ಹನುಮವ್ವನ ನೆನಪು

ಡಾ. ನಟರಾಜ್ ಕೆ. ಎಸ್

AMMANAಮನುಷ್ಯ ಸಂಬಂಧಗಳು ತುಂಬಾ ಬೆಲೆಯುಳ್ಳದ್ದಾಗಿರುತ್ತದೆ (ಗುಣಾತ್ಮಕ ಸ್ವರೂಪ) ಮತ್ತು ಸಂಕೀರ್ಣವಾಗಿರುತ್ತದೆ. ನಮ್ಮ ನಿಲುವುಗಳು ಸಂಬಂಧಗಳ ಸ್ವರೂಪವನ್ನು ನಿರ್ಧರಿಸಲ್ಪಡುತ್ತದೆ. ಕಾರಣ ಸಂಬಂಧಗಳು ಬಹುತೇಕ ಭಾವನಾತ್ಮಕ ನೆಲೆಗೆ ಸಂಬಂಧಿಸಿರುತ್ತದೆ. ಶುಷ್ಕವಾದ ಸ್ವರೂಪವನ್ನು ಹೊಂದುವುದು ಬಹು ಅಪರೂಪವೆನ್ನಬಹುದು. ಸಂಬಂಧಗಳು ಮಾನವೀಯ ಸ್ವರೂಪವನ್ನು ಪಡೆದಷ್ಟೂ ಸಂಬಂಧಗಳು ಗಟ್ಟಿಯಾಗುತ್ತದೆ. ಸಂಬಧಗಳು ಗಟ್ಟಿಗೊಳ್ಳುವುದಕ್ಕೆ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯವಾಗಿ ಇರಲೇಬೇಕು. ಇಲ್ಲವಾದರೆ ಅದು ಸಹನೀಯವಾಗಿರುವುದಿಲ್ಲ.

ಭಾರತದಂತಹ ದೇಶದಲ್ಲಿ ಜಾತಿಮೂಲವಾದ (ಸ್ವಜಾತಿ) ಸಂಬಂಧಗಳು ಬೆಳೆಯುವ ಅವಕಾಶ ಹೆಚ್ಚಿಗೆ ಇರುತ್ತದೆ. ಅನ್ಯಜಾತಿ, ಧರ್ಮದ ವ್ಯಕ್ತಿಗಳ ನಡುವೆ ಇಂತಹ ಸಂಬಂಧಗಳು ಕಾಣಬರುವುದು ಬಹು ಅಪರೂಪ (ಅಪವಾದಗಳೂ ಇವೆ).

ನಾನೀಗ ಮೇಲೆ ಹೇಳಿದ ಮಾತಿಗೆ ಅಪರೂಪದ ಉದಾಹರಣೆಗಳು ಸಿಗುತ್ತವೆ. ಬಹುಶಃ ಇಂತಹ ಅಪರೂಪದ ಉದಾಹರಣೆಗಳೇ ಪುನಃ ಪುನಃ ನಮ್ಮ ಗಮನಸೆಳೆಯುತ್ತವೆ. ಇಂತ ಸೀಮಾತೀತ ಸಂಬಂಧವೊಂದಕ್ಕೆ ನಾನು ಉದಾಹರಣೆ ಆಗಿದ್ದಕ್ಕೆ ತುಂಬಾ ಖುಷಿ ಮತ್ತು ಹೆಮ್ಮೆ ಇದೆ. ನಾನೀಗ ಇಷ್ಟೆಲ್ಲ ಹೇಳುತ್ತಿರೊದಕ್ಕೆ,  ನೆನಪಿಸಿಕೊಳ್ಳುತ್ತಿರುವುದು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ “ಹನುಮವ್ವ”ನನ್ನು. ಹೆಸರಿಗೆ ತಕ್ಕಂತೆ ಇದ್ದಳಾಕೆ. ಆಕೆ ಹೆಸರಿಗೆ ನಮ್ಮ ಜಾತಿಯವಳಲ್ಲ. ಆದರೆ ಆಕೆಯ ಜಾತಿ ಎಂದೂ ನಮಗೆ ಬಂಧನವನ್ನು ತರಲಿಲ್ಲವೆನ್ನಿ. ಆಕೆ ಗತಿಸಿ ಸುಮಾರು ಹತ್ತನ್ನೆರಡು ವರುಷಗಳೇ ಕಳೆದಿವೆ. ಇವತ್ತಿನವರೆಗೂ ನಾನು ಆಕೆಯನ್ನು ನೆನಪಿಸಿಕೊಳ್ಳುತ್ತಿರೊದಕ್ಕೆ ಕಾರಣ ಆಕೆ ನಮ್ಮ ಮನೆಯಲ್ಲಿ ಕೆಲಸ ಮಾಡಿದ್ದಕ್ಕೆ ಅಲ್ಲ. ಆಕೆಯ ಒಳಗಿದ್ದ ತಾಯ್ತನದ ಸೊಬಗಿಗೆ. ಬಾಲ್ಯದ ದಿನಗಳಲ್ಲಿ ಹನುಮವ್ವ ನನಗೆ ಅವ್ವನಿದ್ದಂತೆ ಇದ್ದಳು. ನನ್ನಮ್ಮ ಜನ್ಮ ನೀಡಿದ್ದಳು.

ನಿಜವೆಂದರೆ ನಾನು ಹೆಚ್ಚುಕಮ್ಮಿ ಬೆಳೆದಿದ್ದು ಆಕೆಯ ಮಡಿಲಲ್ಲಿಯೇ. ಹನುಮವ್ವ ಅಂದರೆ ಅಷ್ಟೊಂದು ಪ್ರೀತಿ-ಮಮತೆಯೋ, ಅಕ್ಕರೆಯೋ ಈ ಎಲ್ಲ ಭಾವನೆಗಳ ಸಮ್ಮಿಳಿತವೋ ಯಾವುದು ಖಚಿತವಿಲ್ಲ. ಆಕೆಯೂ ಅಷ್ಟೇ ನಾವು ಅಂದ್ರೆ ಬಿದ್ದು ಸಾಯ್ತಿದ್ಲು. ಅಷ್ಟು ನಮಗೆ ಆಪ್ತಳಾಗಿದ್ಲು. ನನಗೆ ನೆನಪಿದ್ದ ಹಾಗೆ ಆಕೆ ಒಂಟಿ. ಆಕೆಯ ಗಂಡನನ್ನು ನಾನು ಕಾಣಲಿಲ್ಲ. ಆದರೆ ಆಕೆಗೆ ಗಂಡನಿಲ್ಲ ಎಂದು ಕೊರಗಿದ್ದು ನಾನಂತೂ ಕಾಣಲಿಲ್ಲ. ಆದರೆ ಆಕೆ ಕೆಲಸಕ್ಕೆ ನಿಂತರೆ ಯಾವ ಗಂಡ್ಮಕ್ಳು ಸಹ ಮಾಡದಷ್ಟು ಕೆಲಸ ಮಾಡುತ್ತಿದ್ದಳು. ಅಷ್ಟೊಂದು ಗಟ್ಟಿಗಿತ್ತಿ ಆಕೆ. ಹನುಮವ್ವ ತುಂಬಾ ಬಿಂದಾಸ್ ಸ್ವಭಾವದವಳು. ಆಕೆ ವಾರಕ್ಕೊಮ್ಮೆ (ಭಾನುವಾರ) ದಾವಣಗೆರೆಗೆ ಹೋಗುತ್ತಿದ್ದಳು, ಹೊಸ ಹೊಸ ಸಿನೆಮಾ ನೋಡುತ್ತಿದ್ದಳು. ಮರುದಿನ ಬಂದಾಗ ಸಿನೆಮಾದ ಕಥೆಯನ್ನು ತುಂಬಾ ಚೆನ್ನಾಗಿ ಹೇಳುತ್ತಿದ್ದಳು. ಹೀಗಾಗಿ ಆಕೆಯ ಬಗೆಗೆ ನನಗೆ ಆಶ್ಚರ್ಯವೂ ಆಗುತ್ತಿತ್ತು. ಆಕೆಯ ಮನೆಯಲ್ಲಿ ಮಾಂಸದ ಅಡುಗೆ ಮಾಡಿದರೆ ಅವತ್ತು ನಾಪತ್ತೆ ಆಗುತ್ತಿದ್ದಳು. ನನಗೆ ನೆನಪಿದೆ ನಾನು ಚಿಕ್ಕವನಿದ್ದಾಗ ಆಕೆಯ ಮೇಲೆ ಹತ್ತಿ ಕುಣಿಯುತ್ತಿದ್ದೆ. ಆಗ ಕೊಪಕೊಳ್ಳುತ್ತಿರಲಿಲ್ಲ, “ಅಯ್ಯೋ ಕೆಳಗಿಳಿ ಎಂದು ಅನ್ನುತ್ತಿರಲಿಲ್ಲ” ನಮಗೆ ಅದೇ ಮೋಜು. ಇಂತಹ ತಾಯಿ ಸ್ವಭಾವದವಳು ನಮ್ಮ ಹನುಮವ್ವ.

ನಾನು ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಆಕೆ ಮನೆಗೆಲಸಕ್ಕೆ ಬರುತ್ತಿದ್ದಳು. ನಮ್ಮದು ಸ್ನಾನವಾಗಿದ್ದರೆ ನಮಗೆ ಬಟ್ಟೆ ಹಾಕುವ ಕೆಲಸ ಹನುಮವ್ವನದೇ. ಆಗ ಆಕೆ ನಮ್ಮ ಅಮ್ಮನ ಹತ್ತಿರ “ಶರಟು, ಸಡ್ಡಿ (ಚಡ್ಡಿ) ಕೊಡಕ್ಕ ಹಾಕ್ತಿನಿ” ಅಂತಿದ್ಲು. ನಾನು “ಬೇ ಸಡ್ಡಿ ಅಲ್ಲ ಚಡ್ಡಿ ಅನ್ನು” ಅಂತ ತಮಾಷೆ ಮಾಡ್ತಿದ್ದೆ. ಆಕೆ “ನೋಡಕ್ಕ ನನಗೇ ತಮಾಸೆ ಮಾಡ್ತನೆ” ಅಂತ ನಮ್ಮ ಅಮ್ಮನ ಹತ್ತಿರ ಹೇಳಿ ನಗುತ್ತಿದ್ದಳು. ನಮ್ಮದು ದೊಡ್ಡ ಮನೆ, ಗೋಡೆಗಳು ದೊಡ್ಡವಿದ್ದವು ಅಂತಹ ಗೋಡೆಯನ್ನು ಆಕೆ ಒಬ್ಬಳೇ ಏಣಿ ಹತ್ತಿ ಬಳಿಯುತ್ತಿದ್ದಳು, ಒಟ್ಟಿನಲ್ಲಿ ಭಯವೇ ಇರುತ್ತಿರಲಿಲ್ಲ ಆಕೆ. ಊಟದ ವಿಚಾರಕ್ಕೆ ಬಂದರೆ ಆಕೆ ಅಂಜಿಕೆ ಇಲ್ಲದೇ ಚೆನ್ನಾಗಿ ಕೇಳಿ ಹಾಕಿಸಿಕೊಂಡು ಊಟ ಮಾಡೋಳು. ಊಟದ ವಿಚಾರ ಅಂದ ತಕ್ಷಣ ನನಗೆ ನೆನಪಾಗೋದು ದಾವಣಗೆರೆ ಹೋಟೆಲ್. ನಾವೂ ಮನೆಯಲ್ಲಿ ಆಗಾಗ ಭಾನುವಾರ ಸಿನೆಮಾಕ್ಕೆ ಹೋಗುತ್ತಿದ್ದೆವು. ಒಮ್ಮೊಮ್ಮೆ ಹನುಮವ್ವನೂ ಬರುತ್ತಿದ್ದಳು. ಮದ್ಯಾನದ ಶೋ ಮುಗಿದ ನಂತರ ಸಾಯಂಕಾಲ ಊರಿಗೆ ಹೋಗುವ ಮುನ್ನ ಹೋಟೆಲಿನಲ್ಲಿ ಖಾಯಮ್ಮಾಗಿ ನಮಗೆ ಈರುಳ್ಳಿ ದೋಸೆಯ ಸಮಾರಾಧನೆ ಆಗುತ್ತಿತ್ತು. ದೊಡ್ಡದಾಗಿರುತ್ತಿದ್ದ ಈರುಳ್ಳಿ ದೋಸೆಯನ್ನು ನಮ್ಮ ಕೈಯಿಂದ ಪೂರ್ತಿಯಾಗಿ ತಿನ್ನಲು ಆಗುತ್ತಿರಲಿಲ್ಲ.

ಅದಂತೂ ವೇಸ್ಟ್ ಆಗುತ್ತಿತ್ತು. ಆಕೆಯ ಪಾಲಿನ ದೋಸೆಯನ್ನು ತಿಂದು. ನಾವು ಹೆಚ್ಚು ಬಿಟ್ಟಿರೋ ದೋಸೆಯನ್ನು ತಾನು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿಕೊಂಡು ಬ್ಯಾಗಿನಲ್ಲಿ ಹಾಕಿಕೊಳ್ಳುತ್ತಿದ್ದಳು. ನಮ್ಮ ಅಪ್ಪಾಜಿ ‘ಅದೇನ್ ಮಾಡ್ತಿ ಬಿಡು’ ಅಂದ್ರೆ ಹನುಮವ್ವ ‘ ಅಯ್ಯಾ ಸುಮ್ನಿರು ಅಣ್ಣಾ ದುಡ್ಡು ಕೊಟ್ಟಿರೋದು’ ಅಂತ ಮುಲಾಜಿಲ್ಲದೇ ಹೇಳುತ್ತಿದ್ದಳು. ಹಸಿವಿನ ಬೆಲೆ ತಿಳಿದಿದ್ದ ಹನುಮವ್ವನಿಗೆ ಅನ್ನ ಅಂದರೆ ಅಷ್ಟು ಕಾಳಜಿ ಇತ್ತು . ಬಹುಶಃ ನಾನು ಶಿವಮೊಗ್ಗದಲ್ಲಿ ಸ್ನಾತಕೋತ್ತರ ಡಿಗ್ರಿ ಓದುತ್ತಿದ್ದೆ ನಾನಾಗ ಊರಿನಲ್ಲಿ ಇರಲಿಲ್ಲ ಒಂದು ದಿನ ಹನುಮವ್ವನ ಸಾವಿನ ಸುದ್ದಿಯನ್ನು ಕೇಳಿ ನಿಜಕ್ಕೂ ನನಗಾದ ವಿಚಿತ್ರವಾದ ಸಂಕಟಗಳಿಗೆ ಮಾತಿನ ರೂಪ ಕೊಡಲು ನನಗೀಗ ಕಷ್ಟವಾಗುತ್ತದೆ. ಆಗ ನಾನು ನಮ್ಮೂರಲ್ಲಿ ಇದ್ದಿದ್ದರೆ ಕೊನೆಯದಾಗಿ ಆಕೆಯ ಮುಖವನ್ನಾದರೂ ನೋಡಬಹುದಿತ್ತು ಆದರೆ ದುರ್ವಿಧಿ ಅದಕ್ಕೂ ಅವಕಾಶ ನೀಡಿರಲಿಲ್ಲ. ನಿಜ ಆಕೆ ನಮ್ಮನ್ನು ಅಗಲಿರಬಹುದು ಅದರೆ ನೆನಪುಗಳಲ್ಲಿ ಆಕೆ ಸದಾ ಜೀವಂತವಿದ್ದಾಳೆ. ಹನುಮವ್ವ ಕೇವಲ ವ್ಯಕ್ತಿಯಾಗಿ ಅಲ್ಲ ತಾಯ್ತನದ ವ್ಯಕ್ತಿತ್ವದ ಕಾರಣದಿಂದ ಇಂದೂ ನನ್ನಯ ನೆನಪುಗಳಲ್ಲಿ ಸದಾ ಹಸಿರಾಗಿದ್ದಾಳೆ.

Leave a Reply

Your email address will not be published.