ಸಂಸತ್ ಭವನದಲ್ಲಿ ಮಾಡಿದ ಕನ್ನಡ ಭಾಷಣಕ್ಕೆ ಅರ್ಧ ಶತಮಾನ

- ನರಸಿಂಹಮೂರ್ತಿ ಹಳೇಹಟ್ಟಿ

(ಮುಂದಿನ ಮಾರ್ಚ್ ತಿಂಗಳ 30ಕ್ಕೆ ಈ ಭಾಷಣಮಾಡಿ 51 ವರ್ಷ ಪೂರೈಸಲಿದೆ. ಜೆ. ಹೆಚ್. ಪಟೇಲರ ಈ ಕನ್ನಡ ಭಾಷಣವನ್ನು ಹಿಂದಿಗೆ ಅನುವಾದಿಸಿ ಕೊಡುವುದಾಗಿ ಜಾರ್ಜ್ ಫರ್ನಾಂಡಿಸ್ ಹೇಳಿದ್ದರು. ಜೊತೆಗೆ ಪಟೇಲರ ಸೈದ್ಧಾಂತಿಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರು. ಫರ್ನಾಂಡಿಸ್ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರ ನೆನಪಿಗಾಗಿಯೂ ಸಹ ಈ ಬರಹ ಸಕಾಲಿಕ ಎನಿಸುತ್ತದೆ.)

1
ಸಂಸತ್ ಭವನದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ.ಹೆಚ್. ಪಟೇಲರು ಕನ್ನಡದಲ್ಲಿ ಮಾತನಾಡಿ ಕಳೆದ ಮಾರ್ಚ್ 30ಕ್ಕೆ (ಮಾರ್ಚ್ 30 1967 – ಮಾರ್ಚ್ 30 2018) ಅರ್ಧ ಶತಮಾನ ಕಳೆಯಿತು. ಈ ಐವತ್ತು ವರ್ಷಗಳಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾರತದ ದೇಶಿಯ ಭಾಷೆಗಳು ಪಾಳೇಗಾರಿಕೆ ಭಾಷೆಗಳಾದ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ನಡುವೆ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಈಗಲೂ ಈ ಭಾಷಿಕ ಸಂಘರ್ಷ ದಿನನಿತ್ಯ ನಡೆಯುತ್ತಲೇ ಇದೆ. ಹಾಗೆಯೇ ಸಣ್ಣಪುಟ್ಟ ಭಾಷೆಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಪ್ರಭುತ್ವದ ಭಾಷೆಗಳೊಂದಿಗೆ ದಿನನಿತ್ಯ ಹೋರಾಡುತ್ತಿವೆ. ಈ ಬಗೆಯ ಭಾಷಿಕ ಸಂಘರ್ಷ ಹಾಗೂ ದೇಶಿಯ ಭಾಷೆಗಳ ಅನನ್ಯತೆಯ ಹಿನ್ನಲೆಯಲ್ಲಿ ಯೋಚಿಸಿದರೆ, ಭಾರತೀಯ ಚರಿತ್ರೆಯಲ್ಲಿ 1967ರ ಮಾರ್ಚ್ 30 ತುಂಬ ಮಹತ್ವದ ದಿನ ಎಂದೇ ಹೇಳಬೇಕು. ಆದರೆ ನಮ್ಮ ಚರಿತ್ರೆಯ ರಚನಾಕಾರರು ಆ ದಿನದ ಚಾರಿತ್ರಿಕ ಮಹತ್ವವನ್ನು ಮರೆಮಾಚಿದ್ದಾರೆ. ಅಷ್ಟೇ ಅಲ್ಲ, ಹೀಗೆ ಮರೆಮಾಚುತ್ತಲೇ ಒಂದು ಒಕ್ಕೂಟ ರಾಷ್ಟ್ರದ ಬಹುಭಾಷಿಕತೆಯ ಅನನ್ಯತೆಯನ್ನೂ ಛಿದ್ರಗೊಳಿಸಿ ಚರಿತ್ರೆಗೆ ಅಪಚಾರ ಎಸಗಿದ್ದಾರೆ ಎಂದು ಯಾರಿಗಾದರೂ ಅನ್ನಿಸದಿರದು.

ಈ ಭಾಷಣದ ಬಗ್ಗೆ ಚರ್ಚಿಸುವುದಕ್ಕಿಂತ ಮುಂಚೆ, ಆ ಕಾಲದ ರಾಜಕೀಯ, ಸಾಂಸ್ಕøತಿಕ ಸ್ಥಿತಿಗತಿಗಳನ್ನು ಮೊದಲು ಅರಿಯೋಣ. ಭಾರತ ಈವರೆಗೆ ಅನೇಕ ಚುನಾವಣೆಗಳನ್ನು ಎದುರಿಸಿದೆ. ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ 1967ರ ಸಾರ್ವತ್ರಿಕ ಚುಣಾವಣೆಗೆÉ ತುಂಬ ಪ್ರಾಮುಖ್ಯತೆ ಇದೆ. ಏಕೆಂದರೆ, ಆ ಚುನಾವಣೆ ಇಡೀ ಭಾರತದಾದ್ಯಂತ ದೊಡ್ಡ ಬಿರುಗಾಳಿಯನ್ನೆ ಎಬ್ಬಿಸಿತ್ತು. ಸಮಾಜವಾದಿಗಳ ಪಡೆಯೊಂದು ಲೋಕಸಭೆಯನ್ನು ಪ್ರವೇಶಿಸಿ ರಾಜಕೀಯ ರಂಗದಲ್ಲಿ ಕ್ರಾಂತಿಯ ಕಿಡಿಯನ್ನೇ ಹೊತ್ತಿಸಿತ್ತು. ಆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆ.ಹೆಚ್.ಪಟೇಲರು ಹಿರಿಯ ಗಾಂಧಿವಾದಿ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿದ್ದ ಎಚ್.ಎಸ್. ರುದ್ರಪ್ಪ ಅವರನ್ನು ಸೋಲಿಸಿದ್ದರು. ಈ ವಿಚಾರ ಆಗ ರಾಜಕೀಯ ರಂಗದಲ್ಲಿ ದೊಡ್ಡಸಂಚಲನವನ್ನು ಉಂಟುಮಾಡಿತ್ತು. ಏಕೆಂದರೆ ಹೊಸಮುಖದ ಹಾಗೂ ಸಣ್ಣವಯಸ್ಸಿನ ಪಟೇಲರ ಎದುರು ಆ ಚುನಾವಣೆಯ ಹೀನಾಯ ಸೋಲು, ಎಚ್.ಎಸ್. ರುದ್ರಪ್ಪನವರ ಪಾಲಿಗೆ ಸಾಮಾನ್ಯವಾದ ಸೋಲಾಗಿರಲಿಲ್ಲ. ಆ ವೇಳೆಗಾಗಲೇ ತರುಣ ಸಮಾಜವಾದಿಯಾಗಿದ್ದ ಪಟೇಲರು ಪ್ರಖರ ವಿಚಾರವಾದಿ ಹಾಗೂ ಬುದ್ಧಿಜೀವಿ ಎಂದು ಅವಿಭಜಿತ ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಸರಾಗಿದ್ದರು. ಅದೇ ಸಂದರ್ಭದಲ್ಲಿ ದೇಶದಾದ್ಯಂತ ಇಂಥ ಪ್ರಖರ ವಿಚಾರವಾದಿ ಹಾಗೂ ಬುದ್ಧಿಜೀವಿಗಳ ವರ್ಗಕ್ಕೆ ಸೇರಿದ್ದ; ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವಾದಿ ಸಿದ್ಧಾಂತದ ಹಿನ್ನಲೆಯಲ್ಲಿ ಗುರುತಿಸಿಕೊಂಡಿದ್ದ ನೂತನ ಸದಸ್ಯರ ಪಡೆಯೊಂದು ಸಂಸತ್ ಭವನದ ಅಂಗಳಕ್ಕೆ ಪ್ರವೇಶಮಾಡಿ, ಇಡೀ ರಾಜಕೀಯ ರಂಗಕ್ಕೆ ಹೊಸ ಮೆರುಗು ತಂದಿದ್ದರು.

ಆಗ ಲೋಕಸಭೆಗೆ ಆರಿಸಿಬಂದಿದ್ದ ಗುಂಪಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಾಮಮನೋಹರ ಲೋಹಿಯಾ, ಮಧುಲಿಮೆಯೆ, ಜಾರ್ಜ್ ಫರ್ನಾಂಡೀಸ್, ರಾಮ್‍ಸೇವಕ್ ಯಾದವ್, ದೇವನ್‍ಸೇನ್, ರಬಿರಾಯ್ ಇನ್ನೂ ಮುಂತಾದ ಸಮಾಜವಾದಿಗಳಿದ್ದರು. ಆಶ್ಚರ್ಯವೆಂದರೆ ದೊಡ್ಡ ದೊಡ್ಡ ಪ್ರಭಾವಿ ನಾಯಕರೇ ಆ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ಯಾರೂ ಊಹಿಸದಿದ್ದ ರಾಜಕೀಯ ರಂಗದ ಸೋಲು-ಗೆಲವಿನ ಲೆಕ್ಕಾಚಾರ ತಲೆಕೆಳಗಾಗಿದ್ದನ್ನು ಪತ್ರಕರ್ತರಾಗಿದ್ದ ಚಂದ್ರಶೇಖರ ತೌಡೂರು ಅವರು ಈ ರೀತಿಯಾಗಿ ವಿವರಿಸಿದ್ದಾರೆ: “ಮುಂಬೈನಲ್ಲಿ ಕಾಂಗ್ರೆಸ್‍ನ ಘಟಾನುಘಟಿ ನಾಯಕ ಎಸ್.ಕೆ. ಪಾಟೀಲರನ್ನು ಸೋಲಿಸಿ ಜಾರ್ಜ್ ಫರ್ನಾಂಡೀಸ್ ಗೆದ್ದರು. ಮೊಂಘೀರ್‍ನಿಂದ ಮಧುಲಿಮೆಯೆ ಲೋಕಸಭೆಗೆ ಬಂದರು. ಲೋಹಿಯಾ ಫೈಜಾಬಾದ್‍ನಿಂದ ಸಂಸತ್ತಿನಲ್ಲಿ ಉಳಿದರು. ರಬಿರಾಯ್, ದೇವನ್‍ಸೇನ್, ರಾಮ್‍ಸೇವಕ್ ಯಾದವ್ ಹೀಗೆ ನಿಗಿ-ನಿಗಿ ಕೆಂಡದಂತೆ ಯೋಚಿಸುವ ಮ್ತತು ಅದರಂತೆ ಹಠದಿಂದ ಬದುಕುವ ಸಮಾಜವಾದಿಗಳ ಒಂದು ಪ್ರಮುಖ ಪಡೆ ಲೋಕಸಭೆಯಲ್ಲಿ ಹಾಜರಾಯಿತು. ಡಾ|| ಲೋಹಿಯಾರವರ ನೇತೃತ್ವ ಮತ್ತು ನಿಕಟ ಸಂಪರ್ಕದಲ್ಲಿ ಈ ಸೋಷಲಿಷ್ಟರು ದಿಲ್ಲಿ ಮತ್ತು ದೇಶವನ್ನು ತಮ್ಮ ವಿಚಾರಗಳಿಂದ ನಡುಗಿಸತೊಡಗಿದರು.”(ಎಲ್ಲರಂಥಲ್ಲದ ಜೆ.ಹೆಚ್. ಪಟೇಲ್., ಪುಟ – 77)

ಇಂಥ ಘಟಾನುಘಟಿಗಳು ಆಡಳಿತ ಪಕ್ಷವಾದ ಕಾಂಗ್ರೆಸ್ ಸರ್ಕಾರದ ಅವೈಜಾನಿಕ ಹಾಗೂ ಜನವಿರೋಧಿ ನೀತಿ-ನಿರೂಪಣೆಗಳು, ಕುಟುಂಬ ರಾಜಕಾರಣ, ದೇಶದಲ್ಲಿ ಆಗ ತೀವ್ರವಾಗಿ ಬಾಧಿಸುತ್ತಿದ್ದ ನೆಲ, ಜಲ, ಭಾಷೆ, ಹಸಿವು, ಬಡತನ ಸಮಸ್ಯೆ… ಇನ್ನೂ ಮುಂತಾದ ವಿಚಾರಗಳ ಬಗೆಗೆ ಗಂಟೆಗಟ್ಟಲೇ ಸಂಸತ್ ಭವನದೊಳಗೆ ತಮ್ಮ ಕಲಾಪಗಳಲ್ಲಿ ಚರ್ಚಿಸುತ್ತಿದ್ದರು.
ಯಥಾಪ್ರಕಾರ ಇಂಥ ಬಿರುಸಿನ ಚರ್ಚೆಗಳು ನಡೆಯುವಂತೆಯೇ ಒಂದು ದಿನ ಇದ್ದಕ್ಕಿದ್ದಂತೆ ದೆಹಲಿಯ ಸಂಸತ್ ಭವನದಲ್ಲಿ ಜೆ.ಹೆಚ್. ಪಟೇಲರು ಪ್ರಪ್ರಥಮ ಬಾರಿಗೆ ‘ಕನ್ನಡ ಡಿಂಡಿಮ’ ಬಾರಿಸುವ ಮೂಲಕ ಅನೇಕರ ಉಬ್ಬೇರುವಂತೆ ಮಾಡಿದರು. ಮೇಲೆ ತಿಳಿಸಿದಂತೆ ಈ ಘಟನೆ ನಡೆದದ್ದು 1967ರ ಮಾರ್ಚ್ 30ರಂದು. ಆದರೆ, ಅವರು ಅಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯಗಳಿಗಿಂತ ಕನ್ನಡದಲ್ಲಿ ಭಾಷಣಮಾಡಿದ್ದಕ್ಕಾಗಿಯೇ ಹೆಚ್ಚು ಸುದ್ದಿಯಾದರು. ಕೆಲವರಿಗೆ ಇದು ಅಷ್ಟೊಂದು ಮಹತ್ವದ ವಿಚಾರ ಆಗಿರಲಾರದು. ಆದರೆ ದೇಶಿಯ ಭಾಷೆಗಳ ಅಸ್ಮಿತೆಯ ಹಿನ್ನಲೆಯಲ್ಲಿ ಪರಿಭಾವಿಸಿದರೆ ಈ ಭಾಷಣಕ್ಕೆ ಎಲ್ಲಿಲ್ಲದ ಮಹತ್ವವಂತೂ ಇದೆ.

ಏಕೆಂದರೆ ಆ ವೇಳೆಗಾಗಲೇ ವಸಾಹತುಶಾಹಿ ಶಿಕ್ಷಣದ ಭಾಗವಾಗಿ ಇಂಗ್ಲಿಷ್ ಭಾಷೆ ಭಾರತಕ್ಕೆ ಪ್ರವೇಶ ಪಡೆದಿತ್ತು. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಅನೇಕ ಪ್ರಾದೇಶಿಕ ಭಾಷೆಗಳು ಅದೇ ಸಮಯಕ್ಕೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಎದುರು ತಮ್ಮ ಅಸ್ಮಿತೆಗಾಗಿ ಹೋರಾಟಕ್ಕಿಳಿದಿದ್ದವು. ಅಷ್ಟೇ ಅಲ್ಲ, ಎಲ್ಲೆಡೆ ದ್ವಿಭಾಷೆ ಹಾಗೂ ತ್ರಿಭಾಷಾ ಸೂತ್ರಗಳ ಸಮೀಕರಣಗಳು ಅನುರಣಿಸುತ್ತಿರುವಾಗಲೇ, ಈ ಚರ್ಚೆಯು ಕೂಡ ಲೋಕಸಭೆಯ ಅಂಗಳದವರೆಗೂ ವಿಸ್ತರಿಸಿ ಸದ್ದುಮಾಡಿತು. ಅಷ್ಟೋತ್ತಿಗಾಗಲೇ ರಾಮಮನೋಹರ ಲೋಹಿಯಾ ಅವರು ತಮ್ಮ ಬರಹ ಮತ್ತು ಭಾಷಣಗಳ ಮೂಲಕ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಪಾಳೇಗಾರಿಕೆಯ ಧೋರಣೆ, ಜನಭಾಷೆಗಳ ಅಳಿವು-ಉಳಿವು, ಇಂಗ್ಲಿಷ್ ಭಾಷೆ ಉಂಟುಮಾಡುವ ಅಸಮಾನತೆ ಹಾಗೂ ಪರಕೀಯತೆಯ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು. ಈ ಎಲ್ಲಾ ವಿಚಾರಗಳು ಇಡೀ ಭಾರತದಾದ್ಯಂತ ಆಯಾ ಪ್ರಾಂತೀಯ ನಾಯಕರನ್ನು; ಅದರಲ್ಲೂ ಮುಖ್ಯವಾಗಿ ಸಮಾಜವಾದಿಗಳನ್ನು ಪ್ರಭಾವಿಸಿದ್ದವು.

ಇದರ ಜೊತೆಗೆ ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇಂಗ್ಲಿಷ್ ಭಾಷೆ ಜಗತ್ತಿನ ಎಲ್ಲಾ ರಾಷ್ಟ್ರಗಳÀ ಜನರ ಸಂವಹನಕ್ಕೆ ಅನಿವಾರ್ಯ ಎಂಬ ಭ್ರಮೆಯನ್ನು ಹುಟ್ಟಹಾಕಿತ್ತು. ಭಾರತದಲ್ಲಿ ಆ ವೇಳೆಗಾಗಲೇ ಇಂಗ್ಲಿಷ್, ಹಿಂದಿ ಭಾಷೆಯನ್ನೂ ಕೂಡ ಪಕ್ಕಕ್ಕೆ ಸರಿಸಿ ತನ್ನ ಆಧಿಪತ್ಯವನ್ನು ಸಾಧಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಹಿಂದಿ ಮಾತನಾಡುವ ಬಹುಸಂಖ್ಯಾತ ಲೋಕಸಭಾ ಸದಸ್ಯರ ಎದುರು ಹಿಂದಿ ಹಾಗೂ ಇಂಗ್ಲಿಷ್ ಎರಡೂ ಭಾಷೆ ಬರದಿರುವ ರಾಜಕಾರಣಿಯೊಬ್ಬ ಎಷ್ಟೇ ಬುದ್ಧಿವಂತನಾಗಿದ್ದರೂ ಕನ್ನಡ, ತೆಲುಗು, ತಮಿಳು, ಅಸ್ಸಾಮಿ, ಮಲೆಯಾಳಿ, ಮರಾಠಿ, ಬಂಗಾಳಿ… ಹೀಗೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವುದು ಅಷ್ಟು ಸುಲಭವಿರಲಿಲ್ಲ. ಅಷ್ಟೇ ಅಲ್ಲ, ಅಂಥ ಒಂದು ಪ್ರಸಂಗವನ್ನು ಆಗ ಊಹಿಸಲೂ ಅಸಾಧ್ಯವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನಿನಲ್ಲಿ ಅವಕಾಶವಿದ್ದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಸದನದ ಚರ್ಚೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅನಿವಾರ್ಯವಾಗಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನೇ ಮೊರೆ ಹೋಗುತ್ತಿದ್ದರು. ಈಗಲೂ ಎಷ್ಟೋ ಜನ ಸಂಸದರು ಭಾಷೆಯ ಸಂವಹನದ ಕಾರಣಕ್ಕೆ ಲೋಕಸಭೆಯ ಕಾರ್ಯ-ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ ಜಡವಾಗಿ ಬಿಟ್ಟಿರುವ; ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಒಂದು ದಿನವೂ ಕೂಡ ಯಾವ ಚಕಾರವನ್ನೂ ಎತ್ತದಿರುವ ನಿದರ್ಶನಗಳು ನಮ್ಮ ಕಣ್ಣೆದುರಿಗಿವೆ.

ಇವತ್ತಿಗೂ ಅದೇ ಪರಿಸ್ಥಿತಿಯಲ್ಲಿ ನಾವಿರುವಾಗ, ಅಂದಿನ ಸಂದರ್ಭ ಈಗಿನದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಭಾರತೀಯ ಆಡಳಿತ ವ್ಯವಸ್ಥೆಯು ನಿಧಾನವಾಗಿ ಎಲ್ಲಾ ವಲಯಗಳಲ್ಲೂ ಹಿಂದಿ ಭಾಷೆಯನ್ನು ಜನರ ಮೇಲೆ ಹೇರುವ, ಪ್ರಚೋದಿಸುವ ಕುತರ್ಕವನ್ನು ಸಮಾಜವಾದಿಗಳು ಅಂದೇ ಅರಿತಿದ್ದರು. ಸಂಸತ್ತು ಕೂಡ ಹಿಂದಿ ಭಾಷಿಕರಿಂದಲೇ ತುಂಬಿತ್ತು; ರಾಜಕೀಯ ನಿರ್ಧಾರಗಳು, ಅಭಿವೃದ್ಧಿ ಯೋಜನೆಗಳು, ಆಡಳಿತ ಸಂಬಂಧಿ ಪಾರುಪತ್ಯಗಳು ಅವರ ಅಣತಿಯಂತೆಯೆ ನಡೆಯುತ್ತಿದ್ದವು. ಇಂಥ ಸಂದರ್ಭದಲ್ಲಿ, ಅಂದರೆ- “67ರಲ್ಲಿ ಪಟೇಲರು ಲೋಕಸಭೆಗೆ ಆರಿಸಿ ಹೋದಾಗ ಇಂದಿರಾಗಾಂಧಿ ಪ್ರಧಾನಿ. ಅದುವರೆಗೂ ಸಂಸತ್ತಿನಲ್ಲಿ ಸದಸ್ಯರು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತನಾಡುವ ಪರಿಪಾಠವಿತ್ತು. ಹಳ್ಳಿಗಾಡಿನಿಂದ ಹಾರಿಸಿ ಹೋದ ಒಬ್ಬ ಸಂಸತ್ ಸದಸ್ಯ ತನ್ನ ಕ್ಷೇತ್ರದ ಕಷ್ಟಸುಖಗಳ ಬಗ್ಗೆ ಇವೆರಡು ಭಾಷೆಗಳಲ್ಲಿ ಮಾತ್ರ ಮಾತನಾಡಬೇಕಿತ್ತು. ಆದರೆ ಎಲ್ಲರೂ ಹಿಂದಿ ಅಥವಾ ಇಂಗ್ಲಿಷ್ ಬಲ್ಲವರಾಗಿರುತ್ತಿರಲಿಲ್ಲ.

ತಮ್ಮ ಕ್ಷೇತ್ರದ ಕಷ್ಟಸುಖಗಳನ್ನು ಅನಿವಾರ್ಯವಾಗಿ, ಕರುನಾಜನಕವಾಗಿ ನಿವೇದಿಸಿ ಏದುಸಿರು ಬಿಡುವ ಪರಿಪಾಠ ಇತ್ತು. ಇದು ಡಾ|| ಲೋಹಿಯಾ ಮತ್ತವರ ಶಿಷ್ಯ ಪಟೇಲ್‍ರಂಥವರಿಗೆ ತುಂಬಾ ಅಸಹಜವೂ, ಅವಿವೇಕವೂ ಆಗಿ ತೋರತೊಡಗಿತ್ತು. ಅಸ್ಸಾಮಿ, ಬಂಗಾಳಿ, ಕನ್ನಡಿಗ, ತಮಿಳಿಗ, ಮಲಯಾಳಿ, ಗುಜರಾತಿ, ಮರಾಠಿ ಮೊದಲಾದ ಭಾಷೆಗಳ ಸಂಸದರು ತಮ್ಮ ಭಾಗದ ಜನರಿಗೆ ಮತ್ತು ತಮಗೆ ಸ್ವತಃ ಗೊತ್ತಿರದೆ; ಗೊತಿದ್ದರೂ ಸ್ಪಷ್ಟವಾಗಿ ತಿಳಿಯದ, ತಿಳಿದರೂ ಹೃದಯಪೂರ್ವಕವಾಗಿ ವಿವರಿಸಲಾಗದ ಹಿಂದಿ ಅಥವಾ ಇಂಗ್ಲಿಷುಗಳಲ್ಲಿ ಅನಿವಾರ್ಯವಾಗಿ ಮಾತನಾಡುವಂಥ ಹುಚ್ಚು ಇನ್ನೊಂದಿಲ್ಲ. ಇದು ಸಂಸದೀಯ ವ್ಯವಸ್ಥೆಯ ಅಣಕ ಎಂದು ಬಗೆದರು. ಹಾಗಾಗಿ ತಾವುಗಳು ಪ್ರತಿನಿಧಿಸುವ ಜನಭಾಷೆಗಳಲ್ಲಿಯೇ ಸಂಸತ್ತಿನಲ್ಲಿ ಕಡ್ಡಾಯವಾಗಿ ಮಾತನಾಡಲು ಸಮಾಜವಾದಿ ಸಂಸದರು ನಿರ್ಧರಿಸಿದರು. ಜೆ.ಹೆಚ್. ಪಟೇಲರು ಮೊಟ್ಟಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದರು. ಜನಭಾಷೆಗಳ ಇತಿಹಾಸದಲ್ಲಿ ಹಾಗೂ ಸಂಸತ್ತಿನ ಅಧ್ಯಾಯದಲ್ಲಿ ಇದು ಚರಿತ್ರಾರ್ಹ ಘಟನೆಯಾಗಿ ದಾಖಲಾಯ್ತು”(ಎಲ್ಲರಂಥಲ್ಲದ ಜೆ.ಹೆಚ್. ಪಟೇಲ್., ಪುಟ – 81) ಎಂದು ಚಂದ್ರಶೇಖರ ತೌಡೂರು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಯಾವುದೇ ಭಾರತೀಯ ಭಾಷೆಯ ಸಂಸತ್ ಸದಸ್ಯರು ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳೆರಡನ್ನೂ ಹೊರತುಪಡಿಸಿ ಆಯಾ ಸದಸ್ಯರ ಮಾತೃಭಾಷೆಯಲ್ಲಿಯೇ ತಮ್ಮ ವಿಚಾರಗಳನ್ನು ಹಾಗೂ ಜನರ ಕಷ್ಟಸುಖಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಸಂವಿಧಾನದ 120ನೇ ಪರಿಚ್ಛೇದದಲ್ಲಿ ಸೂಚಿಸಲಾಗಿದೆ; ಇದಕ್ಕೆ ಅವಕಾಶವನ್ನೂ ಕಲ್ಪಿಸಿಕೊಡಲಾಗಿದೆ. ಇದರ ಜೊತೆಗೆ ಇದೇ ಪರಿಚ್ಛೇದದ 8ನೆಯ ಶೆಡ್ಯೂಲ್‍ನಲ್ಲಿ ಎಲ್ಲಾ ಭಾರತೀಯ ಭಾಷೆಗಳನ್ನು ಸಮಾನವಾಗಿ ಗೌರವಿಸುವ, ರಕ್ಷಿಸುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ಎಲ್ಲಾ ಬಗೆಯ ಕಾನೂನಿನ ಅರಿವಿದ್ದ ಪಟೇಲರು ಇಂಥ ಸದವಕಾಶವನ್ನು ತುಂಬಾ ಜಾಣ್ಮೆಯಿಂದ ಬಳಸಿಕೊಂಡು, ತಾನು ಹೇಳಬೇಕಾಗಿದ್ದ ವಿಚಾರಗಳನ್ನು ತನ್ನ ಮಾತೃಭಾಷೆಯಾದ ಕನ್ನಡದಲ್ಲಿಯೇ ಮಂಡಿಸಿ ಸಮಾಜವಾದಿಗಳ ಮೆಚ್ಚುಗೆಗೆ ಪಾತ್ರರಾದರು. ಪಟೇಲರು ಸಂವಿಧಾನದ 120ನೇ ಪರಿಚ್ಛೇದದ ಅನ್ವಯ ಮೊಟ್ಟ ಮೊದಲ ಬಾರಿಗೆ ಲೋಕಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಭಾರತೀಯ ದೇಶಿಯ ಭಾಷೆಗಳ ಅನನ್ಯತೆಯನ್ನು ಎತ್ತಿ ಹಿಡಿದರು. ಅಷ್ಟೇ ಅಲ್ಲ, ಭಾಷೆಯ ಹೆಸರಿನಲ್ಲಿ ನಡೆಯುವ ಯಾಜಮಾನ್ಯ ಧೋರಣೆಯನ್ನು ಖಂಡಿಸಿದರು.

ಆಗ ಆಡಳಿತ ಪಕ್ಷವಾದ ಕಾಂಗ್ರೆಸ್‍ನ ಸಂಸತ್ ಸದಸ್ಯರು; ಅದರಲ್ಲೂ ಉತ್ತರ ಭಾರತದ ಹಿಂದೀವಾದಿಗಳು ಪಟೇಲರ ಭಾಷಣವನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಇದ್ಯಾವುದಕ್ಕು ಜಗ್ಗದ ಪಟೇಲರು ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡರು; ಆ ಮೂಲಕ ಜನಮೆಚ್ಚುಗೆಗೂ ಪಾತ್ರರಾದರು. ಭಾರತದ ಯಾವ ರಾಜಕಾರಣಿಯೂ ಮಾಡದಿರುವ ಒಂದು ಮಹತ್ಕಾರ್ಯವನ್ನು ಜೆ.ಹೆಚ್. ಪಟೇಲರು ಮಾಡಿದ್ದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ. ಆದರೆ ಈ ನಿಲುವನ್ನು ಲೋಕಸಭೆ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ ಎಂದು ಚಂದ್ರಶೇಖರ ತೌಡೂರು ಹೇಳಿದ್ದಾರೆ. ಅವರು ಹೇಳುವಂತೆ- “ಪಟೇಲರ ಈ ಸೈದ್ಧಾಂತಿಕ ಹೋರಾಟಕ್ಕೆ ಡಾ|| ಲೋಹಿಯಾ, ಜಾರ್ಜ್ ಫರ್ನಾಂಡೀಸ್, ರಾಮ್‍ಸೇವಕ್ ಯಾದವ್, ಮಧುಲಿಮೆಯೆ ಮೊದಲಾದವರು ನೆರವಾಗಿ ಬಂದರು. ಡಾ|| ಲೋಹಿಯಾ ಬಂಗಾಳಿಯಲ್ಲಿ ಮಾತನಾಡಿದರು. ಜಾರ್ಜ್ ಫರ್ನಾಂಡೀಸ್ ಪಟೇಲರ ಕನ್ನಡ ಭಾಷಣವನ್ನು ಹಿಂದಿಗೆ ಅನುವಾದಿಸಿ ಕೊಡುವುದಾಗಿ ಹೇಳಿದರು. ರಾಮ್‍ಸೇವಕ್ ಯಾದವ್ ಮತ್ತು ಮಧುಲಿಮೆಯೆ ಪಟೇಲರ ಹಠದ ಹಿಂದಿನ ಸದುದ್ದೇಶ ಮತ್ತು ಔಚಿತ್ಯವನ್ನು ಸಭಾಧ್ಯಕ್ಷರಿಗೆ ವಿವರಿಸಿ ಹೇಳಿದರು. ಲೋಕಸಭೆಯನ್ನು ಒಂದು ರೀತಿ ಯುದ್ಧ ಭೂಮಿಯನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮವಾಗಿ ಅಂದಿನಿಂದ ಇತರೆ ಭಾಷೆಗಳ ಅನುವಾದ ಕಾರ್ಯವೂ ಸಂಸತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಆರಂಭವಾಯ್ತು. ಪಟೇಲರು ಕನ್ನಡಿಗರು ಮತ್ತು ಕನ್ನಡ ಭಾಷೆಯ ದೃಷ್ಟಿಯಿಂದ ಸದಾ ಸ್ಮರಣೀಯರಾದರು.”(ಎಲ್ಲರಂಥಲ್ಲದ ಜೆ.ಹೆಚ್. ಪಟೇಲ್., ಪುಟ – 81)

2
ಈ ಘಟನೆಯ ಹಿಂದೆ ರಾಮಮನೋಹರ ಲೋಹಿಯಾ ಅವರ ಪ್ರೇರಣೆಯೂ ಇತ್ತೆಂಬುದು ಕುತೂಹಲಕರ ವಿಷಯ. ಪಟೇಲರು ಹಿರಿಯ ಸಮಾಜವಾದಿ ಚಿಂತಕ, ರಾಜಕಾರಣಿ ರಾಮಮನೋಹರ ಲೋಹಿಯಾ ಅವರ ಪ್ರೀತಿಯ ಶಿಷ್ಯರಾಗಿದ್ದರು. ಲೋಹಿಯಾ ಅವರಂತೆಯೇ ಸೂಕ್ಷ್ಮ ಮತ್ತು ಪ್ರಖರ ಮಾತುಗಾರರೂ ವೈಚಾರಿಕ ಚಿಂತಕರೂ ಆಗಿದ್ದ ಜೆ.ಹೆಚ್. ಪಟೇಲರು ಸಂಸದರಾಗಿದ್ದಾಗ ದೆಹಲಿಯಲ್ಲಿ ಮೂರು ವರ್ಷ ಅವರೊಟ್ಟಿಗೆ ಕಳೆದಿದ್ದರು. ಆ ಸಂದರ್ಭದಲ್ಲಿ ಲೋಹಿಯಾ ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದರು. ಭಾರತದ ಸೈದ್ಧಾಂತಿಕ ರಾಜಕಾರಣಕ್ಕೆ ಲೋಹಿಯಾ ಅವರ ಪ್ರಭಾವ ತುಂಬಾ ಇದೆ. ಅನೇಕ ಬರಹಗಾರರು, ಬುದ್ಧಿಜೀವಿಗಳು ಹಾಗೂ ಹೋರಾಟಗಾರರನ್ನು ರೂಪಿಸಿದ ಹೆಗ್ಗಳಿಕೆ ಲೋಹಿಯಾ ಅವರದ್ದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನವ್ಯ ಹಾಗೂ ನವ್ಯೋತ್ತರ ಸಾಹಿತ್ಯ ಸಂದರ್ಭದ ಪ್ರಧಾನ ಪ್ರೇರಣೆಗಳ ಆಳದಲ್ಲಿ ಲೋಹಿಯಾ ಪ್ರಣೀತ ಸಮಾಜವಾದಿ ಸಿದ್ಧಾಂತದ ಹಲವು ಬೇರುಗಳಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ದೇವನೂರ ಮಹಾದೇವ, ಕೆ. ರಾಮದಾಸ್, ಮಂಗ್ಳೂರ ವಿಜಯ, ಕಾಳೇಗೌಡ ನಾಗವಾರ, ರವಿವರ್ಮಕುಮಾರ್ ಸಿ.ಎಸ್. ದ್ವಾರಕನಾಥ್, ಡಿ.ಎಸ್. ನಾಗಭೂಷಣ, ಹಸನ್ ನಯೀಂ ಸುರಕೋಡ ಹಾಗೂ ನಟರಾಜ್ ಹುಳಿಯಾರ್ ಇನ್ನೂ ಮುಂತಾದವರ ಚಿಂತನೆ-ಬರಹಗಳಲ್ಲಿ ರಾಮಮನೋಹರ ಲೋಹಿಯಾ ವಿಚಾರಧಾರೆಯ ಛಾಯೆ ಇದೆ. ರಾಜಕೀಯ ರಂಗದಲ್ಲಿ ಶಾಂತವೇರಿ ಗೋಪಾಲಗೌಡ, ಎನ್.ಎನ್. ಕಲ್ಲಣ್ಣವರ, ಅಬ್ಬಿಗೇರಿ ವಿರೂಪಾಕ್ಷಪ್ಪ, ಎಚ್. ಗಣಪತಿಯಪ್ಪ, ಜೆ.ಹೆಚ್. ಪಟೇಲ್, ಎಸ್. ಬಂಗಾರಪ್ಪ, ಕೋಣಂದೂರು ಲಿಂಗಪ್ಪ, ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಎಂ.ಪಿ. ಪ್ರಕಾಶ್, ಕಾಗೋಡು ತಿಮ್ಮಪ್ಪ, ಸಿದ್ದರಾಮಯ್ಯ, ಕೆ.ಎಸ್. ಪುಟ್ಟಣ್ಣಯ್ಯ ಇನ್ನೂ ಮುಂತಾದ ರಾಜಕಾರಣಿಗಳ ಬದುಕು, ಬದ್ಧತೆ ಹಾಗೂ ಅವರು ಜಾರಿಗೆ ತಂದ ನೀತಿ-ನಿರೂಪಣೆಗಳಲ್ಲಿ ಲೋಹಿಯಾ ಅವರ ಪ್ರಭಾವ ದಟ್ಟವಾಗಿ ಕಾಣುತ್ತದೆ. ಸಿನಿಮಾ, ರಂಗಭೂಮಿ, ಮಾಧ್ಯಮ, ಕೃಷಿ, ಪ್ರಗತಿಪರ ಹೋರಾಟ ಇನ್ನೂ ಮುಂತಾದ ವಲಯಗಳಲ್ಲಿ ಲೋಹಿಯಾ ಚಿಂತನೆಯ ನಂಟು ವ್ಯಾಪಿಸಿದೆ. ಈಗಲೂ ನಮ್ಮ ವಿವಿಧ ಜ್ಞಾನಶಿಸ್ತುಗಳು ಮಂಡಿಸುತ್ತಿರುವ ನೆಲ, ಜಲ, ಸ್ಥಳೀಯ ಭಾಷೆ, ಸಂಸ್ಕøತಿ, ಅಭಿವೃದ್ಧಿ ಹಾಗೂ ಜಾಗತೀಕರಣಕ್ಕೆ ಸಂಬಂಧಿಸಿದ ಪರ-ವಿರೋಧದ ಚರ್ಚೆಗಳಲ್ಲಿ ಮತ್ತೆ ಮತ್ತೆ ಲೋಹಿಯಾ ಒಂದಿಲ್ಲೊಂದು ಕಾರಣಕ್ಕೆ ನಮಗೆ ಮುಖಾಮುಖಿಯಾಗುತ್ತಿದ್ದಾರೆÉ.

3
ವಿಶೇಷವೆಂದರೆ, ಅಂದು ಪಟೇಲರ ಭಾಷಣ ಕೇಳಿ ಕುವೆಂಪು ಅವರು ರೋಮಾಂಚಿತರಾಗಿದ್ದರು; ಅಷ್ಟೇ ಅಲ್ಲ, ಅವರ ಧೈರ್ಯವನ್ನು ಮನಸಾರೆ ಮೆಚ್ಚಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ರಾಮಮನೋಹರ ಲೋಹಿಯಾ ಅವರ ಚಿಂತನೆಗಳು ಕುವೆಂಪು ಅವರಿಗೆ ಆಳವಾಗಿ ಅರ್ಥವಾಗತೊಡಗಿದ್ದು ಪಟೇಲರ ಆ ಭಾಷಣವನ್ನು ಕೇಳಿದ ಮೇಲೆಯೇ. ಅದಕ್ಕಿಂತ ಮುಂಚೆ ಲೋಹಿಯಾ ಅವರು ‘ಹಿಂದೀವಾದಿ’ ಎಂಬ ಭಾವನೆ ಕುವೆಂಪು ಅವರಲ್ಲಿತ್ತು. ಆದರೆ ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂಬುದು ಆನಂತರ ಅವರಿಗೆ ತಿಳಿಯಿತು. ಈ ಘಟನೆಯಿಂದ ಪಟೇಲರು ಕುವೆಂಪು ಅವರ ದೃಷ್ಟಿಯಲ್ಲಿ ನಿಜವಾದ ಹೀರೋ ಆದರು ಎಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ‘ಅಣ್ಣನ ನೆನಪು’ ಪುಸ್ತಕದಲ್ಲಿ ಹೇಳಿದ್ದಾರೆ.

ರಾಮಮನೋಹರ ಲೋಹಿಯಾ ಹಾಗೂ ಕುವೆಂಪು ಅವರ ಭಾಷಿಕ ಚಿಂತನೆಯಲ್ಲಿ ಅನೇಕ ಸಾಮ್ಯತೆಗಳಿವೆ. ಇವರಿಬ್ಬರಿಗೂ ಪಾಳೇಗಾರಿಕೆ ಭಾಷೆಗಳು ಉಂಟುಮಾಡುವ ಅಪಾಯಗಳ ಅರಿವಿತ್ತು. ಆದ್ದರಿಂದ ಭಾಷೆಯ ಬಗೆಗೆ ಈ ಇಬ್ಬರೂ ಚಿಂತಕರು ಮಂಡಿಸಿರುವ ಪ್ರಮೇಯಗಳು, ಆಲೋಚನೆಗಳು ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ಹೀಗೆ ಭಾಷೆ ಕುರಿತು ಸಮಾನ ಆಸಕ್ತಿ, ಆಶಯಗಳಿದ್ದ ಕಾರಣಕ್ಕಾಗಿಯೋ ಏನೋ ಪಟೇಲರ ಈ ಭಾಷಣ ಕೇಳಿ ಸಹಜವಾಗಿಯೇ ಕುವೆಂಪು ಅವರಿಗೆ ಖುಷಿ ಮತ್ತು ರೋಮಾಂಚನ ಆಗಿದೆ ಎನ್ನಬಹುದು. ಕುವೆಂಪು ಅವರಿಗೆ ಖುಷಿಕೊಟ್ಟ ಆ ಸಂಗತಿಯನ್ನು ತೇಜಸ್ವಿ ಅವರು ವಿವರಿಸಿರುವುದು ಹೀಗೆ: ‘ರೇಡಿಯೋದಲ್ಲಿ ಈ ಸಮಾಚಾರ ಕೇಳಿದ ಅಣ್ಣ ರೋಮಾಂಚಿತರಾಗಿ “ಕೇಳಿದಿಯೇನೋ ಪಾರ್ಲಿಮೆಂಟಿನಲ್ಲಿ ಸಮಾಜವಾದಿ ಪಕ್ಷದ ಜೆ.ಹೆಚ್. ಪಟೇಲ ಕನ್ನಡದಲ್ಲಿ ಭಾಷಣ ಮಾಡಿದ ವಾರ್ತೆ. ಇಷ್ಟು ದಿನ ಆಯ್ತು, ಈ ಕಾಂಗ್ರೆಸ್ ರಾಜಕಾರಣಿಗಳಿಗೆ ನೆಹರೂ ಎದುರು ತಮ್ಮ ಮಾತೃಭಾಷೆಯಲ್ಲಿ ಮಾತಾಡುವಷ್ಟು ಧೈರ್ಯ ಬರಲಿಲ್ಲ. ಪಟೇಲರು ಕನ್ನಡದಲ್ಲಿ ಮಾತನಾಡಿ ನಾನು ತಲೆ ಎತ್ತಿಕೊಂಡು ತಿರುಗುವ ಹಾಗೆ ಮಾಡಿದರು” ಎಂದು ಪಟೇಲರನ್ನು ಕೊಂಡಾಡಿದರು. ಮಾರನೆ ದಿನ ಪೇಪರಿನಲ್ಲಿ ಈ ವರ್ತಮಾನ ದಪ್ಪಕ್ಷರದಲ್ಲಿ ಹಾಕದಿದ್ದುದಕ್ಕೆ ಪತ್ರಿಕೆಗಳಿಗೆಲ್ಲಾ ಮನಸ್ವಿಯಾಗಿ ಬಯ್ದರು. ಪಟೇಲರು ಅಣ್ಣನ ದೃಷ್ಟಿಯಲ್ಲಿ ಅವತ್ತಿನಿಂದ “ಹೀರೋ”. ಅಣ್ಣನ ಮನಸ್ಸು ಹೇಗೆಂದರೆ ಒಂದು ಸಾರಿ ಒಬ್ಬರ ಬಗ್ಗೆ ಏನಾದರೂ ಒಂದು ಅಭಿಪ್ರಾಯ ತಳೆದರೆಂದರೆ ಆಮೇಲೆ ಅದನ್ನು ಬಡಪೆಟ್ಟಿಗೆ ಯಾರೂ ಬದಲಾಯಿಸಲು ಸಾಧ್ಯವಿರಲಿಲ್ಲ. ಪಟೇಲರು ಪಾರ್ಲಿಮೆಂಟಿನಲ್ಲಿ ಕನ್ನಡ ಮಾತಾಡಿ ಬಹಳ ಸುಲಭದಲ್ಲಿ ಅಣ್ಣನ ಅನುಗ್ರಹ ಗಿಟ್ಟಿಸಿಕೊಂಡರು’(ಅಣ್ಣನ ನೆನಪು, ಪುಟ 171 – 172) ಎಂದು ಹೇಳಿರುವುದನ್ನು ಇಲ್ಲಿ ನೆನೆಯಬಹುದು.

ತುಂಬಾ ಗಮನಾರ್ಹವಾದ ವಿಷಯ ಏನೆಂದರೆ, ಅಂದು ಜೆ.ಹೆಚ್. ಪಟೇಲರು ಸಂಸತ್ ಭವನದಲ್ಲಿ ಮಾತನಾಡಿದ ಭಾಷಣದ ಮುಖ್ಯ ತಿರುಳೇನು? ಅವರು ಯಾವ ವಿಷಯದ ಬಗೆಗೆ ಆಗ ಮಾತನಾಡಿದರು? ಎಂಬ ವಿಷಯಕ್ಕಿಂತ ಮಿಗಿಲಾಗಿ; ಕನ್ನಡದಲ್ಲಿ ಮಾತನಾಡಿದರು ಎಂಬ ಏಕೈಕ ವಿಚಾರವಷ್ಟೇ ಮುನ್ನಲೆಗೆ ಬಂದಿದೆ. ಆದರೆ ಪಟೇಲರು ಅಂದಿನ ತಮ್ಮ ಭಾಷಣದಲ್ಲಿ ಮುಖ್ಯವಾಗಿ ಮೈಸೂರು(ಆಗಿನ್ನೂ ಕರ್ನಾಟಕ ಎಂದು ನಾಮಕರಣ ಆಗಿರಲಿಲ್ಲ.) ರಾಜ್ಯದ ಅವಿಭಜಿತ ಜಿಲ್ಲೆಗಳಾದ ಬಳ್ಳಾರಿ, ವಿಜಾಪುರ, ಗುಲ್ಬರ್ಗ ಹಾಗೂ ಮೈಸೂರು ಜಿಲ್ಲೆಗಳು ಎದುರಿಸುತ್ತಿದ್ದ ತೀವ್ರ ಬರಗಾಲ, ನೀರಾವರಿ ಹಾಗೂ ಆಹಾರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ; ಈ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಭಾಷಣದ ಕೊನೆಯಲ್ಲಿ ಭಾರತದಂಥ ಒಕ್ಕೂಟ ವ್ಯವಸ್ಥೆಯಲ್ಲಿ ದೇಶಿಯ ಭಾಷೆಗಳಲ್ಲಿ ಮಾತನಾಡುವುದಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿಕೊಂಡರು. ಆ ಸಂದರ್ಭವನ್ನು ಶಿವರಾಮಯ್ಯ ಅವರು ‘ಜೆ.ಹೆಚ್. ಪಟೇಲ್: ಸಮಾಜವಾದಿ ಗಂಗೆಗೆ ಬಿದ್ದ ಈಜುಗಾರ’ ಎಂಬ ಲೇಖನದಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ. “ಸ್ವಾಮಿ, ತಮ್ಮಲ್ಲಿ ನನ್ನ ಇನ್ನೊಂದು ವಿಶೇಷ ಪ್ರಾರ್ಥನೆ- ಸಂಸತ್ ಸದಸ್ಯರುಗಳಿಗೆ ಅವರವರ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಅವಕಾಶ ಕೊಡಬೇಕು. ಈಗಿರುವಂತೆ ಉತ್ತರ ಭಾರತದ ಸದಸ್ಯರು ಹಿಂದಿಯಲ್ಲೂ, ದಕ್ಷಿಣ ಭಾರತದ ಸದಸ್ಯರು ಇಂಗ್ಲಿಷಿನಲ್ಲೂ, ಹೀಗೆ ಈ ಎರಡೇ ಭಾಷೆಗಳು ಸದನದಲ್ಲಿ ಬಳಸಲ್ಪಡುತ್ತಿವೆ. ಹಿಂದಿ ಮಾತನಾಡುವ ಮಾನ್ಯ ಸದಸ್ಯರು ಇತರ ಸದಸ್ಯರು ಅವರವರ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಅವಕಾಶ ಕೊಟ್ಟರೆ ಐಕ್ಯ ಸಾಧಿಸಬೇಕೆಂಬುವಂತ ಒಂದು ಪ್ರಯತ್ನ ಮಾಡಿದಂತಾಗುವುದು. ಮನುಷ್ಯ ಮತ್ತು ಪ್ರಾಣಿ ಇಬ್ಬರಿಗೂ ಆಹಾರದ ಅವಶ್ಯಕತೆ ಇದೆ. ಆದರೆ ಇಬ್ಬರಲ್ಲೂ ವ್ಯತ್ಯಾಸವಿದೆ. ಆಹಾರದೊಂದಿಗೆ ಮನುಷ್ಯನಿಗೆ ಅಭಿಪ್ರಾಯ ವ್ಯಕ್ತಪಡಿಸಲು ಭಾಷೆಯು ಅವಶ್ಯಕ. ನಾವೂ ಕೂಡ ಮನುಷ್ಯರು ಮತ್ತು ನಮಗೆ ಕನ್ನಡವೆಂಬ ಒಂದು ಭಾಷೆಯು ಇದೆ”(ಸಮಾಜವಾದಿಗಳ ನೆನಪಿನ ಸಂಪುಟ, ಪುಟ – 242) ಎಂದು ಕನ್ನಡದಂಥ ದೇಶಿಯ ಭಾಷೆಗಳ ಸಾರ್ವಭೌಮತ್ವದ ಬಗ್ಗೆ ಮಾತನಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಯಾಜಮಾನ್ಯ ಧೋರಣೆಯ ಬಗ್ಗೆ ತಮ್ಮ ಮೊನಚಾದ ಮಾತಿನ ಶೈಲಿಯಲ್ಲಿ ಕುಟುಕಿದರು.

ಈ ಘಟನೆ ಭಾರತದ ರಾಜಕೀಯ ರಂಗದಲ್ಲಿ ‘ಭಾಷೆಯ ಪಾಳೇಗಾರಿಕೆ’ ಯಾವ ಸ್ವರೂಪದಲ್ಲಿತ್ತು ಎಂಬುದನ್ನು ಸೂಚಿಸುತ್ತದೆ. ಜೊತೆಗೆ ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳು ಆಯಾ ಪ್ರಾಂತ್ಯ(ರಾಜ್ಯ)ಗಳ ಜನಭಾಷೆಗಳ ಮೇಲೆ ಹೇಗೆ ಹಿಡಿತ ಸಾಧಿಸುತ್ತಿವೆ ಎಂಬ ಅಂಶವನ್ನೂ ಇಲ್ಲಿ ಮನಗಾಣಬಹುದು. ಆ ಹಿನ್ನಲೆಯಲ್ಲಿ ಯೋಚಿಸಿದರೆ ಈ ‘ಜನಭಾಷೆ’ ಮತ್ತು ‘ಪ್ರಭುತ್ವ ಭಾಷೆ’ಗಳ ನಡುವಿನ ಸಂಘರ್ಷದ ಸ್ವರೂಪ ತುಂಬಾ ಪ್ರಾಚೀನವೂ ಸಂಕೀರ್ಣವೂ ಆದದ್ದು. ಭಾರತದ ಮಟ್ಟಿಗೆ ಹೇಳುವುದಾದರೆ ಈ ಭಾಷಿಕ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಆ ಪ್ರಕ್ರಿಯೆ ಈಗಲೂ ಬಳಕೆಯಲ್ಲಿದೆ. ಹಿಂದೆ ದೇಶಿಯ ಭಾಷೆಗಳು ಪ್ರಭುತ್ವಭಾಷೆಯಾದ ಸಂಸ್ಕøತದೊಂದಿಗೆ ಸೆಣೆಸುತ್ತಿದ್ದರೆ; ಈಗ ಅದೇ ಸಂಸ್ಕøತದ ಜಾಗದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳು ದೇಶಿಯ ಭಾಷೆಗಳ ಮೇಲೆ ಪಾರಮ್ಯ ಮೆರೆಯುತ್ತಿವೆ. ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ- ಜನಸಾಮಾನ್ಯರಿಗೆ ಅರ್ಥವಾಗದ, ಅವರೊಂದಿಗೆ ಪರಸ್ಪರ ವ್ಯವಹರಿಸಲಾಗದ ಭಾಷೆ; ಆ ಜನರ ಬದುಕಿನ ಭಾಷೆಯಾಗಲಾರದು ಎಂದು ನಂಬಿದ್ದ ರಾಮಮನೋಹರ ಲೋಹಿಯಾ ಅವರಂತೆಯೇ ಪಟೇಲರು ಕೂಡ ನಮ್ಮದಲ್ಲದ ‘ಪಾಳೇಗಾರಿಕೆಯ ಭಾಷೆ’ಗಳು ಜನರಲ್ಲಿ ಕೀಳರಿಮೆಯನ್ನು ಮೂಡಿಸಿ, ಅವರ ಕಲಿಕೆಯ ಮಟ್ಟವನ್ನು ಕುಗ್ಗಿಸುತ್ತವೆ ಎಂದೇ ನಂಬಿದ್ದರು.

4
ಕೊನೆಯದಾಗಿ, ಕೇಂದ್ರದಲ್ಲಿ ಈಗಿರುವ ಬಿಜೆಪಿ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಘೋಷಿಸಲು ಹವಣಿಸುತ್ತಿರುವ ಸಂದರ್ಭದಲ್ಲಿ ಜೆ.ಹೆಚ್. ಪಟೇಲರು ಲೋಕಸಭೆಯಲ್ಲಿ ಮಾಡಿದ ಕನ್ನಡ ಭಾಷಣಕ್ಕೆ ಚಾರಿತ್ರಿಕವೂ ಸಾಂಸ್ಕøತಿಕವೂ ಆದ ಮಹತ್ವವಿದೆ. ಜೊತೆಗೆ ರಾಜಕೀಯ ವಿಚಾರವೂ ಇದರೊಂದಿಗೆ ತಳಕುಹಾಕಿಕೊಂಡಿದೆ. ಅದೇನೆಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗಿರುವ ‘ಹಿಂದೀ ಪ್ರೇಮ’ವನ್ನು ಇಡೀ ದೇಶಕ್ಕೆ ಹೇರಲು ಹೊರಟಿರುವ ಕ್ರಮವು ಜನಭಾಷೆ ಹಾಗೂ ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷಕ್ಕೆ ಇನ್ನಷ್ಟು ಎಡೆಮಾಡಿಕೊಡುತ್ತದೆ. ಅಷ್ಟೇ ಅಲ್ಲ, ರಾಜಕೀಯವಾಗಿಯೂ ಇಂಥ ಒತ್ತಾಯಪೂರ್ವಕವಾದ ‘ಭಾಷಾಹೇರಿಕೆ’ ತುಂಬ ಆತಂಕಕಾರಿ ಹಾಗೂ ಅಪಾಯಕಾರಿಯಾದ ವಿಚಾರವಾಗಿದೆ.

ಈ ‘ಭಾಷಾಹೇರಿಕೆ’ಗೆ ಒಂದು ನಿದರ್ಶನವನ್ನು ಕೊಡುವುದಾದರೆ, ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ಟಿಡಿಪಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ತೆಲುಗು ಭಾಷೆಯ ಸಿನಿಮಾ ನಟ ನಂದಮುರಿ ಹರಿಕೃಷ್ಣ ಅವರು 12 ಆಗಸ್ಟ್ 2013ರ ರಾಜ್ಯಸಭೆಯ ಕಲಾಪವೊಂದರಲ್ಲಿ ತೆಲುಗಿನಲ್ಲಿಯೇ ಚರ್ಚಿಸಿದ್ದನ್ನು ಆಗಿನ ರಾಜ್ಯಸಭಾ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಒಪ್ಪದಿದ್ದಾಗ; ‘ನಾನು ಮಾತನಾಡುವುದೇ ತೆಲುಗಿನಲ್ಲಿ, ನೀವು ಬೇಕಾದರೆ ಅನುವಾದಕರನ್ನು ನೇಮಿಸಿಕೊಳ್ಳಿ’ ಎಂದದ್ದು ಯಾವ ಅರ್ಥದಲ್ಲಿ ಎಂಬುದನ್ನು ತುಂಬ ಗಂಭೀರವಾಗಿ ಯೋಚಿಸಬೇಕಾಗಿದೆ. ನಾಡು-ನುಡಿಯ ಅಭಿಮಾನದ ಆಚೆಗೆ ಹರಿಕೃಷ್ಣ ಅವರ ಈ ಮಾರ್ಮಿಕ ಮಾತುಗಳ ಆಳದಲ್ಲಿ ಜನಭಾಷೆ ಹಾಗೂ ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷ ಹಾಗೂ ದೇಶಿಯ ಭಾಷೆಗಳ ಅಸ್ಮಿತೆಯ ಸೂಕ್ಷ್ಮಗಳನ್ನು ಹುಡುಕಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ, ಅಂದು ಪಟೇಲರು ಬಾರಿಸಿದ ‘ಕನ್ನಡ ಡಿಂಡಿಮ’ದ ಗೂಡಾರ್ಥ ಈಗಲಾದರೂ ನಮಗೆ ತಿಳಿಯದೆ ಹೋದರೆ ಜನ ಭಾಷೆಗಳಿಗೆ ಉಳಿಗಾಲವಿಲ್ಲ. ಈ ಜನಭಾಷೆಗಳು ಶಾಶ್ವತವಾಗಿ ಪ್ರಭುತ್ವ ಭಾಷೆಗಳ ಅಡಿಯಾಳಾಗಿರಬೇಕಾಗುತ್ತದೆ! ಎಲ್ಲಕ್ಕಿಂತ ಮುಖ್ಯವಾಗಿ ಬಹುತ್ವದ ಬಗ್ಗೆ ಅಪಾಯ ಉಂಟಾಗಿರುವ ಈ ಹೊತ್ತಿನಲ್ಲಿ ಸಣ್ಣಪುಟ್ಟ ಭಾಷೆ, ಸಂಸ್ಕøತಿಗಳನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈಗ ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿವೆ. ಇವು ಕೇವಲ ಭಾಷಾಭಿಮಾನದ ಕಾರಣಕ್ಕೆ ನಡೆದರೆ ಸಾಲದು. ದೇವನೂರ ಮಹಾದೇವ ಅವರು ಹೇಳುವ ಹಾಗೆ ಕನ್ನಡತನ, ಕನ್ನಡದ ಉದ್ಧಾರವೆಂದರೆ ಕೇವಲ ‘ಪಿತೃಪಕ್ಷದ ಆಚರಣೆಯ ತರಹ ಆಗಬಾರದು.’ ಅಂದರೆ ಅಲ್ಲಿ ಯಾವುದೇ ತರಹದ ನಾಟಕೀಯತೆ, ತೋರ್ಪಡಿಕೆಗೆ ಆಸ್ಪದವಿರಬಾರದು. ಸದಾಕಾಲ ಕನ್ನಡಿಗರೆಲ್ಲರ ಎದೆಯಾಳದಲ್ಲಿ ಸಹಜವಾಗಿ ‘ಕನ್ನಡತನ’ ಮೊಳಗಬೇಕು. ಅದೇ ನಿಜವಾದ ‘ಕನ್ನಡದ ಕೈಂಕರ್ಯ’. ಜೆ.ಹೆಚ್. ಪಟೇಲರ ಆಶಯವೂ ಇದೇ ಆಗಿತ್ತು. ಇಡೀ ವರ್ಷದಲ್ಲಿ ಒಂದೇ ಒಂದು ತಿಂಗಳು ಮಾತ್ರ ಕನ್ನಡ ಭಾಷೆಯ ಸ್ಥಿತಿಗತಿಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ, ಆಲೋಚಿಸುವ ‘ನÀವೆಂಬರ್ ಕನ್ನಡಿಗ’ರ ಎದುರು ಜೆ.ಹೆಚ್. ಪಟೇಲರ ಕನ್ನಡ ಪ್ರೀತಿ, ಕಾಳಜಿ ಹೊಸ ಆಶೋತ್ತರಗಳನ್ನು ಮೂಡಿಸುತ್ತದೆ. ಈ 50 ವರ್ಷಗಳ ನಂತರವೂ ಅವರು ಅಂದು ಮೊಳಗಿಸಿದ ‘ಕನ್ನಡದ ಕಹಳೆ’ ಇಂದಿಗೂ ಹೊಸದೆಂಬಂತೆ ತೋರುತ್ತಿದೆ.

ಈ ಅರ್ಧ ಶತಮಾನದಲ್ಲಿ ‘ಕನ್ನಡ ಜಗತ್ತು’ ಬೌದ್ಧಿಕವಾಗಿ ತುಂಬಾ ವಿಸ್ತರಿಸಿದೆ; ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದೆ. ಹಾಗೆಯೇ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಸಹ ಎದುರಿಸಿದೆ. ಆದರೆ ಅದೇ ಹೊತ್ತಿನಲ್ಲಿ ನಮ್ಮ ಮಾತೃಭಾಷೆಯ ಉಳಿವಿಗಾಗಿ ನಾವೇನು ಮಾಡಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಕೇಳಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಜನಭಾಷೆಗಳಿಗೆ ಎದುರಾಗುವ ಬಿಕ್ಕಟ್ಟುಗಳನ್ನು ಧೈರ್ಯವಾಗಿ ಎದುರಿಸಲು ನಾವೆಲ್ಲರೂ ಈ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಳ್ಳಬೇಕು. ಆಗ ನಾಡೂ ಉಳಿದೀತು; ಭಾಷೆಯೂ ಉಳಿದೀತು.
————————–


ನರಸಿಂಹಮೂರ್ತಿ ಹಳೇಹಟ್ಟಿ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿಯಲ್ಲಿ ಜನನ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ. ‘ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು’(2000-2010) ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಕಾವ್ಯ, ವಿಮರ್ಶೆ, ವಿಚಾರ ಸಾಹಿತ್ಯ, ಅನುವಾದ ಇವರ ಆಸಕ್ತಿಯ ಅಧ್ಯಯನ ವಿಷಯಗಳು. ಕೆಲವು ಲೇಖನಗಳು ನಿಯತಕಾಲಿಕೆ ಹಾಗೂ ಬ್ಲಾಗ್‍ಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

Leave a Reply

Your email address will not be published.