‘ಸತ್ಯ ಹೊರಗೆಲ್ಲೋ ಹುಡುಕುವ ಪರವಸ್ತುವಲ್ಲ’

ಪ್ರೊ. ಎಸ್ . ಜಿ. ಸಿದ್ದರಾಮಯ್ಯ

1.
ಕುರಿಕಾವಲು ಬಿಟ್ಟು ಕವಿತೆ ಬರೆವುದು ಕಲಿತೆ
ಕೈಕುದುರಿದ್ದ ಆದಿಕಸುಬು ಬಿಟ್ಟು ಓದು ಕಲಿತೆ
ಕಲಿತು ಬರೆವ ಹೊತ್ತಿಗೆ
ಏರಿದೆ ಬಾಡಿನ ಬೆಲೆ
ಈಗ ಕವಿತೆ ಮಾರಿ ತಿನ್ನುವುದು ಅನ್ನ
ಸುಮ್ಮನೆ ಮಾತೆ!

ಕುರಿಕಾವಲು ಗಮಾರರ ಕೆಲಸ
ಎಂದು ಮೆಸ್ಟರಿಂದ ಇಕ್ಕಿಸಿಕೊಂಡು
ಬುದ್ದಿಗೇಡಿಗಳೆಂದು ಕುಕ್ಕಿಸಿಕೊಂಡು
ಆಡುಕಾವಲು ಅವಮಾನ ಅಂದುಕೊಂಡು
ಆಡುಬಿಟ್ಟೆ ಆಕಳುಬಿಟ್ಟೆ ಆಟವಾಡಿದ್ದ ಊರಕಾವಲು ಬಿಟ್ಟೆ
-(ಬಾಡು ಮತ್ತು ಕವಿತೆ)

ಈ ಮೇಲಿನ ಪದ್ಯದ ಸಾಲುಗಳು ರಂಗನಾಥ ಕಂಟನಕುಂಟೆಯವರ ಆತ್ಮಕಥನದ ಭಾಗದಂತಿದ್ದು ಇಂದಿನ ಸಾಂಸ್ಕøತಿಕ ರಾಜಕಾರಣಕ್ಕೆ ಹಿಡಿದ ಕನ್ನಡಿ ರೂಪದಂತಿವೆ. ಅಕ್ಷರಕ್ಕೆ ತೆರೆದುಕೊಂಡ ಬಹುತೇಕ ಬರಹಗಾರರನ್ನು ಈ ಬಗೆಯ ಒಳತೋಟಿ ಕಾಡಿದೆ. ಇಲ್ಲಿ ಮೇಲುನೋಟಕ್ಕೆ ಸರಳವಾಗಿ ಕೇಳಿಸುವ ಹಾಗೂ ಉಪಹಾಸದ ಭಾವದಲ್ಲಿ ಹರಿಯುವ ಈ ಸೊಲ್ಲುಗಳ ಆಂತರ್ಯದಲ್ಲಿ ಎರಡು ಜಗತ್ತುಗಳು ಮುಖಾಮುಖಿಯಾಗಿವೆ. ಆ ಮುಖಾಮುಖಿಯಲ್ಲಿ ಪಲ್ಲಟಗೊಂಡ ಮನಸ್ಸಿನ ಒಳಸಂಕಟವಿದೆ. ಒಂದು ಕಾಲದಲ್ಲಿ ಕುಲಕಸುಬು ಎನಿಸಿದ್ದ ಹಲವು ಕಸುಬುಗಳು ಕಾಲಾಂತರದಲ್ಲಿ ಸ್ಥಿತ್ಯಂತರಕ್ಕೆ ಒಳಗಾಗಿವೆ. ಲಾಭದಾಯಕವಾಗಿದ್ದ ಕಸುಬುಗಳು ಬದಲಾದ ವಿದ್ಯಮಾನದಲ್ಲಿ ಕುಲಕಸುಬಿನ ಬಂಧನದಿಂದ ಬಿಡುಗಡೆಗೊಂಡು ಉದ್ಯಮದ ಗತಿಗೆ ತಿರುಗಿವೆ. ಈ ಕಸುಬುಗಳನ್ನು ನಿರ್ವಹಿಸುವವರು ಕುಲಮೂಲದವರೇ ಆದರೂ ಅದರ ಮಾರುಕಟ್ಟೆ ನಿಯಂತ್ರಿಸುವವವರು ಬೇರೆಯವರಾಗಿದ್ದಾರೆ. ಶ್ರಮ ಯಾರದೋ ಶ್ರಮದ ಫಲ ಮತ್ತಿನ್ನರಾದೋ? ಅನ್ನುವ ವಾತಾವರಣ ನಿರ್ಮಾಣವಾಗಿದೆ.

Deva negilu-1 copyಈ ಕವಿತೆಯಲ್ಲಿ ಕಸುಬಿನಲ್ಲಿ ಬದಲಾದ ಲಾಭಕ್ಕೆ ಸಂಬಂಧಿಸಿದ ಮಾತಿದೆ. ಅದಕ್ಕೆ ಎದುರಾಗಿ ಆ ಮೂಲದಿಂದ ಹೊರಬಂದು ಬೇರೊಂದು ಜಗತ್ತಿಗೆ ಕಾಲಿಟ್ಟ ವ್ಯಕ್ತಿ ಎದುರಿಸುವ ಬೇರೆ ಬಗೆಯ ಸವಾಲುಗಳ ಚಿತ್ರಣವಿದೆ. ಇಂಡಿಯಾದ ಬಹುತ್ವ ಮೂಲದ ಸಮುದಾಯಗಳ ಗತಿಯೇ ಇಂತಹದ್ದು. ಮೂಲವನ್ನು ಬಿಟ್ಟು ಹೊಸದಕ್ಕೆ ತೆರೆದುಕೊಳ್ಳುವಷ್ಟರಲ್ಲಿ ಅದು ಹೊಸದಾಗಿರುತ್ತದೆ. ಆದರೆ ಹಳೆಯ ಪಟ್ಟಭದ್ರರ ಹಿಡಿತದಲ್ಲಿ ಅದಾಗಲೇ ವ್ಯವಸ್ಥೆಯಾಗಿರುತ್ತದೆ. ಅಲ್ಲಿ ವ್ಯವಸ್ಥೆಗೆ ಸಿಕ್ಕಿ ಹೊಸಬರು ಬಿಕರಿಯಾಗದ ಸರಕಾಗುತ್ತಾರೆ. ಹೀಗಾಗಿ ‘ಎರಡೂ ದದ್ದ ಹೊರಕ್ಕೆ ಹಾಕು’ ಎಂಬ ಗತಿಯ ತ್ರಿಶಂಕು ಸ್ಥಿತಿ ಇವರದಾಗುತ್ತದೆ. ಇಲ್ಲಿ ಗೆಲ್ಲಬೇಕೆಂದರೆ ಹಳೆಯ ಮಾನದಂಡಗಳನ್ನು ಕಳಚಿ ಕಿತ್ತೆಸೆಯಬೇಕು. ಹೊಸಬಗೆಯ ಬದಲಿ ಮಾನದಂಡಗಳನ್ನು ಹುಡುಕಿಕೊಳ್ಳಬೇಕು. ಇವು ಎಲ್ಲಿಂದಲೋ ಕಡತಂದ ಈ ನೆಲಕ್ಕೆ ಒಗ್ಗದ ಮಾನದಂಡಗಳಾಗಬಾರದು. ನಮ್ಮಲ್ಲಿಯೇ ಇದ್ದು ಗಮನಕ್ಕೆ ಬಾರದೇ ಹೋಗಿರುವ ಮಾನದಂಡಗಳಾಗಬೇಕು. ಹುಡುಕಿ ತೆಗೆದು ಹೊಸಬಳಕೆಗೆ ಒಗ್ಗಿಸಿಕೊಳ್ಳಬಹುದಾದ ಮಾನದಂಡಗಳಾಗಬೇಕು.

ಇಲ್ಲಿ ಒಂದು ಅನುಭವ ನೆನಪಾಗುತ್ತದೆ. ಅದೊಂದು ರೂಪಕಾನುಭವ. ಕಾವ್ಯವೆಂಬ ಕತ್ತಾಳೆ ಓಣಿಯಲ್ಲಿ ಓಡಾಡುವುದೆಂದರೆ ನನಗೊಂದು ಬಗೆಯ ಸಂಭ್ರಮ, ಸವಾಲು. ಕಾರಣ ಇಲ್ಲಿ ಎಚ್ಚರವೆಂಬುದು ಹೆಜ್ಜೆಗತಿಯ ಅರಿವು. ಎಚ್ಚರ ತಪ್ಪಿದರೆ ಮೈಯಲ್ಲಿ ಸೀಳುನೆತ್ತರು. ಕಾಲಡಿಯಲ್ಲಿ ಚುಚ್ಚುಮುಳ್ಳು. ಬಗ್ಗುವಂತಿಲ್ಲ ಹಿಗ್ಗುವಂತಿಲ್ಲ. ಆದರೆ ಎಚ್ಚರದ ಗತಿಗೆ ಅದೊಂದು ಸಾಹಸದ ಅನುಭೂತಿಯನ್ನು ಉಣಬಡಿಸುವ ಅನುಭವ. ನಾನು ಇಲ್ಲಿ ಕತ್ತಾಳೆ ಓಣಿಯನ್ನು ನೆನಪಿಸಿದ್ದು ಬಾಲ್ಯದಲ್ಲಿ ಅನುಭವಿಸಿದ ನನ್ನೂರಿನ ಕತ್ತಾಳೆ ಓಣಿಯನ್ನು ನೆನೆದು. ಊರಿನ ಬಡಗ ದಿಕ್ಕಿಗೆ ನಡೆದರೆ ಜಂಗ್ಲಿ ದನ ತರುಬುವ ಜಾಗ. ಅಲ್ಲಿಂದ ದನಗಳನ್ನು ನಡೆಸಿಕೊಂಡು ಮುನ್ನಡೆದರೆ ಕೊಡಗಿ ಈಚಲಕಟ್ಟೆ. ಅದರ ನಂತರ ಗೋಮಾಳ. ಅಲ್ಲಿಂದ ಉದ್ದಕ್ಕೆ ಕಾಡಿನವರೆಗೆ ಹರಿದ ಕತ್ತಾಳೆ ಓಣಿ. ಆ ಓಣಿಯ ಇಕ್ಕೆಲಗಳಲ್ಲಿ ಹೊಲಮಾಳಗಳು. ಕಿರಿದಾದ ಆ ಕತ್ತಾಳೆ ಓಣಿಯಲ್ಲಿ ದನಗಳನ್ನು ಅಟ್ಟಿಸಿಕೊಂಡು ನಡೆಯುವುದೆಂದರೆ ಅದೊಂದು ಸಾಹಸಯಾನ. ಕಣ್ತಪ್ಪಿಸಿ ಹೊಲಮಾಳಕ್ಕೆ ನುಗ್ಗುವ ಕಡಸುಗಳನ್ನು ಕಣ್ಗಾವಲಲ್ಲಿ ಗಮನಿಸುತ್ತಿರಬೇಕು. ಯಾವ ರಾಸೂ ಹಿಂದುಳಿಯದಂತೆ ನೋಡಿಕೊಳ್ಳಬೇಕು. ಹೀಗೆ ದನದ ಹಿಂಡನ್ನು ಕಣ್ಗಾವಲಲ್ಲಿ ಕಾಯುತ್ತಲೇ ಅಕ್ಕಪಕ್ಕ ಗರಗಸದಂತೆ ಗರಿಗೆದರಿ ಹಬ್ಬಿರುವ ಕತ್ತಾಳೆ ಪಟ್ಟೆಗಳು. ಅವುಗಳ ತುದಿಯಲ್ಲಿ ದಬ್ಬಳದಂತೆ ಚುಚ್ಚುವ ಮುಳ್ಳುಗಳು. ಇನ್ನು ಸಂಜೆಹೊತ್ತಲ್ಲಿ ಕತ್ತಾಳೆ ಬೇಲಿಯ ಮರೆಯಲ್ಲಿ ಹೊಂಚಿ ಕೂರುವ ಕಿರುಬ. ಇದರ ನೆನಪೇ ಭಯಹುಟ್ಟಿಸುವಂತಹದ್ದು.

ಕಾವ್ಯದ ಓದಿಗೆ ತೊಡಗಿದಾಗ ಹಲವು ಓದಿನ ಸಂದರ್ಭದಲ್ಲಿ ನನಗೆ ಈ ಅನುಭವ ರಸಾದ್ರ್ರ ಅನುಭೂತಿಯಾಗಿ ಕಾಡುತ್ತಿರುತ್ತದೆ. ಇಲ್ಲಿನ ಭಯಕ್ಕೆ ಆತಂಕಕ್ಕೆ ಬದುಕಿನ ಎಚ್ಚರಿಕೆಯ ಹೊಣೆಗಾರಿಕೆ ಇದೆ. ಅದು ತಾನು ಮಾತ್ರ ಸುರಕ್ಷಿತವಾಗಿರಬೇಕು ಎಂಬ ಸ್ವಹಿತದ ಎಚ್ಚರಿಕೆಯಲ್ಲ. ರಾಸುಗಳನ್ನು ಕಾಪಾಡುವ ಎಚ್ಚರಿಕೆ ಅದರ ಜೊತೆಗೆ ವೈಯಕ್ತಿಕ ವೈಯಕ್ತಿಕ ಶ್ರಮದ ಕಷ್ಟ ಸಾಧ್ಯತೆಯಲ್ಲಿ ಮೈಯಲ್ಲ ಕಣ್ಣಾಗಿರುವ ಎಚ್ಚರಿಕೆ. ತುಡುಗು ಕಡಸುಗಳಂತೆ ಅರ್ಥದ ಹಾದಿತಪ್ಪಿದ ಪದಗತಿಗಳಿಂದ ಆಗುವ ಅವಾಂತರಗಳನ್ನು ನಿಭಾಯಿಸುವ ಎಚ್ಚರ. ಈ ಎಲ್ಲವನ್ನೂ ತೂಗಿಸುವ ಸಮಯಾವಧಾನದ ನಡೆಯೇ ಸಾಹಸದ ಸಂಭ್ರಮದ ನಡೆ. ಕಾವ್ಯದ ಓದಿನ ಅನುಭೂತಿಯ ಖುಷಿ ಈ ಪರಿಯಲ್ಲಿ ನನ್ನನ್ನು ನಿತ್ಯದ ಕಷ್ಟದ ದಾರಿಯಾಗಿಸಿದೆ. ಕತ್ತಾಳೆ ಓಣಿಯೆಂಬುದು ನನ್ನ ಅಂತರಂಗದ ಅನುಭೂತಿಯ ಕಾಲುದಾರಿ. ಕಾವ್ಯವನ್ನು ಅರಿಯುವ ಹೆಜ್ಜೆಗತಿಯ ಋತದ ದಾರಿ. ಕಂಟನಕಂಟೆಯವರ ‘ದೇವನೇಗಿಲು’ ಕವನ ಸಂಕಲನವನ್ನು ಓದುವಾಗಲೂ ಈ ಅನುಭವ ಮರುಕಳಿಸಿದ ನಡೆಯೇ ಆಯಿತು.

‘ಬಾಡು ಮತ್ತು ಕವಿತೆ’ ಕವನವನ್ನು ಓದುವಾಗ ಅಲ್ಲಿ ಉದ್ದಕ್ಕೂ ಎರಡು ಜಗತ್ತುಗಳ ಸಂಘರ್ಷ ದನಿರೂಪದಲ್ಲಿ ಹರಿದಿದೆ.
ನನ್ನಪ್ಪ ನನ್ನವ್ವ ಧಾನ್ಯಗಳ ದಲ್ಲಾಳಿಗಳಿಗೆ ಬೆಲೆಕಟ್ಟಲು ಬಿಟ್ಟಂತೆ
ದುಡಿವವರ ಬರೆವವರ ಹೊಟ್ಟೆ ಕಣ್ಣು ಇಲ್ಲವೆ ತಲೆಗೆ
ಬಟ್ಟೆಯಿಲ್ಲದವರ ಕವಿತೆಗೇನು ಬೆಲೆ? ಬೆವರಿಗೇನು ಬೆಲೆ?
ಬಾಡಾದರೂ ಬೇಕು ತಿನ್ನಲು; ಕವಿತೆಯೇಕೇ ಮುಗ್ಗಲು?

ಇಂಥ ಮಾತುಗಳು ಕಾವ್ಯ, ಕುಲಕಸುಬು ಮತ್ತು ಮಾರುಕಟ್ಟೆಯ ನಡುವಿನ ಬಹುದೊಡ್ಡ ಹೋರಾಟವನ್ನು ತಣ್ಣಗಿನ ದನಿಯಲ್ಲಿ ಹೇಳುತ್ತಿವೆ. ಇಡೀ ಕವಿತೆಯಲ್ಲಿ ಆ ಎರಡು ಜಗತ್ತಿಗೆ ಸಂಬಂಧಿಸಿದ ವಿವರಗಳು ಹಲವು ಬಗೆಯಲ್ಲಿ ಮುಖಾಮುಖಿಯಾಗಿವೆ. ಆದರೆ ಇವುಗಳನ್ನು ವಾಚ್ಯದ ಹಂಗಿನಲ್ಲಿ ಉಪೇಕ್ಷಿಸಿ ನಡೆದರೆ ಕವಿತೆಯ ಮೂಲದ್ರವ್ಯವೇ ಕಳೆದು ಹೋಗುವ ಅಪಾಯವಿದೆ. ಹಾಗೆಂದು ಇವುಗಳಲ್ಲಿ ಕಾವ್ಯದ ಧ್ವನಿ ರಮ್ಯತೆ ಎಂಬುದು ಪ್ರತಿಮೆ ರೂಪಕಗಳ ಹಂಗಿನಲ್ಲಿ ಹರಿದಿದೆಯೇ ಎಂದರೆ ಅದೂ ಇಲ್ಲ. ಇಲ್ಲಿರುವುದು ನೇರ ಮಾತು. ನೇರ ಅನುಭವ. ಒಂದು ರೀತಿಯಲ್ಲಿ ಹನ್ನೆರಡನೆಯ ಶತಮಾನದ ಕೆಳವರ್ಗದ ವಚನಕಾರರ ರಚನೆಯ ಮಾದರಿಯಂತೆ ಕಂಡರೂ ಅಲ್ಲಿನ ಕಾಯಕ ಪರಿಭಾಷೆಯ ನೈಜತೆಯೂ ಇಲ್ಲಿ ಇಲ್ಲ. ಹೀಗಿದ್ದೂ ಇಲ್ಲಿ ನಾವು ಗಮನಿಸಬೇಕಾದ ಮುಖ್ಯಸಂಗತಿ ಎಂದರೆ ಅದು ಒಂದು ಕಾಲಮಾನದ ತಲ್ಲಣ ತವಕ ಭಯ ಆತಂಕಗಳನ್ನು ವ್ಯಕ್ತಿಗತ ನೆಲೆಯಲ್ಲಿ ಹೇಗೆ ಹಿಡಿದಿಟ್ಟಿದೆ ಎಂಬುದು. ಇದು ವ್ಯಕ್ತಿಯ ವೈಯಕ್ತಿಕತೆಯಲ್ಲಿ ತೀವ್ರತೆ ಪಡೆದುಕೊಳ್ಳುತ್ತಲೇ ಸಾಮಾನ್ಯೀಕರಣಗೊಳ್ಳುವ ಚಾರಿತ್ರಿಕ ಮಹತ್ವದ ಸಂವೇದನೆಯಾಗುತ್ತದೆ. ಕವಿತೆ ಈ ಎಲ್ಲ ವಿಚಾರಗಳನ್ನು ಅಧ್ಯಾಹಾರ ಭಾವದಲ್ಲಿ ತನ್ನ ಗರ್ಭದಲ್ಲಿ ಒಳಗೊಂಡಿದೆ. ಈ ಅಂಶಗಳನ್ನು ಅರಿಯಬೇಕಾದ ಕತ್ತಾಳೆಯ ಓಣಿಯ ಮೈಯೆಲ್ಲ ಕಣ್ಣಾಗಬೇಕಾದ ನಡೆಪ್ರಜ್ಞೆಯ ಎಚ್ಚರದ ಅಗತ್ಯವಿದೆ.

2.
ದೇವನೇಗಿಲು’ ಕಂಟನಕುಂಟೆಯವರ ನಾಲ್ಕನೆಯ ಕವನ ಸಂಕಲನ. ಇದು ಅವರು ಕಾವ್ಯ ರಚನೆಯ ದಾರಿಯಲ್ಲಿ ಈಗಾಗಲೇ ಸಾಕಷ್ಟು ದೂರ ಕ್ರಮಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಮೊದಲಿನ ರಚನೆಗಳಲ್ಲಿ ಎಡಪಂಥೀಯ ಸಿದ್ಧಾಂತಗಳ ಬೌದ್ಧಿಕತೆ ಢಾಳಾಗಿ ಕೇಳುತ್ತಿತ್ತು. ಅನುಭವಗಳನ್ನು ಒಳಕ್ಕೆ ತೆಗೆದುಕೊಳ್ಳುವ ಸಂವೇದನಾಶೀಲ ಗುಣಕ್ಕಿಂತ ಸೈದ್ಧಾಂತಿಕ ಚೌಕಟ್ಟಿನ ಗಣಿತಾತ್ಮಕತೆಯಲ್ಲಿ ಮಾತನಾಡುವ ದಾಟಿ ಮೇಲುಗೈ ಪಡೆದಿತ್ತು. ಆದರೆ ಬದುಕು ಬಹಳ ದೊಡ್ಡದು. ಅದು ಕಲಿಸುವ ಪಾಠ ಸಿದ್ಧಾಂತಗಳ ಮಿತಿಯನ್ನು ಅರಿವಿಗೆ ತಂದು ಅನುಭವದ ಮೂಸೆಯಲ್ಲಿ ಎಲ್ಲವನ್ನೂ ಕಾಯಿಸಿ ಕರಗಿಸುವ ಕಮ್ಮಟಶಾಲೆಯಾಗಿದೆ. ಗ್ರಾಮೀಣ ಮೂಲದಿಂದ ಬಂದ ಕಂಟನಕುಂಟೆಯವರಿಗೆ ಸಿದ್ದಾಂತಗಳ ಅರಿವು ತಮ್ಮ ಚಿಂತನಾಕ್ರಮವನ್ನು ತೀಕ್ಷ್ಣಗೊಳಿಸಿಕೊಳ್ಳಲು ಒದಗಿಬಂದ ಸಾಣೆಕಲ್ಲಾಗಿದೆ. ಗ್ರಾಮಭಾರತವನ್ನು ಅದರ ಬಹುತ್ವಗಳ ಕ್ರಿಯಾಶೀಲತೆಯನ್ನು ಅವುಗಳಿಗೆ ಅಂಟಿಕೊಂಡಿರುವ ಜಾತಿರೋಗವನ್ನು ಕೇವಲ ವರ್ಗದೃಷ್ಟಿಯ ವಿಶ್ಲೇಷಣೆಯಲ್ಲಿ ಬಗೆಹರಿಸಲಾಗದು. ಎರಡೆರಡಲ ನಾಲ್ಕು ಎಂಬ ಗಣಿತಾತ್ಮಕ ನಡೆಯ ಯಾವುದೇ ಚಿಂತನೆಗಳಿಗೆ ಮಿತಿಯಿದೆ. ಇದನ್ನು ಬದುಕಿನ ಪಾಠವಾಗಿ ಒಳಕ್ಕೆ ತೆಗೆದುಕೊಂಡ ರಂಗನಾಥರು ಸಿದ್ಧಾಂತ ಹೇಳುವ ದೃಷ್ಟಿಕೋನವನ್ನು ಕಂದೀಲಿನಂತೆ ಬಳಸಿಕೊಳ್ಳುತ್ತಾರೆ. ಹಾಗೆ ಬಳಸಿಕೊಳ್ಳುತ್ತಲೇ ವಾಸ್ತವಾನುಭವದ ಹಲವು ಮಗ್ಗುಲುಗಳನ್ನು ಅರಿಯಲು ಪ್ರಯತ್ನಶೀಲರಾಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕಾವ್ಯವನ್ನು ಕುರಿತು ಮಾತನಾಡುವಾಗ ಬಹುತೇಕ ಮಂದಿ ನಿರಾಶೆಯ ದನಿಯೆತ್ತಿ ಕಳೆದುಹೋದ ಸಮೃದ್ಧಿಯ ನೆನಪಿನ ಹಳಹಳಿಕೆಯಲ್ಲಿ ಹಲುಬುವುದು ಜಾಸ್ತಿಯಾಗಿದೆ. ಇಡೀ ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಅವಲೋಕಿಸಿದರೆ ಅಲ್ಲಿ ಢಾಳಾಗಿ ಕಾಣುವುದು ಛಂದೋವೈವಿಧ್ಯದಲ್ಲಿ ನಡೆದಿರುವ ಪ್ರಯೋಗಶೀಲತೆ. ಛಂದಸ್ಸಿನ ಆವರಣವನ್ನು ಹಾಕಿಕೊಳ್ಳುತ್ತಲೇ ಉಲ್ಲಂಘನೆಗಳಿಗೆ ತುಡಿದು ಯಶ ಸಾಧಿಸಿದ ಪ್ರಯೋಗ ಪರಂಪರೆ ಕನ್ನಡದ್ದು. ಈ ಪ್ರಯೋಗಗಳು ಕಾಲದ ಬದುಕಿನ ಲಯಕ್ಕೆ ಶೃತಿಕೊಟ್ಟಂತೆ ಹುಟ್ಟಿ ಬೆಳೆದವು. ಅಂದರೆ ಭಾಷಾ ರಚನೆಯ ಸ್ವರೂಪವೆಂಬುದು ಕಾಲದ ಮಿಡಿತಕ್ಕೆ ಹುಟ್ಟಿ ಹರಿದದ್ದು. ಇದು ಪರಂಪರೆ ಮತ್ತು ಪ್ರಯೋಗಶೀಲತೆ ಸಂಲಗ್ನದಲ್ಲಿ ಹುಟ್ಟಿ ಬೆಳೆವ ಭಾಷೆಗಿರುವ ಟೈಂ ರಿದಂ. ಈ ರೀತಿಯ ಬದಲಾವಣೆಗಳ ಆಂತರ್ಯದಲ್ಲಿ ಹಲವು ಬಗೆಯ ಪ್ರಭಾವ ಪರಿಕರಗಳು ಕೆಲಸ ಮಾಡಿರುತ್ತವೆ. ದೈನಂದಿನ ಬದುಕಿನಲ್ಲಿ ಭಾಷೆಯ ಬಳಕೆಯಲ್ಲಾಗುವ ವ್ಯತ್ಯಾಸ ಸೂಕ್ಷ್ಮತೆಗಳಿಂದ ಮೊದಲ್ಗೊಂಡು ಬದುಕಿನೊಳಗೆ ಘಟಿಸುತ್ತಿರುವ ಸಾಮಾಜಿಕ ಸಾಂಸ್ಕøತಿಕ ಪಲ್ಲಟಗಳು; ರಾಜಕೀಯ, ವೈಜ್ಞಾನಿಕ ಬೆಳವಣಿಗೆಗಳು, ಅನ್ಯಭಾಷಾ ಸಂಸರ್ಗದಿಂದ ಒತ್ತಡಗಳು; ಹೀಗೆ ಬದುಕನ್ನು ಪ್ರಭಾವಿಸುವ ಎಲ್ಲವೂ ಭಾಷೆಯನ್ನು ರೂಪಿಸುವ ಮೂಲದ್ರವ್ಯಗಳೇ ಆಗಿರುತ್ತವೆ. ಆದ್ದರಿಂದ ಕಾಲದಂತುವನರಿತಂತೆ ಭಾಷಿಕ ನುಡಿಗಟ್ಟು ಬದಲಾಗುತ್ತದೆ. ಪರಿಭಾಷೆಯಲ್ಲಿ ಪರಿಕಲ್ಪನೆಯಲ್ಲಿ ಚಿಂತನೆ ಸಿದ್ಧಾಂತದ ತಿಳುವಳಿಕೆ ದನಿಪಡೆಯುತ್ತಾ ಹೋಗುತ್ತದೆ.

ಹೀಗಾಗಿ ಇಂದಿನ ಕನ್ನಡವೆಂಬುದು ಇದ್ದಕ್ಕಿದ್ದಂತೆ ಉದ್ಭವವಾದ ಕನ್ನಡವಲ್ಲ. ಪರಂಪರೆಯಲ್ಲಿ ಬೇರುಬಿಟ್ಟು ವರ್ತಮಾನದಲ್ಲಿ ಅರಳಿದ ಕುಸುಮ ಗಂಧ. ರಂಗನಾಥರ ಕಾವ್ಯಭಾಷೆ ಕನ್ನಡ ಪರಂಪರೆಯಲ್ಲಿನ ಎಲ್ಲ ಕಾಲದ ಪ್ರಯೋಗ ಮಾದರಿಗಳ ಫಲಸಾರವನ್ನು ಅರಗಿಸಿಕೊಂಡು ಉಸಿರಾಡಿದೆ. ಇತ್ತೀಚೆಗೆ ಕೆಲವು ಟೆಕ್ಕಿಗಳು ಕತೆ ಕವಿತೆ ಬರೆಯಲು ಪರಂಪರೆಯ ಅಧ್ಯಯದ ಅಗತ್ಯವೇನೂ ಇಲ್ಲ ಎನ್ನುವ ಠೇಂಕೃತಿಯ ಮಾತನಾಡಿದ್ದಾರೆ. ಅವರ ಕತೆ ಕವಿತೆಗಳ ಭಾಷಾ ಪ್ರಯೋಗದಲ್ಲಿ ಏಕತಾನತೆ ಹಾಗೂ ಸತ್ವಹೀನತೆ ಕಂಡುಬರುತ್ತದೆ. ಇವರ ಭಾಷೆ ಇಂಗ್ಲಿಷ್ ಬಳಕೆಯ ಬಾಹ್ಯ ಪ್ರಯೋಗದ ರೈಂ ರಿದಂಗಳನ್ನು ಅನುಕರಿಸಿದಂತೆ ರಚನೆಯಾದ ನೆರಳು ಭಾಷೆಯೇ ಹೊರತು, ಪರಂಪರೆಯ ಭೂಮಿಕೆಯಲ್ಲಿ ರಸಹೀರಿ ಬೆಳೆದ ಜೀವಭಾಷೆಯಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ರಂಗನಾಥ ಕಂಟನಕುಂಟೆಯವರ ಕಾವ್ಯದ ಭಾಷೆ ಈ ಪರಿಯ ನೆರಳು ರಚನೆಯಲ್ಲ; ಅದು ಜೀವಜೀವದ ಅನನ್ಯತೆಯ ಹುಡುಕಾಟದಲ್ಲಿ ನೆಲದ ಐಡೆಂಟಿಟಿಯನ್ನು ಅರಸಿ ಹೊರಟ ಬೇರುಗುಣ ರೂಪಿಯದು. ಈ ಹುಡುಕಾಟದಲ್ಲಿ ತಪ್ಪು ಹೆಜ್ಜೆಗಳಿದ್ದರೂ ಅದು ಮಗುವಿನ ತೊದಳು ನಡಿಗೆ ಗತಿ ಲಾವಣ್ಯದ ಬೆಡಗಿನ ತಪ್ಪುನಡೆಯಂತೆ.

3.
ಸ್ವಕೀಯವೂ ಸರ್ವಜೀವಸಂಕುಲವೂ
ರಂಗನಾಥ ಕಂಟನಕುಂಟೆಯವರದು ಸಮಾನತೆಯ ಸಮಾಜವಾದಿ ಚಿಂತನೆಗಳನ್ನು ಒಳಗೊಂಡ ಮನಸ್ಸು. ಪ್ರಜಾಪ್ರಭುತ್ವದ ನಡೆಯನ್ನು ಸಕಾರಾತ್ಮಕವೂ ಕ್ರಿಯಾಶೀಲವೂ ಆದ ನೆಲೆಯಲ್ಲಿ ನಿರೀಕ್ಷಿಸುತ್ತದೆ. ಬೇರೆ ಯಾವುದೇ ಬದಲಿ ಆಡಳಿತ ಮಾದರಿಗಳನ್ನು ಸದ್ಯಕ್ಕೆ ಕಲ್ಪಿಸುವುದು ಸಾಧ್ಯವಿಲ್ಲದ ಅನುಭವಾತ್ಮಕ ಚರಿತ್ರೆ ನಮ್ಮ ಕಣ್ಣೆದುರಿಗಿರುವಾಗ ಸದ್ಯದ ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಎಲ್ಲ ಸಮಸ್ಯೆಗಳಿಗೂ ಇತ್ಯರ್ಥಗಳನ್ನು ಹುಡುಕುವುದು ಅನಿವಾರ್ಯ. ಇಂತಹ ಅನಿವಾರ್ಯತೆಯಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಎದುರಿಗಿಟ್ಟುಕೊಂಡು ಸ್ಥಾವರಗೊಂಡ ಆಡಳಿತದ ನಡೆಯನ್ನು ಭ್ರಷ್ಟಗೊಂಡ ಅದರ ಮನೋಸ್ಥಿತಿಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಬಗೆಯ ಟೀಕೆ ಇವರ ಕವಿತೆಯಲ್ಲಿ ವ್ಯಂಗ್ಯಭಾವದಲ್ಲಿ ಹರಿದಿರುವುದೇ ಹೆಚ್ಚು. ತಿಳಿವಳಿಕೆ ರೂಪಕಗಳ ಮೂಲಕ ಮಾತನಾಡುತ್ತದೆ ಎಂಬ ಲೋಕೋಕ್ತಿಯನ್ನು ಸಮರ್ಥಿಸಿದಂತೆ ಇಲ್ಲಿನ ಬಹುತೇಕ ಕವಿತೆಗಳು ಮೂಡಿಬಂದಿವೆ. ಭ್ರಷ್ಟಾಚಾರದ ಪೆಡಂಭೂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇರೆ ಮೀರಿದ ಸ್ಥಿತಿಯಲ್ಲಿ ಕೊಬ್ಬುತ್ತಿರುವುದನ್ನು ‘ಬಲೂನು ಮತ್ತು ಸೂಜಿ’ ಎಂಬ ಕವನ ಸಮರ್ಥವಾಗಿ ಕಟ್ಟಿಕೊಟ್ಟಿದೆ.

Deva negilu-1 copyಇಲ್ಲಿ ಬಕನ ರೂಪಕದಲ್ಲಿ ಭ್ರಷ್ಟವ್ಯವಸ್ಥೆಯ ಅಜಗರ ನಡೆಯನ್ನು ಕವಿ ಸೂಕ್ಷ್ಮವಾಗಿ ನಿರೀಕ್ಷಿಸಿದ್ದಾರೆ. ವಾಚ್ಯದಲ್ಲಿ ಹರಿದಂತೆ ಪ್ರಾರಂಭವಾಗುವ ಕವನ ಬೆಳೆಬೆಳೆದಂತೆ ತನ್ನ ವ್ಯಂಗ್ಯ ಧೋರಣೆ ಆಳದಲ್ಲಿ ಸಂಕಟವನ್ನು ತುಂಬಿಕೊಂಡಿರುವುದು ವೇದ್ಯವಾಗುತ್ತದೆ. ಜನಲೋಕಪಾಲ ಮಸೂದೆಯನ್ನು ಜಾರಿಗೆ ತರಲು ನಡೆದ ಹೋರಾಟದ ಘಟನೆಗಳೂ ಯಾವ ಪರಿಯ ತಂತ್ರಗಾರಿಕೆಯನ್ನು ಒಳಗೊಂಡಿದ್ದವು ಎಂಬುದನ್ನು ಕವಿತೆಯ ಕೊನೆಯ ಸಾಲುಗಳು ವ್ಯಂಜಿಸುತ್ತವೆ. ವೈರುಧ್ಯ ಮಾದರಿಗಳನ್ನು ಎದುರಿಗಿಟ್ಟು ಮಾತನಾಡುವ ಕವಿಭಾವ ದೇಶದ ಸಾಮಾಜಿಕ ರಾಜಕೀಯ ಸ್ಥಿತಿಯನ್ನು ವ್ಯಂಗ್ಯಾತ್ಮಕ ತೀಕ್ಷ್ಣತೆಯಲ್ಲಿ ಶೋಧಿಸಿದೆ. ಬದಲಾದ ಸಾಂಸ್ಕøತಿಕ ಸನ್ನಿವೇಶದಲ್ಲಿ ಹೊಸ ಆವಿಷ್ಕಾರಗಳು ಉಳ್ಳವರ ಖಜಾನೆ ತುಂಬಿಸುತ್ತಲೇ ಬಡವರ ಬದುಕಿನ ನೆಮ್ಮದಿ ಶಾಂತಿಯನ್ನು ಬಲಿಗೊಟ್ಟು ಬೆಳೆಯುವವು ಎಂಬುದನ್ನು ‘ದೀಪದ ಕಣ್ಣು’ ಕವನ ಸಾಂದ್ರವಾಗಿ ವ್ಯಂಜಿಸಿದೆ. ಫಿಲಿಪ್ಸ್ ಬಲ್ಪಿನ ಪ್ರಖರತೆ ಹಾಗೂ ಎಣ್ಣೆ ಬತ್ತಿ ತೈಲದ ದೀಪದ ಬೆಳಕು ಇವುಗಳ ಮುಖಾಮುಖಿಯಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದ್ದಾರೆ. ಝಗಝಗಿಸುವ ಪ್ರಖರತೆ ಮತ್ತು ಒಲವಿನ ದೀಪದ ಕಣ್ಣುಗಳ ತಣ್ಣನೆಯ ಬೆಳಕು ಇವೆರಡೂ ಎರಡು ಭಿನ್ನ ನೆಲೆಯ ಬದುಕಿನ ಆಂತರ್ಯವನ್ನು ಬಿಚ್ಚಿಡುತ್ತವೆ.

ಹೀಗೆ ಸಮಾಜಮುಖಿ ಚಿಂತನೆಯಲ್ಲಿ ರಚಿತವಾದ ಕವನಗಳಂತೆ ಸ್ವವಿಮರ್ಶೆಯಿಂದ ಕೂಡಿದ ರಚನೆಗಳೂ ಈ ಸಂಕಲನದಲ್ಲಿ ಸ್ಥಾನಪಡೆದಿವೆ.
ಆಲೆಮನೆ ಕೊಪ್ಪರಿಗೆಯ ಬೆಲ್ಲದ ಮಳಲಂತೆ
ದ್ವೇಷ ಕುದಿವ ನನ್ನೆದೆಯಲ್ಲಿ
ನೆರೆಕೆರೆಯ ಪ್ರೀತಿಸಲು ನೆಲೆಯಿಲ್ಲ ಒಂದಿನಿತೂ
ಕಂಟನಕುಂಟೆಯವರ ಆತ್ಮನಿರೀಕ್ಷಾ ಪ್ರಜ್ಞೆ ‘ಸತ್ಯ ಹೊರಗೆಲ್ಲೋ ಹುಡುಕುವ ಪರವಸ್ತುವಲ್ಲ’ ತನ್ನೊಳಗೇ ತಾನೇ ಶೋಧಿಸಿ ಕಂಡುಕೊಳ್ಳಬೇಕಾದ ಬೆಳಕು’ ಎಂಬ ಅನೂಭೂತಿ ನಡೆಗುಣದಿಂದ ಕೂಡಿದೆ. ಸ್ವಕೀಯಗುಣದ ಕವಿತೆಗಳಲ್ಲಿ ಸ್ವವಿಮರ್ಶೆ ಇದ್ದಾಗ ಅವುಗಳಿಗೆ ತಾಳಿಕೆಯ ನೈತಿಕ ಬಲ ಪ್ರಾಪ್ತವಾಗುತ್ತದೆ. ಅದಿಲ್ಲದೆ ಸ್ವರತಿಯೇ ಪ್ರಧಾನವಾದರೆ ಜಲೋದರ ಭಾರದಲ್ಲಿ ಕವಿತೆ ನರಳುತ್ತದೆ. ಕಂಟನಕುಂಟೆಯವರಲ್ಲಿ ಸದಾ ಎಚ್ಚರವಾಗಿರುವ ಸಾಮಾಜಿಕ ವಿವೇಕ ಸ್ವಾನುರತಿಯಲ್ಲಿ ಮುಳುಗುವುದಿಲ್ಲ. ಸ್ವಮರುಕದಲ್ಲಿ ನರಳುವುದೂ ಇಲ್ಲ. ಅದಕ್ಕಿಂತ ಭಿನ್ನವಾಗಿ ಸಮದೂರದಲ್ಲಿ ನಿಂತು ತನ್ನನ್ನೂ ತನಿಖೆಗೊಡ್ಡುವ ಜಾಗೃತ ಪ್ರಜ್ಞೆಯದು. ಸದಾ ನೊಂದವರ ಪರವಾಗಿ ನುಡಿವ ಎದೆಗಾರಿಕೆಯ ಕವಿ.
ಗುಬ್ಬಿಯ ಮೇಲೆ ಬಳಸಿ ಬ್ರಹ್ಮಾಸ್ತ್ರ
ಗೆಲುವೆಂದರೆ ಅದು ಗುಬ್ಬಿಯ ಗೆಲುವುದು
ಬ್ರಹ್ಮಾಸ್ತ್ರದ ಅವಮಾನ
ಹೂಡಿದ ಮನದ ಕತ್ತಲೆ
ತನ್ನ ಎದೆಯ ತಾನೇ ಸಿಡಿಸಿದ ಅವಿವೇಕ
ತನ್ನ ಕಣ್ಣುಗಳ ತಾನೇ ಜಜ್ಜಿ ಪಡೆದ ಕುರುಡುತನ
ತನ್ನ ಮೆದುಳನ್ನು ತಾನೇ ಕಿತ್ತು ತಿಂದ ಕಿರಾತಕತನ

ಈ ಮೇಲಿನ ಸಾಲುಗಳು ಕಂಟನಕುಂಟೆಯವರ ಕಾವ್ಯದ ಲಕ್ಷ್ಯ ಲಕ್ಷಣದಂತಿವೆ. ಇಲ್ಲಿ ಪ್ರತೀತಗೊಳ್ಳುವ ಲೋಕದೃಷ್ಟಿ ಅದನ್ನು ಪ್ರತೀತಗೊಳಿಸುವುದಕ್ಕೆ ಕವಿ ಬಳಸಿರುವ ಪ್ರತಿಮಾ ವಸ್ತು ಮತ್ತು ಇವುಗಳನ್ನು ಆಕೃತಿ ರೂಪಕ್ಕಿಳಿಸಿರುವ ಬಗೆ. ಈ ಮೂರೂ ಅಂಶಗಳು ಇವರ ಕವಿ ಮನೋಧರ್ಮಕ್ಕೆ ಕನ್ನಡಿ ಹಿಡಿದಿವೆ. ಗುಬ್ಬಿ ಪ್ರತಿನಿಧಿಸುವ ಜೀವ ಜಗತ್ತು ಬ್ರಹ್ಮಾಸ್ತ್ರ ಪ್ರತಿನಿಧಿಸುವ ಆಕ್ರಾಮಕ ಹಿಂಸಾಜಗತ್ತು ಇವುಗಳನ್ನು ಮುಖಾಮುಖಿಯಾಗಿಸಿ ಆಡಿರುವ ಮಾತುಗಳು ಇಂದಿನ ಜಾಗತಿಕ ವಿದ್ಯಮಾನಗಳನ್ನು ಅರಿವಿಗೆ ತಂದು ಕೊಡುತ್ತಾ ಆತ್ಮಾವಲೋಕನಕ್ಕೆ ದೂಡುತ್ತವೆ.

ಇದೇ ಮಾದರಿಯ ಇನ್ನೊಂದು ರಚನೆ ‘ಎರೆಹುಳುವಿನ ಶಾಸನ’. ನಿಸರ್ಗದ ಮೇಲೆ ಮನುಷ್ಯನ ಆಕ್ರಮಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇಡೀ ಭೂಮಿಯ ಅಧಿಪತಿ ತಾನೇ ಎಂಬ ಬೌದ್ಧಿಕ ಅಹಂಕಾರದ ಮನುಷ್ಯ ಕೇಂದ್ರಿತ ಪ್ರಯೋಜನಾಕಾಂಕ್ಷೆಯ ಅಟ್ಟಹಾಸ ಮೆರೆಯುತ್ತಿದ್ದಾನೆ. ಇಲ್ಲಿ ಮನುಷ್ಯನಿಂದಾಗಿ ಆತಂಕದಲ್ಲಿರುವ ಹಲವು ಜೀವಸಂಕುಲಗಳ ಪ್ರಾತಿನಿಧಿಕ ದನಿಯಾಗಿ ಎರೆಹುಳು ದನಿ ಎತ್ತಿದೆ. ಇರುವೆಂಬತ್ತು ಕೋಟಿ ಜೀವರಾಶಿಗಳಿಗೆ, ಜೀವರಾಶಿಗಳ ಪರವಾಗಿ ಅದು ಎಚ್ಚರಿಕೆಯ ದನಿಗಂಟೆ ಮೊಳಗಿಸಿದೆ.
ಹಸಿರುವ ವನದಲ್ಲಿ
ಪಸೆ ಬತ್ತದ ನೆಲಬಯಲಲ್ಲಿ
ಕಂಪನಿ ಗೊಬ್ಬರ ಹೊಲ ಸೇರದಲ್ಲಿ
ಸ್ವಾರ್ಥದ ಭೂತ ಮೆಟ್ಟಿಕೊಳ್ಳದಲ್ಲಿ
ಹಿರಿದೊಂದು ಬೋರ್ಡು
ಇಲ್ಲಿಗೆ ಮನುಷ್ಯರು ಬರುತ್ತಿದ್ದಾರೆ ಎಚ್ಚರಿಕೆ
ಇಲ್ಲಿ ಮನುಷ್ಯರಿದ್ದಾರೆ ಎಚ್ಚರಿಕೆ

ಈ ಸಾಲುಗಳು ಮನುಷ್ಯರು ಆತ್ಮನಿರೀಕ್ಷೆ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ದನಿರೂಪಗಳು. ಭೂಮಿಗೆ ಮನುಷ್ಯ ಮಾತ್ರ ಹಕ್ಕುದಾರನಲ್ಲ. ಸಕಲ ಜೀವಜಾಲಗಳೂ ಈ ನೆಲದ ವಾರಸುದಾರರು. ಈ ಜೀವ ಜಗತ್ತು ಪಂಚಭೂತಗಳಿಗೆ ವಂಚನೆ ಎಸಗದಂತೆ ಬದುಕು ಕಟ್ಟಿಕೊಂಡವು. ಆದರೆ ಮನುಷ್ಯ ಮಾತ್ರ ಸಂಸ್ಕøತಿ ನಾಗರಿಕತೆಗಳ ಹೆಸರಿನಲ್ಲಿ ನಿಸರ್ಗ ಧರ್ಮ ವಿರೋಧಿ ನಿಲುವನ್ನು ಮೆರೆಯುತ್ತಿದ್ದಾರೆ. ಅವರ ಪ್ರತಿಯೊಂದು ಆವಿಷ್ಕಾರಗಳೂ ಬೌದ್ಧಿಕ ಪ್ರಗತಿಯನ್ನು ತೋರುತ್ತಲೇ ನೆಲಧರ್ಮಕ್ಕೆ ವಿರುದ್ಧವಾದ ನಡೆಯೇ ಆಗಿದೆ. ನೆಲದ ಜೈವಿಕ ಶಕ್ತಿಯನ್ನು ವೃದ್ಧಿಸುವ ಎರೆಹುಳದ ಮೂಲಕ ಮನುಷ್ಯನ ದುರ್ವರ್ತನೆಯನ್ನು ತನಿಖೆಗೊಡ್ಡಿದಂತೆ ಈ ಕವನ ಮಾತನಾಡಿದೆ. ಇದು ಜೀವ ಕೇಂದ್ರಿತ ನೆಲೆಯ ಸಂವೇದನೆ.

ಇಂದಿನ ಹದಗೆಟ್ಟ ಪರಿಸ್ಥಿತಿಯಲ್ಲಿ ಬಾಳು ಭಯದ ಬೀಡಾಗಿದೆ. ನೋವಿನ ನರಕವಾಗಿದೆ. ಇದರಿಂದ ಬಿಡುಗಡೆಯೇ ಇಲ್ಲವೇ ಎಂಬ ಚಡಪಡಿಕೆಯಿದೆ. ಆದರೆ ಈ ಚಡಪಡಿಕೆಯಲ್ಲಿ ಬಿಡುಗಡೆಯ ನಿರೀಕ್ಷೆಯೂ ಇದೆ. ಇದು ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕಂಡುಬರುವ ಧೋರಣೆ. ಈ ಪರಿಯ ಅಸಹನೀಯ ಸ್ಥಿತಿ ಎಲ್ಲಿಗೆ ಮುಟ್ಟಿಸಿದೆಯೆಂದರೆ ಸಾರ್ವಜನಿಕ ಬದುಕಿನ ಈ ಕಟ್ಟುಬ್ಬಸದ ಸನ್ನಿವೇಶದಿಂದ ವೈಯಕ್ತಿಕ ಬದುಕೂ ತನ್ನ ಸ್ವಾಸ್ತ್ಯವನ್ನು ಕಳೆದುಕೊಂಡಿದೆ. ಅದನ್ನು ಕಂಡೂ ಕಂಡೂ ಅನುಭವಿಸಲಾಗದ ಮನೋಸ್ಥಿತಿ. ಪ್ರೇಮದ ಗೋರಿಯ ಮೇಲೆ ಕವನದ ಸಾಲುಗಳು ಈ ನೋವಿನ ಚಡಪಡಿಕೆಯನ್ನು ಅನುರಣಿಸಿವೆ. ಯಾವುದೇ ಸೂಕ್ಷ್ಮಮನಸ್ಸಿನ ಜೀವಕ್ಕೆ ವೈಯಕ್ತಿಕ ಬದುಕಿಗೂ ಸಾರ್ವಜನಿಕ ಬದುಕಿಗೂ ಸಾಂಗತ್ಯವಿಲ್ಲದೇ ಹೋದಾಗ ಇಬ್ಬಂದಿಯ ನಡುವೆಯೂ ನೆಮ್ಮದಿಯಿಂದ ಸುಖ ಅನುಭವಿಸುವುದು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಸಾರ್ವಜನಿಕ ಬದುಕಿನ ಪಾಪಪ್ರಜ್ಞೆಯನ್ನು ತನ್ನ ಮೈಮೇಲೆ ಎಳೆದುಕೊಳ್ಳುವುದು ಆತ್ಮ ನಿರೀಕ್ಷೆಗೆ ತೊಡಗುವುದು; ಆ ಮುಖೇನವಾಗಿ ಹಗುರಾಗಲು ಬಯಸುವುದು ಒಂದು ಬಗೆಯ ನಡೆ. ಬಸವಣ್ಣನವರ ವಚನದಲ್ಲಿ ಈ ಬಗೆಯ ನಡೆಯನ್ನು ಕಾಣಬಹುದು.
ಕಂಟನಕುಂಟೆಯವರ ಕವಿತೆಗಳ ಆಂತರ್ಯದಲ್ಲಿ ಈ ರೀತಿಯ ಪಾಪಪ್ರಜ್ಞೆಯ ತೆಳುದನಿ ಸಣ್ಣದನಿಯಲ್ಲಿ ಕೇಳುತ್ತಿದೆ. ಈ ಕವಿ ಪ್ರಧಾನವಾಗಿ ಸಾರ್ವಜನಿಕ ಬದುಕಿನ ನಡೆಯನ್ನು ತನ್ನ ಪ್ರಜ್ಞೆಯ ಕಕ್ಷೆಯಲ್ಲಿ ಒರೆಗೆ ಹಚ್ಚುವ ಧೋರಣೆಯದು. ಸ್ವಕೀಯ ಸಂವೇದನೆಗಿಂತ ಸಾಮಾಜಿಕ ವ್ಯಾಪ್ತಿಯ ಬದುಕಿಗೆ ಹೆಚ್ಚು ತುಡಿದವನು. ಹೀಗಾಗಿ ವ್ಯಕ್ತಿಯ ನೆಲೆಯ ಪ್ರೇಮಕಾಮ ಹಸಿವು ಬಯಕೆಗಳೂ ಕೂಡ ಈ ಪ್ರಜ್ಞೆಯ ಪಾತಳದಲ್ಲಿ ಸಿಕ್ಕು ಕವಿಭಾವದ ಸ್ವೀಕರಣೆಯಲ್ಲಿ ಅತೃಪ್ತಿ ಅರುಚಿಗೆ ಒಳಗಾಗುತ್ತವೆ. ಬದುಕು ಮತ್ತು ಬರೆಹವನ್ನು ಏಕೀಭವಿಸಿ ನೋಡುವ ಮನೋಸ್ಥಿತಿಯ ಋಜುತ್ವದ ಪ್ರಶ್ನೆ ಇದೆ.

ಈ ಪ್ರಶ್ನೆ ಬಂಡಾಯದವರ ಸಂವೇದನೆಯ ಮೂಲದ್ರವ್ಯವಾಗಬೇಕಾಗಿದ್ದದ್ದು. ಆದರೆ ಅವರಲ್ಲಿ ಈ ಏಕೀಭವಿಸುವ ಕ್ರಿಯೆ ರಸಸ್ಯಂದೀ ಗುಣವಾಗಿ ಬೆಳೆಯಲೇ ಇಲ್ಲ. ಕಾರಣ ಬಾಯಿಮಾತಿಗೆ ಸಿಕ್ಕಿ ಯಾವುದೇ ಸಿದ್ದಾಂತವೂ ಭಾಷಣದ ಸರಕಾಗುತ್ತದೆ. ಹೀಗಾಗಿ ಬಹುತೇಕ ಬಂಡಾಯದವರಲ್ಲಿ ಪದ್ಯರಚನೆ ಸಾಧ್ಯವಾಯಿತು. ಆದರೆ ಕಾವ್ಯರಚನೆ ನಡೆಯಲಿಲ್ಲ. ಕಾವ್ಯರಚನೆ ಸಂವೇದನಾಶೀಲತೆಯ ಮೂಲದ್ರವ್ಯವಾದರೆ ಪದ್ಯರಚನೆ ಸೈದ್ಧಾಂತಿಕ ತರ್ಕದ ಬೆಳೆವಣಿಗೆಗೆ ಸಾಕಾಗುತ್ತದೆ. ಬಂಡಾಯದ ಬಹುತೇಕ ರಚನೆಗಳು ಹೇಳಿಕೆಯಾಗಿ ಪದ್ಯಗಳಾಗಿರುವುದು ಸೀಳಿಕೊಂಡ ವ್ಯಕ್ತಿತ್ವದ ಪರಿಣಾಮ. ದ್ವಂದ್ವಮಾನದ ನಡೆ ಬಂಡಾಯದವರ ಬರೆಹದ ಟೊಳ್ಳುತನಕ್ಕೆ ಕಾರಣವಾಗಿದೆ. ಈ ಮಾತು ಎಲ್ಲ ಚಳವಳಿಗಾರರಿಗೂ ಅನ್ವಯಿಸುವುದಿಲ್ಲ. ಬಂಡಾಯದವರಲ್ಲಿ ಆತ್ಮನಿರೀಕ್ಷಾ ಗುಣವನ್ನು ಕಳೆದುಕೊಳ್ಳದ ಸೂಕ್ಷ್ಮಮನಸ್ಸಿನ ಕವಿಗಳು ಅಂದೂ ಕೆಳದನಿಯಲ್ಲಿ ಮಾತನಾಡಿದ್ದಾರೆ. ಕವಿಗಿರುವ ಸಹಜ ಸಂಕೋಚದಲ್ಲಿ ಅವರ ದನಿ ನಾಚಿಕೆಯನ್ನು ಕಳೆದುಕೊಂಡಿಲ್ಲ. ಸ್ವಕೀಯ ಪ್ರಜ್ಞೆಯನ್ನು ಸಾರ್ವಜನಿಕ ವಲಯದಲ್ಲಿ ಎದರಿಗಿಟ್ಟುಕೊಂಡೇ ಆತ್ಮ ನಿರೀಕ್ಷೆ ನಡೆಸಿದೆ, ಸಹಜವಾಗಿ ಕಾವ್ಯದ ದನಿಯಲ್ಲಿ ಸಂವೇದನಾ ಶೀಲತೆ ಪ್ರಾಪ್ತವಾಗಿದೆ. ಕವಿಯಾದವನಿಗೆ ಮಾತ್ರ ಸಾಧ್ಯವಾಗುವ ಏಕತ್ರಭಾವದ ಬಗೆಯಿದು. ಬಸವಣ್ಣನವರ ವಚನಗಳ ರಸಾದ್ರ್ರತೆಯಲ್ಲಿ ಇಂತಹ ಅಂತರಂಗದ ಬಹಿರಂಗದ ಪಾರದರ್ಶಕತೆಯನ್ನು ಕಾಣಬಹುದು. ಹೀಗಾಗಿಯೇ ಹೇಳಿಕೆಗಳಿಗೂ ತಾಳಿಕೆಯ ಕಾವ್ಯಗುಣ ಪ್ರಾಪ್ತವಾಗಿದೆ.

4.
ಕಂಟನಕುಂಟೆಯವರ ಕಾವ್ಯಯಾನ ಸಾಕಷ್ಟು ದೂರ ಕ್ರಮಿಸಿ ಬಂದಿದೆ. ಅವರ ಇದುವರೆಗಿನ ಕಾವ್ಯ ರಚನೆಯ ಹಾದಿಯಲ್ಲಿ ಹಲವು ಬಗೆಯ ಹಲವು ನೆಲೆಗಳ ನೀರು ಹರಿದು ಏಳುಬೀಳುಗಳ ತಾಕಲಾಟದಲ್ಲಿ ಬದುಕಿನ ಅನುಭವಗಳನ್ನು ಉಂಡು ಸಾಗಿದ ಪಯಣವೇ ಆಗಿದೆ. ಇಂತಹ ಹೊತ್ತಿನಲ್ಲಿ ಲೋಕದರ್ಶನದ ಜೊತೆಗೆ ಕಾವ್ಯದ ಕಟ್ಟುವಿಕೆಯಲ್ಲಿಯೂ ಕವಿ ಕಂಡುಕೊಳ್ಳಬೇಕಾದ ತನ್ನದೇ ಅನನ್ಯತೆಯ ಜರೂರು ಮುಖ್ಯವಾಗಬೇಕಾಗುತ್ತದೆ. ಆ ಜರೂರು ಕಂಟನಕುಂಟೆಯವರಲ್ಲಿ ತುಡಿವ ಗುಣವಾಗಿ ಇರುವುದು ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಕವಿ ಗಮನಿಸಬೇಕಾದ ಒಂದು ಅಂಶವೆಂದರೆ ಕವಿ ಹೆಚ್ಚು ಮಾತಾಳಿಯಾಗಬಾರದು. ಮೌನಿಯಾಗಬೇಕು. ಭಾಷೆಗಿರುವ ಮೌನದ ಗುಣವನ್ನು ಕವಿ ಮೈಗೂಡಿಸಿಕೊಂಡಾಗ ಕಾವ್ಯದ ಧ್ವನಿಶಕ್ತಿ ವೃದ್ಧಿಸುತ್ತದೆ. ಅಂತಹ ಧ್ವನಿರಮ್ಯತೆ ಕಾಲದಂತುವನ್ನು ಗೆದ್ದ ಮಾತಿನ ಗುಣವಾಗುತ್ತದೆ. ಇದನ್ನು ಸಾಧಿಸಿಕೊಳ್ಳುವ ಎಲ್ಲ ಸೂಕ್ಷ್ಮತೆಗಳೂ ಈ ಕವಿಗಿವೆ. ಶ್ರದ್ಧೆಯ ಜೊತೆಗೆ ಬದ್ಧತೆಯೂ ಇರುವುದರಿಂದ ಸಾಧ್ಯತೆ ಎಂಬುದು ಕವಿಯ ಅಳವಿಗೆ ದಕ್ಕುವ ಗುರಿಯಾಗುತ್ತದೆ. ಈ ಗುರಿ ಇವರ ಕಾವ್ಯದ ನಡೆಯಾಗಲಿ. ಈ ನಡೆಯ ಅನನ್ಯತೆಯಿಂದ ಕನ್ನಡದ ವಿಶಿಷ್ಟ ದನಿಮೊಳಗಿನ ಕಾವ್ಯ ಇವರದಾಗಲಿ ಎಂದು ಬಯಸುತ್ತೇನೆ.

Leave a Reply

Your email address will not be published.