ಸುದ್ದಿಯ ಮೈಗಂಟಿದ ಅಲಕ್ಷಿತ ಸಂಗತಿಗಳ ಬಹುರೂಪಿ ಕಥನ

-ಅರುಣ್ ಜೋಳದಕೂಡ್ಲಿಗಿ

ಕಳೆದ ಹದಿಮೂರು ವರ್ಷದಿಂದ ರಾಜ್ಯದ ವಿವಿಧ ಭಾಗಗಳ ಸಮಾನಾಸಕ್ತ ಸಂಗಾತಿಗಳು ಜೊತೆಗೂಡಿ `ನಾವುನಮ್ಮಲ್ಲಿ’ ಎನ್ನುವ ಮಾತುಕತೆಯ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದೇವೆ. ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈತನಕ ಕನ್ನಡದ ಬಹುಮುಖ್ಯ ಲೇಖಕರಾದ ದೇವನೂರು ಮಹಾದೇವ, ಯು.ಆರ್.ಅನಂತಮೂರ್ತಿ ಅವರನ್ನೊಳಗೊಂಡಂತೆ ಬಹುತೇಕ ಸಾಮಾಜಿಕ ಬದ್ಧತೆಯ ಬರಹಗಾರ/ಗಾರ್ತಿಯರು ನಾವುನಮ್ಮಲ್ಲಿ ವೇದಿಕೆಯಲ್ಲಿ ತಮ್ಮ ತಿಳಿವನ್ನು ಹಂಚಿಕೊಂಡಿದ್ದಾರೆ. ಹೊಸತಲೆಮಾರಿನ ಜತೆ ಸಂವಾದ ನಡೆಸಿದ್ದಾರೆ.

ನಾವುನಮ್ಮಲ್ಲಿ ಎನ್ನುವುದೇ `ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುವ ತತ್ವವನ್ನು ಆಗುಮಾಡಿದೆ. ಈ ನೆಲೆಯಲ್ಲಿ ಆರೋಗ್ಯಕರ ಸಮಾಜಕ್ಕಾಗಿ ತುಡಿಯುವ ಜೀವಪರ ಮನಸ್ಸುಗಳನ್ನು ಒಂದೆಡೆ ಸೇರಿಸುವುದು, ಚರ್ಚಿಸುವುದು, ಆ ಮೂಲಕ ಪರ್ಯಾಯಗಳಿಗೆ ಬೇಕಾದ ಹೊಳಹುಗಳನ್ನು ಪಡೆದು ನಮ್ಮ ಬರಹ, ತಿಳಿವು, ಬದುಕನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯುವುದು ನಮ್ಮ ಮುಖ್ಯ ಆಶಯವಾಗಿದೆ. ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಮೂಲಕ `ನಾವುನಮ್ಮಲ್ಲಿ’ ಜೀವತೆಳೆದು ಇದೀಗ ರಾಜ್ಯವ್ಯಾಪಿ ಸಂಗಾತಿಗಳನ್ನು ಒಳಗೊಂಡಿದೆ.
ಈ ಬಾರಿ ಜುಲೈ 9, 2017 ರ ಭಾನುವಾರ ಸ್ಥಳೀಯ ಗೆಳೆಯರ ಬಳಗದ ಸಹಯೋಗದೊಂದಿಗೆ ಚಿತ್ರದುರ್ಗದ ಕ್ರೀಡಾಭವನದಲ್ಲಿ `ನಾವುನಮ್ಮಲ್ಲಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎನ್ನುವ ಕುವೆಂಪು ಅವರು ಹೊಸ ತಲೆಮಾರಿಗೆ ಕೊಟ್ಟ ಕರೆಯನ್ನು ವರ್ತಮಾನದ ಕಣ್ಣೋಟದಲ್ಲಿ ನೋಡುವ ಪ್ರಯತ್ನ ನಡೆಯಿತು. ನಮ್ಮ ಚರ್ಚೆಯ ಒಟ್ಟು ನೆಲೆ `ನಿರಂಕುಶಮತಿತ್ವದೆಡೆಗೆ’ ಎನ್ನುವುದಾಗಿತ್ತು. ಕುವೆಂಪು ನಮ್ಮ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ಕನ್ನಡದ ಚೈತನ್ಯ. ಅವರ ಬರಹ ಚಿಂತನೆಗಳನ್ನು ವರ್ತಮಾನ ಕಣ್ಣೋಟದ ಮೂಲಕ ನೋಡುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಈ ಚರ್ಚೆ ಸಂವಾದಗಳು ನಡೆದವು.

ದೆಹಲಿಯ ಜೆ.ಎನ್.ಯುನ ಕನ್ನಡ ವಿಭಾಗದ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ, ಕೊಟಗಾನಹಳ್ಳಿ ರಾಮಯ್ಯ, ಡಾ.ಎಂ.ಎಸ್ ಆಶಾದೇವಿ, ನಟರಾಜ ಹೊನ್ನವಳ್ಳಿ, ದಿನೇಶ್ ಅಮಿನ್ ಮಟ್ಟು, ಅಜಿತ್ ಪಿಳ್ಳೆ, ಸುಗತ ಶ್ರೀನಿವಾಸರಾಜು ಅವರನ್ನು ಒಳಗೊಂಡಂತೆ ಹೊಸ ತಲೆಮಾರಿನ ನವೀನ್ ಸೂರಿಂಜೆ, ಹನುಮಂತ ಹಾಲಿಗೇರಿ, ಕೆ.ವಿ.ನೇತ್ರಾವತಿ, ರಮೇಶ್ ಅರೋಲಿ, ಬಸವರಾಜ ಹೃತ್ಸಾಕ್ಷಿ, ಹೆಚ್.ಕೆ.ಶರತ್, ಹೆಚ್.ಬಿ.ಇಂದ್ರಕುಮಾರ್ ಮೊದಲಾದವರು ತಮ್ಮ ಬರಹದ ಹಿನ್ನೆಲೆಯಲ್ಲಿ ತಮಗಿರುವ ಅಂಕುಶಗಳನ್ನು ಮೀರುವ ನೆಲೆಗಳನ್ನು ಹಂಚಿಕೊಂಡರು.
ಪ್ರತಿಬಾರಿಯೂ ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಅವರೊಡಗೂಡಿ ನಾವುನಮ್ಮಲ್ಲಿ ಬಳಗ ಹೊಸತಲೆಮಾರಿನ ಪ್ರಾತಿನಿಧಿಕ ಪುಸ್ತಕವೊಂದನ್ನು ಪ್ರಕಟಿಸುತ್ತದೆ. ಈ ಬಾರಿ ದೆಹಲಿಯ ಪತ್ರಕರ್ತ ಅಜಿತ್ ಪಿಳೈ ಅವರ ಬಹುಚರ್ಚಿತ `ಆಫ್ ದಿ ರೆಕಾರ್ಡ್’ ಪುಸ್ತಕದ ಕನ್ನಡಾನುವಾದ `ಇದು ಯಾವ ಸೀಮೆಯ ಚರಿತ್ರೆ’ ಬಿಡುಗಡೆಯಾಯಿತು. ಚಿತ್ರದುರ್ಗದ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಸನ ಜಿಲ್ಲೆಯಿಂದ ಹಿಂದೂ ಪತ್ರಿಕೆಗೆ ವರದಿ ಮಾಡುವ ಜಿ.ಟಿ.ಸತೀಶ್ ಕೃತಿಯನ್ನು ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಅರ್ಥಪೂರ್ಣವಾಗಿ ಅನುವಾದಿಸಿದ್ದಾರೆ.

ಮಾಧ್ಯಮ ಇಂದು ಉದ್ಯಮವಾಗಿ ಬಂಡವಾಳಶಾಹಿ ಮತ್ತು ಬಲಪಂಥೀಯ ಅಧಿಕಾರಶಾಹಿ ಶಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಈ ದಿನಮಾನಗಳಲ್ಲಿ ಅಜಿತ್ ಪಿಳೈ ಯವರಂತಹ ಪ್ರಾಮಾಣಿಕ ಪತ್ರಕರ್ತರ ಬಗ್ಗೆಯೂ, ಮಾಧ್ಯಮದ ಪೊಳ್ಳುತನಗಳ ಬಗ್ಗೆಯೂ ಚರ್ಚೆ ಮಾಡಬೇಕಿದೆ. ಸದ್ಯದ ಸ್ಥಿತಿಯ ಮಾದ್ಯಮ ತುಳಿದ ಸಂವಿಧಾನ ವಿರೋಧಿ ನಡೆಯ ಆತಂಕದ ಸಂದರ್ಭದಲ್ಲಿ `ಇದು ಯಾವ ಸೀಮೆಯ ಚರಿತ್ರೆ’ ಪುಸ್ತಕ ಮಾಧ್ಯಮ ಲೋಕದ ಮತ್ತೊಂದು ಮುಖವನ್ನು ಕಾಣಿಸುತ್ತದೆ. ಮುಖ್ಯವಾಗಿ ಈ ಕೃತಿಯಲ್ಲಿ ಸುದ್ದಿಗಳಿಲ್ಲ, ಬದಲಾಗಿ ಸುದ್ದಿಯ ಮೈಗಂಟಿದ ನೂರಾರು ಸಂಗತಿಗಳಿವೆ. ಸುದ್ದಿಯೊಂದನ್ನು ಪ್ರಧಾನವೆಂದೂ, ಅದರ ಸುತ್ತಣ ಸಂಗತಿಗಳನ್ನು ಅಲಕ್ಷಿತವೆಂದು ಕಡೆಗಣಿಸುವಿಕೆಯನ್ನು ಈ ಕೃತಿ ಮುನ್ನಲೆಗೆ ತಂದಿದೆ. ಹಾಗಾಗಿ ಈ ಕೃತಿ ಒಂದರ್ಥದಲ್ಲಿ ಸುದ್ದಿಯಾಚೆಯ ಅಲಕ್ಷಿತ ಸಂಗತಿಗಳ ಕಥನ.
**
ಅಜಿತ್ ಪಿಳ್ಳೈ ಅವರು ಸದ್ಯಕ್ಕೆ ದೆಹಲಿಯಲ್ಲಿ ವಾಸವಾಗಿರುವ ಹಿರಿಯ ಪತ್ರಕರ್ತರು. ಮೂರು ದಶಕಗಳ ತಮ್ಮ ಪತ್ರಕರ್ತ ವೃತ್ತಿಯಲ್ಲಿ ತೀಕ್ಷ್ಣ ವರದಿಗಾರಿಕೆ ಮತ್ತು ವಿಡಂಬನಾತ್ಮಕ ಬರಹಗಳಿಂದ ಜನಪ್ರಿಯರು. ಪ್ರಮುಖ ಪತ್ರಿಕೆಗಳಾದ `ಸಂಡೆ ಅಬ್ಸರ್ವರ್’ `ದಿ ಇಂಡಿಯನ್ ಪೋಸ್ಟ್’ `ದಿ ವೀಕ್’ `ದಿ ಪಯೋನೀರ್’ `ಇಂಡಿಯಾ ಟುಡೆ’ ಗಳಲ್ಲಿ ಕೆಲಸ ಮಾಡಿದ್ದಲ್ಲದೆ ವಿನೋದ್ ಮೆಹ್ತಾ ಅವರ ಜೊತೆಗೂಡಿ `ಔಟ್ ಲುಕ್’ ವಾರಪತ್ರಿಕೆಯನ್ನು ಮುನ್ನಡೆಸಿದವರು. 2012 ರಲ್ಲಿ `ಔಟ್ ಲುಕ್’ ಪತ್ರಿಕೆ ನಿರ್ಗಮಿಸಿದ ನಂತರ ಸುಗತ ಶ್ರೀನಿವಾಸರಾಜು ಅವರು ಪ್ರಧಾನ ಸಂಪಾದಕರಾಗಿದ್ದಾಗ ಕನ್ನಡದ `ವಿಜಯ ಕರ್ನಾಟಕ’ ಮತ್ತು `ಕನ್ನಡ ಪ್ರಭ’ ಪತ್ರಿಕೆಗಳಿಗೆ ಅಂಕಣ ಬರೆದು ಕನ್ನಡದ ಓದುಗ ವರ್ಗಕ್ಕೂ ಪರಿಚಿತವಾದವರು. ಇತ್ತೀಚಿಗೆ `ಜಂಕ್ ಲ್ಯಾಂಡ್ ಜರ್ನೀಸ್’ ಎನ್ನುವ ಕಾದಂಬರಿಯನ್ನೂ ಬರೆದಿದ್ದಾರೆ. ಈ ಬಾರಿಯ ನಾವುನಮ್ಮಲ್ಲಿ ಕಾರ್ಯಕ್ರಮದಲ್ಲಿ ಮಾತನಾತ್ತ ಸದ್ಯದ ಭಾರತದ ಮಾಧ್ಯಮಗಳ ನಡೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು. ಬಲಪಂಥೀಯ ಅಧಿಕಾರಶಾಹಿ ಹುಟ್ಟಿಸುತ್ತಿರುವ ಸುಳ್ಳುಗಳಿಗೆ ಮಾಧ್ಯಮಗಳು ಹೇಗೆ ಬೆಂಬಲಕ್ಕೆ ನಿಂತಿವೆ ಮತ್ತು ಇಂಥವುಗಳನ್ನು ಬಯಲುಗೊಳಿಸಲು ಆಲ್ಟ್ ನಿವ್ಸ್, ಸ್ಕ್ರಾಲ್ ಆನ್ ತರಹದ ವೆಬ್ ಪೋರ್ಟಲ್‍ಗಳು ಹೇಗೆ ಶ್ರಮಿಸುತ್ತಿವೆ ಎನ್ನುವ ಬಗ್ಗೆ ಗಂಭೀರವಾಗಿ ಚರ್ಚಿಸಿದರು.

ಈ ಬಾರಿಯ ಜನಕಥನದಲ್ಲಿ ಅಜಿತ್ ಪಿಳೈ ಅವರ ಕೃತಿ ಬಗ್ಗೆ ಓದುಗರೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಳ್ಳುವೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಬ್ಬ ಪತ್ರಕರ್ತನ ಕಟಿಬದ್ಧ ಪ್ರಾಮಾಣಿಕತೆ, ನಿಷ್ಟಕ್ಷಪಾತ ಧೋರಣೆ, ಸತ್ಯದ ಹುಡುಕಾಟದ ಕಠಿಣ ಹಾದಿಯಲ್ಲೂ ಜೀವನೋತ್ಸಾಹದಿಂದ ಬದುಕುವ ಜೀವಂತಿಕೆಯ ವಿಶಿಷ್ಠತೆ ಈ ಅನುಭವಗಳಿಗಿದೆ. ಅಂತೆಯೇ ಭಾರತದ ರಾಜಕಾರಣದ ಒಳನೋಟದ ವಿಶ್ಲೇಷಣೆ, ಮಾಧ್ಯಮ ಲೋಕ ಹೇಗೆ ನಿಧಾನಕ್ಕೆ ಬಂಡವಾಳಶಾಹಿಯತ್ತ ವಾಲುತ್ತಿದೆ ಎನ್ನುವುದರ ಸೂಕ್ಷ್ಮಾತಿಸೂಕ್ಷ್ಮ ವಿವರಣೆ, ಅಂತೆಯೇ ತನ್ನ ಮಿತಿಗಳನ್ನು ವಿನಮ್ರತೆಯಿಂದ ಓದುಗರೊಂದಿಗೆ ಹಂಚಿಕೊಂಡು ಹಗುರಾಗುವಿಕೆ ಇದೆ. ಇದೆಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ತಾನು ಹಿನ್ನೆಲೆಗೆ ಸರಿಸಿಕೊಂಡು ತನ್ನ ವೃತ್ತಿ ಮತ್ತು ಅನುಭವಗಳನ್ನು ಮುನ್ನಲೆಗೆ ತರುವ ಅಪರೂಪದ ಪತ್ರಕರ್ತನ ಗುಣವಿದೆ. ಹಾಗಾಗಿ ಇಂದಿನ ಬಹುಪಾಲು ಪತ್ರಕರ್ತರಲ್ಲಿ ಇಲ್ಲವೆನ್ನುವಷ್ಟು ವಿರಳ ಗುಣಗಳು ಅಜಿತ್ ಪಿಳ್ಳೈ ಅವರಲ್ಲಿ ಹೇರಳವಾಗಿವೆ. ಈ ಕಾರಣದಿಂದ `ಇದು ಯಾವ ಸೀಮೆಯ ಚರಿತ್ರೆ’ ಪುಸ್ತಕದ ಬಗ್ಗೆ ಕೆಲವು ಸಂಗತಿಗಳನ್ನು ಚರ್ಚಿಸುವೆ.

ಭಾರತದ ಮುಖ್ಯ ಜರ್ನಲಿಸ್ಟ್‍ಗಳಲ್ಲಿ ಒಬ್ಬರಾದ ವಿನೋದ್ ಮೆಹ್ತಾ ಅವರು ಅಜಿತ್ ಅವರ `ಆಫ್ ದಿ ರೆಕಾರ್ಡ್’ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ, `ನಮ್ಮಲ್ಲಿ ಅನೇಕ ವರದಿಗಾರರು, ಪತ್ರಕರ್ತರು, ಸಂಪಾದಕರು, ಪಂಡಿತರು ಹಲವು ಅತ್ಯುತ್ತಮ ಹಾಗೂ ಸೂಕ್ಷ್ಮ ಒಳನೋಟಗಳುಳ್ಳ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅಜಿತ್‍ನ ಡೈರಿ ಅವೆಲ್ಲಕ್ಕಿಂತ ಭಿನ್ನವಾದದ್ದು. ನಾನು ಕಂಡಂತೆ, ಪತ್ರಕರ್ತನೊಬ್ಬನ ವೃತ್ತಿ ಜೀವನ ಹಾಗೂ ಸಾಹಸಗಳಿಗೆ ಸಂಪೂರ್ಣವಾಗಿ ಮೀಸಲಾದ ಮೊದಲ ಪುಸ್ತಕ ಇದು. ಅಜಿತ್ ಆರಾಮ ಕುರ್ಚಿಗೆ ಸೀಮಿತನಾದ ವರದಿಗಾರನಲ್ಲ. ಅವರು ಇಲ್ಲಿ ಯಾವುದೇ ತೀರ್ಪು ಕೊಡುತ್ತಿಲ್ಲ, ಉಪದೇಶ ಮಾಡುತ್ತಿಲ್ಲ ಅಥವಾ ತನ್ನನ್ನೇ ತಾನು ಹೊಗಳಿಕೊಳ್ಳುತ್ತಿಲ್ಲ. ಅಲ್ಲಲ್ಲಿ ಕೆಲವು ಅಭಿಪ್ರಾಯಗಳಿವೆ. ಈ ಪುಸ್ತಕ 1980ರಿಂದ ಈವರೆಗಿನ ಭಾರತ ಇತಿಹಾಸದ ಕಚ್ಚಾ ಕಾಪಿ ಎನ್ನಬಹುದು. ನೋಡಿದ್ದನ್ನು ನೋಡಿದ ಹಾಗೆ ಹೇಳುವುದೇ ಈ ಪುಸ್ತಕದ ಹೆಗ್ಗಳಿಕೆ’ ಎನ್ನುತ್ತಾರೆ. ಈ ಮಾತು ಅಜಿತ್ ಅವರ ಬಗ್ಗೆಯೂ, ಈ ಕೃತಿಯ ಮಹತ್ವದ ಬಗ್ಗೆಯೂ ಗಮನಸೆಳೆಯುತ್ತದೆ.
**
ಪ್ರಧಾನವಾಗಿ ಇಲ್ಲಿಯ ಕಥನಗಳಲ್ಲಿ ಮೂರು ನಗರಗಳ ಅನುಭವಗಳಿವೆ. ಮುಂಬೈ, ಶ್ರೀನಗರ ಮತ್ತು ದೆಹಲಿಯ ಅನುಭವಗಳು ಕ್ರಮವಾಗಿ ನಿರೂಪಿಸಲ್ಪಟ್ಟಿವೆ. ಈ ಮೂರು ನಗರದ ಅನುಭವಗಳಲ್ಲಿ ಒಂದೊಂದು ವಿಶಿಷ್ಟ ಎಳೆಗಳಿವೆ. ಮುಖ್ಯವಾಗಿ ಮುಂಬೈನ ಭೂಗತ ಜಗತ್ತಿನ, ಬಾಂಬ್ ಸ್ಪೋಟದ ಕೋಮುಗಲಬೆಗಳ ಭಯಭೀತ ಸಂಗತಿಗಳಿದ್ದರೆ, ಶ್ರೀನಗರದಲ್ಲಿ ಪ್ರತ್ಯೇಕವಾದಿಗಳ ಭಯ ಮತ್ತು ಅಲ್ಲಿನ ಜನರ ಅಂತಃಕರಣದ ಸಂಗತಿಗಳ ಜತೆ ಸೇನೆಯ ಪ್ರಾಭಲ್ಯದಂತಹ ಉಸಿರುಕಟ್ಟುವ ಅನುಭವಗಳಿವೆ. ದೆಹಲಿಯಲ್ಲಿ ಅಧಿಕಾರ ಕೇಂದ್ರದ ಒಳ ಆವರಣದ ಸೂಕ್ಷ್ಮಗಳಿವೆ, ಸಹಜವಾಗಿ ರಾಜಕಾರಣದ ಸಂಗತಿಗಳು ಹೆಚ್ಚಾಗಿವೆ. ಉಳಿದಂತೆ ಮನಸ್ಸನ್ನು ಕಲಕುವ ಬಿಡಿಬಿಡಿ ಬರಹಗಳಿವೆ.

ಮುಂಬೈನ ಭೂಗತ ಜಗತ್ತಿನ ಹಲವು ಸೂಕ್ಷ್ಮ ಸಂಗತಿಗಳನ್ನು ಪಿಳ್ಳೈ ಬರೆಯುತ್ತಾರೆ. ಇವರು ಮುಂಬೈಗೆ ಹೋದ ಹೊಸತರಲ್ಲಿ ಒಂದು ಘಟನೆ ಸಂಭವಿಸುತ್ತದೆ. `ಔಟ್ ಲುಕ್’ ಪತ್ರಿಕೆಗೆ ದಾವುದ್ ಇಬ್ರಾಹಿಂನ ಡಿ-ಕಂಪನಿಯ ಬಗ್ಗೆ ಅಜಿತ್ ಪಿಳ್ಳೈಯವರ ಬೈಲೈನಲ್ಲಿ `ಪಬ್ಲಿಕ್ ಎನಿಮಿ ನಂ.1’ ಎನ್ನುವ ತಲೆಬರಹದಲ್ಲಿ ದಾವುದ್ ಮುಖಪುಟದ ಸಂಚಿಕೆ (1997 ಸೆ 29) ಮಾರುಕಟ್ಟೆಗೆ ಬರುತ್ತದೆ. ಈ ವರದಿ ಡಿ-ಕಂಪನಿಯು ಜಗತ್ತಿನಾದ್ಯಾಂತ ವಿಸ್ತರಿಸಿಕೊಂಡ ಮಾದಕ ವಸ್ತುಗಳ ಮಾರಾಟದ ಜಾಲದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಹಾಗಾಗಿ ಈ ಸಂಚಿಕೆ ಸದ್ದು ಮಾಡಿತು. ಇದು ಸುಳ್ಳು ಸುದ್ದಿಯೆಂದು ದಾವುದ್ ಸಹಚರ ಛೋಟಾ ಶಕೀಲ್ ಅಜಿತ್ ಅವರಿಗೆ ಕಾಲ್ ಮಾಡಿ ಈಗ ಬರೆದದ್ದು ಸುಳ್ಳೆಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಕೇಳುತ್ತಾನೆ. ಆಗ ಅಜಿತ್ ಅವರು ಭಯಭೀತರಾಗಿ ಇದನ್ನು ನಿರ್ವಹಿಸಲಾಗದೆ ಸಹದ್ಯೋಗಿ ರಾಜೇಶ್ ಜೋಶಿ ಎನ್ನುವವರ ನೆರವು ಪಡೆಯುತ್ತಾರೆ. ಜೋಶಿ ಚಾಣಾಕ್ಷತನದಿಂದ ಈ ಸಮಸ್ಯೆಯನ್ನು ದಾವುದ್ ಸಂದರ್ಶನವೊಂದನ್ನು ಪ್ರಕಟಿಸುವ ಮೂಲಕ ಬಗೆಹರಿಸಿಕೊಂಡದ್ದನ್ನು ನೆನೆಯುತ್ತಾರೆ.
ಈ ಸಂಗತಿಯನ್ನು ನಿರೂಪಿಸುವಾಗ ಓದುಗರೂ ಒಂದು ಕ್ಷಣ ಭಯಗೊಳ್ಳುತ್ತಾರೆ. ಈ ಘಟನೆ ನಡೆದಾದ ನಂತರದ ಅನುಭವವನ್ನು ಬರೆಯುತ್ತಾ `ನಾನು ಮತ್ತು ರಾಜೇಶ್ ಭೇಟಿಯಾದಾಗಲೆಲ್ಲ ಛೋಟಾ ಶಕೀಲ್-ದಾವೂದ್ ಘಟನೆಯನ್ನು ನೆನಪಿಸಿಕೊಳ್ಳುತ್ತೇವೆ. ಅವನು ನಕ್ಕು ಸುಮ್ಮನಾಗುತ್ತಾನೆ. ನಾನೂ ಕೂಡಾ. ಆದರೆ ಒಳಗೆಲ್ಲೋ…ಈಗಲೂ ಆ ಘಟನೆಯ ನೆನಪು ನಡುಕ ಹುಟ್ಟಿಸುತ್ತದೆ’ ಎನ್ನುತ್ತಾರೆ. ದಾವುದ್ ಬಗ್ಗೆ ಬರೆಯುವಾಗ ಭಯವಿಲ್ಲದವರು, ಈ ಕಾರಣಕ್ಕೆ ಭೂಗತ ಜಗತ್ತಿನ ಡಾನ್ ಒಬ್ಬ ನೇರ ಸಂಪರ್ಕಿಸಿದಾಗ ಮನುಷ್ಯ ಸಹಜ ಆತಂಕಗೊಳ್ಳುವಿಕೆಯನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಇದೆಲ್ಲ ಈಗ ಮುಗಿದು ಕತೆಯಾಗಿದ್ದರಿಂದ ಸ್ವರತಿಯ ಪತ್ರಕರ್ತರಾಗಿದ್ದರೆ, ದಾವುದ್ ಮತ್ತು ಛೋಟಾ ಶಕೀಲರನ್ನು ಹೇಗೆ ಎದುರಿಸಿ ಧೈರ್ಯ ತೋರಿದೆ ಎಂದು ಈ ಘಟನೆಯನ್ನು ಸಾಹಸದ ಕತೆಯನ್ನಾಗಿ ತಿರುಚುವ ಸಾಧ್ಯತೆಗಳಿದ್ದವು. ಈ ಅನುಭವ ಅಜಿತ್ ಅವರನ್ನು ಭೂಗತಲೋಕದ ಸುದ್ದಿಗಳ ಕಡೆ ತಲೆಹಾಕದಂತೆ ತಡೆಯಬಹುದಿತ್ತು. ಆದರೆ ಈ ಘಟನೆಯ ನಂತರವೂ ಭೂಗತಜಗತ್ತಿನ ಬಗ್ಗೆ ಮೊದಲಿನಷ್ಟೇ ದೈರ್ಯವಾಗಿ ವರದಿ ಮಾಡುತ್ತಾರೆ. ಅಂತೆಯೇ ಭೂಗತ ಲೋಕವನ್ನೂ ಮನುಷ್ಯ ಸಹಜ ಕುತೂಹಲದಿಂದ ಇಂಚಿಂಚು ಗ್ರಹಿಸಲು ಪ್ರಯತ್ನಿಸಿ ಸಂಪರ್ಕ ಸಾಧಿಸುತ್ತಾರೆ. ಆ ಮೂಲಕ ಈ ಭೂಗತ ಲೋಕದ ಬಗ್ಗೆ ಇದ್ದ ತಪ್ಪುಗ್ರಹಿಕೆಗಳನ್ನೂ ಒಡೆಯುತ್ತಾರೆ. ಇದು ಅಜಿತ್ ಪಿಳ್ಳೈ ಅವರ ವಿಶಿಷ್ಠತೆಯಾಗಿದೆ.

ಒಮ್ಮೆ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲರಿಗೆ ಮುಂಬೈನ ಭೂಗತ ಜಗತ್ತನ್ನು ತೋರಿಸುವ ಅವಕಾಶ ಲಭಿಸುತ್ತದೆ. ಆಗ ನೈಪಾಲ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ಮಾತು ಆರಂಭಿಸಿ, ಮುಂಬೈ ಮಾಫಿಯಾದಲ್ಲಿ ಕೇವಲ ಮುಸಲ್ಮಾನರಿದ್ದಾರೆ ಎಂಬ ತೀರ್ಮಾನದಲ್ಲಿ `ಮುಸ್ಲಿಮರು ಮೊದಲಿನಿಂದಲೂ, ಬೇರೆ ಸಮುದಾಯಗಳಿಗೆ ಹೋಲಿಸಿ ನೋಡಿದರೆ ಹೆಚ್ಚು ಅಪರಾಧಗಳಲ್ಲಿ ತೊಡಗಿಸಿಕೊಂಡವರೇ’ ಎನ್ನುತ್ತಾರೆ. ಈ ಘಟನೆಯನ್ನು ಪಿಳ್ಳೈಯವರು ನೆನಪಿಸಿಕೊಂಡು `ಅಂದು ನಾನು ಅವರ ಮಾತಿಗೆ ಮಾರುತ್ತರ ಕೊಡುವಷ್ಟು ದೊಡ್ಡವನಲ್ಲವಾದರೂ, ಇರುವ ಧೈರ್ಯವನ್ನೆಲ್ಲಾ ಒಟ್ಟು ಮಾಡಿ `ಆ ತರಹ ಬೀಸು ಹೇಳಿಕೆಗಳನ್ನು ಒಂದು ಸಮುದಾಯದ ವಿರುದ್ಧ ನೀಡಬಾರದು. ಯಾಕೆಂದರೆ ಅಪರಾಧಕ್ಕೆ ಯಾವುದೇ ಧರ್ಮ ಅಥವಾ ಪ್ರದೇಶ ಎನ್ನುವುದು ಇರುವುದಿಲ್ಲ. ಮಾಫಿಯಾದಲ್ಲೂ ಹಾಗೆನೇ. ದಾವೂದ್ ಇಬ್ರಾಹಿಂನ ಬಂಟ ಛೋಟಾ ರಾಜನ್ ಒಬ್ಬ ಹಿಂದು’ ಎಂದು ಹೇಳುತ್ತಾರೆ. ಹಾಗೂ ಭೂಗತ ಜಗತ್ತಿನಲ್ಲಿರುವ ಇತರೆ ಹಿಂದುಗಳಾದ ಅಮರ್ ನಾಯಕ್, ಅರುಣ್ ಗೌಳಿ, ವರದರಾಜನ್ ಮೊದಲಿಯಾರ್… ಹೀಗೆ ಪಟ್ಟಿ ಕೊಡುತ್ತಾರೆ.

ವಿಪರ್ಯಾಸವೆಂದರೆ ಆ ದಿನ ಮುಂಬೈ ಮಾಫಿಯಾ ಎಂದರೆ ಮುಸ್ಲಿಮರದೇ ಎಂದುಕೊಂಡಿದ್ದ ನೈಪಾಲ್ ಅವರನ್ನು ಪಿಳ್ಳೈ ಅವರು ಹಿಂದುಗಳೇ ತುಂಬಿಕೊಂಡಿದ್ದ ಒಂದು ಅಡ್ಡಾಕ್ಕೆ ಕರೆದುಕೊಂಡು ಹೋಗುತ್ತಾರೆ. ಅವರೇನು ಹಾಗಂತ ಮೊದಲೇ ಯೋಜನೆ ಹಾಕಿದ್ದಲ್ಲ. ಆದರೆ ಕಡಿಮೆ ಅವಧಿಯಲ್ಲಿ ಆಕಸ್ಮಿಕವಾಗಿ ಅರೇಂಜ್ ಮಾಡಿದ್ದರು. ಮೇಲಾಗಿ ನೈಪಾಲ್ ಒಂದೇ ದಿನದಲ್ಲಿ ಆಗಬೇಕು ಎಂದು ತಾಕೀತು ಮಾಡಿದ್ದು ಕೂಡ ಇದಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ನೋಡಿದರೆ ನೈಪಾಲ್ ರಂಥಹ ದೊಡ್ಡ ಲೇಖಕರ ಪೂರ್ವಾಗ್ರಹಗಳನ್ನೂ ಹೇಳುವಷ್ಟು ಪಿಳ್ಳೈ ಅವರು ಖಚಿತವಾಗಿ ಏಕ ರೂಪಿ ನಿರೂಪಣೆಗಳಿಂದ ವಿಮುಖರಾಗಿದ್ದರು.

ಪಿಳ್ಳೈ ಅವರು ಕಾಶ್ಮೀರದ ಭಿನ್ನ ನೆಲೆಗಳನ್ನು ದಾಖಲಿಸಿದ್ದಾರೆ. ಮಾಧ್ಯಮಗಳು ಕಾಶ್ಮೀರಿಗಳೆಲ್ಲಾ ಆತಂಕವಾದಿಗಳು, ಅವರೆಲ್ಲಾ ಭಾರತೀಯರ ಕಡುವೈರಿಗಳು ಎಂದು ಕಟ್ಟಿಕೊಟ್ಟ ಏಕರೂಪಿ ಚಿತ್ರವನ್ನು ಅವರು ಭಿನ್ನವಾಗಿ ಗ್ರಹಿಸುತ್ತಾರೆ. `ಪೇಟೆ ಬೀದಿಯಲ್ಲೊಬ್ಬ ರಕ್ಷಕಿ’ ಎನ್ನುವ ಬರಹದಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್ ಪ್ರಂಟ್ ಆಯೋಜಿಸಿದ ಪ್ರತಿಭಟನೆಯೊಂದು ಹಿಂಸಾರೂಪ ಪಡೆದಾಗ ಪಿಳ್ಳೈ ಮತ್ತು ಅವರ ಫೋಟೋಗ್ರಾಫರ್ ಟಿ.ನಾರಾಯಣ್ ತಪ್ಪಿಸಿಕೊಂಡು 80 ರ ಆಸುಪಾಸಿನ ಅಜ್ಜಿಯೊಬ್ಬಳ ಮನೆ ಪ್ರವೇಶಿಸಿಸುತ್ತಾರೆ. ಆಗ ಅಜ್ಜಿ `ಮಗ… ನಿಮ್ಮ ಕಣ್ಣಿಗೆ ಒಂದಿಷ್ಟು ನೀರು ಹಾಕಿಕೊಳ್ಳಿ, ಆರಾಮಾಗುತ್ತೆ, ನಮಗೆ ಇದೆಲ್ಲ ಮಾಮೂಲು, ನಿಮ್ಮ ದೆಹಲಿಯಲ್ಲಿ ಕನಿಷ್ಠ ನೀವು ವಾಸಿಸುವ ಮನೆಯಂಗಳದಲ್ಲಿ ಇಂತಹವೆಲ್ಲಾ ಆಗುವುದಿಲ್ಲ’ ಎಂದು ಆತ್ಮೀಯವಾಗಿ ಮಾತನಾಡುತ್ತಲೇ ಇವರಿಬ್ಬರಿಗೂ ಒಂದು ಜಗ್ ನೀರು ಕೊಟ್ಟು ‘ನೀವು ಇಲ್ಲಿ ಕೂತು ಒಂದಿಷ್ಟು ಸುಧಾರಿಸಿಕೊಳ್ಳಿ, ಗಾಬರಿ ಪಡುವಂತಹದ್ದೇನೂ ಇಲ್ಲ’ ಎನ್ನುತ್ತಲೇ ತಮ್ಮ ಹಲ್ಲಿಲ್ಲದ ಬಾಯಿಂದ ಸಮಾಧಾನದ ನಗೆ ತೋರುತ್ತಾಳೆ. ಘಾಸಿಗೊಂಡ ಇವರಿಬ್ಬರೂ ನಿಧಾನಕ್ಕೆ ಸ್ವಲ್ಪ ನಿರಾಳವಾಗುತ್ತಾರೆ.

ಈ ಘಟನೆಯ ಬಗ್ಗೆ ಬರೆಯುತ್ತಾ ಪಿಳ್ಳೈ `ನಾವು ಬಚಾವಾದ ಒಂದು ಸರಳ ಘಟನೆಯದು. ಈ ಘಟನೆಯ ಆಧಾರದಲ್ಲಿ ಏನನ್ನೂ ಸಾರ್ವತ್ರೀಕರಿಸುವುದು ಸರಿಯಲ್ಲ. ಆದರೆ, ನನಗೆ ಆ ಇಡೀ ಘಟನೆ ಒಂದು ಸಿಂಬಾಲಿಕ್ ಹಾಗೂ ಅಜ್ಜಿಯ ಪ್ರತಿಕ್ರಿಯೆ ನಾನು ಅಲ್ಲಿಗೆ ಹೋಗುವ ಮುನ್ನ ದೆಹಲಿಯಲ್ಲಿ ಗುಪ್ತಚರ ವಿಭಾಗದ (ಐಬಿ) ಸಿಬ್ಬಂದಿ ನನಗೆ ಹೇಳಿದ್ದಕ್ಕಿಂತ ಸಂಪೂರ್ಣ ವಿರುದ್ಧವಾಗಿತ್ತು. `ಅಲ್ಲಿ ನಿಮಗೆ ಕ್ಷಣಕ್ಷಣಕ್ಕೂ ಅಪಾಯಗಳು ಎದುರಾಗುತ್ತವೆ, ಅಲ್ಲಿನ ಜನರ ಬಗ್ಗೆ ಹುಷಾರಾಗಿರಿ. ಅವರು ಭಾರತೀಯರನ್ನು ಕಡುವೈರಿಗಳಂತೆ ನೋಡುತ್ತಾರೆ, ಹಾಗಾಗಿ ಅಲ್ಲಿ ಯಾರನ್ನೂ ನಂಬುವಂತಿಲ್ಲ’ ಎಂದಿದ್ದರು. ಅವರ ಮಾತುಗಳಲ್ಲಿ ಉತ್ಪ್ರೇಕ್ಷೆಯಿತ್ತು. ಏಕೆಂದರೆ ನಾನು ಅಲ್ಲಿ ಭೇಟಿಯಾದವರಲ್ಲಿ ಬಹುಜನರು ಮಾನವೀಯ ಗುಣವುಳ್ಳವರು. ನನಗೆ ಗೊತ್ತು, ಅದೇ ಏರಿಯಾದಲ್ಲಿ ಬೇರೆಯವರೂ ನಮಗೆ ನೆರವು ನೀಡುತ್ತಿದ್ದರು. ಆದರೆ ಆ ಅಜ್ಜಿಯ ಸ್ಪಂದನೆ ಮಾತ್ರ ನಮ್ಮ ಮನ ಕರಗಿಸಿತ್ತು. ಆ ಘಟನೆ ಕಾಶ್ಮೀರಿ ಜನರ ಸಹಜ ಆಪ್ತತೆಯನ್ನು ತೋರಿಸಿತ್ತು’ ಎಂದು ಬರೆಯುತ್ತಾರೆ.
**
ಬಾಬ್ರಿ ಮಸೀದಿ ಧ್ವಂಸದ ಸಂಗತಿಗೆ ಕಾಂಗ್ರೇಸ್ ಹೇಗೆ ಅಡಿಪಾಯ ಹಾಕಿತು ಎನ್ನುವುದಕ್ಕೆ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಆಡಳಿತವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. `1992 ರ ಡಿ.6 ರಂದು ಬಾಬ್ರಿ ಮಸೀದಿ ಧ್ವಂಸದೊಂದಿಗೆ ರಾವ್ ಅವರ ಸಂಘ ಪರಿವಾರದ ಮೇಲಿನ ಅಪಾರ ಗುರುಭಕ್ತಿ ಮತ್ತು ಕಾಂಗ್ರೆಸ್‍ಗೆ ಪ್ರಿಯವಾಗಿದ್ದ ದೇಶದ ಜಾತ್ಯತೀತ ರಾಜಕಾರಣದ ಬಗೆಗಿನ ಅವರ ಅಸಹನೆಗಳೆರಡೂ ಬಹಿರಂಗವಾದವು. ರಾವ್ ಡೈರಿಯನ್ನು ನೋಡುವ ಮುಕ್ತ ಅವಕಾಶ ಪಡೆದಿದ್ದ ಸೀತಾಪತಿ ಅವರ ಕೃತಿ, ಬಾಬ್ರಿ ಮಸೀದಿ ಧ್ವಂಸಕ್ಕೆ ಮುನ್ನ ಪ್ರಧಾನಿ ರಾವ್ ಹೇಗೆ ವಿಎಚ್‍ಪಿಯ ಮುಖಂಡ ಅಶೋಕ್ ಸಿಂಘಾಲ್ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದರು ಎಂಬುದನ್ನು ಬಿಚ್ಚಿಟ್ಟಿದೆ. ಬಿಜೆಪಿ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿಯವರನ್ನು ರಹಸ್ಯವಾಗಿ ಭೇಟಿಯಾಗಿದ್ದ ರಾವ್, ಕರಸೇವೆಯ ವೇಳೆ ಎಲ್ಲರಿಂದಲೂ ಬಾಬ್ರಿ ಮಸೀದಿಗೆ ಧಕ್ಕೆ ಮಾಡದಂತೆ ಮಾತು ಪಡೆದಿದ್ದರು. ಆದರೆ ಗುಪ್ತಚರ ಮೂಲಗಳು, ಮಸೀದಿ ಧ್ವಂಸ ಯೋಜನೆ ರೂಪಿಸಿರುವುದು ನಿಜವಿದ್ದು, ಯಾವ ಕಾರಣಕ್ಕೂ ಬಿಜೆಪಿ ಮತ್ತು ಹಿಂದೂ ಮುಖಂಡರ ಆಶ್ವಾಸನೆ ನಂಬಬೇಡಿ ಎಂದು ರಾವ್‍ಗೆ ಹೇಳಿದ್ದವು. ಕಾಂಗ್ರೆಸ್ ಪಕ್ಷದೊಳಗೂ ಅದೇ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ರಾವ್, `ನಾನು ಬ್ರಾಹ್ಮಣ, ಅವರನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತಿದೆ’ ಎನ್ನುವ ಮೂಲಕ ಎಲ್ಲರ ಕಿವಿಮಾತನ್ನೂ ತಳ್ಳಿಹಾಕಿದ್ದರು.’ ಎಂದು ವಿಶ್ಲೇಷಿಸುತ್ತಾರೆ.

ಕೇಂದ್ರದಲ್ಲಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ `ಔಟ್ ಲುಕ್’ ಪತ್ರಿಕೆಯಲ್ಲಿ ಪಿಎಮ್ ಕಛೇರಿ ಹೇಗೆ ಇಡೀ ಸರಕಾರವನ್ನು ನಿಯಂತ್ರಿಸುತ್ತಿತ್ತು ಎನ್ನುವದರ ಬಗ್ಗೆ ವಿಸ್ತಾರವಾದ ವರದಿ ಮಾಡುತ್ತಾರೆ. ನಂತರ ಹಲವು ಹಗರಣಗಳನ್ನು ಬಯಲಿಗೆ¼ಯುತ್ತಾರೆ. ಇದರ ಪರಿಣಾಮವಾಗಿ ಪತ್ರಿಕೆಯ ಮಾಲೀಕ ರಂಜನ್ ರಹೇಜ ಅವರ ಉದ್ಯಮಗಳ ಮೇಲೆ ನಿರಂತರ ಐಟಿ ದಾಳಿ ಮಾಡಿಸಲಾಗುತ್ತದೆ. ಇದರಿಂದಾಗಿ ಸ್ವತಃ ವಿನೋದ್ ಮೆಹ್ತಾ ಅವರೆ ಈ ಸರಕಾರದ ವಿರುದ್ಧ ಮೃಧು ಧೋರಣೆ ತಾಳಿ ಎಂದು ಅಜಿತ್ ಅವರಿಗೆ ಹೇಳುತ್ತಾರೆ. ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ `ಇದೆಲ್ಲದರ ಪರಿಣಾಮ, ನಾನು ನನ್ನ ಎಂದಿನ ಕೆಲಸ ಮಾಡದೆ ಸುಮ್ಮನಿರಬೇಕಾಯಿತು. ನನ್ನ ಸಂಪರ್ಕದಲ್ಲಿದ್ದ ಸುದ್ದಿ ಮೂಲಗಳು ನನ್ನನ್ನು ಕಡೆಗಣಿಸಲು ಹೆಚ್ಚು ದಿನಗಳು ಬೇಕಾಗಲಿಲ್ಲ. ನಾನು ನನ್ನ ಮೊದಲ ಕಾರ್ಯಶೈಲಿಗೆ ಮರಳಬಹುದಿತ್ತೆ? ಬಹುಶಃ ಸಾಧ್ಯವಿತ್ತು. ಆದರೆ ಒಮ್ಮೆ ವೇಗ ಕಳೆದುಕೊಂಡ ನಂತರ ಚೇತರಿಸಿಕೊಳ್ಳಲಾಗಲಿಲ್ಲ. ಐಟಿ ದಾಳಿಗಳ ನಂತರ ನಾನು ಮಾಡಿದ ಸಾಫ್ಟ್ ಸುದ್ದಿಗಳು ನನ್ನ ಅಂದಿನ ಮನಸ್ಥಿತಿಯನ್ನು ತೋರಿಸುತ್ತವೆ. ನಾನು ತೆರೆಯ ಹಿಂದಿನ ಚಟುವಟಿಕೆಗಳಿಗೆ ಸೀಮಿತವಾದೆ. ಆದರೆ, ಆ ದಿನಗಳಲ್ಲಿ `ಔಟ್‍ಲುಕ್’ ಪ್ರಕಟಿಸಿದ ಕೆಲ ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದವು. ಆದರೆ ಎನ್‍ಡಿಎ ಅವಧಿ ಮುಗಿಯುವ ತನಕ, ಅಂದರೆ 2004ರ ತನಕ ಔಟ್‍ಲುಕ್‍ನ ‘ಆಡಳಿತ ಪಕ್ಷ ವಿರೋಧಿ’ ಧೋರಣೆ ಮೌನವಾಗಿತ್ತು’ ಎಂದು ಆತ್ಮವಿಮರ್ಶೆಯನ್ನೂ ಮಾಡಿಕೊಳ್ಳುತ್ತಾರೆ.
**
ಈ ಕೃತಿಯಲ್ಲಿ ಬಹುಮುಖಿ ವ್ಯಕ್ತಿತ್ವಗಳನ್ನು ವಿಮರ್ಶಾತ್ಮಕವಾಗಿಯೂ, ಮಾನವೀಯವಾಗಿಯೂ ಕಟ್ಟಿಕೊಡುತ್ತಾರೆ. ಸಂಜಯ್ ದತ್ ಅವರ ತಂದೆ ಸುನಿಲ್ ದತ್ ಅವರ ತಂದೆಯ ಮಮಕಾರ ಮತ್ತು ನಿಷ್ಠುರತೆ ಎರಡನ್ನೂ ಕಾಣಿಸುವ ಬಗೆ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ನೆಲಮೂಲದ ಸರಳ ವ್ಯಕ್ತಿತ್ವ ಕಾಶ್ಮೀರಿ ಕಣಿವೆ ಜನರಿಗೆ ಆಪ್ತವಾದ ಸಂಗತಿ, ಅಡುಗೆ ಎಣ್ಣೆಬಳಸದ ಡಾ.ಕುರಿಯನ್ ಪೆಪ್ಪರ್ ಚಿಕನ್ ಕುರಿತಂತೆಯೂ, ಚನೈ ಟಾಯ್ಲೆಟ್ಟುಗಳನ್ನು ಕ್ಲೀನ್ ಮಾಡಿದ ಆಸ್ಟ್ರೇಲಿಯನ್‍ರ ಬಗ್ಗೆಯೂ, ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ಉದಾರಿಕರಣಕ್ಕೆ ಅಡಿಪಾಯ ಹಾಕಿದ ಬಗ್ಗೆಯೂ, ಶಸ್ತ್ರಾಸ್ತ್ರ ಖರೀದಿಗೆ ಸಹಕರಿಸದ ಅಡ್ಮಿರಲ್ ಭಾಗವತ್ ಅವರ ದೇಸಿ ತಂತ್ರಜ್ಞಾನದ ವಿಶ್ವಾಸದ ಬಗೆಗೂ, ರೆಡ್ ಲೈಟ್ ಏರಿಯಾದಿಂದ ಹೊರಬಂದು ಅನುಕಂಪ ಗಳಿಸಿ ಕೊನೆಗೆ ಮೃತ್ಯವಿಗೆ ವಶವಾದ ನಸ್ರೀನಳ ದುರಂತದ ಬಗೆಗೂ, ತಮಿಳುನಾಡಿನ ವಿಲ್ಲಿವಾಕಂ ಹಳ್ಳಿಗರು ಬಡತನದ ಕಾರಣಕ್ಕೆ ಕಿಡ್ನಿಮಾರುವ ಸ್ಥಿತಿಗೆ ಬಂದ ಬಗೆಗೂ, ವಿಶಿಷ್ಠವಾಗಿಯೂ ಮಾನವೀಯವಾಗಿಯೂ ದಾಖಲಿಸಿದ್ದಾರೆ.

ಈಚೆಗೆ ಕ್ರಾಂತಿಕಾರಿ ಹಾಡುಗಾರ ಗದ್ದರ್ ಪುರೋಹಿತಶಾಹಿಗೆ ಶರಣಾದ ಸಂಗತಿಯೊಂದು ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಅಜಿತ್ ಅವರು ಗದ್ದರ್ ಬಗೆಗಿನ ಮೆಚ್ಚುಗೆಯನ್ನೂ, ಅವರ ವ್ಯಕ್ತಿತ್ವದ ವೈರುದ್ಯವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಜನವಿರೋಧಿಗಳ ಜತೆ ಸಖ್ಯಮಾಡಿ ಜನಚಳವಳಿಯನ್ನು ಬಲಿಕೊಡುವ ಕಾರಣಕ್ಕೆ ಆಗಲೆ ಅವರನ್ನು ಪೀಪರ್‍ವಾರ್ ಗ್ರೂಪ್ ನಿಂದ ಅಮಾನತ್ತು ಮಾಡಿದ್ದ ಘಟನೆಯನ್ನು ಬರೆಯುತ್ತಾರೆ. ಇದನ್ನು ನೋಡಿದರೆ, ಗದ್ದರ್ ಒಳಗೆ ಇಂಥಹದ್ದೊಂದು ಎಳೆ ಸೂಕ್ಷ್ಮವಾಗಿತ್ತು ಅನ್ನಿಸುತ್ತದೆ. 1994 ರಲ್ಲಿ ತೀರಿದ ಜಾತ್ಯಾತೀತ ನಿಲುವುಳ್ಳ ಕಂಚೀಸ್ವಾಮಿ ನಂತರದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಬಲ ಹೆಚ್ಚಾದಂತೆ ಹೊಸ ಕಂಚೀಸ್ವಾಮಿ ಹೇಗೆ ಕೋಮುವಾದಿಯಾದರು ಎನ್ನುವ ಜಿಗಿತವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಇದು ಇಡೀ ಇಂಡಿಯಾದ ಮಠಪರಂಪರೆಯ ಜಿಗಿತವನ್ನೂ ಸೂಕ್ಷ್ಮವಾಗಿ ಕಾಣಿಸುತ್ತದೆ. ಈಚಿನ ಚುನಾವಣಾ ಸಮೀಕ್ಷೆಯ ಪೊಳ್ಳುತನದ ಬಗ್ಗೆಯೂ, ಅವುಗಳ ಹಿಂದಣ ರಾಜಕಾರಣದ ಬಗ್ಗೆ ವ್ಯಂಗ್ಯವಾಗಿ ವಿಶ್ಲೇಷಿಸಿದ್ದಾರೆ. ಮುಂಬೈನ ಸರಣಿ ಸ್ಪೋಟಗಳು ಸಂಭವಿಸಿದಾಗ ಪತ್ರಕರ್ತರ ವರದಿ ಮಾಡುವಿಕೆಯ ಸಂಕಷ್ಟಗಳು. ಮತ್ತು ಇಂತಹ ಸಂದರ್ಭದಲ್ಲಿ ಆಗುವ ಮಾನವೀಯ ಅನುಭವಗಳನ್ನು ತುಂಬಾ ಸೂಕ್ಷ್ಮವಾಗಿ ದಾಖಲಿಸಿದ್ದಾರೆ.
**
ಪಿಳ್ಳೈ ಅವರು ಒಬ್ಬ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತರಾಗಿ, ಪತ್ರಿಕೋದ್ಯೋಗದ ಎಲ್ಲಾ ಮುಖಗಳನ್ನು ಸ್ವತಃ ಅನುಭವದಿಂದ ಕಂಡುಕೊಂಡವರಾಗಿ ಪುಸ್ತಕದ ಆರಂಭಕ್ಕೆ ಮಾಧ್ಯಮದ ಬಗೆಗೆ ನಿರಾಶೆಯ ಮಾತುಗಳನ್ನಾಡುತ್ತಾರೆ. ಇದು ಹೊಸ ತಲೆಮಾರಿನ ಪತ್ರಕರ್ತರಿಗೆ ಮುನ್ಸೂಚನೆಯಂತಿದೆ. `ಆದರ್ಶವಾದ ಜಗತ್ತಿನಲ್ಲಿ ಮಾದರಿ ಎನ್ನಬಹುದಾದ ಪತ್ರಿಕೆಗಳು, ಸರ್ವಗುಣ ಸಂಪನ್ನ ಸಂಪಾದಕರು ಹಾಗೂ ಪಕ್ಕಾ ನಿಷ್ಣಾತ ವರದಿಗಾರರು ಸಿಗಬಹುದೇನೋ. ಆದರೆ ಅಂತಹದೊಂದು ಆದರ್ಶ ಸಮಾಜ ಎಲ್ಲಿದೆ? ಪತ್ರಿಕೋದ್ಯಮದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡು ಪತ್ರಕರ್ತರಾಗಲು ಬಯಸುವ ಕೆಲ ಯುವಕರ ಆಲೋಚನೆಯಲ್ಲಿ ಮಾತ್ರ ಅಂತಹ ಆದರ್ಶ ಸಮಾಜ ಇರಬಹುದೇನೋ ಅಷ್ಟೇ. ಬೇರೆಲ್ಲೂ ಇಲ್ಲವಲ್ಲ. ಈ ಯುವಕರೂ ಪತ್ರಕರ್ತರಾದ ಮೇಲೆ ತಾವು ದೂರದಿಂದ ಕಂಡ ದೇವರುಗಳೂ ಹಲವು ದೌರ್ಬಲ್ಯಗಳಿಂದ ಬಳಲುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ, ಅವರಲ್ಲಿಯೂ ಈ ಆದರ್ಶದ ಕಲ್ಪನೆ ಮಾಯವಾಗುತ್ತದೆ. ಈ ಹೊತ್ತಿನ ಪತ್ರಿಕೋದ್ಯಮದಲ್ಲಿ ವ್ಯಾವಹಾರಿಕ ಕಾಳಜಿಗಳು ಸಂಪಾದಕೀಯ ನಿಲುವಿನ ಮೇಲೆ ಪ್ರಭಾವ ಬೀರುತ್ತ್ತಿವೆ. ಅಂತಹದೇ ಕಾರಣಗಳಿಗೆ ಅನೇಕ ಸಾರಿ ಭಾರೀ ಮಹತ್ವದ ಸುದ್ದಿಗಳೂ ಯಾರಿಗೂ ಕಾಣದಂತೆ ಪ್ರಕಟವಾಗಬಹುದು. ಅಷ್ಟೇ ಅಲ್ಲ, ತಮ್ಮ ವೈಯಕ್ತಿಕ ರಾಜಕೀಯ ಹಾಗೂ ಆರ್ಥಿಕ ನಿಲುವುಗಳಿಗೆ ಪೂರಕವಾಗಿರುವ ವರದಿಗಳ ಬಗ್ಗೆ ಅತೀವ ಆಸಕ್ತಿ ವಹಿಸುವ ಅನೇಕ ಸಂಪಾದಕರೂ ನಮ್ಮ ಮಧ್ಯೆ ಇದ್ದಾರೆ’ ಎನ್ನುತ್ತಾರೆ.

ಹೀಗೆ ಮಾಧ್ಯಮದ ಕಣ್ಣೋಟದ ಮೂಲಕ ಚಿಕಿತ್ಸಕ ದೃಷ್ಟಿಯಿಂದ ಈ ಲೋಕವನ್ನೂ, ಬಗೆಯೂ, ಈ ಲೋಕವು ಮಾಧ್ಯಮಗಳನ್ನು ಅನುಮಾನ ಮತ್ತು ತಾತ್ಸಾರದಿಂದ ಗ್ರಹಿಸುವ ಬಗೆಯನ್ನೂ, ಬಂಡವಾಳಶಾಹಿ ಮತ್ತು ಬಲಪಂಥೀಯ ಅಧಿಕಾರಶಾಹಿಯ ಮೀಡಿಯಾ ಹಿಡಿತವನ್ನೂ ಪಿಳ್ಳೈ ಎದುರುಬದುರಿಟ್ಟು ವಿಶ್ಲೇಷಿಸಿದ್ದಾರೆ. ಜಾಹಿರಾತು ವಿಭಾಗದ ನಿಯಂತ್ರಣದಲ್ಲಿ ಸಂಪಾದಕೀಯ ಕೆಲಸ ಮಾಡಬೇಕಾದ ಈ ಕಾಲಘಟ್ಟದ ಸ್ಥಿತಿಯನ್ನು ಈತನಕ ಇದ್ದ ಚೀನಾಗೋಡೆಯಂತಹ ಅಂತಹವನ್ನು ಉಳಿಸಿಕೊಳ್ಳುವ ತುರ್ತಿದೆ ಎನ್ನುತ್ತಾರೆ.

ಹಾಗಾಗಿ ಈ ಕೃತಿ ಮಾಧ್ಯಮಗಳ ಬಗೆಗಿನ ನಮ್ಮ ಅರಿವಿನ ಪರಿದಿಯನ್ನು ವಿಸ್ತರಿಸುತ್ತದೆ. ಈ ಎಲ್ಲಾ ಕಾರಣದಿಂದಾಗಿ ಇಂದು ಮಾಧ್ಯಮಕ್ಕೆ ಸೇರಬಯಸುವ ಹೊಸ ತಲೆಮಾರಿನ ಸಂಗಾತಿಗಳೂ, ಅಂತೆಯೇ ಈಗಾಗಲೆ ಮಾಧ್ಯಮಗಳಲ್ಲಿ ತೊಡಗಿಸಿಕೊಂಡವರೂ ಒಮ್ಮೆ ಓದಬೇಕಾದ ಅಪರೂಪದ ಒಳನೋಟಗಳ ಕೃತಿ ಇದಾಗಿದೆ.

Leave a Reply

Your email address will not be published.