ಸಾಕ್ಷಿ ಪ್ರಜ್ಞೆ ಇಲ್ಲದ ಸಾಹಿತ್ಯ ಸಂವೇದನೆ !

ನಾ ದಿವಾಕರ

ಸಾಹಿತ್ಯದ ಮೂಲ ಉದ್ದೇಶ ಏನು ? ಸಾಹಿತ್ಯದ ವ್ಯಾಖ್ಯಾನ, ಪರಿಧಿ, ವ್ಯಾಪ್ತಿ ಮತ್ತು ಹರವು ಹಲವು ರೂಪಗಳಲ್ಲಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆಯನ್ನು ಮೈಸೂರು ಸಾಹಿತ್ಯ ಸಮ್ಮೇಳನ ಸೃಷ್ಟಿಸಿದೆ. 20ಕ್ಕೂ ಹೆಚ್ಚು ವಿಚಾರ ಗೋಷ್ಠಿಗಳು, ಮೂರು ಕವಿ ಗೋಷ್ಠಿಗಳು, ಮೂರು ವೇದಿಕೆ, ಸಾವಿರಾರು ಸಾಹಿತ್ಯಾಭಿಮಾನಿಗಳು, ಬೃಹತ್ ಸಂಖ್ಯೆಯ ಪುಸ್ತಕಗಳ ನಡುವೆ ಸಾಹಿತ್ಯಾಭಿಮಾನಿಗಳ ಸೆಲ್ಫಿ ಪ್ರೀತಿಗೆ ಬಲಿಯಾದ 83ನೆಯ ಸಾಹಿತ್ಯ ಸಮ್ಮೇಳನ ವೈವಿಧ್ಯಗಳ ನಡುವೆಯೇ ಹಲವು ವಿವಾದಗಳನ್ನೂ ಹುಟ್ಟುಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿಗತ ನಿಲುವು ಮತ್ತು ಸಾಹಿತ್ಯ-ಸಿದ್ಧಾಂತಗಳ ನಡುವಿನ ಲಟಾಪಟಿ ಬಹುಶಃ ಈ ಸಮ್ಮೇಳನದಲ್ಲಿ ಹೆಚ್ಚು ಪ್ರಖರವಾಗಿ ಕಂಡುಬಂದಿದೆ. ಇಷ್ಟಕ್ಕೂ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವಾದರೂ ಏನು ? ಕೇವಲ ಅಕ್ಷರ ಜಾತ್ರೆಯ ಸಾರೋಟಿನಲ್ಲಿ ಸಾಗುತ್ತಾ ಸಾಹಿತ್ಯಕ ಆತ್ಮರತಿಯ ನಾಗಾಲೋಟವನ್ನು ವೀಕ್ಷಿಸುವುದೇ ? ಅಥವಾ ಕನ್ನಡ ಸಾಹಿತ್ಯದ ಗತ ವಾಸ್ತವಗಳ ನೆಲೆಗಳನ್ನು ಸಂಭ್ರಮಿಸುವುದೇ ? ಅಥವಾ ಸಾಹಿತ್ಯ ಲೋಕದ ಸಾರಥಿಗಳಿಂದ ಶುಷ್ಕ ಉಪನ್ಯಾಸಗಳನ್ನು ಕೇಳಿ ಸಂಭ್ರಮದ ಓಕುಳಿಯಲ್ಲಿ ಮಿಂದು ನಿರ್ಗಮಿಸುವುದೇ ?

ಇವಿಷ್ಟೇ ಉದ್ದೇಶ ಎಂದಾದಲ್ಲಿ ಕೋಟ್ಯಂತರ ರೂಗಳ ಜಾತ್ರೆಯ ಅವಶ್ಯಕತೆಯೇ ಕಂಡುಬರುವುದಿಲ್ಲ. ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆಯೇ ನಿಜ . ಆದರೆ ಸಮಸ್ತ ಕನ್ನಡಿಗರ ಆಶೋತ್ತರಗಳನ್ನು ಬಿಂಬಿಸುವ ಈ ಜಾತ್ರೆಯಲ್ಲಿ ಸಾಹಿತ್ಯ ಲೋಕ ತನ್ನ ಸುತ್ತಲಿನ ಸಮಾಜದೊಡನೆ ಇರುವ ಸೂಕ್ಷ್ಮ ತಂತುಗಳನ್ನು, ತರಂಗಗಳನ್ನು, ಪ್ರವಹಿಸುವ ವಿದ್ಯುತ್ ಅಲೆಗಳನ್ನು ಗ್ರಹಿಸುವುದೂ ಅಷ್ಟೇ ಮುಖ್ಯ. ಇಲ್ಲಿ ಸಾಹಿತ್ಯಕ ಸಂವೇದನೆಗಿಂತಲೂ ಸಾಹಿತ್ಯಕೃಷಿಯಲ್ಲಿ ಸೂಕ್ಷ್ಮವಾಗಿ ಅಡಗಿರುವ ಮಾನವ ಸಂವೇದನೆ ಮುಖ್ಯವಾಗುತ್ತದೆ. ಜನಸಾಮಾನ್ಯರ ನಿತ್ಯ ಜೀವನದ ಆತಂಕ, ಹತಾಶೆ ಮತ್ತು ಹಪಾಹಪಿಯನ್ನು ಈ ಕೃಷಿಭೂಮಿಯಿಂದ ಹೊರಗಿಟ್ಟು ನೋಡುವುದು ಫಲವತ್ತಾದ ಬೆಳೆಯನ್ನು ಕಿತ್ತೆಸೆದು ಕಳೆಯನ್ನು ಉಳಿಸಿಕೊಂಡಂತಾಗುತ್ತದೆ. ಸಾಹಿತ್ಯ ಸಮಾಜದ ಬದಲಾವಣೆಯ ಭೂಮಿಕೆಯಲ್ಲ ಎಂದು ವಾದಿಸುವ ಸಾಹಿತ್ಯ ವಲಯ ಶತಮಾನಗಳ ಕಾಲ ಹೀಗೆಯೇ ಮುನ್ನಡೆದು ಬಂದಿದ್ದನ್ನು ಕಾಣಬಹುದು. ಭಾರತದ ಬದಲಾಗುತ್ತಿರುವ ಸಮಾಜೋ ಸಾಂಸ್ಕøತಿಕ ಸಂದರ್ಭದಲ್ಲಿ ಬಹುಶಃ ಇದೇ ಮಾರ್ಗ ಮತ್ತೊಮ್ಮೆ ಮಾನ್ಯತೆ ಪಡೆಯುತ್ತಿರುವಂತೆ ಕಾಣುತ್ತಿದೆ.

ಈ ಸಂವೇದನಾಶೀಲ ನೆಲೆಯಲ್ಲಿ ಮೈಸೂರು ಸಾಹಿತ್ಯ ಸಮ್ಮೇಳನದತ್ತ ಗಮನ ಹರಿಸಿದಾಗ , ಸಾಹಿತ್ಯ ಲೋಕದ ಆತ್ಮರತಿ ಎದ್ದು ಕಾಣುತ್ತದೆ. ಆಧುನಿಕ ತಂತ್ರಜ್ಞಾದನ ಸೆಲ್ಫಿ ಭರಾಟೆಗೆ ಬಲಿಯಾದ ಸಾಹಿತ್ಯ ಸಂವೇದನೆಯನ್ನು ವಿಚಾರ ಗೋಷ್ಠಿಗಳ ಖಾಲಿ ಕುರ್ಚಿಗಳಲ್ಲಿ ಕಾಣಬಹುದಾಗಿತ್ತು. ಬಹುಶಃ 83 ಸಮ್ಮೇಳನಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಪರಿಕಲ್ಪನೆಯೇ ತನ್ನ ಅರ್ಥ ಕಳೆದುಕೊಂಡಿದೆ ಎನ್ನುವಷ್ಟು ಮಟ್ಟಿಗೆ ಈ ಸಮ್ಮೇಳನ ರಗಳೆ ಸೃಷ್ಟಿಸಿದೆ. ವಿಚಾರ ಸಂಕಿರಣಗಳಲ್ಲಿ ಯಾರೂ ಸಹ ಭವಿಷ್ಯದ ದಿನಗಳಿಗೆ ಮಾರ್ಗದರ್ಶಕವಾಗುವಂತಹ ಉಪನ್ಯಾಸ ಮಂಡಿಸಲಿಲ್ಲ. ನಿಜ, ಸಮಾಜವನ್ನು ಕಾಡುತ್ತಿರುವ ಪಿತೃಪ್ರಧಾನ ಧೋರಣೆ, ಮಹಿಳೆಯರ ಮೇಲಿನ ದೌರ್ಜನ್ಯ, ದಲಿತ ಸಂವೇದನೆ, ರೈತರ ಸಮಸ್ಯೆಗಳು, ಕಾವ್ಯಲೋಕದ ತುಮುಲಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಹೀಗೆ ಹತ್ತು ಹಲವಾರು ಜ್ವಲಂತ ಸಮಸ್ಯೆಗಳು ಬಿಂಬಿಸಲ್ಪಟ್ಟಿವೆ. ಆದರೆ ನಮ್ಮ ಮುಂದಿರುವುದು ಭವಿಷ್ಯದ ಬೃಹತ್ ಸವಾಲು ಮತ್ತು ಈ ಸವಾಲಿಗೆ ಪಾಟಿ ಸವಾಲು ಹಾಕಿ ನಿಂತಿರುವ ಬ್ರಹ್ಮರಾಕ್ಷಸ ಎಂದರೆ ನವ ಉದಾರವಾದ ಮತ್ತು ಕೋಮುವಾದಿ ಫ್ಯಾಸಿಸಂ ಎಂಬ ಪರಿಜ್ಞಾನ ವಿಚಾರ ಸಂಕಿರಣಗಳಲ್ಲಿ ವ್ಯಕ್ತವಾಗಬೇಕಿತ್ತಲ್ಲವೇ ?

ಸಮ್ಮೇಳನಾಧ್ಯಕ್ಷರ ವ್ಯಕ್ತಿಗತ ಆಶಯಗಳು, ತಾತ್ವಿಕ ನಿಲುವು ಮತ್ತು ವೈಚಾರಿಕ ಪ್ರಜ್ಞೆ ಸಮ್ಮೇಳನದಲ್ಲಿ ವ್ಯಕ್ತವಾದದ್ದು ಗಂಭೀರ ಚರ್ಚೆಗೊಳಗಾಗಿದೆ. ಸಮಾಜೋ ಸಾಂಸ್ಕøತಿಕ ನೆಲೆಯಲ್ಲಿ ಪ್ರಜ್ಞಾವಂತ ಮನಸುಗಳು, ವೈಚಾರಿಕ ಮನಸ್ಥಿತಿಗಳು ಕಾಣಬಹುದಾದ ಜಾತ್ಯಾತೀತತೆಗೂ ಭ್ರಷ್ಟ ರಾಜಕೀಯ ನೆಲೆಯಲ್ಲಿ ಕಾಣುವ ಜಾತ್ಯಾತೀತತೆಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಸಮ್ಮೇಳನಾಧ್ಯಕ್ಷರು ಗಮನಿಸಿದ್ದಿದ್ದರೆ ಬಹುಶಃ ಬಿಜೆಪಿ ಸಂಸದರಿಗೆ ಮೂತ್ರದ ವಾಸನೆ ಬಡಿಯುತ್ತಿರಲಿಲ್ಲ. ಕಾರ್ಪೋರೇಟ್ ಶಕ್ತಿಗಳ ಔದ್ಯಮಿಕ ಅಧಿಪತ್ಯ, ಕೋಮುವಾದಿ ಮತಾಂಧರ ಆಡಳಿತಾತ್ಮಕ ಅಧಿಪತ್ಯ ಮತ್ತು ಕರ್ಮಠ ಸಂಪ್ರದಾಯವಾದಿಗಳ ಸಾಂಸ್ಕøತಿಕ ಅಧಿಪತ್ಯದ ವಿರುದ್ಧ ದೇಶದ ಪ್ರಜ್ಞಾವಂತ ಮನಸುಗಳು ಹೂಡಿರುವ ಸೈದ್ಧಾಂತಿಕ ಸಂಘರ್ಷಕ್ಕೆ ರಾಮಾಯಣದ ಸೀತಾ ಪರಿತ್ಯಾಗ ಮುಖ್ಯವಾಗುವುದಿಲ್ಲ. ವಾಲ್ಮೀಕಿ ಸೃಷ್ಟಿಸಿದ ಒಬ್ಬ ಪೌರಾಣಿಕ ವ್ಯಕ್ತಿಯನ್ನು ಮತಾಂಧ ಶಕ್ತಿಗಳು ಬಳಸಿಕೊಂಡ ಮಾತ್ರಕ್ಕೆ ಸಾಹಿತ್ಯ ಲೋಕ ಚಾರಿತ್ರಿಕ ಮೌಲ್ಯ ನೀಡುವ ಅವಶ್ಯಕತೆಯೂ ಇರುವುದಿಲ್ಲ. ಸಮಕಾಲೀನ ಸಂದರ್ಭದ ಮಹಿಳಾ ಸಂವೇದನೆಯ ಸೂಕ್ಷ್ಮ ತಂತುಗಳನ್ನು ಶೋಷಣೆಯ ಛದ್ಮವೇಷಗಳ ಮೂಲಕ ನೋಡುವ ಪ್ರಯತ್ನ ಇಲ್ಲಿ ಸ್ತುತ್ಯಾರ್ಹವಾಗಿತ್ತು. ಆದರೆ ಸಮಯದ ಅಭಾವ ವಿಷಯ ಮಂಡನೆಯನ್ನು ಸೀಮಿತಗೊಳಿಸಿತ್ತು.

ನಮ್ಮ ಮುಂದಿರುವ ಸವಾಲು ಈ ಛದ್ಮ ವೇಷಗಳ ವಿಭಿನ್ನ ಆಯಾಮಗಳನ್ನು ಕಳಚಿಹಾಕುವುದೇ ಆಗಿದೆ. ಸಾಹಿತ್ಯ ಸಮ್ಮೇಳನವೂ ಈ ದಿಕ್ಕಿನಲ್ಲೇ ಸಾಗಬೇಕಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಭಾಷಿಕ ಸಂವೇದನೆಯನ್ನು ಸೂಚಿಸುವ ಅಕ್ಷರ ಜಾತ್ರೆ. ಇಲ್ಲಿ ಮತಧರ್ಮಗಳಿಗಾಗಲೀ, ಪ್ರಾಂತೀಯ ಅಸ್ಮಿತೆಗಳಿಗಾಗಲೀ ಅವಕಾಶ ಇರಕೂಡದು. ಈ ನೆಲೆಯಲ್ಲಿ ನಿಂತು ನೋಡಿದಾಗ ಸಮ್ಮೇಳನಾಧ್ಯಕ್ಷರು ಪೂಜಾ ವಿಧಿವಿಧಾನಗಳಿಂದ ದೂರ ಉಳಿದಿದ್ದು ಅಪರಾಧವೇನಲ್ಲ. ಚಂಪಾ ಅಧ್ಯಕ್ಷತೆ ವಹಿಸಿದ್ದು ಕನ್ನಡ ಸಮ್ಮೇಳನಕ್ಕೆ. ಒಂದು ಭಾಷೆಯಾಗಿ ಕನ್ನಡ ಯಾವುದೇ ಮತಧರ್ಮದ ಸ್ವತ್ತಲ್ಲ. ಅದು ಜನತೆಯ ಜೀವನಾಡಿ. ಇದು ಮತಾಂಧರಿಗೆ ಅರ್ಥವಾಗದ ವಿಚಾರ. ಆದರೆ ನಮ್ಮ ಮಾಧ್ಯಮಗಳಿಗೆ ಅರ್ಥವಾಗಬೇಕಿತ್ತಲ್ಲವೇ ? ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಗುರುತರ ಹೊಣೆಗಾರಿಕೆ ಹೊತ್ತಿರುವ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ವೈಚಾರಿಕತೆ ಮತ್ತು ವೈಜ್ಞಾನಿಕ ಪರಂಪರೆಗೆ ತಿಲಾಂಜಲಿ ನೀಡಿ, ಜನಸಾಮಾನ್ಯರಲ್ಲಿ ಮೌಢ್ಯದ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ನಡೆದ ಮಾಧ್ಯಮಗಳನ್ನು ಕುರಿತ ಗೋಷ್ಠಿ ಅರ್ಥಹೀನ ಎನಿಸಿತ್ತು.ಸದಾ ಪ್ರಳಯ, ವಿನಾಶ ಮತ್ತು ಮನುಕುಲದ ಅಂತ್ಯದ ಸ್ತುತಿ ಮಾಡುವ ಮಾಧ್ಯಮಗಳ ವಕ್ತಾರರು ಭವಿಷ್ಯದ ಸಮಾಜಕ್ಕೆ ಹಾದಿ ತೋರಲು ಹೇಗೆ ಸಾಧ್ಯ ?

ಮಹಿಳಾ ಗೋಷ್ಠಿಯಲ್ಲಿ ಸಾಂಸ್ಕøತಿಕ ರಾಜಕಾರಣವನ್ನು ಕುರಿತು ಮಾತನಾಡಿದ ಶ್ರೀಮತಿ ಲೋಲಾಕ್ಷಿ, ಸಂಸ್ಕøತಿಯನ್ನು ಕುರಿತು ಮಾತನಾಡಿ ರಾಜಕಾರಣ ಬೇಡ ಎಂಬ ಹಿರಿಯರೊಬ್ಬರ ಸಲಹೆಯನ್ನು ಪ್ರಸ್ತಾಪಿಸಿದ್ದು ಮಾರ್ಮಿಕವಷ್ಟೇ ಅಲ್ಲ ವಸ್ತುಸ್ಥಿತಿಯ ಅನಾವರಣವೂ ಆಗಿತ್ತು. ಸಾಹಿತ್ಯ ಸಮ್ಮೇಳನದಲ್ಲಿ ಸಂಸ್ಕøತಿ ಮತ್ತು ಸಾಂಸ್ಕøತಿಕ ಪಲ್ಲಟಗಳ ಪುನರ್‍ಮನನ ಅಗತ್ಯವಾದರೂ, ಇದೇ ಸಾಂಸ್ಕøತಿಕ ಪಲ್ಲಟಗಳಿಗೆ ಕಾರಣವಾಗುತ್ತಿರುವ ವಿಕೃತ ಪರಂಪರೆಗಳನ್ನು ಧಿಕ್ಕರಿಸುವುದು ಸಮ್ಮೇಳನದ ಆಶಯವಾಗಬೇಕು. ಸಮ್ಮೇಳನದಲ್ಲಿ ಭಾಗವಹಿಸುವವರೆಲ್ಲರೂ ಅಧ್ಯಯನಶೀಲರೇನಲ್ಲ. ಅಥವಾ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅರೆದು ಕುಡಿದವರೂ ಆಗಿರಲಿಕ್ಕಿಲ್ಲ. ಆದರೆ ಅವರ ಆಶಯಗಳು ಕನ್ನಡ ಜನತೆಯ ತುಮುಲಗಳನ್ನು ಪ್ರತಿನಿಧಿಸುತ್ತವೆ. ತಮ್ಮ ಸುತ್ತಲಿನ ಸಮಾಜದ ಎಲ್ಲ ಕ್ಷೇತ್ರಗಳೂ ಭ್ರಷ್ಟ ವ್ಯವಸ್ಥೆಯ ಕೂಪದಲ್ಲಿ ಸಿಲುಕಿ ವಿನಾಶದ ಅಂಚಿಗೆ ಸಾಗುತ್ತಿರುವ ಸಂದರ್ಭದಲ್ಲಿ, ಸಾರಸ್ವತ ಲೋಕದ ಭರವಸೆಯ ಮಾತುಗಳಲ್ಲಿ ಜನಸಾಮಾನ್ಯರು ಸಂವೇದನೆಯನ್ನು ಬಯಸುತ್ತಾರೆ. ದುರಂತ ಎಂದರೆ ಈ ಮಾನವ ಸಂವೇದನೆಯೇ ಗಿರಡ್ಡಿಯಂತಹ ಸಾಹಿತಿಗಳಿಗೆ ಕಪ್ಪು ಚುಕ್ಕೆಯಾಗಿ ಕಾಣುತ್ತದೆ.

ದಲಿತ, ಮಹಿಳೆ, ತೃತೀಯ ಲಿಂಗಿಗಳು, ರೈತರ ಸಂವೇದನೆಗಳಿಗೆ ಸ್ಪಂದಿಸಲು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾವು ಬದುಕು ನಿರ್ಣಾಯಕವಾಗುತ್ತದೆ. ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲೇ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನೂ ಸಮ್ಮೇಳನ ಕಂಡಿದೆ. ಕನ್ನಡ ಒಂದು ಭಾಷೆಯಾಗಿ ಉಳಿಯುತ್ತದೆ ಆದರೆ ಕನ್ನಡ ಭಾಷೆಯನ್ನು ಉಸಿರಾಡುವ ಜನಸಾಮಾನ್ಯರ ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಯುತ್ತದೆ ಎಂಬ ಭರವಸೆ ಕಾಣುತ್ತಿಲ್ಲ. ಇದು ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಇನ್ನೂ ಹೆಚ್ಚು ಸ್ಪಷ್ಟತೆಯಿಂದ ವ್ಯಕ್ತವಾಗಬೇಕಿತ್ತು. ಆಗಿಲ್ಲ ಎನ್ನುವುದು ದುರಂತ ಸತ್ಯ. ಚರಿತ್ರೆಯ ಪದ್ಮಾವತಿ ಸಮಕಾಲೀನ ಚೇತನವನ್ನು ಅಡಗಿಸಲು ಸಜ್ಜಾಗುತ್ತಿರುವುದನ್ನು ಸಾಂಸ್ಕøತಿಕ ಲೋಕದಲ್ಲಿ ಕಾಣುತ್ತಿದ್ದೇವೆ. ಒಂದು ಚಲನಚಿತ್ರ ನಮ್ಮ ಸಾಮಾಜಿಕ ಜೀವನವನ್ನು ಪ್ರಕ್ಷುಬ್ಧಗೊಳಿಸುತ್ತದೆ ಆದರೆ ನಮ್ಮ ಸುತ್ತಲಿನ ಜಡಗಟ್ಟಿದ ವಿಕೃತ ವ್ಯವಸ್ಥೆ ನಮ್ಮ ಸಾಕ್ಷಿ ಪ್ರಜ್ಞೆಯನ್ನು ಅಲುಗಾಡಿಸುವುದೂ ಇಲ್ಲ.

ಇಲ್ಲಿ ಕನ್ನಡ ಪ್ರಜ್ಞೆ ಜಾಗೃತವಾಗಬೇಕಾದರೆ ಮಾನವ ಸಂವೇದನೆಯೂ ಜಾಗೃತವಾಗಬೇಕು. ಕನ್ನಡ ಎಂದರೆ ಒಂದು ಅಮೂರ್ತ ಕಲ್ಪನೆಯಲ್ಲ ಅದು ವಾಸ್ತವ. ಕನ್ನಡಿಗರು ಈ ವಾಸ್ತವದ ವಾರಸುದಾರರು. ಕನ್ನಡ ಉಳಿಯಬೇಕೆಂದರೆ ಕನ್ನಡಿಗರು ಉಳಿಯಬೇಕು. ಕನ್ನಡಿಗರು ಎಂದರೆ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಯಾಗುವ ಜನಸಮೂಹ ಅಲ್ಲ. ಇಲ್ಲಿ ಸಮಷ್ಟಿ ಪ್ರಜ್ಞೆ ಮುಖ್ಯವಾಗುತ್ತದೆ. ಈ ಸಮಷ್ಟಿ ಪ್ರಜ್ಞೆ ಯನ್ನು ಜಾಗೃತಗೊಳಿಸಲು ಸಾಹಿತ್ಯಕ ಸಂವೇದನೆ ಒಂದು ಪ್ರಬಲ ಅಸ್ತ್ರವಾಗಿ ಸಾರಥ್ಯ ವಹಿಸಬೇಕಾಗುತ್ತದೆ. ಸಾಕ್ಷಿಪ್ರಜ್ಞೆ ಇಲ್ಲದ ಶುಷ್ಕ ಸಾಹಿತ್ಯಕ್ಕಿಂತಲೂ ಮಾನವ ಸಂವೇದನೆಯ ಸೂಕ್ಷ್ಮಗಳನ್ನು ಸ್ವತಂತ್ರ ಅಭಿವ್ಯಕ್ತಿಯ ನೆಲೆಯಲ್ಲಿ ಅನಾವರಣಗೊಳಿಸುವ ಸಾಹಿತ್ಯ ಇಂದಿನ ಆದ್ಯತೆಯಾಗಬೇಕಿದೆ. ಈ ಸಂವೇದನೆ 83ನೆಯ ಸಾಹಿತ್ಯ ಸಮ್ಮೇಳನದಲ್ಲಿ ಮರೆಯಾದದ್ದು ಹೇಗೋ ?

Leave a Reply

Your email address will not be published.