ಸ್ಮಾರಕಗಳ ಹಂಗಿನಿಂದ ಪಾರಾದ ಸಾ.ಶಿ.ಮ.

-ಎಸ್.ಗಂಗಾಧರಯ್ಯ

ಒಂದು ಮಾತು ಸತ್ಯ. ಕನ್ನಡದ ನವ್ಯ ಸಾಹಿತ್ಯ ಪಂಥದ ಕಡೆಯ ಕಾಲ ಘಟ್ಟದಲ್ಲಿ ಓದು ಮತ್ತು ಬರವಣಿಗೆಗೆ ಕಚ್ಚಿಕೊಂಡವನು ನಾನು. ನವೋದಯ ಪಂಥಕ್ಕೆ ಸೇರಿದ ಸಾ.ಶಿ.ಮರುಳಯ್ಯನವರು ನನ್ನ ವಾರಿಗೆಯ ಲೇಖಕರನ್ನು ಪ್ರಭಾವಿಸದ್ದು ಮತ್ತು ಓದಿಸಿಕೊಂಡಿದ್ದು,ಒಂದು ಅರ್ಥದಲ್ಲಿ ಕಡಿಮೆಯೇ.

sashioಆದರೆ ನವೋದಯ ಕಾಲದ ಮೇರು ಪ್ರತಿಭೆಗಳಾದ ಕುವೆಂಪು,ಬೇಂದ್ರೆ,ಜಿ.ಎಸ್.ಎಸ್. ಮುಂತಾದ ದಿಗ್ಗಜರುಗಳು ಉಸಿರಾಡಿದ ಸೌಂದರ್ಯ ಪ್ರಜ್ಞೆ,ಜೀವನ ಪ್ರೀತಿ,ಅಗಾಧ ಓದು, ಬದುಕು ಮತ್ತು ಬರವಬಣಿಗೆಯ ಬಗೆಗಿನ ಬದ್ಧತೆ, ಹಾಗೂ ರಮ್ಯ ಗುಣಗಳು ಬಹುಮಟ್ಟಿಗೆ ಕನ್ನಡ ಸಾಹಿತ್ಯದ ಎಲ್ಲ ಬಗೆಯ ಓದುಗ ಹಾಗೂ ಬರೆಹಗಾರರನ್ನು ಹಲವು ಬಗೆಯಲ್ಲಿ ಆವರಿಸಿಕೊಂಡಿರುವುದಂತೂ ಸತ್ಯ.ಇಂಥ ಘಟಾನುಘಟಿಗಳ ಶಿಷ್ಯರಾಗಿದ್ದ, ಇವರುಗಳ ನಡುವೆ ಬರೆಯ ತೊಡಗಿದ್ದ ಮರುಳಯ್ಯನವರು ನವೋದಯದ ಸಕಲ ಪರಿಕರಗಳೊಂದಿಗೆ ಬದುಕನ್ನು ಕಂಡವರು ಮತ್ತು ಬರೆಯಲೆತ್ನಿಸಿದವರು. ಪರಂಪರೆ ಮತ್ತು ಆಧುನಿಕತೆಯನ್ನು ಸಮನ್ವಯಿಸಿಕೊಂಡವರು. ಆಧುನಿಕ ಪ್ರಜ್ಞೆಯ ಜೊತೆಗೆ ಪಾಂಡಿತ್ಯವನ್ನೂ ಜೊತೆಗಾಕಿಕೊಂಡು ಸಾಗಿದ್ದವರು. ಒಬ್ಬ ಒಳ್ಳೆಯ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಮನದಲ್ಲಿ ಬಹು ಕಾಲ ಉಳಿಯುವಂಥವರು.

ಸಾ.ಶಿ.ಮ.ನನ್ನ ಅಪ್ಪನ ವಾರಿಗೆಯವರು.ಇಬ್ಬರೂ ಆ ಕಾಲದ ಎಲ್.ಎಸ್.ನ್ನು ಒಟ್ಟಿಗೇ ಓದಿದ್ದರಂತೆ. ಇವರ ಊರು ನನ್ನೂರಿನ ಪಕ್ಕದ ಸಾಸಲು. ಅಪ್ಪ ಆಗಾಗ ಇವರ ಬಗ್ಗೆ ಹೇಳುತ್ತಿದ್ದುದುಂಟು. ಆದರೆ ಅಪ್ಪನ ಸಮ್ಮುಖದಲ್ಲಿ ನಾನಿವರನ್ನು ಯಾವತ್ತೂ ಭೇಟಿಯಾಗಿರಲೇ ಇಲ್ಲ. ಹಾಗೆ ನೋಡಿದರೆ ನಾನಿವರನ್ನು ಭೇಟಿ ಮಾಡಿದ್ದು ಕೇವಲ ಮೂರು ಸಾರ್ತಿ ಮಾತ್ರ. ಒಂದು, ಇವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ.ಎರಡು, ನಾನು ಚಿಕ್ಕನಾಯಕನಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದಾಗ. ಕೊನೆಯ ಸಲ, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಕೊನೆಯ ಎರಡು ಭೇಟಿಗಳು ನನಗೆ ಸಾ.ಶಿ.ಮರ ಬಗ್ಗೆ ವಿಶೇಷ ಪ್ರೀತಿಯನ್ನು ಮೂಢಿಸಿದ್ದವು.ಕಾರಣ ಅವರ ಸರಳತೆ,ಕುತೂಹಲ ಮತ್ತು ಕಿರಿಯರೊಂದಿಗೆ ಅವರಿಗಿದ್ದ ಒಡನಾಟದ ತುಡಿತ.

sashi1ಇವುಗಳಿಗೆ ಪೂರಕವಾಗಿ ಇಲ್ಲಿ ಮತ್ತೊಂದು ಮಾತು. ಇವರು ನನ್ನ ಪಕ್ಕದ ಊರಿನವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಓದುಗ ವಲಯವನ್ನು ಹೊಂದಿದ್ದವರು,ಸಾಹಿತ್ಯ ಸಮ್ಮೇಳನ ಹಳ್ಳಿಯಲ್ಲೇ ನಡೆಯುತ್ತಿದ್ದುದರಿಂದ ಹಾಗೂ ಸಾ.ಶಿ.ಮ.ರವರಿಗೆ ಎಂಭತ್ತೈದು ವರ್ಷಗಳು ತುಂಬಿದ್ದರಿಂದ ಸಮ್ಮೇಳನವನ್ನು ಸಾ.ಶಿ.ಮ.ರಿಗೆ ಅರ್ಪಿಸಬೇಕೆಂದು ಸಮಿತಿಯವರು ತೀರ್ಮಾನಿಸಿದ್ದರು. ಅದೇರೀತಿ ಸಮ್ಮೇಳನದ ಮೊದಲ ದಿನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರುವ ಸಂಪ್ರದಾಯದ ಮಾತುಗಳು ಬಂದಾಗ ನನಗದರಲ್ಲಿ ನಂಬಿಕೆ ಇಲ್ಲದ್ದರಿಂದ ನಾನದನ್ನು ವಿರೋಧಿಸಿದ್ದೆ. ಆದರೂ ಸಮಿತಿಯವರ ಹಠ ಮತ್ತು ಅತೀ ಆತ್ಮವಿಶ್ವಾಸ ನನ್ನನ್ನು ಪೇಚಿಗೆ ಸಿಕ್ಕಿಸಿದ್ದರಿಂದ ನಾನು ಅಂತಹ ಮೆರವಣಿಗೆಯಿಂದ ದೂರ ಉಳಿಯಲು ನಿರ್ಧರಿಸಿದ್ದೆ.

ಸಕಲ ಸಿದ್ಧತೆಗಳನ್ನು ಮಾಡಿಕೊಂಡು ನನಗಾಗಿ ಕಾಯುತ್ತಿದ್ದರೂ ನಾನತ್ತ ಸುಳಿಯದಿದ್ದರಿಂದ ಅಲ್ಲಿಗಾಗಲೇ ಬಂದಿದ್ದ ಸಾ.ಶಿ.ಮ.ರವರು ಮೆರವಣಿಗೆ ತಡವಾಗುತ್ತಿರುವುದರ ಬಗ್ಗೆ ಕೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅವರಿಗೆ ಇಷ್ಟವಿಲ್ಲ ಅಂದ ಮೇಲೆ ನನಗೂ ಬೇಡ ಬರ ಹೇಳಿ ಅಂದಿದ್ದಾರೆ.

ಬೆಳಗಿನ ಬಿಸಿಲಾಗಲೇ ಚುರುಕು ಮುಟ್ಟಿಸುತ್ತಿತ್ತು.ಕೊಂಚ ಅಳುಕಿನಿಂದಲೇ ಅಲ್ಲಿಗೆ ಹೋದ ನನ್ನನ್ನು,`ಅಯ್ಯೊ ನಾನು ನಿಮ್ಮಪ್ಪ ಇಬ್ರೂ ತುಂಬಾ ಸ್ನೇಹಿತ್ರು ಕಣಪ್ಪಾ ಬಾ,’ಅಂತ ತಬ್ಬಿಕೊಂಡು ಬಿಟ್ಟರು.ಸುಮಾರು ಒಂದು ಮೈಲಿಯಷ್ಟು ದೂರ ನಡೆಯುವಷ್ಟರಲ್ಲಿ ಮೆರವಣಿಗೆಯ ಬಗ್ಗೆ ನನಗಿದ್ದ ಅಭಿಪ್ರಾಯವನ್ನು ಅವರಿಗೆ ತಿಳಿಸಿದೆ.` ನಿನ್ನ ಮಾತೂ ಸರೀನೇ,’ ಅಂದವರೇ,`ಎಂಥಾ ಒಳ್ಳೆಯ ಕೆಲಸ ಮಾಡ್ದೆ ನೀನು ಅಂತೀಯಾ,ನಾನು ಎಂದೋ ಈ ಮಣ್ಣಿನಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ನಡೆದಾಡಿದ ದಿನಗಳನ್ನು ಜ್ಞಾಪಿಸಿದೆ,ನನ್ನ ಕೆಲ ಗೆಳೆಯರನ್ನ,ಪರಿಚಯದವರನ್ನು ಮುಟ್ಟಿ ಮಾತನಾಡಿಸುವ ಸೌಭಾಗ್ಯ ದೊರಕಿಸಿದೆ,’ಅಂತ ಭಾವುಕರಾದರು.ಆ ಸಮ್ಮೇಳನದ ಎರಡೂ ದಿನಗಳು ಅವರೊಂದಿಗೆ ಕಳೆದ ಆತ್ಮೀಯ ದಿನಗಳು.

saಎರಡನೆಯ ದಿನ ಸಂಜೆಯ ಹೊತ್ತಿಗೆ ಪೂರಾ ದಣಿದು ಹೋಗಿದ್ದರು. ಆದರೂ ಸಂಜೆಯವರೆಗೂ ವೇದಿಕೆಯ ಮೇಲೆ ಕುಳಿತು ಆನಂದಿಸಿದರು. ರಾತ್ರಿ ಬೆಂಗಳೂರು ತಲುಪುವ ಹೊತ್ತಿಗೆ ಆರೋಗ್ಯ ವಿಪರೀತ ಕೈಕೊಟ್ಟಿದ್ದರಿಂದ ಸೀದಾ ಆಸ್ಪತ್ರೆಗೆ ದಾಖಲಾಗಿದ್ದರು. ಒಂದಷ್ಟು ದಿವಸ ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತು ಅಂದುಕೊಳ್ಳುತ್ತಿದ್ದ ನನ್ನಂಥವನೊಳಗೆ ಅಚ್ಚರಿ ಮೂಡಿಸುವಂತೆ ಮತ್ತೆ ಕೆಲವೇ ಕೆಲವು ದಿನಗಳಾದ ಮೇಲೆ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಸಿಕ್ಕಿದರು. `ಏನ್ ಅಧ್ಯಕ್ಷರು,ನಿನ್ನ ನೋಡಿ ಸಂತೋಷ ಆಯ್ತು ಕಣಪ್ಪ,’ಅಂತ ನಕ್ಕು ಹತ್ತಿರ ಬಂದು ತಬ್ಬಿಕೊಂಡರು.`ಅಲ್ಲಾ ಆರೋಗ್ಯ ಸರಿಯಿಲ್ಲದ ಮೇಲೆ ಇಲ್ಲಿಗೆ ಯಾಕೆ ಬರಾಕೆ ಹೋದ್ರಿ,’ಅಂದೆ ನಾನು.`ಚೆನಾಗೇಳ್ತೀಯ ನೀನು, ಹಿಂಗೆ ಓಡಾಡ್ಕೆಂಡು ಇದ್ರೇನೇ ಆರೋಗ್ಯ ಸರ್ಯಾಗಿರಾದು,’ ಅಂತ ಪಕಾಯಿಸಿ ನಕ್ಕರು.

ಅದೇ ನನ್ನ ಅವರ ಕೊನೆಯ ಭೇಟಿ. ಅವರಿಲ್ಲದ ಈ ಹೊತ್ತಿನಲ್ಲಿ ಅಂದಿನ ಆ ನಗು ಈಗಲೂ ನನ್ನೊಳಗೆ ಮರುದನಿಸುತ್ತಾ ಒಂಥರಾ ಸಂಕಟವಾಗುತ್ತಿದೆ. ಅದೇರೀತಿ, ಕಣ್ಣು ಮತ್ತು ದೇಹಗಳನ್ನು ದಾನ ಮಾಡಲು ತೆಗೆದುಕೊಂಡ ತೀರ್ಮಾನದಿಂದಾಗಿ ಸ್ಮಾರಕಗಳ ಹಂಗಿನಿಂದ ಪಾರಾದ್ದಕ್ಕೆ, ಸಂಪ್ರದಾಯಗಳ ಮುಲಾಜುಗಳಿಗೆ ಬೀಳದ್ದಕ್ಕೆ ಸಮಾಧಾನವಾಗುತ್ತಿದೆ.

Leave a Reply

Your email address will not be published.