‘ಹಿಂದೂ ನಾವೆಲ್ಲ ಒಂದು’ : ಬಾಜಪದ ನಿಜಬಣ್ಣ!

-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

  ಕರ್ನಾಟಕದ ಬಾಜಪದ ನಾಯಕರುಗಳು ಇದ್ದಕ್ಕಿದ್ದಂತೆ ದಲಿತರ ಮನೆಗಳಲ್ಲಿ ಉಪಹಾರ ಸೇವಿಸುವ, ತನ್ಮೂಲಕ ಮಾಧ್ಯಮಗಳಲ್ಲಿ ಭರಪೂರ ಪ್ರಚಾರ ಪಡೆಯುವ ಹೊಸ ವರಸೆ ಶುರು ಹಚ್ಚಿಕೊಂಡಿದ್ದಾರೆ.ಇದರ ಜೊತೆಗೆ ರಾಜ್ಯದ ಕಾಂಗ್ರೇಸ್ ಸರಕಾರ ದಲಿತರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆಯೆಂಬ ಆರೋಪಗಳನ್ನೂ ಮಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾವು ಬಾಜಪಕ್ಕೆ ಹೀಗೆ ಇದ್ದಕ್ಕಿದ್ದಂತೆ ದಲಿತರಮೇಲೆ ಪ್ರೀತಿ ಉಕ್ಕಿಹರಿಯಲು ಕಾರಣವೇನು ಎನ್ನುವುದನ್ನು ವಿಶ್ಲೇಷಿಸಿನೋಡಬೇಕಾಗುತ್ತದೆ.ಆ ದಿಸೆಯಲ್ಲಿ ಇದೊಂದು ಪುಟ್ಟ ಟಿಪ್ಪಣಿ:

ಒಂದು ಕಡೆ ಇಡೀ ರಾಷ್ಟ್ರದಾದ್ಯಂತ ಕೋಮುವಾದಿ ರಾಜಕಾರಣ ತನ್ನ ಕಬಂದಬಾಹುಗಳನ್ನು ಪಸರಿಸುತ್ತಿದ್ದರೆ, ಇನ್ನೊಂದೆಡೆ ಜಾತಿರಾಜಕಾರಣ ತನ್ನ ಪರಾಕಾಷ್ಠೆ ತಲುಪುತ್ತಿದೆ.

‘ಹಿಂದೂ ನಾವೆಲ್ಲ ಒಂದು’ ಎಂಬ ಹಳೆಯ ಘೋಷಣೆಯಡಿಯಲ್ಲಿ ತನ್ನ ಮತಾಂಧ ರಾಜಕಾರಣವನ್ನು ದೇಶದಾದ್ಯಂತ ಹರಡುತ್ತಿರುವ ಬಾಜಪ ಕರ್ನಾಟಕದಲ್ಲಿ  ದಲಿತರನ್ನು ಓಲೈಸುವ ಮತ್ತು ಆ ಮೂಲಕ ಅಧಿಕಾರಕ್ಕೆ ಏರುವ ತಂತ್ರಗಾರಿಕೆಗೆ ಶರಣಾಗಿದೆ. ಇದುವರೆಗು ಲಿಂಗಾಯಿತ ಸಮುದಾಯ ತನ್ನ ಜೊತೆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಬಾಜಪ ಮತ್ತು ಆ ಸಮುದಾಯ ತನ್ನ ಬೆನ್ನಿಗಿದೆಯೆಂಬ ಆತವಿಶ್ವಾಸದಲ್ಲಿಯೇ ರಾಜಕಾರಣ ಮಾಡುತ್ತಿದ್ದ  ಮಾಜಿಮುಖ್ಯಮಂತ್ರಿಗಳಾದ  ಯಡಿಯೂರಪ್ಪನವರು ಇದೀಗ ದಲಿತ ಸಮುದಾಯದ ಬೆಂಬಲವಿರದೆ ತಾವಾಗಲಿ, ತಮ್ಮ ಪಕ್ಷವಾಗಲಿ ಗೆಲ್ಲುವುದು ಕಷ್ಟವೆಂಬ ತೀರ್ಮಾನಕ್ಕೆ ಬಂದಿದ್ದು, ಆ ಸಮುದಾಯವನ್ನು ಒಲಿಸಿಕೊಳ್ಳಲು ಕಸರತ್ತುಗಳನ್ನು ಮಾಡತೊಡಗಿದ್ದಾರೆ. ಇಂತಹ ಲೆಕ್ಕಾಚಾರದ ಹಿಂದಿರುವುದು ಬಾಜಪಕ್ಕೆ ದಲಿತರ ಮೇಲೆ ಇನ್ನಿರದ ಪ್ರೀತಿ ಹುಟ್ಟಿದೆ ಎಂದಾಗಲಿ ಅಥವಾ ದಲಿತರು ಸಹ  ಹಿಂದೂ ಸಮಾಜದ ಅವಿಬಾಜ್ಯ ಅಂಗವೆಂಬ ಅರಿವು ಉಂಟಾಗಿದೆ ಎಂದಾಗಲಿ ಅಲ್ಲ. ಬದಲಿಗೆ ಬಾಜಪದ ಈ ತಂತ್ರಗಾರಿಕೆಯ ಹಿಂದಿರುವುದು ಅಪ್ಪಟ ಜಾತಿರಾಜಕಾರಣ ಮತ್ತು ಅದು ತರಬಹುದಾದ ಮತಗಳ ಲೆಕ್ಕಾಚಾರವಷ್ಟೆ! ಈ ಲೆಕ್ಕಾಚಾರಗಳ ಹಿಂದಿರುವ ನೈಜಕಾರಣಗಳನ್ನೊಮ್ಮೆ ನೋಡೋಣ:

ಕೆಲ ತಿಂಗಳುಗಳ ಹಿಂದೆ ಸೋರಿಕೆಯಾಗಿದೆ ಎನ್ನಲಾದ ಜಾತಿಗಣತಿಯ ಅಂಕಿಅಂಶಗಳು ಬಾಜಪದ ನಿದ್ರೆಯನ್ನಂತು ಕೆಡಿಸಿವೆ. ಆ ಅಂಕಿಅಂಶಗಳಲ್ಲಿ ಎಷ್ಟು ನಿಜವೊ ಎಷ್ಟು ಸುಳ್ಳೊ ಯಾರಿಗು ಗೊತ್ತಿಲ್ಲ. ಆದರೂ ಸದ್ಯದ ಮಟ್ಟಿಗೆ ಬಾಜಪ ಆ ಅಂಕಿಅಂಶಗಳನ್ನು ನಂಬಿದಂತೆ ಕಾಣುತ್ತಿದೆ. ಹಾಗೆ ಸೋರಿಕೆಯಾಗಿದೆ ಎನ್ನಲಾದ ಮಾಹಿತಿಯ ಪ್ರಕಾರ ವರ್ತಮಾನದಲ್ಲಿ ಯಾವ್ಯಾವ ಜಾತಿಗಳು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾವೆಂಬ  ಅಂಕಿಅಂಶಗಳನ್ನು ನೋಡಿ ಇಡೀರಾಜ್ಯ ಬೆಚ್ಚಿ ಬಿದ್ದಿತ್ತು. ಯಾಕೆಂದರೆ ಇದುವರೆಗೂ ನಾವು ನಂಬಿಕೊಂಡ ಹಾಗೆ ಈ ಅಂಕಿಅಂಶಗಳು ಇರಲಿಲ್ಲ.  ರಾಜ್ಯದಲ್ಲಿ ಲಿಂಗಾಯಿತರು ಮತ್ತು ಒಕ್ಕಲಿಗರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆಂದು ನಾವು ನಂಬಿಕೊಂಡಿದ್ದು ಮಿಥ್ಯೆ ಎಂಬುದನ್ನು ಇದು ತೋರಿಸಿಕೊಟ್ಟಿತು.

ಆ ಸೋರಿಕೆಯಾದ ಮಾಹಿತಿಯ ಪ್ರಕಾರ ಈಗ ರಾಜ್ಯದಲ್ಲಿ ಪರಿಶಿಷ್ಟಜಾತಿ-ವರ್ಗದವರು 1.8ಕೋಟಿ, ಮುಸ್ಲಿಮರು 70ಲಕ್ಷ, ಲಿಂಗಾಯಿತರು 65ಲಕ್ಷ, ಒಕ್ಕಲಿಗರು60ಲಕ್ಷ,ಕುರುಬರು45ಲಕ್ಷ,ಬ್ರಾಹ್ಮಣರು14ಲಕ್ಷ,ಕ್ರಿಶ್ಚಿಯನ್ನರು10ಲಕ್ಷ,ವಿಶ್ವಕರ್ಮರು15 ಲಕ್ಷ, ಈಡಿಗರು15ಲಕ್ಷ, ಯಾದವರು10ಲಕ್ಷ, ಉಪ್ಪಾರರು10ಲಕ್ಷ  ಇದ್ದಾರೆಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿತು. ತಕ್ಷಣ ಈ ಸೋರಿಕೆಯ ಮಾಹಿತಿಗೆ ಪ್ರತಿಕ್ರಿಯಿಸಿದ ಲಿಂಗಾಯಿತ ಮತ್ತು ಒಕ್ಕಲಿಗ ನಾಯಕರುಗಳು ಹಾಗು ಕೆಲರಾಜಕೀಯ ನಾಯಕರುಗಳು ಈ ಅಂಕಿಅಂಶಗಳು ಸುಳ್ಳು ಎಂದು ಪ್ರತಿಕ್ರಿಯಿಸಿದರು. ಹೀಗೆ ಪ್ರತಿಕ್ರಿಯಿಸಿದವರಿಗೂ ಅಂತರಂಗದಲ್ಲಿ ಒಂದು ಆತಂಕವಂತು ಇತ್ತು. ಅಕಸ್ಮಾತ್ ಈ ಸಂಖ್ಯೆಗಳೇ ನಿಜವಾಗಿ ಬಿಟ್ಟರೆ ಇದುವರೆಗೂ ತಮ್ಮ ಜಾತಿಯ  ಉತ್ಪ್ರೇಕ್ಷಿತ ಸಂಖ್ಯೆಯ ಆಧಾರದ ಮೇಲೆ ತಾವು ಪಡೆಯುತ್ತಿದ್ದ  ಗಣನೀಯ ಪ್ರಮಾಣದ  ಪ್ರಾತಿನಿದ್ಯಕ್ಕೆಲ್ಲಿ ಧಕ್ಕೆ ಬರುತ್ತದೆಯೊ ಎನ್ನುವುದೇ ಆ ಆತಂಕದ ಮೂಲವಾಗಿತ್ತು.

ಆದರೆ  ಈ ವಿಷಯದಲ್ಲಿ ಬಾಜಪದ ಲೆಕ್ಕಾಚಾರವೇ ಬೇರೆಯಾಗಿತ್ತು. ಯಾಕೆಂದರೆ ತಾನೇನೇ ಲಿಂಗಾಯಿತ ಸಮುದಾಯದ ಒಟ್ಟು ಮತಗಳಲ್ಲಿ ಶೇಕಡಾ ಎಪ್ಪತ್ತರಷ್ಟನ್ನು ಪಡೆದರೂ ನಿರೀಕ್ಷಿತ ಸ್ಥಾನಗಳನ್ನು ಪಡೆಯುವುದು ಕಷ್ಟ. ಇನ್ನು ಒಕ್ಕಲಿಗ ಮತಬ್ಯಾಂಕು ಈಗಾಗಲೇ ಜನತಾದಳದ ಜೊತೆಯಲ್ಲಿ ಇರುವುದರಿಂದ, ಕಾಂಗ್ರೇಸ್ ಜೊತೆಗಿದೆ ಎಂದು ಬಾವಿಸಲಾಗಿರುವ 1.08ಕೋಟಿ ಜನಸಂಖ್ಯೆಯ ದಲಿತರ ಒಟ್ಟು ಮತಗಳಲ್ಲಿ ಶೇಕಡಾ ಅರವತ್ತರಷ್ಟನ್ನಾದರೂ ತಾನು ಪಡೆಯಲು ಸಾದ್ಯವಾಗುವುದಾದರೆ ಮುಂದಿನ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಸುಲಭವಾಗುತ್ತದೆ ಎನ್ನುವ ಲೆಕ್ಕಾಚಾರವನ್ನು ಹಾಕಿದ ಬಾಜಪ ಈಗ ಆ ಸಮುದಾಯದ ಓಲೈಕೆಗೆ ಮುಂದಾಗಿದೆ. ಅಲ್ಲಿಗೆ ಜಾತಿಗಣತಿಯ ಸೋರಿಕೆಯಾದ ಮಾಹಿತಿಯ ಆಧಾರದ ಮೇಲೆ ಬಾಜಪ ತನ್ನ ರಾಜಕೀಯ ನಡೆಯನ್ನು  ಬದಲಾಯಿಸಿಕೊಂಡಿದೆ ಎಂದಾಯಿತು. ಅಂದರೆ ಸಾರ್ವಜನಿಕವಾಗಿ ಈ ಅಂಕಿಅಂಶಗಳನ್ನು ನಿರಾಕರಿಸುವ ಬಾಜಪ ಆಳದಲ್ಲಿ ಈ ಅಂಕಿಅಂಶಗಳ ಬಗೆಗೆ  ಒಂದು ಕಣ್ಣಿಟ್ಟುಕೊಂಡೇ ತನ್ನ  ಕಾಯಿಗಳನ್ನು ನಡೆಸುತ್ತಿದೆ ಎಂದಾಯಿತು.

ಎರಡನೆಯದಾಗಿ ಕೆಲತಿಂಗಳ ಹಿಂದೆ ನಡೆದ ನಂಜನಗೂಡು ಮತ್ತು  ಗುಂಡ್ಲುಪೇಟೆಗಳ ಉಪಚುನಾವಣೆಗಳಲ್ಲಿ  ಲಿಂಗಾಯಿತ ಸಮುದಾಯದ ಪ್ರಾಬಲ್ಯವಿದ್ದರೂ ಬಾಜಪ ಸೋತಿದ್ದಕ್ಕೆ ಮುಖ್ಯ ಕಾರಣ,  ಅಲ್ಲಿನ ಅಹಿಂದ ವರ್ಗ ಸಂಪೂರ್ಣವಾಗಿ ಕಾಂಗ್ರೇಸ್ಸಿನ ಪರವಾಗಿ ನಿಂತಿದ್ದು ಎಂಬುದನ್ನು ಸಹ ಬಾಜಪ ಅರ್ಥಮಾಡಿಕೊಂಡಿದೆ. ಕಾಂಗ್ರೇಸ್ಸಿನ ಬೆನ್ನಹಿಂದೆ ನಿಂತಿರುವ ಅಹಿಂದ ಸಮುದಾಯದ ಮತಬ್ಯಾಂಕನ್ನು ಛಿದ್ರಗೊಳಿಸಿದರೆ ಮಾತ್ರ ತಾನು ಗೆಲ್ಲಲು ಸಾದ್ಯವೆಂಬ ಸತ್ಯವನ್ನು ಬಾಜಪ ಅರಿತುಕೊಂಡಿದೆ. ಹೀಗಾಗಿಯೇ  ಬಾಜಪ ಇದೀಗ ಅಹಿಂದದ ಭಾಗವಾಗಿರುವ ದಲಿತ ಸಮುದಾಯವನ್ನು ತನ್ನತ್ತ ಸೆಳೆಯಲು  ಪ್ರಯತ್ನ ಪಡುತ್ತಿದೆ. ಇದರ ಪ್ರಕಾರವೇ ಬಾಜಪದ ನಾಯಕರುಗಳು ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ನಾಟಕವಾಡುತ್ತಿದ್ದಾರೆ.

ಇನ್ನು ಇತ್ತೀಚೆಗೆ ನಡೆದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳಲ್ಲಿಯೂ ಬಾಜಪದ ರಾಷ್ಟ್ರಾದ್ಯಕ್ಷರಾದ  ಅಮಿತ್ ಷಾರವರು ಇಂತಹುದೇ ಗಿಮಿಕ್ಕುಗಳನ್ನು ಮಾಡಿ ಯಶಸ್ವಿಯಾಗಿದ್ದರೆಂಬುದು  ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.. ದಲಿತರ ಜೊತೆ ಊಟಉಪಹಾರ ಮಾಡಿ ಬೆರೆಯುತ್ತ ಅವರನ್ನು ಹಿಂದೂ ಮತಾಂಧತೆಯ ಭಾಗವಾಗಿಸುವ ಬಾಜಪದ ಹುನ್ನಾರಕ್ಕೆ ಬಲಿಯಾದ ಉತ್ತರಪ್ರದೇಶದ ದಲಿತರು ಬಹುಜನ ಪಕ್ಷವನ್ನು ಕೈಬಿಟ್ಟು ಬಾಜಪಕ್ಕೆ ಮತಚಲಾಯಿಸಲು ಮುಂದಾಗಿದ್ದು ಸಹ ಈ ತಂತ್ರಗಾರಿಕೆಯ ಫಲವಾಗಿಯೇ. ದಲಿತರಲ್ಲಿ ಬೇರು ಬಿಟ್ಟಿರುವ ಅಸ್ಪೃಶ್ಯತೆಯ ಅವಮಾನದ ನೋವನ್ನು ತಾತ್ಕಾಲಿಕವಾಗಿ ಮರೆಸಿ ಅವರನ್ನು ಹಿಂದೂ ಕೋಮುವಾದದ ಬಲಿಪಶುಗಳನ್ನಾಗಿ ಮಾಡುವ ಬಾಜಪದ ರಾಜಕೀಯ ನಡೆ ಉತ್ರಪ್ರದೇಶದಲ್ಲಿ ಯಶಸ್ವಿಯಾಗಿದ್ದನ್ನು ಕಂಡ ರಾಜ್ಯದ ಬಾಜಪದ ನಾಯಕರುಗಳು ಇಲ್ಲಿಯೂ ಅದೇ ತಂತ್ರವನ್ನು ಪ್ರಾರಂಬಿಸಿದ್ದಾರೆ.

ಇಂತಹ ತಂತ್ರಗಾರಿಕೆಯ ಮುಂದುವರೆದ ಭಾಗವಾಗಿಯೇ ಬಾಜಪದ ನಾಯಕರುಗಳು ಆಗಿದ್ದಾಗ್ಗೆ ದಲಿತ ಮುಖ್ಯಮಂತ್ರಿಯ ಕೂಗನ್ನು ಏಳಿಸುತ್ತ ಕಾಂಗ್ರೇಸ್ಸಿನ ಬಗ್ಗೆ ದಲಿತರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ. ಕಾಂಗ್ರೇಸ್ಸಿನ ಕೆಲವು ಭಿನ್ನಮತೀಯ ನಾಯಕರುಗಳಿಂದ ಮತ್ತು ದಲಿತ ಸಂಘಟನೆಗಳ ಕೆಲವು ನಾಯಕರುಗಳಿಂದ ದಲಿತ ಮುಖ್ಯಮಂತ್ರಿಯ ಬೇಡಿಕೆಯನ್ನು ಮಂಡಿಸುತ್ತ  ದಲಿತ ಸಮುದಾಯದಲ್ಲಿ  ಒಡಕನ್ನುಂಟುಮಾಡಲು ಬಾಜಪ  ದಲಿತರ ಮನೆಯಲ್ಲಿ ಉಪಹಾರ ಎಂಬ ಹೊಸ ಯೋಜನೆಯೊಂದನ್ನು ತಯಾರಿಸಿ   ಅದರಂತೆ ದಲಿತರ ಮನೆಗಳಿಗೆ ಬೇಟಿನೀಡಿ ಉಪಹಾರ ಮಾಡುವ  ಕರುಣಾಜನಕ  ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುತ್ತಿದೆ. ತಮಾಷೆಯೆಂದರೆ ಈ ನಾಟಕ ರಾಜ್ಯನಾಯಕರುಗಳಿಗೆ ಮಾತ್ರ ಸೀಮಿತವಾಗುಳಿದಿಲ್ಲ. ಮೊನ್ನೆ ಬೆಂಗಳೂರಿಗೆ ಬಂದಿದ್ದ ಕೇಂದ್ರಸಚಿವರಾದ  ಪಿಯೂಷ್ ಗೋಯೆಲ್ ಸಹ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಕೇಂದ್ರದ ನಾಯಕರೂ ಈ  ಪ್ರಹಸನದ ಪಾಲುದಾರರೆಂದು ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ನನಗನ್ನಿಸುವಂತೆ ಅಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ ಬೇಟಿ ನೀಡಲಿರುವ ಅಮಿತ್ ಷಾರವರು ಸಹ ದಲಿತರೊಬ್ಬರ ಮನೆಯಲ್ಲಿ ಊಟ-ಉಪಹಾರ ಮಾಡಿ, ಇಲ್ಲಿಯೂ ತಮ್ಮ ರಾಜಕೀಯ ಗಿಮಿಕ್ ಮಾಡಿದರೆ ಅದರಲ್ಲಿ ಅಚ್ಚರಿಯೇನು ಇಲ್ಲ.

ಇವತ್ತು ಬಾಜಪ ದಲಿತರ ಮನೆಯಲ್ಲಿ ಉಪಹಾರ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು ತನ್ಮೂಲಕ  ದಲಿತ ಸಮುದಾಯವನ್ನು ತನ್ನತ್ತ ಸೆಳೆಯಲು  ಹರಸಾಹಸ ಮಾಡುತ್ತಿದ್ದರೆ, ಅದರ ಪರವಾಗಿರುವ ಕೆಲಮಾಧ್ಯಮಗಳು  ಈ ನಡೆಯನ್ನು ಭಾರತೀಯ ಸಮಾಜದಲ್ಲಿನ ದೊಡ್ಡ ಕ್ರಾಂತಿಯೆಂಬಂತೆ  ಬಿಂಬಿಸಲು ಪ್ರಯತ್ನಿಸುತ್ತಿವೆ.

ತೊಂಭತ್ತರ ದಶಕದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ಮುಂಚೂಣಿಯಲ್ಲಿದ್ದಂತಹ ಬಲಪಂಥೀಯ ಪಕ್ಷವೊಂದು ಇವತ್ತು ತನ್ನನ್ನು ತಾನು ದಲಿತರ ಉದ್ದಾರಕನಂತೆ   ಬಿಂಬಿಸಿಕೊಳ್ಳಲು ಹೊರಟಿರುವುದರ ಹಿಂದಿರುವ ಬಾಜಪದ ನಿಜಬಣ್ಣವನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕಿದೆ. ಅದರಲ್ಲೂ ತೊಂಭತ್ತರ ನಂತರ ಜನಿಸಿದ ದಲಿತ ಯುವಜನತೆ ಇಂತಹ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿರುವುದು ಆ ಸಮುದಾಯದ ಪ್ರಗತಿಯ ದೃಷ್ಠಿಯಿಂದ ಅಗತ್ಯವಾಗಿದೆ.

Leave a Reply

Your email address will not be published.