‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ

-ಕುಮಾರಸ್ವಾಮಿ ಬೆಜ್ಜಿಹಳ್ಳಿ

ನಾವು ಒಂದಷ್ಟು ಗೆಳೆಯರು ತರಬೇತಿಗಾಗಿ ದೂರದ ಊರಿಗೆ ಹೊರಟಿದ್ದೆವು. ಎಲ್ಲರೂ ಬಸ್ ನಿಲ್ದಾಣಕ್ಕೆ ಬಂದು ತಡವಾದ ಒಬ್ಬ ಗೆಳೆಯನಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಸಮಯದ ನಂತರ ನಾವು ಕಾಯುತ್ತಿದ್ದ ಗೆಳೆಯ ಒಂದು ಸಣ್ಣ ಬ್ಯಾಗ್ ಹೆಗಲಿಗೆ ಹಾಕಿಕೊಂಡು ಬಂದ. ನಾವು ಹೊರಟಿದ್ದು ಒಂದು ತಿಂಗಳ ತರಬೇತಿಗಾಗಿ. ನಮಗೋ ಅಚ್ಚರಿ. ಒಂದು ತಿಂಗಳಿಗೆ ಇಷ್ಟು ಸಣ್ಣ ಲಗೇಜ್ ಸಾಕೆ ಎಂದು ಕೇಳುವುದರೊಳಗೆ ಒಬ್ಬ ವ್ಯೆಕ್ತಿ ದೊಡ್ಡದೊಂದು ಸೂಟ್‍ಕೇಸ್ ಹೊತ್ತು ತಂದು ನಮ್ಮ ಮುಂದಿರಿಸಿ ಗೆಳೆಯನಿಗೆ ‘ಬರುತ್ತೇನೆ ಸಾರ್’ ಎಂದು ಹೇಳಿ ಹೊರಟು ಹೋದರು. ಗೆಳೆಯನ ಬಗ್ಗೆ ಗೊತ್ತಿದ್ದ ನಮಗೆ ಅದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವನ ಅಪ್ಪ ಪೋಲಿಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಸೂಟ್‍ಕೇಸ್ ಹೊತ್ತು ತಂದ ವ್ಯಕ್ತಿ ಅವರ ಕೈಕೆಳಗೆ ಕೆಲಸ ಮಾಡುವ ಪೇದೆ. ಚಿಕ್ಕ ಹುಡುಗರಿದ್ದಾಗ ಪೋಲಿಸ್ ಜೀಪು ಹಳ್ಳಿಗೆ ಬಂದರೆ ಸಾಕು ಓಟ ಕೀಳುತ್ತಿದ್ದ ನನ್ನಂಥವರಿಗೆ ಅದು ಅಚ್ಚರಿಯಾದರೂ ನಿಜವಾಗಿತ್ತು.

policeಪೋಲಿಸ್ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದ ಪೋಲಿಸರು ಪ್ರತಿಭಟನೆ ನಡೆಸುತ್ತಾರೆ ಎಂದ ಕೂಡಲೇ ನನಗೆ ಆ ಘಟನೆ ನೆನಪಾಯಿತು. ಸಾಮೂಹಿಕ ರಜೆಯ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದ ರಾಜ್ಯ ಪೋಲಿಸರು ಸರ್ಕಾರದ ಎಚ್ಚರಿಕೆಯಿಂದ ಹಿಂದೆ ಸರಿದರು. ದಮನಕಾರಿ ನೀತಿಯೇ ತನ್ನ ಮೂಲಭೂತ ಗುಣವಾಗಿಸಿಕೊಂಡಿರುವ ಪ್ರಭುತ್ವವು ತನ್ನೆಲಾ ಅಸ್ತ್ರಗಳನ್ನು ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕುವ ತಯಾರಿ ನಡೆಸಿಕೊಂಡಿತು. ಇದರಿಂದ ಹೆದರಿದ ಪೋಲಿಸರು ಪ್ರತಿಭಟನೆಯಿಂದ ಹಿಂದೆ ಸರಿದು ತಮ್ಮ ಕುಟುಂಬದ ಸದಸ್ಯರ ಮೂಲಕ ಪ್ರತಿಭಟನೆ ಮಾಡಿಸಲು ಮುಂದಾದರು. ಇದಕ್ಕೂ ಜಗ್ಗದ ಸರ್ಕಾರ ಗೃಹಸಚಿವರ ಮೂಲಕ ‘ಹಾಗೊಂದು ವೇಳೆ ಬೀದಿಗಿಳಿದು ಪ್ರತಿಭಟಿಸಿದರೆ ವಸತಿ ಗೃಹಗಳನ್ನು ಖಾಲಿಮಾಡಿಸಬೇಕಾಗುತ್ತದೆ’ ಎಂದು ಬೆದರಿಸಿತು. ಆದರೆ ವಾಸ್ತವವಾಗಿ ಪೋಲಿಸರು ತಮ್ಮ ಪತ್ನಿ ಮತ್ತು ಕುಟುಂಬದ ಸದಸ್ಯರಿಗೆ ಅಷ್ಟೊಂದು ಧೈರ್ಯ ಮತ್ತು ಸ್ವಾತಂತ್ರ್ಯವನ್ನು ನೀಡಿದ್ದಾರೆಯೇ? ಎಂಬುದು ಬೇರೆ ಮಾತು!.

ಕೊನೆಗೂ ಜೂನ್ ನಾಲ್ಕರಂದು ನಡೆಯಬೇಕಿದ್ದ ಪ್ರತಿಭಟನೆ ನಡೆಯಲಿಲ್ಲ. ಬದಲಾಗಿ ಎಂದಿಗಿಂತ ಮೊದಲೇ ಕರ್ತವ್ಯಕ್ಕೆ ಹಾಜರಾದ ಪೋಲಿಸರು ‘ಶಿಸ್ತ’ನ್ನು ಮೆರೆದರು. ಅದನ್ನು ‘ಶಿಸ್ತು’ ಎಂದು ಕರೆಯುವುದಕ್ಕಿಂತ ಭಯ ಎಂದು ಕರೆಯಬಹುದೇನೋ. ಪೋಲಿಸ್ ಕುಟುಂಬದರೂ ಸಹ ಮನೆಬಿಟ್ಟು ಹೊರಬರಲಿಲ್ಲ. ಪ್ರತಿಭಟನೆ ನಡೆಯಬೇಕಿದ್ದ ಒಂದು ದಿನದ ಮೊದಲೇ ರಾಜ್ಯ ಪೋಲಿಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಸರ್ಕಾರ ರಾತ್ರೋರಾತ್ರಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ತಳ್ಳಿತು.

ಈ ಮೂಲಕ ಪೋಲಿಸರಲ್ಲಿ ಭಯವನ್ನು ಹುಟ್ಟುಹಾಕಿ ಪ್ರತಿಭಟನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಿತು. ‘ಸಿಪಾಯಿ ದಂಗೆ’ಗೆ ಕರೆ ನೀಡಿದ್ದು ಶಶಿಧರ್ ಅವರಿಗೆ ದುಬಾರಿಯಾಯಿತು. ಇದೇ ಕಾರಣವೊಡ್ಡಿ ಸರ್ಕಾರಕ್ಕೆ ಅವರನ್ನು ಬಂಧಿಸಲು ಸುಲಭವಾಯಿತು. ಶಶಿಧರ್ ಬಂಧನವಾದ ಮೇಲೆ ಪತ್ರಕರ್ತರೊಬ್ಬರು ಗೃಹಸಚಿವರನ್ನು ‘ಸಿಪಾಯಿ ದಂಗೆ’ ಕುರಿತು ಪ್ರಶ್ನಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ‘ಶಶಿಧರ್ ಹೇಳಿಕೆಗೆ ನಿಮ್ಮ ಸಹಮತ ಇದೆಯೇ? ಸಿಪಾಯಿ ದಂಗೆಯನ್ನು ಅನುಮೋದಿಸುತ್ತೀರಾ? ನಿಮ್ಮ ಹೇಳಿಕೆಗೆ ಬದ್ಧವಾಗಿದ್ದರೆ ಹೇಳಿ, ಕಂಪನಿ ಬೇಕು ಎಂದು ಶಶಿಧರ್ ಕಾಯುತ್ತಿದ್ದಾರೆ’ ಎಂದರು. ಸರ್ಕಾರ ಈ ಘಟನೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿತ್ತು ಎಂಬುದನ್ನು ಮೇಲಿನ ಈ ಮಾತುಗಳೇ ಧ್ವನಿಸುತ್ತವೆ. ಒಟ್ಟಿನಲ್ಲಿ ಬಹುತೇಕ ಎಲ್ಲಾ ಸಮಸ್ಯೆಗಳು ಹಾಗೇ ಉಳಿದು ನಡೆಯಬೇಕಿದ್ದ ಪ್ರತಿಭಟನೆ ಮಾತ್ರ ನಿಂತಿದೆ. ಆದರೆ ಇನ್ನು ಮುಂದೆ ಪೋಲಿಸರ ಸಮಸ್ಯೆಗಳು ಬಗೆಹರಿಯುತ್ತವೆಯೇ ಮತ್ತು ಆ ಇಲಾಖೆ ಬದಲಾಗುತ್ತದೆಯೇ ಎಂಬ ಅನೇಕ ಪ್ರಶ್ನೆಗಳಿಗೆ ಸಧ್ಯಕ್ಕಂತೂ ಉತ್ತರಗಳಿಲ್ಲ.

ಇವೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟೊಂಡು ಪೋಲಿಸ್ ಇಲಾಖೆಯ ಕಡೆಗೊಮ್ಮೆ ತಿರುಗಿ ನೋಡಿದರೆ, ಅದು ಅಸಮಾನತೆ, ಶೋಷಣೆ ಮತ್ತು ದಮನ-ದಬ್ಬಾಳಿಕೆಗಳಿಂದ ಕೂಡಿರುವ ಇಲಾಖೆ ಎಂಬುದು ತಿಳಿಯುತ್ತದೆ. ಅದು ಬಿಗಿಯದ ಏಣೀಶ್ರೇಣಿಯನ್ನುಳ್ಳ ಇಲಾಖೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಸಾಮಾನ್ಯ ಕಾನಿಸ್ಟೇಬಲ್‍ನಿಂದ ಹಿಡಿದು ಇಲಾಖೆಯ ಸಚಿವರವರೆಗೆ ಈ ಶ್ರೇಣೀಕರಣ ಮನೆಮಾಡಿದೆ. ಕಾನಿಸ್ಟೇಬಲ್‍ಗಳು ಹಿರಿಯ ಅಧಿಕಾರಿಗಳ ಮನೆಗಳಲ್ಲಿ ನಾಯಿಗಿಂತಲೂ ಕಡೆಯಾಗಿ ‘ವೃತ್ತಿ’ ಮಾಡುತ್ತಾರೆ. ‘ಹೆಣ ಕಾಯೋದರಿಂದ ಹಿಡಿದು ಎಲ್ಲಾ ಕೆಲ್ಸಾನೂ ಮಾಡ್ತೇವೆ. ಮೇಲಾಧಿಕಾರಿಗಳು ಮನೆ ಕೆಲ್ಸಾನೂ ನಮ್ಮಿಂದ ಮಾಡಿಸಿಕೊಳ್ತಾರೆ. ಇಷ್ಟೆಲ್ಲಾ ಮಾಡಿದರೂ ನಮ್ಮನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ. ಜೀವನವಿಡೀ ಕತ್ತೆಯಂತೆ ದುಡಿದರೂ ಬದುಕು ಬದಲಾಗಲಿಲ್ಲ’ ಎಂಬ ಬಳ್ಳಾರಿ ಜಿಲ್ಲೆಯ ಪೋಲಿಸ್ ಠಾಣೆಯೊಂದರ ನಿವೃತ್ತಿ ಅಂಚಿನಲ್ಲಿರುವ ಕಾನಿಸ್ಟೇಬಲ್ ಒಬ್ಬರ ಮಾತು. ಇದು ಆ ಇಲಾಖೆಯಲ್ಲಿನ ಶೋಷಣೆಯನ್ನೂ ಮತ್ತು ಅದರ ಕ್ರೂರತೆಯನ್ನು ಧ್ವನಿಸುತ್ತದೆ. ಆದರೆ ಇಂತಹ ಕ್ರೂರತೆಯನ್ನು ‘ಶಿಸ್ತು’ ಎಂಬ ಪರಿಭಾಷೆಯಲ್ಲಿ ಇಲಾಖೆ ಕರೆದುಕೊಳ್ಳುತ್ತದೆ.

ಪುರುಷ ಪೋಲಿಸರ ಕಥೆ ಒಂದು ಬಗೆಯಾದರೆ ಮಹಿಳಾ ಪೋಲಿಸರದು ಬೇರೊಂದು ಕಥೆ. ಅದನ್ನು ಊಹಿಸುವುದೂ ಕಷ್ಟವಾಗುತ್ತದೆ. ಪುರುಷರಂತೆ ಮಹಿಳಾ ಪೋಲಿಸರೂ ಸಮಾನ ಕೆಲಸ ಮಾಡುತ್ತಾರೆ. ಪ್ರತ್ಯೇಕ ಶೌಚಾಲಯದಂತ ಕನಿಷ್ಟ ಸೌಲಭ್ಯವೂ ಅವರಿಗೆ ಇರುವುದಿಲ್ಲ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ಮಹಿಳಾ ಪೋಲಿಸರಿಗೆ ಪ್ರತ್ಯೀಕವಾದ ಕೆಲವು ಕನಿಷ್ಟ ಸೌಲಭ್ಯಗಳು ಬೇಕಾಗುತ್ತವೆ. ಪ್ರತ್ಯೇಕವಾದ ಶೌಚಾಲಯ ಮತ್ತು ಇತರೆ ಕನಿಷ್ಟ ಸೌಲಭ್ಯಗಳು ಇರಬೇಕು ಎಂಬ ನಿಯಮವೇನೋ ಇದೆ. ಆದರೆ ಅದನ್ನು ಎಷ್ಟು ಪೋಲಿಸ್ ಠಾಣೆಗಳು ಪಾಲನೆ ಮಾಡುತ್ತಿವೆ?. ಇದಲ್ಲದೆ ಕೆಲಸದ ವೇಳೆಯಲ್ಲಿ ಮಹಿಳಾ ಸಿಬ್ಬಂದಿ ಮೇಲಾಗುವ ಅನೇಕ ಬಗೆಯ ಕಿರುಕುಳಗನ್ನು ಸಹಿಸದೆ ಪ್ರಶ್ನೆ ಮಾಡುವವರು ಯಾರು ಮತ್ತು ಯಾರಲ್ಲಿ?

ಸಮಸ್ಯೆ ಆಲಿಸಬೇಕಾದ ಮೇಲಾಧಿಕಾರಿಗಳೇ ಕಿರುಕುಳ ನೀಡಿದಾಗ ಅಸಹಾಯಕ ಕೆಳಹಂತದ ಮಹಿಳಾ ಸಿಬ್ಬಂದಿ ಯಾರ ಮೊರೆ ಹೋಗಲು ಸಾಧ್ಯ? ಹಾಗೂ ಒಂದು ವೇಳೆ ಮುಂದುವರೆದರೆ ಅವರಿಗೆ ಇಲಾಖೆಯಲ್ಲಿ ಉಳಿಗಾಲವಿದೆಯೇ? ‘ನೈಟ್ ರೌಂಡ್ ಮಾಡುವಾಗ ಬೈಕ್ ಹತ್ತಿಕೊಂಡು ಹೋಗಬೇಕು. ಬೈಕ್ ಓಡಿಸುವ ಪುರುಷ ಸಿಬ್ಬಂದಿ ಮದ್ಯಪಾನ ಮಾಡಿರುತ್ತಾರೆ. ಇಡೀ ರಾತ್ರಿ ಅವರೊಂದಿಗೆ ನೈಟ್ ರೌಂಡ್ ಮಾಡಬೇಕು’ ಎಂದು ಮೈಸೂರಿನ ಸ್ವಯಂ ನಿವೃತ್ತಿ ಪಡೆದಿರುವ ಮಹಿಳಾ ಪೋಲಿಸ್ ಅಧಿಕಾರಯೊಬ್ಬರು ತಿಳಿಸುತ್ತಾರೆ. ಈ ಎಲ್ಲಾ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಾ ಅದಕ್ಕೆ ಹೊಂದಿಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದಾರೆ, ಮಹಿಳಾ ಪೋಲಿಸರು. ಮೊದಲೇ ‘ಶಿಸ್ತಿ’ನ ಇಲಾಖೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತುತ್ತಿನ ಚೀಲದ ಚಿಂತೆ. ಅವರನ್ನೇ ನಂಬಿರುವ ಅವರ ಕುಟುಂಬದ ಚಿಂತೆ. ಹೀಗೆ ಮಹಿಳಾ ಪೋಲಿಸರು ಶೋಷಿತರಲ್ಲಿಯೇ ಶೋಷಿತರಾಗಿ ಉಸಿರು ಕಟ್ಟಿಸುಂತಹ ವಾತಾವರಣದಲ್ಲಿ ‘ಶಿಸ್ತಿ’£ ಕೆಲಸ ಮಾಡುತ್ತಿದ್ದಾರೆ.

karnataka-policeಪೋಲಿಸ್ ಇಲಾಖೆ ಮತ್ತು ಜನಸಾಮಾನ್ಯರ ನಡುವಿನ ಸಂಬಂಧ ಮತ್ತೊಂದು ಬಗೆಯದು. ಸಾಮಾನ್ಯವಾಗಿ ಜನತೆಯಲ್ಲಿ ತಮ್ಮನ್ನು ರಕ್ಷಿಸುವ ‘ಆರಕ್ಷಕ’ರಲ್ಲಿ ಪ್ರೀತಿ ಇರಬೇಕು. ಆದರೆ ಬಹುತೇಕ ಪೋಲಿಸರನ್ನು ಕಂಡರೆ ಭಯಪಡುವಂತಹ ಸ್ಥಿತಿ ಸಾರ್ವಜನಿಕ ವಲಯದಲ್ಲಿದೆ. ಇದೂ ಕೂಡ ಗುಟ್ಟಿನ ವಿಷಯವೇನಲ್ಲ. ಸರಿ, ಪೋಲಿಸರು ಪ್ರತಿಭಟನೆಗೆ ಕರೆ ಕೊಟ್ಟಾಗ ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿಕೊಂಡರೆ, ಅದೇನೂ ಪೋಲಿಸ್ ಇಲಾಖೆ ಸಮಾಧಾನ ಪಡುವಂತಹ ಪ್ರತಿಕ್ರಿಯೆ ಆಗಿರಲಿಲ್ಲ. ಕೆಲವು ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಬೆಂಬಲ ಸಾರ್ವಜನಿಕರಿಂದ ವ್ಯಕ್ತವಾಗಲಿಲ್ಲ. ಪೋಲಿಸರ ಪರವಾಗಿ ಪ್ರತಿಭಟನೆ ಮಾಡಿದ ಕೆಲವು ಸಂಘ-ಸಂಸ್ಥೆಗಳ ಮುಖಂಡರುಗಳನ್ನು ಪೋಲಿಸರೇ ಬಂಧಿಸಿದ್ದು ಒಂದು ವಿಪರ್ಯಾಸದಂತೆ ಕಂಡಿತು. ಆದರೂ ಪೋಲಿಸರಿಗೆ ಅದು ಕರ್ತವ್ಯ.

ಇರಲಿ, ಹೀಗೆ ಸಾರ್ವಜನಿಕರು ಮತ್ತು ತಮ್ಮ ನಡುವಿನ ಈ ಅಂತರವನ್ನು ಕುರಿತು ಪೋಲಿಸ್ ಇಲಾಖೆ ಆತ್ಮಾವಲೋಕನ ಮಾಡಿಕೊಳ್ಳುಬೇಕಿದೆ. ಆದರೆ ಹಾಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಾಧ್ಯತೆ ಪೋಲಿಸ್ ಇಲಾಖೆಯಲ್ಲಿ ತೀರಾ ಕಡಿಮೆ ಎನಿಸುತ್ತದೆ. ಕಾರಣ, ಆ ಇಲಾಖೆಯಲ್ಲಿ ಇರುವ ಭಯಂಕರವಾದ ಶ್ರೇಣೀಕರಣ ವ್ಯವಸೆ. ಪೋಲಿಸರು ಇಷ್ಟೊಂದು ಅಸಮಾನ ಸ್ಥಿತಿಯಲ್ಲಿ ಬದುಕುತ್ತಾ ಸಾರ್ವಜನಿಕರೊಂದಿಗೆ ಹೇಗೆ ತಾನೆ ಮನುಷ್ಯತ್ವದಿಂದ ವರ್ತಿಸಲು ಸಾಧ್ಯ. ಆದ್ಧರಿಂದ ಬದಲಾಗಬೇಕಿರುವುದು ಇಡೀ ಇಲಾಖೆಯ ಮನಸ್ಥಿತಿ. ತಮ್ಮ ಜೊತೆ ಕೆಲಸ ಮಾಡುವ ತಮ್ಮ ‘ಕೈ ಕೆಳಗಿನ’ ಸಿಬ್ಬಂದಿಯನ್ನು ಕನಿಷ್ಟ ಮನುಷ್ಯರಂತೆ ಕಾಣುವ ಮನೋಭಾವನೆಯನ್ನು ಪೋಲಿಸ್ ಇಲಾಖೆ ರೂಢಿಸಿಕೊಳ್ಳಬೇಕಿದೆ.

ಸಾಮಾನ್ಯ ಜನತೆ ಪ್ರತಿಭಟನೆ ಮಾಡಲು ಬೀದಿಗಿಳಿದಾಗ ಮೇಲಾಧಕಾರಿಗಳ ‘ಆದೇಶ’ ನೆಪಮಾಡಿಕೊಂಡು ಪ್ರತಿಭಟನಾಕಾರರನ್ನು ಗುಂಡಾಗಳಂತೆ ಬಡಿಯುವ ಪೋಲಿಸರು ನೆನಪಿಸಿಕೊಳ್ಳಬೇಕು, ನಾವೂ ಕೂಡ ಈ ರೀತಿಯ ರೈತರ, ಬಡವರ ಮಕ್ಕಳಲ್ಲವೇ ಎಂದು. ತೀರಾ ಇತ್ತೀಚೆಗೆ ಗಾರ್ಮೆಂಟ್ಸ್ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳನ್ನು ಪುರುಷ ಪೋಲೀಸರು ನಿರ್ದಯವಾಗಿ ರಕ್ತ ಸುರಿಯುವಂತೆ ಬಡಿದರಲ್ಲಾ, ಯಾಕೆ ಆ ಅಕ್ಕ, ತಂಗಿ ಮತ್ತು ತಾಯಂದಿರು ತಮ್ಮ ಅಕ್ಕ, ತಂಗಿ ಮತ್ತು ತಾಯಂದಿರಂತೆ ಶಿಸ್ತಿಗೆ ಹೆಸರಾದ ಪೋಲಿಸರಿಗೆ ಕಾಣಲಿಲ್ಲ್ಲ?

ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರುವವರು ಅದರಲ್ಲೂ ಕೆಳಹಂತದ ಪೇದೆಗಳಂತಹ ಕೆಳ ಹಂತದ ಕೆಲಸಕ್ಕೆ ಸೇರುವುದು ಸಾಮಾನ್ಯವಾಗಿ ಹಳ್ಳಿಗಾಡಿನ ಕೂಲಿಕಾರ್ಮಿಕರ, ರೈತರ ಮತ್ತು ಬಡವರ ಮಕ್ಕಳು. ಅವರೇ ಸಾಮಾನ್ಯ ಜನತೆಯನ್ನು ಹೀಗೆ ಕಾಡಿದರೆ, ಅವರನ್ನು ಕಾಪಾಡುವವರು ಯಾರು. ಇದನ್ನು ಪ್ರತಿಯೊಬ್ಬ ಪೋಲಿಸ್ ಅಧಿಕಾರಿಗಳು ಆತ್ಮಾವಲೋಕನದ ಮೂಲಕ ಅರ್ಥ ಮಾಡಿಕೊಳ್ಳಬೇಕಿದೆ. ಆ ಮೂಲಕ ಸಾರ್ವಜನಿಕರಲ್ಲಿ ಪೋಲಿಸರೆಂದರೆ ನಮ್ಮವರು, ನಮ್ಮನ್ನು ಕಾಯುವ ರಕ್ಷಕರು ಎಂಬ ಭಾವನೆಯನ್ನು ಮೂಡಿಸಬೇಕಿದೆ. ಹೀಗಾದಾಗ ಮಾತ್ರ ಸಾರ್ವಜನಿಕ ವಲಯದಿಂದಲೂ ಪೋಲಿಸರಿಗೆ, ಅವರ ಕಷ್ಟಗಳಿಗೆ ಬೆಂಬಲ ವ್ಯಕ್ತವಾಗಲು ಸಾಧ್ಯ.

ಅಂತೂ ಮಲಗಿಂದತಿರುವ ನಮ್ಮ ಸರ್ಕಾರವನ್ನು ಈ ಘಟನೆ ಒಂದಷ್ಟು ಎಚ್ಚರಿಸಿರುವುದಂತೂ ಸುಳ್ಳಲ್ಲ. ಈ ಎಚ್ಚರವನ್ನು ಸರ್ಕಾರ ಕಾಯ್ದುಕೊಳ್ಳಬೇಕಿದೆ. ಪೋಲಿಸರ ಸುಮಾರು ಮೂವತ್ತೆರಡು ಬೇಡಿಕೆಗಳನ್ನು ಆಧ್ಯತೆಯ ಮೇಲೆ ಈಡೇರಿಸಬೇಕಿದೆ. ಆ ಮೂಲಕ ಸಾರ್ವಜನಿಕರು ಮತ್ತು ಪೋಲಿಸರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಯಾಕೆಂದರೆ ಪೋಲಿಸಿನವರೂ ಮನುಷ್ಯರೇ ತಾನೆ? ಇದನ್ನು ಬಿಟ್ಟು ಈ ಘಟನೆಯನ್ನೇ ಮುಂದು ಮಾಡಿಕೊಂಡು ಸರ್ಕಾರವು ಪೋಲಿಸರ ಮೇಲೆ ಮತ್ತಷ್ಟು ದಮನಕಾರಿಯಾಗಿ ನಡೆದುಕೊಳ್ಳಬಾರದು.

One Response to "‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ"

  1. Pagundappa  June 14, 2016 at 10:10 am

    ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಈ ಲೇಖನವನ್ನು ಹಲವು ಆಯಾಮಗಳಲ್ಲಿ ಚರ್ಚೆಗೆ ಒಳಪಡಿಸಿದ್ದಾರೆ. ಏಕಕಾಲಕ್ಕೆ ಸರ್ಕಾರದ ದಮನೀತಿಯನ್ನು, ಪೋಲೀಸರ ಅಸಹಾಯಕ ಪರಿಸ್ಥಿತಿಯನ್ನು ಮತ್ತು ಸಾರ್ವಜನಿಕರೊಂದಿಗಿನ ಅವರ ಅಮಾನವೀಯತೆಯನ್ನೂ ಬಯಲು ಮಾಡಿದ್ದಾರೆ.
    ತುಂಬಾ ಒಳ್ಳೆಯ ಲೇಖನ ಮುಂದೆಯೂ ಇಂಥ ಲೇಖನಗಳು ನಿಮ್ಮಿಂದ ಬರಲಿ.

    Reply

Leave a Reply

Your email address will not be published.