ಹಡಪದ್ ಮಾಸ್ತರು -5 : ಸಂತ ಮನೋಭಾವದ ಕಲಾಗುರು

-ಎಚ್. ಎಸ್. ವೇಣುಗೋಪಾಲ್

ನಮ್ಮ ಕಲಾಪರೀಕ್ಷೆಗಳು ಮುಗಿದು ಕೆನ್ ಶಾಲೆಯಲ್ಲಿ ಉಚಿತ ವಸತಿಯಲ್ಲಿದ್ದ ಹುಡುಗರಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರು ಊರಿಗೆ ಹೊರಡುವ ತಯಾರಿಯಲ್ಲಿದ್ದರು. ಅಲ್ಲಿ ಉಳಿಯುವವರಲ್ಲಿ ಶ್ರೀ ಭೀಮ್ಸಿಯವರೂ ಒಬ್ಬರು. ಅವರು ಡಿ.ಟಿ.ಸಿ ಅಭ್ಯಾಸಮಾಡಲು ಉತ್ತರ ಕರ್ನಾಟಕದ ಹಳ್ಳಿಯಿಂದ ಬಂದವರು. ನಾನೂ ಊರಿಗೆ ಹೋಗಲು ಅಣಿಯಾದೆ ಭೀಮ್ಸಿಗೆ ನಾನು ಊರಿಗೆ ಹೋಗುವುದು ಇಷ್ಟವಿರುತ್ತಿರಲಿಲ್ಲ. ನಾನು ಊರಿಗೆ ಹೋದರೂ ಆಗಾಗ ಶಾಲೆಗೆ ಬರುತ್ತಿದ್ದೆ. ಆಗೆಲ್ಲಾ ಹಡಪದ್ ಮಾಸ್ತರು ಏನು ದಂಡ ನಾಯಕರೇ ಶಾಲೆ ನೆನಪಾಯಿತು ಅನ್ಸುತ್ತೆ? ಏನು… ವಿಶೇಷ? ಎಂದು ಕೀಟಲೆ ಮಾತಿನಿಂದ ಸ್ವಾಗತಿಸುತ್ತಿದ್ದರು. ಭೀಮ್ಸಿಯೂ ಹುಸಿಮುನಿಸಿನ ಅಂಗ ಚೇಷ್ಟೆಯಿಂದ ಆದರಿಸುತ್ತಿದ್ದ. ಸೊಗಸು ಎಂದರೆ ರಜಾದಿನಗಳಲ್ಲಿಯೇ ಕೆನ್ ಶಾಲೆಯಲ್ಲಿ ವಿಶೇಷವಿರುತ್ತಿತ್ತು.

kenಆಗ ಶಾಲೆಯು ವ್ಯವಸ್ಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಪಡೆಯುತ್ತಿತ್ತು. ಅದಕ್ಕೆ ಮಾಸ್ತರ ಮಾರ್ಗದರ್ಶನ ಮಣಿಯವರ ಮುಂದಾಳತ್ವ ಇರುತ್ತಿತ್ತು. ಅಲ್ಲದೆ ಕಲಾಪರೀಕ್ಷೆಯ ಮೌಲ್ಯಮಾಪನ ರಜಾದಿನಗಳಲ್ಲಿ ಶುರುವಾಗುತ್ತಿತ್ತು. ಉತ್ತರ ಕರ್ನಾಟಕ ಭಾಗದಿಂದ ಮೌಲ್ಯಮಾಪಕರಾಗಿ ಬರುತ್ತಿದ್ದ ಅಧ್ಯಾಪಕರು ಮಾಸ್ತರನ್ನು ಕಾಣಲು ಸಂಜೆ ವೇಳೆಯಲ್ಲಿ ಬರುತ್ತಿದ್ದರು. ಕೆಲವರು ಶಾಲೆಯಲ್ಲೇ ಉಳಿಯುತ್ತಿದ್ದರು. ಶಾಲೆಯ ವಾತಾವರಣ ಸಡಗರದಿಂದ ಇರುತ್ತಿತ್ತು. ಶಾಲೆಯಲ್ಲಿ ಆಗಾಗ ರಾತ್ರಿ ಸುಮಾರು 9 ರಿಂದ 9:30 ಕ್ಕೆ ಗೋಷ್ಟಿ ನಡೆಯುತ್ತಿತ್ತು.

ಮಾಸ್ತರು ಅದಕ್ಕೆ ಅಣಿಯಾಗುತ್ತಿದ್ದ ರೀತಿಯೂ ವಿಶೇಷ. ನನಗಂತೂ ಅದೊಂದು ಬಗೆಯ “ರೌಂಡ್ ಟೇಬಲ್ ಕಾನ್ಪರೆನ್ಸ್”. ಏಕೆಂದರೆ ಮಾಸ್ತರ ಸೂಚನೆಯಂತೆ ತರಗತಿಯ ಕೊಠಡಿ ಇಲ್ಲವೆ ಆಫೀಸಿನ ಮುಂದಿನ ಜಾಗದ ಮಧ್ಯದಲ್ಲಿ ಒಂದು ಮೇಜನ್ನು ಇರಿಸಿ ಅದರ ಸುತ್ತಲೂ ಕುರ್ಚಿಗಳನ್ನು ಹಾಕುತ್ತಿದ್ದೆವು. ಮೇಜಿನ ಮೇಲೆ ಸುದ್ದಿ ಪತ್ರಿಕೆಯನ್ನು ಹರಡಿ ಅದರ ಮೇಲೆ ಅಂಗಡಿಯಿಂದ ತಂದ ಮೂರ್ನಾಲ್ಕು ಕೇಜಿ ಚುರುಮುರಿ (ಕಡಲೇ ಪುರಿ) ರಾಶಿ. ರಾಶಿಯ ಸುತ್ತ ಹಸಿಮೆಣಸಿನಕಾಯಿ, ಉಳ್ಳಾಗಡ್ಡಿ (ನೀರುಳ್ಳಿ) ಮೆಂತೆ ಸೊಪ್ಪಿನ ಕಟ್ಟು ಮತ್ತೆ ಬಿಸಿ ಬಿಸಿ ಬಜ್ಜಿಗಳು ಇಂತಹ ವ್ಯಂಜನಗಳು ಮಾಸ್ತರು ಮತ್ತು ಅತಿಥಿಗಳು ಅದರ ಸುತ್ತಕುಳಿತು ಸಭೆಯನ್ನು ಆರಂಭ ಮಾಡುತ್ತಿದ್ದರು.

ನಾವು ಅವರ ಹಿಂದೆ ಬಾಗಿಲಿನ ಮೆಟ್ಟಿಲುಗಳ ಮೇಲೆ ಅಥವಾ ಬೆಂಚಿನ ಮೇಲೆ ಅವರಿಂದ ಅದೂ ಇದೂ ಇಪ್ಪತ್ತೆಂಟು ಮಾತು. ಅಂದಂದಿನ ಆಸಕ್ತ ವಿಷಯದ ಓಘ, ಮುಕ್ತನಗು. ಮಧ್ಯೆ ಕೈ ಬಾಯಿಗೆ ಕೆಲಸ. ನಮಗೂ ತಿನ್ನಲು ಆದೇಶ ಹರಟೆಯ ಕೀಟಲೆ, ಗಂಭೀರ ಚರ್ಚೆ, ನಡುನಡುವೆ ಮತ್ತೊಂದು ವಿಷಯದ ಸಿದ್ಧತೆಗಾಗಿ ಸಣ್ಣ ಮೌನದ ತೆರಪು. ಗೋಷ್ಟಿಯಲ್ಲಿ ಎಲ್ಲಾ ರೀತಿಯ ವಿಷಯವು ಬರುತ್ತಿತ್ತು. ಇಂದಿರಾಗಾಂಧಿಯವರ ಆಡಳಿತ ವೈಖರಿ, ದೆಹಲಿಯ ಇಲ್ಲವೆ ರಾಜ್ಯದ ಕಲಾಚಟುವಟಿಕೆಯ ಬಗ್ಗೆ ಪಾಟಿಲ್ ಪುಟ್ಟಪ್ಪನವರ “ಪ್ರಪಂಚ”ದಲ್ಲಿ ಬಂದ ವ್ಯಕ್ತಿಯ ಬಗ್ಗೆ ನಿರ್ಬಂಧ ಹೇರಿದ ಸಿನಿಮಾ “ಆಂಧಿ” “ಕಿಸ್ಸ್ ಕುರ್ಸಿಕಾ” ಇತ್ಯಾದಿ ಸಿನೆಮಾ ಇಲ್ಲವೆ ಗಂಡು-ಹೆಣ್ಣಿನ ಲೈಂಗಿಕ ತೃಷೆ; ಹೀಗೆ ಅಷ್ಟಾಗಿ ಸೆನ್ಸಾರ್ ಆಗದ ವಿಷಯಗಳ ಮಾತಿನ ಕೂರಂಬುಗಳಿಗೆ ಸಿಕ್ಕಿ ಮೇಜಿನ ಮೇಲಿದ್ದ ಚುರುಮುರಿ ರಾಶಿಯು ತನ್ನ ಗಾತ್ರವನ್ನು ಕಳೆದುಕೊಂಡು ಸಮತಟ್ಟಾಗಲು ಪ್ರಾರಂಭಿಸಿದಾಗ ಹಿಂದಿರುತ್ತಿದ್ದ ನಮ್ಮೆಡೆಗೆ ತಿರುಗಿ ಮಾಸ್ತರು “ಚಾಯ್ ಇಲ್ಲಾ… ಬಾದಾಮಿ ಹಾಳು ತರಲು ಆಗುತ್ತದೇನು?” ಎಂದು ಕೇಳುತ್ತಾ ತಮ್ಮ ಎಡಗೈಯನ್ನು ಅಂಗಿ ಜೋಬಿಗೆ ಹಾಖುತ್ತಾ ಆಜ್ಞಾಪಿಸುತ್ತಿದ್ದರು.

ಮಾಸ್ತರು ಆದೇಶ ಬಂದ ಮೇಲೆ ಭೀಮ್ಸಿ, ನಾಣು, ಎ. ಡಿ. ಪತ್ತಾರ ಇಲ್ಲಾ ಮತ್ತಾರಾದರೂ ಒಂದಿಬ್ಬರು ತರಲು ತಯಾರಾಗುತ್ತಿದ್ದೆವು. ಕೆಲವು ಸಂದರ್ಭದಲ್ಲಿ ಮತ್ತೆ ಎರಡನೆ ಬಾರಿಗೆ ಚುರುಮುರಿ, ಬೊಂಡ/ಬಜ್ಜಿಗಳ ಸರಬರಾಜಿಗೂ ಅಥಿತಿಯನ್ನು ಒಳಗೊಂಡಂತೆ ಯಾರಿಂದಲಾದರೂ ಹಣ ಬಿಡುಗಡೆಯಾಗುತ್ತಿತ್ತು. ಅವೆಲ್ಲಾ ಬಂದಮೇಲೆ ಮತ್ತೊಂದು ಸುತ್ತು ಗೋಷ್ಟಿಯ ಆರಂಭ. ಈ ಮಧ್ಯೆ ನಾವು ಮಾಸ್ತಾರ ಅನುಮತಿ ಅಪೇಕ್ಷಿಸಿ ನಿದ್ದೆಗೆ ಜಾರುತ್ತಿದ್ದೆವು. ಮಾಸ್ತರ ಈ ಗೋಷ್ಟಿಯ ಆಪ್ತತೆ ಉಳಿದ ಅತಿಥಿ ಅಧ್ಯಾಪಕರ ಮೇಲೆ ಪ್ರಭಾವ ಬೀರಿ ಸ್ನೇಹ ಬೆಸೆಯುತ್ತಿತ್ತು. ನಮಗಂತೂ ಅನನ್ಯವಾದ ಜೀವನಾನುಭವವನ್ನು ಉಂಟುಮಾಡಿ ವಿಚಾರ ವಿವೇಕವನ್ನು ಬೆಳೆಸುತ್ತಿತ್ತು. ಶಾಲೆಯ ವಸತಿಯಲ್ಲಿದ್ದ ವಿದ್ಯಾರ್ಥಿಗಳು ಸೌಹರ್ದದಿಂದ ಅನ್ಯೋನ್ಯವಾಗಿರಲು ಮಾಸ್ತರ ಜೀವನ ಶೈಲಿ ಮಾದರಿ ಎಷ್ಟೋ ಸಂದರ್ಭದಲ್ಲಿ ಅವರು ನಮ್ಮೊಟ್ಟಿಗೆ ಒಂದೇ ಕಂಬಳಿಯ ಮೇಲೆ ಮಲಗಿ ಬದುಕುವ ಮೌಲ್ಯವನ್ನು ತೋರಿಸಿದ್ದಾರೆ.

ಕಲೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮಾಸ್ತರ ಗೀಳು. ಹಾಗೆಯೇ ಜನ ತಮ್ಮ ನಡವಳಿಕೆಯಲ್ಲಿ ಯಾವುದೋ ಪ್ರತಿಷ್ಟೆಗಳಿಂದ ಉದ್ದಟತನದಲ್ಲಿ ಬೀಗುವವರನ್ನು ಗದರಿಸಿ ಅವರು ಪಶ್ಚಾತಾಪ ಪಡುವಂತೆ ಮಾಡಿದ್ದೂ ಉಂಟು. ಈ ಅನುಭವ ಹಲವಾರು ಜನರಿಗಾಗಿರಬಹುದು. ಹೀಗೆ ಒಂದು ಸಂಜೆ ಹಡಪದ್ ಮಾಸ್ತರು ತಮ್ಮ ಕೆಲವು ವಿದ್ಯಾರ್ಥಿಗಳನ್ನು ಕರೆದು ಕೊಂಡು (ಶ್ಯಾಮ್, ಸುರೇಶ್, ನಾನು, ಮಣಿ, ರಾಮು, ಚಂದ್ರ [ಪಾಪು] ಇನ್ನು ಮುಂತಾದವರು) ಮಲ್ಲೇಶ್ವರದ ಕಡೆ ಹೊರಟರು. ಏಕೆಂದರೆ ಆ ದಿನ ಮಾಸ್ತರನ್ನು ಕಲೆಯ ಕುರಿತು ಪ್ರತ್ಯಕ್ಷ ರಚನೆ ನೀಡುವಂತೆ ಒಂದು ಸಂಸ್ಥೆಯು ಆಮಂತ್ರಿಸಿತ್ತು. (ಸಾಮಾನ್ಯವಾಗಿ ಇಂತಹ ಕಡೆ ಹೋಗುವಾಗ ಮಾಸ್ತರು ತಮ್ಮ ಕೆಲವು ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆದುಯ್ಯುತ್ತಿದ್ದರು)

Ken Schoolಆಹ್ವಾನ ನೀಡಿದ್ದ ಸಂಸ್ಥೆಯು (ಸಂಘವು) ಮಲ್ಲೇಶ್ವರದ ಸಂಪಿಗೆ ರಸ್ತೆಯ ಮಹಡಿಯ ಮೇಲೆ ಇತ್ತು. ಸಂಸ್ಥೆಯ ಹಜಾರದಲ್ಲಿ ಪ್ರತ್ಯಕ್ಷ ರಚನೆಗೆ ಸಿದ್ಧತೆಯಾಗಿತ್ತು. ಹಜಾರದಲ್ಲಿ ಸಿರಿವಂತ ಯುವಕ ಯುವತಿಯರು ಸೇರಿದ್ದರು. ಬಹುಶಹ ಅದು ಪ್ರತಿಷ್ಟಿತ ಸಂಸ್ಥೆಯ ಅಂಗ ಸಂಸ್ಥೆ ಇದ್ದಿರಬಹುದು. ಸಂಘದ ಕಾರ್ಯದರ್ಶಿ ಮತ್ತು ಉಳಿದಿಬ್ಬರು ಯುವಕರು ನಮ್ಮನ್ನು ಬರಮಾಡಿಕೊಂಡರು. ಅಲ್ಲಿ ನಮ್ಮನ್ನು ಸೇರಿ ಸುಮಾರು ಐವತ್ತು ಜನರಿದ್ದಿರಬಹುದು. ಸಂಘದ ಕಾರ್ಯದರ್ಶಿಯ ಔಪಚಾರಿಕ ಪರಿಚಯದ ಮಾತುಗಳ ನಂತರ ಮಾಸ್ತರು ಪ್ರತ್ಯಕ್ಷ ರಚನೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿಯನ್ನು ರೂಪದರ್ಶಿಯಾಗಿ ಆಯ್ದುಕೊಂಡರು. ಐದಾರು ನಿಮಿಷಗಳು ಕಳೆದವು. ಸಂಘದ ಯುವಕರು ಮೆಲ್ಲಗೆ ಹರಟೆಯನ್ನು ಶುರುಮಾಡಿದರು. ಅದು ಕ್ರಮೇಣ ಹೆಚ್ಚಾಯಿತು. ನಾವು ಸುಮ್ಮನೆ ಗಮನಿಸುತ್ತಿದ್ದೆವು. ಸದಸ್ಯರ ಮಾತುಗಳು ಕೇಕೆಯ ಮಟ್ಟವನ್ನು ತಲುಪಲಾರಂಭಿಸಿತು. ನನಗೋ ಅಚ್ಚರಿ! ಮಾಸ್ತರು ಏಕೆ ಸುಮ್ಮನಿದ್ದಾರೆ? ಅವರಿಗೆ ಯಾಕೆ ಪ್ರತಿಕ್ರಿಯಿಸುತ್ತಿಲ್ಲವೆಂದು ತಿಳಿಯಲಿಲ್ಲ. ನನಗೆ ಸದಸ್ಯರ ವರ್ತನೆ ಅತಿ ಎನಿಸುತ್ತಿತ್ತು. ಮಾಸ್ತರು ಏಕೆ ಈ ಕಾರ್ಯವನ್ನು ಒಪ್ಪಿಕೊಂಡರೋ ಎಂದುಕೊಳ್ಳತೊಡಗಿದೆ. ಸುಮಾರು 40-45 ನಿಮಿಷಗಳಲ್ಲಿ ಪ್ರತ್ಯಕ್ಷ ರಚನೆಯನ್ನು ಮಾಸ್ತರು ಮುಗಿಸಿದರು. ರೂಪದರ್ಶಿಯಾಗಿ ಕುಳಿತಿದ್ದ ಕಾರ್ಯದರ್ಶಿ ಎದ್ದು ಬಂದು ತನ್ನ ಭಾವಚಿತ್ರವನ್ನು ನೋಡಿ ಮಾಸ್ತರಿಗೆ ಅಭಿನಂದಿಸಿದನು. ಅವನ ಭಾವಚಿತ್ರ ಚೆನ್ನಾಗಿ ಮೂಡಿ ಬಂದಿತ್ತು. ಸಭೆಯಲ್ಲಿನ ಜನ ಚಪ್ಪಾಳೆಯಿಂದ ಅವರ ಮೆಚ್ಚುಗೆಯನ್ನು ತೋರ್ಪಡಿಸಿದರು. ಸಂಘದ ಕಾರ್ಯದರ್ಶಿಯು ನಾಲ್ಕು ಮಾತಾಡಲು ಮಾಸ್ತರಿಗೆ ಆಮಂತ್ರಿಸಿದ.

ಮಾಸ್ತರು ಮಾತು ಪ್ರಾರಂಭಿಸಿದರು. ಅದು ಇಂಗ್ಲಿಷ್‍ನಲ್ಲಿ ಸಭೆಯಲ್ಲಿ ಹರಟೆ ಹೊಡೆಯುತ್ತಿದ್ದವರು ಮೆತ್ತಗಾದರು. ಆನಂತರ ಇಡೀ ಹಜಾರ ಮೌನವಾಯಿತು. ನನಗೆ ಅಷ್ಟಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಈಗಲೂ ಸಹ ನನಗೆ ಅದು ತೊಡಕಾಗಿಯೇ ಇದೆ ಎಂದರು. ಇಂತಹ ಕೆಲವು ಸಾಲುಗಳು ಮಾತ್ರ ಸ್ವಲ್ಪ ಅರ್ಥವಾಯಿತು. ಮಾಸ್ತರ ಮಾತುಗಳಿಗೆ ಗೆಳೆಯ ಸುರೇಶ್ ಒಪ್ಪಿಗೆಯಿಂದ ತಲೆದೂಗಿಸುತ್ತಿದ್ದ. ಮಾಸ್ತರು ಮಾತಾಡಿದನಂತರ ಸಂಘದ ಕಾರ್ಯದರ್ಶಿಯ ಸಹಿತ ಕೆಲವು ಯುವಕರು ಹಡಪದ್ ಮಾಸ್ತರನ್ನು ಕ್ಷಮೆ ಕೇಳಿ ಪರಿತಪಿಸಿದರು. ಮಾಸ್ತರು ಕಲಾವಿದರನ್ನು ನಡೆಸಿಕೊಳ್ಳುವ ಸಂಸ್ಕøತಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ಈ ರೀತಿ ಮಾಸ್ತರು ಪರಿಸ್ಥಿತಿಯನ್ನು ಎದುರಿಸಿ ತಮ್ಮ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ್ದರು.

ಶಾಲೆಯಲ್ಲಿ ಆಗಾಗ ಘಟಿಸುತ್ತಿದ್ದ ವಸ್ತುಗಳ ಕಳ್ಳತನದ ಬಗ್ಗೆ ಮಾಸ್ತರಿಗೆ ನೋವಿತ್ತು. ಈ ವಿಷಯದ ಕುರಿತು ಅವರು ಆಪ್ತರಲ್ಲಿ ಪೇಚಾಡಿಕೊಂಡಿದ್ದರು. ಹಾಗೆಯೇ ನಾನು ಮತ್ತು ತಪಶೆಟ್ಟಿಯವರ ಬಳಿಯೂ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ನಾವಿಬ್ಬರೂ ನೀವು ವ್ಯಕ್ತಿಗಳನ್ನು ಕಂಡು ಹಿಡಿದು ಅವರ ಬಗ್ಗೆ ನಿರ್ದಾಕ್ಷಣವಾಗಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ಹೇಳಿದೆವು. ಆಗ ಮಾಸ್ತರು ಕಳ್ಳತನ ಮಾಡುತ್ತಿರುವವರ ಬಗ್ಗೆ ಗೊತ್ತಿರುವುದಾಗಿಯೂ; ಅವರು ಇಂದಲ್ಲಾ ನಾಳೆ ತಮ್ಮ ತಪ್ಪಿನ ಅರಿವಾಗಿ ಸುಧಾರಿಸುತ್ತಾರೆಂದು ಭರವಸೆ ಇರುವುದಾಗಿ ಹೇಳಿದರು. ನಾನು ಗೆಳೆಯ ಸೆಟ್ಟಿಯವರ ಮುಖ ನೋಡಿದೆ. ಮಾಸ್ತರು “ಮುಖ್ಯವಾಗಿ ಅವರು ಜಾಗೃತವಾಗಬೇಕು. ನನ್ನ ಚಿಂತೆ ಅವರ ತುಡುಗುತನ ವಿಪರೀತವಾಗಿ ಆ ವ್ಯಕ್ತಿಗೆ ಕೆಟ್ಟ ಹೆಸರು ಬರುವಂತಾಗಬಾರದು” ಎಂದು ಮರುಗಿದರು. ಅವರು ವಿದ್ಯಾರ್ಥಿಯ ಹೆಸರನ್ನು ನಮಗೆ ತಿಳಿಸಲೇ ಇಲ್ಲ. ಆ ವಿದ್ಯಾರ್ಥಿಯ ಬಗ್ಗೆ ಅನುಕಂಪ ಪಡುವುದು ನನಗೆ ಅಚ್ಚರಿ ಎನಿಸಿತು. ನಾನು ಮಾಸ್ತರ ಈ ಮಾತನ್ನು ಒಪ್ಪಲಿಲ್ಲ. ಅದು ಅವರ ಅಸಹಾಯಕತೆ ಇರಬೇಕು ಎಂದು ಮನಸ್ಸಿನಲ್ಲಿ ಅಂದು ಕೊಂಡು ಸುಮ್ಮನಾದೆ.

R.M.Hadapad-of-Ken-Schoolಮುಂದೆ ಹಲವು ವರ್ಷಗಳಾದ ಮೇಲೆ (1985 ರ ಸುಮಾರಿನಲ್ಲಿ. ಆಗ ನಾಣು ಕೆನ್‍ಶಾಲೆ ಬಿಟ್ಟು ಬರೋಡದಲ್ಲಿ ಕಲಿಯುತ್ತಿದ್ದ ಅಂತಿಮ ವರ್ಷಗಳು) ಮಾಸ್ತರು ಹೇಳಿದ ಮಾತುಗಳು ಇದ್ದಕ್ಕಿದಂತೆ ನೆನಪಾಯಿತು. ಕಾರಣ ಒಂದು ದಿನ ಜೆನ್ ಕಥೆಗಳನ್ನು ಓದುತ್ತಿದ್ದಾಗ, ಮಾಸ್ತರ ಈ ದೊಡ್ಡ ಗುಣದ ಬಗ್ಗೆ ನನಗೆ ಪರಿಚಯವಾಯ್ತು. ಆ ಕಥೆಯ ಸಾರಾಂಶ ಹೀಗಿದೆ.

ಒಬ್ಬ ಜೆನ್ ಗುರುವಿನ ಮಠದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುತ್ತಾರೆ. ಕಾಲಾಂತರದಲ್ಲಿ ಆ ಮಠಕ್ಕೆ ಒಬ್ಬ ತುಡುಗು ವಿದ್ಯಾರ್ಥಿಯು ಸೇರಿಕೊಳ್ಳುತ್ತಾನೆ. ಆ ನಂತರದ ದಿನಗಳಲ್ಲಿ ಉಳಿದ ಶಿಷ್ಯರ ವಸ್ತುಗಳು ನಿಯಮಿತವಾಗಿ ಕಾಣೆಯಾಗಲು ಶುರುವಾಗಿ ಅದು ವಿಪರೀತವಾಗುತ್ತದೆ. ಶಿಷ್ಯರೆಲ್ಲಾ ಗುರುವಿನ ಬಳಿ ಹೋಗಿ ಕಳ್ಳ ವಿದ್ಯಾರ್ಥಿಯ ಮೇಲೆ ದೂರು ಹೇಳಿ ತಮ್ಮ ಕಷ್ಟವನ್ನು ನಿವಾರಿಸಲು, ಆ ಕಳ್ಳ ಶಿಷ್ಯನನ್ನು ಮಠದಿಂದ ಹೊರಹಾಕಲು ಆಗ್ರಹಿಸುತ್ತಾರೆ. ಕಳ್ಳ ಶಿಷ್ಯನಿಗೂ ತಾನು ಆಪತ್ತಿಗೆ ಸಿಕ್ಕಿ ಬಿದ್ದಿರುವುದು ವೇದ್ಯವಾಗುತ್ತದೆ. ಜೆನ್ ಗುರುವು ದೂರು ನೀಡಿದ ಶಿಷ್ಯರನ್ನು ಕುರಿತು – ನೀವೆಲ್ಲಾ ಒಳ್ಳೆಯ ಸಂಸ್ಕಾರ ಪಡೆದ ಸುಸಂಸ್ಕøತರು. ಆದರೆ ಆ ಶಿಷ್ಯನಿಗೆ ಅವನ ತಪ್ಪಿನ ಅರಿವಿಲ್ಲ. ಈಗ ಅವನನ್ನು ಮಠದಿಂದ ಹೊರ ಹಾಕಿದರೆ ಅವನು ಸಮಾಜದಲ್ಲಿ ಇದೇ ಕೆಲಸವನ್ನು ಮುಂದುವರಿಸುತ್ತಾನೆ. ಆದ್ದರಿಂದ ಸಮಾಜಕ್ಕೂ ಅಪಾಯ. ನಮ್ಮ ಮಠಕ್ಕೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ನೀವೇ ಅನುಸರಿಸಿಕೊಂಡರೆ ಒಳಿತು ಎಂದು ಹೇಳುತ್ತಾರೆ. ಉಳಿದ ಶಿಷ್ಯರು ಅದಕ್ಕೆ ಒಪ್ಪಲು ಸಾಧ್ಯವಿಲ್ಲವೆಂದು ಖಂಡಿತವಾಗಿ ಹೇಳಿದಾಗ ಜೆನ್ ಗುರು, ಹಾಗಾದರೆ ನೀವು ಇದೇ ಮಠದಲ್ಲಿ ಇರಿ. ನಾನು ಆ ಪ್ರಿಯ ಶಿಷ್ಯನೊಂದಿಗೆ ಮಠ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾನೆ.

ಈ ಸಂಭಾಷಣೆಯನ್ನು ಮರೆಯಲ್ಲಿ ನಿಂತು ಆತಂಕದಿಂದ ಕೇಳುತ್ತಿದ್ದ ಕಳ್ಳ ಶಿಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರಿ ಅವನ ಮನಸ್ಸು ಪರಿವರ್ತನೆಗೊಳ್ಳುತ್ತದೆ. ಅವನು ಎಲ್ಲರ ಸಮ್ಮುಖದಲ್ಲಿ ಗುರುಗಳಿಗೆ ಶರಣಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮುಂದೆ ಅವನು ಜೆನ್ ಗುರುವಿನ ಆಪ್ತ ಶಿಷ್ಯರಲ್ಲಿ ಒಬ್ಬನಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಿ ಮುಂದೆ ಆ ಮಠದ ಉತ್ತರಾಧಿಕಾರಿಯೂ ಆಗುತ್ತಾನೆ. ಈ ಕಥೆ ಓದಿದ ಮೇಲೆ ನನಗೆ ಮೇಲಿಂದ ಮೇಲೆ ಮಾಸ್ತರ ಬಗ್ಗೆ ಯೋಚಿಸುವಂತೆ ಮಾಡಿತು. ನಮ್ಮ ಮಾಸ್ತರೂ ಸಹ ನಮ್ಮಗಳ ನಡುವೆ ಇದ್ದ ನಾವು ಅರಿಯಲಾರದ ಒಬ್ಬ ಸಂತ ಮನೋಭಾವದ ಕಲಾಗುರು.

One Response to "ಹಡಪದ್ ಮಾಸ್ತರು -5 : ಸಂತ ಮನೋಭಾವದ ಕಲಾಗುರು"

  1. Suprith CY  July 15, 2016 at 2:24 pm

    Article thumbha channagide sir, e article odidare namagu hadapa sir jothe edda anubava vaaguthade…
    Thanks for the article…

    Reply

Leave a Reply

Your email address will not be published.