ಹರ್ಯಾಣದ ಹುಡುಗಿಯರು ಓದು ಮುಂದುವರೆಸಲು ಬಯಸುತ್ತಾರೆ

      ಅನು: ಶಿವಸುಂದರ್ 

ಶಿಕ್ಷಣವು ಮೂಲಭೂತ ಸೌಕರ್ಯಗಳಿಗಿಂತ ಪ್ರಮುಖವಾದದ್ದೆಂಬುದನ್ನು ಹರ್ಯಾಣದ ಶಾಲಾ ಬಾಲಕಿಯರು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಹರ್ಯಾಣದ ರೆವಾರಿ ಜಿಲ್ಲೆಯ ಗೋತ್ರತಪ್ಪ ದಹೀನಾ ಗ್ರಾಮದ ಸ್ವಾಭಿಮಾನಿ ಶಾಲಾ ಬಾಲಕಿಯರು ಪ್ರಾಂಭಿಸಿದ ಹೋರಾಟ ಇಂದು ಒಂದು ಸಾಂಕ್ರಾಮಿಕದಂತೆ ಇಡೀ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಕಳೆದ ಮೇ ೧೦ರಂದು ಆ ಗ್ರಾಮದ ಸರ್ಕಾರಿ ಶಾಲೆಯ ೮೦ ಹುಡುಗಿಯರು ಅನಿರ್ದಿಷ್ಟ ಮುಷ್ಕರವನ್ನು ಪ್ರಾರಂಭಿಸಿದರು. ತಮ್ಮ ಶಾಲೆಯನ್ನು ಉನ್ನತ ಪ್ರೌಢಶಾಲೆಯನ್ನಾಗಿಸಬೇಕೆಂಬುದೇ ಅವರ ಏಕಮಾತ್ರ ಬೇಡಿಕೆಯಾಗಿತ್ತು. ಏಕೆಂದರೆ ಆ ಗ್ರಾಮದಿಂದ ಮೂರು ಕಿಲೋಮೀಟರ್‌ಗಿಂತ ಹತ್ತಿರದಲ್ಲಿ ಯಾವ್ ಪ್ರೌಢಶಾಲೆಯೂ ಇರಲಿಲ್ಲ. ಈ ಗ್ರಾಮದ ಹೆಣ್ಣುಮಕ್ಕಳು ಅಷ್ಟು ದೂರದ ಪ್ರೌಢಶಾಲೆಗೆ ಹೋಗಲು ಸಾರಿಗೆ ಸೌಕರ್ಯವೂ ಇರಲಿಲ್ಲ. ಜೊತೆಗೆ ದಾರಿಗುಂಟಾ ಬೀದಿ ಕಾಮಣ್ಣರ ಕಿರುಕುಳ.

ಸಣ್ಣದಾಗಿ ಶುರುವಾದ ಈ ಹೋರಾಟ ತನ್ನಂತೆ ತಾನೇ ತಣ್ಣಗಾಗುತ್ತದೆ ಎಂದು ಸರ್ಕಾರವು ಭಾವಿಸಿತ್ತು. ಆದರೆ ಈ ಶಾಲಾ ಬಾಲಕಿಯರು ಯಾವ ಕಾರಣಕ್ಕೂ ಮುಷ್ಕರ ಕೈಬಿಡಲು ಒಪ್ಪದಿದ್ದರಿಂದ ಇದೊಂದು ಚಳವಳಿಯಾಗಿ ಬೆಳೆದು ಸರ್ಕಾರಕ್ಕೆ ದೊಡ್ಡ ಬಿಕ್ಕಟ್ಟನ್ನೇ ತಂದಿಟ್ಟಿದೆ. ಚಳವಳಿ ಪ್ರಾರಂಭವಾದ ಹತ್ತು ದಿನಗಳಲ್ಲಿ ಸರ್ಕಾರ ಅವರ ಬೇಡಿಕೆಯನ್ನು ಈಡೆರಿಸಿತು. ಇದೀಗ ಆ ಹಳ್ಳಿಯ ಶಾಲೆಯಲ್ಲಿ ೧೧ನೇ ಮತ್ತು ೧೨ನೇ ತರಗತಿಗಳು ಪ್ರಾರಂಭಗೊಂಡಿವೆ.

ಈ ಬಾಲಕಿಯರ ಹೋರಾಟವು ಹಲವು ರೀತಿಗಳಲ್ಲಿ ವಿಶೇಷವಾಗಿವೆ. ಹರ್ಯಾಣ ತನ್ನ ಹೆಣ್ಣುಮಕ್ಕಳನ್ನು ಪ್ರೀತಿಸದ-ಗೌರವಿಸದ ರಾಜ್ಯ. ಗಂಡು-ಹೆಣ್ಣಿನ ಅನುಪಾತ ದೇಶದಲ್ಲಿ ೯೪೦ ಇದ್ದರೆ ಹರ್ಯಾಣದಲ್ಲಿ ಪ್ರತಿ ಸಾವಿರ ಗಂಡಸರಿಗೆ ಕೇವಲ ೮೭೭ ಹೆಂಗಸರಿದ್ದಾರೆ. ಇದು ದೇಶದಲ್ಲೇ ಅತ್ಯಂತ ಕನಿಷ್ಟತಮವಾದ ಪ್ರಮಾಣವಾಗಿದೆ. ಇನ್ನು ೦-೬ ರ ವಯೋಮಾನದ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತವನ್ನು ನೋಡಿದರೆ ಹರ್ಯಾಣದಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ ಕೇವಲ ೮೩೦ ಹೆಣ್ಣು ಮಕ್ಕಳಿದ್ದಾರೆ. ಹುಟ್ಟುವ ಮುನ್ನ ಅಥವಾ ನಂತರದಲ್ಲಿ ಈ ಹೆಣ್ಣು ಮಕ್ಕಳು ಅಕಸ್ಮಾತ್ ಬದುಕುಳಿದರೂ ಪ್ರತಿ ಹೆಜ್ಜೆಯಲ್ಲೂ ಹೆಂಗಸರ ಬದುಕನ್ನು ನಿರ್ಬಂಧಿಸುವ ಮತ್ತು ನಿಯಂತ್ರಿಸುವ ಅತ್ಯಂತ ಸಾಂಪ್ರದಾಯಿಕ ಸಮಾಜದಲ್ಲಿ ಅವರು ಬಾಳ್ವೆ ನಡೆಸಬೇಕಿರುತ್ತದೆ. ಇವೆಲ್ಲದರ ನಡುವೆಯೂ ಗೀತಾ ಪೋಗಾಟ್ ನಂಥ ಕುಸ್ತಿಪಟು ಹಾಗೂ ಇನ್ನಿತರ ಮಹಿಳೆಯರು ಎಂಥಾ ಪ್ರತಿಕೂಲ ವಾತಾವರಣದಲ್ಲೂ ಹೆಣ್ಣು ಮಕ್ಕಳು ಏನೆಲ್ಲಾ ಸಾಧಿಸಬಹುದೆನ್ನುವುದಕ್ಕೆ ಉದಾಹರಣೆಗಳಾಗಿ ನಿಂತಿದ್ದಾರೆ. ಆದರೆ ಹರ್ಯಾಣದ ಸಮಾಜ ವ್ಯವಸ್ಥೆಯಲ್ಲಿ ಇಂಥಾ ಮಹಿಳೆಯರು ಅಪರೂಪದ ಅಪವಾದಗಳಷ್ಟೆ. ಅಲ್ಲಿನ ನೈಜ ವಾಸ್ತವ ಆ ರೆವಾರಿ ಜಿಲ್ಲೆಯ ಹಣ್ಣೆಮಕ್ಕಳದ್ದು. ಲೈಂಗಿಕ ಕಿರುಕುಳಕ್ಕೆ ಒಳಗಾಗದೆ ಮೂರು ಕಿಲೋಮೀಟರ್ ದೂರವಿರುವ ಶಾಲೆಗೆ ಹೋಗಲಾಗದ ದಾರುಣ ಅಸಹಾಯಕತೆಯದ್ದು. ೧೯೭೧-೨೦೧೧ರ ನಡುವೆ ಹರ್ಯಾಣದಲ್ಲಿ ಹೆಂಗಸರ ಮೇಲಿನ ಅತ್ಯಾಚಾರ ಪ್ರಕರಣಗಳ ಪ್ರಮಾಣ ಶೇ.೮೭೩ರಷ್ಟು ಹೆಚ್ಚಿದೆಯೆಂಬ ಕಟು ವಾಸ್ತವವೇ ಈ ಬಾಲಕಿಯರು ಉತ್ಪ್ರೇಕ್ಷೆ ಮಾಡುತ್ತಿಲ್ಲವೆಂಬುದನ್ನು ಸಾರಿ ಹೇಳುತ್ತದೆ.

ರೇವಾರಿ ಜಿಲ್ಲೆಯ ಆ ಶಾಲಾ ಬಾಲಕಿಯರ ಹೋರಾಟ ಹರ್ಯಾಣದ ಆಚೆಗೂ ಮಹತ್ವವನ್ನು ಪಡೆದಿದೆ. ಸರ್ಕಾರವು ಭೇಟಿ ಬಚಾವೋ, ಭೇಟಿ ಪಡಾವೋ (ಹೆಣ್ಣು ಮಗಳನ್ನು ರಕ್ಷಿಸಿ, ಹಣ್ಣು ಮಗಳನ್ನು ಓದಿಸಿ)ಎಂದು ಅಬ್ಬರದ ಘೊಷಣೆಗಳನ್ನು ಹಾಕುತ್ತಿದ್ದರೂ ಅದು ಈ ದೇಶದ ಶಾಲಾ ವ್ಯವಸ್ಥೆಗೆ ಸಂಬಂಧಪಟ್ಟಂಥ ಹಲವು ಪ್ರಮುಖ ಮತ್ತು ಮೂಲಭೂತ ವಿಷಯಗಳನ್ನು ಪರಿಗಣಿಸುತ್ತಿಲ್ಲವೆಂಬುದನ್ನೂ ಈ ಹೋರಾಟ ನಮಗೆ ಮನವರಿಕೆ ಮಾಡಿಕೊಡುತ್ತಿದೆ. ಸರ್ಕಾರದ ಘೋಷಣೆಗಳಿಗೂ ಹಳ್ಳಿಗಳ ವಾಸ್ತವ ಪರಿಸ್ಥಿತಿಗೂ ಮಧ್ಯೆ ಸಾಕಷ್ಟು ಅಂತರವಿದೆ. ರೆವಾರಿಯ ಶಾಲಾ ಬಾಲಕಿಯರು ಎತ್ತಿ ತೋರಿಸುತ್ತಿರುವ ಅಂಥಾ ಒಂದು ಕಟು ವಾಸ್ತವವೆಂದರೆ ಮಕ್ಕಳ ಸುರಕ್ಷತೆಯದ್ದು. ಹೆಣ್ಣು ಮಕ್ಕಳು ಹೆಚ್ಚಿನ ಓದನ್ನು ಓದಬೇಕೆಂದು ಬಯಸುತ್ತಾರೆ. ಆದರೆ ಯಾವುದೇ ಹಿಂಸೆ ಅಥವಾ ದಾಳಿಗಳಿಗೆ ತುತ್ತಾಗದೆ ಹತ್ತಿರದ ಪ್ರೌಢಶಾಲೆಯಲ್ಲಿ ಓದು ಮುಂದುವರೆಸಬಹುದೆಂಬ ವಿಶ್ವಾಸ ಆ ಬಾಲಕಿಯರಿಗಾಗಲಿ ಅಥವಾ ಅವರ ಪೋಷಕರಿಗಾಗಲೀ ಇಲ್ಲ.

ಪ್ರೌಢ ಶಿಕ್ಷಣದ ಮಟ್ಟದಲ್ಲಿ ಬಾಲಕಿಯರ ಪಾಲು ಹೆಚ್ಚಾಗಬೇಕೆಂದರೆ ಈ ಸುರಕ್ಷತೆಯ ಅಂಶದ ಬಗ್ಗೆ ನಾವು ಗಮನಹರಿಸಲೇ ಬೇಕೆಂಬುದು ಸ್ಪಷ್ಟ. ಈ ಅಂಶವನ್ನು ಗಮನಿಸಿ ಪರಿಣಾಮಕಾರಿಯಾಗಿ ಮಧ್ಯಪ್ರವೇಶ ಮಾಡಿದ ಸರ್ಕಾರವೆಂದರೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ. ೨೦೦೬ರಲ್ಲಿ ಅವರು ಈ ವಿಷಯದಲ್ಲಿ ಒಂದು ಸಣ್ಣ ಮಟ್ಟದ ಕ್ರಾಂತಿಯನ್ನೇ ಮಾಡಿದರು. ಮುಖ್ಯಮಂತ್ರಿ ಬಾಲಿಕಾ ಸೈಕಲ್ ಯೋಜನಾ ಎಂಬ ಯೋಜನೆಯಡಿಯಲ್ಲಿ ೯ ನೇ ತರಗತಿಯನ್ನು ಮುಗಿಸಿದ ಪ್ರತಿ ಬಾಲಕಿಗೂ ಒಂದು ಸೈಕಲ್ ಅನ್ನು ನಿಡಲಾಯಿತು. ಆ ಮೂಲಕ ಅವರು ಹತ್ತಿರದ ಉನ್ನತ ಪ್ರೌಢ ಶಾಲೆಗೆ ಪ್ರತಿದಿನ ಸೈಕಲ್ ಮೂಲಕ ಪ್ರಯಾಣ ಮಾಡಿ ೧೨ನೇ ತರಗತಿಯನ್ನು ಮುಗಿಸುವಂತಾಯಿತು. ಈ ಯೋಜನೆಯಿಂದ ಸಾವಿರಾರು ಬಾಲಕಿಯರಿಗೆ ಅನುಕೂಲವಾಯಿತು. ನ್ಯಾಷನಲ್ ಬ್ಯೂರೋ ಆಫ್ ಎಕಾನಾಮಿಕ್ ರಿಸರ್ಚ್ (ರಾಷ್ಟ್ರೀಯ ಆರ್ಥಿಕ ಸಂಶೋಧನಾ ಮಂಡಳಿ) ಯು ಗುರುತಿಸಿದಂತೆ ಈ ಯೋಜನೆಯಿಂದಾಗಿ ೯ ನೇ ತರಗತಿಯ ನಂತರದಲ್ಲಿ ಶೇ.೩೦ರಷ್ಟು ಹೆಚ್ಚು ಹಣ್ಣುಮಕ್ಕಳು ಓದನ್ನು ಮುಂದುವರೆಸಿದರು. ಹಾಗೂ ಉನ್ನತ ಪ್ರೌಢ ಶಿಕ್ಷಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನೇಮಕಾತಿಯಲ್ಲಿನ ಅಂತರ ಶೇ.೪೦ರಷ್ಟು ಕಡಿಮೆಯಾಯಿತು. ಆ ನಂತರದಲ್ಲಿ ಬಹಳಷ್ಟು ರಾಜ್ಯಗಳು ಬಿಹಾರದ ಉದಾಹರಣೆಯನ್ನು ಅನುಸರಿಸಿದವು.

ಈ ಬಗೆಯ ಮಧ್ಯಪ್ರವೆಶದಿಂದ ಸುರಕ್ಷತೆ, ಹೆಚ್ಚಿನ ಓದಿನ ಲಭ್ಯತೆ ಮತ್ತು ಹೆಚ್ಚೆಚ್ಚು ಹೆಣ್ಣುಮಕ್ಕಳ ಓದಿನ ಮುಂದುವರೆಕೆಗಳು ಸಾಧ್ಯವಾಗಿದ್ದರೂ ಇನ್ನೂ ಹೆಚ್ಚಿನ ಸುಧಾರಣೆಗಳ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸುವುದು ಅತ್ಯಂತ ದೊಡ್ಡ ಸವಾಲಾಗಿದೆ. ಉದಾಹರಣೆಗೆ, ಬಿಹಾರದ ಉನ್ನತ ಪ್ರೌಢ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಮಂಡಳಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಕಡಿಮೆಯೇ ಇದೆ. ಸಮಸ್ಯೆ ಇರುವುದು ಪ್ರೌಢ ಪೂರ್ವ ಶಿಕ್ಷಣದ ಗುಣಮಟ್ಟದಲ್ಲ್ಲಿ. ೨೦೧೬ರಲಿ ನಡೆದ ಬಿಹಾರದ ಶಾಲಾ ಮಕ್ಕಳ ಗುಣಮಟ್ಟದ ಪರಿಶೀಲನೆಯು ತಿಳಿಸುವಂತೆ  ಬಿಹಾರದಲ್ಲಿ ೬ ನೇ ತರಗತಿಯಲ್ಲಿ ಓದುವ ಶೇ.೭೪ ರಷ್ಟು ಮಕ್ಕಳು ತಮ್ಮ ಪಠ್ಯ ಪುಸ್ತಕವನ್ನು ಓದಲಾರರು. ಶಿಕ್ಷಣದ ಗುಣಮಟ್ಟದ ಬಗ್ಗೆ ವಾರ್ಷಿಕ ವರದಿಗಳನ್ನು ನೀಡುವ ಸರ್ಕಾರೇತರ ಸಂಸ್ಥೆಯಾದ ಪ್ರಥಮ್ ನಂಥ  ಸಂಸ್ಥೆಗಳು ಸಹ  ಕಲಿಕೆಯಲ್ಲಿರುವ ಈ ಕೊರತೆಗಳನ್ನು ಈಗಾಗಲೇ ಸಾಬೀತುಪಡಿಸಿವೆ. ೨೦೦೯ರ ಶಿಕ್ಷಣದ ಹಕ್ಕಿನ ಕಾಯಿದೆಯ ಪ್ರಕಾರ ೮ನೇ ತರಗತಿಯಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವಂತಿಲ್ಲ. ಹೀಗಾಗಿ ಕಲಿಕಾ ಕೊರತೆಯಿರುವ ಮಕ್ಕಳು ೯ನೇ ತರಗತಿಗೆ ತೇರ್ಗಡೆ ಹೊಂದುತ್ತಾರೆ. ಅದಾದ ಎರಡು ವರ್ಷಗಳಲ್ಲೇ ಅವರು ಮಂಡಳಿಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅವರು ಅದಕ್ಕೆ ತಯಾರಾಗಿರುವುದಿಲ್ಲವೆಂಬುದು ಸುಸ್ಪಷ್ಟ.

ಇವೆಲ್ಲಾ ನ್ಯೂನತೆಗಳಿದ್ದರೂ ಸಹ ಬಾಲಕಿಯರನ್ನು ಒಳಗೊಂಡಂತೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಮೆಟ್ರಿಕ್ಯುಲೇಷನ್ ನಂತರವೂ ಹೆಚ್ಚಿನ ಓದಿಗಾಗಿ ಮುಂಬರುತ್ತಿರುವುದು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದೆ. ಮಹಿಳೆಯರ ಸ್ಥಾನಮಾನವನ್ನು ಉತ್ತಮಗೊಳಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ ಎಂಬುದು ಈಗಾಗಲೇ ಸ್ಪಷ್ತವಾಗಿ ರುಜುವಾತಾಗಿದೆ.

ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ದೆಹಲಿ ರಾಜ್ಯವು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸುತ್ತಿರುವ  ರಾಜ್ಯವಾಗಿದೆ. ತಾನು ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಅದು ಪ್ರತಿ ಬಜೆಟ್ಟಿನಲ್ಲೂ ಶಿಕ್ಷಣಕ್ಕೆ ನೀಡುತ್ತಿದ್ದ ಮೊತ್ತವನ್ನು ಹೆಚ್ಚಿಸುತ್ತಲೇ ಬಂದಿದೆ. ಅದು ಅಸ್ಥಿತ್ವದಲ್ಲಿರುವ ಸರ್ಕಾರಿ ಶಾಲೆಗಳ ಶಾಲಾ ಕೊಠಡಿಗಳನ್ನು ಮತ್ತಿತರ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದೆ. ಪೋಷಕರನ್ನು ಶಿಕ್ಷಣದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಮತ್ತು ಶಿಕ್ಷಕರ ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಸರ್ಕಾರದ ಇಂಥಾ ಮಧ್ಯಪ್ರವೇಶದ ಪರಿಣಾಮಗಳೇನು ಎಂಬುದನ್ನು ಇಷ್ಟು ಬೇಗ ಅಳೆಯಲು ಸಾಧ್ಯವಿಲ್ಲವಾದರೂ ಅದು ಶಾಲೆಗಳ ಮೂಲ ಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಎರಡರ ಸುಧಾರಣೆಗೂ  ಪ್ರಯತ್ನಿಸುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಎಟುಕಿಸಿಕೊಳ್ಳಲು ತವಕಿಸುತ್ತಿರುವ ಯುವ ಭಾರತದ ಹೆಚ್ಚುತ್ತಿರುವ ಆಶೋತ್ತರಗಳನ್ನು ಪೂರೈಸಬೇಕೆಂದರೆ ಈ ಎರಡು ಅಂಶಗಳ ಬಗ್ಗೆಯೂ ಏಕಕಾಲದಲ್ಲಿ ಗಮನಹರಿಸಬೇಕಾಗುತ್ತದೆ.

ಕೃಪೆ: Economic and Political Weekly

June 10, 2017. Vol. 52. No. 23

 

 

 

Leave a Reply

Your email address will not be published.