ಸಿರಿಯಾ ಬಗ್ಗೆ ಅಮೆರಿಕದ ಭಂಡ ನೀತಿಗಳು

ಅನು: ಶಿವಸುಂದರ್

ಸಿರಿಯಾದಲ್ಲಿ  ಅಮೆರಿಕ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಸಲಫಿ ಜೆಹಾದಿ ಶಕ್ತಿಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದಷ್ಟೆ.

ಸಾಮ್ರಾಜ್ಯವಾದವು ಯಾವಾಗಲೂ ಮಾನವತಾವಾದವೆಂಬ ನೈತಿಕ ನಿಲುವಂಗಿಯನ್ನು ಧರಿಸಿರುತ್ತದೆ. ಹೀಗಾಗಿ ಸೈನಿಕ ಕಾರ್ಯಾಚರಣೆಗಳ ಮಾರ್ಗವನ್ನು, ಜನಾಂಗೀಯವಾದವನ್ನು, ಭಾವೋನ್ಮಾದದ ದೇಶಪ್ರೇಮಗಳನ್ನು ಸದಾ ಪ್ರತಿಪಾದಿಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಸಹ,  ಕಾಲಾನುಕಾಲದಿಂದ ಅಮೆರಿಕ ಸಾಮ್ರಾಜ್ಯವಾದವು ಯಶಸ್ವಿಯಾಗಿ ಬಳಸಿಕೊಂಡುಬಂದಿರುವ ನೈತಿಕ ಬಾವುಟವನ್ನು ಪ್ರದರ್ಶಿಸುವ ಮೂಲಕ ತನ್ನ ಯುದ್ಧಕೋರ ನೀತಿಗೆ ಉಭಯಪಕ್ಷದ ಸಮ್ಮತಿಯನ್ನು ದಕ್ಕಿಸಿಕೊಂಡುಬಿಟ್ಟರು. ವಿಷಯವೇನೆಂದರೆ ೧೯೬೧-೭೧ರ ಅವಧಿಯಲ್ಲಿ ವಿಯೆಟ್ನಾಮ್ ಮೇಲೆ ಅಮೆರಿಕದ ನಡೆಸಿದ ದುರಾಕ್ರಮಣದಲ್ಲಿ ಆಪರೇಷನ್ ರಾಂಚ್ ಹ್ಯಾಂಡ್ ನ  ಭಾಗವಾಗಿ ಅಮೆರಿಕ ಏಜೆಂಟ್ ಆರೆಂಜ್ ಅನ್ನು ಬಳಸಿದ್ದನ್ನು ಈಗ ಯಾರೂ ನೆನಪಿಸಿಕೊಳ್ಳಬಾರದಷ್ಟೆ! (ಏಜೆಂಟ್ ಆರೆಂಜ್ ಎಂಬುದು ಒಂದು ಸಸ್ಯನಾಶಕ ರಾಸಾಯನಿಕ. ಅಮೆರಿಕವು ಇದನ್ನು ವಿಯೆಟ್ನಾಂ ಮೇಲೆ ನಡೆಸಿದ ಆಕ್ರಮಣದಲ್ಲಿ ಬಳಸಿತು.

syriaಇದರಿಂದ ವಿಯೆಟ್ನಾಂನ  ೪೦ ಲಕ್ಷಕ್ಕೂ ಹೆಚ್ಚು ಅಮಾಯಕ ನಾಗರೀಕರು ಹಲವು ಬಗೆಯ ಖಾಯಿಲೆಗಳಿಗೆ ತುತ್ತಾಗಿದ್ದು ಮಾತ್ರವಲ್ಲದೆ ೩.೫ ಲಕ್ಷ ಹೆಕ್ಟೇರಿನಷ್ಟು ಕಾಡು ಸಹ ನಾಶವಾಗಿ ಅಪಾರ ಪರಿಸರ ಅಸಮತೋಲನವನ್ನೂ ಉಂಟಾಯಿತು- ಅನುವಾದಕನ ಟಿಪ್ಪಣಿ ). ತನ್ನ ಕ್ರಮಗಳನ್ನು ಸಮಥಿಸಿಕೊಳ್ಳಲು ಅಮೆರಿಕದ ರಾಷ್ಟ್ರಾಧ್ಯಕ್ಷರ ಕಛೇರಿ ಮಾಡಬೇಕಿರುವುದಿಷ್ಟೆ. ಯಾವುದೇ ನಿಷ್ಪಕ್ಷಪಾತ ತನಿಖೆಗೆ ಅಥವಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯದೆ, ಸಿರಿಯಾ ದೇಶವು ಒಂದು ರಾಸಾಯನಿಕ ಶಸ್ತ್ರಾಸ್ತ್ರ ದಾಳಿಗೆ ತಯಾರಾಗುತ್ತಿತ್ತೆಂದು ಏಕಪಕ್ಷೀಯವಾಗಿ ಘೋಷಿಸಿಬಿಡುವುದು.  ಹಾಗೂ ಈ ಅಪರಾಧದ ಬಗ್ಗೆ ತನ್ನ ತೀರ್ಪನ್ನು ಕಾರ್ಪೊರೇಟ್ ಮಾಧ್ಯಮಗಳಲ್ಲಿ ಆದಷ್ಟು ವಿಸ್ತಾರವಗಿ ಬಿತ್ತರಿಸಿ ಆದಷ್ಟು ಬೇಗ ಶಿಕ್ಷೆಯನ್ನು ಜಾರಿಗೊಳಿಸುವುದು.

ಕಳೆದ ಆರು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ನಡೆಯುತ್ತಿದ್ದು ಇದೇ ಏಪ್ರಿಲ್ ೪ ರಂದು ಬಂಡುಕೋರರ ಹಿಡಿತದಲ್ಲಿರುವ ಇದ್ಲಿಬ್ ಪ್ರಾಂತ್ಯದ ಖಾನ್ ಶೆಕೌನ್ ಪಟ್ಟಣದ ಮೇಲೆ ಒಂದು ರಾಸಾಯನಿಕ ಅಸ್ತ್ರದ ದಾಳಿ ನಡೆಯಿತು. ತತ್ ತಕ್ಷಣವೇ ವೈಟ್‌ಹೌಸ್ ಕಛೇರಿಯು ಈ ದಾಳಿಯ ಹೊಣೆಯನ್ನು ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸಾದ್ ಅವರ ಮೇಲೆ ಹೊರಿಸಿ ತೀವ್ರವಾಗಿ ಖಂಡಿಸಿತು. ಹೆಚ್ಚೂಕಡಿಮೆ ಇಡೀ ಜಾಗತಿಕ ರಾಜಕೀಯ ವ್ಯವಸ್ಥೆ ಮತ್ತು ಮಾಧ್ಯಮಗಳು ಸಿರಿಯಾ ಸರ್ಕಾರವನ್ನೇ ಅಪರಾಧಿಯೆಂದು ತೀರ್ಮಾನಿಸಿ ಖಂಡತುಂಡವಾಗಿ ಖಂಡಿಸಿದವು. ಮರುದಿನ ಅಧ್ಯಕ್ಷ ಟ್ರಂಪ್ ಅವರು ವಿಷಾನಿಲ ಸೇವನೆಯಿಂದ ಉಸಿರುಗಟ್ಟಿ ಸತ್ತ ಅಮಾಯಕ ಮಕ್ಕಳ ಬೀಭತ್ಸ ದೃಶ್ಯಗಳನ್ನು ನೋಡಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಲ್ಲದೆ ಸಿರಿಯಾ ಹದ್ದುಮೀರಿದೆಯೆಂದು ಘೋಷಿಸಿದರು. ಕೂಡಲೇ ಟ್ರಂಪ್ ಅವರು ಇದರ ವಿರುದ್ಧ ಯಾವ ಬಗೆಯ ಸೈನಿಕ ಕಾರ್ಯಾಚರಣೆಯನ್ನು ಕೈಗೊಳ್ಳಬಹುದೆಂಬ ಬಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯನ್ನು ಕರೆದರು. ಮರುದಿನವೇ ಮೆಡಿಟರೇನಿಯನ್ ಸಮದ್ರದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಎರಡು ಯುದ್ಧ ನೌಕೆಗಳು ಹಾಮ್ಸ್ ಪಟ್ಟಣದ ಸಮೀಪವಿರುವ ಸಿರಿಯಾದ ಶಾಯರತ್ ಸೈನಿಕ ನೆಲೆಯ ಮೇಲೆ ೫೯ ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿತು.

ತಮ್ಮ ಸರ್ಕಾರವೇ ರಾಸಾಯನಿಕ ಅಸ್ತ್ರ ದಾಳಿ ಮಾಡಿತು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಿರಿಯಾದ ವಿದೇಶಾಂಗ ಮಂತ್ರಿ ವಲ್ಲಿದಾಲ್ ಮುವಲ್ಲೆಮ್ ಅವರು  ನಮ್ಮ ಸರ್ಕಾರ ನಮ್ಮ ಜನರ ಮೇಲೆ ದಾಳಿ ಮಾಡುತ್ತಿರುವ ಭಯೋತ್ಪಾದಕರ ಮೇಲೆ ಕೂಡಾ ಎಂದಿಗೂ ರಾಸಾಯನಿಕ ಅಸ್ತ್ರಗಳಿಂದ ದಾಳಿ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರೂ ಅಧಿಕಾರಸ್ಥರೂ ಮತ್ತು ವ್ಯವಸ್ಥಾಪರ ಮಾಧ್ಯಮಗಳು ಆ ಹೇಳಿಕೆಗೆ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ. ಬದಲಿಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹೇಲಿಯವರ ಹೇಳಿಕೆಗೆ ಮಾಧ್ಯಮಗಳು ವಿಸ್ತೃತವಾದ ಪ್ರಚಾರ ನೀಡಿದವು. ಆಕೆ ನೀಡಿದ ಹೇಳಿಕೆಯ ಸಾರವೇನೆಂದರೆ ಸಿರಿಯಾದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಸಾಮೂಹಿಕವಾಗಿ ಕ್ರಮ ತೆಗೆದುಕೊಳ್ಳುವ ಕರ್ತವ್ಯವನ್ನು ಪಾಲಿಸದೇ ಇದ್ದಾಗ ಅದರ ವಿರುದ್ಧ ಏಕಪಕ್ಷೀಯವಾಗಿ ಯುದ್ಧ ನಡೆಸುವ ಹಕ್ಕು ಅಮೆರಿಕಕ್ಕಿದೆ ಎನ್ನುವುದಾಗಿತ್ತು. ನಿರೀಕ್ಷೆಯಂತೆ ಅಮೆರಿಕದ ಇಡೀ ರಾಜಕೀಯ ವ್ಯವಸ್ಥೆ ಮತ್ತು ಕಾರ್ಪೊರೇಟ್ ಮಾಧ್ಯಮಗಳು ಸಿರಿಯಾದ ಮೇಲೆ ದಾಳಿ ನಡೆಸಿದ್ದಕ್ಕೆ ಟ್ರಂಪ್ ಸರ್ಕಾರವನ್ನು ಕೊಂಡಾಡಿದವು. ಈವರೆಗೆ ಟ್ರಂಪ್ ಸರ್ಕಾರವನ್ನು ಸದಾ ಜರೆಯುತ್ತಿದ್ದ ಸಿಎನ್‌ಎನ್ ವಾಹಿನಿಯ ಅತ್ಯಂತ ಜನಪ್ರಿಯ ವಿದೇಶ ವ್ಯವಹಾರಗಳ ಕಾರ್ಯಕ್ರಮವನ್ನು ನಡೆಸಿಕೊಡುವ ಫರೀದ್ ಝಕಾರಿಯಾ ಅಂತೂ ಸಿರಿಯಾ ಮೇಲೆ ಕ್ರೂಸ್ ಕ್ಷಿಪಣಿ ದಾಳಿ ಮಾಡುವ ಮೂಲಕ ಟ್ರಂಪ್ ಅವರು ನಿಜಕ್ಕೂ ಅಮೆರಿಕದ ಅಧ್ಯಕ್ಷರಾದರು ಎಂದು ಬಣ್ಣಿಸಿಬಿಟ್ಟರು.

ನಿಜ ಹೇಳಬೇಕೆಂದರೆ ಅಮೆರಿಕದ ಸಾಮ್ರಾಜ್ಯವಾದವು ಈವರೆಗೆ ಆಡುತ್ತಲೇ ಬಂದ ಅದೇ ಹಳೆಯ ನಾಟಕವೇ ಇದೀಗ ಸಣ್ಣ ರಂಗಮಂಚವೊಂದರಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳುತ್ತಿದೆ. ಅಪಾರ ತೈಲ ಸಂಪತ್ತಿನ ಒಡೆಯನಾಗಿದ್ದ ಇರಾಕ್ ಮೇಲೆ ೧೯೯೧ರಲ್ಲಿ ಅಮೆರಿಕ ನಡೆಸಿದ ಯುದ್ಧಕ್ಕೆ ಕಾರಣ ಇರಾಕೀ ಸೈನ್ಯವು ಕುವೈತ್ ಜನರ ಮೇಲೆ ನಡೆಸಬಹುದಾಗಿದ್ದ  ಅತ್ಯಾಚಾರಗಳನ್ನು ತಡೆಯುವುದೇ ಆಗಿತ್ತು. ೧೯೯೯ರಲ್ಲಿ ನ್ಯಾಟೋ ಪಡೆಗಳು ಯುಗೋಸ್ಲಾವಿಯಾದ ಮೇಲೆ ನಡೆಸಿದ ದಾಳಿಯನ್ನು ಆ ದೇಶದ ಅಧ್ಯಕ್ಷ ಸ್ಲೊಬೊಡಾನ್ ಮಿಲಿಸೋವಿಚ್ ತನ್ನ ದೇಶದ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ನಡೆಸಬೇಕೆಂದುಕೊಂಡಿದ್ದ ಜನಾಂಗೀಯ ನರಹತ್ಯೆಯನ್ನು ತಡೆಯಬೇಕಾಗಿತ್ತೆಂಬ ಕಾರಣವೊಡ್ಡಿ ಎಂದು ಸಮರ್ಥಿಸಿಕೊಳ್ಳಲಾಗಿತ್ತು. ೨೦೦೧ರಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಆ ದೇಶದ ತಾಲಿಬಾನ್ ಆಡಳಿತವು ೨೦೦೧ ಸೆಪ್ಟೆಂಬರ್ ೧೧ರ ದಾಳಿಕೋರರಿಗೆ ಆಶ್ರಯ ನೀಡಿತ್ತೆಂಬ ಕಾರಣವೊಡ್ಡಿ ಸಮರ್ಥಿಸಿಕೊಳ್ಳಲಾಯಿತು. ೨೦೦೩ರಲ್ಲಿ ಇರಾಕ್ ಮೇಲೆ ನಡೆಸಿದ ದಾಳಿಯನ್ನು ಆ ದೇಶದ ಅಧ್ಯಕ್ಷ ಸದ್ದಾಂ ಹುಸೇನ್ ಬಳಿ ಸಮೂಹ ವಿನಾಶಕ ಶಸ್ತ್ರಾಸ್ತ್ರ ಗಳಿತ್ತೆಂಬ ಕಾರಣವೊಡ್ಡಿ ಸಮರ್ಥಿಸಿಕೊಳ್ಳಲಾಯಿತು. ೨೦೧೧ರಲ್ಲಿ ನ್ಯಾಟೋ ಪಡೆಗಳು ಲಿಬ್ಯಾದ ಮೇಲೆ ನಡೆಸಿದ ದಾಳಿಗೆ  ಮತ್ತವರ ಇಸ್ಲಾಮಿಕ್ ಕೈಗೊಂಬೆ ಪಡೆಗಳು ಅಧ್ಯಕ್ಷ ಗದಾಫಿಯನ್ನು ಕೊಂದುಹಾಕಿದ್ದಕ್ಕೆ,  ಬೆಂಗಾಜಿಯಲ್ಲಿ ಗದಾಫಿ ಪಡೆಗಳು ಮಾಡಲು ಯೋಜಿಸಿದ್ದ ಸಾಮೂಹಿಕ ನರಹತ್ಯೆಯನ್ನು ತಡೆಯಬೇಕಾಗಿತ್ತೆಂಬ ನೈತಿಕ ಸಮರ್ಥನೆಯನ್ನು ನೀಡಲಾಯಿತು.

ತನ್ನ ಜಾಗತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸಿಕೊಳ್ಳಲು ಅಮೆರಿಕವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಹಣಕಾಸು, ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿ ತಮ್ಮ ಪರವಾಗಿ ಅವರನ್ನು ಎತ್ತಿಕಟ್ಟುತ್ತಿರುವುದರಲ್ಲಿ ದೀರ್ಘಕಾಲದಿಂದ ಒಂದು ಸ್ಪಷ್ಟವಾದ ಪದ್ಧತಿಯನ್ನು ಅನುಸರಿಸುತ್ತಿದೆ. ೧೯೫೦ರಲ್ಲಿ ಅರಬ್ ರಾಷ್ಟ್ರೀಯವಾದಿಗಳ ವಿರುದ್ಧ ಅಮೆರಿಕದ ಸಿಐಎ ಯು,  ಮುಸ್ಲಿಂ ಬ್ರದರ್‌ಹುಡ್ ಜೊತೆ ಒಂದಾಗಿದ್ದು ಮತ್ತು ೧೯೮೦ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಮುಜಾಹಿದ್ದೀನ್‌ಗಳಿಗೆ ಅಮೆರಿಕ ಶಸ್ತ್ರಾಸ್ತ್ರ ಬೆಂಬಲವನ್ನು ನೀಡಿದ್ದು ತಕ್ಷಣಕ್ಕೆ ನೆನಪಿಗೆ ಬರುತ್ತದೆ. ಅದೇ ಬಗೆಯ ಕುತಂತ್ರವನ್ನು ಇದೀಗ ಆರುವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಜರ್ಝರಿತವಾಗಿರುವ ಸಿರಿಯಾದಲ್ಲಿ ಅಮೆರಿಕ ಪ್ರಯೋಗಿಸುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಸುನ್ನಿ ಇಸ್ಲಾಮಿನ ಒಂದು ಪಂಥವಾಗಿರುವ, ಅತ್ಯಂತ ಸಂಪ್ರದಾಯವಾದಿ ಮತ್ತು ಅತ್ಯಂತ  ಪರಿಶುದ್ಧ ಇಸ್ಲಾಮನ್ನು ಪ್ರತಿಪಾದಿಸುವ ಮತ್ತು ಸೌದಿ ಅರೇಬಿಯಾದ ಪ್ರಭುತ್ವ ಧರ್ಮವಾದ ವಹಾಬಿವಾದದ ವಿಸ್ತರಣೆಯ ಆಕಾಂಕ್ಷೆಗಳೇ ಸಲಾಫಿ ಜಿಹಾದಿ ಗುಂಪುಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಮತ್ತು ಅಲ್‌ಖೈದಾಗಳಿಗೆ ಮತ್ತು ಇರಾಕ್ ಮತ್ತು ಸಿರಿಯಾದಲ್ಲಿರುವ ಅವರ ಸಹವರ್ತಿಗಳಿಗೆ ಸ್ಪೂರ್ತಿ ನೀಡುವ ಮತೀಯ ಸೆಲೆಗಳಾಗಿವೆ. ಉದಾಹರಣೆಗೆ, ಇಂದು ಸಿರಿಯಾದಲ್ಲಿ ಅಸ್ಸಾದ್ ಅವರ ಆಳ್ವಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಅಲ್‌ಖೈದಾದ ಜಭಾತ್ ಅಲ್ ನುಸ್ರಾ ಬಂಡುಕೋರರ ಬೆನ್ನಿಗೆ ಅಮೆರಿಕದ ಸಿಐಎ ಇದೆ.

ಸಮಸ್ಯೆ ಕೇವಲ ವಹಾಬಿವಾದದ್ದಲ್ಲ. ಬದಲಿಗೆ ಅಮೆರಿಕದ ಸಾಮ್ರಾಜ್ಯವಾದದ ಸಂಕುಚಿತ ಗುರಿಗಳನ್ನು ಈಡೇರಿಸಿಕೊಳ್ಳಲು ಇಂಥಾ ಸಲಾಫಿ ಜಿಹಾದಿ ಗುಂಪುಗಳಿಗೆ ನೀಡಲಾಗುತ್ತಿರುವ ಬೆಂಬಲವೂ ಸಹ ದೊಡ್ಡ ಸಮಸ್ಯೆಯೇ. ಸಿರಿಯಾದಲ್ಲಿ ಅಮೆರಿಕಾ ಸಾಮ್ರಾಜ್ಯವಾದದ  ಕೈಗೊಂಬೆಗಳಾಗಿ ವರ್ತಿಸುತ್ತಿರುವ ಸಲಾಫಿ ಜೆಹಾದಿ ಮಿಲಿಷಿಯಾಗಳಿಗೆ ಅಮೆರಿಕ, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ಸರ್ಕಾರಗಳು ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕೆಂದು ಈಗಲಾದರೂ ವಿಶ್ವಸಂಸ್ಥೆಯು ಆ ದೇಶಗಳಿಗೆ ತಾಕೀತು ಮಾಡಬೇಕಿದೆ. ಇಂದು ಸಿರಿಯಾ ಎದುರಿಸುತ್ತಿರುವ ತಲ್ಲಣ ಮತ್ತು ಅದರಿಂದ ಉದ್ಭವಿಸಿರುವ ೨೧ನೇ ಶತಮಾನದ  ಅತ್ಯಂತ ದಾರುಣವಾದ ನಿರಾಶ್ರಿತರ ಸಮಸ್ಯೆಗಳ ಕುರಿತಾದ ಯಾವುದೇ ಪ್ರಾಮಾಣಿಕ ವಿಶ್ಲೇಷಣೆಯು ಆ ವಿದ್ಯಮಾನಗಳ ಮೂಲ ಇಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಟ್ರಂಪ್ ಅವರ ಸೈನಿಕ ಕಾರ್ಯಾಚರಣೆಗಳು ಸಲಾಫಿ ಜೆಹಾದಿ ಶಕ್ತಿಗಳ ಸೈನಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಜೊತೆಗೆ ಸಿರಿಯಾದ ಅಂತರ್ಯುದ್ದದಲ್ಲಿ ರಷಿಯಾ ಮತ್ತು ಇರಾನ್‌ಗಳು ಸಿರಿಯಾದ ಅಧ್ಯಕ್ಷ ಅಸಾದ್ ಗೆ ನೀಡುತ್ತಿರುವ ಬೆಂಬಲವನ್ನು ಗಾಢಗೊಳಿಸುತ್ತದೆ. ಪರಿಣಾಮ: ನಾಗರಿಕರ ಮೇಲೆ ಮತ್ತಷ್ಟು ಅತ್ಯಾಚಾರಗಳು. ಮತ್ತಷ್ಟು ನಿರಾಶ್ರಿತರ ಬವಣೆಗಳು.

 

ಕೃಪೆ: Economic and Political Weekly;            April 15, 2017. Vol 52. No. 15

Leave a Reply

Your email address will not be published.