್ಲಿ, ಗುರುದ್ವಾರಗಳಲ್ಲಿ ದೇಶ-ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಅಸ್ಮಿತೆಗಳನ್ನು ಅರಸುತ್ತಿರುವ ಪ್ರಬಲ ಶಕ್ತಿಗಳು ಸಾರ್ವಭೌಮ ಪ್ರಜೆಗಳಿಗೆ ಜಾನ್ ಡಯರ್‍ನ ಮತ್ತೊಂದು ಅವತಾರವನ್ನು ಪ್ರತಿ ಹೆಜ್ಜೆಯಲ್ಲೂ ಪ್ರದರ್ಶಿಸುತ್ತಿವೆ. ಈ ವಿರಾಟ್ ಶಕ್ತಿಯ ಮುಂದೆ ನಲುಗಿ ಹೋಗಿರುವ ಶೋಷಿತ ಸಮಾಜ ತನ್ನ ಆಕ್ರಂದನಕ್ಕೆ ನೆಲೆಯೊಂದನ್ನು ಅರಸುತ್ತಿರುತ್ತದೆ. ಈ ನೆಲೆಗಳನ್ನು ಒದಗಿಸುವ ಎಲ್ಲ ಭೂಮಿಕೆಗಳೂ ಪ್ರಭುತ್ವದ ಅವಕೃಪೆಗೆ ಪಾತ್ರವಾಗುತ್ತವೆ. ಎನ್‍ಡಿಟಿವಿ ವಿರುದ್ಧ ಹೇರಲಾಗಿದ್ದ ಒಂದು ದಿನದ ನಿಷೇಧ ಈ ವಿಕೃತ ಬೆಳವಣಿಗೆಗೆ ಒಂದು ಸ್ಪಷ್ಟ ನಿದರ್ಶನ.

ಈ ನಿಟ್ಟಿನಲ್ಲಿ ದೇಶದ ಪ್ರಸ್ತುತ ಸಂದರ್ಭವನ್ನೊಮ್ಮೆ ಮೆಲುಕು ಹಾಕೋಣ. ಧಬೋಲ್ಕರ್-ಪನ್ಸಾರೆ-ಕಲಬುರ್ಗಿಯವರ ಹತ್ಯೆ ವಿಚಾರವಾದ ಮತ್ತು ಫ್ಯಾಸಿಸಂ ನಡುವಿನ ನೇರ ಕದನಕ್ಕೆ ಭೂಮಿಕೆಯಾಗಿತ್ತು. ಚೆನ್ನೈನ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಮೇಲೆ ನಡೆದ ಆಕ್ರಮಣ ಮೇಲ್ಜಾತಿಯ ಕ್ರೌರ್ಯ ಮತ್ತು ಅಧಿಪತ್ಯಕ್ಕೆ ಸಾರಥಿಯಾಗಿತ್ತು. ಪೆರುಮಾಳ್ ಮುರುಗನ್ ಅವರೊಳಗಿನ ಸಾಹಿತಿಯ ಅಂತ್ಯದ ಘೋಷಣೆ ಸಾಹಿತ್ಯ ಮತ್ತು ರಾಜಕಾರಣದ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಿತ್ತು. ದಾದ್ರಿಯಲ್ಲಿ ಸಂಭವಿಸಿದ ಅಮಾಯಕ ಅಖ್ಲಾಕ್‍ನ ಹತ್ಯೆ ಆಹಾರ ಪದ್ಧತಿ ಮತ್ತು ನಾಗರಿಕ ಸಂಸ್ಕøತಿಯ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿತ್ತು. ದನದ ಚರ್ಮ ಸುಲಿದರು ಎಂಬ ಆರೋಪದ ಮೇಲೆ ಊನ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಮತ್ತು ದೌರ್ಜನ್ಯ ಜಾತಿ ವೈಷಮ್ಯ ಮತ್ತು ಜಾತಿ ಸಂಘರ್ಷದ ಹೊಸ ಸಮರರೇಖೆಯನ್ನು ರೂಪಿಸಿತ್ತು. ಪಠಾಣ್ ಕೋಟ್ ಮತ್ತು ಉರಿ ದಾಳಿಗಳು ಮತ್ತು ಭಾರತೀಯ ಸೇನೆ ಸರ್ಜಿಕಲ್ ದಾಳಿ ದೇಶದಾದ್ಯಂತ ಯುದ್ಧೋನ್ಮಾದ ಸೃಷ್ಟಿಸಿತ್ತು. ಭಾರತೀಯ ಪ್ರಭುತ್ವದ ಚೌಕಟ್ಟಿನಲ್ಲೇ ಅಘೋಷಿತ ಅಂತರಿಕ ಕಲಹ ತನ್ನ ಸುಪ್ತಾವಸ್ಥೆಯಿಂದ ಎಚ್ಚೆತ್ತು ಚುರುಕಾಗಿತ್ತು. ರೋಹಿತ್ ವೇಮುಲನ ಆತ್ಮಹತ್ಯೆ ಮತ್ತು ಜೆಎನ್‍ಯು ಘಟನೆಗಳು ದೇಶದ ಯುವ ಜನತೆಯಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸಿತ್ತು.

jigneshಈ ಘಟನೆಗಳು ಆಳುವ ವರ್ಗಗಳನ್ನು ವಿಚಲಿತಗೊಳಿಸಿದ್ದೇ ಅಲ್ಲದೆ ದೇಶದ ವಿವಿಧೆಡೆಗಳಲ್ಲಿ ಪ್ರತಿರೋಧದ ಕಿಡಿಗಳು ಯಾವುದೇ ಕ್ಷಣದಲ್ಲಿ ಭುಗಿಲೇಳುವ ಸಾಧ್ಯತೆಗಳು ನಿಚ್ಚಳವಾಗಿತ್ತು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ , ದಲಿತ ಸಂವೇದನೆಗೆ ವಿರುದ್ಧವಾಗಿ, ಮರಾಠಿಗರು ಮೀಸಲಾತಿಗಾಗಿ ಆಗ್ರಹಿಸಿ ಉಗ್ರ ಹೋರಾಟ ನಡೆಸಿದ್ದರು. ಗುಜರಾತ್‍ನಲ್ಲಿ ಪಟೇಲ್ ಸಮುದಾಯ ತನ್ನ ರಾಜಕೀಯ ಹಕ್ಕೊತ್ತಾಯಗಳಿಗಾಗಿ ಹೋರಾಟ ಆರಂಭಿಸಿತ್ತು. ಹಾರ್ದಿಕ್ ಪಟೇಲ್ ನೇತೃತ್ವದ ಜನಾಂದೋಲನಕ್ಕೆ ಊನ ನಂತರದಲ್ಲಿ ಜಿಗ್ನೇಷ್ ಮೆವಾನಿ ನೇತೃತ್ವದಲ್ಲಿ ದಲಿತರೂ ಸ್ಪಂದಿಸತೊಡಗಿದರು. ಇವರೊಂದಿಗೆ ಹಿಂದುಳಿದ ವರ್ಗಗಳೂ ಸಹ ಆಂದೋಲನದಲ್ಲಿ ಸಹಭಾಗಿಯಾದವು. ರಾಜಸ್ಥಾನದಲ್ಲಿ ಗುಜ್ಜರ್ ಸಮುದಾಯದ ಹೋರಾಟವೂ ಗಂಭೀರ ಸ್ವರೂಪ ಪಡೆಯುವುದರಲ್ಲಿತ್ತು. ಈ ಎಲ್ಲಾ ಪ್ರಕರಣಗಳು ಒಂದಲ್ಲಾ ಒಂದು ರೀತಿಯಲ್ಲಿ ಪ್ರಭುತ್ವದ ವಿರುದ್ಧ ಸೆಟೆದುನಿಂತ ಜನಪರ ದನಿಗಳಿಗೆ ದನಿಯಾಗಿದ್ದವು. ಕ್ರಾಂತಿಕಾರಿ ಎಂದು ಹೇಳಲಾಗುವುದಿಲ್ಲವಾದರೂ ಎಲ್ಲೋ ಒಂದು ಕಡೆ 1966ರ ಕ್ರಾಂತಿಯ ಕಿಡಿಗಳು ಮತ್ತು 1974ರ ಪ್ರಜಾತಂತ್ರದ ಘೋಷಣೆಗಳು ಮತ್ತೊಮ್ಮೆ ಹೆಗಲಿಗೆ ಹೆಗಲು ನೀಡಿ ಮುನ್ನಡೆಯುವ ಸೂಚನೆ ಪ್ರಭುತ್ವಕ್ಕೆ ದೊರೆತಿರಲೇಬೇಕು.

ಈ ಎಲ್ಲ ಜ್ವಲಂತ ಸಮಸ್ಯೆಗಳನ್ನು, ಜನಸಾಮಾನ್ಯರ ಹತಾಶೆ ಮತ್ತು ಆಕ್ರೋಶಗಳನ್ನು 1975ರ ಮಾದರಿಯಲ್ಲಿ ದಮನಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮೋದಿ ಸರ್ಕಾರ ಅರಿತಿತ್ತು. ಎನ್‍ಡಿಟಿವಿ ಪ್ರಕರಣ ಇದನ್ನು ಸ್ಪಷ್ಟವಾಗಿ ಸಾಬೀತುಪಡಿಸಿತ್ತು. ಆದರೆ ಜನಸಾಮಾನ್ಯರ ಒಡಲಿನಿಂದ ಹೊರಬರುತ್ತಿದ್ದ ಆಕ್ರೋಶದ ನುಡಿಗಳನ್ನು, ಕ್ರಾಂತಿಯ ಕಿಡಿಗಳನ್ನು ನಂದಿಸಲೂ ಆಗದೆ ದಮನಿಸಲೂ ಸಾಧ್ಯವಾಗದೆ ಗೊಂದಲದಲ್ಲಿ ಸಿಲುಕಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ಸಾರ್ವಜನಿಕ ಚರ್ಚೆಯ ದಿಕ್ಕು ತಪ್ಪಿಸಲು ತೋರಿದ ಮಾರ್ಗ ನೋಟು ಅಮಾನ್ಯೀಕರಣ !
ಈಗ ದೇಶಾದ್ಯಂತ ನಗದು ರಹಿತ ಆರ್ಥಿಕತೆಯ ಚರ್ಚೆ ನಡೆಯುತ್ತಿದೆ. ಜನಸಾಮಾನ್ಯರ, ಶೋಷಿತ ವರ್ಗಗಳ ಜ್ವಲಂತ ಸಮಸ್ಯೆಗಳು ನೆನೆಗುದಿಗೆ ಬಿದ್ದಿವೆ. ಇದು ಚರ್ಚೆಗೆ ಗ್ರಾಸವಾದರೆ ಸ್ವಾಗತ.

Leave a Reply

Your email address will not be published.