ಸಾಕಾಗುವುದಿಲ್ಲ ಮೂರು ಗುಂಡುಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಮೊದಲ ಗುಂಡು ಬಿದ್ದಾಗ
ಅದರ ಶಬ್ದಕ್ಕೆ ಎದೆ ನಡುಗಿತು!

ಎರಡನೆ ಗುಂಡು ಬಿದ್ದಾಗ
ಹೃದಯದಿಂದ ರಕ್ತ ಹೊರಚಿಮ್ಮಿತು!

ಮೂರನೇ ಗುಂಡು ಬಿದ್ದಾಗ
ಉಸಿರು ನಿಂತಿತು!

ನಾಲ್ಕನೆಯದಕೆ ಕಾಯುವ ಮೊದಲೇ
ಮಾತು ಸ್ಥಬ್ದವಾಯಿತು……….!

ಹಾಗೆ ನಡುಗಿದ ಎದೆಗೀಗ ಸಾವಿರ
ಉಸಿರ ನಾಳಗಳು ಜೋಡಿಸಲ್ಪಟ್ಟವು-
ರಕ್ತ ಚಿಮ್ಮಿದ ಹೃದಯಕೆ ಅದೆಲ್ಲಿಂದಲೋ
ಹರಿದುಬಂದ ಜನಸಾಗರ ರಕ್ತವ ತುಂಬಿತು.
ಸ್ಥಬ್ದವಾದ ಮಾತು
ಮತ್ತೆ ಹುಟ್ಟಿತು
ನಿಂತು ಹೋದ ಒಂದು ಕೊರಳ ಬದಲಿಗೀಗ
ಲಕ್ಷೋಪಲಕ್ಷ ಕೊರಳುಗಳು
ದನಿಯೆತ್ತಿ ಹಾಡಿದವು!
ನಾನು:
ನಾನು ಗೌರಿ,
ನಾವು ಗೌರಿ,
ಬಚ್ಚಿಕೊಂಡಿರುವ ಬಂದೂಕುಗಳು
ಬೆಚ್ಚಿದವು
ಕಸಾಯಿಖಾನೆಗಳು ಮುಚ್ಚಿಕೊಂಡವು!

 

Leave a Reply

Your email address will not be published.