ಸಮಾಜವಾದಿ ಚಳುವಳಿಯ ಮಹಾನ್‍ ಗುರು

-ಡಾ. ನಟರಾಜ್ ಹುಳಿಯಾರ್

mdnಇಪ್ಪತ್ತನೆಯ ಶತಮಾನದ ಅರವತ್ತು- ಎಪ್ಪತ್ತರ ದಶಕದಲ್ಲಿ ಎಂ.ಡಿ.ನಂಜುಂಡಸ್ವಾಮಿಯವರು ಕರ್ನಾಟಕದ ಸಮಾಜವಾದಿಗಳ ಪುಟ್ಟ ಬುದ್ಧಿಜೀವಿ ಗುಂಪಿನ ಗುರುವಾಗಿದ್ದರು. ಕಾನೂನು, ಸಮಾಜ, ಸಾಹಿತ್ಯ, ಕೃಷಿ, ಆರ್ಥಿಕತೆ ಎಲ್ಲದರ ಬಗ್ಗೆ ಖಚಿತ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದ ಎಂ.ಡಿ.ಎನ್ ಅವರ ಜೊತೆಗೆ ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರಂಥ ಸಮಕಾಲೀನ ಲೇಖಕರಿದ್ದರು. ಕೆ.ರಾಮದಾಸ್, ಬಿ.ಎಂ.ನಾಗರಾಜ್, ಪ. ಮಲ್ಲೇಶರಂಥ ಕ್ರಿಯಾಶಾಲಿ ಹೋರಾಟಗಾರರಿದ್ದರು. ಅಗ್ರಹಾರ ಕೃಷ್ಣಮೂರ್ತಿ, ಕಿ.ರಂ. ನಾಗರಾಜ್, ರವಿವರ್ಮಕುಮಾರ್, ಶೂದ್ರ ಶ್ರೀನಿವಾಸ್, ಡಿ.ಆರ್.ನಾಗರಾಜ್ ಥರದ ಅವರ ಮುಂದಿನ ತಲೆಮಾರಿನ ಚಿಂತಕರಿದ್ದರು. ರಾ.ನ.ವೆಂಕಟಸ್ವಾಮಿ, ಲಕ್ಷ್ಮೀಪತಿಬಾಬು ಥರದ ವಿದ್ಯಾರ್ಥಿಗಳಿದ್ದರು.

ಕರ್ನಾಟಕದಲ್ಲಿ ದಲಿತ ಚಳುವಳಿ ಆರಂಭವಾದ ಘಟ್ಟದಲ್ಲಿ ಎಂ.ಡಿ.ಎನ್ ಈ ದಲಿತ ಸಭೆಗಳ ಮುಖ್ಯ ಭಾಷಣಕಾರರಲ್ಲೊಬ್ಬರಾಗಿದ್ದರು. ಮಾಕ್ರ್ಸ್‍ವಾದವನ್ನು ಅಧ್ಯಯನ ಮಾಡಿದ ಮೇಲೆ ಭಾರತದ ಅಗತ್ಯಗಳಿಗೆ ತಕ್ಕ ಸಮಾಜವಾದವನ್ನು ರೂಪಿಸಬೇಕೆಂದು ಪ್ರಯತ್ನಿಸಿದ ಲೋಹಿಯಾ ರೀತಿಯಲ್ಲಿಯೇ ಎಂ.ಡಿ.ಎನ್ ಕೂಡ ಚಿಂತಿಸಿದರು. ಕರ್ನಾಟಕದ ಸಮಾಜವಾದಿ ಚಳುವಳಿ, ವಿಚಾರವಾದಿ ಚಳುವಳಿ, ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯ ಪ್ರಶ್ನೆ, ದಲಿತ ಚಳುವಳಿ ಈ ಎಲ್ಲ ಸಂದರ್ಭಗಳಲ್ಲೂ ಎಂ.ಡಿ.ಎನ್ ಮುಖ್ಯ ತಾತ್ವಿಕ ಪ್ರೇರಣೆಗಳನ್ನು ನೀಡುತ್ತಾ ಬಂದರು. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸುವ ಸೇನಾನಿಯಾಗಿಯೂ ಕ್ರಿಯಾಶೀಲರಾಗಿದ್ದ ಅವರು ಸ್ವಾತಂತ್ರ್ಯೋತ್ತರ ಕರ್ನಾಟಕದ ಶ್ರೇಷ್ಠ ಆ್ಯಕ್ಟಿವಿಸ್ಟ್-ಚಿಂತಕರೆಂದರೆ ಉತ್ಪೇಕ್ಷೆಯಾಗಲಾರದು.

ಸುಮಾರು ಹತ್ತು, ಹದಿನೈದು ವರ್ಷಗಳ ಕಾಲ ಕೇವಲ ಬೆರಳೆಣಿಕೆಯಷ್ಟು ಬದ್ಧ ವ್ಯಕ್ತಿಗಳನ್ನು ಜೊತೆಗಿಟ್ಟುಕೊಂಡು ಸಮಾಜವಾದಿ ವೈಚಾರಿಕ ಚಿಂತನೆ ಹಾಗೂ ಹೋರಾಟಗಳ ಹಾದಿಗಳನ್ನು ತೆರೆಯಲು ನೆರವಾದ ಎಂ.ಡಿ.ಎನ್ ಎಂಬತ್ತರ ದಶಕದಲ್ಲಿ ಇಂಡಿಯಾದಲ್ಲೇ ವಿಶಿಷ್ಟವಾದ ರೈತ ಚಳುವಳಿಯನ್ನು ರೂಪಿಸಿದರು. 1965ರಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಲೆವಿ ಧಾನ್ಯ ಕೊಡಲು ನಿರಾಕರಿಸುವ ಮೂಲಕ ಏಕವ್ಯಕ್ತಿ ಚಳುವಳಿಯಾಗಿ ಶುರುವಾಗಿದ್ದ ಅವರ ಕೃಷಿ ಹೋರಾಟ ಬರಬರುತ್ತಾ ವ್ಯಾಪಕ ಸ್ವರೂಪ ಪಡೆಯತೊಡಗಿತು. ಗಾಂಧೀವಾದ ಹಾಗೂ ಲೋಹಿಯಾವಾದಗಳು ಕರ್ನಾಟಕದ ರೈತ ಚಳುವಳಿಯಲ್ಲಿ ಮರುಹುಟ್ಟು ಪಡೆದವು. ತನ್ನ ಪಾಡಿಗೆ ತಾನು ಉಳುವ, ಬೆಳೆವ ಕಾಯಕದಲ್ಲಿ ಮುಳುಗಿ ಸೊರಗಿದ ಪ್ರತಿ ರೈತನಲ್ಲೂ ವ್ಯವಸ್ಥೆಯನ್ನು ಎದುರಿಸಬಲ್ಲ ಚೈತನ್ಯವಿರುವುದನ್ನು ಎಂ.ಡಿ.ಎನ್ ನಾಡಿಗೆ ತೋರಿಸಿದರು.

‘ನಾಗರಿಕ ಅಸಹಕಾರ’

 

ಇದು ಗಾಂಧೀಜಿಯಿಂದ ಅವರು ಕಲಿತ ಪಾಠ. ಗಾಂಧೀಜಿ ರೂಪಿಸಿದ ‘ನಾಗರಿಕ ಅಸಹಕಾರ’, ‘ನಾಗರಿಕ ಅವಿಧೇಯತೆ’ ಹಾಗೂ ‘ಕರ ನಿರಾಕರಣೆ’ಯ ಅಸ್ತ್ರಗಳನ್ನು ಅವರು ಮರುರೂಪಿಸಿದರು. ಅದರ ಜೊತೆಗೇ ‘ಯಾವುದೇ ಬದಲಾವಣೆಯ ಹೋರಾಟ ಒಂದು ಸಮಾಜದ ದೇಹ ಹಾಗೂ ಮನಸ್ಸುಗಳೆರಡಕ್ಕೂ ಸಂಬಂಧಿಸಿದ್ದಾಗಿರಬೇಕು’ ಎಂದು ಅವರು ನಂಬಿದ್ದರು. ಒಂದು ಚಳುವಳಿಯನ್ನು ರೂಪಿಸುವುದೆಂದರೆ ಅದರಲ್ಲಿ ಭಾಗಿಯಾಗುವ ತರುಣ, ತರುಣಿಯರನ್ನಾದರೂ ಹಲಬಗೆಯ ಅಸಮಾನತೆಗಳ ಮನಸ್ಥಿತಿಯಿಂದ ಹೊರತರುವುದು ಎಂಬ ಬಗ್ಗೆ ಕೂಡ ಎಂ.ಡಿ.ಎನ್ ಖಚಿತವಾಗಿದ್ದರು; ಇವತ್ತು ರೈತ ಚಳುವಳಿಯ ಹೊಸ ಪೀಳಿಗೆಯ ನಾಯಕರಲ್ಲಿ ಕೂಡ ಈ ಜಾತ್ಯತೀತ ಕೂಡ ಕಾರಣ. ಇದು ಲೋಹಿಯಾವಾದದಿಂದ ರೈತಚಳುವಳಿ ಕಲಿತ ಪಾಠವೂ ಹೌದು. ಆದರೆ ಒಂದು ವಿಶಾಲ ಜನತಾ ಚಳುವಳಿಯನ್ನು ದೀರ್ಘಕಾಲದವರೆಗೆ ರೂಪಿಸುವ ವಿಚಾರದಲ್ಲಿ ಲೋಹಿಯಾಗಿಂತ ಎಂ.ಡಿ.ಎನ್ ಮುಂದೆ ಹೋದರೆಂಬುದನ್ನು ಆಧುನಿಕ ಭಾರತದ ಚಳುವಳಿಗಳ ಇತಿಹಾಸ ಬರೆಯುವವರು ದಾಖಲಿಸಬೇಕಾಗುತ್ತದೆ. ರೈತಸಂಘದಲ್ಲಿ ಎಷ್ಟೇ ಒಡಕುಗಳಿರಲಿ, ಸುಮಾರು ಇಪ್ಪತ್ತೈದು ವರ್ಷಗಳ ಕಾಲ ರೈತರ ಹಕ್ಕುಗಳ ಪ್ರತಿಪಾದನೆಯ ಚಳುವಳಿಯಾಗಿ ಈ ಚಳುವಳಿ ವಿವಿಧ ರೂಪದಲ್ಲಿ ಬೆಳೆಯುತ್ತಲೇ ಬಂದಿದೆ. ಇದು ಸ್ವಾತಂತ್ರ್ಯೋತ್ತರ ಇಂಡಿಯಾದ ಮಹತ್ ಸಾಧನೆಗಳಲ್ಲಿ ಒಂದು.

ಈ ಸಾಧನೆಗೆ ನಂಜುಂಡಸ್ವಾಮಿಯವರಲ್ಲಿದ್ದ ವಿಚಿತ್ರ ಜಿಗುಟುತನ, ಅದರಲ್ಲೂ ಪಟ್ಟು ಹಿಡಿದು ಮುಂದೆ ಸಾಗುವ ಜಿಗುಟುತನ ಕೂಡ ಒಂದು ಮುಖ್ಯ ಕಾರಣವಾಗಿತ್ತು. ನಂಜುಂಡಸ್ವಾಮಿಯವರು ಹೇಳಿದರೆ ವಿಧಾನಸಭೆಯೊಳಗೆ ನುಗ್ಗಿ ಕರಪತ್ರ ಎಸೆಯುವ ಶಿಷ್ಯರಿದ್ದರು. ಜೈಲು ತುಂಬಲು ಮುನ್ನುಗ್ಗುವ ರೈತ ತರುಣರಿದ್ದರು. ಯಾರ ಕಾಸನ್ನೂ ಬೇಡದೆ ಬುತ್ತಿ ಕಟ್ಟಿಕೊಂಡು ಜಾಥಾಗಳಿಗೆ ಬರುವ ಲಕ್ಷಾಂತರ ರೈತರಿದ್ದರು. ಕೊಬ್ಬಿದ ಪೊಲೀಸ್ ಅಧಿಕಾರಿಗಳಿಗೆ ಬಾಯಿ ಮುಚ್ಚಿಕೊಂಡಿರುವಂತೆ ಹೇಳುವ ತಾಕತ್ತು ನಂಜುಂಡಸ್ವಾಮಿಯವರಿಗಿತ್ತು. ಬೇಜವಾಬ್ದಾರಿಯಿಂದ ಮಾತಾಡುವ ಪತ್ರಕರ್ತರ, ಅರೆಬುದ್ಧಿಜೀವಿಗಳ ಆವುಟಗಳಿಗೆ ಸೊಪ್ಪು ಹಾಕದೆ, ತಮ್ಮ ಹೋರಾಟಗಳ ಹಾದಿಯಲ್ಲಿ ಮುಂದುವರಿದ ಎಂ.ಡಿ.ಎನ್‍ಗೆ ಪ್ರಚಾರದ ಹಂಗಿಲ್ಲದೆ ಜನರ ಚಳುವಳಿಯನ್ನು ಕಟ್ಟಬಲ್ಲ ತಾತ್ವಿಕತೆ, ಆತ್ಮವಿಶ್ವಾಸ, ಸಿದ್ಧತೆ ಹಾಗೂ ಕಾರ್ಯಯೋಜನೆ ಇತ್ತು. ತಾವು ಓದಿ ಅರಗಿಸಿಕೊಂಡ ಅರ್ಥಶಾಸ್ತ್ರ, ಕಾನೂನು, ಸಾಮಾಜಿಕ ಚಿಂತನೆಗಳು, ಭಾರತದ ವಿವಿಧ ರಾಜಕೀಯ ವರಸೆಗಳು, ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆಯ ಶಕ್ತಿಗಳ ಹುನ್ನಾರ, ಕೃಷಿ ಪದ್ಧತಿಗಳು ಇವೆಲ್ಲವನ್ನೂ ಅವರು ತಿಳಿಗನ್ನಡದಲ್ಲಿ ಎಲ್ಲರಿಗೂ ತಲುಪಿಸುತ್ತಿದ್ದರು. ‘ಮಾನವ’ ‘ನಮ್ಮ ನಾಡು’ ಪತ್ರಿಕೆಗಳನ್ನು ಕೆಲಕಾಲ ಪ್ರಕಟಿಸಿದರೂ ಎಂ.ಡಿ.ಎನ್ ಮಾತಿನ ಶಕ್ತಿಯನ್ನು ಅಪಾರವಾಗಿ ನಂಬಿದ್ದರು. ಅವರು ಶಾಸಕರಾಗಿದ್ದಾಗ ಅವರ ನಿಲುವುಗಳನ್ನು ಒಪ್ಪದ ವೃತ್ತಿ ರಾಜಕಾರಣಿಗಳು ಕೂಡ ವಿಧಾನಸಭೆಯಲ್ಲಿ ಅವರ ಮಾತುಗಳನ್ನು ವಿಧೇಯ ವಿದ್ಯಾರ್ಥಿಗಳಂತೆ ಕೇಳಿಸಿಕೊಳ್ಳುತ್ತಿದ್ದರಂತೆ.

krrsರೈತರಿಗೆ ಹಾಗೂ ಇನ್ನಿತರ ಸಮುದಾಯಗಳಿಗೆ ಒಂದು ವ್ಯವಸ್ಥೆ ಹಾಗೂ ಆ ವ್ಯವಸ್ಥೆಯನ್ನು ಪೋಷಿಸುವ ಪ್ರಭುತ್ವ ಹಾಗೂ ಯಜಮಾನೀ ಶಕ್ತಿಗಳು ತಂದೊಡ್ಡುವ ಅಪಾಯಗಳ ಬಗ್ಗೆ, ಜಗತ್ತಿನ ಹಲಬಗೆಯ ಅಪಾಯಕಾರಿ ಶಕ್ತಿಗಳ ಬಗ್ಗೆ, ಜನಸಾಮಾನ್ಯರ ಶೋಷಣೆಯ ಮೂಲಗಳ ಬಗ್ಗೆ ಅಧ್ಯಯನ ಮಾಡುತ್ತಾ, ಅದಕ್ಕೆ ಪರಿಹಾರಗಳನ್ನು ಹುಡುಕುತ್ತಾ ಬೆಳೆದ ಚಿಂತನಾಕ್ರಮ ಎಂ.ಡಿ.ಎನ್ ಅವರದು. ದಿನನಿತ್ಯದ ಶೋಷಣೆ, ಅನ್ಯಾಯಗಳ ಹಿಂದಿರುವ ಮಾರುಕಟ್ಟೆಯ ಕೈವಾಡವನ್ನು ಅವರು ರೈತರಿಗೆ ಸರಳವಾಗಿ ಹೇಳಲೆತ್ನಿಸಿದರು. ರೈತಸಭೆಗಳಲ್ಲಿ ಮಾತಾಡುವಾಗ, ದಿನನಿತ್ಯದ ವಸ್ತುಗಳ ಬೆಲೆಗಳ ಬಗ್ಗೆ ಹಳ್ಳಿಯ ಮಹಿಳೆಯರಿಗೆ ಪ್ರಶ್ನೆ ಹಾಕಿ ಅವರಿಂದ ಉತ್ತರ ಹೊರಡಿಸುತ್ತಿದ್ದರು:

‘ಬಟ್ಟೆ ಒಗೆಯೋ ಸೋಪಿಗೆ ಎಷ್ಟು ಬೆಲೆ ತಾಯಿ?’

‘ಐದು ರೂಪಾಯಿ’

‘ಅದಕ್ಕೆ ಖರ್ಚಾಗೋದು ಎಷ್ಟು ಗೊತ್ತ? ಎಪ್ಪತ್ತು ಪೈಸೆ. ಹಂಗಾದರೆ ಸೋಪು ಮಾಡೋನಿಗ್ಯಾಕೆ ಐದು ರೂಪಾಯಿ ಬೆಲೆ ಇಟ್ಕೊಳ್ಳೋ ಸ್ವಾತಂತ್ರ್ಯ ಇದೆ? ನಮ್ಮ ರೈತನಿಗ್ಯಾಕಿಲ್ಲ? ಅವನು ಬೆಳೆದ ರಾಗಿಗೆ ಸರ್ಕಾರ ಯಾಕೆ ಬೆಲೆ ನಿಗದಿ ಮಾಡುತ್ತೆ?’

…ಹೀಗೆ ಸಭೆಯಲ್ಲೇ ಪ್ರಶ್ನೆ ಹಾಕಿ, ಉತ್ತರ ಹೊರಡಿಸುತ್ತಾ, ಉತ್ತರ ಹೇಳುತ್ತಾ ನಂಜುಂಡ ಸ್ವಾಮಿಯವರ ಸಂವಾದ ಮುಂದುವರಿಯುತ್ತಿತ್ತು. ಸೀಳಬಲ್ಲ ವ್ಯಂಗ್ಯ, ಎಲ್ಲರನ್ನೂ ಆವರಿಸಬಲ್ಲ ಗಂಭೀರ ಆಕ್ರೋಶ, ತಾತ್ವಿಕವಾದ ತಾರ್ಕಿಕತೆ, ಅತಿಯಾದ ಏರಿಳಿತಗಳಿಲ್ಲದ ಮಂಡನೆ, ಯಾವುದನ್ನು ಹೇಗೆ ಮತ್ತು ಎಲ್ಲಿ ಹೇಳಬೇಕು, ಯಾರಿಗೆ ಎಷ್ಟು ಹೇಳಬೇಕು ಎಂಬ ಸ್ಪಷ್ಟತೆ ಎಲ್ಲವೂ ಅವರ ಮಾತುಗಳಲ್ಲಿ ಇರುತ್ತಿದ್ದವು.

ಹೀಗೆ ತಲುಪಿಸುವ ತವಕ, ಚಿಂತನೆಯ ಸ್ಪಷ್ಟತೆಯಿಂದ ಹುಟ್ಟಿದ ಮಾತು, ತಮ್ಮ ಆಲೋಚನೆಯ ಬಗ್ಗೆ ಅನಗತ್ಯ ಅನುಮಾನವಿಲ್ಲದ ಆತ್ಮವಿಶ್ವಾಸ, ಆಲೋಚನೆಗಳನ್ನು ಸಂಘಟನೆಯೊಳಗೆ ಹಬ್ಬಿಸಿ ಕ್ರಿಯೆಯಾಗಿಸುವ ಬದ್ಧತೆ ಹಾಗೂ ವ್ಯವಧಾನ, ಸಮಾಜದ ಬಗೆಗಿನ ಜವಾಬ್ದಾರಿ ಎಲ್ಲವೂ ಸೇರಿ ಎಂ.ಡಿ.ಎನ್ ಮಾರ್ಗ ರೂಪುಗೊಂಡಿತ್ತು. ಅವರು ಕನ್ನಡ ಭಾಷೆಯನ್ನು ಬಳಸುತ್ತಿದ್ದ ರೀತಿ ಅತ್ಯಂತ ಅನನ್ಯವಾದುದು ಎಂದು ನಾಟಕಕಾರ ಪ್ರಸನ್ನ ಒಮ್ಮೆ ಹೇಳಿದ್ದು ಕರಾರುವಾಕ್ಕಾಗಿದೆ. ಕಳೆದ ದಶಕಗಳಲ್ಲಿ ಅತ್ಯಂತ ಜಟಿಲವಾದ ಸಂಗತಿಗಳನ್ನು ತಿಳಿಯಾದ ಕನ್ನಡಭಾಷೆಯಲ್ಲಿ ಈ ನಾಡಿನ ಅನಕ್ಷರಸ್ಥರಿಗೂ ತಲುಪಿಸಿದ ನಾಯಕರು ತೀರಾ ಕಡಿಮೆ. ಎಂ.ಡಿ.ಎನ್ ಅವರಷ್ಟು ದೀರ್ಘಕಾಲ ಹಾಗೂ ನಿರಂತರವಾಗಿ ವ್ಯವಸ್ಥೆಯನ್ನು, ಅಧಿಕಾರಿಗಳನ್ನು, ಸರ್ಕಾರಗಳನ್ನು, ಜಾಗತಿಕ ಶಕ್ತಿಗಳನ್ನು ಎದುರಿಸಿದ, ಗ್ರಾಮಕೇಂದ್ರಿತವಾಗಿ ಚಿಂತಿಸಿದ ನಾಯಕರಂತೂ ಇನ್ನೂ ಕಡಿಮೆ.

ಎಂ.ಡಿ.ಎನ್ ನೀಡುತ್ತಿದ್ದ ಮಾಹಿತಿಗಳು ಹಾಗೂ ಮಾಡುತ್ತಿದ್ದ ವಿಶ್ಲೇಷಣೆಗಳು ಒಂದು ಸಮುದಾಯದ ಗಂಭೀರ ಪ್ರಶ್ನೆಗಳಿಗೆ ಸಂಬಂಧಿಸಿರುತ್ತಿದ್ದವು. ಕೆಂಟಕಿ ಫ್ರೈಡ್ ಚಿಕನ್ ಹಾಗೂ ಕಾರ್ಗಿಲ್ ಬೀಜ ಕಂಪನಿಗಳ ಮೇಲಿನ ದಾಳಿ, ಬಿ.ಟಿ. ಹತ್ತಿ ಸುಟ್ಟ ಘಟನೆಗಳು ಸಾಂಕೇತಿಕವಾದರೂ ಅವುಗಳ ಹಿಂದೆ ಜಾಗತೀಕರಣ ವಿರೋಧದ ದೊಡ್ಡ ತಾತ್ವಿಕತೆಯಿತ್ತು. ಏಳೆಂಟು ವರ್ಷಗಳ ಕೆಳಗೆ ಬಿ.ಟಿ. ಹತ್ತಿಯನ್ನು ಬೆಳೆದ ಆಂಧ್ರದ ಐನೂರು, ಆರುನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಬಿ.ಟಿ. ಹತ್ತಿಯ ಗಿಡಗಳಲ್ಲಿ ಸೇರಿಕೊಳ್ಳುವ ಕೊರೆಯುವ ಹುಳುಗಳು ಬೆಳೆಸಿಕೊಳ್ಳುವ ವಿಷ ನಿರೋಧಕಶಕ್ತಿ ಹಾಗೂ ಅವುಗಳ ಸಂತಾನಾಭಿವೃದ್ಧಿಯಿಂದಾಗಿ ಬಿ.ಟಿ. ಹತ್ತಿಗೆ ರೈತರು ಸಿಂಪಡಿಸಿದ ಕೀಟನಾಶಕಗಳು ಪ್ರಯೋಜನಕ್ಕೆ ಬಾರದೇ ಹೋಗುತ್ತವೆ’ ಎಂದು ಎಂ.ಡಿ.ಎನ್ ರೈತರಿಗೆ ತಿಳಿವಳಿಕೆ ನೀಡಿದ್ದರು. ಕರ್ನಾಟಕದಲ್ಲಿ ರೈತ ಕಾರ್ಯಕರ್ತರು ಈ ಬೀಜಗಳನ್ನು ನಾಶಮಾಡಿದಾಗ, ನಮ್ಮ ಅಜ್ಞಾನಿ ಪತ್ರಿಕೆಗಳು ರೈತ ಹೋರಾಟಗಾರರನ್ನು ಗೂಂಡಾಗಳಂತೆ ಚಿತ್ರಿಸಿದ್ದವು. ಅಂದರೆ, ಬಿ.ಟಿ. ಹತ್ತಿ ಬೆಳೆದ ಆಂಧ್ರದ ರೈತರ ಆತ್ಮಹತ್ಯೆಯ ದಾರುಣ ಹಿನ್ನೆಲೆಯನ್ನು ಅರಿಯಲಾರದಷ್ಟು ಅವು ಜಡವಾಗಿದ್ದವು. ಊರು ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಇದೇ ಪತ್ರಿಕೆಗಳು ಈಚೆಗೆ ಬಿ.ಟಿ. ಹತ್ತಿ ರೈತರಿಗೆ ಮಾರಕವೆಂದು ಬರೆಯುತ್ತಿವೆ.

ತೀಕ್ಷ್ಣ ಮುನ್ನೋಟದ ಜ್ಞಾನಿಯಾಗಿದ್ದ ಎಂ.ಡಿ.ಎನ್ ದಶಕಗಳ ಕೆಳಗೇ ಪೇಟೆಂಟ್ ಅಥವಾ ಸಂಪೂರ್ಣಸ್ವಾಮ್ಯದ ಹುನ್ನಾರಗಳ ಬಗೆಗೂ ಎಚ್ಚರಿಸಿದ್ದರು. ಬೇವಿನ ಗಿಡದ ಪೇಟೆಂಟನ್ನು ವಿರೋಧಿಸಿ ಚಳುವಳಿಯನ್ನೂ ಹೂಡಿದರು; ತಾತ್ವಿಕತೆಯನ್ನೂ ರೂಪಿಸಿದರು. ‘ಬೌದ್ಧಿಕ ಜ್ಞಾನ ಅನ್ನುವುದು ನನ್ನದು ಎಂಬ ನಿಲುವೇ ಬಂಡವಾಳಶಾಹಿಯ ವಿಕೃತ ಕಲ್ಪನೆ. ಅದನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಬೇಕು. ಸಮಾಜವಾದಿ ಸಿದ್ಧಾಂತದಲ್ಲಿ ಪೇಟೆಂಟೂ ಇಲ್ಲ. ಕಾಪಿರೈಟೂ ಇಲ್ಲ’ ಎಂದು ಹೊಸ ತಿಳಿವು ಮೂಡಿಸಿದರು. ಹಾಗೆಯೇ ಎಪ್ಪತ್ತರ ದಶಕದಲ್ಲಿ ಹಾವನೂರು ವರದಿಯ ಬಗ್ಗೆ ಕರ್ನಾಟಕದ ಹಿಂದುಳಿದ ವರ್ಗಗಳಲ್ಲಿ ಹೆಚ್ಚಿನ ಸ್ಪಷ್ಟತೆ ಇಲ್ಲದಿದ್ದಾಗ, ಎಂ.ಡಿ.ಎನ್ ಹಾವನೂರು ವರದಿಯ ಮಹತ್ವವನ್ನು ವಿವರಿಸಿದ್ದರು; ಅದರ ಜಾರಿಯನ್ನು ಬೆಂಬಲಿಸಿದ್ದರು. ಹಳ್ಳಿಯ ಹುಡುಗ, ಹುಡುಗಿಯರಿಗೆ, ಕೊಂಚ ಬಲ ನೀಡಬಲ್ಲ ಗ್ರಾಮೀಣ ಕೃಪಾಂಕವನ್ನು ಬೆಂಬಲಿಸಿದ ಅವರು, ‘ನಮ್ಮ ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಷ್ಟೆಲ್ಲ ಕಷ್ಟಗಳ ನಡುವೆಯೂ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅವರಿಗೆ ‘ಗ್ರಾಮೀಣ ಗೌರವಾಂಕ’ ನೀಡಬೇಕೇ ಹೊರತು ಕೃಪಾಂಕವನ್ನಲ್ಲ’ ಎಂದು ಅರ್ಥಪೂರ್ಣವಾಗಿ ವಾದಿಸಿದರು. ಗ್ರಾಮೀಣ ಕೃಪಾಂಕದ ಬಗ್ಗೆ ಆರಾಮಕುರ್ಚಿಯ ಆಕ್ಷೇಪವೆತ್ತಿದ ಹೈಕೋರ್ಟ್ ನ್ಯಾಯಾಧೀಶರನ್ನು ‘ಹಳ್ಳಿಯ ಸ್ಥಿತಿಗತಿ ಅರಿಯಲು ಗ್ರಾಮಗಳಿಗೆ ಬನ್ನಿ’ ಎಂದು ಆಹ್ವಾನಿಸಿದರು.

2
Prof_BK1ನಂಜುಂಡಸ್ವಾಮಿಯವರ ಅನೇಕ ಸಾಮಾಜಿಕ ಕ್ರಿಯೆಗಳು ಅವರ ಕಟು ವ್ಯಕ್ತಿತ್ವದ ಒಳಸೆಲೆಗಳಿಂದ ಒಸರುತ್ತಿದ್ದ ಆಳವಾದ ಕಾಳಜಿಗಳಿಂದ ಮೂಡಿ ಬರುತ್ತಿದ್ದವು. ಈ ಕಾಳಜಿಗಳನ್ನು ಕರ್ನಾಟಕದ ರೈತಲೋಕ ಸರಿಯಾಗಿ ಗ್ರಹಿಸತೊಡಗಿತು. ಆದರೆ ಕರ್ನಾಟಕದ ಸರ್ಕಾರಿ ವಲಯ, ಯೋಜನೆಗಳ ವಲಯ ನಂಜುಂಡಸ್ವಾಮಿಯವರು ಆಗಾಗ್ಗೆ ತೋರಿಸುತ್ತಿದ್ದ ಮಾರ್ಗಗಳ ಬಗ್ಗೆ ಸರಿಯಾಗಿ ಗಮನ ಕೊಡಲಿಲ್ಲ. ಆಧುನಿಕ ಕನ್ನಡದ ಅತ್ಯಂತ ಒರಿಜಿನಲ್ ಚಿಂತಕ-ಹೋರಾಟಗಾರರಾದ ಎಂ.ಡಿ.ಎನ್ ಅವರ ವಿಚಾರಗಳ ಬಗ್ಗೆ ಸಮೂಹ ಮಾಧ್ಯಮಗಳು ಉಪೇಕ್ಷೆ ತೋರತೊಡಗಿದವು. ನಿಜವಾದ ಜನನಾಯಕರಾದ ಅವರನ್ನು ನಿರಂತರ ಭಿನ್ನಮತೀಯನೆಂದೇ ಪರಿಗಣಿಸಿದ ಕರ್ನಾಟಕದ ಆಳುವ ವಲಯ ಹಾಗೂ ಯೋಜನಾ ವಲಯಗಳು ಅವರ ಆರ್ಥಿಕ ಚಿಂತನೆಗಳನ್ನು ಗ್ರಹಿಸಲೇ ಇಲ್ಲ. ರೈತಸಂಘವನ್ನು ಒಡೆದರು; ಕೇಸುಗಳು ಹಾಗೂ ಅಪಪ್ರಚಾರಗಳ ಮೂಲಕ ಎಂ.ಡಿ.ಎನ್‍ಗೆ ಕಿರುಕುಳ ಕೊಡತೊಡಗಿದರು.

ಕನ್ನಡ ನಾಡಿನ ಬಹುತೇಕ ಬುದ್ಧಿಜೀವಿಗಳು ಕೂಡ ಎಂ.ಡಿ.ಎನ್ ಅವರ ಚಿಂತನಾಕ್ರಮವನ್ನು ಸರಿಯಾಗಿ ಗ್ರಹಿಸದೇ ಹೋದರು. ಮೊದಮೊದಲು ರೈತ ಚಳುವಳಿಯ ಜೊತೆಗಿದ್ದ ತೇಜಸ್ವಿ, ಕ್ರಮೇಣ ಅತಿಯಾದ ಸಾರ್ವಜನಿಕತೆಯ ಭಾರ ತಡೆಯಲಾರದೆಯೋ ಏನೋ ತಮ್ಮ ಕೃಷಿ ಹಾಗೂ ಬರವಣಿಗೆಗೆ ಮರಳಿದರು. ಮೊದಮೊದಲು ರೈತ ಚಳುವಳಿಯನ್ನು ಬೆಂಬಲಿಸಿದ ಲಂಕೇಶರು ನಂತರ ಕೆಲಬಗೆಯ ತಾತ್ವಿಕ ಪ್ರಶ್ನೆಗಳನ್ನೆತ್ತಿ ಅದರಿಂದ ದೂರವಾದರು; ಬರುಬರುತ್ತಾ ಅನಗತ್ಯ ಗೇಲಿಯ ಅಸ್ತ್ರ ಬಳಸಿ ಎಂ.ಡಿ.ಎನ್ ಪ್ರಭಾವವನ್ನು ಕ್ಷೀಣವಾಗಿಸಲೆತ್ನಿಸಿದರು. ಅದಕ್ಕಿಂತ ಮೊದಲೇ, 1973ರಲ್ಲಿ ಪ್ರಕಟವಾದ ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಯಲ್ಲೇ ನಂಜುಂಡಸ್ವಾಮಿ ಮಾದರಿಯ ಹೋರಾಟದ ವ್ಯಂಗ್ಯ ಚಿತ್ರಣವೂ ನಡೆದಿತ್ತು. ಸಮಾಜವಾದಿ ಯುವಜನ ಸಭಾದ ಸಂದರ್ಭದಲ್ಲಿ ಎಂ.ಡಿ.ಎನ್ ಅವರ ಜೊತೆಗಿದ್ದ ಕನ್ನಡ ಚಿಂತಕರು, ಲೇಖಕರು ಅವರಿಂದ ದೂರವಿರತೊಡಗಿದರು.

ಬಹುಪಾಲು ರೈತ ಕುಟುಂಬಗಳ ಹಿನ್ನೆಲೆಯಿಂದಲೇ ಬಂದಿರುವ ಕನ್ನಡ ಲೇಖಕ-ಲೇಖಕಿಯರು ಆರಂಭದಲ್ಲಿ ರೈತ ಚಳುವಳಿಗೆ ಅಷ್ಟಿಷ್ಟು ಸ್ಪಂದಿಸಿದರೂ ಬರಬರುತ್ತಾ ಆ ಬಗ್ಗೆ ಸೋಮಾರಿ ಮೌನ ತಾಳಲಾರಂಭಿಸಿದರು. ಶಾಂತವೇರಿ ಗೋಪಾಲಗೌಡ, ಎಂ.ಡಿ.ಎನ್ ಥರದವರ ವ್ಯಕ್ತಿತ್ವ, ಚಿಂತನೆ, ಪ್ರಭಾವ ಹಾಗೂ ಕ್ರಿಯೆಗಳಿಂದಾಗಿ ಕೂಡ ಸಮಾಜವಾದವು ಕನ್ನಡ ಸಾಹಿತ್ಯಕ ಸಂಸ್ಕøತಿಯಲ್ಲಿ ಅರ್ಥಪೂರ್ಣವಾಗಿ ಬೆರೆಯಲಾರಂಭಿಸಿದ್ದನ್ನು ಹಾಗೂ ಈ ಕಾರಣದಿಂದಾಗಿಯೇ ಕನ್ನಡ ನವ್ಯ ಸಾಹಿತ್ಯ ಭಾರತದ ಉಳಿದೆಲ್ಲ ಭಾಷೆಗಳ ನವ್ಯ ಸಾಹಿತ್ಯಕ್ಕಿಂತ ಭಿನ್ನವಾಯಿತು ಎಂಬ ಬಹುಮುಖ್ಯ ಸಾಂಸ್ಕøತಿಕ ಸತ್ಯವನ್ನು ಕನ್ನಡ ಲೇಖಕರು ಮರೆಯತೊಡಗಿದರು. ಎಂ.ಡಿ.ಎನ್ ಅವರ ಬಗ್ಗೆ ಕೆಲವೊಮ್ಮೆ ನಿಜವಾದ ತಾತ್ವಿಕ ಪ್ರಶ್ನೆಗಳನ್ನು ಎತ್ತಿದ ಲೇಖಕರಿದ್ದಾರೆ, ನಿಜ. ಆದರೆ ಅನೇಕರು ಎಂ.ಡಿ.ಎನ್ ವ್ಯಕ್ತಿತ್ವದ ಕಟುತನಕ್ಕೆ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಅವರನ್ನು ದ್ವೇಷಿಸುತ್ತಾ, ಉಪೇಕ್ಷಿಸುತ್ತಾ ಹೋದರು. ಈ ಬಗೆಯ ಬೇಜವಾಬ್ದಾರಿ ಪ್ರತಿಕ್ರಿಯೆಗಳು ಜನರ ಚಳುವಳಿಗೆ ತರಬಲ್ಲ ದುರಂತದ ಸ್ವರೂಪವನ್ನು ಈಗ ನಾವೆಲ್ಲ ಅರಿಯತೊಡಗಿದ್ದೇವೆ. ಎಂ.ಡಿ.ಎನ್ ಮತ್ತು ಮಿತ್ರರು ಕಾರವಾರದ ಜೈಲಿನಲ್ಲಿ ಅಧ್ಯಯನ ಶಿಬಿರ ನಡೆಸಿದ್ದರ ಬಗ್ಗೆ ರವಿವರ್ಮಕುಮಾರ್ ಅವರು ಬರೆದದ್ದನ್ನು ಓದುತ್ತಿದ್ದಾಗ, ಎಂಥೆಂಥ ಹಾದಿಗಳನ್ನು ರೈತಸಂಘ ಹಾದು ಬಂದಿತು ಹಾಗೂ ಅಂಥ ಪರಿಶ್ರಮ ಹೇಗೆ ಒಂದು ಜಡಸಂಸ್ಕøತಿಯಲ್ಲಿ ಬರಬರುತ್ತಾ ವ್ಯರ್ಥವಾಯಿತು ಎಂಬುದನ್ನು ಕಂಡು ದುಗುಡ ಆವರಿಸ ತೊಡಗುತ್ತದೆ.

ಈಗಲಾದರೂ ಕನ್ನಡ ಪ್ರಜ್ಞಾವಂತ ಜಗತ್ತು ಈ ಕಾಲದ ಸಮಗ್ರ ಚಿಂತಕರಾದ ಎಂ.ಡಿ.ಎನ್ ಅವರ ಬೌದ್ಧಿಕ ಕೊಡುಗೆಯನ್ನು ಹಾಗೂ ಸಂಘಟನಾ ಮಾರ್ಗವನ್ನು ಕುರಿತು ಕರ್ನಾಟಕದ ರೈತ ಸಮುದಾಯದಷ್ಟೇ ಗಂಭೀರವಾಗಿ ಚರ್ಚಿಸುವುದು ಹಾಗೂ ಎಂ.ಡಿ.ಎನ್ ಚಿಂತನೆಗಳನ್ನು ಸರಿಯಾಗಿ ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ. ಆ ಚಿಂತನೆ ಹಾಗೂ ಮಾರ್ಗವನ್ನು ಬೆಳೆಸುವ ಮೂಲಕವೇ ಈ ಕಾಲದ ದೊಡ್ಡ ಪ್ರಜಾಪ್ರಭುತ್ವವಾದಿ ಚಳುವಳಿಗಳಲ್ಲೊಂದಾದ ರೈತ ಚಳುವಳಿಯನ್ನು ರಚನಾತ್ಮಕವಾಗಿ ಮರಳಿ ಕಟ್ಟುವ ಕೆಲಸಕ್ಕೆ ನೆರವಾಗ ಬೇಕಾಗಿದೆ; ರೈತ ಚಳುವಳಿಗೆ ಬಗೆಬಗೆಯ ಬೌದ್ಧಿಕ ಸಾಮಗ್ರಿಯನ್ನು ಒದಗಿಸಿಕೊಡುವ ಜವಾಬ್ದಾರಿ ಕೂಡ ಕನ್ನಡ ಚಿಂತಕಲೋಕದ ಮೇಲಿದೆ. ನಂಜುಂಡಸ್ವಾಮಿಯವರ ಜೊತೆ ಜೊತೆಗೇ ರೈತಸಂಘಟನೆ ಕಟ್ಟಿದ ಎನ್.ಡಿ. ಸುಂದರೇಶ್, ಎಚ್.ಎಸ್.ರುದ್ರಪ್ಪ, ಬಾಬಾಗೌಡ ಪಾಟೀಲ, ಕೆ.ಎಸ್. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಕಡಿದಾಳ್ ಶಾಮಣ್ಣ, ಕೆ.ಟಿ.ಗಂಗಾಧರ್ ಮುಂತಾದ ನೂರಾರು ನಾಯಕರ, ಕಾರ್ಯಕರ್ತರ ಶ್ರಮ ವ್ಯರ್ಥವಾಗಲು ಈ ನಾಡು ಬಿಡಬಾರದು. ಇವತ್ತಿಗೂ ಪ್ರಜ್ಞಾವಂತರನ್ನು ನಾಯಕತ್ವ ವಹಿಸಬಲ್ಲ ಸೂಕ್ಷ್ಮಜ್ಞರಾದ ತರುಣರನ್ನು ಅಧಿಕಾರ ರಾಜಕಾರಣಕ್ಕಿಂತ ಭಿನ್ನವಾದ ರಾಜಕಾರಣದ ಕಡೆ ಸೆಳೆಯುವ ಶಕ್ತಿ ರೈತ ಚಳುವಳಿಗೆ ಇದೆ. ನಾಯಕತ್ವದ ಕಾತರವುಳ್ಳ ಯುವಕರನ್ನು ಪಕ್ಷ ರಾಜಕಾರಣ ಹಾಗೂ ಕ್ರೂರವಾದ ಕೋಮುವಾದಿ ರಾಜಕಾರಣ ಸುಲಭವಾಗಿ ಸೆಳೆದುಕೊಳ್ಳಬಲ್ಲದು. ಅಂಥ ಯುವಕರನ್ನು ರೈತರ ಹಕ್ಕುಗಳ ಹೋರಾಟದ ನಿರ್ಮಾಣರಾಜಕಾರಣಕ್ಕೆಳೆದ ನಂಜುಂಡಸ್ವಾಮಿಯವರ ಮಾರ್ಗವನ್ನು ಕನ್ನಡನಾಡು ಕಳೆದುಕೊಳ್ಳಬಾರದು.

3
karl_marx (1)ಸುಮಾರು ನಲವತ್ತು ವರ್ಷಗಳ ಕಾಲ ಸಮಾಜದ ಕೆಲಸಕ್ಕಾಗಿ ಕನ್ನಡನಾಡಿನ ಮೂಲೆಗಳನ್ನು ಎಂ.ಡಿ.ಎನ್ ಅವರಂತೆ ಖುದ್ದು ತಲುಪಿದ ಸಾಮಾಜಿಕ ಚಿಂತಕ-ನಾಯಕರು ಕರ್ನಾಟಕದ ಈಚಿನ ಇತಿಹಾಸದಲ್ಲಿ ಇರಲಿಕ್ಕಿಲ್ಲ. ಹೀಗೆ ಸಮಾಜಕ್ಕಾಗಿಯೇ ಹೆಚ್ಚು ಚಿಂತಿಸಿ, ಊರೂರು ಸುತ್ತಿದ ಅವರ ದೇಹ ಕೊನೆಯ ಒಂದು ವರ್ಷದಲ್ಲಿ ಕ್ಯಾನ್ಸರ್‍ಗೆ ತುತ್ತಾಯಿತು. ಆದರೆ ಆ ಘಟ್ಟದಲ್ಲಿ ಕೂಡ ಅದೊಂದು ಕಾಯಿಲೆಯೇ ಅಲ್ಲವೆಂಬಂತೆ ಪ್ರಚಂಡ ಇಚ್ಛಾಶಕ್ತಿಯಿಂದ ಎಂ.ಡಿ.ಎನ್ ಒಂದರ ಹಿಂದೊಂದರಂತೆ ಚಳುವಳಿಗಳನ್ನು ರೂಪಿಸಲು ಯೋಚಿಸುತ್ತಿದ್ದರು. ಅವರ ಕೊನೆಯ ಘಟ್ಟದಲ್ಲಿ ನಾವು ಅವರನ್ನು ಕಂಡಾಗ ತಮ್ಮ ಕಾಯಿಲೆಗೆ ದೇಶೀವೈದ್ಯ ಸೇವಿಸುತ್ತಲೇ, ಬೆಂಗಳೂರನ್ನು ಆಕ್ರಮಿಸಲಿರುವ ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಮಾಲ್‍ಗಳನ್ನು ಹಿಂದೊಮ್ಮೆ ಕೆಂಟಕಿ ಫ್ರೈಡ್ ಚಿಕನ್ ಮಳಿಗೆಯನ್ನು ಒಡೆದಂತೆಯೇ ಒಡೆದು ಪ್ರತಿಭಟಿಸಬೇಕೆಂಬ ಯೋಜನೆಯೊಂದನ್ನು ರೂಪಿಸುತ್ತಿದ್ದರು.

ಇದು ಕರ್ನಾಟಕ ಜಾಗತೀಕರಣವನ್ನು ಎದುರಿಸಬೇಕಾದ ನಿಟ್ಟಿನಲ್ಲಿ ಎಂ.ಡಿ.ಎನ್ ರೂಪಿಸಬಯಸಿದ ಒಂದು ಹೋರಾಟದ ಮಾದರಿಯೂ ಆಗಿತ್ತು. ಇದಕ್ಕಿಂತ ಮೊದಲೇ ಜಾಗತೀಕರಣದ ಅಪಾಯಗಳನ್ನು ಕರಾರುವಾಕ್ಕಾಗಿ ಅರಿತಿದ್ದ ಅವರು ನಮ್ಮ ರೈತರಿಗೆ ಜಾಗತೀಕರಣ ತರುವ ದುರಂತಗಳನ್ನು ಮನಮುಟ್ಟುವಂತೆ ವಿವರಿಸಿದ್ದರು. ಕನ್ನಡ ಸಾಹಿತಿಗಳು ಜಾಗತೀಕರಣವನ್ನು ಅರೆಬರೆಯಾಗಿ ಅರ್ಥಮಾಡಿಕೊಂಡಿದ್ದಾರೆಂದು ಅವರು ಆತಂಕಕ್ಕೀಡಾಗಿದ್ದರು. ತಮ್ಮ ಜೀವಿತದ ಕೊನೆಯಲ್ಲಿ ಅವರು ‘ಅಗ್ನಿ’ ವಾರಪತ್ರಿಕೆಯಲ್ಲಿ ಬರೆದ ‘ಸಾಹಿತಿಗಳಿಗೆ ಪತ್ರ’ ಎಂಬ ಮಾಲಿಕೆಯಲ್ಲಿ ಜಾಗತೀಕರಣದ ಅಗೋಚರ ಮುಖಗಳನ್ನು ವಿವರಿಸಲೆತ್ನಿಸಿದರು. ಎಪ್ಪತ್ತರ ದಶಕದಲ್ಲಿ ಮೂಡಿಗೆರೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಯ ಜಗಲಿಯ ಮೇಲೆ ಜೊತೆ ಕೂತು ಲೋಹಿಯಾ ಚಿಂತನೆಗಳ ಕೈಪಿಡಿಯಾದ ರೆಡ್‍ಬುಕ್ ರೂಪಿಸುವಾಗ ಎಂ.ಡಿ.ಎನ್ ಅವರಲ್ಲಿ ಇದ್ದಿರಬಹುದಾದಷ್ಟೇ ಉತ್ಸಾಹ ಹಾಗೂ ಬದ್ಧತೆ ಜಾಗತೀಕರಣ ಕುರಿತು ಸಾಹಿತಿಗಳಿಗೆ ಹಾಗೂ ಆ ಮೂಲಕ ಒಟ್ಟಾರೆಯಾಗಿ ಕನ್ನಡಿಗರಿಗೆ ತಿಳಿವಳಿಕೆ ಮೂಡಿಸುತ್ತಿದ್ದ ಅವರ ಕೊನೆಯ ಘಟ್ಟದಲ್ಲೂ ಇತ್ತು. ಸಾವು ಇಲ್ಲೇ ಕಾಲ ಬಳಿ ಇದೆಯೆಂದು ಬಲ್ಲ ಚಿಂತಕ-ನಾಯಕನೊಬ್ಬ ಒಂದು ಸಮಾಜದ ಸಾವಿನ ಸೂಚನೆಗಳನ್ನು ಅತ್ಯಂತ ಆತಂಕದಿಂದ ಗ್ರಹಿಸಲೆತ್ನಿಸುತ್ತಿದ್ದುದನ್ನು ಈ ಪತ್ರಗಳು ಸೂಚಿಸುತ್ತವೆ. ಈ ಪತ್ರಗಳಲ್ಲಿ ತೇಜಸ್ವಿಯವರು ಜಾಗತೀಕರಣ ಕುರಿತು ತಳೆದ ನಿಲುವುಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಲಾಗಿದ್ದರೂ ಅವು ಇಡೀ ಬುದ್ಧಿಜೀವಿಲೋಕವನ್ನು ಉದ್ದೇಶಿಸಿ ಬರೆದ ಮಾತುಗಳಾಗಿವೆ. ಆ ಪತ್ರಗಳ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ:

ಪತ್ರ : ಒಂದು
‘ಈ ಬುದ್ಧಿಜೀವಿಗಳು, ಸಾಹಿತಿಗಳು ಜಾಗತೀಕರಣದ ವಿರೋಧಿಗಳಾಗಿದ್ದರೆ, ಇವರುಗಳೆಲ್ಲ ಮಾಡಿದ್ದಾದರೂ ಏನು? ಆಗೊಮ್ಮೆ-ಈಗೊಮ್ಮೆ ಜಾಗತೀಕರಣದ ಬಗ್ಗೆ ಭಾಷಣ ಬಿಗಿದು ವರ್ಷಾನುಗಟ್ಟಳೆ ಮೌನವಾಗಿರುವುದು ಬುದ್ಧಿಜೀವಿಗಳೆನಿಸಿಕೊಂಡವರಿಗೆ ತಕ್ಕ ನಡವಳಿಕೆಯೇ? ಇವತ್ತಿನ ಜಾಗತೀಕರಣದಿಂದಾಗಿ ದೇಶದಲ್ಲಿ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿದ್ದರೂ, ರೈತರ ಆತ್ಮಹತ್ಯೆ ದೇಶದಲ್ಲಿ 20,000 ದಾಟಿದ್ದರೂ ಸಹ ಈ ಆರೋಪ ಮಾಡಿದವರೆಲ್ಲ ಒಟ್ಟಾಗಿ ಧ್ವನಿ ಎತ್ತುವ ವೇದಿಕೆಯ ಅವಶ್ಯಕತೆಯನ್ನು ಮನಗಾಣುವಷ್ಟು ಪ್ರಬುದ್ಧರಾಗಿಲ್ಲವೆ? ಅಥವಾ ತೇಜಸ್ವಿಯವರು ಬರೆಯುವಂತೆ ‘ಈ ರಾಷ್ಟ್ರಗಳು ಮುಂಬರುವ ದಿನಗಳಲ್ಲಿ ತಮ್ಮ ಧರ್ಮಾಂಧತೆಯನ್ನು ಮೀರಿ ಆರ್ಥಿಕ ಅಭಿವೃದ್ಧಿಯತ್ತ ಗಮನಹರಿಸುವುದಾದರೆ ಮಾತ್ರ ಜಾಗತೀಕರಣದ ಸಂದರ್ಭದಲ್ಲಿ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬಲ್ಲರು; ಇಲ್ಲವಾದಲ್ಲಿ ಮತ್ತೊಮ್ಮೆ ವ್ಯಕ್ತ ಆರ್ಥಿಕ ವಸಾಹತು ಶಾಹಿಯೊಂದಕ್ಕೆ ಸಿಕ್ಕಿಕೊಳ್ಳುತ್ತಾರೆ’ ಎಂದು ತಮ್ಮನ್ನು ದೇಶದಿಂದಲೇ ಪ್ರತ್ಯೇಕಿಸಿಕೊಂಡು ಅಮೂರ್ತ ವ್ಯಕ್ತಿಗಳಂತೆ ಆಕಾಶದಿಂದ ತಮ್ಮ ‘ಅ(ಮೃತ)ವಾಣಿ’ಯನ್ನು ಆಗಾಗ್ಗೆ ಉದುರಿಸುತ್ತಿದ್ದರೆ ಸಾಕೆ? ಅಥವಾ ಜಗತ್ತಿನ ಇಡೀ ಜನಾಂಗದ ಆರ್ಥಿಕ ಅಭಿವೃದ್ಧಿಯತ್ತ ಆಸಕ್ತಿಯೇ ಇಲ್ಲದ ಮುಂದುವರಿದ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಮತ್ತು ಈ ದೇಶದೊಳಗೆ ಇಡೀ ಜನಾಂಗದ ಆರ್ಥಿಕ ಅಭಿವೃದ್ಧಿಯ ವಿರುದ್ಧ ಶತಶತಮಾನಗಳಿಂದ ವ್ಯೂಹಗಳನ್ನು ರಚಿಸುತ್ತಿರುವ ವೈದಿಕ ಸಾಮ್ರಾಜ್ಯಶಾಹಿಗಳೇ ಇವತ್ತು ತೇಜಸ್ವಿಯವರು ಪಟ್ಟಿ ಮಾಡಿರುವ Ragi lakshmanaiah 03ಧಾರ್ಮಿಕ ಮೂಲಭೂತವಾದ, ಭಯೋತ್ಪಾದಕ ಕೃತ್ಯಗಳು, ಹಿಂದುಳಿದ ರಾಷ್ಟ್ರಗಳಲ್ಲಿ ಅಂತಃಕಲಹಗಳು, ಯುದ್ಧಗಳು, ಷಿಯಾ-ಸುನ್ನಿ ಜಗಳ, ಪ್ಯಾಲೆಸ್ಟೈನ್, ಕಾಶ್ಮೀರ ಇವೆಲ್ಲವನ್ನೂ ಸೃಷ್ಟಿಸುತ್ತಿವೆ; ಹಾಗೂ ಇವೆಲ್ಲವೂ ಈ ಸಾಮ್ರಾಜ್ಯಶಾಹಿ ಶಕ್ತಿಗಳೇ ತಮ್ಮ ಸ್ಪಷ್ಟ ಸಂಚುಗಳೊಂದಿಗೆ ಸೃಷ್ಟಿಸುತ್ತಿರುವ ಶೋಷಣಾ ವ್ಯವಸ್ಥೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳಿಂದ ಸಾಮಾನ್ಯ ಜನತೆಯ ದೃಷ್ಟಿಯನ್ನು ಪಲ್ಲಟಗೊಳಿಸಲು ಹೂಡುತ್ತಿರುವ ಹೋರಾಟಗಳು ಎಂದು ಜನಸಾಮಾನ್ಯರನ್ನು ಎಚ್ಚರಿಸುವುದು ಬುದ್ಧಿಜೀವಿಗಳ ಮತ್ತು ಸಾಹಿತಿಗಳ ಕರ್ತವ್ಯವಲ್ಲವೇ? ಅದರಲ್ಲಿಯೂ, ಭಾರತದಂತಹ ದೇಶಗಳ ರಾಜಕಾರಣದ ಅಪರಾಧೀಕರಣದ ನಡುವೆ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳ ಭ್ರಷ್ಟಾಚಾರ, ತಮ್ಮ ತಮ್ಮ ವೈಯಕ್ತಿಕ ಶ್ರೇಯೋಭಿವೃದ್ಧಿಯನ್ನೇ ಮುಖ್ಯವಾಗಿರಿಸಿಕೊಂಡ ಅಧಿಕಾರಶಾಹಿಯ ಅಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರ ಹಾಗೂ ಇದೇ ಗುಣಗಳುಳ್ಳ ವಿಜ್ಞಾನಿಗಳ ಮತ್ತು ಆರ್ಥಿಕ ತಜ್ಞರುಗಳ ಜನವಿರೋಧಿ-ದೇಶ ವಿರೋಧಿ ಇಬ್ಬಂದಿ ನಡವಳಿಕೆಗಳ ನಡುವೆ ತಮ್ಮ ಕರ್ತವ್ಯವೇನು? ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಈ ಬಗ್ಗೆ ಚಿಂತಿಸದಿದ್ದಲ್ಲಿ ಅಂತಹವರನ್ನು ಬುದ್ಧಿಜೀವಿಗಳೆಂದೂ, ಸಾಹಿತಿಗಳೆಂದೂ ಕರೆಯಬಹುದೇ?

ಪತ್ರ : ಎರಡು
‘ಸುತ್ತೆಲ್ಲ ಕಣ್ಣುಳ್ಳ, ವೈಚಾರಿಕ ಸ್ಪಷ್ಟತೆ, ಐತಿಹಾಸಿಕ ಪ್ರಜ್ಞೆ ಹಾಗೂ ವಸ್ತುಸ್ಥಿತಿಯ ಪೂರ್ಣ ಅರಿವಿದ್ದು ಮುಕ್ತ ಮನಸ್ಸಿನಿಂದ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುವ ವ್ಯಕ್ತಿಯನ್ನು ನಾವು ಬುದ್ಧಿಜೀವಿ-ಸಾಹಿತಿಯೆಂದು ಕರೆಯಬಹುದೇನೊ? ಹಾಗೂ ಈ ಪ್ರತಿಕ್ರಿಯೆಗಳಿಗೆ ಹಿನ್ನೆಲೆಯಾಗಿ ಇರಬೇಕಾದ ಸಾಹಿತ್ಯ, ವೈಚಾರಿಕ ಛಲ, ಪ್ರತಿಕ್ರಿಯಿಸುವಾಗ ಇರಬೇಕಾದ ಮನೋಸ್ಥೈರ್ಯ ಮತ್ತು ಚಾರಿತ್ರ್ಯ, ದೃಢತೆಯನ್ನು ಇವರುಗಳಿಂದ ನಿರೀಕ್ಷಿಸಬಹುದೇನೊ? ಯಾವುದೇ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆಯಲ್ಲಿ ಇರಬೇಕಾದ ಅವಶ್ಯ ಅಂಶಗಳಿವು.

ಇದುವರೆಗೆ, ‘ಇಂದಿನ’ ಜಾಗತೀಕರಣದ ಬಗ್ಗೆ ಕರ್ನಾಟಕದ ಸಾಹಿತಿಗಳು ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳಲ್ಲಿ ಈ ಅಂಶಗಳ್ಯಾವುವೂ ಕಂಡುಬರುತ್ತಿಲ್ಲ.

ಉದಾಹರಣೆಗೆ, ತೇಜಸ್ವಿಯವರೇ ಬರೆದಿರುವಂತೆ, ‘ಬಹುರಾಷ್ಟ್ರೀಯ ಬಂಡವಾಳಗಾರರ ಉದ್ದೇಶಗಳನ್ನು ನೋಡಿದರೆ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೆ ಸಹಾಯ ಮಾಡಬೇಕೆಂಬ ದೃಷ್ಟಿಗಿಂತಲೂ ಜಾಗತೀಕರಣವನ್ನೇ ಉಪಯೋಗಿಸಿಕೊಂಡು ನವವಸಾಹತುಶಾಹಿಯೊಂದನ್ನು ಸ್ಥಾಪಿಸುವ ಉದ್ದೇಶ ಇವರಲ್ಲಿ ಇರುವಂತೆ ಕಾಣುತ್ತಿದೆ’ ಎನ್ನುವ ಹೇಳಿಕೆಯನ್ನು ನೋಡಿದ ಕೂಡಲೇ, ತೇಜಸ್ವಿಯವರಿಗೆ 1986ರಿಂದ 1992ರವರೆಗೆ ‘ಗ್ಯಾಟ್’ (ವಾಣಿಜ್ಯ ಮತ್ತು ತೆರಿಗೆಗಳ ಸಾಮಾನ್ಯ ಒಪ್ಪಂದ)ನಲ್ಲಿ ನಡೆದ ವಿವಿಧ ಹುನ್ನಾರಗಳಾಗಲೀ, 1992ರಲ್ಲಿ ‘ಒಪ್ಪಿದರೆ ಪೂರ್ಣ ಒಪ್ಪಿರಿ; ಇಲ್ಲವೇ ಹೊರಗಿರಿ’ ಎನ್ನುವ ಷರತ್ತಿನೊಂದಿಗೆ ಗ್ಯಾಟ್‍ನ ಕಾರ್ಯದರ್ಶಿ ಆರ್ಥರ್ ಡಂಕೆಲ್ ತಯಾರಿಸಿದ ಕರಡು ವರದಿಯಲ್ಲಿರುವ ಕುತಂತ್ರಗಳಾಗಲೀ ತಿಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಯೇ, ‘ಗ್ಯಾಟ್’ ಒಪ್ಪಂದದಲ್ಲಿರುವ ವಾಣಿಜ್ಯ ಸಂಬಂಧಿತ ಬಂಡವಾಳ ಹೂಡಿಕ  ಬಗ್ಗೆಯಾಗಲೀ ವಾಣಿಜ್ಯ ಸಂಬಂಧಿತ ಬೌದ್ಧಿಕ ಹಕ್ಕುಗಳ (ಖಿಖIPS) ಬಗ್ಗೆಯಾಗಲೀ ಯಾವುದೇ ಮಾಹಿತಿಯಿಲ್ಲ ಎಂಬುದು ತಿಳಿಯುತ್ತದೆ. ‘ಭಾರತದ ಪತ್ರಿಕೋದ್ಯಮಕ್ಕೆ ವಿದೇಶಿ ಬಂಡವಾಳ ಹರಿದು ಬರಲು ಮುಕ್ತ ಅವಕಾಶ ಕೊಡಬೇಕು’ ಎಂಬ ರಾಜ್ಯದ ಮತ್ತೊಬ್ಬ ಸಾಹಿತಿಯ ಹೇಳಿಕೆ ಕೂಡ ಒಬ್ಬ ಸಾಹಿತಿಗಿರಬೇಕಾದ ಅವಶ್ಯ ಗುಣಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಮಾಹಿತಿಯಿಲ್ಲದೆ ಅಥವಾ ಅವಶ್ಯಕ ಮಾಹಿತಿಗಳನ್ನು ಪಡೆಯದೆ ಪ್ರತಿಕ್ರಿಯಿಸುವ ಸಾಹಿತಿಪಂಡಿತರಿಗೇನೂ ಕರ್ನಾಟಕದಲ್ಲಿ ಕೊರತೆಯಿದ್ದಂತಿಲ್ಲ. ‘ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಮೀಸಲು ಇರಬೇಕು’ ಎಂದು ಒಂದು ದಲಿತರ ಸಮಾವೇಶದಲ್ಲಿ ಒತ್ತಾಯ ಮಾಡಿದ ಪಂಡಿತನಿಗೂ ‘ಗ್ಯಾಟ್’ ಒಪ್ಪಂದದೊಳಗೆ ‘ಸೇವೆಗಳ ಒಪ್ಪಂದ’  ಎನ್ನುವ ಮತ್ತೊಂದು ಒಪ್ಪಂದದಲ್ಲಿ ಬಂಡವಾಳಶಾಹಿಯ ಸೇವಾ ನಿಯಮಗಳಡಿಯಲ್ಲಿ ಇಂತಹ ಮೀಸಲು ಸಾಧ್ಯವಿಲ್ಲ ಎನ್ನುವುದರ ಬಗ್ಗೆ ಅರಿವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈಗ ಉಳಿಯುವ ಪ್ರಶ್ನೆ ಒಂದೇ: ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರೆನಿಸಿಕೊಂಡುಬಿಟ್ಟಿರುವ ಈ ವ್ಯಕ್ತಿಗಳು ಪೂರ್ಣ ಮಾಹಿತಿಯೇ ಇಲ್ಲದೆ ಮುಖ್ಯ ಸಮಸ್ಯೆಯೊಂದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಜವಾಬ್ದಾರಿಯುತ ನಡವಳಿಕೆ ಎನ್ನಿಸಿಕೊಳ್ಳುತ್ತದೆಯೇ ಎಂಬುದು.

ಮೇಲಿನ ಮೂರು ಉದಾಹರಣೆಗಳೂ ಸಹ ಸಾಹಿತಿಗಳು ಜಾಗತೀಕರಣಕ್ಕೆ ಶರಣಾದಂತೆ ತೋರಿಸಿಕೊಳ್ಳುವುದರಿಂದ ಇವುಗಳಿಂದಾಗಿ ಕನಿಷ್ಠ ಅಕ್ಷರ ಕಲಿತ ಕನ್ನಡಿಗರ ಮೇಲಾಗಬಹುದಾದ ಅಪಾಯಕಾರಿ ಪರಿಣಾಮಗಳೇನು ಎಂಬ ಮತ್ತೊಂದು ಪ್ರಶ್ನೆ ಮೂಡುತ್ತದೆ.

ಹೀಗಾಗಿ, ನನ್ನಂಥವರು ಇಂತಹ ಸಾಹಿತಿಗಳಿಂದ ಇನ್ನು ಮುಂದಾದರೂ ನಿರೀಕ್ಷಿಸುವುದು ಇಷ್ಟನ್ನೇ: ಇವರ ಯೌವ್ವನದ ಆದರ್ಶಗಳಿಗೂ ವಯಸ್ಸಾಗಿದ್ದರೆ ಆಗಿರಲಿ, ಚಿಂತೆಯಿಲ್ಲ. ಆದರೆ, ಈ ನಂತರವೂ ತಾನು ಚಲಾವಣೆಯಲ್ಲಿದ್ದೇನೆಂದು ಸಮಾಧಾನಪಟ್ಟುಕೊಳ್ಳುವ ಸಲುವಾಗಿಯೇ ಮಾಹಿತಿಯಿಲ್ಲದೆ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಬೇಜವಾಬ್ದಾರಿತನಕ್ಕೆ ಇವರುಗಳು ತೊಡಗಬಾರದು’.

k ramadas-ಈ ಮೇಲಿನ ಎರಡು ಪತ್ರಗಳಲ್ಲಿ ಎಲ್ಲದರ ಬಗೆಗೂ ಸುಮ್ಮನೆ ಮಾತಾಡುವ ಬರಹಗಾರರನ್ನು ತಿವಿಯುವ ಧ್ವನಿಯಿರಬಹುದು. ಆದರೆ ಎಂ.ಡಿ.ಎನ್ ಅವರ ಜೀವಿತದ ಕೊನೆಯ ಘಟ್ಟದ ಕಾಳಜಿಗಳ ಸ್ವರೂಪವನ್ನು ಈ ಪತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ. ಅದೇ ಸರಿ ಸುಮಾರಿನಲ್ಲಿ ಅವರು ರಹಮತ್ ತರೀಕೆರೆಯವರಿಗೆ ನೀಡಿದ ಸಂದರ್ಶನದಲ್ಲಿ ‘ಕರ್ನಾಟಕದ ಬುದ್ಧಿಜೀವಿಗಳು ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈಜೋಡಿಸಿದರೆ, ಆರೋಗ್ಯಕರವಾದ ಪರ್ಯಾಯ ವ್ಯವಸ್ಥೆಯನ್ನು ನಾವು ಕರ್ನಾಟಕಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ’ ಎಂದಿದ್ದರು. ಹಾಗೆಯೇ, ಕಿ.ರಂ. ನಾಗರಾಜರು ಗುರುತಿಸುವಂತೆ ‘ಎಂ.ಡಿ.ಎನ್ ಇಡೀ ಸಮುದಾಯವೇ ಬುದ್ಧಿಜೀವಿಗಳಿಂದ ಕೂಡಿದುದು’ ಎಂದು ನಂಬಿದ್ದರು. ಡಬ್ಲ್ಯೂ.ಟಿ.ಒ. ಹಾಗೂ ಗ್ಯಾಟ್ ಒಪ್ಪಂದಗಳಿಂದ ಆಗುವ ವ್ಯಾಪಕ ಪರಿಣಾಮವನ್ನು ಕನ್ನಡಿಗರಿಗೆ ಸಮಗ್ರವಾಗಿ ಹಾಗೂ ಸಮರ್ಪಕವಾಗಿ ವಿವರಿಸಿದವರು ಎಂ.ಡಿ.ಎನ್ ಒಬ್ಬರೇ ಎಂದು ಕಾಣುತ್ತದೆ. ಜಾಗತೀಕರಣ ಕುರಿತು ನಾಡಿನ ಸಾಹಿತಿಗಳನ್ನು ಉದ್ದೇಶಿಸಿ ಅವರು ಆರಂಭಿಸಿದ ಮೇಲ್ಕಂಡ ಚರ್ಚೆಯಲ್ಲಿ ಕರ್ನಾಟಕದಲ್ಲಿ ಜಾಗತೀಕರಣ ಕುರಿತು ಅವರು ಈಗಾಗಲೇ ರೈತ ಸಮುದಾಯಕ್ಕೆ ನೀಡುತ್ತಿದ್ದ ಖಚಿತ ತಿಳಿವಳಿಕೆಯನ್ನು ಸಾಹಿತಿಗಳ ವಲಯದಲ್ಲೂ ಮೂಡಿಸುವ ಆಶಯವಿತ್ತು. ಆ ಹೊತ್ತಿಗಾಗಲೇ ಜಾಗತೀಕರಣದ ಫಲವಾಗಿ ಕರ್ನಾಟಕದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತಸಂಘಟನೆ ತನ್ನ ಕಾರ್ಯಕ್ರಮಗಳ ರೀತಿಯನ್ನು ಬದಲಾಯಿಸಿಕೊಳ್ಳಬೇಕಾದ ಸವಾಲು ಕೂಡ ಎದುರಾಗಿತ್ತು.

ಆ ಘಟ್ಟದಲ್ಲಿ ಅಖಿಲ ಭಾರತ ಮಟ್ಟದ, ಜಾಗತಿಕ ಮಟ್ಟದ ಸಮಾನಮನಸ್ಕ ಸಂಘಟನೆಗಳನ್ನು ಸಮಾನಕಷ್ಟದಲ್ಲಿರುವ ವರ್ಗಗಳ, ಸಮುದಾಯಗಳ ಸಂಘಟನೆಗಳನ್ನು ಒಟ್ಟುಗೂಡಿಸುವ ಕೆಲಸವನ್ನೂ ಎಂ.ಡಿ.ಎನ್ ಶುರುಮಾಡಿದ್ದರು. ರೈತಸಂಘಕ್ಕೆ ಹೊಸ ರೂಪ ಕೊಡಬೇಕಾಗಿತ್ತು. ಯಾರು ರೈತಸಂಘ ಬಿಟ್ಟು ಹೋದರೂ ಏನೂ ಆಗಿಯೇ ಇಲ್ಲವೆಂಬಂತೆ ಎಂ.ಡಿ.ಎನ್ ಸಂಘಟನೆಯಲ್ಲಿ ತೊಡಗಿಯೇ ಇದ್ದರು. ಎಪ್ಪತ್ತರ ದಶಕದಲ್ಲಿ ಹತ್ತು, ಇಪ್ಪತ್ತು ವಿದ್ಯಾರ್ಥಿಗಳ ಮೂಲಕವೇ ಚಳುವಳಿ ರೂಪಿಸಿದ್ದ ಎಂ.ಡಿ.ಎನ್ ಎಂಥ ನಿರಾಶೆಯ ಕಾಲದಲ್ಲೂ ಜನರ ಚಳುವಳಿಯನ್ನು ರೂಪಿಸಬಹುದೆಂಬ ಗಟ್ಟಿ ನಂಬಿಕೆ ಹೊಂದಿದ್ದರು. 2001ನೇ ಇಸವಿಯ ಹೊತ್ತಿಗೆ ತೆಂಗಿಗೆ ಹಬ್ಬಿದ ನುಸಿಪೀಡೆಯ ಸಂದರ್ಭದಲ್ಲಿ ತೆಂಗಿನ ಮರಗಳಿಂದ ನೀರಾ ಇಳಿಸುವ ಕಾರ್ಯಕ್ರಮವನ್ನು ಎಂ.ಡಿ.ಎನ್ ರೈತರಿಗಾಗಿ ರೂಪಿಸಿದಾಗ ಸರ್ಕಾರ ಸಾರಾಯಿ ಲಾಬಿಗೆ ಮಣಿದು ರೈತರನ್ನು ಹತ್ತಿಕ್ಕಲೆತ್ನಿಸಿತು. ಆಗ ನಂಜುಂಡಸ್ವಾಮಿಯವರು ರೈತ ಚಳುವಳಿಗೆ ನಂಜುಂಡಸ್ವಾಮಿಯವರ ಮಾತುಗಳನ್ನು ಕೇಳಿಸಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಬರುವುದು ಮತ್ತೆ ಶುರುವಾಗಿತ್ತು. ರೈತಸಂಘ ಈ ಹಿಂದೆ ರೂಪಿಸಿದ ಸ್ಥಳೀಕರಣ ಚಳುವಳಿಗಳು ಹಾಗೂ ತಮ್ಮ ಹಳ್ಳಿಯ ಸಂಪನ್ಮೂಲಗಳ ಬಗ್ಗೆ ಹಳ್ಳಿಗರ ಹಕ್ಕನ್ನು ಪ್ರತಿಪಾದಿಸಿದ ಚಳುವಳಿಗಳು ಜಾಗತೀಕರಣದ ಎದುರಿನಲ್ಲಿ ಹೊಸರೂಪ ಪಡೆಯಲೆತ್ನಿಸುತ್ತಿದ್ದವು. ಸರ್ಕಾರ ತಮ್ಮ ಬೆಳೆಗಳಿಗೆ ನಿಗದಿ ಮಾಡಿರುವ ಬೆಂಬಲ ಬೆಲೆಯ ವಿರುದ್ಧ ರೈತರು ಮತ್ತೆ ಬೀದಿಗಿಳಿಯತೊಡಗಿದ್ದರು. ಬೆಂಗಳೂರಿನಲ್ಲಿ ‘ಫಾರ್ಮ್ ಫ್ರೆಶ್’ ಎಂಬ ಬೃಹತ್ ತರಕಾರಿ ಅಂಗಡಿಯ ವಿರುದ್ಧ ಬೀದಿ ಬದಿಯ ಸಣ್ಣ ಪುಟ್ಟ ತರಕಾರಿ ಅಂಗಡಿಗಳ ಮಾರಾಟಗಾರರು ಪ್ರತಿಭಟಿಸಿದರು. ಇವೆಲ್ಲ ಬಿಡಿ ಬಿಡಿ ಘಟನೆಗಳಿರಬಹುದು. ಆದರೆ ಇವೆಲ್ಲವೂ ಎಂ.ಡಿ.ಎನ್ ಚೈತನ್ಯ ಈ ನಾಡಿನಲ್ಲಿ ಬಹುಕಾಲ ಬೆಳೆಯಲಿರುವುದರ ಜೀವಂತ ಸಂಕೇತಗಳಾಗಿವೆ.

4

ಮೂರು, ನಾಲ್ಕು ದಶಕಗಳ ಕಾಲ ಸಮಾಜವಾದಿ ಮಾರ್ಗವನ್ನು ಜೀವಂತವಾಗಿಟ್ಟ ಎಂ.ಡಿ.ಎನ್ ಈಗ ನಮ್ಮೊಡನೆ ಇಲ್ಲ. ಅವರ ಹಾಗೆ ನಾಡಿನ ಹಾಗೂ ರೈತರ ದಿಕ್ಕುದೆಸೆ ಕುರಿತು ಅಧ್ಯಯನ ಮಾಡಿ, ಯೋಚಿಸಿ ಹೇಳಬಲ್ಲಂಥ ದೊಡ್ಡ ನಾಯಕ ನಮ್ಮೊಡನೆ ಇಲ್ಲವಲ್ಲ ಎಂಬ ಶೂನ್ಯ ಅವರ ನಿರ್ಗಮನದ ನಾಲ್ಕು ವರ್ಷಗಳ ನಂತರವೂ ನಮ್ಮೆದುರಿಗಿದೆ. ಎಂ.ಡಿ.ಎನ್ ಅವರನ್ನು ಒಂದು ಕಾಲಘಟ್ಟವೂ ರೂಪಿಸಿತು. ಹಾಗೆಯೇ ಈ ಕಾಲ ಕೂಡ ಅಂಥ ನಾಯಕರನ್ನು ಸೃಷ್ಟಿಸಬಹುದು. ಈಗಾಗಲೇ ಉಳಿದ ರೈತ ನಾಯಕರು ತಂತಮ್ಮ ಮಟ್ಟದಲ್ಲಿ ಈ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ಇವತ್ತು ರೈತರ ಸಮಸ್ಯೆಗಳ ಬಗೆಗೆ ಅಧ್ಯಯನ ಮಾಡುತ್ತಿರುವ ವಿವಿಧ ಕ್ಷೇತ್ರಗಳ ಬುದ್ಧಿಜೀವಿಗಳು ನಿಲ್ಲುವುದು ಹಾಗೂ ರೈತ ಚಳುವಳಿಯ ಜೊತೆ ಜೀವಂತ ನಂಟು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆ ಮೂಲಕವಾದರೂ ನಂಜುಂಡಸ್ವಾಮಿಯವರ ನಿರ್ಗಮನದ ಶೂನ್ಯವನ್ನು ತುಂಬಿಕೊಳ್ಳಬೇಕಾಗಿದೆ. ಅದರ ಜೊತೆಗೇ ನಂಜುಂಡಸ್ವಾಮಿಯವರ ಅಸಂಖ್ಯಾತ ಬರಹಗಳು, ಭಾಷಣಗಳ ಕೈಪಿಡಿಯನ್ನು ನಾವು ತಯಾರಿಸಿ ಎಲ್ಲರಿಗೂ ತಲುಪಿಸಬೇಕಾಗಿದೆ.

ಕೊನೆಯದಾಗಿ, ಎಂ.ಡಿ.ಎನ್ ಅವರು 2004ರ ಜನವರಿ ತಿಂಗಳ ಕೊನೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ಹಾಸಿಗೆಯ ಮೇಲೊರಗಿ ಹಾಕಿದ ಸಹಿಯೊಂದನ್ನು ನೆನಪಿಸಿಕೊಂಡು ಈ ಮುನ್ನುಡಿಯನ್ನು ಮುಗಿಸಬಹುದು. ಆಗ ಮುಂಬೈಯಲ್ಲಿ ನಡೆಯುತ್ತಿದ್ದ ರೈತ ಸಮಾವೇಶಕ್ಕೆ ಕರ್ನಾಟಕದ ರೈತರು ಹೊರಟಿದ್ದರು. ಈ ಸಮಾವೇಶಕ್ಕಾಗಿ ರೈತಸಂಘದ ಬ್ಯಾಡ್ಜ್ ರೂಪಿಸಲು ಪತ್ರಕರ್ತ ಬಸವರಾಜು ಅವರಿಗೆ ಎಂ.ಡಿ.ಎನ್ ಹೇಳಿದ್ದರು. ಆ ಬ್ಯಾಡ್ಜ್ ಸಿದ್ಧವಾದ ಮೇಲೆ ಅವುಗಳನ್ನು ಪಕ್ಕಕ್ಕಿಟ್ಟು, ಬ್ಯಾಡ್ಜಿನ ಮೇಲೆ ತಮ್ಮ ಸಹಿ ಹಾಕಿ ಅದನ್ನು ಮರು ಮುದ್ರಿಸಲು ಸೂಚಿಸಿದ ಎಂ.ಡಿ.ಎನ್ ಹೇಳಿದರು : ‘ಈ ಸಹಿ ಇಲ್ಲದಿದ್ದರೆ ಬ್ಯಾಡ್ಜ್ ದುರುಪಯೋಗ ಆಗುತ್ತೆ’. ಅವರ ಶಿಸ್ತು ನೋಡಿ ಬಸವರಾಜು ನಕ್ಕರು. ಇದೊಂದು ಸಾಧಾರಣ ಘಟನೆ. ಆದರೆ, ಪ್ರೊಫೆಸರ್ ನಂಜುಂಡಸ್ವಾಮಿಯವರ ಸಹಿ ಕನ್ನಡನಾಡಿನ ರೈತ ಚಳುವಳಿಯ ಮೇಲೆ ಸದಾ ಇರುತ್ತದೆ ಎಂಬುದನ್ನು ಇದು ಸಾಂಕೇತಿಕವಾಗಿ ಸೂಚಿಸುತ್ತದೆ. ಎಂ.ಡಿ.ಎನ್ ಇಲ್ಲದ ಈ ಕಾಲದಲ್ಲಿ ರೈತಸಂಘದ ಅನೇಕ ನಾಯಕರು ಅವರಂತೆಯೇ ಮಾತಾಡುವುದನ್ನು ಕಂಡಾಗ, ಎಂ.ಡಿ.ಎನ್ ವಿಶ್ಲೇಷಣೆ ರೈತ ಕಾರ್ಯಕರ್ತರಿಗೆ ಇವತ್ತಿಗೂ ದಾರಿದೀಪವಾಗಿರುವುದನ್ನು ನೋಡಿದಾಗ, ಈ ಹಸಿರು ಸೇನಾನಿಯ ಸಹಿ ರೈತ ಸಂಘದಲ್ಲಿ ಸದಾ ಹಸಿರಾಗಿರುತ್ತದೆ ಎಂಬುದನ್ನು ನೆನೆದು ನಮ್ಮೆಲ್ಲರಲ್ಲೂ ಅವರ ಬಗ್ಗೆ ಕೃತಜ್ಞತೆ ಹುಟ್ಟುತ್ತದೆ.

* * *

4 Responses to "ಸಮಾಜವಾದಿ ಚಳುವಳಿಯ ಮಹಾನ್‍ ಗುರು"

 1. ಕೋಣಸಾಲೆ ಜಯರಾಮು.  January 21, 2017 at 10:13 pm

  ಕುಲಗೆಟ್ಟ ವ್ಯವಸ್ಥೆಗೆ ಸೂಯೂ೯ದಯವಾದಂತೆ ಇದೆ ಲೇಖನ.

  Reply
 2. Dhananjay  January 23, 2017 at 12:11 am

  ಐತಿಹಾಸಿಕ ಸಮಾಜವಾದಿ ಹೋರಾಟಗಾರನ ಕೇಛೇದೇಯ ಹೋರಾಟದ ಬದುಕು ಅವ್ರ ಸಮಾಜವಾದಿ ತತ್ವ.. ರೈತಪರ ಕಾಳಜಿ. ಸ್ತಿತಿ ಪ್ರಗ್ನೆ ಯನ್ನು ತಿಳಿಸಿದ್ದಕ್ಕೆ ನಟರಾಜ್ sir ಗೆ ತುಂಬು ಹ್ರುದಯದ ಧನ್ಯಾವದಗಳು.

  Reply
 3. R Narayanappa  January 28, 2017 at 4:16 pm

  Good presentation.

  Thanks

  Reply
 4. anandsu  January 29, 2017 at 8:25 am

  super

  Reply

Leave a Reply

Your email address will not be published.