ಸಂಶೋಧಕರಾಗಿ ಅಂಬೇಡ್ಕರ್

-ರಹಮತ್ ತರೀಕೆರೆ

ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನ ಸಂಗಾತಿ ಆಗಬಯಸುತ್ತಿದ್ದ ಸವಿತಾ ಅವರಿಗೆ ಬರೆದ ಚಿಕ್ಕದೊಂದು ಪತ್ರವಿದೆ. ಇದು ಬಾಳಿನ ಬಗ್ಗೆ ತನ್ನದೇ ಆದ ಆದರ್ಶಗಳನ್ನು ಇಟ್ಟುಕೊಂಡಿದ್ದ ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರವನ್ನು ತುಸು ನೆನಪಿಸುವಂತಿದೆ. ಅಂಬೇಡ್ಕರ್ ಪತ್ರದಲ್ಲಿ ಎಚ್ಚರಿಕೆಯಂತೆಯೂ ವಿನಂತಿಯಂತೆಯೂ ತೋರುವ ಒಂದು ಸಾಲಿದೆ. “ನನ್ನ ಒಡನಾಡಿಗಳು ನನ್ನ ವೈರಾಗ್ಯ ಮತ್ತು ಉಗ್ರ ಸಂಯಮಗಳನ್ನು ಹೊರಬೇಕಾಗುವುದು. ಗ್ರಂಥಗಳೇ ನನ್ನ ಸಹವಂದಿಗರು, ಪತ್ನಿ ಪುತ್ರರಿಗಿಂತಲೂ ಇವು ನನಗೆ ಪ್ರಿಯವಾದವು’’.

ಅಂಬೇಡ್ಕರ್ ಸಾಮಾಜಿಕವಾದ ಕಾರಣಗಳಿಗಾಗಿ ದಲಿತವಿಮೋಚನೆಯ ಹೋರಾಟಗಾರರೆಂದು ಚರಿತ್ರೆಯಲ್ಲಿ ಖ್ಯಾತರಾಗಿದ್ದಾರೆ; ರಾಜಕೀಯವಾಗಿ ಅವರು ಭಾರತದ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನೆಯಲಾಗುತ್ತದೆ. ಧರ್ಮದ ಕಾರಣದಿಂದ ಸ್ವತಃ ಧಮ್ಮದೀಕ್ಷೆ ಪಡೆದು ಭಾರತದಲ್ಲಿ ಬೌದ್ಧಧರ್ಮದ ಮರುಜನ್ಮಕ್ಕೆ ಕಾರಣರಾದವರೆಂದು ಆರಾಧಿಸಲಾಗುತ್ತದೆ. ಸಂವಿಧಾನ ರಚನ ಸಮಿತಿಯ ಅಧ್ಯಕ್ಷರಾಗಿದ್ದಾಗ ಅವರು ತೋರಿದ ಕಾನೂನುಪ್ರಜ್ಞೆಯನ್ನು ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತದೆ. ಇವೆಲ್ಲವೂ ಖರೆಯೇ. ಆದರೆ ಅಂಬೇಡ್ಕರ್ ಅವರ ವ್ಯಕ್ತಿತ್ವದಲ್ಲಿದ್ದ ಮೇಲ್ಕಾಣಿಸಿದ ನಾಲ್ಕೂ ಆಯಾಮಗಳಿಗೆ ಕಾರಣವಾಗಿದ್ದು ಅವರ ಅಪಾರವಾದ ಅಧ್ಯಯನ ಮತ್ತು ಚಿಂತನೆ. ಅವರ ಸಂಶೋಧನ ಪಾಂಡಿತ್ಯ. ಅವರ ಈ ಪ್ರಖರ ಬೌದ್ಧಿಕತೆಯ ಮುಖ ಯಾಕೊ ನಮ್ಮಕಾಲದಲ್ಲಿ ಆಗಬೇಕಾದಷ್ಟು ಚರ್ಚೆಗೆ ಒಳಪಡುತ್ತಿಲ್ಲ,
ವೈಯಕ್ತಿಕವಾಗಿ ನಾನು ಮೊದಲು ಓದಿದ ಅಂಬೇಡ್ಕರ್ ಅವರ ಕೃತಿ `ಅಸ್ಪøಶ್ಯರು’.

ambedkar-12ದಂಗುಬಡಿಸುವ ವಿದ್ವತ್ತುಳ್ಳ ಈ ಪುಟ್ಟ ಕೃತಿಯನ್ನು ವೇಮಣ್ಣ ಎಂಬುವರು ಅನುವಾದ ಮಾಡಿದ್ದರು. ಆಗಿನ್ನೂ ಸರ್ಕಾರಿಂದ ಬಾಬಾಸಾಹೇಬರ ಸಮಗ್ರ ಬರೆಹಗಳ ಸಂಪುಟಗಳು ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿರಲಿಲ್ಲ. ಈಗಲೂ ನನಗೆ ಅಂಬೇಡ್ಕರ್ ಕೃತಿಗಳರಾಶಿಯಲ್ಲಿ ಈ ಕೃತಿ ಮಹತ್ವದ್ದೆಂದೇ ಅನಿಸುತ್ತದೆ. ಇದರ ಜತೆಗೆ ಅವರು ರಚಿಸಿದ `ಹಿಂದೂ ಧರ್ಮದ ತತ್ವಜ್ಞಾನ’ `ಯಾರು ಶೂದ್ರರಾಗಿದ್ದರು’ ಮುಂತಾದ ಕೃತಿಗಳನ್ನೂ ನೆನೆಯಬಹುದು. ಇಲ್ಲೆಲ್ಲ ಸಂಪ್ರದಾಯವಾದಿಗಳ ಕಟು ವಿಮರ್ಶೆಯಿದೆ. ಸಂಪ್ರದಾಯವಾದಿ ಮುಸ್ಲಿಮರನ್ನು ಆಳವಾಗಿ ಟೀಕಿಸುವ ಅವರ `ಭಾರತದ ವಿಭಜನೆ’ ಕೃತಿಯನ್ನೂ ಇಲ್ಲಿಯೇ ಸೂಚಿಸಬಹುದು. ಇವು ಭಾರತದ ಸಾಮಾಜಿಕ ಚರಿತ್ರೆಯನ್ನೂ ಸಂಸ್ಕøತಿ ಅಧ್ಯಯನವನ್ನೂ ಮಾಡಬಯಸುವವರಿಗೆ ಮಹತ್ವದ ಆಕರಗಳು.

ಈ ಕೃತಿಗಳಲ್ಲಿ ಅಂಬೇಡ್ಕರ್ ಮಂಡಿಸಿರುವ ವಾದಗಳಲ್ಲಿ ಕೆಲವನ್ನು ನಾವು ಒಪ್ಪಬಹುದು; ಕೆಲವಕ್ಕೆ ಭಿನ್ನಮತ ಸೂಚಿಸಬಹುದು. ಆದರೆ ಅವರ ಕೃತಿಗಳಲ್ಲಿರುವ ಸಂಶೋಧನೆಯ ಶ್ರಮ, ಬದ್ಧತೆ, ತೀವ್ರತೆ ದರ್ಶನಗಳು ಆವರಿಸಿಕೊಳ್ಳುವುದರಿಂದ ಮಾತ್ರ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಅಂಬೇಡ್ಕರ್ ಆಧುನಿಕ ಭಾರತದ ಮಹತ್ವದ ಸಂಶೋಧಕರೆನಿಸಿಕೊಳ್ಳಲು ಹಲವು ಕಾರಣಗಳಿವೆ:

ಮೊದಲನೆಯದಾಗಿ- ಬೇರೆಬೇರೆ ಜ್ಞಾನಶಿಸ್ತಿಗೆ ಸಂಬಂಧಿಸಿದ ಸಾವಿರಾರು ಗ್ರಂಥಗಳನ್ನು ಅವರು ಅಧ್ಯಯನ ಮಾಡಿರುವುದು. ಬ್ರಿಟಿಶರು ಮಾಡಿದ ಜಾತಿ ಮತ್ತು ಜನಗಣತಿಯ ದಾಖಲೆಗಳಿಂದ ಹಿಡಿದು, ಮನು ಮುಂತಾದ ಸ್ಮøತಿಕಾರರನ್ನು, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಕುರಾನ್ ಮತ್ತು ಬೈಬಲುಗಳನ್ನು ಅವರು ತಮ್ಮ ವಾದಮಂಡನೆಗೆ ಬಳಸಿಕೊಳ್ಳುತ್ತಾರೆ. ದೇಶಿಯ ಮತ್ತು ವಿದೇಶೀಯ ವಿದ್ವಾಂಸರ ಕೃತಿಗಳ ಹೇಳಿಕೆಗಳ ಜತೆ ವಾಗ್ವಾದಕ್ಕೆ ಬೀಳುತ್ತಾರೆ. ಎರಡನೆಯದಾಗಿ- ಒಂದು ಪ್ರಮೇಯ ಇಲ್ಲವೇ ಸಿದ್ಧಾಂತ ಕಟ್ಟಲು ಅವರು ಬಳಸುವ ಸಾಕ್ಷ್ಯಾಧಾರ, ನಡೆಸುವ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು.

ಇವು ಅವರ ನಿಶಿತ ಮತ್ತು ನಿರಂಕುಶಮತಿಗೆ ಪುರಾವೆಯಾಗಿವೆ. ಅವರ ಸಂಶೋಧನೆಯಲ್ಲಿರುವ ಅಚ್ಚುಕಟ್ಟಾದ ವಾದಮಂಡನೆಗೆ ಅವರ ಕಾನೂನು ತಿಳುವಳಿಕೆಯೂ ವಕೀಲಿವೃತ್ತಿಯ ಅನುಭವವೂ ನೆರವಾಗಿರುವಂತಿದೆ. ಮೂರನೆಯದಾಗಿ-ಮುಖ್ಯವಾಗಿ ದಲಿತರನ್ನು ದಮನಿಸಿರುವ ಸವರ್ಣೀಯ ಸಮಾಜಕ್ಕೆ ಪ್ರಶ್ನೆಹಾಕುವ ಮತ್ತು ಉತ್ತರಿಸುವ ಆಶಯವೇ ಅವರ ಸಂಶೋಧನೆಯೊಳಗಿನ ವಿದ್ವತ್ತಿನ ಆಳಕ್ಕೂ ಚಿಂತನೆಯ ತೀಕ್ಷ್ಣತೆಗೂ ತರ್ಕಬದ್ಧ ವಾದಮಂಡನೆಗೂ ಕಾರಣವಾಗಿರುವುದು. ಯಾವತ್ತೂ ಒಂದು ಚಿಂತನೆ ಕೇವಲ ಅಧ್ಯಯನ ಇಲ್ಲವೇ ತರ್ಕದ ತೀಕ್ಷ್ಣತೆಯಿಂದ ತನಗೆ ತಾನೇ ಪ್ರತಿಭಾವಂತವೂ ಧೀಮಂತವೂ ಆಗಲಾರದು. ಅದರ ಘನವಾದ ಮಾನವೀಯ ಉದ್ದೇಶಗಳು ಅದಕ್ಕೊಂದು ಘನತೆ ತಂದುಕೊಡುತ್ತವೆ. ಅಂಬೇಡ್ಕರ್ ಅವರ ಸಂಶೋಧನ ಧೀಮಂತಿಕೆ ಇರುವುದು ಅದರೊಳಗಿರುವ ಸಮಾಜ ಬದಲಿಸುವ ಛಲ ಮತ್ತು ಹೊಸ ಸಮಾಜ ಕಟ್ಟುವ ಕನಸಿನಿಂದ.
ಒಮ್ಮೆ ಲಾಹೋರಿನ `ಜಾತ್ ಪಾತ್ ತೋಡಕ್’ ಸಂಘಟನೆಯು ಲಾಹೋರಿನ ಸಮ್ಮೇಳನಕ್ಕೆ(1936) ಅಂಬೇಡ್ಕರ್ ಅವರನ್ನು ಉಪನ್ಯಾಸಕ್ಕೆ ಆಹ್ವಾನಿಸಿಸುತ್ತದೆ. ತಮ್ಮ ತೀವ್ರ ಅನಾರೋಗ್ಯದಲ್ಲಿಯೂ ಬಾಬಾಸಾಹೇಬರು ಕಷ್ಟಪಟ್ಟು ಪ್ರಬಂಧ ಸಿದ್ಧಪಡಿಸಿ ಸಂಘಟಕರಿಗೆ ಕಳಿಸಿಕೊಡುತ್ತಾರೆ. ಆದರೆ ಸಂಘಟಕರು ಪ್ರಬಂಧದಲ್ಲಿ ಕೆಲವು ಶಬ್ದಗಳನ್ನು ತೆಗೆಯಬೇಕೆಂದು ಇಲ್ಲವಾದರೆ ಗಲಭೆಯೇಳುವ ಸಾಧ್ಯತೆಯಿದೆಯೆಂದೂ, ಭಾಷಣದಲ್ಲಿ ಬದಲಾವಣೆ ಮಾಡದಿದ್ದರೆ ಸಮ್ಮೇಳನ ರದ್ದುಮಾಡಬೇಕಾಗುವುದು ಎಂದೂ ತಿಳಿಸುತ್ತಾರೆ. ಅದಕ್ಕ್ಕೆ ಅಂಬೇಡ್ಕರ್ ಅವರು ಒಂದು ಶಬ್ದವನ್ನೂ ತಮ್ಮ ಪ್ರಬಂಧದಲ್ಲಿ ತೆಗೆಯಲು ಸಾಧ್ಯವಿಲ್ಲವೆಂದು ಬರೆಯುತ್ತ, ತಮ್ಮ ತಮ್ಮ ನಿಲುವನ್ನು ಕೇಳುಗರು ಒಪ್ಪಬೇಕಾಗಿರಲ್ಲವೆಂದೂ ಅವರು ತಮ್ಮ ಸಕಾರಣವಾದ ವಿರೋಧ ದಾಖಲಿಸಬಹುದಾಗಿತ್ತೆಂದೂ, ಆದರೆ ತಮ್ಮ ವಿಚಾರವನ್ನು ಪ್ರಕಟಿಸುವ ಮುಂಚೆಯೇ ಅದರಲ್ಲಿ ತಿದ್ದುಪಡಿ ಸೂಚಿಸುವ ಕರಾರರನ್ನು ತಾವು ಒಪ್ಪಲಾರೆವೆಂದೂ ಹೇಳುತ್ತಾರೆ.

ಪ್ರತಿಭಟನೆಯಿಂದ ಲಾಹೋರಿಗೆ ಹೋಗುವುದಿಲ್ಲ. ಇಲ್ಲಿ ಅವರಿಗೆ ತಮ್ಮ ತಾತ್ವಿಕತೆಯಲ್ಲಿದ್ದ ಶ್ರದ್ಧೆ ಮತ್ತು ಅದಕ್ಕೆ ಭಿನ್ನಮತವನ್ನು ಆಲಿಸಿ ವಾಗ್ವಾದ ಹುಟ್ಟಿಸುವ ಡೆಮಾಕ್ರಟಿಕ್ ಆದ ನಮ್ರತೆ ಎರಡೂ ಇವೆ. ತಮ್ಮ ಸಂಶೋಧನೆಯಲ್ಲಿ ಬಗೆ ಕದಡುವ ಚಿಂತನೆಯ ಅಲೆಗಳನ್ನು ಹುಟ್ಟಿಸುತ್ತಿದ್ದ ಅಂಬೇಡ್ಕರ್, ಮತ್ತೆಮತ್ತೆ ಪ್ರಶ್ನೆಗಳನ್ನು ಎತ್ತುವ ವಿಧಾನ ಅನುಸರಿಸುವುದನ್ನು ಕಾಣಬಹುದು. ಅವರ ಕೃತಿಗಳ ತಲೆಬರೆಹಗಳಲ್ಲೆ ಪ್ರಶ್ನಾರ್ಥಕ ವಿನ್ಯಾಸವಿದೆ. `ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನೂ ಅವರೆಲ್ಲ ಒಳಗೊಂಡಂತೆ ಸಾಮಾಜಿಕ ಸಂಶೋಧನ ಕೃತಿಗಳ ಅಧ್ಯಾಯಗಳು ಸೈತ ಪ್ರಶ್ನೆಗಳಿಂದಲೇ ಕೂಡಿವೆ. ಈ ಪ್ರಶ್ನೆಗಾರಿಕೆಯ ಸ್ವಭಾವವು ಅವರೊಳಗಿನ ವಿದ್ವತ್ತಿನೊಳಗಿನ ವೈಚಾರಿಕತೆಯ ಕೇಂದ್ರವೇ ಆಗಿತ್ತು. ಅವರ ಚಿಂತನೆಯಲ್ಲಿ ವಾದಮಂಡನೆಗೆ ಸೈದ್ಧಾಂತಿಕ ಎದುರಾಳಿಗಳಿಗೆ ಉತ್ತರಿಸುವ ಹಾಗೂ ತಮ್ಮ ಸಮುದಾಯಕ್ಕೆ ವಿಮೋಚನ ಪ್ರಜ್ಞೆ ತುಂಬುವ ಎರಡೂ ಆಯಾಮಗಳಿದ್ದು ಅದೊಂದು ಇಬ್ಬಾಯ ಖಡ್ಗದಂತೆ ಹೊಯ್ದಾಡುತ್ತದೆ. ಬಹುಶಃ ಧರ್ಮ ಮತ್ತು ರಾಜಕಾರಣಗಳನ್ನು ಕುರಿತ ವಿಮರ್ಶೆ ಜಿಜ್ಞಾಸೆಗಳೇ ಸಂಶೋಧನೆಯನ್ನು ತತ್ವಶಾಸ್ತ್ರೀಯ ಉನ್ನತಿಕೆಗೆ ಏರಿಸುತ್ತದೆ.

ಆದರೆ ಅಂಬೇಡ್ಕರ್ ವಿದ್ವತ್ತಿನೊಳಗಿದ್ದ ಈ ನಿಷ್ಠುರತೆಯ ಕಸುವು ಅವರು ಬೌದ್ಧಧರ್ಮದ ಬಗ್ಗೆ ಬರೆದ ಕೃತಿಗಳಲ್ಲಿ ಕೊಂಚ ಮಂಕುಗೊಳ್ಳುತ್ತ, ಅವರು `ಬಂಗಾರದ ಕೋಳವೊಕ್ಕ ಮಹಾಬೌದ್ಧ ಬಿಕ್ಷು’ವಿನಂತೆ ತೋರುತ್ತಾರೆ. ತಾತ್ವಿಕ ನಂಬಿಕೆಗಳು ಧಾರ್ಮಿಕ ಶ್ರದ್ಧೆಯಾಗಿ ಮಾರ್ಪಟ್ಟರೆ ಸಂಶೋಧನೆಯೊಳಗಿನ ವಿಮರ್ಶಾತ್ಮಕ ಪ್ರಜ್ಞೆ ತುಸು ಕ್ಷೀಣವಾಗುತ್ತದೆಯೇ? ವಿಚಾರ ಮಾಡಬೇಕು.

ಚಾರಿತ್ರಿಕವಾಗಿ ಅಂಬೇಡ್ಕರ್ ಸಂಶೋಧನೆ ಮತ್ತು ಚಿಂತನೆಗಳು ರೂಪುತಳೆದಿದ್ದೇ ಕಡುವಿರೋಧÀ ನಡುವೆ. ಹೀಗಾಗಿ ಅವರು ಅವರ ಕಾಲದಲ್ಲಿ ಕಟುವಾಗಿ ನಿರಾಕರಿಸುವವರಿದ್ದರು. ಅವರನ್ನು `ಹುಸಿದೈವ’ವೆಂದು ಕರೆಯುವವರು ಈಗಲೂ ಇದ್ದಾರೆ. ಆದರೆ ಅಂಬೇಡ್ಕರ್ ಸಂಶೋಧನೆ ಮತ್ತು ಚಿಂತನೆಗಳಿಗೆ ವಾಗ್ವಾದಕ್ಕೆ ಒಳಪಡಿಸುವ ಮುಖಾಮುಖಿಗಿಂತ ಬದಿಗೆ ಸರಿಸುವ ಮೂಲಕ ಅದರ ಮಹತ್ವವನ್ನು ಮಂಕುಗೊಳಿಸುವ ರಾಜಕಾರಣ ಮಾತ್ರ ಇದಕ್ಕಿಂತ ಕೆಟ್ಟದ್ದು. ಅವರನ್ನು ಪ್ರತಿಮೆಗಳ ರೂಪದಲ್ಲಿ ಗೌರವಿಸುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಅದರ ಭಾವುಕ ಬಗೆ ಅಂಬೇಡ್ಕರ್ ಚಿಂತನೆಗಳ ಮುಖಾಮುಖಿ ಮಾಡುವ ವಿಮರ್ಶಾತ್ಮಕ ಹಾದಿಯಿಂದ ಹೊರಕ್ಕೆ ಸೆಳೆದುಬಿಡುತ್ತಿದೆ.

ಕನ್ನಡದಲ್ಲಿ ಬಾಬಾಸಾಹೇಬರ ಬಗ್ಗೆ ಬಂದಿರುವ ಮಹಾಕಾವ್ಯಗಳನ್ನು ಓದುವಾಗ ಹೀಗೆ ಅನಿಸುತ್ತದೆ. ಅಂಬೇಡ್ಕರ್ ಚಿತ್ರವನ್ನು ತಮ್ಮ ಪಕ್ಷದ ಸಂಘಟನೆಯ ಬ್ಯಾನರು ಕರಪತ್ರಗಳಲ್ಲಿ ತಾವೂ ದಲಿತಪರವೆಂದು ಬಿಂಬಿಸಿಕೊಳ್ಳುವ ಸನಾತನವಾದಿ ಸಂಘಟನೆಗಳು, ಅವರ ಚಿಂತನೆಯೊಳಗಿನ ಸಿಡಿಮದ್ದನ್ನು ಬಹುಶಃ ಅವರ ಆರಾಧಕರಿಗಿಂತ ಚೆನ್ನಾಗಿ ಗ್ರಹಿಸಿರುವರು. ಎಂತಲೇ ಅವರು ಅವರನ್ನು ಉಪಾಯವಾಗಿ ದೈವೀಕರಿಸುತ್ತಿರುವರು. ಈ ಹಿನ್ನೆಲೆಯಲ್ಲಿ ಆರಾಧಕರ ಮತ್ತು ಗುಪ್ತದ್ವೇಷಿಗಳ ನಡುವೆ ಅವರ ಕೃತಿಗಳ ಅಧ್ಯಯನ ಮತ್ತು ಅವರ ವಿಚಾರಗಳನ್ನು ಹೊಸಪ್ರಶ್ನೆಗಳ ಮೂಲಕ ಮುಖಾಮುಖಿ ಮಾಡುವ ಮತ್ತು ವಾಗ್ವಾದವಾಗಿ ಬೆಳೆಸುವ ಹಾದಿಯನ್ನು ಸೋಸಬೇಕಿದೆ. ಇದು ಯಾವುದೇ ಸಂಶೋಧನೆಗೆ ಸಿಗುವ ದೊಡ್ಡ ಮರ್ಯಾದೆ.

Leave a Reply

Your email address will not be published.