ಸ್ಲಂ ವಾಸ್ತವ್ಯ ಶ್ರೇಷ್ಠತೆಯ ವ್ಯಸನ ಮತ್ತು ಸ್ವಚ್ಚ ಭಾರತ

ನಾ ದಿವಾಕರ

ಹಿಮಾಲಯದ ಶಿಖರ ಏರುವುದು , ಚಂದ್ರಗ್ರಹದ ಮೇಲೆ ಮಾನವ ಕಾಲಿರಿಸುವುದು , ಮಂಗಳ ಗ್ರಹ ಯಾನ ನಡೆಸುವುದು ಇವೆಲ್ಲವೂ ಸುದ್ದಿಗೆ ಗ್ರಾಸವಾದರೆ ಅದು ಸಹಜ ಎನಿಸುತ್ತದೆ. ಏಕೆಂದರೆ ಇದು ಸಾಮಾನ್ಯ ಮಾನವರಿಂದ ಸಾಧ್ಯವಾಗದಂತಹ ಸಾಧನೆಗಳು. ಆದರೆ ರಾಜಕಾರಣಿಗಳ ಸ್ಲಂ ವಾಸ್ತವ್ಯ ಏಕೆ ಬಿಸಿಬಿಸಿ ಸುದ್ದಿ, ಬ್ರೇಕಿಂಗ್ ನ್ಯೂಸ್ ಆಗುತ್ತವೆ ? ಬಹುಶಃ ಈ ಪ್ರಶ್ನೆ ಪ್ರಜ್ಞಾವಂತ ಸಮಾಜವನ್ನು ಕಾಡದೆ ಹೋದರೆ ಇನ್ನು ಎರಡು ಮೂರು ಪೀಳಿಗೆಗಳ ನಂತರ ಈ ರೀತಿಯ ಒಂದು ಕಥೆ ಪಠ್ಯಗಳಲ್ಲೋ ಚಂದಮಾಮಾದಲ್ಲೋ ಬರಬಹುದು :

“ ಒಬ್ಬ ರಾಜಕಾರಣಿ ಇದ್ದರಂತೆ ಅವರು ಜನಸಾಮಾನ್ಯರಿಗೆ ಸದಾ ನೆರವಾಗುತ್ತಿದ್ದರಂತೆ. ಸ್ಲಂಗಳಲ್ಲೂ ತಮ್ಮ ವಾಸ್ತವ್ಯ ಹೂಡುತ್ತಿದ್ದರಂತೆ ಇತ್ಯಾದಿ ಇತ್ಯಾದಿ,,,,”
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ದಡದಕಲ್ಲಹಳ್ಳಿಯಿಂದ ಆರಂಭಿಸಿದ ಸ್ಲಂ ವಾಸ್ತವ್ಯ ಪ್ರಹಸನ ರಾಜ್ಯ ರಾಜಕಾರಣದ ಅವಿಭಾಜ್ಯ ಅಂಗವಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಎಲ್ಲ ರಾಜಕೀಯ ನಾಯಕರೂ ಸ್ಲಂ ವಾಸ್ತವ್ಯವನ್ನು ಜನಸಾಮಾನ್ಯರನ್ನು ತಲುಪುವ ಒಂದು ಸುಲಭ ಮಾರ್ಗದಂತೆ ಪರಿಗಣಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಘಟಕ ರಾಜ್ಯ ವ್ಯಾಪಿ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದೆ. ಸ್ಲಂ ವಾಸ್ತವ್ಯದ ಮೂಲಕ ರಾಜಕೀಯ ನಾಯಕರುಗಳು ಏನನ್ನು ಹೇಳಹೊರಟಿದ್ದಾರೆ ಎನ್ನುವ ಪ್ರಶ್ನೆ ಇಲ್ಲಿ ಮುನ್ನೆಲೆಗೆ ಬರುತ್ತದೆ.

“ ನಾವು ನಿಮ್ಮೊಡನೆಯೂ ಒಂದು ರಾತ್ರಿ ತಂಗಿರಲು ಸಾಧ್ಯ ” ಅಥವಾ “ ನಿಮ್ಮೊಡನೆ ತಂಗಿದ್ದು ನಿಮ್ಮ ಮನೆಯಲ್ಲಿ ಊಟ ಮಾಡುವ ಮೂಲಕ ನಿಮ್ಮನ್ನು ಸ್ವೀಕರಿಸಲು ಸಿದ್ಧರಾಗಿದ್ದೇವೆ ” ಎಂಬ ಸಂದೇಶ ಈ ವಾಸ್ತವ್ಯ ರಾಜಕಾರಣದಲ್ಲಿ ಸೂಕ್ಷ್ಮವಾಗಿ ಕಂಡುಬರುತ್ತದೆ. ಇದು ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಶ್ರೇಷ್ಠತೆಯ ವ್ಯಸನದ ಒಂದು ಸಂಕೇತ ಎನ್ನುವುದೂ ಸ್ಪಷ್ಟ. ಸ್ಲಂ ಎಂದರೇನು ? ರಾಜಕಾರಣಿಗಳಿಂದ ಅಪ್ಪುಗೆಗೊಳಗಾಗಿರುವ ಜನಸಾಮಾನ್ಯರು ಸ್ಲಂಗಳಲ್ಲಿ ಏಕೆ ಬದುಕಬೇಕು ? ನೀವು ನಿತ್ಯ ಜೀವನದಲ್ಲಿ ನಮ್ಮಿಂದ ದೂರದಲ್ಲೇ ಇರಿ ನಮಗೆ ಬೇಕೆನಿಸಿದಾಗ ನಿಮ್ಮ ಬಳಿಗೆ ಬರುತ್ತೇವೆ ಎಂದು ಹೇಳುವ ಮೂಲಕ ರಾಜಕೀಯ ನಾಯಕರು ಈ ಶ್ರಮಜೀವಿಗಳಿಗೆ ಯಾವ ಸಂದೇಶ ನೀಡುತ್ತಿದ್ದಾರೆ ? ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮೂಲ ಕಾರಣವಾದ ಶ್ರೇಷ್ಠತೆಯ ವ್ಯಸನಕ್ಕೆ ಕೆಲವೊಮ್ಮೆ ಶುದ್ಧೀಕರಣದ ಪರಿಹಾರ ಅರಸುವ ಮನಸುಗಳು ಕೆಲವೊಮ್ಮೆ ಸ್ಲಂ ವಾಸ್ತವ್ಯವಂತಹ ನಾಟಕೀಯ ಪ್ರಸಂಗಗಳನ್ನೂ ಹಮ್ಮಿಕೊಳ್ಳುತ್ತವೆ.

ಇಷ್ಟಕ್ಕೂ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ , ಸಮಾಜವಾದವನ್ನು ಮೈಗೂಡಿಸಿಕೊಂಡು ಸಮತಾ ಸಮಾಜವನ್ನು ನಿರ್ಮಿಸಲು ದಾಪುಗಾಲು ಹಾಕುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ಲಂ ಅಥವಾ ಕೊಳೆಗೇರಿ ಏಕಿರಬೇಕು ? ಸ್ಲಂಗಳಲ್ಲಿ ವಾಸಿಸುವ ಮೂಲಕ ತಮ್ಮ ಪಾರಮ್ಯ ಮೆರೆಯುವ ಅಥವಾ ತಮ್ಮೊಳಗಿನ ಅಪರಾಧಿ ಪ್ರಜ್ಞೆಯಿಂದ ಹೊರಬರುವ ವಿಕೃತ ಪ್ರಯತ್ನ ಮಾಡುವ ರಾಜಕಾರಣಿಗಳು ತಮ್ಮ ಅಂಗಳದೊಳಗೇ ಸ್ಲಂ ನಿವಾಸಿಗಳಿಗೆ ತಂಗಲು ಅವಕಾಶ ಮಾಡಿಕೊಡಲು ಸಾಧ್ಯವೇ ? ಪ್ರತಿಯೊಂದು ಗಗನ ಚುಂಬಿ ಕಟ್ಟಡದ ಹಿಂದೆಯೂ ಒಂದು ಸ್ಲಂ ಇರುತ್ತದೆ ಎಂಬ ನಾಣ್ಣುಡಿ ಇಲ್ಲಿ ಉಲ್ಲೇಖನೀಯ. ಆಧುನಿಕತೆಯ ಸಂದರ್ಭದಲ್ಲಿ ಹೇಳುವುದಾದರೆ ಪ್ರತಿಯೊಂದು ಮೇಲ್ಸೇತುವೆಯ ಅಡಿಯಲ್ಲೂ, ಪ್ರತಿಯೊಂದು ಮೆಟ್ರೋ ನಿಲ್ದಾಣದ ಹಿಂಬದಿಯಲ್ಲೂ, ಪ್ರತಿಯೊಂದು ಹೆದ್ದಾರಿಯ ಇಕ್ಕೆಲಗಳಲ್ಲೂ ಸ್ಲಂ ಇರುತ್ತದೆ. ಏಕೆಂದರೆ ಈ ಸ್ಲಂಗಳಲ್ಲಿ ವಾಸಿಸುವ ಶ್ರಮಜೀವಿಗಳೇ ಭಾರತವನ್ನು ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡಲು ಬೆವರು ಹರಿಸುತ್ತಾರೆ.

ಸ್ಲಂ ವಾಸ್ತವ್ಯ ನಾಟಕದ ಪಾತ್ರಧಾರಿಗಳಿಗೆ ಅಲ್ಲಿನ ಶ್ರಮಜೀವಿಗಳ ಬೆವರು ಅಪ್ಯಾಯಮಾನ ಎನಿಸುವುದೋ ಅಥವಾ ಶ್ರಮಜೀವಿಗಳ ಜಾತಿ ಅಸ್ಮಿತೆಗಳು ಆತ್ಮೀಯವಾಗುವುದೋ ಎಂಬ ಜಿಜ್ಞಾಸೆಯೂ ಇಲ್ಲಿ ಕಾಡುತ್ತದೆ. ಪೇಜಾವರರ ಪಾದಯಾತ್ರೆ ದಲಿತ ಕೇರಿಯನ್ನು ಪ್ರವೇಶಿಸಿದಾಗ ದಲಿತ ಸಮುದಾಯದಲ್ಲೂ ಒಂದು ರೀತಿಯ ಹುಮ್ಮಸ್ಸು, ಹರ್ಷೋಲ್ಲಾಸ ಕಂಡುಬಂದಿತ್ತು. ಆದರೆ ಪೇಜಾವರರ ಮನದ ಇಂಗಿತಕ್ಕೂ ಸ್ಲಂ ವಾಸ್ತವ್ಯ ಮಾಡುವ ರಾಜಕಾರಣಿಗಳ ಇಂಗಿತಕ್ಕೂ ಹೆಚ್ಚೇನೂ ವ್ಯತ್ಯಾಸ ಕಂಡುಬರುವುದಿಲ್ಲ. “ ನಾವು ದಲಿತ ಕೇರಿಯೊಳಗೂ ನಮ್ಮ ಪಾದ ಬೆಳಸಬಲ್ಲೆವು ” ಎಂಬ ಪೇಜಾವರರ ಅಂತರಾಳದ ಹಿಂದೆ ಕಾಣಬಹುದಾದ ವೈದಿಕ ಶ್ರೇಷ್ಠತೆ ಮತ್ತು ಕರ್ಮಠ ಬ್ರಾಹ್ಮಣ್ಯದ ಅಹಮಿಕೆಯನ್ನು ಗುರುತಿಸಬಹುದಿತ್ತು. ಸ್ಲಂ ವಾಸ್ತವ್ಯದ ಪಾತ್ರಧಾರಿಗಳಲ್ಲೂ ಗಮನಿಸಬಹುದು. ಈ ಶ್ರೇಷ್ಠತೆಯ ವ್ಯಸನವನ್ನು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಚ ಭಾರತದಲ್ಲೂ ಕಾಣಬಹುದು.

ಭಾರತ ಸ್ವಚ್ಚತೆಯಿಂದ ಮಿರಮಿರನೆ ಹೊಳೆಯುವಂತಾದರೆ ಅಥವಾ ಎಲ್ಲ ದೇಶಗಳ ಬಂಡವಾಳಿಗರನ್ನೂ ಒಮ್ಮೆಲೇ ಆಕರ್ಷಿಸುವ ರೀತಿಯಲ್ಲಿ ಆಧುನಿಕ ಭಾರತ ರೂಪುಗೊಳ್ಳುವಂತಾದರೆ ಈ ಸ್ವಚ್ಚತೆಯ ಹಿಂದಿರುವ ಕೈಗಳಾದರೂ ಯಾವುದು ? ಇದೇ ಸ್ಲಂ ನಿವಾಸಿಗಳ ಕೈಗಳಲ್ಲವೇ ? ನಾವು, ಅಂದರೆ ಮಧ್ಯಮ ವರ್ಗಗಳು, ಶ್ರೀಮಂತರು, ಕೋಟ್ಯಧಿಪತಿಗಳು, ನಮಗೆ ತ್ಯಾಜ್ಯ ಎನಿಸಿದ್ದನ್ನು ನಮ್ಮಿಚ್ಚೆಯಂತೆ ಬಿಸಾಡುತ್ತೇವೆ, ನೀವು ಇದನ್ನು ತೆಗೆದು ಭಾರತದ ಹೆಸರನ್ನು ಬೆಳಗಿಸಿ ಎನ್ನುವ ಸಂದೇಶವನ್ನು ಸ್ಲಂ ವಾಸಿ ಶ್ರಮಜೀವಿಗಳಿಗೆ ರವಾನಿಸುತ್ತಿರುವುದು ವಾಸ್ತವ ಅಲ್ಲವೇ ? ನಮ್ಮ ನಗರ ನಂಬರ್ ಒನ್ ಸ್ವಚ್ಚ ನಗರ ಎಂದು ಹೆಮ್ಮೆಯಿಂದ ಎದೆ ತಟ್ಟಿಕೊಳ್ಳುವ ಆಳುವ ವರ್ಗದ ಪ್ರತಿನಿಧಿಗಳು ಈ ಸ್ವಚ್ಚತೆಯ ಹಿಂದೆ ದುಡಿಯುವ ದೇಹಗಳ ರಕ್ಷಣೆಗೆ ಎಷ್ಟು ಗಮನ ನೀಡಿವೆ ಎಂಬ ಪ್ರಶ್ನೆ ಮೂಡಲೇಬೇಕಲ್ಲವೇ ? ಸಮವಸ್ತ್ರ ಒತ್ತಟ್ಟಿಗಿರಲಿ, ಸ್ವಚ್ಚಗೊಳಿಸುವ ಕೈಗಳಿಗೆ, ತ್ಯಾಜ್ಯದ ನಡುವೆ ನಡೆದಾಡುವ ಕಾಲ್ಗಳಿಗೆ ಕ್ರಿಮಿಕೀಟಗಳಿಂದ ರಕ್ಷಣೆ ನೀಡುವಂತಹ ಪರಿಕರಗಳನ್ನಾದರೂ ಸರ್ಕಾರಗಳು ನೀಡಿವೆಯೇ ? ದುರಂತ ಎಂದರೆ ಸ್ವಚ್ಚ ಭಾರತದ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಈ ನಾಲ್ಕು ವರ್ಷಗಳಲ್ಲಿ ಪೌರ ಕಾರ್ಮಿಕರ ರಕ್ಷಣೆಯ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಅಥವಾ ನಾಲ್ಕು ವರ್ಷದ ಬಜೆಟ್‍ನಲ್ಲಿ ಪೌರ ಕಾರ್ಮಿಕರ ವೇತನ ಹೆಚ್ಚಿಸುವ ಪ್ರಸ್ತಾಪವನ್ನೂ ಮಾಡಿಲ್ಲ.

ಇದೂ ಶ್ರೇಷ್ಠತೆಯ ವ್ಯಸನದ ಒಂದು ಸ್ವರೂಪ. ಅಂಬೇಡ್ಕರ್ ಮುಟ್ಟಿದ ನೀರನ್ನು ಶುದ್ಧೀಕರಿಸಿದ, ಬಾಬು ಜಗಜೀವನ್‍ರಾಂ ಸ್ಪರ್ಶಿಸಿದ ಪ್ರತಿಮೆಯನ್ನು ಶುದ್ಧೀಕರಿಸಿದ, ಇತ್ತೀಚೆಗೆ ಪ್ರಕಾಶ್ ರೈ ಪ್ರವೇಶಿಸಿದ ಅಂಗಳವನ್ನು ಶುದ್ಧೀಕರಿಸಿದ ಕರ್ಮಠ ಬ್ರಾಹ್ಮಣ್ಯದ ಮನಸುಗಳು ಸ್ವಚ್ಚ ಭಾರತದ ಹಿಂದಿನ ಶ್ರಮಜೀವಿಗಳ ಬಗ್ಗೆ ಎಂತಹ ಧೋರಣೆ ಹೊಂದಿದ್ದಾರೆ ಎನ್ನಲು ಸ್ಲಂ ವಾಸ್ತವ್ಯದ ರಾಜಕೀಯ ಪ್ರಹಸನ ಉತ್ತಮ ಉದಾಹರಣೆ. “ ನಾನು ಒಬ್ಬ ಜನನಾಯಕನಾಗಿದ್ದು ಸ್ಲಂ ಜನರೊಡನೆಯೂ ಒಂದು ದಿನ ವಾಸ್ತವ್ಯ ಹೂಡುವಷ್ಟು ಉದಾತ್ತ ಮನಸ್ಸು ಹೊಂದಿದ್ದೇನೆ ” ಎಂದು ಘೋಷಿಸುವ ಪ್ರವೃತ್ತಿಯೇ ಅನಾಗರಿಕತೆಯ ಲಕ್ಷಣ. ಸ್ಲಂ ಎಂದು ಕರೆಯಲ್ಪಡುವ ಶ್ರಮಜೀವಿಗಳ ವಸತಿ ಸಮುಚ್ಚಯವನ್ನು ನಿತ್ಯ ಬದುಕಲಾಗದ ವಾಸಸ್ಥಳ ಎಂದು ಭಾವಿಸುವ ವಿಕೃತ ಮನೋಭಾವವನ್ನು ಇಲ್ಲಿ ಕಾಣಬಹುದು. ಪೇಜಾವರರ ಪಾದುಕೆಗಳಿಂದ ಹಿಡಿದು ಪ್ರಧಾನಮಂತ್ರಿಯ ಭವ್ಯ ಸೌಧದವರೆಗೆ ಬಳಸಲಾಗುವ ಎಲ್ಲ ನಿತ್ಯೋಪಯೋಗಿ ವಸ್ತುಗಳನ್ನು ಉತ್ಪಾದಿಸುವ ಶ್ರಮ ಶಕ್ತಿಯ ಕೇಂದ್ರ ಈ ದೇಶದ ಸ್ಲಂಗಳು. ಶ್ರೀಮಂತರ, ಮಧ್ಯಮವರ್ಗಗಳ ಐಷಾರಾಮಿ ಜೀವನಕ್ಕೆ ಪೂರಕವಾಗಿ ನುಣುಪಾದ ರಸ್ತೆ, ಅಂದದ ಮೆಟ್ರೋ, ಭವ್ಯ ಸೇತುವೆಗಳನ್ನು ನಿರ್ಮಿಸುವ ಕೈಗಳೂ ಈ ಶ್ರಮಶಕ್ತಿ ಕೇಂದ್ರದ ಕೂಸುಗಳೇ. ಭವ್ಯ ಭಾರತವನ್ನು ಸ್ವಚ್ಚ ಭಾರತವನ್ನಾಗಿ ಪರಿವರ್ತಿಸುವ ದೇಹಗಳೂ ಈ ಶ್ರಮಶಕ್ತಿಯ ಬೀಜಗಳೇ.

ಇಂತಹ ಶ್ರಮಶಕ್ತಿ ಕೇಂದ್ರಗಳನ್ನು ತಮ್ಮ ಅಹಮಿಕೆಯ ಭೂಮಿಕೆಯಾಗಿ ಬಳಸುವ ವಿಕೃತ ರಾಜಕಾರಣವನ್ನು ನಾವು ನೋಡುತ್ತಿದ್ದೇವೆ. ಅದಕ್ಕಿಂತಲೂ ಹೆಚ್ಚಾಗಿ ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ. ಪೇಜಾವರರ ಪಾದಯಾತ್ರೆ ದಲಿತ ಕೇರಿಯೊಳಗೆ ಹೋಗುವುದೋ ನಿಂತೇ ಹೋಗುವುದೋ ಏನೂ ವ್ಯತ್ಯಾಸವಾಗುವುದಿಲ್ಲ. ರಾಜಕಾರಣಿಯ ಸ್ಲಂ ವಾಸ್ತವ್ಯ ನಡೆಯದಿದ್ದರೂ ವ್ಯತ್ಯಾಸವಾಗುವುದಿಲ್ಲ. ಆದರೆ ಸ್ಲಂ ನಿವಾಸಿಗಳ ಪಾದಯಾತ್ರೆ ನಿಂತು ಹೋದರೆ, ಇಲ್ಲಿನ ಶ್ರಮಜೀವಿಗಳ ವಾಸ್ತವ್ಯ ಇಲ್ಲವಾದರೆ ಆಧುನಿಕ ಸಮಾಜ ಶಾಶ್ವತವಾಗಿ ನಿಷ್ಕ್ರಿಯವಾಗುತ್ತದೆ. ಈ ಶ್ರಮಶಕ್ತಿಯನ್ನು ಗೌರವಿಸುವ ಮನೋಭಾವ ಆಳುವ ವರ್ಗಗಳಲ್ಲಿ ಮೂಡುವುದಕ್ಕಿಂತಲೂ ಹೆಚ್ಚಾಗಿ ನಾಗರಿಕ ಪ್ರಜ್ಞಾವಂತ ಸಮಾಜದಲ್ಲಿ ಮೂಡುವುದು ಅತ್ಯವಶ್ಯ.

Leave a Reply

Your email address will not be published.