ಸೇನೆ ಪ್ರಶ್ನಾತೀತವಾದರೆ ಪ್ರಜಾತಂತ್ರ ಉಳಿಯದು

ನಾ. ದಿವಾಕರ

ಒಂದು ದೇಶದ ಆಡಳಿತ ವ್ಯವಸ್ಥೆಗೆ ಹಲವಾರು ಭೂಮಿಕೆಗಳಿರುತ್ತವೆ. ಹಲವಾರು ಆಯಾಮಗಳಿರುತ್ತವೆ. ಹಲವಾರು ಮಜಲುಗಳಿರುತ್ತವೆ. ಆಡಳಿತ ವ್ಯವಸ್ಥೆಯ ಆಗುಹೋಗುಗಳನ್ನು ನಿರ್ವಹಿಸಲು, ಸಮಾಜದ ಓರೆ ಕೋರೆಗಳನ್ನು ತಿದ್ದಲು, ಪ್ರಜೆಗಳ ಲೋಪಗಳನ್ನು ಸರಿಪಡಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಅಧಿಕೃತ ವಾರಸುದಾರರು, ಪ್ರತಿನಿಧಿಗಳು ಇರುತ್ತಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದು ಸಮಾನ ನಾಗರಿಕ ಪ್ರಜ್ಞೆ ಇದ್ದೇ ಇರುತ್ತದೆ. “ ಆಡಳಿತ ವ್ಯವಸ್ಥೆ ” ಎಂಬ ಪರಿಕಲ್ಪನೆಯೆ ಇಂತಹ ಹಲವು ಆಯಾಮಗಳ ಒಂದು ಸಂಗಮ ಎಂದು ಇತಿಹಾಸವೇ ನಿರೂಪಿಸಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಹಲವು ಆಯಾಮಗಳು ಸೌಹಾರ್ದತೆಯಿಂದ, ಪ್ರಾಮಾಣಿಕತೆಯಿಂದ, ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಒಂದು ಪ್ರಬುದ್ಧ ಸಮಾಜ ಸೃಷ್ಟಿಯಾಗುತ್ತದೆ. ಶ್ರೇಷ್ಠತೆಯ ಅಹಮಿಕೆ ಅಥವಾ ಸ್ವಪ್ರತಿಷ್ಠೆಗಳು ನುಸುಳಿದಾಗ ವ್ಯವಸ್ಥೆ ಕುಸಿಯುತ್ತದೆ. ಬಹುಶಃ ಭಾರತದ ಸಂದರ್ಭದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಂತರಾತ್ಮ ಎನ್ನಬಹುದಾದ ಶ್ರೇಷ್ಠತೆಯ ಅಹಮಿಕೆ ಈ ಆಡಳಿತ ವ್ಯವಸ್ಥೆಯ ಎಲ್ಲ ಆಯಾಮಗಳಲ್ಲೂ ನುಸುಳಿರುವುದರಿಂದಲೇ ನಮ್ಮ ಪ್ರಜಾತಂತ್ರ ಅರ್ಥಹೀನವಾಗಿಯೇ ಕಾಣುತ್ತಿದೆ.

ದೇಶ ಎಂಬ ಭೌಗೋಳಿಕ ಚೌಕಟ್ಟನ್ನು ವ್ಯಾಖ್ಯಾನಿಸುವುದರಲ್ಲೇ ಶ್ರೇಷ್ಠತೆಯ ಅಹಮಿಕೆ ದಟ್ಟವಾಗಿರುವುದು ಭಾರತೀಯ ಸಮಾಜವನ್ನು ಗೊಂದಲಕ್ಕೀಡುಮಾಡಿದೆ. ಈ ದೇಶದ ಪರಿಕಲ್ಪನೆಯನ್ನು ಆವರಿಸಿರುವ ಭೌಗೋಳೀಕ ಉತ್ಕಟ ಪ್ರೇಮವನ್ನು ರಾಷ್ಟ್ರೀಯತೆ ಎಂದು ಭಾವಿಸುತ್ತೇವೆ. ರಾಷ್ಟ್ರ-ರಾಷ್ಟ್ರೀಯತೆ ಹಾಗೂ ರಾಷ್ಟ್ರ ರಕ್ಷಣೆ ಈ ವಿದ್ಯಮಾನಗಳು ಈ ಉತ್ಕಟತೆ ಮತ್ತು ಉನ್ಮಾದದ ಸುಳಿಗೆ ಸಿಲುಕಿದಾಗ ರಾಷ್ಟ್ರದ ಪರಿಕಲ್ಪನೆಯೇ ಭ್ರಷ್ಟವಾಗುತ್ತದೆ. ರಾಮಜನ್ಮಭೂಮಿಯ ನೆಲೆಯಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸುವ ಕನಸು ಕಂಡ ಸಂಘಪರಿವಾರಕ್ಕೆ ಹಿಂದೂ ರಾಷ್ಟ್ರದ ಸ್ಥಾಪನೆ ಬಾಬ್ರಿಯ ಅವಶೇಷಗಳಿಂದ ಧಿಗ್ಗನೆದ್ದು ದಾದ್ರಿಯಲ್ಲಿ ಸಾಕಾರಗೊಂಡಿದೆ. ಊನ ಗ್ರಾಮದ ಘಟನೆಗಳು ಈ ಪರಿಕಲ್ಪನೆಗೆ ಒಂದು ಸ್ಪಷ್ಟ ಆಯಾಮವನ್ನು ನೀಡಿದೆ. ಹಾಗಾಗಿಯೇ ದೇಶ-ದೇಶಭಕ್ತಿ-ದೇಶಪ್ರೇಮ ಮತ್ತು ದೇಶದ್ರೋಹದ ಪರಿಕಲ್ಪನೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೆಲವೇ ಹಿತಾಸಕ್ತಿಗಳ ರಾಜಕೀಯ ಮುನ್ನಡೆಗೆ, ಸಾಂಸ್ಕøತಿಕ ಅಧಿಪತ್ಯಕ್ಕೆ ಚಿಮ್ಮುಹಲಗೆಯಂತಾಗಿದೆ. ರೋಹಿತ್ ವೇಮುಲ, ಜೆಎನ್‍ಯು ವಿಶ್ವವಿದ್ಯಾಲಯದ ಕನ್ನಯ್ಯ ಕುಮಾರ್ ಈ ಚಿಮ್ಮುಹಲಗೆಗಳ ಅಡಿ ಸಿಲುಕಿರುವ ಪ್ರಜ್ಞಾವಂತ ಸಮುದಾಯಗಳ ಸಂಕೇತವಾಗಿ ಕಾಣುತ್ತಾರೆ. ದೇಶಭಕ್ತಿ ಎನ್ನುವ ಪರಿಕಲ್ಪನೆ ಪ್ರಜ್ಞಾವಂತ ಮನಸುಗಳಿಗೆ ಶವಪೆಟ್ಟಿಗೆಗಳಂತಾಗಿರುವ ಭಾರತೀಯ ಸಮಾಜದಲ್ಲಿ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಎದುರಿಸುತ್ತಿರುವ ಸಮಸ್ಯೆ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎನ್ನಬಹುದು.

ನಿಜ ಯಾವುದೇ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನಸಮುದಾಯಗಳು ನೆಮ್ಮದಿಯಿಂದ ಜೀವನ ಸಾಗಿಸಲು ರಕ್ಷಣೆ ಅತ್ಯಗತ್ಯ. ಇದು ಚಾರಿತ್ರಿಕವಾಗಿ ಕಂಡುಬಂದಿರುವ ಒಂದು ವಿದ್ಯಮಾನವೂ ಹೌದು. ಒಬ್ಬ ಪಾಳೆಯಗಾರನಿಂದ ಸಾಮಂತನವರೆಗೂ, ಸಣ್ಣ ಪ್ರಾಂತೀಯ ರಾಜನಿಂದ ಹಿಡಿದು ಸಾಮ್ರಾಟನವರೆಗೂ ಈ ಭೌಗೋಳಿಕ ಪ್ರಾಂತ್ಯದ ಭೌತಿಕ ರಕ್ಷಣೆ ಆದ್ಯತೆಯಾಗಿದ್ದುದೂ ಚಾರಿತ್ರಿಕ ಸತ್ಯ. ಆದರೆ ಈ ರಕ್ಷಣೆಯ ಮೂಲ ಸ್ವರೂಪ ರೂಪುಗೊಳ್ಳುವುದು ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಆಳುವ ವರ್ಗಗಳ ಪರಿಸರದಲ್ಲಿ. ತಮ್ಮ ಆಳ್ವಿಕೆಯ ರಕ್ಷಣೆಯೇ ತಮ್ಮ ಅಧಿಪತ್ಯದಲ್ಲಿರುವ ಭೌಗೋಳಿಕ ಪ್ರದೇಶದ ರಕ್ಷಣೆ ಎಂಬ ಭಾವನೆ ಆಳುವ ವರ್ಗಗಳಲ್ಲಿ ಸಹಜವಾಗಿಯೇ ಕಾಣುತ್ತದೆ. ಏಕೆಂದರೆ ಇದು ಪ್ರಾತಿನಿಧ್ಯದ ಪ್ರಶ್ನೆ ಮಾತ್ರವೇ ಅಲ್ಲ ಆಳುವ ವರ್ಗಗಳ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಯೂ ಆಗಿರುತ್ತದೆ. ಹಾಗಾಗಿ ರಕ್ಷಣೆಗೆ ಪ್ರತಿಯಾಗಿ ಸೃಷ್ಟಿಯಾಗುವ ಆಕ್ರಮಣ ಮತ್ತೊಂದು ಭೌಗೋಳಿಕ ಪ್ರಾಂತ್ಯದ ಭೂಮಿಕೆಯಾಗುತ್ತದೆ. ಈ ರಕ್ಷಣೆ ಮತ್ತು ಆಕ್ರಮಣದ ಸಂಘರ್ಷವೇ ಆಧುನಿಕ ಮಾನವ ಇತಿಹಾಸವನ್ನು ನಿರೂಪಿಸಿದೆ ಇಂದಿಗೂ ನಿರೂಪಿಸುತ್ತಿದೆ.

militaryವಾಸ್ತವತೆಯ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ “ ಇದು ನಮ್ಮ ಭೂಮಿ ” ಎಂದು ಹೇಳುವ ಹಕ್ಕು ಯಾರಿಗೂ ಇರುವುದಿಲ್ಲ. ಭೂಮಿ ಒಂದು ನೈಸರ್ಗಿಕ ಭೂಮಿಕೆಯಾಗಿ ಸಮಸ್ತ ಮನುಕುಲಕ್ಕೆ ಸಲ್ಲುತ್ತದೆ. ಆದರೆ ತನ್ನ ಅಭ್ಯುದಯದ ಹಾದಿಯಲ್ಲಿ ಕೂಡಿ ಬಾಳುವ ನಾಗರಿಕ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಮಾನವ ಸಮಾಜ ಭೂಮಿಯ ಮೇಲೆ ಅಧಿಪತ್ಯ ಸಾಧಿಸುವ ಮುಖಾಂತರ ಜನಸಮುದಾಯಗಳನ್ನು ತಮ್ಮ ಅಧಿಪತ್ಯಕ್ಕೊಳಪಡಿಸುವ ಕ್ಷುದ್ರ ತಂತ್ರವನ್ನು ಅನುಸರಿಸುತ್ತಲೇ ಬಂದಿದೆ. ಈ ಭಾವುಕ ಭೌತಿಕ ಚೌಕಟ್ಟಿನಲ್ಲಿ ತಮ್ಮ ನಿತ್ಯ ಜೀವನದ ಜಂಜಾಟಗಳನ್ನು ಕಳೆಯುವ ಜನಸಾಮಾನ್ಯರಿಗೆ ಮೂಲತಃ ಈ ಭೌಗೋಳಿಕ ಪ್ರದೇಶದ ವ್ಯಾಪ್ತಿ, ಹರವು ಮತ್ತು ಚೌಕಟ್ಟು ಮುಖ್ಯವಾಗುವುದಿಲ್ಲ. ಅದು ಕೇವಲ ಸಾಂಕೇತಿಕವಾಗಿ, ಸಾಪೇಕ್ಷ ವಿದ್ಯಮಾನವಾಗಿ ಉಳಿದಿರುತ್ತದೆ. ಈ ಸಾಂಕೇತಿಕತೆಯನ್ನು, ಸಾಪೇಕ್ಷತೆಯನ್ನು ತಮ್ಮ ಅಧಿಪತ್ಯದ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಮೂಲಕ ಆಳುವ ವರ್ಗಗಳು ಭೌಗೋಳಿಕ ಪ್ರಾಂತ್ಯದ ಸುತ್ತ ಭಾವುಕ ಪ್ರಭಾವಳಿಯನ್ನು ಸೃಷ್ಟಿಸಿ ಈ ಪ್ರಭಾವಳಿಗೆ ದೇಶ ಅಥವಾ ರಾಷ್ಟ್ರ ಎಂಬ ಸ್ವರೂಪ ನೀಡಿರುವುದನ್ನು ಮಾನವ ಇತಿಹಾಸದ ಸಂದರ್ಭದಲ್ಲಿ ಕಾಣಬಹುದು.

ಜನಸಾಮಾನ್ಯರ ಆದ್ಯತೆಯಾಗದ, ದುಡಿಯುವ ವರ್ಗಗಳ , ಶ್ರಮಜೀವಿಗಳ ಅಸ್ಮಿತೆಯನ್ನೇ ಹೊಸಕಿ ಹಾಕುವ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನೇ ನಿರಾಕರಿಸುವ ಈ ದೇಶ ಅಥವಾ ರಾಷ್ಟ್ರದ ಪರಿಕಲ್ಪನೆ ಆಂತರಿಕ ಪರಿಶುದ್ಧತೆ ಮತ್ತು ಪ್ರಾಮಾಣಿಕತೆಗಿಂತಲೂ ಹೆಚ್ಚಾಗಿ ಬಾಹ್ಯ ಜಗತ್ತಿನ ವೈಭವೀಕರಣಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಹಾಗಾಗಿ ದೇಶದ ರಕ್ಷಣೆ ಎಂದರೆ ಭೌಗೋಳಿಕ ದೇಶದ ರಕ್ಷಣೆಯಾಗುವುದೇ ಹೊರತು, ಆಂತರಿಕ ರಕ್ಷಣೆಯಾಗುವುದಿಲ್ಲ. ಭೌತಿಕ ರಕ್ಷಣೆಯಾಗುವುದೇ ಹೊರತು ಬೌದ್ಧಿಕ ರಕ್ಷಣೆಯಾಗುವುದಿಲ್ಲ. ಲೌಕಿಕ ರಕ್ಷಣೆಯಾಗುವುದೇ ಹೊರತು ಆತ್ಮರಕ್ಷಣೆಯಾಗುವುದಿಲ್ಲ. ಇಂತಹ ವಿಷಮ ಸನ್ನಿವೇಶದಲ್ಲಿ ಜನಸಮುದಾಯದ ತುಮುಲಗಳು, ಆಕಾಂಕ್ಷೆಗಳು, ಶ್ರಮಜೀವಿಗಳ ಕನಸುಗಳು, ಸಾಮಾನ್ಯ ಪ್ರಜೆಗಳ ಭಾವನೆಗಳು ಆಳುವ ವರ್ಗಗಳ ರಥಯಾತ್ರೆಯ ಮಾರ್ಗದ ಹಾಸುಗಲ್ಲುಗಳಾಗಿಬಿಡುತ್ತವೆ. ಈ ಎಲ್ಲ ಭಾವನಾತ್ಮಕ ಅಂಶಗಳನ್ನು ಮೆಟ್ಟಿ ನಡೆಯುತ್ತಲೇ ಒಂದು ಭೌಗೋಳಿಕ ಅಧಿಪತ್ಯ ತನ್ನ ಸಾಮ್ರಾಜ್ಯವನ್ನು ನಿರ್ಮಿಸುತ್ತದೆ. ಹಾಗಾಗಿಯೇ ಈ ಭೌಗೋಳಿಕ ಚೌಕಟ್ಟನ್ನು ರಕ್ಷಿಸುವುದೇ ನಿಜವಾದ ದೇಶಪ್ರೇಮ ಎಂದು ಹೇಳಲಾಗುತ್ತದೆ.

ಸಹಜವಾಗಿಯೇ ಈ ರಕ್ಷಣೆಯ ಕಾರ್ಯ ನಿರ್ವಹಿಸುವ ಯೋಧರು, ಸೈನಿಕರು ದೇಶ ಅಥವಾ ದೇಶಪ್ರೇಮದ ಸಾಂಕೇತಿಕ ಪ್ರತಿನಿಧಿಗಳಾಗಿಬಿಡುತ್ತಾರೆ. ಮಾನವ ಇತಿಹಾಸದ ಪುಟಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸೇನೆ ಎಂಬ ಸಂಸ್ಥೆಯೇ ಆಳುವ ವರ್ಗಗಳ ಸಾರ್ವತ್ರಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವುದನ್ನು ಗಮನಿಸಬಹುದು. ಭೌಗೋಳಿಕ ಪ್ರಾಂತ್ಯದ ರಕ್ಷಣೆ ಎಂಬ ಪರಿಕಲ್ಪನೆಯ ಚೌಕಟ್ಟಿನಲ್ಲಿ ಮೂಲತಃ ಆಳುವ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಯಾವುದೇ ಸೇನೆಯ ಆದ್ಯತೆಯಾಗಿರುತ್ತದೆ. ಹಾಗಾಗಿಯೇ ಆಧುನಿಕ ಮಾನವ ಸಮಾಜದಲ್ಲಿ ಯುದ್ಧ ವಿರೋಧಿಗಳನ್ನು ದೇಶದ್ರೋಹಿಗಳೆಂದೇ ಪರಿಗಣಿಸಲಾಗುತ್ತದೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಜನಸಾಮಾನ್ಯರು ದೇಶದ್ರೋಹಿಗಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಧಿಪತ್ಯ ರಾಜಕಾರಣದ ಒಂದು ಪ್ರಬಲ ಅಂಗವಾಗಿ ಕಾರ್ಯನಿರ್ವಹಿಸುವ ಸೇನೆ ಒಂದು ಸ್ವಾಯತ್ತ ವ್ಯಕ್ತಿತ್ವವನ್ನಾಗಲೀ, ಸ್ವಂತಿಕೆಂiÀiನ್ನಾಗಲೀ ಹೊಂದಿರುವುದಿಲ್ಲ. ಒಂದು ನಿರ್ದಿಷ್ಟ ಉದ್ದೇಶದಿಂದ ರೂಪಿಸಲಾಗುವ ಆಡಳಿತ ವ್ಯವಸ್ಥೆಯ ಈ ಅಂಗ ಮೂಲತಃ ರಕ್ಷಿಸುವುದು ಆಳುವ ವರ್ಗಗಳನ್ನೇ ಹೊರತು, ದೇಶದ ಅಭ್ಯುದಯಕ್ಕೆ ಮುನ್ನುಡಿ ಹಾಡುವ ಶ್ರಮಜೀವಿಗಳನ್ನಲ್ಲ ಎಂಬ ಸತ್ಯಾಂಶವನ್ನು ಇತಿಹಾಸದಲ್ಲಿ ಹೇರಳವಾಗಿ ಗುರುತಿಸಬಹುದು. ಆದ್ದರಿಂದಲೇ ದೇಶದ ಗಡಿ ಕಾಯುವ ಯೋಧರೇ ಆಂತರಿಕವಾಗಿ ಪ್ರಭುತ್ವದ ವಿರುದ್ಧ ತಮ್ಮ ಪ್ರತಿರೋಧದ ದನಿ ವ್ಯಕ್ತಪಡಿಸುವ ನಾಗರಿಕರನ್ನು ಸದೆಬಡಿಯಲು ಸದಾ ಸಜ್ಜಾಗಿರುತ್ತಾರೆ. ಇದು ಸ್ವಪ್ರೇರಣೆ ಅಥವಾ ಸ್ವ ನಿಯೋಜಿತವಾಗಿರುವುದಿಲ್ಲ. ಬದಲಾಗಿ ಆಡಳಿತ ವ್ಯವಸ್ಥೆಯ ಒತ್ತಾಸೆಗೆ ಬದ್ಧವಾದ ಒಂದು ವಿದ್ಯಮಾನವಾಗಿರುತ್ತದೆ.

ಹಾಗಾಗಿಯೇ ದೇಶ ಅಥವಾ ದೇಶಭಕ್ತಿ ಎಂದ ಕೂಡಲೇ ಸೇನೆ ವಿಜೃಂಭಿಸುತ್ತದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸೇನೆಯ ವೈಭವೀಕರಣ ಕಂಡುಬರುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತಾ, ತಮ್ಮ ಬೆವರು ನೆತ್ತರು ಸುರಿಸಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಕೋಟ್ಯಂತರ ಶ್ರಮಜೀವಿಗಳು, ರೈತರು, ದುಡಿಯುವ ವರ್ಗಗಳು, ಜನಸಾಮಾನ್ಯರು ಕಡೆಗಣಿಸಲ್ಪಡುತ್ತಾರೆ. ಸ್ವಾತಂತ್ರ್ಯ ದಿನದಂದು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸೇನೆಯ ಶಕ್ತಿ ಪ್ರದರ್ಶನವೇ ಮುಖ್ಯ ಆಕರ್ಷಣೆಯಾಗುತ್ತದೆ. ರೈತ ಸಮುದಾಯದ ಲೆಫ್ಟ್ ರೈಟ್ ಮೆರವಣಿಗೆ ಕಾಣುವುದೇ ಇಲ್ಲ. ಪ್ರಭುತ್ವದ ಅಧಿಪತ್ಯವನ್ನು ರಕ್ಷಿಸಲು ತಮ್ಮ ಜೀವ ಒತ್ತೆಯಿಟ್ಟು ಗಡಿ ಕಾಯುವ ಯೋಧರು ತಮ್ಮ ಪಯಣ ಮುಗಿಸಿದ ನಂತರ “ ಹುತಾತ್ಮ ”ರಾಗುತ್ತಾರೆ. ಅನ್ನದಾತರು ಕೆಂಜಿರುವೆಗಳಂತೆ ಸಾಯುತ್ತಿದ್ದರೂ ಅವರ ಅಂತರಾತ್ಮದ ಆಕ್ರಂದನ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ದೇಶದ ಪ್ರಗತಿಯ ಹಾಸುಗಲ್ಲುಗಳಂತೆ ತಮ್ಮ ಬೆವರು ಸುರಿಸಿ ತ್ಯಾಗ ಮಾಡುವ ಶ್ರಮಜೀವಿಗಳ ಅಳಲು, ಆಕ್ರಂದನ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತದೆ.

ರಾಷ್ಟ್ರ-ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮದ ಈ ಭಾವುಕ ನೆಲೆಯಲ್ಲಿ ಸೇನೆ ಪ್ರಶ್ನಾತೀತವಾಗಿಬಿಡುತ್ತದೆ. ನಿತ್ಯ ಯೋಧ ಎಂದು ಹೇಳಬಹುದಾದ “ ಉಳುವಾ ಯೋಗಿ ” ಪ್ರಶ್ನೆಯಾಗಿಯೇ ಉಳಿಯುತ್ತಾನೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೀವನವಿಡೀ ಶ್ರಮಿಸುವ ಶ್ರಮಜೀವಿಯ ಯೋಗಾಯೋಗಗಳು ಯೋಗದಿನದ ಸಂಭ್ರಮದಲ್ಲಿ ಕಣ್ಮರೆಯಾಗಿಬಿಡುತ್ತದೆ. ಆದರೆ ಪ್ರಜಾತಂತ್ರ ವ್ಯವಸ್ಥೆ ಜೀವಂತವಾಗಿರಲು ಬೇಕಿರುವುದು ಒಂದು ಭೌಗೋಳಿಕ ಪ್ರದೇಶದ ಅಂತರಾತ್ಮದ ರಕ್ಷಣೆಯೇ ಹೊರತು, ಗಡಿ ರಕ್ಷಣೆಯಲ್ಲ. ಸುರಕ್ಷಿತ ಗಡಿ, ಸುಭದ್ರ ರಾಷ್ಟ್ರದ ಚೌಕಟ್ಟಿನಲ್ಲಿ ಕೊಳೆತುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನೇ ರಾಷ್ಟ್ರ ಪ್ರೇಮದ ಉನ್ಮಾದದಲ್ಲಿ ಮೆರವಣಿಗೆ ಮಾಡುವ ಸಮಾಜ ತಾರ್ಕಿಕ ನೆಲೆಯನ್ನು ಕಾಣುವುದು ಅಸಾಧ್ಯ. ಇಂತಹ ಸಮಾಜದಲ್ಲಿ ಮಾತ್ರ ಸೇನೆ ಅಥವಾ ಸೈನಿಕರು ಪ್ರಶ್ನಾತೀತರಾಗಲು ಸಾಧ್ಯ. ದೇಶ, ದೇಶಪ್ರೇಮ ಮತ್ತು ಸೈನ್ಯದ ಸಮೀಕರಣ ಪ್ರಜಾತಂತ್ರ ವ್ಯವಸ್ಥೆಯ ಶವಪೆಟ್ಟಿಗೆಯ ಕೊನೆಯ ಮೊಳೆ ಎಂದರೆ ಅತಿಶಯೋಕ್ತಿಯೇನಲ್ಲ. ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಪ್ರಕರಣ, ಜೆಎನ್‍ಯು-ಕನ್ನಯ್ಯ ಕುಮಾರ್ ಪ್ರಕರಣ ಮತ್ತು ಊನ ಗ್ರಾಮದ ಘಟನೆಗಳು ಈ ನಿಟ್ಟಿನಲ್ಲಿ ಜಾಗೃತಿಯ ಭೂಮಿಕೆಯಾಗಬೇಕಿದೆ. ಇಲ್ಲವಾದಲ್ಲಿ ಭಾರತ ಒಂದು ಪ್ರಜಾತಂತ್ರ ವ್ಯವಸ್ಥೆಯಾಗಿ ಉಳಿಯಲು ಸಾಧ್ಯವಿಲ್ಲ.

Leave a Reply

Your email address will not be published.