ಹದ್ದಿನ ಸಾಮ್ರಾಜ್ಯದಲಿ..

-ಕೆ. ಬಿ. ವೀರಲಿಂಗನಗೌಡ್ರ

ಅನುಭವ ಮಂಟಪದಲಿ
ವಚನ ಸುಧೆ ಹರಿಸಿದ
ಕೋಗಿಲೆ ಹತ್ಯೆಯಾಯಿತು.

ಶಾಂತಿ ಅಹಿಂಸೆಯ
ಪರಿಮಳ ಪಸರಿಸುವ
ಪಾರಿವಾಳ ಹತ್ಯೆಯಾಯಿತು.

ಜಾತಿ ಧರ್ಮಗಳ ಧಿಕ್ಕರಿಸಿ
ಪ್ರೀತಿಯ ಹುಡಿ ಹರಡಿಸಿದ
ಪತಂಗದ ಹತ್ಯೆಯಾಯಿತು.

ಮೌಢ್ಯ ವಿರೋಧಿಗಾಗಿ
ನಿತ್ಯ ಕೂಗಿ ಎಬ್ಬಿಸುತ್ತಿದ್ದ
ಕೋಳಿಯ ಹತ್ಯೆಯಾಯಿತು.

ಹಾಲು-ಹಾಲಾಹಲವ
ಶೋಧಿಸಿ ಸತ್ಯ ಉಲಿದ
ಹಾಲಕ್ಕಿಯ ಹತ್ಯೆಯಾಯಿತು.

ಗರಿಕೆಯ ಎಳೆತಂದು
ವೈಚಾರಿಕ ಗೂಡು ಕಟ್ಟಿದ
ಗುಬ್ಬಿಯ ಹತ್ಯೆಯಾಯಿತು.

ಹದ್ದುಮೀರಿ ಅರಿವು ಬಿತ್ತಿದ
ಗುರುವಿನಂತವರ ಹತ್ಯೆಯಾಯಿತು
ಹದ್ದಿನ ಸಾಮ್ರಾಜ್ಯದಲಿ.

ಹತ್ಯೆಯ ವಾರಸುದಾರರೀಗ
ಬುದ್ಧರೂಪ ತಳೆದಿದ್ದಾರೆ
ಹದ್ದು ಅಂಗುಲಿಮಾಲಾಗಲೆಂದು.

-ಕೆ.ಬಿ.ವೀರಲಿಂಗನಗೌಡ್ರ
ಎಸ್.ಆರ್.ಜಿ.ಎಚ್.ಎಂ. ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

Leave a Reply

Your email address will not be published.