ಸುಳ್ಳುಗಳ ವಿಜೃಂಬಣೆ ಮತ್ತು ‘ಬಹುತ್ವ’ ದ ನಾಶ : ಸಮಕಾಲೀನ ಸವಾಲುಗಳು

- ಬಿ.ಶ್ರೀಪಾದ ಭಟ್

There is little difference in people, but that little difference makes a big difference. The little difference is attitude and big difference is whether it is positive or negative –  W.Clement stone

ಅಸಮಾನತೆಯು ಹಿಂದೂಯಿಸಂನ ಆತ್ಮವಾಗಿದೆ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಸಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು ಸಹ ಸೋತಿದೆ — ಬಿ.ಆರ್. ಆಂಬೇಡ್ಕರ್

Modiಮತ್ತೆ ಇಂದು ರಾಷ್ಟ್ರೀಯತೆ ಸುದ್ದಿಯಲ್ಲಿದೆ. ಸಾವರ್ಕರ್ ಅವರ ವಿಕೃತ ರಾಷ್ಟ್ರೀಯತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಖ್ಯ ಪ್ರಣಾಳಿಕೆ ಆಗಿರುವುದು ಇಂದಿನ ವಾಸ್ತವ. ಕಳೆದ 3 ವರ್ಷಗಳ ಬಿಜೆಪಿ ನೇತೃತ್ವದ ಆರೆಸ್ಸಸ್‍ನ ಆಡಳಿತದಲ್ಲಿ ಘರ್ ವಾಪಸಿಯಿಂದ, ದಾದ್ರಿಯ ಅಖ್ಲೇಕ್ ಹತ್ಯೆಯವರೆಗೆ ಒಂದು ಘಟ್ಟಕ್ಕೆ ಬಂದು ತಲುಪಿದ ಸಂಘ ಪರಿವಾರದ ದುಷ್ಟತನದ ಹಲ್ಲೆಗಳು ಮತ್ತು ಹತ್ಯಾಕಾಂಡಗಳು ದಾದ್ರಿ ಘಟನೆಯ ನಂತರ ಮತ್ತೊಂದು ಮಜಲಿಗೆ ಬಂದು ನಿಂತಿದೆ. ಕೇಂದ್ರದಲ್ಲಿ ಸಂಘ ಪರಿವಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿಯೇ ಜಾತಿ ತಾರತಮ್ಯವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿರುವ ಆರೆಸ್ಸಸ್ ಎಫ್‍ಟಿಐಐ, ಮದ್ರಾಸ್ ಯೂನಿವರ್ಸಿಟಿಯ ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್, ಹೈದರಾಬಾದ್ ಕೇಂದ್ರೀಯ ಯೂನಿವರ್ಸಿಟಿ, ಜೆಎನ್‍ಯು ಯೂನಿವರ್ಸಿಟಿ, ಅಲಹಾಬಾದ್ ಯೂನಿವರ್ಸಿಟಿ, ಕೊಲ್ಕತ್ತಾದ ಜಾಧವ್ ಯೂನಿವರ್ಸಿಟಿ, ಪುಣೆಯ ಫಗ್ರ್ಯೂಸನ್ ಕಾಲೇಜ್ ಮತ್ತು ಮೊನ್ನೆ ದೆಹಲಿಯ ರಾಮ್‍ಜಾಸ್ ಕಾಲೇಜ್‍ನ ವೆರಗೂ ಹೀಗೆ ಎಲ್ಲಾ ಉನ್ನತ ಶಿಕ್ಷಣದ ಯೂನಿವರ್ಸಿಟಿಗಳಲ್ಲಿ ತನ್ನ ಮತೀಯವಾದಿ ಅಜೆಂಡಾದ ಛಾಪನ್ನು ಒತ್ತಲು ಹೊರಟಿದೆ. ಶಿಲಾಯುಗದ ಸನಾತನವಾದಿ ಮನುಸ್ಮøತಿಯನ್ನು ಇಂದು ಮರಳಿ ಚಲಾವಣೆಗೆ ತರಲು ತುದಿಗಾಲಲ್ಲಿರುವ ಆರೆಸ್ಸಸ್ ಯೂನಿವರ್ಸಿಟಿ ಕ್ಯಾಂಪಸ್‍ಗಳನ್ನು ಎಬಿವಿಪಿಯ ಮೂಲಕ ಒಂದು ರಣರಂಗದಂತೆ ಸಜ್ಜುಗೊಳಿಸಿದೆ.

ಹಿಂದೂ ಮತಾಂಧರ ಕೈಯಲ್ಲಿ ಬಲು ಸುಲಭವಾಗಿ ಅಸ್ತ್ರವಾಗಿಬಿಡುವ ಈ ಸಾವರ್ಕರ್ ರಾಷ್ಟ್ರೀಯತೆಯೊಳಗೆ ಹಿಂದೂ ಧರ್ಮವನ್ನು ಬೆರೆಸಿ ಯಾವ ಕಾಲಕ್ಕೆ ಬೇಕಾದರೂ ಸ್ಪೋಟಿಸಬಲ್ಲ ಒಂದು ಮದ್ದುಗುಂಡನ್ನು ಸದಾ ತಯಾರಿಸುತ್ತಾ ಕಾಲಕಾಲಕ್ಕೆ ಸ್ಪೋಟಿಸುತ್ತಾ ದಿನನಿತ್ಯ ಅಸಹನೆಯ, ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸುತ್ತಿರುವ ಸಂಘ ಪರಿವಾರವನ್ನು ಇಂದು ಎದುರಿಸಲು ಬೇಕಾದ ನಿಜದ ಸೆಕ್ಯುಲರಿಸಂನ ಹತಾರಗಳಿಲ್ಲದೆ ಪ್ರಜ್ಞಾವಂತರು ಅಸಹಾಯಕರಾಗಿರುವುದು ಒಂದು ದುರಂತ.

ಏಕೆಂದರೆ ಈ ಹಿಂದೂ ಧರ್ಮವನ್ನು ತಾತ್ವಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅರ್ಥೈಸಲು ಇಲ್ಲಿನ ಪ್ರಗತಿಪರ ಚಿಂತನೆಗಳು ಸೋತಿರುವುದು ಒಂದೆಡೆಯಿದ್ದರೆ ಇದರ ಫಲವಾಗಿ ಹುಟ್ಟಿಕೊಂಡ ನಿರ್ವಾತವನ್ನು ಸಂಘ ಪರಿವಾರ ತನ್ನ ರಾಜಕೀಯ-ಸಾಮಾಜಿಕ ದುರುದ್ದೇಶಕ್ಕೆ ಯಶಸ್ವಿಯಾಗಿ ಬಳಸಿಕೊಲ್ಳುತ್ತಿದೆ. ಇದಕ್ಕೆ ಎಪ್ಪತ್ತು ವರ್ಷಗಳ ರಕ್ತಸಿಕ್ತ ಇತಿಹಾಸವೇ ಇದೆ. ಇದರ ಕುರಿತಾಗಿ ಸಾಕಷ್ಟು ಚರ್ಚೆಗಳಾಗಿವೆ. ವಿಶ್ಲೇಷಣೆಗಳಾಗಿವೆ. ಆದರೂ ಪ್ರಜ್ಞಾವಂತರು ಇದಕ್ಕೆ ಪರ್ಯಾಯ ಚಿಂತನೆಗಳನ್ನು ರೂಪಿಸುವುದಕ್ಕಾಗಿ ಇಂದಿಗೂ ಕತ್ತಲಲ್ಲಿ ತಡಕಾಡುತ್ತಿರುವುದು ಮಾತ್ರ ನಮ್ಮನ್ನು ಗಾಬರಿಗೊಳಿಸುತ್ತಿದೆ.
ಬ್ರಾಹ್ಮಣ ಉದಾರವಾದಿಗಳನ್ನು ಹೊಂದಿದ್ದ ಆರ್ಯ ಸಮಾಜ, ಬ್ರಹ್ಮ ಸಮಾಜದ ಬ್ರಾಹ್ಮಣ್ಯವನ್ನು ಮೀರಲಾಗದ ಆ ಸುಧಾರಣವಾದಿ ನಡೆಗಳ ಮಿತಿಗಳನ್ನು ಮೀರಿ 19ನೇ ಶತಮಾನದಲ್ಲಿಯೇ ಬ್ರಾಹ್ಮಣ್ಯ-ಫ್ಯೂಡಲಿಸಂ ವಿರುದ್ಧ ಹೊಸದಾದ “ಶೂದ್ರ ಅತಿಶೂದ್ರ” ಚಳುವಳಿಯನ್ನು ಸಂಘಟಿಸಿದ ಫುಲೆ ದಂಪತಿಗಳ ಇಡೀ ಹೋರಾಟದ ಬದುಕನ್ನು ನಮ್ಮ ಪೋಸ್ಟ್ ಕಲೋನಿಯಲ್ ಚಿಂತಕರು ಮರೆತಿರುವುದು ಸಹ ಆತಂಕಗೊಳಿಸುತ್ತದೆ

ಈ ಹಿಂದೂ ಮತಾಂಧರ ರಾಷ್ಟ್ರೀಯವಾದದ ಅಪಾಯವನ್ನು ಗ್ರಹಿಸಿದ್ದ ರವೀಂದ್ರನಾಥ ಟ್ಯಾಗೂರ್ ಅವರು ರಾಷ್ಟ್ರೀಯತೆಯ ಕುರಿತಾಗಿ ತಳೆದ ಸ್ಪಷ್ಟ ನಿಲುವುಗಳು ಇಂದಿಗೂ ಪ್ರಸ್ತುತವಾಗಿವೆ. ಇಪ್ಪತ್ತನೇ ಶತಮಾನದ ಆರಂಬದಲ್ಲಿಯೇ ಟ್ಯಾಗೂರ್ ಅವರು “ ರಾಷ್ಟ್ರೀಯವಾದಿಗಳು ಆದರ್ಶಗಳ ಕುರಿತು ಮಾತನಾಡುವಾಗ ಸ್ವತಃ ತಾವೇ ಸಾಮಾಜಿಕ ಆಚರಣೆಯ ಸಂದರ್ಭದಲ್ಲಿ ಸಂಪ್ರದಾಯವಾದಿಗಳಾಗಿರುವುದನ್ನು ಮರೆತಿರುತ್ತಾರೆ. ಆದರೆ ಇಂಡಿಯಾದಲ್ಲಿ ಸಹಜವಾದ ಹುಟ್ಟಿನ ಕುರಿತಾದ ಹಕ್ಕು ಸಾಧ್ಯವಾಗಿಲ್ಲ, ಪಶ್ಚಿಮ ರಾಷ್ಟ್ರಗಳ ರಾಷ್ಟ್ರೀಯವಾದದ ಕುರಿತಾಗಿ ಮಾತನಾಡುವವರು ನಮ್ಮಲ್ಲಿನ ವಿವಿಧ ಜಾತಿಗಳಿರುವುದನ್ನು ಮರೆಯುತ್ತಾರೆ” ಎಂದು ಹೇಳುತ್ತಾರೆ

ಹಿಂದೂ ಧರ್ಮ : ನಮ್ಮ ಚಿಂತನೆಯ ಬಿಕ್ಕಟ್ಟುಗಳು

ಇದೇ ಸಂದರ್ಭದಲ್ಲಿ 19ನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ “ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ. ಆದರೆ ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಆದರೆ ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಜನರು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ” ಎಂದು ಹೇಳುತ್ತಾರೆ.

ಚಿಂತಕ ‘ಜ್ಯೋತಿರ್ಮಯ ಶರ್ಮ’ ಅವರು ಸಂಶೋಧನ ಪುಸ್ತಕ “Cosmic Love and Human Apathy: Swami Vivekananda’s Re-statement of Religion”ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ “ ‘1896ರಲ್ಲಿ ಅಮೇರಿಕಾ ಮತ್ತು ಲಂಡನ್‍ಗೆ ಪ್ರವಾಸ ಮಾಡುವ ವಿವೇಕಾನಂದ ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ ‘ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ರಾಮಕ್ರಿಷ್ಣರವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ‘ ಎಂದು ಭಾಷಣ ಮಾಡಿದ್ದರು. ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು. ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು.

ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು.ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ಸಹ ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ‘ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು’ ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.

ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.

ಮತ್ತೊಂದೆಡೆ ಅದೇ ಕಾಲಕ್ಕೆ ಹೆಗೆಲ್‍ನ “ನಿಚ್ಚಳ ಆದರ್ಶವಾದ”(absolute idealism)  ಮತ್ತು Phenomenology of Spirit ನ ಫಿಲಾಸಫಿ ಚಿಂತನೆಗಳ ನಂತರ 19ನೇ ಶತಮಾದ ಎರಡು ಮತ್ತು ಮೂರನೇ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕøತಿಗಳ ವಿಸ್ಮøತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂಜ್ರ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೇ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಆಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು.

swami-vivekananda-3ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮಾರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ,ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು. ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೇ ಶತಮಾನದಲ್ಲಿ ಭಕ್ತಿಪಂಥದ ಚಳುವಳಿಯಿಂದ ಪ್ರೇರೇಪಿತಗೊಂಡಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ, ರಹಸ್ಯವೆನಿಸುವ ಆಧ್ಯಾತ್ಮದ ಯೋಗದ ಮೂಲಕ ಬೋಧಿಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು.

ಜ್ಯೋತಿರ್ಮಯ ಶರ್ಮ ಅವರು ‘ಆದರೆ ರಾಮಕ್ರಿಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮಥ್ರ್ಯಗಳು ಎಂದೂ ಚಿಂತಿಸಿದರು.’ ಎಂದು ವಿವರಿಸುತ್ತಾರೆ. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವರ್ಣಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮಥ್ರ್ಯತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಧಿಯವರ ‘ಹಿಂದ್ ಸ್ವರಾಜ್’ ಆಗಿ ಹೊರ ಹೊಮ್ಮಿತು ಮತ್ತು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.

ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗರ್ಭಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್‍ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾರ್ಮಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್‍ರವರು ಅನೈತಿಕವಾದ, ವಿಕಾರವಾದ ಮೃಗಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು

ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ ಆಡೊಂಬೊಲವಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಈ ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರು ಈ ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. ‘ಪ್ರಜ್ಞಾವಂತರು ಸಂಸ್ಕøತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು,ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು’ ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ.

ಮತ್ತೊಂದೆಡೆ ಇಂದು ಈ ಬಲಪಂಥೀಯ ಮತೀಯವಾದದ ಸಮರ್ಥಕರು ಇದನ್ನು ವಿರೋಧಿಸುವವರನ್ನು ನೇರವಾಗಿಯೇ ಎಡಪಂಥೀಯರು, ಮಾರ್ಕ್ಸ್ವಾದಿಗಳು ಎಂದು ಜರೆದು ಇಡೀ ಸಂವಾದದ ದಿಕ್ಕನ್ನೇ ಹಾದಿ ತಪ್ಪಿಸುತ್ತಿರುವುದಕ್ಕೆ ಕಳೆದ ವರ್ಷ ಜೆಎನ್‍ಯು ಪ್ರಕರಣದಿಂದ ಇಂದಿನ ದೆಹಲಿಯ ರಾಮಜಾಸ್ ಕಾಲೇಜ್‍ನ ಗೂಂಡಾಗಿರಿಗಳು ಸಾಕ್ಷಿಯಾಗಿವೆ. ಈ ಎಡಪಂಥೀಯ ಎನ್ನುವ ಇಂದಿನ ಬಹುಸಂಖ್ಯಾತವಾದದ ಪ್ರತಿಪಾದಕರ ವಿಲನ್ ಅನ್ನು ಮತ್ತೊಮ್ಮೆ ಅಮೂಲಾಗ್ರವಾಗಿ ವಿಶ್ಲೇಷಿಸುವ ತುರ್ತು ಅಗತ್ಯ ನಮ್ಮ ಮುಂದಿದೆ.

ಬಲಪಂಥೀಯರು ಬಿಡಿ ಒಂದು ಸಾಮಾನ್ಯವಾಗಿ ಮಾರ್ಕ್ಸ್ವಾದದ ಕುರಿತಾಗಿ ಪ್ರಮುಖ ಟೀಕೆಯನ್ನು ಪ್ರಸ್ತಾಪಿಸುತ್ತಾ ಟೆರಿ ಈಗಲ್ಟನ್ “ ಮಾಕ್ರ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರ್ಯದ, ವೈಯುಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯು ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾಕ್ರ್ಸ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾಕ್ರ್ಸನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ.ಇದು ಮಾಕ್ರ್ಸವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಸದಾ ವಿರೋಧವಾಗಿರುತ್ತದೆ.” ಎಂದು ಬರೆಯುತ್ತಾನೆ.

ಮುಂದುವರೆದು ಟೆರಿ “ಮಾರ್ಕ್ಸ್ ವಾದವು ಕ್ರಾಂತಿಕಾರಿ ಸಿದ್ಧಾಂತವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರನಂತೂ ಅಲ್ಲವೇ ಅಲ್ಲ. ಮಾಕ್ರ್ಸ ಉದಾರವಾದಿಯಾಗಿದ್ದ, ಪ್ರಾರಂಭದ ದಿನಗಳಲ್ಲಿ ಯುರೋಪ್‍ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳುವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಬಿಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾಕ್ರ್ಸನೇ ನಿರಾಕರಿಸುತ್ತಾನೆ. ಆದರೆ ಮಾಕ್ರ್ಸ ಈ ಸಮಾಜವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳಶಾಹಿಯ ಒಪ್ಪಿತ ಸಂಸ್ಕøತಿಗೆ ಈ ಮಾಕ್ರ್ಸವಾದವು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕøತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕøತಿ ಇರುತ್ತದೆಯೋ ಅಲ್ಲಿಯವರೆಗೆ ಮಾಕ್ರ್ಸವಾದವೂ ಪ್ರಚಲಿತವಾಗಿರುತ್ತದೆ ಎನ್ನುದರಲ್ಲಿ ಸಂಶಯವೇ ಇಲ್ಲ.

amit-shahಮಾರ್ಕ್ಸ್ನ ವಿಮುಖ ನೀತಿಗಳು ಹೆಗೆಲ್‍ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್  ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನ ಪದ್ಧತಿಗಳು ಬದಲಾವಣೆಗೊಳಲ್ಪಡುತ್ತಿರುತ್ತವೆ ಎಂಬುದು ಮಾಕ್ರ್ಸನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ.ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾಕ್ರ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್‍ಸ್ಮಿತ್‍ನ “ಪಾಳುಬಿದ್ದ ಹಳ್ಳಿ’ಯ ಕವನದ ಸಾಲುಗಳಲ್ಲಿ, ಜಾನ್ ಮಿಲ್ಟನ್‍ನ ಕಾಮೂಸ್ ಪದ್ಯದಲ್ಲಿ, ಶೇಕ್ಸಪಿಯರ್‍ನ ಕಿಂಗ್‍ಲಿಯರ್ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊಳ್ಳುತ್ತವೆ’. ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ’ ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರೀಕತೆಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ .ಬಂಡವಾಳಗಾರನು ದುಡಿಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರೆಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್ ನ ವಾದ” ಎಂದು ಬರೆಯುತ್ತಾನೆ.

ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಫ್ಯಾಸಿಸ್ಟ್ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಧಾರ್ಮಿಕ ಮತಾಂಧತೆ ಅಟ್ಟಹಾಸದ, ಇಡೀ ಸರ್ಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‍ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸಧ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿಕ್ಕಟ್ಟು ಅಂತರಿಕವಾಗಿರುವುದು ಎಷ್ಟು ನಿಜವೂ ಈ ನವಉದಾರೀಕರಣದ ಕಾಲದಲ್ಲಿ ಬಳಸಬೇಕಾದ ಸಮಕಾಲೀನ ನುಡಿಕಟ್ಟುಗಳಿಗಾಗಿ ಇವರು ಇನ್ನೂ ತಡಕಾಡುತ್ತಿರುವುದು ಕೂಡ ನಮ್ಮ ಕಣ್ಣ ಮುಂದಿದೆ.

Theses on Feuerbach’ ನಲ್ಲಿ ತರುಣ ಮಾರ್ಕ್ಸ್  “ ಮನುಷ್ಯರು ವ್ಯವಸ್ಥೆಯ, ಸಂದರ್ಭಗಳ, ಪಾಲನೆ ಮತ್ತು ಪೋಷಣೆಯ ಉತ್ಪನ್ನಗಳು ಹಾಗೂ ಅದರ ಶಿಶುಗಳು ಎನ್ನುವ ಜಡವಾದ ಭೌತಿಕವಾದದ ತತ್ವಗಳು ಈಗ ಕೊಂಚ ಬದಲಾಗಿ ಮನುಷ್ಯರು ಬೇರೊಂದು ವ್ಯವಸ್ಥೆಯ, ಬದಲಾವಣೆಗೊಂಡ ಪೋಷಣೆಯ ನೀತಿಗಳ ಉತ್ಪನ್ನಗಳು ಎಂದು ಹೇಳುತ್ತಿದ್ದಾರೆ. ಆದರೆ ಇವರು ಮರೆತಿರುವುದೇನೆಂದರೆ ಈಗ ಮನುಷ್ಯರು ಈ ವ್ಯವಸ್ಥೆಯನ್ನು, ಸಂದರ್ಭಗಳನ್ನು ಬದಲಾಯಿಸುತ್ತಾರೆ, ಮತ್ತು ಶಿಕ್ಷಕನಿಗೆ ಶಿಕ್ಷಣ ಕೊಡುವುದು ಅವಶ್ಯಕವಾಗಿದೆ” (ಮಾರ್ಕ್ಸ್  ಮತ್ತು ಎಂಗೆಲ್ಸ್,1978:144) ಎಂದು ಹೇಳುತ್ತಾನೆ.
ಇದು ಬಹಳ ಮುಖ್ಯ.

Leave a Reply

Your email address will not be published.