ಹಡಪದ್ ಮಾಸ್ತರು -6:ಕಲಿಲಿಕೆ ಬಂದಿದ್ದಿರೋ ಶೋಕಿ ಮಾಡ್ಲಿಕೆ ಇದಿರೋ?”

-ಎಚ್. ಎಸ್. ವೇಣುಗೋಪಾಲ್

chitra; H.S.Venugopal

chitra; H.S.Venugopal

ನಾನು ಕೆನ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ (1970-80) ಮಾಸ್ತರು ಅಲ್ಲಿ ಕಲಿಯುತ್ತಿದ್ದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೂ(ಆಗ ಸುಮಾರು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಿರ ಬಹುದು) ಪಠ್ಯ ವಿಷಯಗಳಿಗೆ ಅನುಗುಣವಾಗಿ ವಿಂಗಡಿಸಿ ತರಗತಿಯನ್ನು ಆಯೋಜಿಸುತ್ತಿದ್ದರು. ಅವರ ಕಾರ್ಯಕ್ಷಮತೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿ ತುಡಿಯುತ್ತಿದ್ದ ರೀತಿ ಎಲ್ಲವೂ ನನಗೆ ಹಳ್ಳಿಯ ಶಾಲೆಯಲ್ಲಿನ ಏಕೋಪಧ್ಯಾಯರಂತೆ ಕಾಣುತ್ತಿದ್ದರು. ಸದಾ ಪಾದರಸದಂತೆ ತರಗತಿಗಳಲ್ಲಿ ಅಡ್ಡಾಡಿ ಗಮನಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುವಾಗ ಬಳಸುತ್ತಿದ್ದ ಅವರ ಕೆಲವು ಪದಗಳೂ ಸಹ ನಮಗೆ ಬೇಸರ ನೀಗಿ ಅಭ್ಯಾಸದಲ್ಲಿ ತೊಡಗಲು ಉತ್ತೇಜನಕಾರಿಯಾಗಿರುತ್ತಿತ್ತು. ಸಾಮಾನ್ಯವಾಗಿ ಮಾಸ್ತರು ವಿದ್ಯಾರ್ಥಿಗಳಿಗೆ ಹೊಸರೀತಿಯಲ್ಲಿ ಚಿಂತಿಸಲು ಚಿತ್ರ ರಚಿಸಲು ಪ್ರಚೋದಿಸುವಾಗ ಫಾಂನ ಬ್ರೆಕ್‍ಮಾಡಿ ಅಂತಲೋ, ಡಿಫೆರಂಟಾಗಿ ಬಳಸಕ್ಕಾಗುತ್ತದೋ ಚಿಂತಿಸಿ ಎಂದೊ, ಇಲ್ಲಾ ವಿದ್ಯಾರ್ಥಿಗಳು ರಚಿಸಿದ್ದ ಚಿತ್ರವನ್ನು ಗಮನಿಸುತ್ತಾ “ದಿಸ್ ಪಾರ್ಟ್ ಈಜ್ ಬೆಟರ್ ನ್ ದಟ್ ಪಾರ್ಟ್’ ಎಂದು ಉದ್ಧರಿಸುತ್ತಿದ್ದ ರೀತಿ ನಮಗೆ ಹಾಸ್ಯವಾಗಿ ಕಂಡರೂ ಆ ಮಾತುಗಳು ಖುಷಿಯಿಂದ ಕೆಲಸ ಮಾಡಲು ಅಗತ್ಯವಾದ ಟಾನಿಕ್‍ನಂತೆ ಉಲ್ಲಾಸ ಭರಿತವಾಗಿರುತ್ತಿತ್ತು.

chitra:rajkumar

chitra:rajkumar

ಮಾಸ್ತರು ಒಂದು ಕಡೆ ಫಿಗರ್ ಸ್ಟಡಿಗೆ ವ್ಯವಸ್ತೆ ಮಾಡಿ ಮತ್ತೊಂದು ತರಗತಿಗೆ ಸ್ಟಿಲ್ ಲೈಪ್ / ಆಬ್ಜೆಕ್ಟ್ ಡ್ರಯಿಂಗ್ ಸಜ್ಜುಗೊಳಿದರೆ ಬೇರೊಂದು ಕೊಠಡಿಯಲ್ಲಿ ಸ್ಮರಣ / ಸಾಕ್ಷಾ ಚಿತ್ರ ಮಾಡುವಂತೆ ಅಣಿಗೊಳಿಸುತ್ತಿದ್ದರು ತರಗತಿಯ ಹಿರಿಯ ವಿದ್ಯಾರ್ಥಿಗೆ ಮೇಲುಸ್ತುವಾರಿಗೆ ಹೇಳಿ, ತಾವು ಅಗತ್ಯ ಇರುವಲ್ಲಿ ವಿದ್ಯಾರ್ಥಿಗಳ ಜೊತೆ ಇದ್ದು ಸಲಹೆ ನೀಡುತ್ತಾ ಆಗಾಗ ಇತರ ತರಗತಿಯ ಕಡೆ ಅಡ್ಡಾಡಿ ವಿದ್ಯಾರ್ಥಿಗಳನ್ನು ಅಭ್ಯಾಸದಲ್ಲಿ ತೊಡಗಿಸುತ್ತಿದ್ದರು. ಹೆಚ್ಚಿನ ಸಮಯದಲ್ಲಿ ತಮಗೆ ತಿಳಿದ ಹೊಸ ವಿಚಾರದ ಬಗ್ಗೆ ನಮ್ಮೊಂದಿಗೆ ಮಾತಾಡುತ್ತಿದ್ದರು. ಅವರು ಕೊಂಡು ತಂದ ಕಲಾಪುಸ್ತಕಗಳ ಚಿತ್ರವನ್ನು ತೋರಿಸಿ ಆ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇಳುವಂತೆ ಒತ್ತಾಯಿಸುತ್ತಿದ್ದರು. ಇವುಗಳ ಮಧ್ಯೆ ವಿದ್ಯಾರ್ಥಿಗಳು ಕಾಲಹರಣಮಾಡಿ ವ್ಯರ್ಥ ಮಾತಾಡುತ್ತಿದ್ದಾಗ ಮಾಸ್ತರು ಅಲ್ಲಿ ದಿಡೀರ್ ಎಂದು ಪ್ರತ್ಯಕ್ಷವಾಗಿ “ಏನು ಕಲಿಲಿಕೆ ಬಂದಿದ್ದಿರೋ ಇಲ್ಲಾ ಶೋಕಿ ಮಾಡ್ಲಿಕೆ ಇದಿರೋ?” ಎಂದು ಗದರಿದಾಗಲೂ ಅದರಲ್ಲೂ ಒಂದು ತೆರೆನಾದ ಆಪ್ತತೆ ಇರುತ್ತಿತ್ತು. ಅದಕ್ಕುತ್ತರವಾಗಿ “ನಾಮ್ದು ಆಯ್ತು ಸಾರ್…. ಅದಕ್ಕೆ” ಎಂದು ಹೇಳುವಷ್ಟರಲ್ಲೇ…. ಮಾಸ್ತರು “ಅರೆ ನಿನ್ನಾಪನ…. ಅಷ್ಟಕ್ಕೆ ಸುಸ್ತಾಯ್ತೇನು?…. ಇನ್ನೊಂದು ಹಚ್ಚು… ಹಚ್ಚು” ಎನ್ನುತ್ತಾ ನಮ್ಮ ಬಳಿಗೆ ಬರುತ್ತಿದ್ದರು. ನಾವು ಮಾಡಿದ ಚಿತ್ರದ ಒಪ್ಪು ತಪ್ಪುಗಳ ಕುರಿತು ಸಲಹೆ ನೀಡಿ ನಮಗೆ ಇನ್ನೊಂದು ಚಿತ್ರರಚಿಸುವ ಅಗತ್ಯವನ್ನು ಮನದಟ್ಟು ಮಾಡಿಸುತ್ತಿದ್ದರು.

ಮಾಸ್ತರು ವಿದ್ಯಾರ್ಥಿಗಳನ್ನು ಪ್ರಯೋಗಮಾಡಲು ಪ್ರೇರೇಪಿಸುತ್ತಿದ್ದುದರಿಂದ ವಿದ್ಯಾರ್ಥಿಗಳು ಹೊಸತನದಲ್ಲಿ ಚಿತ್ರಿಸಲು ಸದಾ ಹವಣಿಸುತ್ತಿದ್ದರು. ಅದು ಅವರು ವಿದ್ಯಾರ್ಥಿಗಳ ವಿಷಯದ ಆಯ್ಕೆಯಲ್ಲಿ ಅಭಿವ್ಯಕ್ತಿಯ ನಿರೂಪಣೆಯಲ್ಲಿ ವಿವಿಧ ಮೈವಳಿಕೆಯನ್ನು ಬಳಸುವ ತಾಂತ್ರಿಕತೆಯಲ್ಲಿ ಕಾಣುತ್ತಿತ್ತು ಮತ್ತು ಇವೆಲ್ಲದರ ಬೆನ್ನೆಲುಬಾಗಿ ಮಾಸ್ತರ ವ್ಯಕ್ತಿತ್ವ ನಡವಳಿಕೆ ಮತ್ತು ಕಾರ್ಯವಿಧಾನವು ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿತ್ತು. ಸ್ವತಃ ಮಾಸ್ತರೇ ಸದಾ ಪ್ರಯೋಗಗಳಿಗೆ ತೆರೆದುಕೊಂಡಿದ್ದರು ಇದಕ್ಕೆ ಮಾಸ್ತರು ಕೃತಿಗಳು ಉತ್ತಮ ಉದಾಹರಣೆಯಾಗಿವೆ. ಅವರ ಕೃತಿಗಳಲ್ಲಿ ಬಹಳ ವೈವಿದ್ಯ ಇದೆ. ಮಾಸ್ತರು ವಿವಿಧ ಮಾಧ್ಯಮಗಳಲ್ಲಿ ಹೇರಳವಾಗಿ ಕೃತಿಗಳನ್ನು ರಚಿಸಿದ್ದರು. ಅವು ಜಲವರ್ಣ, ತೈಲವರ್ಣ, ಪ್ಲಾಸ್ಟರ್ ಆಪ್ ಪ್ಯಾರಿಸ್, ಪ್ಲೈವುಡನ್ನು ಬ್ಲೋ ಟಾರ್ಚ್‍ನಿಂದ ಸುಟ್ಟು ರಚಿಸಿದ ಕೃತಿಗಳು ಇಂಕ್‍ನಿಂದ ಮಾಡಿದ ರೇಖಾಚಿತ್ರಗಳು ಸೈಕ್ಲೋಸ್ಟೆಲ್‍ನ ಸ್ಟೆನ್ಸಿಲ್ ಬಳಸಿ ಮಾಡಿದ ಚಿತ್ರಗಳು ಇತ್ಯಾದಿ.

chitra: Rajkumar

chitra: Rajkumar

ಹಾಗಾಗಿ ಬಹುತೇಕ ವಿದ್ಯಾರ್ಥಿಗಳು ಸಹ ಶಾಲೆಯಲ್ಲೇ ಹೆಚ್ಚು ಸಮಯವಿದ್ದು ಸ್ಕೆಚಿಂಗ್ ಕಪ್ಪು ಹಲಗೆಯ ಮೇಲೆ ರೇಖಾಚಿತ್ರದ ಅಭ್ಯಾಸ ಮಾಡುವುದು ಒಲ್ಡ್ ಮಾಸ್ಟರ್‍ನ ಕೃತಿಗಳ ಅಭ್ಯಾಸ ಕಲಾ ಪ್ರದರ್ಶನಗಳಿಗೆ ಪೇಂಟಿಂಗ್ ಮಾಡುವುದು ಸಾಮಾನ್ಯವಾಗಿತ್ತು. ಹಡಪದ್ ಮಾಸ್ತರು ನವ್ಯಪಂಥದ ಕೃತಿಗಳನ್ನು ರಚಿಸಲು ಉತ್ತೇಜಿಸುತ್ತಿದ್ದಂತೆ ನಮ್ಮ ಪಾರಂಪಾರಿಕ ಶೈಲಿಯ ಚಿತ್ರಗಳನ್ನು ರಚಿಸಲು ಹುರಿದುಂಬಿಸುತ್ತಿದ್ದರು. ಆದುದರಿಂದ ಶಾಲೆಯಲ್ಲಿ ಸಾಕಷ್ಟು ವೈವಿದ್ಯತೆಯಿಂದ ಕೂಡಿದ ಕೃತಿಗಳು ಕಾಣಸಿಗುತ್ತಿದ್ದವು ಉದಾ: ಎಸ್ ಗಣನಾಥ್ ದೀಕ್ಷಿತ್‍ರು ಡ್ರೈಬ್ರಷ್ ತಂತ್ರದಲ್ಲಿ ಭಾವಚಿತ್ರಗಳನ್ನು ರಚಿಸಿದ್ದರೆ. ಬಿ. ರಾಜ್ಕುಮಾರ್ ಅವರು ಹಲವಾರು ಪಾಶ್ಚಾತ್ಯ ಕಲಾವಿದರ ಚಿತ್ರಗಳನ್ನು ಪ್ರತಿಮಾಡುತ್ತಿದ್ದರು. ದಯಾನಂದ್ ತಪಸೆಟ್ಟಿ, ಕುಶಾಲ್ ಕುಮಾರ್, ಉದಯ್, ರೇಣುಕಮ್ಮ ಮುಂತಾದವರು ರೇಖಾಚಿತ್ರಗಳಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿದ್ದರು. ಹರಿಕೃಷ್ಣ ಅವರು ಹಕ್ಕಿಯ ಪುಕ್ಕವನ್ನು ಬಳಸಿ ಮೂಡಿಸುತ್ತಿದ್ದ ಆಕಾರಗಳು ಆಕರ್ಶಕವಾಗಿರುತ್ತಿದ್ದವು ಅಂತೆಯೇ ಬಿ.ಕೃಷ್ಣ, ವಸಂತ ಕುಮಾರಿಯವರು ವಿಶೇಷವಾಗಿ ಮಿನೇಚರ್ ಚಿತ್ರಗಳನ್ನು ಮಾಡುತ್ತಿದ್ದರು. ಬಿ ರಾಜಕುಮಾರ್ ಅವರು ಪ್ರತಿ ಮಾಡಿದ ಚಿಕ್ಕಣಿ ಚಿತ್ರ ಮತ್ತು ಪಾಶ್ಚಾತ್ಯ ಮಾದರಿ ಚಿತ್ರಗಳು. ಇವರು ವಾಣಿಜ್ಯ ಕಲೆಯ ಹಿನ್ನೆಲೆ ಹೊಂದಿದ್ದರು. ಮಾಸ್ತರು ಇವರ ಚಿತ್ರಗಳಲ್ಲಿನ ಬಣ್ಣಗಳ ಮಿಳಿತ ಮತ್ತು ಕೌಶಲ್ಯವನ್ನು ಗಮನಿಸಲು ನಮಗೆ ತಿಳಿಸುತ್ತಿದ್ದರು.

ಮುರುಗೇಶಪ್ಪ, ಕೃಷ್ಣವೇಣಿ ಮುಂತಾದವರು ಮೈಸೂರ್ ಶೈಲಿಯ ಸಾಂಪ್ರದಾಯಕ ಕೃತಿ ರಚಿಸುವುದರಲ್ಲಿ ನೈಪುಣ್ಯವನ್ನು ಪಡೆದಿದ್ದರು. ಈ ಹೆಸರುಗಳನ್ನು ವಿವಿಧ ಶೈಲಿ ತಂತ್ರಗಳಿಗೆ ಉದಾಹರಣೆಯಾಗಿ ಉಲ್ಲೇಖಿಸಿದ್ದೇನೆ ಹೊರತು ಇದೇ ಅಂತಿಮ ಅಲ್ಲ. ಏಕೆಂದರೆ ಹಡಪದ್ ಮಾಸ್ತರು ಸಾಧಕ ಶಿಷ್ಯರ ದೊಡ್ಡ ಯಾದಿಯನ್ನೆ ನೀಡಬಹುದು. ಹಡಪದ್ ಮಾಸ್ತರವರು ಅವರ ಸರಳ ಆತ್ಮೀಯ ವ್ಯಕ್ತಿತ್ವದಿಂದ ಅನೇಕ ವಿದ್ಯಾರ್ಥಿಗಳ ಮನದಲ್ಲಿ ಅಚ್ಚಳಿಯದ ಸ್ಮøತಿಗಳನ್ನು ಉಳಿಸಿದ್ದಾರೆ ಮಾಸ್ತರ ಶಿಷ್ಯರಲ್ಲಿ ಒಬ್ಬರಾದಮುರುಗೇಶಪ್ಪನವರು (ಸರ್ಕಾರಿ ಮುದ್ರಣಾಲಯದಲ್ಲಿ ಕಲಾವಿದರಾಗಿ ಸೇವೆಗೆ ಸೇರಿದ ಶ್ರೀಯುತರು ಅಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ.) ಮಾಸ್ತರ ಬಗ್ಗೆ ಹೇಳುತ್ತಾ ‘ನಾನು ಕೆನ್ ಶಾಲೆಗೆ ಸೇರುವ ಮೊದಲು ಮೈಸೂರು ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರರಚಿಸುತ್ತಿದ್ದೆ. ಅವರು ನನ್ನ ಚಿತ್ರಗಳನ್ನು ಮೆಚ್ಚಿ ಹುರಿದುಂಬಿಸುತ್ತಿದ್ದರು. ಜೊತೆ ಜೊತೆಗೆ ಸಮಕಾಲಿನ ರೀತಿಯಲ್ಲಿ ಚಿತ್ರಿಸಲು ಮತ್ತು ಚಿಂತಿಸಲು ಹೇಳುತ್ತಿದ್ದರು ಆಗೆಲ್ಲಾ ಅವರು ಗುರು-ಶಿಷ್ಯ ಎಂಬ ಅಂತರವನ್ನು ತೋರದೆ ತಂದೆಯಂತೆ ಸ್ನೇಹದಿಂದ ವಿಚಾರಗಳನ್ನು ಮನದಟ್ಟು ಮಾಡಿಸುತ್ತಿದ್ದರು. ಅವರ ಪ್ರೋತ್ಸಾಹದಿಂದ ನಾನು ಸಾಂಪ್ರದಾಯಿಕ ಚಿತ್ರಗಳ ಜೊತೆ ಜೊತೆಗೆ ನವ್ಯ ಪಂಥದ ಪ್ರಭಾವದಲ್ಲೂ ಚಿತ್ರಗಳನ್ನು ರಚಿಸಿದ್ದೇನೆ. ನಾನು ಮತ್ತು ಜಾನ್ ದೇವರಾಜ್ ಜೊತೆಗೂಡಿ ಅನಾಥರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಕುರಿತು ಕೃತಿಗಳನ್ನು ರಚಿಸಿ ಪ್ರದರ್ಶನಗಳನ್ನು ಆ ದಿನಗಳಲ್ಲಿ ಆಯೋಜಿಸಿದ್ದೇವು. ಮಾಸ್ತರೂ ಅದನ್ನು ಬಹಳವಾಗಿ ಮೆಚ್ಚಿದ್ದರು” ಎಂದು ನೆನೆಸಿಕೊಂಡರು.

chitra:Gananath deekshith

chitra:Gananath deekshith

chitra: Murugeshappa

chitra: Murugeshappa

ನನ್ನ ಅರಿವಿಗೆ ಬಂದ ಮತ್ತೊಂದು ಸಂದರ್ಭ ಪ್ರಸ್ತುತ ಬಾಗಲಕೋಟೆಯಲ್ಲಿ ವ್ಯಾಪಾರಸ್ಥರಾಗಿರುವ ದಯಾನಂದ್ ತಪಸೆಟ್ಟಿಯವರು ಸಹ ಹಡಪದ್ ಮಾಸ್ತರ ಪ್ರತಿಭಾವಂತ ಶಿಷ್ಯರು. ನನಗೆ ಒಂದು ವರ್ಷದ ಹಿರಿಯ ವಿದ್ಯಾರ್ಥಿ ನಾನು 2012 ರಲ್ಲಿ ಹಲವು ಸ್ನೇಹಿತರೊಂದಿಗೆ ವಿಜಯಪುರ (ಬಿಜಾಪುರ)ಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಒಂದು ದಿನ ಗೆಳೆಯರ ಅನುಮತಿ ಪಡೆದು ಬಿಡಿವು ಮಾಡಿಕೊಂಡು ಹಳೆಯ ಗೆಳೆಯನನ್ನು ಅರಸಿ ಬಾಗಲಕೋಟೆಗೆ ಹೋದೆ. ಅವರ ಕುಟುಂಬ ಆದರಿಂದ ಸತ್ಕರಿಸಿತು. ನಮ್ಮ ಅನೌಪಚಾರಿಕ ಈ ಭೇಟಿಯಲ್ಲಿ ತಪಶೆಟ್ಟಿಯವರು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಸಿಕೊಂಡರು ಆಗ ಮಾಸ್ತರ ಒಡನಾಡದ ಬಗ್ಗೆ ನೆನೆಯುತ್ತಾ…. “ಹಡಪದ್ ಮಾಸ್ತರು ಮತ್ತು ಮೇಡಂ ಧನಲಕ್ಷ್ಮಿಯವರು ಕೆನ್ ಶಾಲೆಯ ಏಳಿಗೆಗೆ ಬಹಳ ದುಡಿದವರು. ಇಬ್ಬರ ಕೊಡುಗೆಯೂ ಅಪಾರ.

ಮಾಸ್ತರಿಗಂತೂ ಶಾಲೆಯೇ ಸರ್ವಸ್ವ ತಮ್ಮ ಜೀವನವನ್ನೇ ಶಾಲೆಗೆ ಧಾರೆ ಎರೆದಿದ್ದಾರೆ. ನಿಮಗೆ ತಿಳಿದಿರುವಂತೆ ನಾನು ಇಬ್ಬರಿಗೂ ನಿಕಟವಾಗಿದ್ದ ವಿದ್ಯಾರ್ಥಿ. ಎಷ್ಟೋ ಕಷ್ಟಸುಖಗಳನ್ನು ನನ್ನೊಂದಿಗೆ ಹಂಂಚಿಕೊಂಡಿದ್ದಾರೆ. ನೀವು ಕೆನ್ ಶಾಲೆಯನ್ನು ಬಿಟ್ಟು ಬರೋಡಾಗೆ ಕಲಿಯಲು ಹೋದ ಮೇಲೆ ನಾನು ಡಿಪ್ಲೋಮಾ ಮುಗಿಸಿ ಊರಿಗೆ ಬಂದೆ. ಮಾಸ್ತರಿಗೆ ನನ್ನನ್ನು ಊರಿಗೆ ಕಳುಹಿಸಲು ಇಷ್ಟವಿರಲಿಲ್ಲ.

ನಾನು ಬೆಂಗಳೂರಿನಲ್ಲೇ ಉಳಿಯ ಬೇಕೆಂಬುದು ಅವರ ಇಚ್ಛೆಯಾಗಿತು. ಬಾಗಲಕೋಟೆಗೆ ಬರುವ ದಿನ ಮಾಸ್ತರು ನನ್ನ ಜೊತೆಯಲ್ಲಿ ರೈಲ್ವೆ ಸ್ಟೇಷನ್‍ಗೆ ಬಂದಿದ್ದರು. ಸೆಟ್ಟರೆ ಊರಿಗೆ ಹೋಗಬೇಡ್ರಿ ಇಲ್ಲೇ ಇರ್ರಿ ನಿಮ್ಮ ಭವಿಷ್ಯವನ್ನು ಬೆಂಗಳೂರಿನಲ್ಲೇ ರೂಢಿಸುವುದಾಗಿ ನಿಮ್ಮ ಮನೆಯ ಹಿರಿಯರಿಗೆ ತಿಳಿಸ್ರಿ ಎಂದು ಒತ್ತಾಯ ಮಾಡಿದರು. ತುಂಬಾ ಬೇಜಾರು ಮಾಡಿಕೊಂಡರು. ನಾನು ಊರಿಗೆ ಹೋಗಿ ಮರಳಿ ಬರುವುದಾಗಿ ಸಮಾಧಾನ ಹೇಳಿ ರೈಲು ಗಾಡಿ ಹತ್ತಿದೆ. ಮತ್ತೆ ನಾನು ಬೆಂಗಳೂರಿಗೆ ಮರಳಿ ಹೋಗಲಾಗಲೇ ಇಲ್ಲಾ. ನಮ್ಮ ಹಿರಿಯರು ಇಲ್ಲಿನ ವ್ಯಾಪಾರವಹಿವಾಟು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿ ಬಿಟ್ಟರು. ನಿಜ ಹೇಳ್ತೀನಿ ವೇಣುಗೋಪಾಲ್ ಆದಿಗ ಮಾಸ್ತರ ಮಾತು ಕೇಳಿ ಧೈರ್ಯ ಮಾಡಿ ಬೆಂಗಳೂರಿನಲ್ಲಿ ಉಳಿದಿದ್ದರೆ ನನ್ನ ಜೀವನ ದಿಕ್ಕು ಬದಲಾಗಿ ಕಲಾವಿದನಾಗಿ ಬೆಳೆಯುತ್ತಿದ್ದೆ. ಆದರೆ ಆಗಿದ್ದೇ ಬೇರೆನೋಡಿ” ಎಂದು ಪೇಚಾಡಿಕೊಂಡರು. ಮಾಸ್ತರ ವ್ಯಕ್ತಿತ್ವವೇ ಅಂತಹದು. ಅವರಿಂದ ಒಂದು ರೀತಿಯ ಅದಮ್ಯವಾದ ಒಲುಮೆ ಎಲ್ಲರೆಡೆಗೂ ಹರಿಯುತ್ತಿತ್ತು.

chitra: Murugeshappa

chitra: Murugeshappa

chitra: Sarojini

chitra: Sarojini

(ಮುಂದುವರೆಯುವುದು)

 

Leave a Reply

Your email address will not be published.