ಸಿನಿಮಾ ಓದು-21: ದಲಿತರ ನೆತ್ತರಗಾಥೆ ‘ಕಮ್ಮಟ್ಟಿಪಾಡಮ್’

-ಸುಭಾಷ್ ರಾಜಮಾನೆ

ಕೇರಳದ ಕೋಚಿಯವರಾದ ರಾಜೀವ ರವಿ(1973) ಪುಣೆಯಲ್ಲಿರುವ ‘ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’(ಎಫ್‍ಟಿಐಐ)ಯಿಂದ 1997ರಲ್ಲಿ ಪದವಿ ಪಡೆದವರು. ರಾಜೀವ ಮುಂಬೈಗೆ ಹೋಗಿ ಮಧುರ ಭಂಡಾರಕರ್ ಅವರ ‘ಚಾಂದನಿ ಬಾರ್’(2001) ಚಿತ್ರಕ್ಕೆ ಸ್ವತಂತ್ರ ಸಿನಿಮಾಟೋಗ್ರಾಫರ್‍ನಾಗಿ ಸಿನಿಮಾ ಬದುಕನ್ನು ಆರಂಭಿಸಿದರು. ಅನುರಾಗ ಕಶ್ಯಪ್ ಅವರ ‘ದೇವ್ ಡಿ’, ‘ಗ್ಯಾಂಗ್ಸ್ ಆಫ್ ವಸ್ಸೇಪುರ’(ಭಾಗ ಒಂದು ಮತ್ತು ಎರಡು) ಹಾಗೂ ‘ಬಾಂಬೆ ವೆಲ್ವೆಟ್’ ಚಿತ್ರಗಳಿಗೆ ರಾಜೀವ ಅವರೇ ಸಿನಿಮಾಟೋಗ್ರಾಫರ್‍ನಾಗಿ ಕೆಲಸ ನಿರ್ವಹಿಸಿದವರು. ರಾಜೀವ ತನ್ನ ಹೆಂಡತಿಯಾದ ಗೀತು ಮೋಹನದಾಸ್ ನಿರ್ದೇಶನದ ‘ಲೈಯರ್ಸ್ ಡೈಸ್’ ಚಿತ್ರದ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪುರಸ್ಕಾರವನ್ನು ಸಹ ಪಡೆದಿದ್ದಾರೆ. ಹಿಂದಿಯಲ್ಲಿ ಅನೇಕ ಚಿತ್ರಗಳು ಯಶಸ್ವಿಯಾಗಲು ರಾಜೀವ ಅವರ ಕ್ಯಾಮೆರಾ ಕಣ್ಣು ಕಾರಣವಾಗಿದೆ. ಆದ್ದರಿಂದ ಭಾರತೀಯ ಛಾಯಾಗ್ರಾಹಕರಲ್ಲಿ ರಾಜೀವ ಅವರು ಅತ್ಯಂತ ಪ್ರತಿಭಾವಂತ ಹಾಗೂ ಬೇಡಿಕೆಯ ಸಿನಿಮಾಟೋಗ್ರಾಫರ್‍ರಾಗಿದ್ದಾರೆ.

kammattipadamಮಲಯಾಳಮ್‍ನಲ್ಲಿ 2013ರಲ್ಲಿ ತೆರೆಕಂಡ ‘ಅನ್ನಯುಮ್ ರಸೂಲುಮ್’ ಚಿತ್ರದ ಮೂಲಕ ರಾಜೀವ ಸ್ವತಂತ್ರ ನಿರ್ದೇಶಕರಾದರು. ಕ್ರಿಶ್ಚಿಯನ್ ಹುಡುಗಿಯ ಪ್ರೇಮದಲ್ಲಿ ಬೀಳುವ ಮುಸ್ಲಿಂ ಹುಡುಗ ಹಾಗೂ ಅಂತರಧರ್ಮಿಯ ವಿವಾಹದ ಕತೆಯುಳ್ಳ ಈ ಚಿತ್ರ ಸಾಕಷ್ಟು ಪ್ರಶಂಸೆಯನ್ನು ಪಡೆಯಿತು. 2014ರಲ್ಲಿ ‘ಎನ್‍ಜಾನ್ ಸ್ಟೀವ್ ಲೊಪೇಜ್’ ಎನ್ನುವ ಚಿತ್ರವನ್ನೂ ನಿರ್ದೇಶಿಸಿದರು. ಈಗ ರಾಜೀವ ಚರ್ಚೆಯಲ್ಲಿರುವುದು 2016ರ ಮೇನಲ್ಲಿ ಬಿಡುಗಡೆಯಾದ ‘ಕಮ್ಮಟ್ಟಿಪಾಡಮ್’ ಎನ್ನುವ ಮಲಯಾಳಮ್ ಚಿತ್ರದ ನಿರ್ದೇಶನಕ್ಕಾಗಿ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಎರ್ನಾಕುಲಮ್‍ನ ಸ್ಥಳೀಯ ದಲಿತರು ಹೇಗೆ ತಮ್ಮ ಭೂಮಿಗಳನ್ನು ಕಳೆದುಕೊಂಡು ಅನಾಥರಾದರು ಎನ್ನುವುದನ್ನು ‘ಕಮ್ಮಟ್ಟಿಪಾಡಮ್’ ಚಿತ್ರವು ಅತ್ಯಂತ ವಾಸ್ತವದ ನೆಲೆಗಟ್ಟಿನಲ್ಲಿ ನಿರೂಪಿಸಿದೆ. ‘ಅಭಿವೃದ್ಧಿ’ಯ ಹೆಸರಿನಲ್ಲಿ ನಡೆಯುವ ಅನ್ಯಾಯ, ಹಿಂಸೆ, ಅಪರಾಧಗಳನ್ನು ತಳ ಸಮುದಾಯದ ಪಾತ್ರಗಳ ಕಣ್ಣೋಟದಲ್ಲಿ ನೋಡಿದೆ. ಇದೊಂದು ಮಾಮೂಲಿಯಾದ ಕ್ರೈಮ್ ಥ್ರಿಲ್ಲರ್ ಎನ್ನಿಸದೆ ಅಧೋಗತಿಗೆ ದೂಡಲ್ಪಟ್ಟ ಸಮುದಾಯದ ಕತೆಯಾಗಿದೆ. ಮೇಲ್ಜಾತಿಗಳಿಂದ ನಡೆಯುವ ಅನ್ಯಾಯಕ್ಕೆ ಹಿರಿಯ ತಲೆಮಾರು ಮತ್ತು ಯುವ ತಲೆಮಾರುಗಳು ಪ್ರತಿಕ್ರಿಯಿಸುವ ಹಾಗೂ ಸಂಘರ್ಷಿಸುವ ವಿಧಾನಗಳು ಕೂಡ ಬದಲಾಗಿರುವುದನ್ನು ನೋಡುತ್ತೇವೆ.

ಕೇರಳದಲ್ಲಿ ಇಎಂಎಸ್ ನಂಬೂದಿರಿಪಾದ್ ನೇತೃತ್ವದಲ್ಲಿ 1957ರಲ್ಲಿ ಮೊಟ್ಟ ಮೊದಲ ಬಾರಿಗೆ ಕಮ್ಯುನಿಸ್ಟ್ ಸರಕಾರ ಆಡಳಿತಕ್ಕೆ ಬಂದು ದಲಿತರ ಬದುಕಿನಲ್ಲಿ ಹೊಸ ಗಾಳಿಯನ್ನು ಬೀಸಿತು. ಅಲ್ಲಿಯವರೆಗೆ ಮೇಲ್ವರ್ಗದ ಜಮೀನ್ದಾರರ ಏಕಸ್ವಾಮ್ಯದಲ್ಲಿದ್ದ ಭೂಮಿಯು ‘ಭೂಸುಧಾರಣೆ ಕಾನೂನು’ ಅಡಿಯಲ್ಲಿ ಒಂದಿಷ್ಟು ದಲಿತ ಸಮುದಾಯಗಳಿಗೆ ದಕ್ಕಿತು. ಇದರಿಂದ ದಲಿತರು ಸಣ್ಣ ಹಿಡುವಳಿ ಕೃಷಿಯಿಂದ ಸ್ವತಂತ್ರ ಮತ್ತು ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ 1991ರಲ್ಲಿ ಜಾರಿಯಾದ ‘ಹೊಸ ಆರ್ಥಿಕ ನೀತಿ’(ಎನ್‍ಇಪಿ)ಯ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ತತ್ವಗಳು ‘ಅಭಿವೃದ್ಧಿ’ ಎನ್ನುವ ಪರಿಕಲ್ಪನೆಯನ್ನೇ ಅದಲು ಬದಲು ಮಾಡಿದವು. ಹೊಸ ನೀತಿ ಸಣ್ಣಪುಟ್ಟ ಹಿಡುವಳಿದಾರರಿಗೆ, ಬಡವರಿಗೆ, ಮದ್ಯಮ ವರ್ಗದವರಿಗೆ, ಬಲವಾದ ಪೆಟ್ಟನ್ನು ನೀಡಿತು. ಆಗಿನ ಕೇರಳ ಸರಕಾರವು ‘ಗ್ರೇಟರ್ ಕೋಚಿ ಡೆವಲಪ್‍ಮೆಂಟ್ ಅಥಾರಿಟಿ’ಯನ್ನು ಸ್ಥಾಪಿಸಿತು. ಇದು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವು ಕ್ಷಿಪ್ರವಾಗಿ ಬೆಳೆಯಲು ದಾರಿ ಮಾಡಿಕೊಟ್ಟಿತು. ಕೋಚಿಯ ಸುತ್ತಮುತ್ತಲಿನ ಭತ್ತದ ಗದ್ದೆಗಳೆಲ್ಲ ಹೌಸಿಂಗ್ ಬೋರ್ಡುಗಳಾಗಿ, ವೈಭವದ ವಿಲ್ಲಾಗಳಾಗಿ ಮತ್ತು ಗಗನಚುಂಬಿ ಅಪಾರ್ಟಮೆಂಟ್‍ಗಳಾಗಿ ಪರಿವರ್ತಿತವಾದವು. ಹೀಗೆ ಕಾಡುಮೇಡು, ಹಳ್ಳಕೊಳ್ಳ, ಹಸಿರು ಗದ್ದೆಗಳಿಂದ ಆವೃತ್ತವಾಗಿದ್ದ ಕೋಚಿ(ಎರ್ನಾಕುಲಮ್)ಯು ಕಾಂಕ್ರೀಟ್ ಕಾಡಾಗಿ, ಮೆಟ್ರೋ ನಗರವಾಗಿ ಬದಲಾಯಿತು. ಅಲ್ಲೇ ಅಂಚಿನಲ್ಲಿ ಬದುಕನ್ನು ಸವೆಸುತ್ತಿದ್ದ ದಲಿತ ಸಮುದಾಯಗಳ ಭೂಮಿಯನ್ನು ಕಬಳಿಸಿಕೊಂಡು ಬೆಳೆದ ಎರ್ನಾಕುಲಮ್ ನಗರವು ಈಗ ಬರಿ ಉಳ್ಳವರ, ಬಂಡವಾಳಶಾಹಿಗಳ, ರಿಯಲ್ ಎಸ್ಟೇಟ್ ಕುಳಗಳ ನಗರವಾಗಿದೆ. ದಲಿತರ ನೆತ್ತರನ್ನು ಹೀರಿಕೊಂಡು ಬೆಳೆದ ಎರ್ನಾಕುಲಮ್ ನಗರದ ಹಿಂದಿನ ‘ಕಮಟ್ಟಿಪಾಡಮ್’ನ ದುರಂತದ ಕತೆಯನ್ನು ರಾಜೀವ ನಿರೂಪಿಸಿದ್ದಾರೆ. ಹಲವು ಸ್ಥಿತ್ಯಂತರಗಳನ್ನು ಕಟುವಾಸ್ತವದ ನೆಲೆಯಲ್ಲಿ ನಿರೂಪಿಸುವ ಚಿತ್ರವು ಈ ಕಾಲದ ದಮನಿತ ಸಮುದಾಯಗಳ ಅನೇಕ ಜ್ವಲಂತ ಸಮಸ್ಯೆಗಳನ್ನು ಮುಖಾಮುಖಿ ಮಾಡಿದೆ.

‘ಕಮ್ಮಟ್ಟಿಪಾಡಮ್’ ಚಿತ್ರವು ಕೇರಳದ ಒಂದು ನಿರ್ದಿಷ್ಟ ದಮನಿತ ಸಮುದಾಯದ ಕತೆಯನ್ನು ತೆರೆದಿಟ್ಟಿದೆ. ಕೇರಳದಲ್ಲಿ ಪುಲಯದಿ(ಪುಲಯರ್ ಮತ್ತು ಪುಲಯ ಎಂದೂ ಕರೆಯುತ್ತಾರೆ) ಸಮುದಾಯವು ಹಾಡು, ಕುಣಿತ, ಕರಕುಶಲ ಕಲೆಗಳಿಗೆ ಹೆಸರಾದ ಹಿಂದೂ ಅಸ್ಪøಶ್ಯ ಸಮುದಾಯವಾಗಿದೆ. 2001ರ ಜನಗಣತಿಯ ಪ್ರಕಾರ ಕೇರಳದಲ್ಲಿ ಇವರ ಜನಸಂಖ್ಯೆ ಅಂದಾಜು ಹತ್ತು ಲಕ್ಷ. ಒಂದು ಕಾಲದಲ್ಲಿ ತಮ್ಮದೇಯಾದ ಕೃಷಿ ಭೂಮಿಯನ್ನು ಹೊಂದಿದ್ದ ಪುಲಯದಿಗಳು ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗಿ ತಮ್ಮ ಅಲ್ಪ ಆದಾಯ ಮೂಲವಾಗಿದ್ದ ಭೂಮಿಗಳನ್ನು ಕಳೆದುಕೊಂಡಿದ್ದಾರೆ. ಎರ್ನಾಕುಲಮ್‍ನ ಅಂಚಿನಲ್ಲಿದ್ದ ಇವರ ಜಮೀನುಗಳ ಸಮಾಧಿಯ ಮೇಲೆಯೇ ಈ ನಗರ ಭೂತಾಕಾರವಾಗಿ ಬೆಳೆದು ನಿಂತಿದೆ. ಮೇಲ್ಜಾತಿಗೆ ಸೇರಿದ ರಿಯಲ್ ಎಸ್ಟೇಟ್ ಒಡೆಯರು ಪುಲಯದಿಗಳು ತಮ್ಮ ಭೂಮಿಗಳನ್ನು ಮಾರುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ. ಕಪ್ಪು ವರ್ಣದ ಕಟ್ಟುಮಸ್ತಾದ ಯುವ ಪೀಳಿಗೆಯನ್ನು ಪುಡಿಗಾಸಿಗಾಗಿ ಹಿಂಸೆ ಮತ್ತು ಅಪರಾಧದ ಜಗತ್ತಿಗೆ ಕಾಲಿಡುವಂತೆ ಮಾಡುತ್ತಾರೆ. ಭೂ ಮಾಫಿಯಾ ಬೆಳವಣಿಗೆಗೆ ಅಗತ್ಯವಿದ್ದಾಗ ಇವರನ್ನು ಬಳಸಿಕೊಳ್ಳಲಾಗುತ್ತದೆ. ಅವರೇನಾದರು ತಿರುಗಿಬಿದ್ದರೆ ಅವರನ್ನೇ ಮುಗಿಸುವ ರಣತಂತ್ರವನ್ನು ರೂಪಿಸಲಾಗುತ್ತದೆ. ಕಾನೂನಿನ ದೃಷ್ಟಿಯಲ್ಲಿ ಈ ಯುವ ಪೀಳಿಗೆ ಅಪರಾಧಿಗಳಾಗಿ ಕಾಣುತ್ತಾರೆ; ಆದರೆ ನಿಜವಾದ ಅಪರಾಧಿಗಳು ಹಾಗೂ ಸಮಾಜ ಘಾತುಕರು ತೆರೆಯ ಮರೆಯಲ್ಲೇ ಇರುವುದನ್ನು ‘ಕಮ್ಮಟ್ಟಿಪಾಡಮ್’ನಲ್ಲಿ ನೋಡುತ್ತೇವೆ.

‘ಕಮ್ಮಟ್ಟಿಪಾಡಮ್’ ಚಿತ್ರದ ಬಹುಪಾಲು ಕಥಾನಕ ಮದ್ಯಮ ವರ್ಗದ ಎಜ್ವಾ ಸಮುದಾಯದ ಕೃಷ್ಣನ್(ದುಲ್‍ಖ್ವೇರ್ ಸಲ್ಮಾನ್) ಎನ್ನುವ ಯುವಕನ ದೃಷ್ಟಿಕೋನದಲ್ಲಿ ನಿರೂಪಿತವಾಗಿದೆ. ಮುಂಬೈಯಲ್ಲಿ ಸೆಕ್ಯುರಿಟಿ ಗಾರ್ಡನಾಗಿ ಕೆಲಸ ಮಾಡುತ್ತಿರುವ ಕೃಷ್ಣನ್‍ಗೆ ಒಂದು ದಿನ ತನ್ನ ಬಾಲ್ಯದ ಗೆಳೆಯನಾದ ಗಂಗಾ(ವಿನಯಗನ್)ನಿಂದ ಫೋನ್ ಕರೆ ಬರುತ್ತದೆ. ಗಂಗಾ ಮಾತನಾಡುತ್ತಿರುವಾಗಲೇ ಆತನ ಹತ್ಯೆಯಾಗುತ್ತದೆ. ಗಂಗಾನ ಹತ್ಯೆಯನ್ನು ಮಾಡಿದವರು ಯಾರು ಮತ್ತು ಅದರ ಕಾರಣವನ್ನು ಪತ್ತೆಹಚ್ಚಲು ಅಣಿಯಾಗುವ ಕೃಷ್ಣನ್ ಮೂಲಕವೇ ಸಿನಿಮಾ ತೆರೆದುಕೊಳ್ಳುತ್ತ ಹೋಗುತ್ತದೆ. ಆತ ತನ್ನ ಬಾಲ್ಯದ ದಿನಗಳನ್ನು ಗಂಗಾ ಮತ್ತು ಆತನ ಸಹೋದರನಾದ ಬಾಲನ್(ಮನಿಕಂದನ್) ಅವರೊಂದಿಗೆ ಸ್ಲಮ್‍ಗಳಲ್ಲೇ ಕಳೆದಿರುತ್ತಾನೆ. ಅವರೊಂದಿಗೆ ಬೆಳೆದು ದೊಡ್ಡವನಾಗುವ ಕೃಷ್ಣನ್ ತನ್ನ ಗೆಳೆಯನಾದ ಗಂಗಾ ಆಪತ್ತಿನಲ್ಲಿ ಸಿಲುಕಿದ್ದಾಗ ಅವನನ್ನು ರಕ್ಷಿಸುವ ಸಲುವಾಗಿ ಪೊಲೀಸನನ್ನೇ ಕತ್ತಿಯಿಂದ ಇರಿದು ಪರಾರಿಯಾಗಿರುತ್ತಾನೆ. ಆಗ ಇವರೊಂದಿಗೆ ಇದ್ದಾಗ ಗಂಗಾನ ಸಂಬಂಧಿಯಾದ ಕಪ್ಪು ಸುಂದರಿಯಾದ ಅನಿತಾ(ಶೌನ್ ರೋಮಿ)ಳನ್ನು ಪ್ರೀತಿಸುತ್ತಿರುತ್ತಾನೆ. ಮೊದ ಮೊದಲು ಕೃಷ್ಣನ್‍ನೇ ಸಿನಿಮಾದ ಕಥಾನಾಯಕ ಎಂದು ಭಾಸವಾಗುತ್ತದೆ. ಕಥಾನಕ ಮುಂದುವರೆದಂತೆ ಚಿತ್ರದಲ್ಲಿ ಗಂಗಾನೇ ನಿಜವಾದ ಕಥಾನಾಯಕ ಎಂಬುದು ಅರಿವಾಗುತ್ತದೆ. ಚಿತ್ರದ ಕೊನೆಕೊನೆಗೆ ಬಂದಂತೆ ಇದು ಒಂದು ಸಮುದಾಯದ ಸಂಕಟದ, ನೋವಿನ, ವಿಷಾದದ ಕಥನ ಎಂದು ಅನ್ನಿಸುತ್ತದೆ.

‘ಕಮ್ಮಟ್ಟಿಪಾಡಮ್’ ಮೊದಲ ಬಾರಿಗೆ ಮಲಯಾಳಮ್ ಸಿನಿಮಾ ಚರಿತ್ರೆಯಲ್ಲೇ ಪೂರ್ಣ ಪ್ರಮಾಣದಲ್ಲಿ ಕಪ್ಪು ಪಾತ್ರಗಳನ್ನು ಪರಿಚಯಿಸಿದೆ. ಈ ಮೊದಲು ಮಲಯಾಳಂ ಚಿತ್ರಗಳಲ್ಲಿ ಕಪ್ಪು ಪಾತ್ರಗಳು ಅಲ್ಲೊಂದು ಇಲ್ಲೊಂದು ಬಂದು ಹೋಗುತ್ತಿದ್ದವು. ಕಪ್ಪು ವರ್ಣದ ಪಾತ್ರಗಳನ್ನು ಅಸ್ಪøಶ್ಯರಂತೆ ನೋಡಿರುವ ಮಲಯಾಳಂ ಚಿತ್ರರಂಗದಲ್ಲಿ ರಾಜೀವ ಹೊಸ ಬದಲಾವಣೆಗೆ ಕಾರಣರಾಗಿದ್ದಾರೆ. ಗಂಗಾ ಪಾತ್ರವನ್ನು ಮಾಡಿರುವ ವಿನಯಗನ್ ಮತ್ತು ಬಾಲನ್ ಪಾತ್ರವನ್ನು ಮಾಡಿರುವ ಮನಿಕಂದನ್ ತಮ್ಮ ಕಪ್ಪು ದೇಹಗಳನ್ನು ಸಿನಿಮಾದ ಕಥಾನಕಕ್ಕೆ ಪಳಗಿಸಿರುವ ರೀತಿಯನ್ನು ಕಂಡರೆ ಅಚ್ಚರಿಯಾಗುತ್ತದೆ. ಯಾಕೆಂದರೆ ತಮ್ಮ ಬಾಡಿ ಲ್ಯಾಂಗ್ವೇಜ್‍ನ್ನು ಪಾತ್ರಕ್ಕೆ ಸಮರ್ಥವಾಗಿ ಒಗ್ಗಿಸಿಕೊಂಡಿದ್ದಾರೆ. ಇಬ್ಬರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಆದರೆ ಸಿನಿಮಾದಂತಹ ಜಾತ್ಯತೀತ ಕಲಾಮಾಧ್ಯಮವು ಕಪ್ಪು ವರ್ಣದವರನ್ನು ಯಾಕೆ ಹೊರಗಿಟ್ಟಿದೆ? ಇದರ ಬಗ್ಗೆ ಬಹಳ ದೊಡ್ಡ ರಾಜಕಾರಣವೇ ನಡೆದಿದೆ.

ರಾಮಮನೋಹರ ಲೋಹಿಯಾ ಅವರು ‘ಸೌಂದರ್ಯ ಮತ್ತು ಮೈಬಣ್ಣ’ ಎನ್ನುವ ಲೇಖನದಲ್ಲಿ ಹೀಗೆ ಹೇಳುತ್ತಾರೆ-“ಪ್ರಪಂಚ ವಿಸ್ತಾರದಲ್ಲೂ ಶ್ವೇತವರ್ಣಕ್ಕೇ ಯಥೇಚ್ಛ ಅಧಿಕಾರ ದೊರೆತಿರುವಾಗ ಇಂಡಿಯಾದಲ್ಲಿರುವ ಒಂದು ವಿಶಿಷ್ಟ ಸ್ಥಿತಿ ಅದಕ್ಕೆ ಒಳನೆಯ್ಗೆ ಕೊಟ್ಟು ಬಲಪಡಿಸಿದೆ. ಈ ದೇಶದಲ್ಲಿ ಬಿಳಿ ಮೈಬಣ್ಣದವರು ಅಥವಾ ಕಪ್ಪು ಕಡಿಮೆ ಇರುವವರು ಸಾಮಾನ್ಯವಾಗಿ ಮೇಲುಜಾತಿಗೆ ಸೇರಿದವರಾಗಿದ್ದರು. ‘ಜಾತಿ’ ಎಂಬುದಕ್ಕೆ ಹಿಂದುಸ್ತಾನಿಯಲ್ಲಿ ‘ವರ್ಣ’ ಎನ್ನುತ್ತಾರೆ. ಅದರ ಅರ್ಥ ಪ್ರಾಯಶಃ ಬಣ್ಣ. ಋಗ್ವೇದದಲ್ಲಿ ಶ್ವೇತವರ್ಣವನ್ನೇ ಆರ್ಯ ಎಂದು ಕರೆದಿದೆ. ಇಂಡಿಯಾದ ನಿಸರ್ಗ ಭೂಮಿ ಆಕಾಶಗಳು ಉಜ್ವಲ ವರ್ಣದವು. ಆ ಹಿನ್ನೆಲೆಯ ಎದುರು, ಗರಿಗರಿಯಾಗಿ ಒತ್ತಿಡದೆ ಅಲೆ ಅಲೆಯಾಗಿರುವ ಅಚ್ಚ ಬಿಳಿಯ ಉಡುಪು ನೋಡುವ ಕಣ್ಣುಗಳಿಗೆ ಹರ್ಷ ಕೊಡುತ್ತದೆ; ಧರಿಸಿದವನ ಚೆಲುವನ್ನು ಹೆಚ್ಚಿಸಿ ತೋರಿಸುತ್ತದೆ. ಆದರೆ ಅದಕ್ಕೂ ಮೈಬಣ್ಣಕ್ಕೂ ಯಾವ ಸಂಬಂಧವೂ ಇಲ್ಲ. ಹಾಗಿದ್ದರೂ, ಇಡೀ ಪ್ರಪಂಚದಲ್ಲೇ ಬಿಳಿಯರ ಮೇಲಾಟ ಪರಂಪರೆಯನ್ನೇ ಸೃಷ್ಟಿಸಿರುವ ಕಾರಣ, ಅದಕ್ಕೆ ಒತ್ತು ಕೊಟ್ಟ ಇಂಡಿಯಾದ ಜಾತಿಪದ್ಧತಿಯ ವೈಶಿಷ್ಟ್ಯವೂ ಕಾರಣವಾಗಿ ಶ್ವೇತವರ್ಣಕ್ಕೆ ನಿರೋಧ ಕಾಣದ ಪ್ರತಿಷ್ಠೆ ದೊರಕಿಬಿಟ್ಟಿದೆ. ಚರ್ಮದ ಬಣ್ಣವೇ ಚೆಲುವಿಕೆಯೆನ್ನಿಸಿ ಕೊಂಡುಬಿಟಿದೆ-ಇನ್ನಾವುದೇ ಸಹಗುಣಗಳನ್ನು ಬೇಡದೆ.” ಮನುಷ್ಯರ ಮೈಬಣ್ಣವು ಪ್ರತಿಭೆ, ಜ್ಞಾನ, ಸೌಂದರ್ಯ, ಅಭಿನಯ ಕಲೆ ಯಾವುದಕ್ಕೂ ಒಂದು ಪ್ರಮಾಣ ಅಲ್ಲವೇ ಅಲ್ಲ. ಮತ್ತಾವುದೇ ಬಗೆಯ ಶ್ರೇಷ್ಠತೆಯ ಪ್ರಮಾಣವೂ ಆಗಿರಲು ಸಾಧ್ಯವಿಲ್ಲ.

kamಆದರೆ ಭಾರತದಲ್ಲಿ ಈ ಮೈಬಣ್ಣವನ್ನೇ ಸೌಂದರ್ಯದ ಏಕೈಕ ಅಳತೆಗೋಲು ಎಂದೇ ನಂಬಿಕೊಂಡು ಬರಲಾಗಿದೆ. ಸೌಂದರ್ಯ ಮತ್ತು ಮೈಬಣ್ಣದ ರಾಜಕಾರಣದಲ್ಲಿ ಭಾರತೀಯ ಜಾತಿ ಪದ್ಧತಿಯ ಕೈವಾಡವಿದೆ. ಇದಕ್ಕೆ ಭಾರತೀಯ ಸಿನಿಮಾ ಕ್ಷೇತ್ರ ಅತ್ಯುತ್ತಮ ಉದಾಹರಣೆಯಾಗಿದೆ. ಈ ಸಂಪ್ರದಾಯವನ್ನು ‘ಕಮ್ಮಟ್ಟಿಪಾಡಮ್’ ಚಿತ್ರವು ಮುರಿಯಲು ಪ್ರಯತ್ನಿಸಿದೆ. ರಾಜೀವ ಅವರು ಮೈ ಬಣ್ಣ ಮತ್ತು ಸೌಂದರ್ಯದ ಅಪನಂಬಿಕೆಯನ್ನು ತೊಡೆದು ಹಾಕಲು ದಿಟ್ಟವಾದ ಹೆಜ್ಜೆಯನ್ನು ಇಟ್ಟಿರುವಂತಿದೆ.

ತಮಿಳು ಚಿತ್ರರಂಗವು ಕಪ್ಪು ಬಣ್ಣದ ಸೂಪರ್ ಸ್ಟಾರ್ ರಜನಿಕಾಂತರನ್ನು ಒಪ್ಪಿಕೊಂಡಿದೆ ಎಂದು ವಾದಿಸುವವರಿದ್ದಾರೆ. ಆದರೆ ರಜನಿಕಾಂತ ಅವರ ಮುಖವನ್ನು ಸಿನಿಮಾಗಳಲ್ಲಿ ಕಪ್ಪಾಗಿ ತೋರಿಸುವುದಕ್ಕೆ ಬದಲಾಗಿ ಬಿಳಿಯ ಬಣ್ಣದ ಮೇಕಪ್ ಬಳಿದೇ ತೋರಿಸಲಾಗುತ್ತದೆ. ಮಲಯಾಳಮ್ ಕಮರ್ಶಿಯಲ್ ಸಿನಿಮಾಗಳು ಮೊದಲಿನಿಂದಲೂ ಮೇಲ್ವರ್ಗದ ಹಿಂದೂ ಮತ್ತು ಮುಸ್ಲಿಂ ಸೂಪರ್ ಸ್ಟಾರ್‍ಗಳಾದ ಪ್ರೇಮ್ ನಜೀರ, ಜಯನ್, ಸೋಮನ್, ಸುಕುಮಾರನ್, ಮಮ್ಮುಟ್ಟಿ, ಮೋಹನಲಾಲ್, ಜಯರಾಮ್, ದಿಲೀಪ್-ಮೊದಲಾದವರಿಂದಲೇ ತುಂಬಿ ಹೋಗಿತ್ತು. ಹೊಸ ತಲೆಮಾರಿನ ಪೃಥ್ವಿರಾಜ್, ದುಲ್‍ಖ್ವೇರ್ ಸಲ್ಮಾನ್, ನಿವಿನ್ ಪೌಲಿ ಅವರಿಂದಲೂ ಈ ಸಂಪ್ರದಾಯ ಮುಂದುವರೆದಿದೆ. ಆದರೆ ‘ಕಮ್ಮಟ್ಟಿಪಾಡಮ್’ನಲ್ಲಿ ವಿನಯಗನ್ ಮತ್ತು ಮನಿಕಂದನ್‍ರಂತಹ ಪ್ರತಿಭಾಂತ ನಟರಿಗೆ ಅವಕಾಶ ಕೊಟ್ಟ ರಾಜೀವ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ಮೊದಲು ಛಾಯಾಗ್ರಾಹಕರಾಗಿದ್ದು ಸಿನಿಮಾ ನಿರ್ದೇಶಕರಾದವರಲ್ಲಿ ಗೋವಿಂದ್ ನಿಹಲಾನಿ, ಶಾಜಿ ಕರುಣ್, ಸಂತೋಷ್ ಶಿವನ್ ಮತ್ತು ಬಾಲು ಮಹೇಂದ್ರ ಪ್ರಮುಖರಾಗಿದ್ದಾರೆ. ಛಾಯಾಗ್ರಹಣವು ಸಿನಿಮಾದ ಜೀವಾಳವಾಗಿರುತ್ತದೆ. ಅದರ ಮರ್ಮವನ್ನೇ ಅರಿತವರು ನಿರ್ದೇಶನಕ್ಕೆ ಇಳಿದು ಇವರೆಲ್ಲ ಯಶಸ್ವಿಯಾದವರೇ. ಇಂತಹವರ ಸಾಲಿಗೆ ಸೇರುವ ರಾಜೀವ ‘ಕಮ್ಮಟ್ಟಿಪಾಡಮ್’ನಲ್ಲಿ ಕಥನ ನಿರೂಪಣೆಯ ಹಲವು ಶೈಲಿ ಮತ್ತು ತಂತ್ರಗಳನ್ನು ಒರೆಗೆ ಹಚ್ಚಿದ್ದಾರೆ. ಮೂರು ಗಂಟೆಯ ಸಿನಿಮಾವನ್ನು ಗಟ್ಟಿಯಾದ ಕತೆ, ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ, ಬಹುಮುಖಿ ನಿರೂಪಣೆಯ ವಿಧಾನ ಮತ್ತು ಪಾತ್ರಗಳ ಪರಕಾಯ ಪ್ರವೇಶ ಮಾಡಿರುವ ನಟರು-ಇವುಗಳಿಂದ ‘ಕಮ್ಮಟ್ಟಿಪಾಡಮ್’ ಮಹತ್ವದ ಚಿತ್ರವಾಗಿದೆ. ಅಂಚಿನ ಸಮುದಾಯದವರ ದುರಂತ ಕಥನವಾಗಿ ಕಾಡುತ್ತದೆ. ಆರಂಭದಿಂದ ಕೊನೆಯವರೆಗೂ ಕಥಾನಕ ಹಿಂದಕ್ಕೂ ಮುಂದಕ್ಕೂ ಚಲಿಸುತ್ತ ಅಭಿವೃದ್ಧಿಯ ನಾಗಾಲೋಟದಲ್ಲಿ ಮತ್ತಷ್ಟು ಅಂಚಿಗೆ ತಳ್ಳಲ್ಪಟ್ಟವರ ಆಕ್ರೋಶ, ಹೋರಾಟ, ಹತಾಶೆ, ವಿಷಾದದ ಕತೆಯಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ತಣ್ಣನೆಯ ಕ್ರೌರ್ಯ ಮನಸ್ಸನ್ನು ಖಿನ್ನಗೊಳಿಸುತ್ತದೆ.

Leave a Reply

Your email address will not be published.