ಔದಾರ್ಯದ ಹೆಸರಲ್ಲಿ ಮತೀಯ ರಾಜಕಾರಣ

-ನಾ ದಿವಾಕರ

ಅಧಿಪತ್ಯ ರಾಜಕಾರಣದ ವಿಕೃತ ಸ್ವರೂಪವನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಾಣುತ್ತಿರುವಂತೆಯೇ ಸಾಂಸ್ಕøತಿಕ ರಾಜಕಾರಣದ ಒಂದು ವಿಕೃತ ಸ್ವರೂಪವನ್ನೂ ಉಡುಪಿಯ ಪೇಜಾವರರ ಪ್ರಹಸನದಲ್ಲಿ ಕಾಣುತ್ತಿದ್ದೇವೆ. ವಿಷ ಬೀಜಗಳನ್ನು ಬಿತ್ತನೆ ಮಾಡಿ ಸಂಜೀವಿನಿ ಔಷಧಿಯನ್ನು ಬೆಳೆಯಲಾಗುವುದಿಲ್ಲ ಎಂಬ ಸರಳ ಸತ್ಯ ಪೇಜಾವರರಿಗೆ ಅರ್ಥವಾಗಿದ್ದರೆ ಬಹುಶಃ, ಇಫ್ತಾರ್ ಪ್ರಹಸನಕ್ಕಿಂತಲೂ ಹೆಚ್ಚಿನ ಜ್ಞಾನೋದಯ ಆಗಬಹುದಿತ್ತು. ಸಹಭೋಜನ ಎನ್ನುವ ಪರಿಕಲ್ಪನೆಯನ್ನು ಎರಡು ಆಯಾಮಗಳಲ್ಲಿ ನೋಡಬಹುದು.

ಮೊದಲನೆಯದು “ ನಮ್ಮವರಲ್ಲದವರೊಡನೆ ” ಸಹಭೋಜನ ನಡೆಸುವ ಮೂಲಕ ಐಕ್ಯತೆಯನ್ನು ಸಾಧಿಸುವ ಒಂದು ಪರಿ. ಈ ಧೋರಣೆಯನ್ನು ಅನುಸರಿಸುವಾಗ ನಮ್ಮವರಲ್ಲದವರನ್ನು ಆ ಪ್ರತ್ಯೇಕತೆಯ ಚೌಕಟ್ಟಿನಿಂದ ಹೊರತಂದು ಸಮುದಾಯಗಳ ನಡುವಿನ ಕಂದರವನ್ನು ಸಂಪೂರ್ಣವಾಗಿ ಅಳಿಸಿಹಾಕುವ ದಾಷ್ಟ್ರ್ಯ ಇರಬೇಕಾದ್ದು ಅನಿವಾರ್ಯ. ಅಂಬೇಡ್ಕರ್ ಅಸ್ಪøಶ್ಯತೆಯ ವಿರುದ್ಧ ತಮ್ಮ ಸಮರದಲ್ಲಿ ಈ ಧೋರಣೆಯನ್ನು ಪ್ರತಿಪಾದಿಸಿದ್ದರು. ಮಾನಸಿಕ ನೆಲೆಯಲ್ಲಿ, ತಾತ್ವಿಕ ಧೋರಣೆಯಲ್ಲಿ ಮತ್ತು ಹೃದಯಾಂತರಾಳದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಸುಭದ್ರವಾಗಿ ರಕ್ಷಿಸಿಕೊಂಡೇ ಸಹಭೋಜನದ ಮೂಲಕ ಐಕ್ಯತೆಯನ್ನು ಸಾರುವ ಪ್ರಹಸನಗಳು ಕೃತ್ರಿಮ ಎನಿಸುವುದು ಸಹಜ. ಶ್ರೇಣೀಕೃತ ಜಾತಿವ್ಯವಸ್ಥೆಯ ಸುಭದ್ರ ಬುನಾದಿಯೇ ಇಂದಿಗೂ ಅಧಿಪತ್ಯ ಸಾಧಿಸಿರುವ ಭಾರತೀಯ ಸಮಾಜದಲ್ಲಿ ಶ್ರೇಷ್ಠತೆ, ಪರಿಶುದ್ಧತೆ ಮತ್ತು ಮಡಿವಂತಿಕೆ ಎಲ್ಲಿಯವರೆಗೆ ಉಸಿರಾಡುತ್ತಿರುವುದೋ ಅಲ್ಲಿಯವರೆಗೂ ಇಂತಹ ಪ್ರಹಸನಗಳು ಅರ್ಥಹೀನ ಎಂದೇ ಎನಿಸುತ್ತವೆ. ಹಾಗಾಗಿಯೇ ಪೇಜಾವರರ ದಲಿತ ಕೇರಿಯ ಪ್ರಹಸನಕ್ಕೂ ಇಫ್ತಾರ್ ಕೂಟದ ರಂಗಸಜ್ಜಿಕೆಗೂ ವ್ಯತ್ಯಾಸ ಕಂಡುಬರುವುದಿಲ್ಲ.

ಇಲ್ಲಿ ಪೇಜಾವರರ ಸಾಂಕೇತಿಕತೆಗಿಂತಲೂ ಹೆಚ್ಚಾಗಿ ವೈದಿಕ ಮನೋಭಾವದ ರೂಪಕ ಹೆಚ್ಚು ಪ್ರಸ್ತುತ ಎನಿಸುತ್ತದೆ. ಇಫ್ತಾರ್ ಕೂಟ ಎನ್ನುವುದು ಸಹಜೀವನದ ಸಂದೇಶ ಸಾರುವ ಒಂದು ಸಂಕೇತವಷ್ಟೇ. ಈ ವಾರ್ಷಿಕ ಕಸರತ್ತು ಈ ದೇಶದ ರಾಜಕಾರಣದ ಒಂದು ಭಾಗವಾಗಿದ್ದರೂ ರಾಜಕೀಯ ವೇದಿಕೆಗಳಲ್ಲಿನ ಕ್ಷುದ್ರ ಜಾತಿ ಮನಸುಗಳನ್ನು ಬದಲಾಯಿಸಿಲ್ಲ ಎನ್ನುವುದೂ ಅಷ್ಟೇ ಸತ್ಯ. ವರುಷಕ್ಕೊಂದು ದಿನ ಬಿಳಿ ಟೊಪ್ಪಿ ಧರಿಸಿ ನಮ್ಮವರಲ್ಲದವರೊಡನೆ ಬೆರೆತು ಊಟ ಮಾಡುವುದರಿಂದ ಸಾಮಾಜಿಕ ಸೌಹಾರ್ದತೆ, ಸಾಂಸ್ಕøತಿಕ ಔನ್ನತ್ಯ ಸಾಧಿಸುವುದು ಸಾಧ್ಯವಾಗಿದ್ದರೆ, ಸ್ವಾತಂತ್ರ್ಯ ಪಡೆದ ನಾಲ್ಕು ದಶಕಗಳ ನಂತರ ಸೋಮನಾಥ ರಥಯಾತ್ರೆ ಸಂಭವಿಸುತ್ತಿರಲಿಲ್ಲ, ಬಾಬ್ರಿ ಧ್ವಂಸವಾಗುತ್ತಿರಲಿಲ್ಲ, ಆರು ದಶಕಗಳ ನಂತರ ದಾದ್ರಿ ಸಂಭವಿಸುತ್ತಿರಲಿಲ್ಲ. ಬಾಬ್ರಿಯಲ್ಲಿ ಕಾಣದ ಸಾಂತ್ವನ, ದಾದ್ರಿಯ ಸಂದರ್ಭದಲ್ಲಿ ಕಾಣದ ಅನುಕಂಪ ಇಫ್ತಾರ್ ಕೂಟದಲ್ಲಿ ಕಾಣುವುದೇ ಆದರೆ ಅದು ಕ್ಷುದ್ರ ರಾಜಕಾರಣದ ಒಂದು ಮುಖ ಎಂದು ನಿಸ್ಸಂಶಯವಾಗಿ ಹೇಳಬಹುದು.

ಅಧಿಕಾರ ರಾಜಕಾರಣ ಮತ್ತು ಸಾಂಸ್ಕøತಿಕ ಅಧಿಪತ್ಯದ ನೆಲೆಯಲ್ಲಿ ಕಂಡುಬರುವ ಈ ಪ್ರಹಸನಗಳು ಭಾರತದ ರಾಜಕೀಯದಲ್ಲಷ್ಟೇ ರಾಡಿ ಎಬ್ಬಿಸಿಲ್ಲ, ಇಡೀ ಸಾಮಾಜಿಕ ಚೌಕಟ್ಟನ್ನೇ ಕಸದ ತೊಟ್ಟಿಯನ್ನಾಗಿಸಿದೆ. 1990ರಲ್ಲಿ ಇಫ್ತಾರ್ ಕೂಟವನ್ನು ಮುಸ್ಲಿಮರ ಓಲೈಕೆ ಎಂದು ಲೇವಡಿ ಮಾಡುತ್ತಿದ್ದ ಕೇಸರಿ ದಿಗ್ಗಜರೇ ಇಂದು ಬಿಳಿ ಟೊಪ್ಪಿ ಧರಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಕ್ಷುದ್ರ ರಾಜಕೀಯ ಲಾಭ ಪಡೆಯುವ ಒಂದು ಪ್ರಯತ್ನವಷ್ಟೆ. ಪೇಜಾವರರು ಈ ಪ್ರಹಸನಕ್ಕೆ ಸಾಂಸ್ಕøತಿಕ ಆಯಾಮ ನೀಡಲು ಯತ್ನಿಸಿದ್ದಾರೆ. ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆಯೂ ಇದೆ, ಜಾಗೃತಿಯ ಕರೆಯೂ ಇದೆ, ಆಲಿಂಗನದ ಸ್ಪರ್ಶವೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ “ ನೀವು ನಮ್ಮೊಂದಿಗಿರಿ ನಾವು ಕೈಜೋಡಿಸಿ ನಡೆಯೋಣ ” ಎನ್ನುವ ಸುಪ್ತ ಸಂದೇಶವೂ ಇದೆ. ಇಲ್ಲಿ ಕೈಜೋಡಿಸಿ ಹೆಜ್ಜೆ ಇಕ್ಕುವ ಮನಸುಗಳು ಹೃದಯಾಂತರಾಳದಲ್ಲಿ ಪರಿವರ್ತನೆಯತ್ತ ಸಾಗುತ್ತಿವೆಯೇ ಎಂದು ನೋಡಿದಾಗ ಶ್ರೇಷ್ಠತೆಯ ಅಹಮಿಕೆ ಧುತ್ತೆಂದು ಎದುರಾಗುತ್ತದೆ. ಹಾಗಾಗಿಯೇ ಪೇಜಾವರರ ಶಿಷ್ಯವೃಂದ ಇಫ್ತಾರ್ ಪ್ರಹಸನವನ್ನು ವಿರೋಧಿಸಿದ ಕೂಡಲೇ ಪೇಜಾವರರು ಇಫ್ತಾರ್ ನಡೆದದ್ದು ಉಡುಪಿ ಮಠದ ಹೊರಾಂಗಣದಲ್ಲೇ ಹೊರತು, ಒಳಗಡೆ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಅಂದರೆ ತಮ್ಮ ಗರ್ಭಗುಡಿಯ ಸಂಸ್ಕøತಿ ಸುರಕ್ಷಿತವಾಗಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.

ಈ ಗರ್ಭಗುಡಿಯ ಸಂಸ್ಕøತಿಯಲ್ಲಿ ಪ್ರತ್ಯೇಕತೆ, ಅಸ್ಪøಶ್ಯತೆ ಮತ್ತು ಪರಕೀಯತೆಯ ಭಾವ ಶಾಶ್ವತವಾಗಿ ನೆಲೆಯೂರಿದೆ. “ ಮುಸ್ಲಿಮರು ಮಾತ್ರ ಗೋಮಾಂಸ ಸೇವಿಸುವುದಿಲ್ಲ ಹಿಂದೂಗಳೂ ಸೇವಿಸುತ್ತಾರೆ ” ಎಂಬ ಔದಾರ್ಯದ ಮಾತುಗಳು ಪೇಜಾವರರಿಂದ ಹೊರಬಿದ್ದಿವೆ. ಇದು ನಿಜ. ಹಾಗೆಯೇ ಗೋಮಾಂಸ ಸೇವಿಸುವ ಮುಸ್ಲಿಮರಂತೆಯೇ ಹಿಂದೂಗಳಿಗೂ ತಮ್ಮ ಗರ್ಭಗುಡಿಯೊಳಗೆ ಪ್ರವೇಶವಿಲ್ಲ ಎನ್ನುವುದನ್ನೂ ಪೇಜಾವರರು ಸೂಕ್ಷ್ಮವಾಗಿ ಪುನರುಚ್ಛರಿಸಿದ್ದಾರೆ. ಈ ಶ್ರೇóಷ್ಠತೆಯ ಅಹಂಭಾವದಿಂದ ಪೇಜಾವರರಾಗಲೀ ಅವರ ವೈದಿಕ ಪರಂಪರೆಯಾಗಲೀ ಅಥವಾ ಅವರೇ ಬಿತ್ತ ಬೀಜಗಳಿಂದ ವಿಷವೃಕ್ಷಗಳಾಗಿ ಬೆಳೆದಿರುವ ಶ್ರೀರಾಮಸೇನೆಯಂತಹ ವಿಕೃತ ಮತೀಯರಾಗಲಿ ಹೊರಬರುವುದು ಸಾಧ್ಯವೇ ಇಲ್ಲ. ಆದರೆ ತಮ್ಮ ಪಾರಂಪರಿಕ ಅಹಮಿಕೆ ಮತ್ತು ಶ್ರೇಷ್ಠತೆಯ ಭೂಮಿಕೆಯನ್ನು ಸಂರಕ್ಷಿಸುತ್ತಲೇ ಮುಸ್ಲಿಂ ಸಮುದಾಯವನ್ನು ಆಲಂಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆಲಿಂಗನ ಸ್ವಾರ್ಥತೆಯಿಂದ ಕೂಡಿರುತ್ತದೆ. ಅಪ್ಪುಗೆಯ ಹಿಂದೆ ಮಾನವೀಯ ಪ್ರೀತಿ ಇರುತ್ತದೆ. ಭಾರತದ ಶ್ರೇಣೀಕೃತ ಸಮಾಜಕ್ಕೆ ಬೇಕಿರುವುದು ಹೃತ್ಪೂರ್ವಕ ಆತ್ಮೀಯ ಅಪ್ಪುಗೆ. ಅದು ಪೇಜಾವರರಿಂದ ಸಾಧ್ಯವೇ ಇಲ್ಲ.

ಆದರೆ ಇದು ಜನಸಾಮಾನ್ಯರ ನೆಲೆಯಲ್ಲಿ ಸಾಧ್ಯ ಎನ್ನುವುದನ್ನು ಸಹಭೋಜನ ಪರಿಕಲ್ಪನೆಯ ಮತ್ತೊಂದು ಆಯಾಮದ ಮೂಲಕ ನೋಡಬಹುದು. ಅಸ್ಮಿತೆ ಮಾನವ ಸಮಾಜವನ್ನು ಶತಮಾನಗಳಿಂದಲೂ ಹಿಂಬಾಲಿಸಿರುವ ಭೂತ. ಇದು ಅಪರಾಧವೇನೂ ಅಲ್ಲ. ಆದರೆ ಅಸ್ಮಿತೆಯ ಸಂರಕ್ಷಣೆಗಾಗಿ ತಮ್ಮವರ್ಲಲದವರ ಅಸ್ಮಿತೆಯನ್ನೇ ಧ್ವಂಸ ಮಾಡುವ ಮನೋಭಾವ ಮಾನವೀಯ ಮೌಲ್ಯಗಳಿಗೆ ನಿಲುಕುವಂತಹುದಲ್ಲ. ಮೂರು ದಶಕಗಳ ಕಾಲ ಈ ಧ್ವಂಸ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ದುಡಿದು ಈಗ ಒಡೆದ ಕನ್ನಡಿಯನ್ನು ಒಂದಾಗಿಸುವ ಪ್ರಯತ್ನ ಮಾಡುತ್ತಿರುವ ಪೇಜಾವರರು ಮತ್ತಾರಿಗೂ ಉತ್ತರಿಸಬೇಕಿಲ್ಲ. ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡರೆ ಸಾಕು. ಶ್ರೀರಾಮಸೇನೆಯ ಕಾರ್ಯಕರ್ತರ ಆಕ್ರೋಶದ ಮಾತುಗಳಲ್ಲಿ ಈ ನೋವನ್ನು ಕಾಣಬಹುದು. 1980ರ ದಶಕದ ಸೋಮನಾಥ ರಥಯಾತ್ರೆಯ ಸಂದರ್ಭದಲ್ಲಿ ಪಟಾಕಿಯ ಸರ ಸ್ಫೋಟಿಸುವಂತೆ ದೇಶದ ಉದ್ದಗಲಕ್ಕೆ ಸ್ಫೋಟಿಸಿದ ಕೋಮು ಗಲಭೆಗಳಿಗೆ ಕಾರಣರಾರು ಎಂಬ ಪ್ರಶ್ನೆ ಎದುರಾದಾಗ ಶ್ರೀರಾಮಸೇನೆಯ ಕಾರ್ಯಕರ್ತರ ಆಕ್ರೋಶ ಅರಿವಾಗುತ್ತದೆ.

ಆತಿಥ್ಯ ನೀಡಿದವರೆಲ್ಲರೂ ಆತ್ಮೀಯರಾಗುವುದಿಲ್ಲ ಎಂದು ಇತಿಹಾಸವೇ ನಿರೂಪಿಸಿದೆ. ಇದು ವ್ಯಕ್ತಿಗತ ನೆಲೆಯಲ್ಲಿ ಎಷ್ಟು ಸತ್ಯವೋ ಸಾಮುದಾಯಕ ನೆಲೆಯಲ್ಲೂ ಅಷ್ಟೇ ಸತ್ಯ. ಮಾನವ ಸಂಬಂಧಗಳನ್ನು ಬೆಸೆಯಲು ಬೇಕಿರುವುದು ಸಹಬಾಳ್ವೆಯ ಮನೋಭಾವ ಮತ್ತು ಸಹಜೀವನದ ಸಂವೇದನೆಯೇ ಹೊರತು ಸಹಭೋಜನವಲ್ಲ. ಸಹಭೋಜನ ಸಾಮುದಾಯಿಕ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಸಂರಕ್ಷಿಸುವ ಒಂದು ಸಾಧನವಾದಾಗ ಕ್ಲೀಷೆ ಎನಿಸಿಬಿಡುತ್ತದೆ. ಭಾರತೀಯ ಸಮಾಜದಲ್ಲಿ ಎಷ್ಟೇ ಜಾತಿತಾರತಮ್ಯಗಳಿದ್ದರೂ, ಜಾತಿ ಆಧಾರಿತ ದೌರ್ಜನ್ಯ ನಡೆಯುತ್ತಿದ್ದರೂ, ಎಷ್ಟೇ ಕ್ರೌರ್ಯ ದಬ್ಬಾಳಿಕೆ ಬೇರೂರಿದ್ದರೂ ಜನಸಾಮಾನ್ಯರ ನೆಲೆಯಲ್ಲಿ ಸರಳ ಸೌಹಾರ್ದತೆ ಮನೆ ಮಾಡಿದೆ. ಇದಕ್ಕೆ ಕಾರಣ ಪೇಜಾವರಂತಹ ಯತಿಗಳೂ ಅಲ್ಲ, ಅಡ್ವಾಣಿಯಂತಹ ರಾಜಕಾರಣಿಯೂ ಅಲ್ಲ. ಇದು ಭಾರತೀಯ ಸಂಸ್ಕøತಿಯಿಂದ ಬಂದಿರುವ ಪರಂಪರಾನುಗತ ಮನೋಭಾವ. ಯಾವ ಇಫ್ತಾರ್ ಕೂಟವೂ ಇಲ್ಲದೆ ಹಿಂದೂ ಮುಸ್ಲಿಮರು ಒಂದಾಗಿ ಬಾಳಿದ್ದಾರೆ, ಬಾಳುತ್ತಿದ್ದಾರೆ.

ತಮ್ಮ ರಾಜಕೀಯ ಅಧಿಕಾರ ಲಾಲಸೆಗಾಗಿ ಈ ಐಕ್ಯತೆಯನ್ನು , ಭ್ರಾತೃತ್ವವನ್ನು ಧ್ವಂಸ ಮಾಡಿದ ಶ್ರೇಯ ಈ ದೇಶದ ರಾಜಕಾರಣಿಗಳಿಗೆ, ಧಾರ್ಮಿಕ ಅಧಿಪತಿಗಳಿಗೆ, ಕೆಲವು ಮಠಾಧೀಶರುಗಳಿಗೆ ಸಲ್ಲುತ್ತದೆ. ತಮ್ಮ ಬೆವರು ಸುರಿಸಿ ದುಡಿದರೆ ಮಾತ್ರ ನಾಳಿನ ಕೂಳು ಸಂಪಾದಿಸುವ ದೇಶದ 70ಕ್ಕೂ ಹೆಚ್ಚು ಜನರಿಗೆ ದ್ವೇಷದ ಅಮಲು ಹೆಚ್ಚಾಗಿದ್ದು ಸೆಕ್ಯುಲರ್ ಎನ್ನಲಾಗುವ ಮತಪೆಟ್ಟಿಗೆಗಳಿಂದ, ಕೋಮು ದ್ವೇಷದ ಇಟ್ಟಿಗೆಗಳಿಂದ. ಮೂವತ್ತು ವರ್ಷಗಳ ಹಿಂದೆ ಈ ಇಟ್ಟಿಗೆಗಳಲ್ಲಿ ಭವಿಷ್ಯ ಹಿಂದೂ ರಾಷ್ಟ್ರದ ಕನಸು ಕಂಡಿದ್ದ ಪೇಜಾವರರಿಗೆ ಹಠಾತ್ತನೆ ಸಹಭೋಜನದ ನೆನಪಾದದ್ದಾದರೂ ಏಕೆ ? ರಥಯಾತ್ರೆಯ ಸಂದರ್ಭದಲ್ಲಿ, ಮಂಗಳೂರಿನಲ್ಲಿ ಹಿಂದುತ್ವವಾದಿಗಳ ತಾಂಡವನೃತ್ಯದ ಸಂದರ್ಭದಲ್ಲಿ, ದಾದ್ರಿ , ಊನ ನಡೆದ ಸಂದರ್ಭದಲ್ಲಿ, ಚರ್ಚ್ ಮೇಲಿನ ದಾಳಿ ನಡೆದ ಸಂದರ್ಭದಲ್ಲಿ ಪೇಜಾವರರ ಔದಾರ್ಯ, ಮುತ್ಸದ್ಧಿತನ ಮತ್ತು ಪರಧರ್ಮ ಸಹಿಷ್ಣುತೆ ಸತ್ತುಹೋಗಿತ್ತೇ ಅಥವಾ ಪ್ರಜ್ಞಾಪೂರ್ವಕವಾಗಿ ಸುಪ್ತವಾಗಿತ್ತೇ ?
ತಮ್ಮ ನಿತ್ಯ ಭೋಜನದಲ್ಲಿ ಸೋದರ ವಾತ್ಸಲ್ಯದ ಸವಿಯನ್ನು ಅನುಭವಿಸುವ ಜನಸಮುದಾಯಗಳ ನಡುವೆ ದ್ವೇಷದ ಗೋಡೆಗಳ ನಿರ್ಮಾಣ ಮಾಡುತ್ತಿದ್ದ ವಿಕೃತ ಮನಸುಗಳಿಗೆ ಭ್ರಾತೃತ್ವದ ಸಂದೇಶವನ್ನು ನೀಡಲೂ ಒಲ್ಲದ ಮನಸ್ಸು ಈಗ ವಿಶ್ವ ಭ್ರಾತೃತ್ವದ ಸೋಗು ಹಾಕುತ್ತಿರುವುದು ಈ ದೇಶದ ಕ್ಷುದ್ರ ರಾಜಕಾರಣದ ಮತ್ತೊಂದು ಮುಖವಾಡವನ್ನು ಪರಿಚಯಿಸುತ್ತಿದೆ. ರಾಜಕೀಯ ಪಕ್ಷಗಳು, ಮತೀಯ ಸಂಘಟನೆಗಳು, ಕೋಮುವಾದಿ ಮನಸುಗಳು ಮತ್ತು ದ್ವೇಷದ ಬೀಜ ಬಿತ್ತುವ ವಿಕೃತಿಗಳು ಜನಸಾಮಾನ್ಯರ ಖಾಸಗಿ ಜೀವನದಲ್ಲಿ ಪ್ರವೇಶಿಸದೆ ಇದ್ದರೆ ಸಾಕು , ಯಾವುದೇ ಇಫ್ತಾರ್ ಕೂಟ, ದಲಿತ ಕೇರಿಯ ಪಾದಯಾತ್ರೆ ಅವಶ್ಯಕತೆ ಇರುವುದಿಲ್ಲ. ನೂರಾರು ವರ್ಷಗಳ ಕಾಲ ಭ್ರಾತೃತ್ವ , ಸೌಹಾರ್ದತೆ ಮತ್ತು ಸೋದರ ಭಾವದ ಕೇಂದ್ರ ಬಿಂದುಗಳಾಗಿದ್ದ ಬಾಬ್ರಿ ಮಸೀದಿ, ಬಾಬಾ ಬುಡನ್‍ಗಿರಿ ಕೋಮು ದ್ವೇಷದ ಯಜ್ಞ ಕುಂಡಗಳಾಗಿದ್ದು ಈ ವಿಕೃತ ಮನಸುಗಳಿಂದಲೇ ಅಲ್ಲವೇ ? ಪೇಜಾವರರೂ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ.

ಭಾರತವನ್ನು ಇಂದು ಬಾಧಿಸುತ್ತಿರುವುದು ಕೋಮುವಾದ ಅಥವಾ ಮತೀಯವಾದ ಅಲ್ಲ. ಮಾನವೀಯತೆಯ ಕೊರತೆ. ಮನುಷ್ಯ ಮನುಷ್ಯರ ನಡುವೆ ಗೋಡೆಗಳು ಸತತವಾಗಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ಹಿಂಸೆ ನಿತ್ಯ ಜೀವನದ ನಿತ್ಯ ಕಾಯಕವಾಗುತ್ತಿದೆ. “ ನಾ ಹೇಳಿದಂತೆ ನಡೆ ಇಲ್ಲವಾದಲ್ಲಿ ನಿರ್ಗಮಿಸು ” ಎನ್ನುವ ಧೋರಣೆ ಎಲ್ಲ ಸಮುದಾಯಗಳಲ್ಲೂ ವ್ಯಾಪಕವಾಗುತ್ತಿದೆ. ಹಿಂಸೆಯನ್ನು ಆತ್ಮ ರಕ್ಷಣೆಯ ಅಸ್ತ್ರ ಎಂದು ಭಾವಿಸುವ ಮನಸುಗಳು ಒಂದೆಡೆಯಾದರೆ ಪ್ರತಿರೋಧದ ದನಿಯನ್ನು ಅಡಗಿಸಲು ಹಿಂಸೆಯೊಂದೇ ಮಾರ್ಗ ಎನ್ನುವ ವಿಕೃತ ಮನಸುಗಳು ಮತ್ತೊಂದೆಡೆ ನಮ್ಮನ್ನು ಆವರಿಸುತ್ತಿದೆ. ಜಾಗತಿಕ ಭಯೋತ್ಪಾದನೆಯ ನೆರಳನ್ನು ಹಿಂಬಾಲಿಸುತ್ತಿರುವ ನಾವು ನಮ್ಮೊಳಗೇ ಇರುವ ಭೌದ್ಧಿಕ ಭಯೋತ್ಪಾದನೆಯನ್ನು ನೇಪಥ್ಯಕ್ಕೆ ಸರಿಸುತ್ತಿದ್ದೇವೆ. ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡುವ ಯುವಕರು, ಮಾಂಸದ ತುಂಡಿಗಾಗಿ ಅಮಾಯಕರನ್ನು ಕೊಲೆ ಮಾಡುವ ಸಂಸ್ಕøತಿ ರಕ್ಷಕರು, ಕಾಶ್ಮೀರದಲ್ಲಿ ಕಲ್ಲೆಸೆಯುವ ಪ್ರತಿಭಟನಕಾರರು, ಊನ ಗ್ರಾಮದಲ್ಲಿ ದಲಿತರ ಮಾರಣ ಹೋಮ ಮಾಡುವ ಹಿಂದುತ್ವವಾದಿಗಳು ನಮ್ಮ ಕಣ್ಣಿಗೆ ಕೇವಲ ಆತ್ಮರಕ್ಷಣೆಯ ಪಡೆಗಳಂತೆ ಕಾಣುವುದಾದರೆ ಬಹುಶಃ ನಾವು ಭಯೋತ್ಪಾದನೆ ಮತ್ತು ಹಿಂಸೆಯನ್ನು ಅಂತರ್ಗತ ಮಾಡಿಕೊಂಡಿದ್ದೇವೆ ಎಂದೇ ಹೇಳಬೇಕಾಗುತ್ತದೆ.

ಈ ಹಿಂಸಾತ್ಮಕ ಮನಸುಗಳೇ ಇಂದು ಪೇಜಾವರರ ವಿರುದ್ಧವೂ ಕೂಗಾಡುತ್ತಿವೆ. ಆದರೆ ಈ ಅಯೋಧ್ಯೆಯ ಕೂಸುಗಳು ಪ್ರವರ್ಧಮಾನಕ್ಕೆ ಬರಲು ಪೇಜಾವರರೂ ಕಾರಣ ಅಲ್ಲವೇ ? ಈ ಆತ್ಮಸಾಕ್ಷಿಯ ಪ್ರಜ್ಞೆ ಯತಿಗಳಿಗೆ ಇರಬೇಕಾಗುತ್ತದೆ. ಸನ್ಯಾಸತ್ವದ ಚೌಕಟ್ಟಿನಲ್ಲೇ ಸಾಂಸ್ಕøತಿಕ ರಾಜಕಾರಣದ ವಿಕೃತಿಗಳನ್ನು ಪ್ರೇರೇಪಿಸುತ್ತಾ ನಡೆದುಬಂದಿರುವ ಯತಿವರ್ಯರಿಗೆ ಇಂದು ಜ್ಞಾನೋದಯವಾಗಿದೆ ಎಂದು ಹೇಳುವುದಕ್ಕಿಂತಲೂ ರಾಜಕೀಯ ಅನಿವಾರ್ಯತೆಗಳು ಯತಿಗಳ ಪಾದಗಳಿಗೆ ವಿಭಿನ್ನ ಮಾರ್ಗ ತೋರುತ್ತಿದೆ ಎಂದು ಹೇಳಬಹುದು. ಇಫ್ತಾರ್ ಕೂಟ ಇಂತಹ ರಾಜಕೀಯ ನಡೆಯ ಒಂದು ಆಯಾಮವಾಗಿ ತೋರುತ್ತದೆ. ಮುಸ್ಲಿಂ ಸಮುದಾಯವನ್ನು “ ನಮ್ಮವರೆಂದು ” ಒಪ್ಪಿಕೊಳ್ಳಿ ಎಂಬ ಸಂದೇಶವೇ ಈ ದೇಶದ ಕ್ಷುದ್ರ ರಾಜಕಾರಣ ಸೃಷ್ಟಿಸಿರುವ ಬೃಹತ್ ಕಂದಕಗಳನ್ನು ಬಿಂಬಿಸುತ್ತದೆ. ಇಲ್ಲಿ ಗೋಮಾಂಸ ಒಂದು ನೆಪಮಾತ್ರ . ತಾವೇ ಸೃಷ್ಟಿಸಿದ ಸುಳಿಯಲ್ಲಿ ಸಿಲುಕಿ ಈಗ ಹೊರಬರಲು ಯತ್ನಿಸುತ್ತಿರುವ ಪೇಜಾವರರಿಗೆ ಈ ಕಂದಕಗಳನ್ನು ಮುಚ್ಚುವ ಸಾಮಥ್ರ್ಯ ಅಥವಾ ಮನೋಭಾವ ಇರಲು ಸಾಧ್ಯವೇ ? ಸಾಧ್ಯವಾಗುವುದೇ ಆದಲ್ಲಿ ಅದು ದಲಿತ ಕೇರಿಯ ಪಾದಯಾತ್ರೆ, ಇಫ್ತಾರ್ ಕೂಟಗಳಿಂದ ಸಾಧ್ಯವಿಲ್ಲ. ಮನಸು ಹೃದಯಗಳನ್ನು ಬೆಸೆಯುವುದರಿಂದ ಸಾಧ್ಯ.

ಈ ಬೆಸೆಯುವ ಕ್ರಿಯೆಗೆ ಬೇಕಿರುವುದು ಸಂವೇದನೆ ಮತ್ತು ಸಹಬಾಳ್ವೆಯ ಮನೋಭಾವ. ಶ್ರೇಷ್ಠತೆ, ಪರಿಶುದ್ಧತೆ, ಮೇಲ್ಪಂಕ್ತಿಯ ಅಹಮಿಕೆ ಇವೆಲ್ಲವನ್ನೂ ತನ್ನೊಳಗೆ ಆವಾಹನೆ ಮಾಡಿಕೊಂಡಿರುವ ಭಾರತೀಯ ಸಮಾಜಕ್ಕೆ ಇಂದು ಮಾನವೀಯ ಸ್ಪರ್ಶ ಬೇಕಿದೆ. ಸಂವೇದನೆ ಬೇಕಿದೆ. ಜನಸಾಮಾನ್ಯರಲ್ಲಿ ಕಂಡುಬರುವ ಭ್ರಾತೃತ್ವದ ತುಡಿತಕ್ಕೆ ಮಿಡಿಯುವ ಹೃದಯಗಳು ಅವಶ್ಯವಾಗಿ ಬೇಕಿದೆ. ಈ ಹೃದಯ ಕವಾಟಗಲ್ಲಿ ಜಾತಿ, ಧರ್ಮ, ಭಾಷೆ, ಕೋಮು ಮತ್ತು ಪ್ರಾದೇಶಿಕ ಅಸ್ಮಿತೆಗಳ ದ್ವೇಷ ಬೀಜಗಳನ್ನು ಬಿತ್ತುವ ಪ್ರಕ್ರಿಯೆಗೆ ಅಂತ್ಯ ಹಾಡಬೇಕಿದೆ. ತಮ್ಮ ಬೆವರು ಸುರಿಸಿ ದುಡಿಯುವ ಶ್ರಮಜೀವಿಗಳಿಗೆ ಯಾವ ಆಧ್ಯಾತ್ಮವೂ ಬೇಕಿಲ್ಲ, ಯಾವ ಧರ್ಮ ದೀಕ್ಷೆಯೂ ಬೇಕಿಲ್ಲ ಎನ್ನುವ ಪರಮ ಸತ್ಯವನ್ನು ಪೇಜಾವರರು ಅರಿತರೆ ಒಳಿತು. ಈ ಶ್ರಮಜೀವಿಗಳಿಗೆ ಬೇಕಿರುವುದು ನಾಳಿನ ನೆಮ್ಮದಿ ಮತ್ತು ಒಪ್ಪತ್ತಿನ ಕೂಳು. ಈ ಕೂಳಿನ ಪ್ರತಿಯೊಂದು ಕಾಳಿನ ಮೇಲೆ ವ್ಯವಸ್ಥಿತವಾಗಿ ಮೂಡಿಸಲಾಗಿರುವ ಅಸ್ಮಿತೆಗಳ ಕುರುಹುಗಳನ್ನು , ದ್ವೇಷದ ಛಾಯೆಯನ್ನು ಅಳಿಸಿ ಹಾಕುವುದು ಮಾನವ ಸಮಾಜದ ಆದ್ಯತೆಯಾಗಬೇಕು. ಇದು ಸಾಧ್ಯವಾಗದಿದಲ್ಲಿ ಸಹಭೋಜನ ಅಥವಾ ಇಫ್ತಾರ್ ಸ್ವಾರ್ಥ ಸಾಧನೆಯ ಮತ್ತೊಂದು ಆಯಾಮವಾಗಿ ಪರಿಣಮಿಸುತ್ತದೆ. ಪೇಜಾವರರಂತಹ ಹಿರಿ ಜೀವಗಳು ಈ ವಿಕೃತಿಗೆ ಚಾರಿತ್ರಿಕ ಸಾಕ್ಷಿಯಾಗಿ ಪರ್ಯವಸಾನ ಹೊಂದುತ್ತಾರೆ.

Leave a Reply

Your email address will not be published.