ಹಂಪಿಯ ಮಣ್ಣಲ್ಲಿ ಕರಗಿದ ಹಾಲೆಂಡಿನ ಕಲಾವಿದ ರಾಬರ್ಟ್ ಗೀಸಿಂಗ್

-ಅರುಣ್ ಜೋಳದಕೂಡ್ಲಿಗಿ.

ಆ ದಿನದ ಕೆಲಸ ಮುಗಿಸಿ ಸೂರ್ಯ ಮಿಶ್ರಮಿಸುವಂತೆ ನಿಧಾನಕ್ಕೆ ಇಳಿಯುತ್ತಿದ್ದ, ಹಂಪಿಯ ಕಲ್ಲುಬಂಡೆಗಳು ಮಳೆಗೆ ತಂಪುಹೊದ್ದು ಮುದುಡಿದಂತಿದ್ದವು. ಪ್ರವಾಸಿಗರಿಲ್ಲದೆ ಸೆಕ್ಯುರಿಟಿಗಳು ಮೊಬೈಲಿನಲ್ಲಿ ಹಳೆಯ ಸಾಂಗ್ ಕೇಳುತ್ತಾ ತನ್ನ ಗುನುಗುವಿಕೆಯನ್ನು ಹಾಡಿನ ಜತೆ ತಳಕು ಹಾಕುತ್ತಿದ್ದರು. ಈ ಇಳಿಸಂಜೆ ಹೊತ್ತಲ್ಲಿ ನನ್ನ ಬೈಕು ರಾಬರ್ಟ್ ಮನೆಯ ಮುಂದೆ ನಿಂತಾಗ, ಹಿಂದಿನ ನೆನಪುಗಳೆಲ್ಲ ಒಮ್ಮೆಲೆ ಆವರಿಸಿದಂತಾಯಿತು. ಜೈನಿಭಾಯಿ ಅವರು ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡು ಆರ್ಟ್ ಗ್ಯಾಲರಿ ನೋಡಲು ಹೇಳಿದರು. ಆರ್ಟ್ ಗ್ಯಾಲರಿಗೆ ಹೋದ ನಂತರ ಹಿಂದೆ ಗೆಳೆಯ ರವಿನಾಯಕ ಜತೆ ಬಂದಾಗ ರಾಬರ್ಟ್ ಅವರು ಧ್ಯಾನದಂತೆ ಕಲಾಕೃತಿಯೊಂದನ್ನು ರಚಿಸುತ್ತಾ ಕೂತಿದ್ದ ಚಿತ್ರ ಕಣ್ಮುಂದೆ ಬಂತು. ಕಲಾಕೃತಿಗಳು ರಾಬರ್ಟ್ ಅವರನ್ನು ನೆನಪಿಸಿಕೊಂಡು ಕಳೆಗುಂದಿದಂತೆ ಭಾಸವಾಯಿತು. ರಾಬರ್ಟ್ ಅವರ ಎರಡನೇ ಮಗಳು ಕಿಮ್ ತನ್ನ ತಂದೆಯ ಒಡನಾಟದ ನೆನಪುಗಳನ್ನು ಮುಗ್ದತೆಯಿಂದಲೂ, ಪ್ರತಿ ಕ್ಷಣ ತಂದೆಯನ್ನು ಮಿಸ್ ಮಾಡಿಕೊಳ್ಳುವ ಭಾವಪರವಶತೆಯಲ್ಲಿಯೂ ತಡೆತಡೆದು ತಂದೆಯ ಬಗೆಗೆ ಹೇಳುತ್ತಾ ಹೋದಳು. ಇತ್ತ ಸೂರ್ಯಮುಳುಗಿ ನಿಧಾನಕ್ಕೆ ಕತ್ತಲಾವರಿಸುತ್ತಿತ್ತು.
**
ನವೆಂಬರ್ 24 ರಂದು ತೀವ್ರ ಉಸಿರಾಟದ ತೊಂದರೆಯಿಂದ ರಾಬರ್ಟ್ ಗೀಸಿಂಕ್ (ಖobeಡಿಣ ಉeesiಟಿಞ) ನಿಧನರಾದಾಗ ತನ್ನ ಪತ್ನಿ ಜೈನಿಭಾಯಿ ಮಕ್ಕಳಾದ ಪೂಜ, ಕಿಮ್, ಸಿಂಧು, ಆದಿಲ್ ನಾಲ್ಕು ಮಕ್ಕಳನ್ನು ಅಗಲಿದ್ದರು. ರಾಬರ್ಟ್ ವಿದೇಶಿಯಾದ ಕಾರಣ ಹಂಪಿಯ ಪೋಲಿಸರು ಕೇಸ್ ದಾಖಲಿಸಿಕೊಂಡು ಭಾರತದ ರಾಯಭಾರಿ ಕಛೇರಿಗೆ ಮಾಹಿತಿಯನ್ನು ರವಾನಿಸಿದ್ದರು. ಹಾಲೆಂಡಿನಲ್ಲಿದ್ದ ತಂಗಿ ನೆಲ್ಲೆಕ ಅವರು ರಾಯಭಾರ ಕಛೇರಿಯನ್ನು ಸಂಪರ್ಕಿಸಿ, ರಾಬರ್ಟ್ ಹಂಪಿಯಲ್ಲಿಯೇ ಕೊನೆಯುಸಿರೆಳೆಯಬೇಕು, ಇಲ್ಲಿಯೇ ಮಣ್ಣಾಗಬೇಕೆಂದು ಬಯಸಿದ್ದರು. ಹಾಗಾಗಿ ಇಲ್ಲಿಯೇ ಮಣ್ಣು ಮಾಡಿ ಎಂದು ಸಂದೇಶ ರವಾನಿಸಿದ್ದರು. ರಾಬರ್ಟ್ ತಾನು ಬದುಕಿದ್ದಾಗಲೆ ಪತ್ನಿ ಜೈನಿಭಾಯಿಗೆ ತನ್ನನ್ನು ಹಂಪಿಯಲ್ಲಿಯೇ ಸಂಸ್ಕಾರ ಮಾಡಿ ಅಸ್ಥಿಯನ್ನು ಹಂಪಿಯ ಹೊಳೆಯಲ್ಲಿ ಬಿಡಬೇಕೆಂದಿದ್ದರು. ಹೀಗೆ ರಾಬರ್ಟ್ ಅವರ ಆಸೆಯಂತೆ ಅವರ ಅಸ್ಥಿಯನ್ನು ಹಂಪಿ ಹೊಳೆಯಲ್ಲಿ ಬಿಡಲಾಯಿತು. ಹೀಗೆ ಹಾಲೆಂಡಿನಲ್ಲಿ ಹುಟ್ಟಿ ಹಂಪಿಯಲ್ಲಿ ಕರಿಗಿದ ರಾಬರ್ಟ್ ಅವರು ಹಂಪಿಗೆ ಬರುವ ವಿದೇಶಿಗರಲ್ಲಿಯೇ ಭಿನ್ನವಾಗಿ ನಿಲ್ಲುತ್ತಾರೆ.
**
ನಾನು ಹಲವು ಬಾರಿ ರಾಬರ್ಟ್ ಅವರನ್ನು ಬೇಟಿ ಮಾಡಿದ್ದೆ. ಆಗೆಲ್ಲಾ ಅವರು ಸದಾ ಕಲೆಯ ಗುಂಗಿನಲ್ಲಿ ಸಿಗರೇಟ್ ಎಳೆಯುತ್ತಾ ಬಣ್ಣದ ಒಡನಾಟದಲ್ಲೆ ಇರುತ್ತಿದ್ದರು. ನನಗೆ ಅವರ ಚಿತ್ರಗಳಲ್ಲಿ ಮತ್ತೆ ಮತ್ತೆ ಆಪ್ತವಾಗುವುದು ಒಳ್ಳೆಯ ತಂದೆಯ ಚಿತ್ರಗಳು. ತನ್ನ ಪುಟಾಣಿ ಟಿವಿಎಸ್ ಎಕ್ಸೆಲ್ ಗಾಡಿಯಲ್ಲಿ ತನ್ನ ನಾಲ್ಕು ಮಕ್ಕಳನ್ನು ಕೂರಿಸಿಕೊಂಡು ಕಮಲಾಪುರಕ್ಕೆ ಬರುವಾಗಲೆಲ್ಲಾ ಕಿಂದರಿಜೋಗಿಯಂತೆ ಕಾಣುತ್ತಿದ್ದರು. ಕಮಲಾಪುರದ ಜನರು ರಾಬರ್ಟ್‍ರನ್ನು ಅನುಗಾಲದ ಬಂಧುವಂತೆ ಕೆಲವರು ಮಾತನಾಡಿಸಿದರೆ, ಮತ್ತೆ ಕೆಲವರು ಎಂಥದೋ ಕುತೂಹಲದಲ್ಲಿ ರಾಬರ್ಟ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಸದಾ ನಾಲ್ಕು ಜನ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಕಮಲಾಪುರ ಹಂಪಿಯಲ್ಲಿ ರಾಬರ್ಟ್ ನಡೆದಾಡುವುದನ್ನು ನೋಡುವುದೇ ವಿಶಿಷ್ಠ ಅನುಭವವನ್ನು ನೀಡುತ್ತಿತ್ತು.

ರಾಬರ್ಟ್ ಅವರಿಗೆ ಹಂಪಿಯು ಎಂದೂ ಮುಗಿಯದ ಆಕರ್ಷಕ ಸೆಳೆತವಾಗಿತ್ತು. ಪ್ರತಿ ಕಲ್ಲುಕಲ್ಲಿಗೂ, ಪ್ರತೀ ಮಂಟಪಗಳಿಗೂ ಇವರ ಪರಿಚಯವಿತ್ತು, ಕಾರಣ ಸುಮಾರು ಮುವತ್ತು ವರ್ಷಗಳ ಕಾಲ ಹಂಪಿಯ ಯಾವೊಂದು ಪ್ರದೇಶವೂ ಇವರಿಗೆ ಅಪರಿಚಿತವಾಗಿರಲಿಲ್ಲ. ಹಾಗಾಗಿ ಇವರ ಒಳಗೆ ಹಂಪಿ ಕರಗಿ ಗಟ್ಟಿಯಾದಂತಹ ಭಾವವೊಂದು ಸದಾ ಜಾಗೃತವಾಗಿತ್ತು. ಇಷ್ಟಿದ್ದೂ ಹಂಪಿಯ ಭಾಗದ ಪೋಲೀಸರು ಪಾಸ್‍ಪೋರ್ಟ್, ವೀಸಾ ವಿಷಯವಾಗಿ ಸದಾ ಕಿರುಕುಳ ಕೊಡುತ್ತಾ ಮಾಮೂಲು ವಸೂಲಿ ಮಾಡುತ್ತಿದ್ದ ಬಗ್ಗೆ ನೊಂದು ಮಾತನಾಡುತ್ತಿದ್ದರು. ರಾಬರ್ಟ್ ಬಂದ ಸಮಯದಲ್ಲಿ ಮುಕ್ತವಾಗಿದ್ದ ಹಂಪಿ ಈಗಿಲ್ಲ, ವಿಶ್ವಪರಂಪರೆಯ ಪಟ್ಟಿಗೆ ಸೇರಿದ ಕಾರಣಕ್ಕೆ ಹಂಪಿಯ ಪ್ರವಾಸ ಎನ್ನುವುದು ವಿಪರೀತ ನಿಯಂತ್ರಣಕ್ಕೆ ಒಳಗಾಗಿದೆ, ಎಂದು ಈ ಬದಲಾವಣೆಯ ಬಗ್ಗೆ ಗೀಸಿಂಕ್ ಹಂಪಿ ಪ್ರವಾಸಿಗರನ್ನು ನಿಯಂತ್ರಿಸಬಾರದು ಅದು ಮುಕ್ತವಾಗಿರಬೇಕು ಎನ್ನುವುದು ಇವರ ಅಭಿಮತವಾಗಿತ್ತು. ಹೀಗೆ ಹಂಪಿಯ ಜತೆ ಜೀವವನ್ನು ಬೆಸೆದುಕೊಂಡು ಇಲ್ಲಿಯೇ ತನ್ನ ಕೊನೆಯಿಸಿರೆಳೆದ ಗೀಸಿಂಕ್ ಅವರ ಬದುಕಿನ ಪುಟಗಳನ್ನು ತೆರೆದರೆ ಅಲೆಮಾರಿತನದ ಬದುಕಿನ ದೊಡ್ಡ ಪಯಣವೇ ಇದೆ.
**
ಅಲೆಮಾರಿಯಾಗಿ ಜಗತ್ತನ್ನು ಸುತ್ತಿ ಕೊನೆಗೆ ಹಂಪಿಯಲ್ಲಿ ನೆಲೆಗೊಂಡ ಗೀಸಿಂಕ್ ಕತೆಯೇ ಒಂದು ರೋಮಾಂಚನಕಾರಿ ಅನುಭವ. ಜಗತ್ತಿಗೆ ವಿನ್ಸೆಂಟ್ ವ್ಯಾನ್‍ಗೋ, ರೇಬ್ರಾಂಟ್ ರಂತಹ ಮಹತ್ವದ ಕಲಾವಿದರನ್ನು ಕೊಟ್ಟ ಡಚ್ ನಾಡಾದ ಹಾಲೆಂಡ್‍ನ ರಾಜಧಾನಿ ಆಮ್‍ಸ್ಟರ್‍ಡ್ಯಾಂ ನಗರದಲ್ಲಿ ರಾಬರ್ಟ್ ಜನವರಿ 29, 1943 ರಲ್ಲಿ ಜನಿಸಿದರು. ತಂದೆಯಾಯಿಗಳು ನಗರದಲ್ಲಿ ಮಧ್ಯಮವರ್ಗದ ಉತ್ತಮ ಮನೆಯನ್ನು ಹೊಂದಿದ್ದರು. ಹೀಗಾಗಿಯೇ ಬಾಲ್ಯದಲ್ಲಿ ರಾಬರ್ಟ್ ತಂದೆತಾಯಿಯ ಮಮತೆಯ ಮಡಿಲಲ್ಲಿ ಮನೆಯೊಳಗಿದ್ದೇ ಬೆಳೆಯಬೇಕಾಯಿತು. ಹೊರಗೆ ಗಿಜಿಗಿಡುವ ನಗರದಲ್ಲಿ ಆಟ ಆಡಬೇಕೆಂಬ ಗೀಸಿಂಕ್ ಕನಸನ್ನು ಅಕ್ಕರೆಯ ಬಂಧನ ಸಾಧ್ಯವಾಗಿಸುತ್ತಿರಲಿಲ್ಲ. ಅಚಾನಕ್ ಬಾಲ್ಯದಲ್ಲಿಯೇ ಭಾರತದ ಆಟಿಕೆ ಸಾಮಾನುಗಳು ಗೀಸಿಂಕ್‍ಗೆ ಮನೆಯಲ್ಲಿ ಸಿಕ್ಕಿದ್ದವು. ಆಗಲೆ ಮೊದಲಬಾರಿಗೆ ಇಂಡಿಯನ್ ಡಾಲ್ಸ್ ಎನ್ನುವ ಜೋಡಿಪದದಲ್ಲಿ ಇಂಡಿಯಾ ಪದ ರಾಬರ್ಟ್ ಕಿವಿಗೆ ಬಿದ್ದಿತ್ತು.

ಮನೆಯಲ್ಲಿ ಕಲಾಪರಂಪರೆಯ ವಾತಾವರಣವಿತ್ತು. ಕಾರಣ ಗೀಸಿಂಕ್‍ರ ತಂದೆ ಒಬ್ಬ ಕಮರ್ಷಿಯಲ್ ಕಲಾವಿದ. ಮನೆ ಕಲಾ ಸಾಮಗ್ರಿಗಳಿಂದ ತುಂಬಿ ತುಳುಕುತ್ತಿತ್ತು. ಆಗಲೆ ಗೀಸಿಂಕ್‍ಗೆ ಬಾಲ್ಯದ ಆಟಿಕೆಗಳಾಗಿಯೇ ಬಣ್ಣ, ಬ್ರಷ್‍ಗಳು ಒಡನಾಡಿಗಳಾದವು. ಸಹಜವಾಗಿ ಇದರ ಪರಿಣಾಮ ರಾಬರ್ಟ್ ಮನಸ್ಸಿನ ಮೇಲಾಯಿತು. ಇವರ ತಂಗಿ ನೆಲ್ಲೆಕ ಬಾಲ್ಯದಲ್ಲಿಯೇ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದಳು. ಹೀಗೆ ಅಣ್ಣ ತಂಗಿ ರೇಖಾಚಿತ್ರ ಬಿಡಿಸುವಲ್ಲಿ ಸ್ಪರ್ಧೆಗೆ ಬಿದ್ದಂತೆ ಕ್ರಿಯಾಶೀಲವಾಗಿದ್ದರು. ಹೀಗಾಗಿ ರಾಬರ್ಟ್ ಅವರಲ್ಲಿ ಕಲೆಯ ಬೀಜ ಮೊಳೆಯಲು ಮನೆಯೇ ಫಲವತ್ತಾದ ನೆಲವಾಯಿತು. ತಂದೆಯೇ ಮೊದಲ ಗುರುವಾದರು.

ರಾಬರ್ಟ್ ಆರಂಭಕ್ಕೆ ತಮ್ಮ ತಂದೆಯ ಸ್ಟುಡಿಯೋದಲ್ಲಿ (ಚಿತ್ರ ಆಟಿಕೆಗಳಿದ್ದು) ಗ್ರಾಪಿsಕ್ ಕಲಾವಿದನಾಗಿ ಹಲವು ಪ್ರಯೋಗಗಳನ್ನು ಮಾಡಿದರು. ಮುಂದೆ ಬ್ಯುಜಿನೆಸ್ ಏಜನ್ಸಿಯೊಂದರಲ್ಲಿ ದುಡಿದರು. ಒಂದೆಡೆ ನೆಲೆನಿಂತು ಜಿಡ್ಡುಗಟ್ಟುವ ಸ್ವಭಾವ ರಾಬರ್ಟ್‍ಗೆ ಇಡಿಸದ ಕಾರಣ ಮತ್ತೆ ಪ್ಯಾರಿಸ್‍ನತ್ತ ಪಯಣ ಬೆಳೆಸಿದರು. ಯುರೋಪ್‍ನ ಕಲಾನಗರಿ ಪ್ಯಾರಿಸ್ಸಿನಲ್ಲಿ ಇಲ್ಲಸ್ಟ್ರೇಟರ್‍ರಾಗಿ ಕೆಲಕಾಲ ಕೆಲಸ ಮಾಡಿದರು. ನಿಧಾನಕ್ಕೆ ದೊಡ್ಡ ನಗರ ಹುಸಿರುಕಟ್ಟಿಸುವ ಅನುಭವವಾಗತೊಡಗಿತು. ನಂತರ ರಾಬರ್ಟ್ ಅಪರೂಪದ ಲ್ಯಾಂಡ್‍ಸ್ಕೇಪ್ ಹೊಂದಿದ್ದ ದಕ್ಷಿಣ ಫ್ರಾನ್ಸ್‍ಗೆ ಪಯಣ ಬೆಳೆಸಿದರು. ಅಲ್ಲಿನ ಸ್ಪಾನಿಷ್ ನಡುಗಡ್ಡೆಯಾಗಿರುವ ವಿಜಾಃ ಅತ್ಯಂತ ರಮಣೀಯ ಸ್ಥಳ ಎಂದು ರಾಬರ್ಟ್ ಮತ್ತೆ ಮತ್ತೆ ನೆಪಸಿಸಿಕೊಳ್ಳುತ್ತಿದ್ದರು.

ಪ್ಯಾರಿಸ್‍ನಲ್ಲಿದ್ದಾಗ ನೈಟ್‍ಕ್ಲಬ್‍ಗಳಲ್ಲಿ ಸಂಗೀತ ನುಡಿಸುತ್ತಿದ್ದರು. ಇಂತಹ ರಾತ್ರಿ ಕ್ಲಬ್‍ಗಳಲ್ಲಿ ಸಂಗೀತ ನುಡಿಸುವುದು ಗೀಸಿಂಕ್ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ಇಂತಹ ಪಾರ್ಟಿಗಳಲ್ಲಿ ಹಲವರು ಸಂಪರ್ಕಕ್ಕೆ ಬಂದರು. ಹೀಗೆ ಪರಿಚಯವಾದ ಎಲ್ ಮ್ಯಾಗ್‍ಜಿನ್‍ನ ಕಲಾ ನಿರ್ದೇಶಕ ಪತ್ರಿಕೆಗೆ ಇಲ್ಲ ಸ್ಟ್ರೇಟರ್‍ರಾಗಿ ರೇಖಾಚಿತ್ರಗಳನ್ನು ರಚಿಸುವ ಅವಕಾಶ ಕೊಟ್ಟರು. ಇದು ರಾಬರ್ಟ ಬದುಕಿನಲ್ಲಿ ಕಲಾ ಆಸಕ್ತಿಗೆ ಸಿಕ್ಕ ದೊಡ್ಡ ಜಿಗಿತ ಎಂದು ಅವರು ನೆನೆಯುತ್ತಿದ್ದರು. ಇಲ್ಲಿಯೂ ತುಂಬಾ ದಿನ ಕೆಲಸ ಮಾಡಲಾಗಲಿಲ್ಲ. ಮ್ಯಾಗಜಿನ್‍ನ ಕಲಾನಿರ್ದೇಶಕರು ಬದಲಾಗಿ ಮ್ಯಾಗಜಿನ್‍ಗೆ ಅಮೆರಿಕನ್ ಶೈಲಿಯ ಚಿತ್ರ ವಿನ್ಯಾಸದ ಬೇಡಿಕೆ ಇಟ್ಟರು. ಅದಕ್ಕೆ ಗೀಸಿಂಕ್ ಒಪ್ಪದೆ ಅಲ್ಲಿ ಕೆಲಸ ಬಿಟ್ಟರು. ಈ ಅನುಭವದಿಂದ ಅವರು ಮತ್ತೊಬ್ಬರ ಕೈಕೆಳಗೆ ದುಡಿಯದಿರಲು ನಿರ್ಧರಿಸಿದರು. ಈ ನಿರ್ಧಾರ ಅವರ ಕಲಾಕೃತಿಗಳ ರಚನೆಯಲ್ಲಿ ಇನ್ನಷ್ಟು ಗಂಭೀರವಾಗಿ ತೊಡಗಿಸಿಕೊಳ್ಳಲು ನೆರವಾಯಿತು. ಇಲ್ಲಿಂದಲೇ ಗೀಸಿಂಕ್ ಅವರು ಒಂಟಿತನದ ಬದುಕಿಗೆ ಅಂಟಿಕೊಂಡರು. ರಸ್ತೆ ಬದಿಯಲ್ಲಿ ರೇಖಾಚಿತ್ರಗಳನ್ನು ರಚಿಸಿ ಬದುಕಿದರು. ಈ ಸಂದರ್ಭದಲ್ಲಿ ರೇಖಾಚಿತ್ರದಲ್ಲಿದ್ದ ತೀವ್ರ ಆಸಕ್ತಿಯನ್ನು ನಿಧಾನಕ್ಕೆ ವರ್ಣಚಿತ್ರಕ್ಕೆ ಬದಲಾಯಿಸಿಕೊಂಡರು.

`ನಾನು ನನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಕಲಾಕೃತಿಗಳನ್ನು ರಚಿಸಲು ಪ್ರಾರಂಬಿsಸಿದೆ, ಗಟ್ಟಿನಿರ್ಧಾರ ಮಾಡಿ ಬಣ್ಣ ಬ್ರಶ್ ಮತ್ತು ಕಲಾಸಾಮಗ್ರಿಗಳನ್ನು ಖರೀದಿಸಿದೆ. ಕಲಾಕೃತಿಗಳೇ ನನ್ನ ಜೀವ ಎಂದು ಭಾವಿಸಿ ತೀವ್ರವಾಗಿ ತೊಡಗಿಸಿಕೊಂಡೆ, ನಿಜವಾಗಿ ನನಗೆ ರೇಖಾಚಿತ್ರಗಳೇ ಇಷ್ಟದ ಮಾಧ್ಯಮ, ಆದರೂ ಬಣ್ಣಗಳ ಜೊತೆ ಆಟವಾಡಬೇಕೆನಿಸಿ ವರ್ಣಚಿತ್ರಗಳ ಕಲಾಕೃತಿಗಳನ್ನು ರಚಿಸತೊಡಗಿದೆ’ ಎಂದು ತಮ್ಮ ಬದುಕಿನ ಜಿಗಿತದ ಬಗ್ಗೆ ಹೇಳುತ್ತಿದ್ದರು. ವ್ಯಾಮ್ ಬಾತೆವೆಲ್ಡ್ ಒಬ್ಬ ಪ್ರಸಿದ್ಧ ಡಚ್ ಕಲಾವಿದ ಅವರ ಜೊತೆ ಸೇರಿ ಎರಡು ವರ್ಷಗಳ ಕಾಲ ಕಲಾಕೃತಿಗಳನ್ನು ರಚಿಸಿದರು. ಅವರಿಂದ ತೈಲವರ್ಣದ ಕಲಾಕೃತಿ ರಚನೆ ಮಾಡಲು ಇರಬೇಕಾದ ತಾಳ್ಮೆ ಸಮರ್ಪಣಾಭಾವಗಳನ್ನು ರಾರ್ಬಟರು ಅರಿತರು. ಇವರು ತೈಲವರ್ಣವನ್ನು ಪ್ರಮುಖ ಮಾಧ್ಯಮವನ್ನಾಗಿ ಆರಿಸಿಕೊಳ್ಳುವಲ್ಲಿ ವ್ಯಾಮ್ ಬ್ಯಾತೆವೆಲ್ಡ್ ಅವರೆ ಪ್ರಮುಖ ಪ್ರೇರಣೆ ನೀಡಿದವರು.

ಹೀಗೆ ಬದುಕಿನ ದಿಕ್ಕು ಎತ್ತೆತ್ತಲೋ ಹೋಗುತ್ತಿದ್ದರೂ ಮತ್ತೆ ಮರಳಿ 1960ರಲ್ಲಿ ಅವರು ಅಮ್ಯಸ್ಟರ್‍ಡ್ಯಾಂ ನಗರದ ರಾಯಲ್ ಅಕಾಡೆಮಿಗೆ ಸೇರಿದರು. ಇಲ್ಲಿ ತುಂಬಾ ದಿನ ಇರಲಾಗಲಿಲ್ಲ. ಸಂಸ್ಥೆಯನ್ನು ಮೂರು ತಿಂಗಳಲ್ಲಿ ತೊರೆದರು. ಚಿತ್ರಕಲೆಯನ್ನೇ ಹವ್ಯಾಸವಾಗಿ ರೂಡಿsಸಿಕೊಂಡಿದ್ದ ಅವರು ಸ್ಯಾಕ್ಸೋಫೆÇೀನ್ ನುಡಿಸುವ ಗೀಳು ಹಚ್ಚಿಕೊಂಡಿದ್ದರು. ತಂದೆಯ ಶ್ರೀಮಂತಿಕೆಯನ್ನು ಲೆಕ್ಕಿಸದೆ ಕುಂಚವನ್ನೇ ಆಸ್ತಿಯಾಗಿಸಿಕೊಂಡು ಗೀಸಿಂಕ್‍ರು ಯೂರೋಪಿನ ಬಹುಪಾಲು ದೇಶಗಳಿಗೆ ಬೇಟಿಕೊಟ್ಟು ಊರೂರು ಸುತ್ತಿದ್ದರು. ಪ್ಯಾರಿಸ್ಸಿನ ನಂತರ ಸ್ಪೇನ್ ಮತ್ತು ಮೊರಾಕ್ಕೊ ದೇಶಗಳನ್ನು ಸುತ್ತಾಡಿದರು. ಅವರಿಗೆ ಸ್ನೇಹಿತರೊಬ್ಬರು ನೀಡಿದ ನಿರ್ದೇಶನದ ಮೇರೆಗೆ ರಾರ್ಬಟರು ಪೂರ್ವ ದೇಶಗಳತ್ತ ಆಕರ್ಷಿತರಾದರು.

ಇದೇ ಸಂದರ್ಭಕ್ಕೆ ಡಚ್ ಸರಕಾರ ಕಲಾಯೋಜನೆಯಡಿ ರಾಬರ್ಟರ ಹನ್ನೆರಡು ಕಲಾಕೃತಿಗಳನ್ನು ಖರೀದಿಸಿದರು. ಒಮ್ಮೆಲೆ ಬಹಳಷ್ಟು ಹಣ ಸಿಕ್ಕು ಭಾರತ ಪ್ರವಾಸ ಕೈಗೊಳ್ಳಲು ರಾಬರ್ಟ್ ಅವರಿಗೆ ಸಹಕಾರಿಯಾಯಿತು. 1978ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ರಾಬರ್ಟ್ ಭಾರತಕ್ಕೆ ಬಂದರು. ಆರಂಭಕ್ಕೆ ಹಿಮಾಲಯ, ಹರಿದ್ವಾರ ಮುಂತಾದ ಸ್ಥಳಗಳಿಗೆ ಬೇಟಿ ನೀಡಿ ತಾವೊಬ್ಬ ಸಾಧುವಾಗಬೇಕೆಂದು ನಿರ್ಧರಿಸಿದ್ದರು. ನಂತರ ತಮ್ಮ ಸ್ನೇಹಿತನ ಪ್ರಭಾವದಿಂದಾಗಿ ಕಲಾವಿದನಾಗಬೇಕೆಂಬ ನಿರ್ಧಾರಕ್ಕೆ ಮರಳಿದರು. ಆತನಿಂದ ತೈಲವರ್ಣದ ಬಹು ಸಾಧ್ಯತೆಗಳನ್ನು ಕಲಿತರು. ನಂತರ ಮನಾಲಿ, ಗೋವಾ, ಕೊಡೈಕೆನಾಲ್, ಕನ್ಯಾಕುಮಾರಿ, ಮತ್ತು ಗೋಕರ್ಣ ಮೊದಲಾದೆಡೆಗಳಲ್ಲಿ ಸುತ್ತಾಡಿದರು.

ಗೀಸಿಂಕ್‍ರು ಕನ್ಯಾಕುಮಾರಿಯಲ್ಲಿದ್ದಾಗ ಒಬ್ಬ ಸ್ವಾಮಿಯ ಪರಿಚಯವಾಯಿತು. ಅವರು ಗುಜರಾತ್ ಮತ್ತು ಹಂಪಿಯನ್ನು ವೀಕ್ಷಿಸಲು ಸಲಹೆ ಕೊಟ್ಟರು. ಆಗ ರಾಬರ್ಟ್ ನೇರ ಗುಜರಾತಿನತ್ತ ಪಯಣ ಬೆಳೆಸಿದರು. ಆದರೆ ಆ ಸ್ಥಳ ಅಷ್ಟು ಇಷ್ಟವಾಗದೆ 1978ರಲ್ಲಿ ಹಂಪಿಯ ಕಡೆಗೆ ಪ್ರಯಾಣ ಬೆಳೆಸಿದರು. ಹಂಪಿ ರಾಬರ್ಟ್ ಅವರನ್ನು ಇನ್ನಿಲ್ಲದಂತೆ ಸೆಳೆಯಿತು. ನಾನು ಬದುಕುವುದಾದರೆ ಇಲ್ಲಿಯೇ ಎಂದು ನಿರ್ಧರಿಸಿದರು. ತಮ್ಮ ಕಲಾಕೃತಿಗಳಲ್ಲಿ ಹಂಪಿಯನ್ನು ಮರು ಸೃಷ್ಠಿಸಲು ಪಣತೊಟ್ಟರು. ಇದರ ಫಲವಾಗಿ ರಾಬರ್ಟ್ ಹಂಪಿಯಲ್ಲಿ ಬೇರುಬಿಡತೊಡಗಿದರು. `ಹಂಪಿ ನನಗೆ ತುಂಬಾ ಇಷ್ಟದ ಸ್ಥಳ, ಅದು ನನ್ನನ್ನು ಎಷ್ಟು ಸೆಳೆಯಿತೆಂದರೆ ಹಂಪಿಯನ್ನು ಬಿಟ್ಟು ಬೇರೆಡೆ ಹೋಗುವ ದಾರಿಯೆ ಕಾಣಲಿಲ್ಲ’ ಎನ್ನುತ್ತಿದ್ದರು.

**
ಹೀಗೆ ಹಂಪಿಯ ಅಪಾರ ಸೆಳೆತಕ್ಕೆ ಒಳಗಾದ ರಾಬರ್ಟ್ ಇಲ್ಲಿನ ಬೆಟ್ಟ ಕಲ್ಲು ಮಂಟಪ ಎಲ್ಲವನ್ನೂ ತನ್ನ ತೈಲವರ್ಣದಲ್ಲಿ ಚಿತ್ರಿಸತೊಡಗಿದರು. ಹಗಲು ರಾತ್ರಿಯೆನ್ನದೆ, ಹಸಿವು ನಿದ್ದೆಯೆನ್ನದೆ ಕಲಾಕೃತಿಯಲ್ಲಿ ಮುಳುಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಧಾರವಾಡದ ಕುಂದ್ರಹಳ್ಳಿ ತಾಂಡಾದಿಂದ ಹಂಪಿಗೆ ಕೆಲಸಕ್ಕಾಗಿ ವಲಸೆ ಬಂದ ಲಂಬಾಣಿ ಸಮುದಾಯದ ಸೀತಾ ರಾಬರ್ಟ್ ಅವರನ್ನು ದಿನಾಲು ಗಮನಿಸುತ್ತಿದ್ದಳು. ಕೆಲಸಕ್ಕೆ ಹೋಗಿಬಂದು ಮಾಡುವಾಗಲೆಲ್ಲಾ ಇವರ ಕಲಾಕೃತಿ ರಚನೆಯನ್ನು ಸೀತಾ ಬೆರಗುಗಣ್ಣಿನಿಂದ ನೋಡುತ್ತಿದ್ದಳು. ನಿಧಾನಕ್ಕೆ ರಾಬರ್ಟ್ ಅವರನ್ನು ಮಾತನಾಡಿಸತೊಡಗಿದಳು. ಊಟದ ಪರಿವೆ ಇಲ್ಲದೆ ಕಲಾಕೃತಿ ರಚಿಸುತ್ತಿದ್ದಾಗ ಅವರಿಗೆ ರೊಟ್ಟಿ ಚೆಟ್ನಿ ಕೊಡುವ ಮೂಲಕ ಹತ್ತಿರವಾಗತೊಡಗಿದಳು. ಇಬ್ಬರ ಭಾಷೆ ಇಬ್ಬರಿಗೂ ಅರ್ಥವಾಗದೆ ಕೈಸನ್ನೆ ಬಾಯಸನ್ನೆಯಲ್ಲಿಯೇ ಸಂವಹನ ನಡೆಯತೊಡಗಿತು. ದಿನಾಲು ಲಕ್ಷ್ಮಿ ರಾಬರ್ಟ್ ಅವರಿಗೆ ಊಟ ತಿಂಡಿ ಕಾಫಿ ಟೀ ಕೊಟ್ಟು ಹಾರೈಕೆ ಮಾಡತೊಡಗಿದಳು. ಗೀಸಿಂಕ್ ಅವರ ಒಂಟಿತನಕ್ಕೆ ಸೀತಾ ಸಂಗಾತಿಯಾಗಿ ಸಿಕ್ಕು ಬದುಕಿನಲ್ಲಿ ಹೊಸದೊಂದು ಬೆಳಕು ಮೂಡುತ್ತಿರುವ ಅನುಭವವಾಗತೊಡಗಿತು. ದೇಶ ಗಡಿಗಳಾಚೆ ಸೀತಾ ರಾಬರ್ಟ್ ನಡುವೆ ಪ್ರೀತಿ ಅಂಕುರಿಸಿತು. ಅವಳು ತೊಡುವ ಲಂಬಾಣಿ ಉಡುಪು ರಾಬರ್ಟ್ ಅವರಿಗೆ ಆಕರ್ಷಿತವಾಯಿತು. ನಿಧಾನಕ್ಕೆ ಸೀತಾ ರಾಬರ್ಟ್ ಕಲೆಯ ರೂಪದರ್ಶಿಯಾಗಿ ಬದಲಾದಳು. ಅದು ಇಬ್ಬರನ್ನು ಮತ್ತಷ್ಟು ಮಗದಷ್ಟು ಹತ್ತಿರವಾಗಿಸಿತು. ಈ ಪ್ರೀತಿ ಇಬ್ಬರ ಮದುವೆಯಲ್ಲಿ ಕೊನೆಗೊಂಡು ಸತಿಪತಿಗಳಾಗಿ ಬದಲಾದರು.

ಸೀತಾಳ ಜೊತೆ ಹಂಪಿಯ ಕಾಡು ಮತ್ತು ಬಂಡೆಗಳ ನಡುವೆ ನೆಲೆಸಬೇಕೆಂದು ಕನಸು ಕಂಡಿದ್ದರು. ಹಾಗೆಯೇ ಸೀತಾಳಿಗಿದ್ದ ಸ್ವಲ್ಪ ಜಮೀನಲ್ಲಿ ರಾಬರ್ಟ್ ಒಂದು ಸಣ್ಣ ಮನೆ ಮಾಡಿ ತಮ್ಮ ಕಲಾಬದುಕನ್ನು ಪುನರಾರಂಭಿಸಿದರು. ಸೀತಾಳ ಸಂಪರ್ಕದಿಂದಾಗಿ ರಾಬರ್ಟ್‍ರಿಗೆ ಹಂಪಿಯ ಜತೆ ತನ್ನ ವಿಶಿಷ್ಠ ವೇಷಭೂಷಣಗಳಿಂದ ಲಂಬಾಣಿ ಸಮುದಾಯವೂ ಆಕರ್ಷಿತವಾಯಿತು. ಹಾಗಾಗಿ ತನ್ನ ಕಲಾಕೃತಿಗಳಲ್ಲಿ ಲಂಬಾಣಿ ಸಮುದಾಯದವನ್ನು ಪುನರ್ ಸೃಷ್ಠಿಮಾಡತೊಡಗಿದರು. ನಿಧಾನಕ್ಕೆ ಲಕ್ಷ್ಮಿಯೂ ಕಲಾಕೃತಿ ರಚಿಸುವಲ್ಲಿ ಇವರಿಗೆ ಜೊತೆಯಾದಳು. ಸೀತಾಳ ಮದುವೆಯ ನಂತರ ನನಗೆ ಒಳ್ಳೆಯ ದಿನಗಳು ಆರಂಭವಾದವು ಎಂದು ರಾಬರ್ಟ್ ಹೇಳುತ್ತಿದ್ದರು. ಸೀತಾಳ ಜೊತೆ ಹದಿನೇಳು ವರ್ಷಗಳ ಕಾಲ ವಾಸಮಾಡಿದರು. ಸೀತಾಳನ್ನು ರಾಬರ್ಟ್ ಆಮ್ಸಸ್ಟರಡ್ಯಾಂಗೂ ಕರೆದುಕೊಂಡು ಹೋಗಿ ಬಂದಿದ್ದರು. ಸೀತಾಳಿಗೆ ಕೊನೆತನಕ ಪೂರ್ಣಪ್ರಮಾಣದಲ್ಲಿ ಇಂಗ್ಲೀಷ್ ಮಾತನಾಡಲು ಬರುತ್ತಿರಲಿಲ್ಲವಾದರೂ ಸಂವಹನಕ್ಕೆ ಬೇಕಾದಷ್ಟನ್ನು ಕಲಿತಿದ್ದಳು. ರಾಬರ್ಟ್ ಅವರನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂವಹನ ಮಾಡಲು ಸಮರ್ಥಳಾಗಿದ್ದಳು.

ಸೀತಾ ರಾಬರ್ಟ್ ಅವರ ಪ್ರಭಾವಕ್ಕೆ ಒಳಗಾಗಿ ಆಸಕ್ತಿಯಿಂದ ಚಿತ್ರಗಳನ್ನು ರಚಿಸುತ್ತಿದ್ದಳು. ನಾನು ಸೀತಾಳಿಗೆ ಕೆಲವು ಪುಡಿ ವರ್ಣಗಳನ್ನು ಕೊಟ್ಟೆ ಆಕೆ ಬಣ್ಣಗಳನ್ನು ಸಮತಟ್ಟಾಗಿ ತುಂಬಿ ಆ ಮೇಲೆ ಬಿಂದು ಬಿಂದು ಡಾಟ್..ಡಾಟ್ ಇಡುತ್ತಾ ಕೃತಿ ರಚನೆ ಮಾಡುವ ಒಂದು ವಿಶಿಷ್ಠತೆಯನ್ನು ರೂಢಿಸಿಕೊಂಡ ಬಗ್ಗೆ ರಾಬರ್ಟ್ ಮೆಚ್ಚುಗೆಯ ಮಾತನಾಡುತ್ತಿದ್ದರು. ಈ ಶಕ್ತಿ ಅವಳಿಗೆ ಪ್ರಕೃತಿಯಿಂದ ಬಂದ ಬಳುವಳಿಯಾಗಿತ್ತು. ಮುಂದೆ ಸೀತಾಳ ಪ್ರಿಮಿಟಿವ್ ಶೈಲಿಯ ಕಲಾಕೃತಿಗಳು ದೆಹಲಿಯಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಮಾರಾಟವಾದವು, ಇದರಿಂದ ಸೀತಾ ಸಂತೋಷಪಟ್ಟು ಮತ್ತಷ್ಟು ಕೃತಿ ರಚಿಸಲು ಪ್ರಾರಂಬಿsಸಿದ್ದಾಗಿ ರಾಬರ್ಟ್ ಹೇಳುತ್ತಿದ್ದರು. ಆಗ ನಾವಿಬ್ಬರೂ ಜೊತೆ ಜೊತೆಯಾಗಿ ಮನೆಯ ವರಾಂಡದಲ್ಲಿ ಚಿತ್ರಿಸುತ್ತಿದ್ದೆವು. ಅವಳು ತನ್ನದೇ ಶೈಲಿಯಲ್ಲಿ ಕಲಾಕೃತಿ ರಚಿಸುತ್ತಿದ್ದಳು, ಆ ದಿನಗಳು ನನ್ನ ಜೀವನದ ಸಂತೋಷದ ದಿನಗಳಾಗಿದ್ದವು ಎಂದು ರಾಬರ್ಟ್ ನೆನಪಿಸಿಕೊಳ್ಳುತ್ತಿದ್ದರು. ಜನಪದೀಯ ಹಾಗೂ ಆದಿಮ ಲಕ್ಷಣಗಳುಳ್ಳ ಸೀತಾರ ಚಿತ್ರಗಳು ವಾಸ್ತವಿಕತೆಯಿಂದ ಸಂಪೂರ್ಣ ಬಿsನ್ನವಾದ ಆಕೃತಿಗಳು ಹಾಗೂ ಸಂಯೋಜನೆಗಳಿಂದ ಕೂಡಿದ್ದವು. ಚಿಕಣಿ ಚಿತ್ರಗಳಲ್ಲಿ ಕಾಣುವ ಮರಗಿಡಗಳ ದಟ್ಟ ವರ್ಣಗಳು ಅವರ ಚಿತ್ರಗಳಲ್ಲಿ ಅಬಿsವ್ಯಕ್ತಿ ಪಡೆದಿದ್ದವು.

ಸೀತಾಳ ಅಕಾಲಿಕ ಮರಣ ರಾಬರ್ಟ್‍ನ್ನು ಇನ್ನಿಲ್ಲದಂತೆ ಕಾಡಿತ್ತು. ಸೀತಾಳ ಅಗಲಿಕೆಯ ತುಂಬಾ ದಿನದ ನಂತರ ಸೀತಾಳ ಸಂಬಂಧಿಕರ ಸಹಕಾರದಿಂದಾಗಿ ಹಗರಿಬೊಮ್ಮನಹಳ್ಳಿಯ ರಾಯರಾಳ ತಾಂಡದ ಲಂಬಾಣಿ ಯುವತಿ ಜೈನಿಬಾಯಿಯನ್ನು ಮರುಮದುವೆಯಾದರು. ಜೈನಿಬಾಯಿಗೆ ಕಾಡಿನ ಪರಿಸರದಲ್ಲಿ ವಾಸಿಸಲು ಆಸಕ್ತಿ ಇರಲಿಲ್ಲ. ಆದ್ದರಿಂದ ಅಲ್ಲಿಂದ ವಾಸಸ್ಥಳ ಹಂಪಿಯ ವಿರೂಪಾಕ್ಷ ದೇವಸ್ಥಾನದ ಹಿಂಬಾಗಕ್ಕೆ ಬದಲಾಯಿತು. ಹಂಪಿಗೆ ಹೊಂದಿಕೊಂಡಂತಹ ಈ ಭಾಗವನ್ನು ಎಂ.ಪಿ.ಪ್ರಕಾಶ ನಗರ ಎಂದು ಕರೆಯುತ್ತಾರೆ. ಇಲ್ಲಿಯೇ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡು, ಕೆಳಗಡೆ ವಾಸಕ್ಕೂ, ಮೇಲಿನ ಭಾಗ ತನ್ನ ಪೇಂಟಿಂಗ್ ಮಾಡಲು ಸ್ಟುಡಿಯೋವನ್ನು ಮಾಡಿಕೊಂಡಿದ್ದರು. ಮುಂದೆ ರಾಬರ್ಟರಿಗೆ ಪೂಜಾ, ಕಿಮ್, ಸಿಂದು ಮೂವರು ಹೆಣ್ಣುಮಕ್ಕಳು, ಆದಿಲ್ ಗಂಡು ಮಗು ಒಟ್ಟು ನಾಲ್ಕು ಮಕ್ಕಳಾದರು ಶಾಲೆ ಕಲಿಯದ ಅನಕ್ಷರಸ್ಥ ಜೈನಿಬಾಯಿಯು ಸುಲಲಿತವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿತಿದ್ದಾರೆ. ಮಕ್ಕಳು ಮನೆ ಭಾಷೆಯಾಗಿ ಇಂಗ್ಲೀಷ್ ಮತ್ತು ಲಂಬಾಣಿಯನ್ನು ಜತೆಗೆ ಕನ್ನಡವನ್ನೂ ಮಾತನಾಡುತ್ತಿದ್ದಾರೆ. ಜೈನಿಬಾಯಿ ಇವರು ತಮ್ಮ ಲಂಬಾಣಿ ಕಸೂತಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಇವರು ರಚಿಸಿದ ಕಸೂತಿ ಕಲೆಯಿಂದ ಕೂಡಿದ ಪರ್ಸ್, ಬ್ಯಾಗ್‍ಗಳು ಉತ್ತಮ ಬೆಲೆಗೆ ಮಾರಾಟವಾಗುತ್ತವೆ.
**

ರಾಬರ್ಟರು 15ನೇ ಶತಮಾನದ ಪ್ರಸಿದ್ಧ ಕಲಾವಿದ ಹಿರೋನಿಮಸ್ ಬೊಷನಿಂದ ಪ್ರೇರಣೆ ಪಡೆದು ಕಲ್ಪನಾ ಪ್ಯಾಂಟಸಿ ಚಿತ್ರಗಳನ್ನು ರಚಿಸತೊಡಗಿದರು. ಇದು ನನಗೆ ನನ್ನ ಸುಂದರ ಕನಸುಗಳನ್ನು ಸೃಷ್ಟಿಸಲು ಸಹಕಾರಿಯಾಯಿತು ಎನ್ನುತ್ತಿದ್ದರು. ನಾನು ಹಂಪಿಗೆ ಕಾಲ್ಪನಿಕ ಚಿತ್ರಗಳನ್ನು ರಚಿಸಬೇಕೆಂದು ಬಂದೆ, ಆದರೆ ನಿಸರ್ಗ ಚಿತ್ರಗಳನ್ನು ರಚಿಸಬೇಕಾಯಿತು. ಹಂಪಿಯ ರಮ್ಯತೆ ಪರಿಸರ ಹೆಚ್ಚು ಭೂ ದೃಶ್ಯಗಳನ್ನು ರಚಿಸಲು ಕಲಾವಿದರನ್ನು ಸೆಳೆಯುತ್ತದೆ ಎನ್ನುತ್ತಿದ್ದರು.

ಇಂಡಿಯಾದಲ್ಲಿ ರಾಬರ್ಟ್ ಅವರ ಕಲಾಕೃತಿಗಳ ಮೊದಲ ಕಲಾಪ್ರದರ್ಶನ ದೆಹಲಿಯಲ್ಲಿ ನಡೆಯಿತು. ಆಗ ರಾಬರ್ಟ್‍ರಿಗೆ ಅಮೇರಿಕಾದ ಮಹಿಳೆಯೊಬ್ಬಳು ಪರಿಚಯವಾದರು. ಇವರು ಕಲಾಭ್ಯಾಸ ಮಾಡಿದ್ದರು. ರಾಜಕೀಯವಾಗಿ ಪ್ರಭಾವಿಯೂ, ಶ್ರೀಮಂತರೂ ಆಗಿದ್ದ ದೆಹಲಿಯ ಬ್ರಾಹ್ಮಣ ಸಮುದಾಯದ ಕಮಲಾಪತಿ ತಿರುಪತಿ ಎನ್ನುವವರ ಮೊಮ್ಮಗನೊಂದಿಗೆ ಇವರ ಮದುವೆಯಾಗಿತ್ತು. ಕಮಲಾಪತಿ ತಿರುಪತಿ ಈ ಮಹಿಳೆಯ ಪ್ರಾಯೋಜಕತ್ವದಲ್ಲಿ ರಾಬರ್ಟ್ ಅವರ ಚಿತ್ರಕಲಾ ಪ್ರದರ್ಶನ ದೆಹಲಿಯ ಕಲಾ ಗ್ಯಾಲರಿಯಲ್ಲಿ ನಡೆಸಿದರು. ರಾಬರ್ಟ್ ಅವರು ಈ ಪ್ರದರ್ಶನದಿಂದಾಗಿ ಖುಷಿಯಾಗಿದ್ದರು. ಕಲಾಕೃತಿಗಳ ಒಳ್ಳೆಯ ಬೆಲೆಗೂ ಮಾರಾಟವಾದವು. ನಂತರದಲ್ಲಿ ರಾಬರ್ಟ್ ಅವರ ಕಲಾಕೃತಿಗಳನ್ನು ಮಾರಾಟ ಮಾಡುವ ಹಕ್ಕನ್ನು ತನಗೆ ಬೇಕೆಂದು ಅಮೆರಿಕಾ ಮಹಿಳೆ ಬೇಡಿಕೆ ಇಟ್ಟಳು ಆದರೆ ಇವರು ಒಪ್ಪಲಿಲ್ಲ. ಆನಂತರದಲ್ಲಿ ಸ್ವತಃ ಗೀಸಿಂಕ್ ತಾವೇ ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಗೋವೆಯ ಕಲಾಗ್ಯಾಲರಿಯಲ್ಲಿ ಏರ್ಪಡಿಸಿದರು. ಭಾರತದ ಕಲಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಫ್ರೆಂಚ್ ವ್ಯಕ್ತಿಯಾದ ಯಾನ್ ಡುಕ್ಲೊ ಎಂಬುವವರು 1994ರಲ್ಲಿ ರಾಬರ್ಟ್‍ರಿಗೆ ಪರಿಚಯವಾದರು. ಗೀಸಿಂಕರ ಕಲೆ ಮತ್ತು ಕಲಾಕೃತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ, ಬಹಳಷ್ಟು ಕಲಾಕೃತಿಗಳನ್ನು ವಿದೇಶಿ ಕಲಾಸಕ್ತರಿಗೆ ಮಾರಾಟ ಮಾಡಿಕೊಟ್ಟರು. ಇದರಿಂದ ಗೀಸಿಂಕರಿಗೆ ಒಂದಷ್ಟು ಆರ್ಥಿಕ ಸಹಾಯವೂ ಆಯಿತು.

ಹಿಂದೆ ಪ್ರಸ್ತಾಪಿಸಿದಂತೆ ರಾಬರ್ಟ್ ಅವರು ಸಂಗೀತದಲ್ಲಿಯೂ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಈ ಆಸಕ್ತಿಯನ್ನು ಹಂಪಿಯಲ್ಲಿಯೂ ವಿಸ್ತರಿಸಿಕೊಳ್ಳಲು ಬೇಕಾದ ವಾತಾವರಣವನ್ನು ಸ್ವತಃ ತಾವೇ ರೂಪಿಸಿಕೊಂಡಿದ್ದರು. ಸ್ಯಾಕ್ಸೋಫೋನ್‍ನ್ನು ಅದ್ಭುತವಾಗಿ ನುಡಿಸುತ್ತಿದ್ದರು. ಜಂಬೆ, ಡೋಲು ಬಾರಿಸುತ್ತಿದ್ದರು. ಗೆಳೆಯರೊಡಗೂಡಿ `ಜಿಪ್ಸಿ ಮಸಾಲ’ ಎನ್ನುವ ಆಲ್ಬಮ್‍ನ್ನೂ ತಂದಿದ್ದರು. ಹಂಪಿಯಲ್ಲಿ ಪೂರ್ಣಚಂದ್ರ ಹುಣ್ಣಿಮೆಯ ರಾತ್ರಿ ವಿದೇಶಿಗರು ಮಾಡುತ್ತಿದ್ದ ಮ್ಯೂಜಿಕ್ ಪಾರ್ಟಿಗಳಲ್ಲಿ ರಾಬರ್ಟ್ ತಪ್ಪದೆ ಭಾಗವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರೊಂದಿಗೆ ಮ್ಯೂಜಿಷಿಯನ್ಸ್‍ಗಳೊಂದಿಗೆ ಒಡನಾಡುತ್ತಿದ್ದರು. ಹೀಗೆ ರಾಬರ್ಟ್ ವಿದೇಶಿಯ ಸಂಗೀತ ಪ್ರಿಯರಿಗೂ, ಕಲಾಪ್ರಿಯರಿಗೂ ಇಷ್ಟವಾಗುತ್ತಿದ್ದರು. ಇವರ ಜತೆ ಹೊಸ ಸಂಬಂಧಗಳನ್ನು ಬೆಸೆದು ಸ್ನೇಹಬಳಗವನ್ನು ಹಿಗ್ಗಿಸಿಕೊಳ್ಳುತ್ತಿದ್ದರು.
**

ರಾಬರ್ಟ್ ಅವರ ಕಲಾಕೃತಿಗಳಲ್ಲಿ ಹಂಪಿಯ ಕಲ್ಲುಬಂಡೆಗಳು ಮರುಜೀವ ಪಡೆದವು. ಇಲ್ಲಿನ ನಿಸರ್ಗ, ನದಿಹರಿವು, ಬಾಳೆ ತೆಂಗು ಮೊದಲಾಗ ಬೆಳೆ, ಕೋತಿ ಕೋಡಗ ಮೊದಲಾದ ಪ್ರಾಣಿಗಳು, ಗಿಳಿ ನವಿಲು ಮೊದಲಾದ ಪಕ್ಷಿಗಳು, ಸೂರ್ಯೋದಯ, ಸೂರ್ಯಾಸ್ತದ ಚಿತ್ರಗಳು, ಹಲವು ಮೂಡಗಳಲ್ಲಿರುವ ಈ ಭಾಗದ ವ್ಯಕ್ತಿ ಚಿತ್ರಗಳನ್ನು ತಮ್ಮ ಕಲಾಕೃತಿಗಳಲ್ಲಿ ರಚಿಸಿದ್ದಾರೆ. ಇವರ ಕಲಾಕೃತಿಗಳನ್ನು ಆಧರಿಸಿ ರಾಬರ್ಟ್ ಅವರ ಅನುಗಾಲದ ಶಿಷ್ಯನೂ ಆದ ರವಿನಾಯಕ್ ಎನ್ನುವವರು ಎಂಫಿಲ್ ಪದವಿಯನ್ನು ಪೂರೈಸಿದರು. ಅಂತೆಯೇ ಪತ್ರಿಕೆಗಳಲ್ಲಿ ಇವರ ಬಗ್ಗೆ ಹಲವು ಲೇಖನಗಳು ಪ್ರಕಟವಾದವು. ಆದರೆ ಕರ್ನಾಟಕ ಚಿತ್ರಕಲಾ ಅಕಾಡೆಮಿ ಇವರನ್ನು ಗುರುತಿಸಲಿಲ್ಲ. ಕನಿಷ್ಠ ಗೌರವ ಪ್ರಶಸ್ತಿಯನ್ನೂ ಕೊಡಲಿಲ್ಲ. ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವಂತೆ ಕೊನೆಯವರೆಗೂ ಅಕಾಡೆಮಿ ಮತ್ತು ಸಂಸ್ಕøತಿ ಇಲಾಖೆಗಳು ಅವರನ್ನು ವಿದೇಶಿಯಂತೆಯೇ ನೋಡಿದವು. ಇನ್ನಾದರೂ ಅವರ ಬಗೆಗೆ ಒಂದು ಉತ್ತಮ ಕೃತಿಯನ್ನು ಪ್ರಕಟಿಸಲು ಚಿತ್ರಕಲಾ ಅಕಾಡೆಮಿ ಯೋಚಿಸಬೇಕಿದೆ.
**

ಇದೀಗ ರಾಬರ್ಟ್ ಇಲ್ಲದ ಮನೆ ಅವರ ಕಲಾಕೃತಿಗಳಿಂದ ಜೀವಂತಗೊಂಡಿದೆ. ಮಕ್ಕಳು ಮಡದಿ ಜೈನಿಭಾಯಿ ಅವರು ಅವರನ್ನು ಪ್ರತಿ ಕ್ಷಣವೂ ನೆನಪಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಕಿಮ್ ರಾಬರ್ಟ್ ಅವರ ಕಲಾ ಪರಂಪರೆಯನ್ನು ಮುಂದುವರೆಸುವಂತೆ ಕಾಣುತ್ತಾಳೆ. ಹೊಸಪೇಟೆಯ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪುಯುಸಿ ಓದುವ ಕಿಮ್ ಕಲಾಕೃತಿಗಳನ್ನು ರಚಿಸುತ್ತಿದ್ದಾಳೆ. ತನ್ನ ತಂದೆ ಇದ್ದಾಗಲೆ ಅವರೊಂದಿಗೆ ಕಲಾಕೃತಿ ರಚನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆಗಲೇ ರೇಖಾ ಚಿತ್ರಗಳನ್ನು ರಚಿಸುತ್ತಿದ್ದಳು. ಮೂರನೆ ಮಗಳು ಸಿಂಧು ಮತ್ತು ಕೊನೆಯ ಮಗ ಆದಿಲ್ ರೇಖಾಚಿತ್ರ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕಿಮ್ ತನ್ನ ತಂದೆಯ ಕಲಾಕೃತಿಗಳನ್ನು ಒಳಗೊಂಡ ಪ್ರತ್ಯೇಕ ಆರ್ಟ್ ಗ್ಯಾಲರಿಯನ್ನು ಮಾಡಬೇಕು, ಅಂತೆಯೇ ತಂದೆಯ ಕನಸನ್ನು ನನಸು ಮಾಡಬೇಕು ಎಂದು ಉತ್ಸಾಹದಿಂದ ಮಾತನಾಡುತ್ತಲೇ ಭಾವನಾತ್ಮಕವಾಗಿ ಒದ್ದೆ ಕಣ್ಣಲ್ಲಿ ರಾಬರ್ಟ್‍ರನ್ನು ನೆನೆಯುತ್ತಾಳೆ.

ರಾಬರ್ಟ್ ಅವರ ಮಗಳು ಸಿಂಧು ಸಿನೆಮಾದಲ್ಲಿ ಆಸಕ್ತಿ ಹೊಂದಿದ್ದಾಳೆ. ಅನಿತಾ ನಾಯರ್ ಅವರ ಕಾದಂಬರಿ ಆಧರಿತ, ಉನ್ನಿ ವಿಜಯನ್ ಅವರು ನಿರ್ದೇಶಿಸಿದ 2012 ರಲ್ಲಿ ಬಿಡುಗಡೆಯಾಗಿ ಹಲವು ಪ್ರಶಸ್ತಿಗಳನ್ನು ಪಡೆದ `ಲೆಸೆನ್ಸ್ ಇನ್ ಫರ್ಗೆಟಿಂಗ್’ ಸಿನೆಮಾದಲ್ಲಿ ಸಿಂಧು ನಾಯಕಿಯ ಬಾಲ್ಯದ ಪಾತ್ರವನ್ನು ಬಾಲನಟಿಯಾಗಿ ಮಾಡಿದ್ದಾಳೆ. ವಿಶ್ವಪರಂಪರೆಯ ಕಾರಣಕ್ಕೆ ಹಂಪಿಯ ಸುತ್ತಣ ಜನವಸತಿಯನ್ನು ತೆರವುಗೊಳಿಸುವ ಯೋಜನೆ ಇದೆ. ಹಾಗಾದರೆ ರಾಬರ್ಟ್ ಕಟ್ಟಿದ ಪುಟ್ಟ ಮನೆಯೂ ಇಲ್ಲವಾಗಿ ನೆನಪುಗಳೂ ಅಳಿಸಿ ಅನಾಥವಾಗುವ ಆತಂಕದಲ್ಲಿ ಕುಟುಂಬ ಉಸಿರಿಡಿದು ಬದುಕುತ್ತಿದೆ. ಹೀಗೆ ಹಾಲೆಂಡಿನಲ್ಲಿ ಹುಟ್ಟಿ ಹಂಪಿಯಲ್ಲಿ ಮಣ್ಣಾದ ರಾಬರ್ಟ್ ಗೀಸಿಂಕ್ ಅವರು ನನಗೆ ಸದಾ ಅಚ್ಚರಿಯ ವ್ಯಕ್ತಿಯಾಗಿದ್ದರು. ಸದಾ ಜೀವನೋತ್ಸಾಹದಲ್ಲಿ ಬದುಕುತ್ತಾ ಬದುಕನ್ನು ತೀವ್ರವಾಗಿ ಅನುಭವಿಸಿದರು.

Leave a Reply

Your email address will not be published.