ಸಣ್ಣಕತೆ: ಅವುಳು, ಅವುನು, ಅದು

-ಗವಿಸಿದ್ಧ ಹೊಸಮನಿ

    ಬೆಳ್ಳಂಬೆಳುಗ್ಗೆಯೇ ಒಂದಸವುನೆ ಹಂಗ ತೆಳ್ಳುಗೆ ಚಹಾದ ಘಮವು ದಿನುದಿನವೂ ತೂರಿ ಬರುವುದು ಆ ಸರ್ಕಲ್‍ನ ಒಂದು ಬಗುಲಿನ ಮೂಲೆಯ ವಿಶೇಷವಾಗಿತ್ತು. ಚಿಮುಣಿ ಎಣ್ಣೀಲಿ ಉರಿವ ಚೆಕ್ಕುಚೌಕಾದ ಆ ಸ್ಟ್ಟವ್ವುನ ಬರು..ಬರು.. ಅನ್ನುವ ಸೌವುಂಡು ಹೊರುಡಲು.. ಟನುಪನು ಅಂತನ್ನುವ ಆ ಸಾಮಾನು ಸರಂಜಾಮುಗಳನ್ನು ಅವುನು ಗಸುಗಸು ತಿಕ್ಕುತ ರೆಡಿಮಾಡಲು ಆಟೊತ್ತಿಗೆ ಅಲ್ಲಿ ಅವುಳ ಸುತ್ತಲೂ ಒಂದಳುತಿ ಮೊಕಯಿರುವ ಹುಡುಗರು, ಅವುಳು, ಅವುನು, ಅವುರು, ಆ ಚಹಾ, ಮಸಾಲಿ ಐಟೆಮ್ಮುವಿನ ಘಮುಘಮು ಅನ್ನೋ ವಾಸುನೆ ಹಿಡುದು ಬರುವ ನಾಯಿದೇವುರುಗಳು ಮೊದುಲಾಗಿ ಸರ್ವ ಹನ್ನೊಂದು ಜೀವುಗಳೂ ಅಲ್ಲಿ ಠಿಕಾಣಿ ಹೂಡಿರುತ್ತಿದ್ದವು.

   ಕೆಲವು ದಿನುಗಳಿಂದ ಬೆಳುಗಿಗು-ಚಂಜಿಗೂ ಅವುಳು ಅಲ್ಲಿಗೆ ಬರುವುದು, ಈಚಲು ಕಸುಬರುಗಿಯಿಂದ ಯಾಡೊತ್ತೂ ತಪ್ಪುದೇ ಕಸ ಗೂಡಿಸುವುದು, ಮಾತುಮಾತಿಗೂ ಅವುನು, ಅವುಳ ಜೀವ ಹಿಂಡುವುದು, ಎಡುಗೈಲಿ ಸ್ಟ್ಟವ್ವುಗೆ ಹವಾ ಹಾಕುತ್ತ, ಬಲಗೈಲಿಂದ ಆ ಜಿಗುಟು ನಾದುತ್ತ, ಅದಿದೂ ಮಾಡುತ್ತಲೇ ಆಗಾಗ ಅಲ್ಲಿಗೆ ಮೊಕವಿಟ್ಟು ತಿದ್ದಿಕೊಳ್ಳುತ್ತಲೇ, ಅಲ್ಲಿದ್ದ ಅದೂ ಕಾಣಲು ಅವುನ ಇಬೂತಿಯ ಬೊಟ್ಟುಗಳ ನೆನುಪಾಗಿ ಭಾವುಕಳಾದಾಗ ಅವುಳ ಕಣ್ಣೆವೆಯಿಂದ ಎರುಡು ಹನಿಗಳು ತಟುಕ್ಕೆನ್ನುವುದು ನಿತ್ಯ ತಪ್ಪುತ್ತಿರುಲಿಲ್ಲ; ಆ ನಾಯಿದೇವುರು, ನೊಣ ಸಮೂಹದ ಸಾಕ್ಷಿಯಾಗಿ.!

   ತಾನು ಅಲ್ಲಿಗೆ ಬರುತ್ತಲೇ ಅದ್ಯಾಗೋ ಅವುನ ಪರುಚಯವಾಗಿ, ಗಂವೆನ್ನುವ ಅಲ್ಲಿ ತನ್ನ ನೆತ್ತುಗೆ ನೆಳ್ಳು ಸಿಕ್ಕಿದ್ದು, ಕನುಸು ಮನುಸಿನಲ್ಲಿರದಿದ್ದರೂ ಚಾದಂಗುಡಿ ಹಾಕಿದ್ದು, ಅದೊಂದು ಮಾತಿಗೆ ಅವುನು ಆಟೊಂದು ಹಚುಗೊಂಡಿದ್ದು ಅವುಳಿಗೆ ಒಗುಟಂತನಿಸುತಿತ್ತು. ಬೆಳುಗೇಳುತ್ತಲೇ ಮನೀದೇವ್ರು ನೆನುದು, ಅವುರ ಅಂಗುಳ ಹುಡುದು, ಮೈಗೆ ನೀರು ಹಣುಸಿಕೊಂಡು, ಇಬೂತಿ ಹಚುಗೊಂಡು ಹೊರಬೀಳುವುದು, ಬಿಸಿಲೇರುತ್ತಲೇ ಘಳಿಗೊತ್ತು ಮೈಯಿನ ಕಾಸಿಕೊಳ್ಳುವುದು, ಚಂಜಿಯ ಹೊತ್ತು ಮಾರ್ಕೇಟು, ರಾತುರಿ ಅವುನನ್ನು ಸಂಭಾಳಿಸುತ್ತ ಬೆಳಗರಿಸುವುದು ಅವುಳು ದಿನುಚರಿಯಾಗಿತ್ತು.

  * * *

  ಎಂದಿನಂತೆ ಅವತ್ತೂ..

  ಮೂರೊತ್ತೂ.. ಆ ಕಡೆ-ಈ ಕಡೆ ಅಂತ ತಿರುಗೋ ತಮ್ಮ ಜನುಮ ಜನುಮದ ತಾಯಿಗುಳ ಗುಣುಕ್ಕೋ.. ಕೂಳಿನ ನಾಥು  ಹಿಡುಕೊಂಡೋ ಆಗುಲೇ ಯಾಡುಮೂರು ನಾಯಿದೇವುರು ಅಲ್ಲಿಗೆ ಬಂದು ಕಾಯುತಲಿದ್ದವು. ಅವುಳು ಎಂದಿನಂತೆ ಅದನ್ನು ತೆಲಿಮ್ಯಾಲೆ, ಅವನ್ನು ಕೈಗೆ ನೇತಾಕ್ಕೊಂಡು ಥೇಟು ಜೋಗುತಿಯಂತೆ ನಡುಕೊಂಡು ಅಲ್ಲಿಗೆ ಬರುತ್ತಲೇ ಅವುಳ ನೆಚ್ಚಿನ, ಅಚ್ಚು ಬಿಳಿಬಣ್ಣುದ, ಆ ಸಣ್ಣುಕಿನ ನಾಯಿದೇವುರೊಂದು ಬಾಲುವ ಅಲ್ಲಾಡಿಸುತ, ಜೊಲ್ಲು ಸುರಿಸುತ ಕಾಲುಲಿ ಬರಲು ‘ಸರಿ ಸರಿ’ ಅನ್ನುತ್ತ ಅವನ್ನು ಒಂದೊಂದೇ ಅಲ್ಲಿಳಿವಿ ಅದಕ್ಕೆ ಹಣಿ ಮುತ್ತಿಟ್ಟಳು.

 hotelಡೊಂಕು ಬಾಲುವ ಆಡಿಸುತ್ತ, ಕೈಕಾಲು ಮೂಸುತ್ತ ಸುತ್ತಲೋ ತಿರುಗುತ್ತಿದ್ದ ಆಟೊಂದೂ ನಾಯಿದೇವುರ ಸಮೂಹ ಕಾಣುತ್ತಲೇ ಅವುಳು, ತಾನು ಬರೋದು ತಡವಾಯ್ತೆಂದು ಅವುಸವುಸರುದಲ್ಲೇ ಎಲ್ಲವನ್ನು ಚೆಕುಪಕು ಅಂತ ಮಾಡುತ್ತ, ನಡುಬಾಗಿಸಿ ಕಸ ಹೊಡಿಯುತಿರಲು, ಅ ಮನಿಯ ನಾಯಿದೇವುರೊಂದು ಅಲ್ಲಿ ಮೂಸಲು ‘ಹಚ್ಯಾ’ ಎಂದು ಗದುರಲು ಅದು ಹಿಂದೆ ಸರುದು ನಿಂತಿತು. ಎಂದಿನಂತೆ ಅಲ್ಲಿಗೆ ಯಾಡು ಚರುಗಿ ನೀರು ಉಗ್ಗಿ, ತೆಳ್ಳುನೆಯ ಎರುಡು ಉದೂನ ಕಡ್ಡಿಗಳು ಬೆಳುಗಿ ಮೂಡುಣುದ ಕಡುಗೆ ಮೊಕವಮಾಡಿ ನಿಂತು ಸಾನ್ಮಾಡಿ ಮನೀದೇವ್ರು ವಾರಿ ಕರೆಮ್ಮನನ್ನು ನೆನೆಯುತ್ತ ಅಲ್ಲಿ ಸಿಕ್ಕಿಸಿದಳು. ತಡುವ ಮಾಡುದೇ ಸ್ಟವ್ವು ಹಚ್ಚಿ ಆ ದುಂಡುನೆಯ ಬೋಗುಣಿಗೆ ಅವುನ್ನೆಲ್ಲ ಆಟಾಟ ಸುರುವುತ್ತ ಅಲ್ಲಿಗೆ ಮೊಕವಿಟ್ಟು ತಿದ್ದಿಕೊಂಡಳು. ಎಂದಿನಂತೆ ಆ ಮೂಲೆಯಿಂದ  ಯಾಡೆಜ್ಜಿ ಮುಂದುಕೆ ನಡೆದು ಬಿಸಿಬಿಸಿಯಾದ ಅದನ್ನು ಅಲ್ಲಿ ಚೆಲ್ಲಲು ನೊಣ ಸಮೂಹವು ಹುಂಯೆಂದು ನಾಮುಂದು, ತಾಮುಂದು ಎಂದು ಅಲ್ಲಿ ಕುಳಿತು ಗ್ಹಾ..ಗ್ಹೂ.. ನಡುಸಿದವು.

  ಮುಂದೆರುಡು ಕಾಲುಲಿ ಮೊಕವ ತಿಕ್ಕೊಳುತ, ಹಿಂದೆರಡು ಕಾಲಲಿ ಮೈಯನು ಸವುರುತ ಅಲ್ಲಿಟೊತ್ತು ಕೂತು ಹಾರಿದ ನೊಣ ಸಮೂಹವು ಕೂಳಿನ ಮೇಲೆ ಕೂಡಲು ‘ತ್ಹೂ ಇಂವು ಹಾಳಾಗೋಗ’ ಎಂದು ಗೊಣುಗಿದ ಅವುಳು ಆಟೊತ್ತಿಗೆ ಉಗಿಉಗಿ ಹಾಯುತ್ತಿದ್ದ ಆ ನೀರನ್ನು ಅಲ್ಲಿಗೆ ಉಗ್ಗಲು ನೊಣುಗಳು ಸೊಯ್ಯೆಂದು ಅತ್ತಿತ್ತ ಓಟಕಿತ್ತವು. ಆಟೊತ್ತಿನಿಂದ ತನ್ನುವ ಕೈಗುಳನ್ನೇ ದಿಟ್ಟಿಸುತ್ತಿದ್ದ ಆ ಮುಕ್ಕೋಟಿ ನಾಯಿದೇವುರು ಸಹಿತ ಅವುಳು ಚೆಲ್ಲಿದ ಅಲ್ಲಿಗೆ ಒಮ್ಮುಲೇ ಟನ್ನಂತ ಜಿಗೂದು ಮೊಕವ ಅಲ್ಲಿಟ್ಟು, ಬಾಲ ಅಲ್ಲಾಡಿಸುತ್ತ ಮುಸುಮುಸು ಮೂಸುತಿರಲು ಅವುಳು ಆ ಬೋಗುಣಿಗೆ ಟಪ್ ಅಂತ ಕುಟ್ಟಲು ಆ ಶಬುದುಕೆ ಹೆದುರಿ ತುಸು ದೂರದೂರುಕೆ ಸರುದು ನಿಂತವು. ನೊಣಸಮೂಹದ ಆಟ, ನಾಯಿದೇವುರ ಕಿತ್ತಾಟದ ಎಂದಿನ ಆ ಚಿತ್ರವಿಚಿತ್ರತೆ ಕಂಡು ಅವುಳ ತುಟಿಯ ಮ್ಯಾಲುಗಡೆ ಅಂದೆಂತದ್ದೋ ನಗುವು ಚೆಲ್ಲಿಕೊಂಡಿತ್ತು.

   ಆಟೊತ್ತಿಗೆ ಸರ್ಕಲನತ್ತ ಅವುರು ಬರುವುದನ್ನು ಕಂಡ ಅವುಳು, ಅಲ್ಲಿ ಪಿಲೀಟುಗಳನ್ನು ಹಾಕಿ ‘ಎಲ್ಲದಿ ನೀನು ಬರ್ತೀಯಿಲ್ಲ’ ಎಂದನ್ನುತ್ತ ಮತ್ತೊಮ್ಮೆ ಆ ಬೋಗುಣಿಗೆ ಭಾರಿಸಿದಳು. ಆ ಸವುಂಡು ನಾಯಿದೇವುರನ್ನು ದಾಟಿಕೊಂಡು ಅವುನ ಕಿವಿ ಸಂದೇಕಿನ ತಮುಟುಗೆ ಬಡಿದಿತ್ತೇನೋ ಗಾವೂದ ದೂರದಲ್ಲಿದ್ದ ಜೋಪುಡಿಯಿಂದೆದ್ದು ಬಂದ ಅವುನು ಆ ಮೂಲೆಯತ್ತ ನಡುದು ದೋತುರುವ ಬಿಚ್ಚಲು ಅವುಳಿಗೆ ಮೈಯೆಲ್ಲಾ ಉರೂದ ‘ಯಾ ಜಾಗಾನೂ ಸಿಗಲಿಲ್ಲನು ಉಚ್ಚಿ ಬೀಡಾಕ’ ಎಂದು ಸಾಪುಳಿಸಿದಳು. ‘ಬಾಳೇವು ಗೊತ್ತಿಲ್ಲ, ಬದ್ಕ ಗೊತ್ತಿಲ್ಲ ಇದ್ಕ, ಗಿರಾಕಿರು ದಿನಾರ ಲಗೂನ ಎದ್ದೇಳಬೇಕ ಅನ್ನೂ ಕಬುರಿಲ್ಲ.. ಯಾವಾಗ ಇವ್ನು ತಿಕ್ಕುತ್ತೋ’ ಎಂದು ಅವುನಿಗೆ ಕೇಳುವಂತೆ ಅಂದು ಸ್ಟವ್ವುಗೆ ಮತ್ತೀಟು ಹವಾ ಜಡುದು, ಅಲ್ಲಿಗೆ ಮೊಕಯಿಟ್ಟು ಸರಿಮಾಡಿಕೊಂಡು ಹಿಟ್ಟು ನಾದುತೊಡುಗಿಳು. ಅವುನು ದೋತುರುವ ತಿದ್ದಿಕೊಳ್ಳುತ್ತ ಬಂದು ‘ಈಗ ಬಂದೆನು’ ಅನ್ನಲು.. ‘ಕಣ್ಣಾಗೇನು ಎಮ್ಮಿ ಮೇಯಾಕತ್ಯಾವನು.. ಕಾಣವಲ್ದನು, ನಿನ್ನಂಗ ಮಾಡಿಯನು ನನಗ ಹೊತ್ತೇರಿ ಏಳಾಕ’ ಎಂದು ಮೊಕವ ಉರುದಳು. ಅವುನು ಅಲ್ಲಿದ್ದ ಕರ್ಪೂರುದ ಚರುಗಿ ನೀರನ್ನು ಮೊಕಕ್ಕೆ ಹಾಕೊಂಡು ‘ಒಂದ ಕನ್ಸು ಬಿದ್ದ ಏಳಾದು ತಡಾತು.. ಇರ್ಲಿ ಚಾ ಹಾಕೀಟು’ ಅನ್ನಲು ‘ಹಾಹಾ ಬೀಳ್ತಾವುಬುಡು ನಿನಗ ಕನ್ಸು, ಹರೆವು ಉಕ್ಕಿ ಹರಿಕತೈತಲ್ಲಾ ನಿನ್ನ ಮೈಯಾಗ, ಬಡಾಬಡಾ ಕುಡುದ ಅವ್ನ ಬೆಳ್ಗ ಎದ್ದೇಳು’ ಅಂದು ಜಾಡಿಸಿದಳು. ‘ನೀನದಿಯಲ್ಲ ಚಳಿಗೇರಿ ಚೆಲುವಿ ಅದ್ಕ ಕನ್ಸು’ ಎಂದು ಅವುನು ಗುಣುಗಲು, ‘ಏನಂದಿ’ ಅಂದಳು. ‘ಏನಿಲ್ಲಳ’ ಅನ್ನುತ್ತ ಅವುನು ತಾನು ಕುಡುದ ಚಾ ಕಪ್ಪನ್ನು ಅಲ್ಲಿಟ್ಟು ಸುಮ್ಮನೆ ಕೂಡಲು.. ‘ಚೆಲುವಿ’ ಎಂದನ್ನುವ ಅವುನ ಮಾತಿಗೆ ಅದು ಜಾಗೃತಗೊಂಡು ಅವುಳು ಅಲ್ಲಿಗೆ ಮೊಕವಿಟ್ಟಳು. ತುಟಿಯಲ್ಲಿ ಅದೆಂತದ್ದೋ ನಗು ಲಾಸ್ಯವಾಡಿತ್ತು.

  ಆಟೊತ್ತಿನಿಂದ ಅಲ್ಲಿ ಒಂದು ಪಿಲೀಟಾದರೂ ಕಾಣದಿರಲು ಅವುಳಿಗೆ ಸಿಟ್ಟು ನೆತ್ತಿಗೇರಿ, “ಹುಡುಗ್ರ ಬರಾ ಹೊತ್ತಾತು  ಪಿಲೀಟು ತೊಳ್ಯಾವಲ್ಲಿ, ಏಳ್ತಿಯಿಲ್ಲ ಮ್ಯಾಕ ನೀನು..’ ಎಂದು ಗದುರಿ ಆ ಕಾದ ಬೊಗುಣಿಯಲಿ ಅವನ್ನು ಒಂದೊಂದಾಗಿ ಬೇಯಿಸಲು ಅವುಗಳ ಘಮವು ಗಾಳಿಯೊಡುಗೂಡಿ ಅದು ನಾಯಿದೇವುರ ಮೂಗುಗೆ ಬಡುದು ಅವುಗಳು ತಮ್ಮ ಬಾಲವನ್ನು ಮೊದುಲಿಗಿಂತ ಹೆಚ್ಚು ಅಲ್ಲಾಡಿಸುತ್ತ ಕಣ್ಣುಬಿಡುತ್ತ ನಿಂತಾಗ, ಆಟೊತ್ತು ನಾದಿ ಉಳಿದ ಅದನ್ನು ಅತ್ತ ಒಗಿಯಲು, ಅವು ಗಬುಗಬುನೆ ತಿಂದು, ಹಾಳೆಯಂತಹ ನಾಲಿಗೆಯನು ಆಡಿಸುತ್ತ ಯಾಡೆಜ್ಜಿ ಹತ್ತಿರುಕೆ ಬರುತ್ತಲೇ ‘ಆಗಾ ಬಂದ ಬಿಟ್ವು ನೋಡು’ ಅನ್ನುತ್ತ ‘ಹಚ್ಯಾ’ ಎಂದು ಗದುರಿ ಕುತ್ತಿಗೆ ಹೊರುಳಿಸಿ ಹೊತ್ತು ನೋಡಿದಳು.

  ‘ಅವುರು ಕೂಡ ಅಂಗುಡಿ ಕಡೆ ಬರೋದು ಕಾಣುತ್ತಲೇ’ ಅವುಳು ಕೈಗುಳು ಲಟ್‍ಪಟ್‍ಂತ ಆಡುತೊಡುಗಿದವು. ಸ್ಟವ್ವು ಮೊದುಲಿಗಿಂತ ಹೆಚ್ಚು ಒದುರತೊಡುಗಿತ್ತು. ಆಟೊತ್ತಾದರೂ ಆ ಶಬುದು ಕೇಳದಿದ್ದಾಗ ಅವುಳದು ಉರೂದು, ಕಣ್ಣು ಪಿಳುಕಿಸುತ್ತ ಕೂತಿದ್ದ ಅವುನತ್ತ ನೋಡಿ ‘ಮ್ಯಾಕೆ ಏಳ್ತಿಯಿಲ್ಲ ನೀನು, ರಾತ್ರಿನೂ ಹೀಂಗ ಕಾಡ್ತಿ, ಹಗ್ಲಿನೂ ಹೀಂಗ ಕಾಡ್ತಿ’ ಎಂದು ಅನ್ನುತ್ತ ಅವುಳು ಅಲ್ಲಿ ಮುಖವಿಟ್ಟಳು. ಆಟೊತ್ತಿಗೆ ಅದುರ ಮೈ ಕೆಂಪೋಗ ಕಾದು, ಉಕ್ಕಿ ಚೆಲ್ಲಿದ ಚಾಪುಡಿಯ ವಾಸುನೆ ಅವುನ ಮೂಗೊಳುಗ ಹೊಕ್ಕು ‘ಇನ್ನೀಟು ಚಾ ಹಾಕ್ಬಿಡು, ಯಾಡು ಮಿನಿಟ್‍ನಾಗ ತೊಳೀತೀನಿ’ ಅಂದನು. ‘ತ್ಹೂ ನಿನೌನ ಹಡಾ.. ಏಟ ಹೇಳಿದ್ರು ಬಿಡಾಬಾಡ ನಿನ್ಗತ್ತು’ ಅಂತನ್ನುತ್ತ ಬಿಸಿಬಿಸಿಯ ಅದನ್ನು ಬಟ್ಟುಲಿಗೆ ಹಾಕಿ ಕೊಡಲು ಅವುನು ‘ಇನ್ನೀಟ ಚಾಪುಡಿ ಹಾಕು ಅದುಕ’ ಅಂದನು. ‘ಸುಮ್ಮ ಕುಡ್ದ ಎದ್ದೇಳು ಕೊಟ್ಟಿಯನು ಚಾಪುಡಿಗೆ ರೊಕ್ಕಾನಾ.. ನೋಡಗ ಹುಡುಗ್ರ ಬರಾಕತ್ರು ಅವ್ರಿಗೆ ಎದ್ರಾಗ ಹಾಕೊಡ್ಲ್ಲಿ’ ಎಂದನ್ನುತ್ತ ಅಲ್ಲಿಂದ ಅವುಳು ಎದ್ದು ಬರಲು ‘ತಡೀಟು ಪುರುಸತು ಮಾಡು’ ಅನ್ನುತ್ತ ಅಲ್ಲಿ ಬಿದ್ದಿದ್ದ ಜಿಣುಗು ಉಸುಗನ್ನು ಅವುಗಳ ಮೈಗೆ ಹಾಕಿ ಗಸುಗಸು ತಿಕ್ಕಿ, ತೊಳೂದು ಒಂದಷ್ಟು ಪಿಲೀಟನ್ನು ಅಲ್ಲಿಟ್ಟನು. ‘ಯಾಕೋ ಎಜ್ಜಾ ಕೆಲ್ಸ ಜೋರು ನಡ್ಸಿಯಲ್ಲ ಇವುತ್ತೂನು.. ಏನಿಶೇಷ’ ಅನ್ನುತ್ತ ಅವುರು ಅಲ್ಲಿ ಕೂಡಲು ಪಿಲೀಟು ತುಂಬಿ ಅವುರ ಮುಂದಿಟ್ಟಳು. ಕೆಳುಗ ಕೂತು ಅದೇನೋ ಒಟಾ ಒಟಾ ಹಚ್ಚಿದ್ದ ಅವುನು, ಆ ಪಿಲೀಟು, ಬೊಗುಣಿಗೆ ಆಟಾಟ ಉಸುಗು ಹಚ್ಚುತ, ಗಸುಗಸು ಅಂತ ತಿಕ್ಕುತ ಮತ್ತೀಟು ಜೋರು ಶಬುದ ಮಾಡಲು ‘ಹಾಂಗ ತಿಕ್ಕೀದ್ರ, ಯಾಡುದಿಂದಾಗ ಸವ್ದು ಹೊಕ್ಕಾವು’ ಎಂದು ಅವುಳು ಮತ್ತೆ ಜಾಡಿಸುತ್ತಲೇ, ‘ಕತ್ತಲದಾಗ ನೀ ನನುಗ ತಿಕ್ಕ್ಕುತಿಯಲ್ಲ ಹಂಗ ತಿಕ್ಕಲೆನು’ ಎಂದು ಅವುನು ಅನ್ನುತ್ತಲೇ ಆ ಹುಡುಗರಲ್ಲೊಬ್ಬ ಕಿಸುಕ್ಕೆಂದು ನಕ್ಕನು. ಆ ಕಟ್ಟಡುದಲ್ಲಿನ ಅವರೂ ಬಂದು ಹೋಗಲು `ಅದು, ಇದಂತ ಮಾಡಿದ ದಿನಾನ ಗಿರಾಕಿ ಬರುಲ್ಲ’ ಎಂದು ಗೊಣಗುತ್ತ ಅವುಳು ತಲೆಗೆ ಕೈಕೊಡಲು, ಆ ಮೂಲೆಯಿಂದ ಬಂದ ಮುದುಕಿಯು ‘ಗಿರಾಕೀನಾ ಇದ್ದಂಗಿಲ್ಲನುಬೇ’ ಅನ್ನಲು ‘ಹೂನವಾ.. ಇನ್ನ ತಡಾದೀತಂತ ಮೈಗ್ಯಾಡ ಚರುಗಿ ನೀರಕ್ಕೋಳದ ಬಂದು ನಿಂತೀನಿ ನೋಡು, ಇಟ್ಟೊತ್ತಾದ್ರು ಗಲ್ಲೆದಾಗ ನಾಕುದುಡ್ಡು ಇಲ್ಲ’ ಅಂತನ್ನುತ್ತ ಅವುಳು ಮುದುಕಿಯೊಟ್ಟಿಗೆ ಮಾತಿಗಿಳಿದು ಅಲ್ಲಿಟು ಕೂತಳು.

  ಆಟೊತ್ತಿಗೆ ಅಲ್ಲಿ ಮತ್ತಿಬ್ಬರು ಕುಂಡಿ ಹಚ್ಚಲು, ಅಲ್ಲಿಂದೆದ್ದು ಬಂದು ಮುದುಕನು ಅವನ್ನು ಪಿಲೀಟಲಿ ಹಾಕಿ ಅವುರ ಕೈಗಿಟ್ಟು, ತನುಗೊಂದು ಕಪ್ಪಲಿ ಚಾ ಬಾಗಿಸಿಕೊಂಡು ಗಟುಗಟು ಕುಡುದು ಮತ್ತೆ ಅಲ್ಲಿ ಕೂತು ಪಿಲೀಟು ಹಿಡಿದನು. ಒಂದೊಂದ ಅಗುಳು ತನ್ನುತಲಿದ್ದ ಅವುರಿಬ್ಬರಲ್ಲೊಬ್ಬನ ಕಣ್ಣು ದಾರಿಯ ಕಂಡ ಅವುಳು ತನ್ನೆದಿಯನ್ನು ಸರಿ ಮಾಡಿಕೊಂಡಳು. ‘ಮಸಾಲೀ ಯಾವಾದಾಕಿಯೋ.. ಯಲ್ಲಪ್ಪಜ್ಜಾ ಮಸ್ತ ಐತಿಬಿಡು’ ಎಂದು ಮತ್ತವುನು ಸಣ್ಣುಗೆ ಹೇಳಲು ‘ಇಲ್ಲಣ್ಣೋ ಎಲ್ಲಾರು ಹಾಕೂದು ಹಾಕ್ತೀನಿ’ ಅನ್ನುತ್ತಲೇ, ಅವುನು ‘ಹೌದೌದು ರಿ ಮಸ್ತ ಹಾಕ್ತಾಳ ರಿ ಮಸಾಲಿ.. ಆಕಿ ಮುಕ ಈಟು ನೋಡ್ರಿ’ ಎಂದು ಕೆಳುಗಿನಿಂದ ಸಣ್ಣುಗೆ ಹೇಳಲು ಅವುಳಿಗೆ ಮತ್ತೊಮ್ಮೆ ಮೈಯೆಲ್ಲಾ ಉರಿಯಿತು. ಅವುಳು ಎಡಗೈಯಿಂದ ಅವುನನ್ನು ತಿವಿದು ‘ಮುಂದ್ನೋಡಿ ಕೆಲ್ಸ ಮಾಡು ಇಲ್ಲಂದ್ರ ಸುಮ್ನ ಕುಂದ್ರು’ ಎನ್ನಲು, ಮುದುಕಿಯು ‘ಯಾಕ ಬೇ’ ಅಂದಿತು. ‘ನೀನಿಲ್ಲಳ ಬೇ’ ಅಂದಳು. ‘ಯಾಪಾರಂದ್ರನ ಹಂಗಳ.. ಜಗ್ಳ ಪಗ್ಳ ಇರೂದ ಹೋಗ್ಲಿ ಬಿಡು.. ಈಗಲ್ಲ; ಮೊದುಲಿಂದಾನೂ ಆಟಾ ಬಂದಾನವಾ’ ಅಂತ ಮುದುಕಿ ಅವುಳೊಟ್ಟಿಗೆ ಮಾತಾಡುತಿರಲು.. ಅವುಳು ‘ಹೌದನು ಹೌದನು’ ಅಂತ ಹೂಗುಟ್ಟುತಿರಲು.. ಆಟೊತ್ತಿಗೆ ಅವುನ ಕೈಗಳು ಪಾದುದ ಕಡೆ ಬರಲು ಅವುಳು ಜಾಡಿಸಿ ಒದ್ದಾಗ ಅವುನು ‘ಕಿಸುಕ್ಕು’ ಎಂದು ನಕ್ಕನು. ‘ನೋಡಬೇ ಹೆಂಗ ಮಾಡ್ತಾನಿವಾ.. ಹೀಂಗ ಮಾಡಾ ವಯಸ್ಸಾ ಇವುಂದು’ ಎಂದು ಅವುಳು ಅನ್ನಲು ‘ಯಾಕ ಕಾಡ್ತಿ ಆಕಿನ್ನಾ ಏಳಏಳುರತ್ಲೆ ಸಾಕ ಬಿಡು’ ಅಂತ ಮುದುಕಿ ಅಂದಿತು.

chitra: Sarojini

chitra: Sarojini

‘ಏ ಮುದ್ಕಿ ನಿಂದು ಆಗ್ಲೆ ಪಂಚೇರ ಆಗೈತಿ ಬಿಡು ಸುಮ್ಕ ಚಾಕುಡುದೋಗು’ ಎಂದು ಅವುನು ಅನ್ನಲು ‘ಅಗಾ ನೋಡವಾ ನೀನಾ ಎಷ್ಟು ಉರುನ್ಗಿ ಇವುಂದೂ ಅಂತೀನಿ.. ಅಂವಾ ಹೋದಾಗಿಂದ ನಂಗ ಹೀಂಗ ಕಾಡುತ್ತ ಬೇ ಇದು ದಿನಾ’ ಅಂತ ಅವುಳು ಮುದುಕಿಗೆ ಹೇಳುತ್ತಿರಲು, ಆ ಕಡೆಯಿಂದ ಅವುನ ಬೈಕು ಶಬ್ದು ಕೇಳಲು ತಡಬಡಾಯಿಸಿ ಅತ್ತ ಮುಕವಿಟ್ಟು ಸರಿ ಮಾಡಿಕೊಳ್ಳುತ್ತಲೇ ‘ಚೆಂದದಿ ಅಳ’ ಎಂದ ಅವುನ ಬೆನ್ನಿಗೆ ಮತ್ತೆ ಹೊಡಿಯಲೋಗಲು ಅವುನು ಅವುಳ ನಡುಕ್ಕೆ ಕೈಹಾಕಿ ಚಿವುಟಿದನು. ‘ತೂ ನೀನಾ ನಿನ್ನ ಚಾಳಿ ಬೀಡಾಬಾಡ ನೀನು’ ಎಂದು ನಸುನಕ್ಕ ಅವುಳು, ಅವುನು ಬರುತ್ತಲೇ ತನ್ನ ಸೆರುಗಿನಿಂದ ಅದನ್ನು ಒರುಸಿ ಪಿಲೀಟನ್ನು ಅವುನ ಮುಂದಿಟ್ಟಳು. ಅವುನು ಗೇಣುದ್ದದ ಅದಕ್ಕೆ ಬೆಂಕಿ ಹೊತ್ತಿಸಿ ಬುಸುಬುಸು ಹೊಗೆಬಿಟ್ಟನು. ಅಲ್ಲಿಗೆ ಕೈಹಾಕಿ ಯಾಡು ಕಾಳು ಬಾಯಿಗೆ ಒಯ್ದು ‘ಸಂಜಿಕಡೆ ಬಾರೋ ಎಜ್ಜಾ ಮನೀಕಡೆ’ ಎಂದೇಳಿ ಹೊರುಡುತ್ತಲೇ ಅವುಳಿಗೆ ಅದು ಖಾತುರಿ ಅನುಸಿ ಅವುಳು ‘ಉಸ್ಸಪಾ’ ಅಂತ ಉಸುರು ಹಾಕಲು ‘ಅಂವಾ ಯಾರು.. ಎದ್ಕ ಕರ್ದ ನನ್ಗ’ ಅಂತ ಅವುನು ತಡಮಾಡುದೇ ಅನ್ನುತ್ತಲೇ ‘ಯಾವಗರ ಒಂದ್ಸಲ ಬರ್ತಾನಾತ.. ಆ ಸೌಕಾರು ಮನೀಕಡೆದವ್ನಾ ಇರ್ಬೇಕು.. ಅಂಗ್ಡಿ ಹಾಕಿದ್ಕ ಎಷ್ಟರ ಒಂದೀಟು ಕೈಯಾಗ ಇಡ್ರಿ ಅಂದಿರ್ಬೇಕು.. ಒಯ್ಯುವಂತೇಳ ಚಂಜೀಕೆ..’ ಎಂದು ಅವುಳು ಹೇಳಲು ‘ರೊಕ್ಕ ಕೊಡು ಅಂದಿದ್ಕ ಮತ್ತ ನೀನಗೇಟ ಖುಷಿಯಾಗೈತಲ್ಲ.. ಹೆಚ್ಚಾಗಾವನು ಚೀಲುದಾಗ ರೊಕ್ಕಾ.. ನಿನ್ನ ಹಕ್ಕೀಕತ್ತಾ ಗೊತ್ತಾಗವಲ್ದು ನನುಗ’ ಎಂದು ಅವುನು ತುಸು ಯಾಸಿಯಾಗಿ ಮಾತಾಡಲು, ‘ಅಯ್ಯ ಬೇಷದಿ ಬಿಡು ನೀನು, ಮುಂದ್ನೋಡಿ ಕೆಲಸ ಮಾಡಬಾರದ್ದಾ.. ನಿನುಗೇನು ತಿಳಿಯುತ್ತ ಈ ಅಂಗ್ಡಿ ಯಾವಾರ’ ಎಂದು ಮುದುಕಿ ಅವುನಿಗೆ ಜಾಡಿಸಲು.. ‘ತಿಂಗಳ ಯಾಡು ತಿಂಗುಳ ಹೊತ್ತಾತು ನೋಡಬೇ ದಿನಾ ಹೀಂಗ ಕಾಡ್ತಾನಿವು ನನನುಗ.. ತಾಸಿಗೊಂದು ಬುದ್ದಿ ಇವುಂದು.. ಒಮ್ಮೆ ಏಟು ಚೆಂದ ಇರ್ತಾನ, ಮತ್ತೊಮ್ಮೆ ಹೀಂಗ ಯಾಸಿಪಾಸಿ ಮಾತಾಡ್ತಾನ.. ಯಾರರ ಬಂದಾಗ ಒಂದೀಟು ಮಕಾ ಸರಿ ಮಾಡಿಕೊಂಡ್ರ ಸಾಕು.. ಇವುಂದು ಉರೂದ ಬಿಡುತ್ತ.. ಇವತ್ತ ಇನ್ನ ಮತ್ತೀಟ ಜೀವ ತಿನ್ನತ್ತಬೇ ಇದು ನಂದ’ ಎಂದು ಅವುಳು ಗೊಣಗುತ್ತಲೇ ‘ಅಲ್ಲಬೇ ನೀ ಬಂದ ಇನ್ನ ಯಾಡ ತಿಂಗ್ಳ ಆಗಿಲ್ಲ, ಇಷ್ಟಕ ಹೀಂಗ ಅಂತೀದಿ.. ಇವ್ನ ಉರೂನ್ಗಿ ದೊಡ್ಡದೈತಿ.. ಒಂದಿನಾ ಹೇಳ್ತೀನಿ ನೀಂಗ ಇವ್ನ ಕಥೀನಾ.. ಯಾಪಾರ ಅಂದ್ಮ್ಯಾಲೆ ನಾಕ್ಮಂದಿ ಹಚ್ಗೊಬೇಕಾಗುತ್ತ.. ಇಲ್ಲಂದ್ರ ನಾಕು ದುಡ್ಡು ಆದೀತನು.. ಅದ್ರದೇನ ಹಚ್ಗೋತಿ ನಡೀ’ ಎಂದು ಮುದುಕಿ ಹೇಳಲು.. ಅವುನು ‘ಮಾತಾಡ್ರಿ ಮಾತಾಡ್ರಿ ಇಬ್ರು ಏಟೊತ್ತರ.. ಬರ್ತೀನಿ ತಡಿ ಒಂದಿಟು’ ಎಂದನ್ನುತ್ತ ಹೊರುಡಲು ‘ಎಲ್ಗಿ ಹೊಂಟ ನಿಂತಿ ಆಗ್ಲೆ..ಇನ್ನಿಟೊತ್ತು ಇರು ಹೊತ್ತಾತು ಹೋಗಾನು’ ಎಂದು ಅವುಳು ಹೇಳಿದಳು. ‘ಇಲ್ಲ ತಡಿ ಈಗ ಬಂದ ಬಿಡ್ತೀನಿ’ ಎಂದು ಅವುನು ಹೊರುಡಲು ‘ಮತ್ತಲ್ಲಿ ಯಾವಕೆರಾ ಕಾಯಕತ್ತೆಳನು.. ಇಲ್ಲೇ ಇರು ಒಬ್ಳ ಏನು ಮಾಡಬೇಕು ಆಕಿ..’ ಎಂದು ಮುದುಕಿ ಹೇಳಲು ‘ಹೂಂ ಅಲ್ಲಿ ಕಾಯ್ಲಿಕತ್ತಾಳ ಕೆಂಪಾನಾಕಿ.. ನಿನ್ನಾಂತಕಿ’ ಅಂದನು ಮುದುಕ. ‘ನನ್ನ ಇನ್ನೂ ಬೀಡಾಬಾಡು ನೀನು’ ಎಂದು ಮುದುಕಿ ಗೊಣಗಲು ಅವುಳು ಕಿಸುದು ನಕ್ಕಳು.

ಆಟೊತ್ತಿಗೆ ಮತ್ತಿಬ್ಬರು ಬರಲು ಅವುಳು, ತನ್ನ ಸೆರುಗೀಲೆ ಪಿಲೀಟು ಒರುಸಿ ಅದನ್ನು ಹಚ್ಚಿ ಮುಂದಿಡಲು ಕಡುಗಪ್ಪು ಮೀಸೆಯ ಅವುನು ಗಬುಗಬು ತಿಂದು ಅವುಳತ್ತ ನೋಡಲು ಅವುಳು ಮೊಕವ ಅಗುಲ ಮಾಡಿ ‘ನಾಳೆ ದ್ವಾಸಿ ಹೊಯ್ತೀನಿ ಬರ್ರಿ’ ಎಂದು ಸ್ಟವ್ವುನತ್ತ ಕೈಹಾಕಿದಳು. ಯಾಡು ನೋಟುಗಳನ್ನು ಅಲ್ಲಿಟ್ಟು ಅವುನು ಅಲ್ಲಿತನುಕ ನಡುದು ತಿರುಗಿ ನೋಡಿ ಮೀಸಿಯಲಿ ನಗೆಯಾಡಿಸುತ್ತ ಹೊರಡಲು ‘ಹೆಣ್ಮಕ್ಕಳ ಕಂಡೈತ ಇಲ್ಲದು, ಹ್ಯಾಗ ನೋಡುತ್ತ ನೋಡು ಮೂಳಾ ಊರ ಮೂಳಾ’ ಅಂತ ಮುದುಕಿ ಗೊಣಗುತ್ತಲೇ ‘ನಾವು ನಕ್ರ ಅಷ್ಟ ಕನ್ನುಡಿ ನಗುತ್ತ ಅಲ್ಲನಬೇ ಮುದ್ಕಿ’ ಎಂದು ಅವುನೂ ದನಿಗೂಡಿಸಿದನು. ‘ಅಯ್ಯ ಬೆಕ್ಕಿನ ಕಣ್ಣು ಹಾಲುಮ್ಯಾಲೆನ ಇರುತ್ತ ಬಿಡು, ಹಂಗಂತ ಬೆಕ್ಕ ಸಾಕಾದ ಬಿಡಾಕಾಗುತ್ತನು.. ಅವ್ಯಾಕ ನಕ್ಕ ಅಂತ ಆಕೀ ಜೀವ ಹಿಂಡಬಾಡ ನೀನು’ ಎಂದು ಮುದುಕಿ ಅವುನಿಗೆ ಜಾಡಿಸಿದಳು. ‘ನೀನೂ  ಇನ್ನು ಗಟ್ಟೇ ಅದೀಯೇಳ  ಯಾವಾರ ಬೆಕ್ಕು ಸಿಕ್ರ ಸಾಕು’ ಎಂದು ಅವುನು ಮತ್ತೆ ಕಾಲೆಳೆಯಲು, ‘ಎಂವಾ ಗಟ್ಟೆವಾ ನೀನು.. ಅದೆಂಗ ಬಾಳೆವು ಮಾಡಿದ್ಲೋ ಇವ್ನ ಕಟ್ಗೊಂಡಿದ್ದಾಕಿ ಅಂತೀನಿ, ಆಕಿಗೇನು ಚೆಂದಾಗ ಬಾಳೇವು ಮಾಡಾಕಾ ಬಿಟ್ಟಿಲನ್ಸುತ್ತ ಇಂವಾ, ಮಕ್ಳ ಎದೀಮಟ ಬೆಳೂದ ನಿಂತಿದ್ರು, ಹಗ್ಗ ಕಡಿಯೂ ಚಾಳೀನ ಇನ್ನೂ ಬಿಡ್ಲಿಲ್ಲ.. ನೀಹೆಂಗ ಬಾಳೇವು ಮಾಡ್ತಿಯೋ ಇವನು ಜೊತಿ ’ ಎಂದು ಮುದುಕಿ ಸಿಡಿಮಿಡಿಗೊಂಡು ಅಲ್ಲೊಂದೆದ್ದು ಹೋದಳು. ‘ಇನ್ನೇಟು ಆರ್ತಿ ಮಾಡಬೇಕು ನಿನುಗ ನಡೀನಡೀ’ ಎಂದನ್ನುತ್ತ ಅವಳು ಅವೆಲ್ಲವನ್ನು ಆ ಡಬ್ಬಿಗೆ ಹಾಕಲು ಅದನ್ನು ದುಬ್ಬುದ ಮ್ಯಾಲೆ ಹೊತುಗೊಂಡು ಜೋಪುಡಿಯತ್ತ ಹೊರುಟನು. ಅವುಳು ಅದನ್ನು ನಡು ಚೀಲುದಲ್ಲಿ ಸಿಕ್ಕಿಸಿಕೊಂಡು ಹೊರುಡಲು, ಆಟೊತ್ತಿಗೆ ಅಲ್ಲಿಗೆ ಬಂದ ಆ ಸಣ್ಣುಕಿನ ನಾಯಿದೇವರು ಅವುಳ ಕಾಲುಲಿ ಬಂದು ಪಾದುವ ನೆಕ್ಕ ತೊಡುಗಿತು. ಅವುಳಿಗೆ ಜೀವ ಹಳುಹಳು ಅನ್ನಿಸಿ ಎಡಗೈಲಿದ್ದ ಅದನ್ನು ಅದುರ ಮುಂದಿಟ್ಟು ಅಲ್ಲಿಂದ ಕಾಲುಕಿತ್ತಳು.

                                   * * *

  ಮತ್ತೆ ಆ ದಿನ.. ಅವುಳು ನಸುಗ್ಗೀಲೆ ಎದ್ದು ಅಲ್ಲಿಗೆ ಬಂದು ನಾಯಿದೇವುರು ಹಾಗೂ ನೊಣಸಮೂಹವನ್ನು ಕಾಯತೊಡುಗಿದ್ದಳು. ಎಂದಿನಂತೆ ಆ ಹುಡುಗರು, ಅವರೂ ಬಂದು ಹೋಗಿದ್ದರು. ಆ ಸರಿಯಾದ ಹೊತ್ತಿಗೆ, ಆಗಾಗ ಬರುತ್ತಿದ್ದ ಅವುನು ಅಲ್ಲಿಗೆ ಹಾಜರಾಗುತ್ತಲೇ ಅವುಳ ಕೈಕಾಲುಗಳಲ್ಲು ನಡುಕುಂಟಾಗಿತ್ತು. ಅವುನು ಹೋಳು ಗಣ್ಣೀಲೆ ತಿವಿಯುತ್ತ ‘ಏನಿದೆ ಕೊಡು’ ಅನ್ನುತ್ತಲೇ ಅವುಳು ಸ್ಟ್ಟವ್‍ನಲ್ಲಿದ್ದ ಅದುರ ಮೂತಿಯನ್ನು ಜೋರಾಗಿ ತಿರುವಿದಳು. ಆಟೊತ್ತಿಗೆ ‘ಕನ್ನುಡಿ ಚೆಂದೈತಿ’ ಎನ್ನುವ ಆ ಧ್ವನಿಯು ಅವುಳ ಕಿವಿಗೆ ತಾಕುತ್ತಲೇ ಅವುಳ ಮೈಯ ನರನಾಡಿಗಳಲ್ಲಿ ರಕ್ತ ಬಿರುಸಾಗಿ ಹರಿದಾಡಿತು. ಉಸುರು ಹೆಚ್ಚುತ್ತಲೇ ಕತ್ತು ಕೆಳಬಾಗುಸಿ ಮೆಲುಗಣ್ಣು ಹಾಕಿದಳು. ಅವುನೂ ದಿಟ್ಟಿಸಿದ. ಆಟೊತ್ತಿಗೆ ಅದುರ ಮೈ ಕೆಂಪೋಗ ಕಾದು ಚೆಲ್ಲಲು ಅದನ್ನು ಹಾಕಿ ಅವುನ ಮುಂದಿಟ್ಟಳು. ಅವುನು ಅದನ್ನು ಅಷ್ಟಷ್ಟೇ ಕುಡಿದಂತೆ ಅವುಳು ತಡಕಾಡುವುದನ್ನು ಕಂಡು ಅದನ್ನು  ಮುಂದಿಟ್ಟನು. ಮತ್ತವುಳ ಉಸುರು ಹೆಚ್ಚುತ್ತಿದ್ದಂತೆ ಅವುನು ಕಣ್ಸನ್ನೆ ಮಾಡಿ, ಬುಸುಬುಸು ಹೊಗೆಬಿಟ್ಟು ಅಲ್ಲಿಂದ ಕಾಲ್ಕಿಳುತ್ತಲೇ ಅವುಳ ಮೈ ಹಗುರಾಯಿತಲ್ಲದೇ ನೂರೊಂದು ಆಲೋಚನೆಗಳು ಅವುಳನ್ನು ಮುಕ್ಕಿದವು. ಆ ಹೊತ್ತಿಗೆ ಅವುನು ನೆನುಪಾಗಿ ಘಳಿಗೊತ್ತು ಹಣಿಗಣ್ಣಾದಳು.

 ಆಟೊತ್ತಿಗೆ ಅಲ್ಲಿಗೆ ಬಂದಿದ್ದ ಅವುರಲ್ಲೊಬ್ಬ ಹಾಗೆ ಅನ್ನಲು ‘ಯ್ಯಾಪಾರಾನ ಇಲ್ಬುಡನ್ನಾ, ನಾಕಾರು ಮಂದಿ ಬಂದೋದ್ರ ಏನಾಗುತ್ತ ಹೇಳು’ ಅನ್ನುತ್ತ ಸಾವರಿಸಿಕೊಂಡಳು. ‘ಏಟರಾ ಆಗ್ಲಿ ಬಿಡ್ರಿ ಗಲ್ಲೇವು.. ಒಂದ್ಹೊಟ್ಟಿ ತುಂಬಾಕ ಇನ್ನೇಟು ಬೇಕು.. ಈಸದೀನ ಇಲ್ಯಾರೂ ಅಂಗ್ಡಿ ಹಾಕಿಲ್ಲ.. ಯಾಕನ, ನೇವೇನಾ ಹಾಕಿರಿ, ಆ ಮುತ್ಯನ ಕಾಟ ತಡ್ಕೋಂಡು’ ಎಂದು ಆತನು ಅನ್ನಲು ‘ಇರಾಕ ತುಸು ಜಾಗ ಕೊಟ್ಟಿದ್ಕ ಮತ್ತೇನರ ಮಾಡಬೇಕಲ್ಲಣ್ಣೊ.. ಅಷ್ಟೆಲ್ಲಾ ಮಾಡ್ತಾನಂದ್ರು ನಾನು ಊಟ ಮಾಡೂತನ್ಕ ಊಟ ಮಾಡುದಿಲ್ಲಂವಾ.. ಅಷ್ಟ ಒಳ್ಳೇದೂ ಐತಿ ’ ಎಂದು ಅವುಳು ಮುಗುಳ್ನಗುತ್ತಲೇ, ಅವುರೂ ನಗೆಯಾಡಿ ಸುಡುಸುಡು ಚಹಾ ಹೀರಿ ಅತ್ತ ಹೊರಡುತ್ತಲೇ ಹೊತ್ತು ನೋಡಿದ ಅವುಳು ‘ಇನ್ಯಾರು ಬರ್ತಾರು ಬಿಡು’ ಎಂದು ಮನುದಲ್ಲೇ ಅಂದುಕೊಂಡು ಉಳಿದ ಅದನ್ನಿದ್ದನ್ನು ಡಬ್ಬಿಗೆ ಹಾಕಿ ಎಂದಿನಂತೆ ಹೊರಡಲು ನಿಂತಾಗ ‘ಯಾಕ್ಬೇ.. ಮುದ್ಕ ಬಂದಿಲ್ಲಲ್ಲ ಇವತ್ತ’ ಅಂದಳು ಎದುರಾದ ಮುದ್ಕಿ ‘ಇಲ್ಲನೋಡಬೇ ಎಮ್ಮಾ.. ದಿನಾ ಏಟದೌವ್ಡು ಬರಾದೂ ಇವತ್ಯಾಕ ಇಷ್ಟೊತ್ತಾದ್ರೂ ಬರಾವಲ್ದು ಏನಾತೋ ಅಂತೀನಿ’ ಎಂದ ಅವುಳ ತುಟಿಗಳು ಒಣಗುತ್ತಲೇ ‘ಅಯ್ಯಾ ಅಷ್ಟ್ಯಾಕ ಗಾಬ್ರಿ ಆಗ್ತೀದಿ ನೀನು.. ಬಂದ್ರ ಬಂತ ನೋಡ ಅಂತ ಬೈಯಾಕಿ.. ಈಗ ಬಂದಿಲ್ಲಂತ ನೆಳ್ಳತಿಯಲ್ಲಾ ಹೋಗ್ಲಿ ಬಿಡು ಎತ್ಲಾಗರ’ ಎಂದು ಮುದುಕಿ ಹೇಳಿದಾಗ.. ‘ಅಯ್ಯ ಹಂಗ ಅಂದ್ರ ಹೆಂಗಬೇ..ಎಮ್ಮಾ ನೆಳ್ಳ ಕೊಟ್ಟ ಜೀವದು.. ನಿನ್ಗ ನಾಳೆ ಸಿಗ್ತೀನಿ ತಡೀಯಾ ಎವ್ವಾ.. ಅಂವಾ ಎತ್ಲಾಗ ಹೋದ್ನನ ನೊಡ್ತೀನಿ’ ಎಂದು ಅವುಳು, ಉಳಿದ ಅದನ್ನು ಅಲ್ಲಿ ಹಾಕಿ ‘ಕುರ್ರೋ ಕುರ್ರೋ’ ಎಂದು ಕರೆದಳು. ಕೂಳು ಹಾಕಿ ಕರೆದರೂ ಯಾವೊಂದೂ ನಾಯಿದೇವುರು ಸುಳಿಯದಿದ್ದಾಗ ‘ಅಯ್ಯ ದಿನಾ ಎಷ್ಟಾಕುಂದ ನಾಯಿ ಇರಾವು.. ಇವತ್ತೇನಾತು ಈ ಕಡೆ ಒಂದೂ ಬರಾವಲ್ವು.. ಅವ್ಕೇನಾತ ಎವ್ವಾ’ ಎಂದು ಗೊಣಗುತ್ತ ಮುದುಕಿಯೂ ಅತ್ತ ಕಾಲು ಕಿತ್ತಿತ್ತು.

ಆಟೊತ್ತಿಗೆ ಅಲ್ಲಿಂದ ಓಡೋಡಿ ಬಂದ ನಾಯಿದೇವುರೊಂದು ಅವುಳು ಕಾಲುಲಿ ಬಂದು ಬಾಲ ಅಲ್ಲಾಡಿಸುತ್ತ ಅವುಳ ಮೈಯೆನ್ನೆಲ್ಲಾ ಮೂಸುತೊಡುಗಿತು. ‘ಯಾಕ ಏನಾಗಿತ್ತು ನಿನುಗ ಇಟೊತ್ತಿಗೆ ಬಂದಿ’ ಎಂದು ಅವುಳು ಅದನ್ನೆತ್ತಿಕೊಳ್ಳಲು ಬಾಗುತ್ತಲೇ ಅವುಳ ಕಾಪಾಳವನ್ನು ನೆಕ್ಕಿದ ಅದು ಅವುಳನ್ನು ಎರಡ್ಮೂರು ಬಾರಿ ಸುತ್ತುತ್ತ ಸುತ್ತುತ್ತ.. ಅವುಳು ಮೈಕೈಯನ್ನು ಮತ್ತೆ ಮತ್ತೆ ಮೂಸುತ್ತ ಅವುಳ ಜೋಪುಡಿಯತ್ತ ಕಾಲು ಕೀಳಲು.. ಅವುಳು ಎದೆಬಡಿತ ಹೆಚ್ಚಾಯಿತು.   ‘ಅಯ್ಯ ಹಿಂಗ್ಯಾಕ ಮಾಡ್ತಾ ಎವ್ವಾ ನಾಯಿ’ ಎಂದ ಅವುಳು ಮನುದಲ್ಲಿ ನೂರೆಂಟು ಪ್ರಶ್ನೆಗಳು ಗುದುಮುರುಗಿ ಆಡಿದವು. ತಡುವ ಮಾಡುದೇ ಅವುಳು, ಕೂಗಳತೆಯ ದೂರುದಲ್ಲಿದ್ದ ಜೋಪಡಿಯತ್ತ ಬರುತ್ತಲೇ ಅಲ್ಲಿನ ದೃಶ್ಯ ಕಂಡು ಕುಸಿದು ಬಿದ್ದಳು.

   ಚಂಜಿಯಾಗುತ್ತಲೇ ಆ ನಾಯಿದೇವುರು ಅತ್ತ ಮೊಕವ ಮಾಡಿ ಒದುರತೊಡುಗಿತು. ಅವುಳು ಆ ಜೋಪುಡಿ ಪಕ್ಕ್ಕುದ ಐಷಾರಾಮಿ ಕಟ್ಟಡುದಲ್ಲಿ ಆ ದಿನುದ ರಾತ್ರಿಯೀಡಿ ಅವುನನ್ನೇ ಕನುವರಿಸಿದಳು. ಅಡಿಗಡಿಗೂ ಕಾಡಿಸಿದರೂ ತಾನುಂಡ ಮೇಲೆಯೇ ಮಲಗುತ್ತಿದ್ದ, ಆಗಾಗ ಮೆಲ್ಲ್ಲುಗೆ ಕೆನ್ನೆ ನೇವರಿಸುತ ದನಿವು ಮರೆಸುತ್ತಿದ್ದ ಎಲುಬುದೊಗುಲಿನ ಆ ಕೈಗುಳ ಆಪ್ತತೆ ಅವುಳಿಗೆ ಜ್ವರುದಂತೆ ಕಾಡತೊಡುಗಿದ್ದವು. ಆಗಾಗ ಬಂದು ಯಾಡು ಮಾತಾಡಿ, ಕಣ್ಣೀರಾಗಿ, ಅವುನ ನೆನುಪನ್ನು ಮರೆಸುತ್ತಿದ್ದ ಅವುನಾದರು ಬರುತ್ತಾನೇನೋ ಎಂದು ಅತ್ತ ತಿರುಗುತ್ತಲೇ ಅಲ್ಲಿ.. ಅಲ್ಲಿ.. ದೂರದೂರಕೆ ಅತ್ತಿತ್ತ ತಿರುಗುತ್ತ, ತಿರುಗುತ್ತ ಕಾಯುತ್ತ ನಿಂತಿದ್ದ ಅವುನನ್ನು ಕಿಡುಕಿಯ ಸಂದಿಯಲಿ ಕಂಡು ಬಿಕ್ಕಿದಳು. ಅವುಳು ನೆಚ್ಚಿನ ಆ ನಾಯಿದೇವುರೊಂದು ಆಟೊತ್ತಿನಿಂದ ಅತ್ತ ಮೊಕವ ಮಾಡಿ ಕೂಗುತ್ತಲೇ ಇತ್ತು. ಕೂಗುತ್ತಲೇ ಇತ್ತು. ಹನ್ನೊಂದಂತಸ್ತಿನ ಆ ಕಟ್ಟುಡದ ಗೌಜುಗದ್ದಲದಲ್ಲಿ ಅವುಳ ಧ್ವನಿಯು ದಿನುಗಳುದಂತೆ, ದಿನುಗಳೆದಂತೆ ಹೆಪ್ಪುಗಟ್ಟಿ ಮರೆಯಾಗಿ ಹೋಯಿತು.

                                       * * * * *

ಪರಿಚಯ: ಗವಿಸಿದ್ಧ ಹೊಸಮನಿ, ಹೊಸ ತಲೆಮಾರಿನ ಲೇಖಕರು. 2010ರಲ್ಲಿ ಕಥಾ ಸಂಕಲನವೊಂದನ್ನು ಪ್ರಕಟಿಸಿದ್ದಾರೆ. ಸಾಹಿತ್ಯ, ಸಿನೇಮಾ, ರಂಗಭೂಮಿ, ಸಂಗೀತ ಇವರ ಆಸಕ್ತಿ ಕ್ಷೇತ್ರಗಳು. ಸದ್ಯ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

One Response to "ಸಣ್ಣಕತೆ: ಅವುಳು, ಅವುನು, ಅದು"

  1. ಪಿ.ಮಂಜುನಾಥ  January 16, 2017 at 3:40 pm

    ಕತೆ ಚೆನ್ನಾಗಿದೆ… ಭಾ‍ಷೆ ಕೂಡ…! Keep going on Sir..!

    Reply

Leave a Reply

Your email address will not be published.