ಸಂತ ಸಿದ್ಧರಾಮ: ಬೆಡಗಿನ ಕೂಗು

-ಪ್ರೊ. ಶಿವರಾಮಯ್ಯ

 siddharameshwaraಎಲ್. ಬಸವರಾಜು ಅವರು ಸಂಪಾದಿಸಿರುವ ‘ಸೊನ್ನಲಾಪುರದ ಸಂತ ಸಿದ್ಧರಾಮನ ನಿಜ ವಚನಗಳು’ (ಕ್ರಿ.ಶ.2007) ಎಂಬ ಗ್ರಂಥದಲ್ಲಿ ಸಿದ್ಧರಾಮನು ವಚನಕಾರರಿಗಿಂತ ಕನಿಷ್ಟ ಒಂದು ಶತಮಾನದ ನಂತರ ಬಂದ ಒಬ್ಬ ಸಂತ ಎಂಬುದನ್ನು ಬುಡರಸಿಂಗಿ (ಕ್ರಿ.ಶ.1257) ಪಡೇಕನೂರು (ಕ್ರಿ.ಶ.1256-57) ಹಾಗೂ ಸಂಗೂರು ಗ್ರಾಮ (ಕ್ರಿ.ಶ.1265) ದ ಈ ಮೂರೂ ಶಾಸನಗಳು ಸ್ಥಿರಪಡಿಸುತ್ತವೆ ಎಂದು ಸಾದರಪಡಿಸುತ್ತಾರೆ.

ಸೊನ್ನಲಾಪುರದಲ್ಲಿ ಸಿದ್ಧರಾಮನು ಕಟ್ಟಿಸಿದ ಕೆರೆ, ಕಟ್ಟೆ, ಬಾವಿಗಳು ಹಾಗೂ ಚಾಮಲಾ ದೇವಿಯು ಕೊಟ್ಟ ದತ್ತಿ ಜಮೀನಿನಲ್ಲಿ ಆತ ರೂಢಿಸಿದ ಹೊಲಗದ್ದೆ ತೋಪುಗಳು ಈಗಲೂ ಇವೆ ಎಂಬುದನ್ನು ಆ ಊರಿನ ಸುತ್ತಣ ಜನಪದರ ಜನಜನಿತ ಮಾತು. ಹಾಗೇನಾದರೂ ಹರಿಹರ, ರಾಘವಾಂಕರಲ್ಲಿ ಸಿದ್ಧರಾಮನು ಬಸವಾದಿ ವಚನಕಾರರ ಸಮಕಾಲೀನನೆಂದಿದ್ದರೆ, ಅದು ಕೇವಲ ಪುರಾಣವೇ ಹೊರತು ಚರಿತ್ರೆಯಲ್ಲ ಎಂದು ಈ ಸಂಪಾದಕರು ತಳ್ಳಿ ಹಾಕುತ್ತಾರೆ.

ಪ್ರಸ್ತುತ ಈ ಬರವಣಿಗೆಯಲ್ಲಿ ಸಿದ್ಧರಾಮನು ಒಬ್ಬ ನೇಗಿಲಯೋಗಿ, ಕವಿ ಎಂದು ಸಮರ್ಥಿಸುವ ಅವನ ಕೆಲವು ಬೆಡಗಿನ ವಚನಗಳನ್ನು ಅವಗಾಹನೆಗೆ ಎತ್ತಿಕೊಳ್ಳಲಾಗಿದೆ. ಬೆಡಗು ಎಂದರೆ ಅಂದ, ಚೆಂದ, ಸೊಗಸು, ಒಗ್ಗಟ್ಟು, ವಯ್ಯಾರ, ವಿಲಾಸ, ಒನಪು, ಚಮತ್ಕಾರ, ಕೌಶಲ, ರಹಸ್ಯ, ಗುಟ್ಟು ಮುಂತಾಗಿ ನಾನಾ ಅರ್ಥಗಳಿವೆ. ಕುರಿತೋದದ ನಮ್ಮ ಜನಪದರು ನೀರು ಕುಡಿದಷ್ಟು ಸಲೀಸಾಗಿ ಬೆಡಗಿನ ವಚನದಲ್ಲಿ ಮಾತಾಡಬಲ್ಲವರು. ಒಂದು ಉದಾಹರಣೆ :

ನೆತ್ತಿಯಲಿ ಉಂಬುವುದು
ಸುತ್ತಲೂ ಸುರಿಯುವುದು
ಎತ್ತಿದರೆ ಎರಡು ಹೋಳಾಗುವುದು
ಮತ್ತಿದರರ್ಥವೇನು ಹೇಳೆಂದಳಾ ಚಂದ್ರಮುಖಿ ಉತ್ತರ : ರಾಗಿಕಲ್ಲು
ಕೆಲವರು ಹೀಗೆ ಒಗಟಿನ ಚೆಂದದ ಮಾತನಾಡುವುದರಲ್ಲಿ ನಿಸ್ಸೀಮರು. ಕವಿಗಳಂತೂ ಬೆಡಗಿನ ನುಡಿಕಾರರು. ತತ್ವಪದಕಾರರು ಸುತ್ತಣ ಪ್ರಕೃತಿ ಪರಿಸರವನ್ನು ತಮ್ಮ ತತ್ವ ಪ್ರತಿಪಾದನೆಗೆ ಬಳಸಿಕೊಳ್ಳುವುದು ಸ್ವಾಭಾವಿಕ.

ಈ ಹಿನ್ನೆಲೆಯಲ್ಲಿ ವಚನಕಾರ ಸಿದ್ಧರಾಮನ ಕೆಲವು ಬೆಡಗಿನ ವಚನಗಳನ್ನು ಪರಿಶೀಲಿಸಬಹುದು.

ಶೂದ್ರ ಸಂತ ಶಿವಯೋಗಿ ಸಿದ್ಧರಾಮನು ನೇಗಿಲಯೋಗಿಯೂ ಹೌದು. ಸೊನ್ನಲಿಗೆಯಲ್ಲಿ ಕೆರೆ, ಕಟ್ಟೆ, ಬಾವಿ ಕಟ್ಟಿಸಿ ಹೊಲಗದ್ದೆಗಳನ್ನು ಮಾಡಿಸಿ, ಶಿವಭಕ್ತರಿಗೆ ದಾಸೋಹ ನೆರವೇರಿಸುತ್ತಿದ್ದ ಕಾಯಕ ಯೋಗಿ. ಇವನ ವಚನಗಳಲ್ಲಿ ಸಹಜವಾಗಿಯೇ ರೈತಸ್ನೇಹಿ ಪಶುಪಕ್ಷಿ ಪ್ರಾಣಿ ಪ್ರತಿಮೆಗಳು, ಪ್ರತೀಕಗಳು, ಸಂಕೇತಗಳು, ಬೆಡಗಿನ ರೂಪಕಗಳು ಅನೇಕ. ಗಿಳಿ, ಕೋಗಿಲೆ, ಕೋಳಿ, ಕುರಿಮರಿ, ವೃಕ್ಷ, ಭೈತ್ರ (ದೋಣಿ) ನವಣೆ ಮುಂತಾದ ಅನೇಕ ಚರಾಚರ ವಸ್ತು ಪ್ರಾಣಿ ರೂಪಕಗಳು ಅವನ ಅನುಭಾವದ ಅಭಿವ್ಯಕ್ತಿಗೆ ಒದಗಿಬರುತ್ತವೆ: ಆಗ ಅವನ ಸುತ್ತ ಜನ ಸಹಜ ಕುತೂಹಲದಿಂದ ನೆರೆದು ಆಲಿಸುತ್ತಾರೆ.

ಈ ನಿಟ್ಟಿನಲ್ಲಿ ಸಿದ್ಧರಾಮನ ಅನೇಕ ವಚನಗಳುಂಟು.
ಒಂದು ಕೋಳಿ ಕೂಗುತ್ತದೆ
ಇರುಳು ಹಗಲೆನ್ನದೆ!
ಅದನು ಅರಿಯರಲ್ಲಾ ಮತ್ರ್ಯದಗಣಂಗಳು!
ಅರಿದಡೆಭವ ಬಂಧನವಿಲ್ಲ
ಮರಿದಡೆ ಜನನ ಮರಣಕ್ಕೆ ಅಳವಿಲ್ಲ
ಕಪಿಲಸಿದ್ಧ ಮಲ್ಲಿಕಾರ್ಜುನ!
(ಎಲ್. ಬಸವರಾಜು, ಸಿದ್ಧರಾಮನ ನಿಜ ವಚನಗಳು, 215)
ಬೆಳಗಿನ ಜಾವದಲ್ಲಿ ಕೂಗುವ ಕೋಳಿಹುಂಜ ಹೊರಗಡೆಯದು, ಲೌಕಿಕದ್ದು, ಅದು ನಮ್ಮನ್ನು ನಿತ್ಯವ್ಯವಹಾರದ ಪ್ರಪಂಚದಲ್ಲಿ ತೊಡಗುವ ವೇಳೆಯಾಯಿತು ಏಳು, ಎದ್ದೇಳು ಎಂಬಂತೆ ನಿದ್ದೆಯಿಂದ ಎಚ್ಚರಿಸುತ್ತದೆ. ದೈನಂದಿನ ವ್ಯವಹಾರ ಸಾಮಾನ್ಯವಾಗಿ ಕೋಳಿಯ ಕೂಗಿನಿಂದ ಆರಂಭವಾಗುತ್ತದೆ. ಕೋಳಿ ರೈತಮಿತ್ರ. ಹಗಲೆಲ್ಲಾ ದುಡಿದು ಇರುಳು ದಣಿದು ಮಲಗಿದ ಅವನನ್ನು ಕೋಳಿಯ ಕೂಗು ಎಚ್ಚರಿಸದಿದ್ದರೆ ನಾಳೆಯ ಬದುಕಿಗೆ ಅಣಿಯಾಗುವುದು ತಡವಾಗುತ್ತದೆ. ಸಿದ್ಧರಾಮನಿಗೆ ಅದೇ ಕೋಳಿಯ ಕೂಗು ಆಧ್ಯಾತ್ಮದ ಇನ್ನೊಂದು ನೆಲೆಯ ಎಚ್ಚರದ ಧ್ವನಿಯಾಗಿ ಕೇಳಿಬರುತ್ತದೆ.

ಹಗಲು ಇರುಳೆನ್ನದೆ ನಮ್ಮೊಳಗೇ ಕೂಗುತ್ತಿರುವ ಆತ್ಮನ ಕರೆಗೆ ಅದು ಸಂಕೇತವಾಗುತ್ತದೆ. ನಿತ್ಯವ್ಯವಹಾರದಲ್ಲಿ ಪಾಪಪುಣ್ಯ ಧರ್ಮಾಧರ್ಮ ವಿವೇಚನೆ ಇರಲಿ ಎಂದು ಅದು ಸದಾ ಒತ್ತಾಯಿಸುತ್ತಿರುತ್ತದೆ. ಒಳಗಿವಿಯಿಂದ ಕೇಳಿ ಅದರಂತೆ ನಡೆದು ಕೊಂಡವರು ಜನನ ಮರಣವಿಲ್ಲ ಶಿವ ಪದವಿಗೆ ಏರಬಲ್ಲವರಾಗುತ್ತಾರೆ. ಅಲ್ಲದವರು ಅಧೋಗತಿಗೆ ಬೀಳುತ್ತಾರೆ ಮತ್ತು ತಮ್ಮ ಸುತ್ತಣ ಪರಿಸರವನ್ನು ಹಾಳುಗೆಡುಹುತ್ತಾರೆ.

ಕೋಳಿ ಕಾಲಪಕ್ಷಿ.
ನಾವು ವಿಸ್ಮøತಿಗೆ ಬೀಳದೆ ಎಚ್ಚರದಿಂದಿರಬೇಕು ಎಂಬ ತತ್ವವನ್ನು ಸಾರುವ ರೂಪಕ ಪಕ್ಷಿ. ಚಂಚಲ ಬುದ್ಧಿಯ ಕೋಡಗನನ್ನು ಕಾಲಜ್ಞಾನವೆಂಬ ಕೋಳಿ ನುಂಗಿ ಹಾಕುತ್ತದೆ ಎನ್ನುತಾರೆ ಶಿಶುನಾಳ ಶರೀಫರು. ಇದೇ ಕಾಲಪಕ್ಷಿಯನ್ನು ಹಕ್ಕಿ ಹಾರುತ್ತಿದೆ ನೋಡಿದಿರಾ ಎಂದು ಕೇಳುತ್ತಾರೆ ಬೇಂದ್ರೆ.
ಪಂಚವರ್ಣದ ಗಿಳಿಯೊಂದು
ಪ್ರಪಂಚ ರಚನೆಗೆ ಬಂದು
“ಭವ ಬ್ರಹ್ಮ-ಭವ ಬ್ರಹ್ಮ” ಎಂಬುತ್ತಿದೆ!
ಆ ಗಿಳಿಯು ಮೂರು ಮನೆಯ ಪಿಂಜರದಲ್ಲಿ ಕೂತು
ಕುರುಷ್ಟಲಿಂಗ ಪೂಜಾಂ
ಕರುಷ್ಟಲಿಂಗ ಪೂಜಾಂ ಎಂಬುತ್ತಿದೆ!
ಆ ಗಿಳಿಯ ವಚನವ ಕೇಳಿದಾಕಂಗೆ ಸುಖ
ಗಿಳಿಗೆ ಸುಖ!
ಕೇಳದವಂಗೆಯೂ ಸುಖವಿಲ್ಲ-
ಹೇಳಿದವಂಗೆಯೂ ಸುಖವಿಲ್ಲ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ! -ಅದೇ ವಚನ. 216

ಗಿಳಿ ಆತ್ಮವಿದ್ಯೆಗೆ ಪಕ್ಷಿರೂಪಕ. ಪಂಚೇಂದ್ರಿಯ ಸ್ವರೂಪಿಯಾದ ದೇಹವೆಂಬ ಪಂಜರದಲ್ಲಿ ಆತ್ಮನೆಂಬ ಗಿಳಿ ಬಂದು ವಾಸಿಸುವುದರಿಂದ ಅದು ಪಂಚವರ್ಣ ಗಿಳಿ ಎಂದು ಅನ್ವರ್ಥನಾಮ ಹೊಂದಿದೆ. ಆದರೆ ಅದಕ್ಕೆ ಪರಬ್ರಹ್ಮದ ನೆನಪು ಇರುವುದಾಗಿ ‘ಮರಳಿ ಬ್ರಹ್ಮವಾಗು’ (ಭವಬ್ರಹ್ಮ) ಎಂದು ಸದಾ ಹಂಬಲಿಸುತ್ತದೆ; ಅಸರಂತ ಕರೆಯುತ್ತದೆ, ಎಚ್ಚರಿಸುತ್ತದೆ. ಸಾಕಿದ ಗಿಳಿ ಹೊರಗಿನ ಪಂಜರದಲ್ಲಿದ್ದು ನಾವು ಹೇಳಿಕೊಟ್ಟ ಮಾತನ್ನು ‘ಮಕ್ಕಿಕಾಮಕ್ಕಿ’ ಯಾಗಿ ನುಡಿಯುತ್ತದೆ. ಆದರೆ ಒಳಗಿನ ಪಂಜರದಲ್ಲಿರುವ ಅಂತರಾತ್ಮ ಶುಕ ಹೇಳುವ ಮಾತು ಏನೆಂಬುದನ್ನು ನಾವು ಒಳಗಿವಿಯಿಂದ ಮಾತ್ರವೇ ಆಲಿಸುತ್ತಿರಬೇಕು. ಹಾಗೆ ಆಲಿಸಿ ಅದರ ನುಡಿಯಂತೆ ನಡೆದರೆ ನಮ್ಮ ಉದ್ಧಾರ, ಇಲ್ಲವಾದರೆ ನಮ್ಮ ಗತಿ ಅಧೋಗತಿ.

ಈ ಪ್ರಕ್ರಿಯೆಯನ್ನು ಕುರಿತು ಕನಕದಾಸರ ವಿವೇಕ ಹೀಗೆ ಹಾಡುತ್ತದೆ : ‘ಗಿಳಿಯು ಪಂಜರದೊಳಿಲ್ಲ/ಹರಿಹರಿಯೆ ಬರಿಯ ಪಂಜರವಾಯಿತಲ್ಲ?’ ಎಂದು ದಾಸರು ಆತ್ಮನಿಗೆ ಹಂಬಲಿಸಿ ಒಳಗಿನ ಪಂಜರಕ್ಕೆ ಅಂತರಾತ್ಮನೆಂಬ ಪಂಚವರ್ಣದ ಗಿಳಿಯನ್ನು ಆವಾಹನೆ ಮಾಡುತ್ತಿದ್ದಾರೆ.
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು
ಕಂಡಕಂಡ ಪುರುಷನನಪ್ಪಲು
ಅಪ್ಪಿನ ಸುಖ ಸಂತಾನವಾಯುತ್ತೆನಗೆ!
ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು
ಕರಣಿಕ ಹೇಳಿದನಯ್ಯ ಮೂವತ್ತಾರು ಕುಮಾರರನು
ಆ ಕುಮಾರರ ಕೂಟದಲ್ಲಿರಲು
ಹೆತ್ತ ಮಕ್ಕಳ ಕೂಟವೆಂದಡೆ
ಹುಟ್ಟಿದರಯ್ಯ ಇನ್ನೂರ ಹದಿನಾರು ರಾಜಕುಮಾರರು
ಆ ಕುಮಾರರ ಚೆಲುವಿಕೆಯ ಕಂಡು
ಆ ಚೆಲುವಿಕೆಯ ಮಕ್ಕಳ ನೆರೆಯಲು
ಪತಿವ್ರತೆ ಎನಿಸಿಕೊಂಡು
ಒಬ್ಬನೇ ಪುರುಷನೆಂದಳಯ್ಯ
ಮಲ್ಲಿನಾಥಯ್ಯ ನಿಮ್ಮ ಹೆಂಡತಿ! -ಅದೇ ವಚನ. 213
ಎಲ್. ಬಿ ಅವರು ನೀಡಿರುವ ವಚನಾನುಸಾರ : ಕೋಗಿಲೆಯ ಶಬ್ದ ಕಿವಿಗೆ ಕೂಗಿ ಹೋಯಿತು. (ಆ ವಸಂತದಲ್ಲಿ ಮನಕ್ಕೆ ಸಂತಸವಾಯಿತು) ಕಂಡಕಂಡ ಪುರುಷನನ್ನು (ಅಂದರೆ ಕಂಡ ಅಖಂಡ ಪುರುಷನಾದ ಪರಶಿವನನ್ನು) ಆಲಂಗಿಸುವ ಬಯಕೆಯಾಯಿತು ನನಗೆ. ಕರಣಿಕ (ಪುರೋಹಿತ) ನ ಬಳಿ ಹೋಗಿ ಭವಿಷ್ಯ ಕೇಳಲು – ನಿನಗೆ ಮೂವತ್ತಾರು ಕುಮಾರರು ಹುಟ್ಟುವರು ಎಂದನು. ಆ ಪ್ರಕಾರ ಹುಟ್ಟಿದ ಮೂವತ್ತಾರು ಮಕ್ಕಳನ್ನು ಕೂಡಿಕೊಂಡಿರಲು – ಆ ಮೂವತ್ತಾರು ಮಕ್ಕಳಿಗೂ ಒಬ್ಬೊಬ್ಬರಿಗೆ ಆರು ಮಕ್ಕಳಂತೆ ಒಟ್ಟು ಇನ್ನೂರ ಹದಿನಾರು ಮಕ್ಕಳಾಗಿ ಅವರೆಲ್ಲರೂ ರಾಜಕುಮಾರರಾದರು. ಆ ರಾಜಕುಮಾರರ ಚೆಲುವನ್ನು ಕಂಡು ಮನಸೋತು ಕೂಡಿಕೊಂಡಿದ್ದೆನೆಂದಾಗಲೂ ನನಗಿರುವ ಗಂಡನೊಬ್ಬನೇ – ಅವನು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ಎಂದಳು ಅವನ ಹೆಂಡತಿ ಶ್ರೀ ಭ್ರಮರಾಂಬೆ ಶಕ್ತಿ ಮಹಾಮಾತೆ!

ಇದೊಂದು ಶರಣಸತಿ ಲಿಂಗಪತಿ ಭಾವದ ವಚನ. ಶಿವ-ಶಿವೆಯರ ಅಗಣಿತ ಗಣ್ಯತೆಯ ವಿಶ್ವರೂಪಿ ಸುರತ ಸುಖ ಹಾಗೂ ಬ್ರಹ್ಮಾಂಡ ಸಂಸಾರ ಸ್ವರೂಪವನ್ನು ಷಟ್ಸ್ಥಲ ದರ್ಶನದಲ್ಲಿ ಕಟ್ಟಿಕೊಡಲು ಹವಣಿಸಿದ್ದಾನೆ ಯೋಗಿ ಕವಿ ಸಿದ್ಧರಾಮ. 6×6 = 36×6 = 216 ಎಂಬಂಥ ಗಣಿತದಲ್ಲಿ ಕಾಣುವ ಚಮತ್ಕಾರ ಹಾಗೂ ಈ ವಚನದ ಬೆಡಗು ಅನುಭವಿಸುವುದಷ್ಟೇ ಹೊರತು ವರ್ಣಿಸಿ ಹೇಳಲಳವಲ್ಲ. ಆಧ್ಯಾತ್ಮ ಗಣಿತಕ್ಕೆ ಸಂಬಂಧಿಸಿದ ಒಂದು ಜನಪದ ಒಗಟು ಹೀಗಿದೆ. ಎತ್ತಣಿಂದಲೋ ಹಾರಿ ಬಂದ ಗಿಣಿಗಳನ್ನು ಕುರಿತು ಮರದ ಮೇಲೆ ಕುಳಿತಿದ್ದ ಒಂದು ಗಿಳಿ ನೀವು ಎಷ್ಟೀದ್ದೀರಿ ಎಂದು ಕೇಳಿತು. ಅವು ಹೀಗೆ ಹೇಳುತ್ತವೆ : ನಾವು (36) ನಮ್ಮಷ್ಟು (36) ನಮ್ಮೊಳಗರ್ಧ (18) ನಮ್ಮಲ್ಲಿಗಿರ್ಧ (9) ನೀನೂ(1) ಬಂದರೆ ನೂರು = 100 ಎಂದು ಸಿದ್ಧರಾಮ. ಇಂಥ ಗಣಿತದ ಒಗಟನ್ನು ಆಧ್ಯಾತ್ಮದ ಮೆಟ್ಟಿಲಿಗೆ ಹತ್ತಿಸಿದ್ದಾನೆ ಮೇಲಿನ ವಚನದಲ್ಲಿ.
ನೋಡವ್ವಾ ನೋಡವ್ವಾ ಇದರಂದವ!
ತಾ ಬಂದಡೆ
ಎನ್ನಕರ ಒಂದು ತಾಯಾಯಿತ್ತು
ಮತ್ತೊಂದು ಕರ ತಂದೆಯಾಯಿತ್ತು
ಅವರವರು ಕೂಡಿದಲ್ಲಿ ಶಬ್ದವಿಲ್ಲದ ಕೂಸು ಹುಟ್ಟಿತ್ತು
ಆ ಕೂಸು ಎನ್ನನು ಅಪ್ಪಿ ಬಿಟ್ಟಿತ್ತು ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ! -ಅದೇ ವಚನ. 200

ಪ್ರಶ್ನೆ : ಇದೊಂದು ಸರಳ ಸುಂದರ ಒಡಪಿನ ವಚನ. ನೋಡವ್ವ, ನೋಡಿ ಹೇಳು ಇದೇನೆಂದು. ಅದು ಬಂದರೆ ಒಂದು ಕೈ ತಾಯಾಗುತ್ತದೆ, ಇನ್ನೊಂದು ಕೈ ತಂದೆಯಾಗುತ್ತದೆ. ಎರಡೂ ಕೈ ಕೂಡಿದರೆ ಅಳುವಿಲ್ಲದ ಮಗು ಹುಟ್ಟುತ್ತದೆ. ಆ ಮಗು ನನ್ನನ್ನು ಅಪ್ಪಿ ಬಿಟ್ಟಿತು – ಅದೇನು ಹೇಳು ನೋಡುವ?!
ಉತ್ತರ : ಭಕ್ತಿ ಎಂಬುದು ಬಂದರೆ ಒಡ್ಡಿದ ಎಡಗೈಗೆ ಲಿಂಗ ಬರುತ್ತದೆ; ಬಲಗೈ ಆ ಲಿಂಗಕ್ಕೆ ಪೂಜೆ ಮಾಡುತ್ತದೆ.
ಆ ಎರಡೂ ಕೈಗಳು ಕೂಡಿದರೆ ಕೈ ಜೋಡಿಸಿ ಶರಣರಿಗೆ ಸಲ್ಲಿಸುವ ನಮಸ್ಕಾರವಾಗುತ್ತದೆ. ಆ ನಮಸ್ಕಾರ ಕ್ರಿಯೆ ನನ್ನ ಅಹಂಕಾರವನ್ನು ನಿವಾರಿಸಿಬಿಡುತ್ತದೆ. ನಿರ್ಣಯವೇನೆಂದರೆ ಕೊಂಡ ಶಿವಲಿಂಗವನ್ನು ಪೂಜಿಸಬೇಕು, ಕಂಡ ಶಿವ ಭಕ್ತರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸಬೇಕು. ಆಗ ಸಾಧಕನಲ್ಲಿರುವ ನಾನೆಂಬ ಅಹಂಕಾರ ಲಯವಾಗುತ್ತದೆ ಇದು ತಾತ್ಪರ್ಯ. ಕಾಯಕ ಜೀವಿಗಳು ಕೆಲಸದಲ್ಲಿ ತೊಡಗಿದ್ದಾಗ ಪರಸ್ಪರ ಒಡ್ಡುವ ಹಾಗೂ ಒಡೆಯುವ ಸುಖ ಸಂಕಥಾ ವೇಳೆಯ ಇಂಥ ಬೆಡಗಿನ ನುಡಿಗಟ್ಟು ಕಂಡು ಕೇಳಿದವರನ್ನು ಸೆಳೆದಿಡುತ್ತಿರುತ್ತದೆ. ಮತ್ತು ಅದಕ್ಕೆ ಪ್ರತಿಯಾಗಿ ಇನ್ನೊಂದು ಒಗಟನ್ನು ಒಡ್ಡಲು ಪ್ರೇರೇಪಿಸುತ್ತದೆ.
ಜಗದೆರೆಯ ಮಾಡಿದನೊಂದು ಕುರಿಮರಿಯ
ಆ ಕುರಿಮರಿ ಮೇಯುತ್ತಿದೆ!
ಸರ್ವಜಗದವರೆಲ್ಲ ಅನಂತ ರಕ್ಕಸರು
ಹಿಂಸೆ ಮಾಡುತ್ತಲೈದಿದರು
ಹೋದರಕ್ಕಸರು ಸತ್ತರು
ಇದ್ದ ಕುರಿಮರಿ ಇದ್ದಂತಿಪ್ಪುದು!
ಇದೇನು ಕೌತುಕ ಕಪಿಲಸಿದ್ಧ ಮಲ್ಲಿಕಾರ್ಜುನ?!
ಅದೇ ವಚನ. 217

ಇದರ ವಚನಾನುಸಾರವನ್ನು ಎಲ್. ಬಸವರಾಜುರವರು ಅತ್ಯಂತ ವೈಚಾರಿಕ ನೆಲೆಯಲ್ಲಿ ನಿರೂಪಿಸಿದ್ದಾರೆ. ಜಗದೀಶ್ವರನು ಒಂದು ಕುರಿಮರಿಯನ್ನು ಸೃಷ್ಟಿಸಿದನು. ಆ ಕುರಿಮರಿ (ಈಗಲೂ) ಮೇಯುತ್ತಿದೆ. ಏಳು ಲೋಕದ ರಾಕ್ಷಸರೆಲ್ಲರೂ ಅದಕ್ಕೆ ಹಿಂಸೆ ಕೊಡುತ್ತಲೇ ಬಂದಿದ್ದಾರೆ. ಆದರೆ ಆ ರಾಕ್ಷಸರೆಲ್ಲರೂ ಸತ್ತೇ ಹೋದರು. ಈ ಕುರಿಮರಿ ಮಾತ್ರ ಇಂದಿಗೂ ಇದ್ದಂತೆಯೇ ಇದೆ! ಇದೇನು ಕೌತುಕ ಹೇಳು?!
ಕುರಿಮರಿ ಮುಗ್ಧತೆಗೆ ಹಿಡಿದ ಸಂಕೇತ. ಅದು ನಿರುಪದ್ರ ಜೀವಿ. ಜಗತ್ತಿನ ಜನರೆಲ್ಲಾ ಅದಕ್ಕೆ ಹಿಂಸೆಗೊಡುತ್ತಲೇ ಬಂದಿರುವರಾದರೂ ಈ ಕುರಿಮರಿ ಮಾತ್ರ ಆ ಕಾಲದಿಂದಲೂ ತನ್ನಷ್ಟಕೆ ತಾನಿದೆ. ಇದಕ್ಕೆ ಹಿಂಸೆ ಕೊಟ್ಟವರೆಲ್ಲಾ ಚರಿತ್ರೆಯಲ್ಲಿ ಕಪ್ಪಾಗಿ ಸತ್ತು ಹೋದರು. ಈ ಕುರಿಮರಿ ಯಾವುದಕ್ಕೆ ಪ್ರತಿ ರೂಪ? ಎನ್ನುವ ಎಲ್.ಬಿ. ಅವರು ಸರ್ವಧರ್ಮ ಸಮನ್ವಯ ಜೀವನಕ್ಕೆ , ಅದರ ಶಾಂತಿ ಸೌಹಾರ್ದಕ್ಕೆ ವಿರೋಧಿಗಳಾಗಿದ್ದವರೆಲ್ಲಾ ಸತ್ತೇ ಹೋದರು. ಸಮನ್ವಯದಲ್ಲಿ ಭಕ್ತಿಯಿದ್ದವರು ಮಾತ್ರ ಬದುಕಿದ್ದಾರೆ ಎನ್ನುವುದು ಸಿದ್ಧರಾಮನ ವಚನದ ಸಾರ.
ಧರ್ಮಪುತ್ರರು ಕುರಿಮರಿ ಇದ್ದ ಹಾಗೆ. ಬಾಗಿದ ತಲೆ, ಕೂಗುವ ಅಂಬೆ. ಈ ಸಿದ್ಧರಾಮ ಹದಿಮೂರನತೆಯ ಶತಮಾನದ ಗಾಂಧಿ ಮಹಾತ್ಮನೋ ಎಂಬುದು ಎಲ್.ಬಿ. ಯವರ ಉದ್ಗಾರ. ಯೇಸು, ಬುದ್ಧ, ಬಸವ, ಸಿದ್ಧರಾಮ, ಗಾಂದಿ ಇವರೆಲ್ಲ ಕುರಿಮರಿಯಂತೆ ಸಾತ್ವಿಕ ಶಿರೋಮಣಿಗಳು. ವಡ್ರ್ಸ್‍ವರ್ತ್ ಕವಿಯPet Lamb ಪದ್ಯ ನೆನಪಾಗುತ್ತದೆ. ಆಧ್ಯಾತ್ಮ ಪರಿಭಾಷೆಯಲ್ಲಿ ಕುರಿಮರಿ ಅಂದರೆ ಜೀವ, ರಾಕ್ಷಸರು ಎಂದರೆ ಅರಿಷಡ್ವರ್ಗಗಳು. ಕುರಿಮರಿ ಸಾಹಿತ್ಯಲೋಕದ ಮುಗ್ಧ ರೂಪಕದಲ್ಲೊಂದು.
ಅಯ್ಯಾ ಸಂಸಾರವೆಂಬ ಸಾಗರಕ್ಕೆ
ಒಡಲೆಂಬುದೊಂದು ಭೈತ್ರ (ಹಡಗು) ಕಂಡಯ್ಯಾ?
ಅದೇ ವಚನ. 95
ಲೋಕ ಸಂಸಾರವೆನ್ನುವುದೊಂದು ಸಾಗರ. ಅದರ ಮೇಲೆ ಸಂಚಾರ ಹೊರಟು ವ್ಯಾಪಾರ (ವ್ಯವಹಾರ) ಮಾಡಲು ಬೇಕಾದ ಹಡಗೆಂದರೆ ಈ ದೇಹವೇ. ಈ ಹಡಗಿನಲ್ಲಿ ತುಂಬಿಕೊಂಡು ಮಾರುವ ಸರಕೆಂದರೆ ಪಾಪ ಪುಣ್ಯಗಳು! ಈ ಪುಣ್ಯ ಪಾಪಗಳನ್ನು ದೇಹವೆಂಬ ಹಡಗಿನಲ್ಲಿ ತುಂಬಿಕೊಂಡು ವ್ಯಾಪಾರಕ್ಕೆ ಹೊರಡುವ ಐದು ಜನ ವ್ಯಾಪಾರಿಗಳಾರೆಂದರೆ ಪಂಚೇಂದ್ರಿಯಗಳು. ಇದೇ ವಚನದಲ್ಲಿ ಸಂಸಾರವನ್ನು ಸಾಗರಕ್ಕೂ ದೇಹವನ್ನು ಹಡಗಿಗೂ ಹೋಲಿಸಿ ಈ ಒಡಲೆಂಬ ಹಡಗಿನಲ್ಲಿ ಮಾಡಿದ ಪಾಪ ಪುಣ್ಯಗಳೆಂಬ ಸರಕನ್ನು ಹೇರಿಕೊಂಡು ಹೊರಡುವ ಈ ಜೀವ ವ್ಯಾಪಾರಿ ತನ್ನ ವ್ಯವಹಾರವನ್ನು ಎಚ್ಚರದಿಂದ, ಸಾಹಸದಿಂದ, ವಿವೇಕದಿಂದ ಗುರುಭಕ್ತಿ ಹಾಗೂ ಶಿವಭಕ್ತಿಯಿಂದ ಕೂಡಿ ಪಯಣ ಮಾಡಬೇಕೆಂದು ಸಿದ್ಧರಾಮ ಎಚ್ಚರಿಸುತ್ತಾನೆ. ಈ ವಚನದ ವರ್ಣನೆಯನ್ನು ಗಮನಿಸಿದರೆ ಸಿದ್ಧರಾಮ ಹಡಗಿನ ವ್ಯಾಪಾರನ್ನು ಹತ್ತಿರದಿಂದ ಕಂಡು ಬಲ್ಲವನಿರಬೇಕು. ಸೊನ್ನಲಿಗೆಯಿಂದ ಪಶ್ಚಿಮ ತೀರದ ಯಾವುದಾದರೂ ಹಡಗು ಕಟ್ಟೆಯ ಕಡೆಗೆ ಹೋಗಿ ಬಂದವರಿಗಲ್ಲದೆ ಇಂಥ ಸಾಕ್ಷಾತ್ ಅನುಭವ ಆಗಲಾರದು.

“ಜ್ಞಾನವನ್ನು ಹಡಗಿನ ಕೂಕಂಭಕ್ಕೂ, ಲಿಂಗಗಳನ್ನು ತಾರಾಮಂಡಲಕ್ಕೂ ಹೋಲಿಸುತ್ತಿರುವ ಸಿದ್ಧರಾಮ ಕೇವಲ ರೂಢಿಯ ಸನ್ಯಾಸಿಯೂ ಅಲ್ಲ, ಸಾಮಾನ್ಯ ಕವಿಯೂ ಅಲ್ಲ. ಅವನು ಕಾವ್ಯ ನಾವೆಯ ಮಹಾ ನಾವಿಕ ಕೂಡ” ಎನ್ನುವ ಎಲ್. ಬಿ ಯವರ ಮಾತು ಯಥಾರ್ಥವಾಗಿದೆ. ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ. ಒಡಲೆಂಬ ಹಡಗು ಸಂಸಾರವೆಂಬ ಸಾಗರದಲ್ಲಿ ತೇಲುತ್ತಿದೆ. ಗಾಳಿಮಳೆ ಚಂಡಮಾರುತಗಳಿಗೆ ಸಿಲುಕಿ ನಡುಗಡ್ಡೆಯ ಕಲ್ಲು ಬಂಡೆಗಳಿಗೆ ತಾಗಿದರೆ ಮುಗಿಯಿತು ಅದರ ಕತೆ. ಇದರಿಂದ ಕಡೆ ಹಾಯಿಸುವ ಕರುಣಾಳು ಶಿವನಲ್ಲದೆ ಬೇರೆ ಇಲ್ಲ ಎಂಬುದು ಸಿದ್ಧರಾಮನ ದೃಢಭಕ್ತಿ.
ನೀರಿಲ್ಲದ ಭೂಮಿಯಲ್ಲಿ
ಮೂರು ಹೇರು ನವಣೆಯ ಬೆಳೆದುದ ಕಂಡೆ!
ಆ ನವಣೆ ಅಳೆದು ಕೊಡುವಡೆ
ಇಮ್ಮಡಿ ಮುಮ್ಮಡಿಯಾದುದ ಕಂಡೆ
ಕೊಂಡವಂಗೆ
ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ
ಕಣಜಗಳಾದುದ ಕಂಡೆ
ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನ! -ಅದೇ ವಚನ. 211
ಸಿದ್ಧರಾಮ ಸೊನ್ನಲಿಗೆಯಲ್ಲಿ ಕೆರೆಬಾವಿಕಟ್ಟೆಗಳನ್ನು ಕಟ್ಟಿ ಹೊಲಗದ್ದೆಗಳನ್ನು ದುರಸ್ತು ಮಾಡುವ ಮುನ್ನ ಈ ಸುತ್ತಿನ ಪ್ರಾಂತದಲ್ಲಿ ರೂಢಿಯಲ್ಲಿದ್ದ ಬೆಳೆ ಎಂದರೆ ನವಣೆ, ಸಜ್ಜೆ, ಸಾಮೆ, ಜೋಳ ಮುಂತಾದ ಬಡವರಿಗಾಧಾರವಾದ ಬೆಳೆಗಳು ಮಾತ್ರ. ಸ್ವತಃ ಕೃಷಿಕನಾದ ಸಿದ್ಧರಾಮನು ತನ್ನ ಆಧ್ಯಾತ್ಮದ ಅನುಭವಗಳನ್ನು ಅಭಿವ್ಯಕ್ತಿಸಲು ತಾನು ಬೆಳೆಯುತ್ತಿದ್ದ ನವಣೆಯನ್ನೂ ಒಂದು ರೂಪಕವಾಗಿ ಬಳಸಿಕೊಂಡಿರುವುದು ಅವನ ವೃತ್ತಿ ಸಂಪನ್ನತೆಗೆ ಸಾಕ್ಷಿ.

kailasaಸೊನ್ನಲಾಪುರದ ಸುತ್ತಮುತ್ತ ಬರೀ ನವಣೆ ಅನ್ನ ಎಮ್ಮೆ ಮೊಸರು ಕಲಸಿ ಉಣ್ಣುತ್ತಿದ್ದ ಜನ ಸಿದ್ಧರಾಮನ ನೀರಾವರಿ ಏರ್ಪಾಡಿನಿಂದಾಗಿ ಭತ್ತ ಬೆಳೆದು ಅನ್ನ ಉಣ್ಣುವಂತಾದರು. ಒಬ್ಬ ಸನ್ಯಾಸಿಯಿಂದ ಬರೀ ಒಣ ವೇದಾಂತ ಪಡೆಯುತ್ತಿದ್ದ ಭಕ್ತರು, ಈಗ ವ್ಯವಸಾಯ ಉದ್ಯೋಗ ಪರಿಣಿತರಾಗಿ ಶ್ರೀಮಂತರಾದರು. ಅನ್ನ ಬ್ರಹ್ಮನ ಮುಂದೆ ಅನ್ಯ ಬ್ರಹ್ಮನಿಲ್ಲ ಎನ್ನುವ ಮಾತು ಸಿದ್ಧರಾಮನಿಂದ ಯಾಥಾರ್ಥವಾಯಿತು. ಇಲ್ಲಿ ನವಣೆ ಒಂದು ಬೆಡಗಿನ ರೂಪಕ ಧಾನ್ಯವಾಗಿದೆ.
ಕನಕದಾಸರಾದರೋ ಬಡವ ಮತ್ತು ಬಲ್ಲಿದರ ನಡುವಿನ ಸಂಘರ್ಷವನ್ನು ಕುರಿತು ರಾಗಿ ಮತ್ತು ಭತ್ತಗಳ ನಡುವಿನ ಸಂಘರ್ಷವನ್ನಾಗಿಸಿದ್ದಾರೆ. ಬಡವರ ಪರವಾದ ತಮ್ಮ ನಿಲುವನ್ನು ಸಮರ್ಥಿಸಲು ರಾಮಧಾನ್ಯ ಚರಿತ್ರೆ ಎಂಬ ರೂಪಕ ಕಾವ್ಯವನ್ನೇ ಬರೆದರು. ಭಕ್ತಿಯೊಂದಿದ್ದರೆ ನಮ್ಮ ಬಿಡುಗಡೆಯ ಬೆಳೆ ಇಮ್ಮಡಿ ಮುಮ್ಮಡಿ ಅಗಣಿತವೆಂಬುದು ಮೇಲಿನ ವಚನಾನುಸಾರ.
ಕೈಲಾಸ ಕೈಲಾಸವೆಂದು ಬಡಿದಾಡುವ
ಅಣ್ಣಗಳಿರಾ ಕೇಳಿರಯ್ಯ!
ಕೈಲಾಸವೆಂಬುದೊಂದು ಭೂಮಿಯೊಳಿರುವ ಬೋಳುಬೆಟ್ಟ!
ಅಲ್ಲಿರುವ ಮುನಿಗಳೆಲ್ಲಾ ಜೀವಗಳ್ಳರು
ಅಲ್ಲಿದ್ರ್ದ ಚಂದ್ರಶೇಖರನು ಬಹು ಎಡ್ಡ
ಇದರಾಡಂಬರವೇಕಯ್ಯ?
ಎಮ್ಮೆ ಪುರಾತನರಿಗೆ ಸದಾಚಾರದಿಂದ ವರ್ತಿಸಿ
ಲಿಂಗಾಂಗ ಸಾಮರಸ್ಯವ ತಿಳಿದು
ನಿಮ್ಮ ಪಾದ ಪದ್ಮದೊಳು
ಬಯಲಾದ ಪದವೇ ಕೈಲಾಸವಯ್ಯಾ
ಕಪಿಲ ಸಿದ್ಧ ಮಲ್ಲಿಕಾರ್ಜುನ! -ಅದೇ ವಚನ. 209
ಭಾರತೀಯರು ಬಹಳ ಹಿಂದಿನ ಕಾಲದಿಂದಲೂ ಕೈಲಾಸ (ಹಿಮಾಲಯ) ಯಾತ್ರೆ ಹೋಗಿಬರುತ್ತಿದ್ದ ಪರಿಪಾಠವಿದೆ. ಈಗ ಇನ್ನೂ ಹೆಚ್ಚಾಗಿದೆ. ಕೈಲಾಸ ಯಾತ್ರೆ ಎಂದರೆ ಮುಕ್ತಿಗೆ ಕಾದಿರಿಸಿದ ರಹದಾರಿ ಎಂಬುದು ಇವರ ಭಾವನೆ. ಅದಕ್ಕಾಗಿ ಈ ಜನ ಮಾಡುತ್ತಿದ್ದ ಖರ್ಚು, ಪಡುತ್ತಿದ್ದ ಪಾಡು ಅಪಾರ. ಇಷ್ಟೆಲ್ಲ ಆದ ಮೇಲೂ

ಹೀಗೆ ಯಾತ್ರೆ ಹೋಗಿ ಬಂದವರಾದರೂ ಭಕ್ತಿ ಸಂಪನ್ನರಾಗಿ ವಿನೀತ ಭಾವದಿಂದ ಇರಬೇಕಷ್ಟೆ! ಆದರೆ ತಾವು ಹಿಮಾಲಯಕ್ಕೆ ಹೋಗಿ ಬಂದದ್ದೇ ಒಂದು ದೊಡ್ಡಸ್ತಿಕೆ ಎಂಬ ತೋರಿಕೆಯಲ್ಲಿರುವವರೇ ಹೆಚ್ಚು. ಅಂಥವರಿಗೆ ಕೈಲಾಸವೆಂಬುದು ಸದಾ ಮಂಜು ಮುಸುಕಿದ ಬೋಳು ಬೆಟ್ಟವಲ್ಲದೆ ಮತ್ತೇನು? ಹಿಮಗಿರಿಯಲ್ಲಿ ವಾಸವಿರುವ ಶಿವನೆಂಬ ದೇವರಾದರೂ ದಪ್ಪಚರ್ಮದ ಎಡ್ಡ(ಮೂರ್ಖ)ನಲ್ಲದೆ ಇನ್ನೇನು? ಈ ಬಗೆಯ ಆಡಂಬರದ ಸಾಂಪ್ರದಾಯಿಕ ರಾಗದ್ವೇಷಾದಿಗಳನ್ನು ಸಿದ್ಧರಾಮ ಕಟುವಾಗಿ ವಿಡಂಬಿಸುತ್ತಾನೆ. ಅದೇ ರಾಗದ್ವೇಷಾದಿ ಅರಿಷಡ್ವರ್ಗಗಳಿಂದ ತಿರುಗುವ ಸಾಧು ಸಂತರಲ್ಲಿಯೂ ಆತನಿಗೆ ನಂಬಿಕೆ ಇಲ್ಲ. ಹೀಗೆ ಕೈಲಾಸ ಯಾತ್ರೆಗೆ ಒಂದು ವಿವೇಕದ ವ್ಯಾಖ್ಯಾನ ನೀಡಿ ಡಾಂಭಿಕ ಭಕ್ತರನ್ನು ಛೇಡಿಸುತ್ತಾನೆ. ನಿಜವಾದ ಶರಣನಿರುವ ಕ್ಷೇತ್ರವೇ ಅವಿಮುಕ್ತ ಕ್ಷೇತ್ರ ಎಂಬುದು ಸಿದ್ಧರಾಮನ ನಂಬಿಕೆ. ಅಂಗಾಂಗ ಸಾಮರಸ್ಯದಿಂದಿದ್ದರೆ ದೇಹವೇ ದೇಗುಲ – ಶಿವನೇ ನೀವಾಗುವಿರಿ ಎಂಬುದು ಅವನ ವಚನದ ಧ್ವನಿ.
ಕವಿ ಸಮರ್ಥನಿದ್ದಾರೆ ರೂಪಕದಲ್ಲಿ ಮಾತವಾಡುತ್ತಾನೆ. ಸಿದ್ಧರಾಮನ ಬೆಡಗಿನ ವಚನಗಳೆಂದರೆ ರೂಪ ಸೌಂದರ್ಯದ ಖನಿಗಳು’ ಭಕ್ತಿ ಶೃಂಗಾರದ ಕೈಲಾಸ ಗಿರಿ ಶೃಂಗಗಳು, ಕೊನೆಯದಾಗಿ ಒಂದು ಉದಾಹರಣೆ :
ಆನೆಂಬ ಕುಸುಮಕ್ಕೆ
ತಾನೆಂಬ ಮಧುಕರನು
ಭಾನುವಿನುದಯದಲ್ಲಿ ವಿಕಾಸವಾಗಿ
ಸೋಮವೀಧೀಯ ಬೆಳೆಗೆ
ಹೇಮ ಶೈಲ ದುದಯ!
ಕಾಮದಂಡೆಯ ಹಿಡಿದು
ಮನೆಮನೆಗಳ ಸೀಮೆಯನು
ಸಂಬಂಧ ಗ್ರಾಮಗಳನು
ಮನೆಮನೆಗಳನು
ಆನಳಿದು ಕಂಡೆ ನಾ ಹವಣು ಹಲವ
ನಿಸ್ಸೀಮ ನಾ!
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ
ಸೀಮೆಯನು ಕಾಬವರು ಹಲಬರಿಲ್ಲ.
ಅದೇ ವಚನ. 218
ನಾನು ಅನ್ನುವುದೊಂದು ಹೂವಾದರೆ ಅವನು ಎನ್ನುವುದೊಂದು ದುಂಬಿ. ಇದು ಪ್ರೇಮಕ್ಕೆ ಮೀಸಲಾದ ಮಾನಸೋಲ್ಲಾಸಕರ ನುಡಿಗಟ್ಟು. ನಾನೊಂದು ತೀರ ನೀನೊಂದು ತೀರದಂತೆ ಅಲ್ಲ ಇದು. ನಾನೊಂದು ಹೂವು ನೀನೊಂದು ದುಂಬಿ ಎಂಬ ಅದ್ವೈಭಾವ ಇದರದು. ಶರಣಸತಿ ಲಿಂಗಪತಿ ನಡುವಣ ಪ್ರೇಮಗೀತೆ! ಚೆನ್ನಮಲ್ಲಿಕಾರ್ಜುನ ನಟ್ಟ ಮುಳ್ಳು ಕಿಬ್ಬೊಟ್ಟೆಯಲಿ ಮುರಿದವಳು ನಾನು ನನ್ನನ್ನೇಕೆ ನುಡಿಸುವಿರಿ ಅಣ್ಣಗಳಿರಾ ಎಂದಳು ಅಕ್ಕಮಹಾದೇವಿ. ನಾನೊಂದು ಕುಸುಮ ನೀನೊಂದು ಮಧುಕರ ಎಂದ ಸಿದ್ಧರಾಮನ ಮಾತು ಇದೇ ಮಾದರಿ. ಇದೇ ಇನ್ನೊಂದು ರೀತಿಯಲ್ಲಿ ಭಕ್ತ ಮತ್ತು ಶಿವನ ಸಮೀಕರಣವನ್ನು ವ್ಯಂಜಿಸುತ್ತದೆ. ಹೂವು ಮತ್ತು ದುಂಬಿಯಂತೆ ಬದುಕುವವರಲ್ಲವೇ ಅಮರ ಪ್ರೇಮಿಗಳು. ಈ ಅಮರ ಪ್ರೇಮಕ್ಕೆ ಸುಂದರ ವ್ಯಾಖ್ಯಾನ ಸಿದ್ಧರಾಮನ ಈ ವಚನ ಎಂಬ ಡಾ. ಎಲ್. ಬಸವರಾಜು ಅವರ ಮಾತು ಉಚಿತವಾಗಿದೆ. ಎಲ್ಲರ ಪರಿಯಲ್ಲ – ಅವನ ಪರಿಹೊಸತು (ಅದೇ ವಚನ 219) ಎಂದೆನ್ನುವ ಅವನ ಬೆಡಗಿನ ವಚನಗಳಿಗೆ ಬಿಗುಹು, ಬನಿ, ಬೆರಗು, ಬೇಗು, ಕೂಗು ತಂದುಕೊಟ್ಟದ್ದು ಅವನು ಕೈಗೊಂಡ ಕೃಷಿಕ ಧರ್ಮ.

Leave a Reply

Your email address will not be published.