‘ಸ್ವಚ್ಚ ಭಾರತ’ದ ಮಲಿನ ಮನಸುಗಳು ಕುಸಿದ ಮೌಲ್ಯಗಳು

ನಾ ದಿವಾಕರ

ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆಯೋ ಇಲ್ಲವೋ ಎನ್ನುವ ಪ್ರಶ್ನೆ ಕಾಡದಿದ್ದರೂ ಒಂದು ಪ್ರಬುದ್ಧ ಹಾಗೂ ಪ್ರಜ್ಞಾವಂತ ಸಮಾಜವನ್ನು ನಾವು ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆ ಕಾಡಲೇಬೇಕು. ಇಲ್ಲವಾದಲ್ಲಿ ನಾವು ನಡೆವ ಹಾದಿಯೇ ಅಂತಿಮ ಸತ್ಯ ಎನ್ನುವ ಅಹಮಿಕೆ ಬೆಳೆಯುತ್ತದೆ. ಈ ಅಹಮಿಕೆಯೇ ಮುಂದಿನ ಎಲ್ಲ ಅನಾಹುತಗಳಿಗೂ ಕಾರಣವಾಗುತ್ತದೆ. ಕಳೆದ 25 ವರ್ಷಗಳ ಭಾರತದ ರಾಜಕೀಯ ಬೆಳವಣಿಗೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಹೌದು ನಾವು ಎತ್ತ ಸಾಗುತ್ತಿದ್ದೇವೆ ? ಮಾನವನ ಬದುಕಿಗೆ ಬೇಕಿರುವುದು ಪ್ರಜ್ಞೆ. ಸುಪ್ತ ಪ್ರಜ್ಞೆಯಾದರೂ ಅಡ್ಡಿಯಿಲ್ಲ ಸತ್ತ ಪ್ರಜ್ಞೆಯೊಂದಿಗೆ ಒಂದು ಸಮಾಜ ಬದುಕುವುದು ಅಸಾಧ್ಯ. ಆದರೆ ನಾವು ಬದುಕುತ್ತಿದ್ದೇವೆ.

ಇಲ್ಲಿ ಪ್ರಜ್ಞೆ ಎಂದರೆ ಕೇವಲ ಯಾವುದೋ ಒಂದು ಕಾಲಘಟ್ಟದ ವಿದ್ಯಮಾನಗಳಿಗೆ ಸ್ಪಂದಿಸುವುದು ಮಾತ್ರವೇ ಅಲ್ಲ. ಇದು ಸಮಷ್ಟಿ ಪ್ರಜ್ಞೆಯ ಪ್ರಶ್ನೆ. ನಾಗರಿಕ ಪ್ರಜ್ಞೆಯ ಪ್ರಶ್ನೆ. ಪ್ರಜಾತಂತ್ರ ವ್ಯವಸ್ಥೆ ಎಂದರೆ ಕೇವಲ ಬಹುಮತ ಗಳಿಸಿದ ಒಂದು ರಾಜಕೀಯ ಗುಂಪು ಆಡಳಿತ ನಡೆಸುವುದು ಮಾತ್ರವಲ್ಲ. ಅದು ಅಧಿಕಾರ ರಾಜಕಾರಣದ ಒಂದು ಭಾಗವಷ್ಟೆ. ಪ್ರಜಾತಂತ್ರ ಎನ್ನುವುದು ಮಾನವ ಸಮಾಜದ ಆಂತರ್ಯದಲ್ಲಿ ಇರಬೇಕಾದ ಒಂದು ಮೌಲ್ಯದ ಭಂಡಾರ. ಈ ಭಂಡಾರ ಇಂದು ಬರಿದಾಗಿದೆ. ಬರಿದಾದ ಕಣಜದಲ್ಲಿ ನಾವು ಏನನ್ನೋ ಹುಡುಕುತ್ತಿದ್ದೇವೆ. ತಡಕಾಡುತ್ತಿದ್ದೇವೆ. ಇಲ್ಲದುದನ್ನು ಶೋಧಿಸುತ್ತಿದ್ದೇವೆ. ಮೌಲ್ಯಗಳ ಸಾಗರವೇ ಬತ್ತಿಹೋಗಿದೆ. ಒಂದು ಹನಿಯಿಂದ ಸಂತೃಪ್ತರಾಗಿ ಆತ್ಮರತಿಯಿಂದ ಬೀಗುತ್ತಿದ್ದೇವೆ.

ang4ಇಷ್ಟೆಲ್ಲಾ ವೇದನೆ ಮನದಲ್ಲಿ ಮೂಡಲು ಕಾರಣ ಹತ್ತನೆ ತರಗತಿಯ ಪರೀಕ್ಷೆಗಳನ್ನು ಕುರಿತ ಒಂದು ಪತ್ರಿಕಾ ವರದಿಯಿಂದ. ಪ್ರತಿಷ್ಠಿತ ಪತ್ರಿಕೆಯ ಈ ವರದಿಯ ಸತ್ಯಾಸತ್ಯತೆಗಳು ಏನೇ ಇರಲಿ. ಒಂದು ದೇಶದ, ಸಮಾಜದ ಅಭ್ಯುದಯದ ಮಾರ್ಗದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಬೇಕಾದ ಸಾಂಸ್ಥಿಕ ವ್ಯವಸ್ಥೆ ಭ್ರಷ್ಟತೆಯ ಹಾದಿ ಅನುಸರಿಸಿದರೆ ಏನಾಗಬಹುದು ಎಂಬ ಚಿಂತೆ ಮೂಡುವುದಂತೂ ಸತ್ಯ. ನಿಜ, ಈ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣ ಎಂದರೆ ಜೀವನ ನಿರ್ವಹಣೆಯ ಒಂದು ಪರಿಕರ ಅಷ್ಟೆ. ಜ್ಞಾನಾರ್ಜನೆ ಮತ್ತು ನಾಗರಿಕ ಪ್ರಜ್ಞೆಗೆ ಕೊನೆಯ ಸ್ಥಾನ.

ಹಾಗಾಗಿಯೇ ಶೈಕ್ಷಣಿಕ ಮೌಲ್ಯಗಳೂ ಕುಸಿಯುತ್ತಲೇ ಇವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುವ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುವ ಪರೀಕ್ಷೆಗಳು ಪಾರದರ್ಶಕವಾಗಿದ್ದಷ್ಟೂ ಸಮಾಜದ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಆದರೆ ನಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ. ಇದನ್ನು ನಾವು ಮುಕ್ತಕಂಠದಿಂದ ಸ್ವಾಗತಿಸುತ್ತಿದ್ದೇವೆ, ಅನಿವಾರ್ಯವಾಗಿ. ಏಕೆಂದರೆ ಪರೀಕ್ಷಾರ್ಥಿಗಳು ಪ್ರಾಮಾಣಿಕತೆಯಿಂದ ತಮ್ಮ ಪ್ರಯತ್ನ ಮಾಡುವಂತಹ ವಾತಾವರಣವನ್ನೇ ಶಾಲೆಗಳಲ್ಲಿ ನಿರ್ಮಿಸಲಾಗುತ್ತಿಲ್ಲ. ನಿಜಕ್ಕೂ ಸಾಮಾಜಿಕ ನೆಲೆಯಲ್ಲಿ ಸ್ವಾಭಿಮಾನ ಇದ್ದರೆ ನಾವು ಸಿಸಿಟಿವಿ ಇಲ್ಲದೆಯೇ ಪರೀಕ್ಷೆ ಬರೆಯುತ್ತೇವೆ ಎಂಬ ನಿಲುವು ತಾಳಬೇಕು. ಆದರೆ ನಾವು ಸ್ವಾಭಿಮಾನವನ್ನು, ಆತ್ಮಸಾಕ್ಷಿಯನ್ನು ಮಾರುಕಟ್ಟೆಯ ಮೌಲ್ಯಗಳಲ್ಲಿ ಒತ್ತೆ ಇಟ್ಟಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ.

ಸಿಸಿಟಿವಿ ಇದ್ದರೂ ಸಹ ಹೇಗೆ ಪರೀಕ್ಷೆಯ ನಿರ್ವಾಹಕರು ಕಾನೂನಿನ ಕಣ್ತಪ್ಪಿಸಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ನೆರವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. (ಪ್ರಜಾವಾಣಿ ವರದಿ) ಪ್ರಶ್ನೆ ಪತ್ರಿಕೆಗಳ ಕಟ್ಟುಗಳನ್ನು ಬಿಚ್ಚಿದ ಕೂಡಲೇ ಅದರ ಫೋಟೋ ತೆಗೆದು ಕ್ಷಣಮಾತ್ರದಲ್ಲಿ ರವಾನಿಸಿ ಮರಳಿ ಉತ್ತರಗಳನ್ನು ಪಡೆದು ಪರೀಕ್ಷಾರ್ಥಿಗಳಿಗೆ ಹಂಚುವ ಮೂಲಕ ನಮ್ಮ ಗುರುಪರಂಪರೆಯ ವಾರಸುದಾರರು ಮಕ್ಕಳಿಗೆ ಪ್ರಾಮಾಣಿಕತೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದ್ದಾರೆ. ಒಂದಂಕಿಯ ಉತ್ತರಗಳನ್ನು ಪರೀಕ್ಷಾರ್ಥಿಗಳಿಗೆ ಹೇಳಿಕೊಡುವ ಮೂಲಕ ಕನಿಷ್ಠ ತೇರ್ಗಡೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟಾದರೂ ಉತ್ತೀರ್ಣರಾಗದವರು ಶತದಡ್ಡರೆಂದು ಸುಮ್ಮನಾಗಬೇಕಾಗುತ್ತದೆ. ನಕಲು ಮಾಡದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಕಂಡಾಗ, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಭೂತಯ್ಯನ ಮನೆಯಿಂದ ಎಲ್ಲರೂ ತಮಗೆ ಬೇಕಾದ್ದನ್ನು ಎತ್ತಿಕೊಂಡು ಹೋಗುತ್ತಿದ್ದರೂ ತನ್ನ ನೆಚ್ಚಿನ ಉಪ್ಪಿನಕಾಯಿಗಾಗಿ ಹಾತೊರೆಯುವ ಲೋಕನಾಥ್ ನೆನಪಾದರೆ ಅಚ್ಚರಿಯೇನಿಲ್ಲ.

ಈ ಪ್ರಸಂಗವನ್ನು ಕಾನೂನಿನ ಚೌಕಟ್ಟಿನಲ್ಲಿ ನೋಡುವುದಕ್ಕಿಂತಲೂ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳ ನೆಲೆಯಲ್ಲಿ ನೋಡಿದರೆ ಬಹುಶಃ ನಮ್ಮ ಸುಪ್ತ/ಸತ್ತ ಪ್ರಜ್ಞೆ ಜಾಗೃತವಾಗಬಹುದು. “ ಕಾನೂನು ಉಲ್ಲಂಘಿಸಿ ಹೀಗೂ ಸಹ ನಿಮ್ಮ ಗುರಿ ಮುಟ್ಟಬಹುದು ” ಎಂಬ ಸಂದೇಶವನ್ನು ಮಕ್ಕಳ ಭವಿಷ್ಯ ನಿರ್ಧರಿಸುವ ಶಿಕ್ಷಕರೇ ನೀಡಿದರೆ ಇನ್ನು ಮುಂದಿನ ಪೀಳಿಗೆಯ ಮಕ್ಕಳು ಗಾಂಧೀಜಿ, ವಿವೇಕಾನಂದರನ್ನು ಅನುಸರಿಸಲು ಸಾಧ್ಯವೇ ? ಈಗಾಗಲೇ ನಮ್ಮ ಸುತ್ತಲಿನ ಸಮಾಜದಲ್ಲಿ ಕಾನೂನು ಎನ್ನುವುದು ಹಾಳೆಯ ಮೇಲಿನ ಅಕ್ಷರಗಳಾಗಿಯೇ ಉಳಿದುಬಿಟ್ಟಿದೆ. ನಾಗರಿಕ ಪ್ರಜ್ಞೆ ಎನ್ನುವುದು ಹಳಸಲು ಪದವಾಗಿಬಿಟ್ಟಿದೆ. ಅಧಿಕಾರ ಮತ್ತು ಸಾಮಥ್ರ್ಯ ಇದ್ದರೆ ಏನು ಮಾಡಿದರೂ ಮನ್ನಣೆ ದೊರೆಯುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಮಲಗುಂಡಿಯಲ್ಲಿ ಇಳಿದು ಪ್ರಾಣಬಿಡುವ ಸಫಾಯಿ ಕರ್ಮಚಾರಿಯ ಬದುಕು ನಮ್ಮ ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸುವುದಿಲ್ಲ. ಅಥವಾ ಒಂದು ತುಂಡು ಮಾಂಸದಿಂದ ತನ್ನ ಪ್ರಾಣ ಕಳೆದುಕೊಂಡ ವ್ಯಕ್ತಿಯ ವೇದನೆ ನಮ್ಮ ಮನ ಕಲಕುವುದಿಲ್ಲ. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾವಿರಾರು ಜೀವಗಳ ಆಕ್ರಂದನ ನಮಗೆ ಕೇಳುತ್ತಲೇ ಇಲ್ಲ.

ಇಂತಹ ವಿಷಮ ಸನ್ನಿವೇಶದಲ್ಲಿ ಶಿಕ್ಷಣದ ಪಾತ್ರ ಏನು ? ಶಿಕ್ಷಕರ ಪಾತ್ರ ಏನು ? ನೂರಕ್ಕೆ ನೂರು ಯಶಸ್ಸುಗಳಿಸುವುದೇ ಅಸ್ತಿತ್ವ ಉಳಿಸಿಕೊಳ್ಳಲು ಮಾನದಂಡವಾದರೆ ಸಾಂಸ್ಥಿಕವಾಗಿ ನಾವು ಉನ್ನತ ಮಟ್ಟಕ್ಕೇರಬಹುದು. ಆದರೆ ಮೌಲ್ಯಗಳು ಉಳಿದೀತೇ ? ನಮ್ಮೊಳಗಿನ ನ್ಯೂನ್ಯತೆಗಳನ್ನು ಗ್ರಹಿಸಿ ಲೋಪಗಳನ್ನು ಸರಿಪಡಿಸಿಕೊಂಡು ಉನ್ನತ ಹಂತ ತಲುಪಲು ಯತ್ನಿಸುವುದನ್ನು ಶಿಕ್ಷಣ ಎನ್ನುತ್ತಾರೆ ಅಲ್ಲವೇ ? ಆದರೆ ವಾಣಿಜ್ಯೀಕರಣ, ಲಾಭಕೋರತನ ಹಾಗೂ ಯಶಸ್ಸಿನ ಹಪಾಹಪಿ ಆಧುನಿಕ ಸಮಾಜವನ್ನು ಕವಲು ಹಾದಿಯಲ್ಲಿ ನಿಲ್ಲಿಸಿಬಿಟ್ಟಿದೆ. ದುರಂತ ಎಂದರೆ ಈ ಬೆಳವಣಿಗೆಯ ವಿರುದ್ಧ ಪ್ರತಿರೋಧದ ದನಿಯೂ ಕೇಳಿಬರುತ್ತಿಲ್ಲ. ಆಧ್ಯಾತ್ಮ, ಮೌಲ್ಯ, ಧರ್ಮ, ಮಾನವತೆ ಮತ್ತು ಶ್ರದ್ಧೆಯ ಕೇಂದ್ರಬಿಂದುಗಳೆಂದು ಬಿಂಬಿಸಲ್ಪಡುವ ಧಾರ್ಮಿಕ ಕೇಂದ್ರಗಳ ಶಿಕ್ಷಣ ಸಂಸ್ಥೆಗಳಲ್ಲೂ ಅಕ್ರಮ, ಅಪ್ರಮಾಣಿಕತೆ ತಾಂಡವಾಡುತ್ತಿದೆ. ಒಬ್ಬ ರೌಡಿಷೀಟರ್‍ನ ಸುತ್ತ ದಿನವಿಡೀ ಬೊಬ್ಬೆ ಹೊಡೆಯುವ ವಿದ್ಯುನ್ಮಾನ ಮಾಧ್ಯಮಗಳು ಇಂತಹ ಗಂಭೀರ ಸಮಸ್ಯೆಗಳಿಗೆ ಧೃತರಾಷ್ಟ್ರನಂತೆ ಪ್ರತಿಕ್ರಯಿಸುತ್ತವೆ. ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಪ್ರಶ್ನೆ ಹಳಸಲಾಯಿತು.

ಇಂದು ನಮ್ಮ ಮುಂದಿರುವ ಪ್ರಶ್ನೆಗಳು- ಮಲಿನ ಮನಸುಗಳನ್ನು ಸ್ವಚ್ಚಗೊಳಿಸುವವರಾರು ? ಕುಸಿಯುತ್ತಿರುವ ಮೌಲ್ಯಗಳನ್ನು ಸಂರಕ್ಷಿಸುವವರಾರು ? ಭಾರತ ಸ್ವಚ್ಚವಾಗದಿದ್ದರೂ ಬದುಕುತ್ತದೆ. ಮೌಲ್ಯಗಳು ಕೊಳೆತರೆ ನಾಗರೀಕತೆ ಅವಸಾನ ಹೊಂದುತ್ತದೆ. ಇಲ್ಲಿ ಬೆಕ್ಕುಗಳೂ ಇಲ್ಲ ಗಂಟೆಗಳೂ ಇಲ್ಲ ಇರುವುದೊಂದೇ ಪ್ರಶ್ನೆ – ನಾವು ಎತ್ತ ಸಾಗುತ್ತಿದ್ದೇವೆ ?

Leave a Reply

Your email address will not be published.