‘ ಸೂರ್ಯಾಸ್ತವಾಗುತ್ತಿದೆ ಬೆಂಕಿ ಇಡಪ್ಪಾ ‘

-ನಾ ದಿವಾಕರ

ಸುರುಟಿದ ತರಗೆಲೆಗಳ ನಡುವೆ
ದೇಹ ತಣ್ಣಗೆ ಮಲಗಿತ್ತೋ
ಜೀವದ ಹಂಗು ತೊರೆದು ನೊಂದ
ಮನಸು ನಿದ್ರಾವಸ್ಥೆಯಲ್ಲಿತ್ತೋ ;
‘ ಸೂರ್ಯಾಸ್ತವಾಗುತ್ತಿದೆ ಬೆಂಕಿ ಇಡಪ್ಪಾ ‘
ಎಂದ ದನಿ ನನ್ನ ಕೈಗಳನ್ನು ನಡುಗಿಸಲಿಲ್ಲ
ಮನಸು ವಿಚಲಿತವಾಗಲಿಲ್ಲ ಕಂಗಳು
ಹನಿಗೂಡಲಿಲ್ಲ ; ಯಂತ್ರ ಅಂದ್ರೆ ಹಾಗೆಯೇ
ಅಲ್ಲವೇನಪ್ಪಾ ; ಯಾಂತ್ರಿಕವಾಗಿ ಇಟ್ಟ ಕೊಳ್ಳಿ
ನಿನ್ನ ಪಯಣ ಮುಗಿಸಿತ್ತು
ನನ್ನ ಬದುಕು ಕವಲು ಹಾದಿಯಲ್ಲಿತ್ತು !

ಬದುಕಲೆಣಿಸಿದ ನಿನಗೆ ಸಾವು ಸನಿಹವಾದುದೇಕೆ
ಮಧುವೋ ಮೇಹವೋ ನಿನ್ನಂತರಾಳಕ್ಕೆ
ದಕ್ಕಿದ್ದು ಮಾತ್ರ ಮಾಧುರ್ಯ ಕಾಣದ
ದೂಷಣೆಗಳೇ ಅಲ್ಲವೇನಪ್ಪಾ ?
ಸುಮ್ಮನೆ ನಡೆದೆ ಬಿರಬಿರನೆ ಅತ್ತಿತ್ತ
ನೋಡದೆ ಎತ್ತಲೂ ಹಿನ್ನಡೆಯದೆ
ನಡೆದೇ ತೀರಿದೆ ತೀರದ ಬವಣೆಗಳ
ತೀರದಲಿ ; ಪಡೆದದ್ದೇನು ?
ಪ್ರಶ್ನಿಸಿಕೊಳ್ಳಲೇ ಇಲ್ಲ ;
ಪ್ರಶ್ನಿಸಿದವರೇ ಎಲ್ಲ !

ಉಪ್ಪರಿಗೆಯಿಂದ ನೆಲಕ್ಕುರುಳಿದ
ನಿನ್ನ ಮೇಲೆತ್ತಿದವರಾರು ?
ನಿಂದೆ ಉಳಿಯಿತು ಸ್ತುತಿ ಅಳಿಯಿತು
ಪಾವನ ಪಾದಗಳು
ಧೂಳು ಮೆತ್ತಿದ ಪಾದುಕೆಗಳಂತಾದವು ;
ನಿಂದಕರಾರೋ ಭಂಜಕರಾರೋ
ಆಂತರ್ಯದ ವೇದನೆಗೆ
ನೋವು ಜೋಡಿಸಿದ ಕರಗಳ
ಹೊತ್ತವರಾರೋ !

ನಿತ್ಯವೂ ಪಠಿಸಿದೆ
‘ ನೋಡಿದೆ ಗುರುಗಳ ನೋಡಿದೆ ‘
ಅವ ನೋಡಲೇ ಇಲ್ಲ ;
ಅಲ್ಲಪ್ಪಾ ಮರೀಚಿಕೆಗಳ ಬೆನ್ನಟ್ಟಿದ್ದಾದರೂ
ಏಕೆ ? ಅರಿವಾಗಲಿಲ್ಲವೇ ಹುಲ್ಲು
ಮುಳ್ಳಿನ ಬೇಧ ? ಒಣ ಮರ
ನೇಣು ಕುಣಿಕೆಗಿರಲಿಲ್ಲ ಬರ
ನೀ ಬಯಸಲಿಲ್ಲ ಅವರೇ
ಹೆಣೆದುಬಿಟ್ಟರು
ಯಾರು ಅವರೆಂದರೆ
ಎನ್ನುವೆಯಾ – ಯಕ್ಷ ಪ್ರಶ್ನೆ ಬಿಡು !

ತ್ಯಾಗ ಎಂದರೇನಪ್ಪಾ
ತನ್ನನ್ನೇ ಮರೆತುಬಿಡುವುದೇ ?
ಅದು ಪರಿತ್ಯಾಗ ಅಲ್ಲವೇ ?
ಎಲ್ಲವನೂ ತೊರೆದೆ ಎಲ್ಲರನೂ
ಪೊರೆದೆ ಎಲ್ಲರಿಗೂ ಬಾಗಿಲು
ತೆರೆದೆ ; ಕದ ಹಾಕಿದವರಾರು
ಪಂಜರದಿ ಬಂಧಿಸಿ ; ತಿಳಿಯಲೇ
ಇಲ್ಲ : ಮಾತು ಕೊಲ್ಲುತ್ತದೆ ದಿಟ
ಮೌನ ದಹಿಸುತ್ತದೆ ಅಲ್ಲವೇನಪ್ಪಾ ?
ದಹಿಸಿ ಕಮರಿಹೋದೆಯಲ್ಲಾ
ಪಯಣ ಮುಗಿಯುವ ಮುನ್ನ !

ಎಲ್ಲೋ ಇಟ್ಟ ಪಿಂಡ ಕಂಡು
ಕಾಕಾ ಎನ್ನುವೆಯಾ ;
ಉಸಿರಾಡುವಾಗಲೇ ತಾ
ಎನ್ನಲಿಲ್ಲ ; ನೀನಿಟ್ಟ ಪಿಂಡಗಳೂ
ಕಾಪಾಡಲಿಲ್ಲ ನೀ ಉಸುರಿದ
ಭಕ್ತಿಯೂ ರಕ್ಷಿಸಲಿಲ್ಲ ; ಭ್ರಮೆಯಲ್ಲೇ
ಬದುಕಿಬಿಟ್ಟೆಯಲ್ಲಪ್ಪಾ !

ಸಂಬಂಧಗಳೇ ಹಾಗೆ ;
ನನ್ನಂತೆಣಿಸಿದ್ದರೆ ನಾ ನಿನ್ನವ
ನಿನ್ನಂತಾದರೆ ನೀ ನನ್ನವನಲ್ಲ
ಅಲ್ಲವೇನಪ್ಪಾ ; ನೀ ಕಾಣದ್ದೇನಿದೆ !
ನಾ ಕಾಣುತ್ತಿದ್ದೇನೆ ನಿನ್ನ
ಬಿಂಬವ ನಿತ್ಯ ; ಬದುಕು
ಜೀವನ ಅಲ್ಲಪ್ಪಾ ಬದುಕು
ಜೀವನದ ಕ್ಲೀಷೆಯಷ್ಟೆ!

 

Leave a Reply

Your email address will not be published.