ಸಂಘರ್ಷದಲ್ಲಿ ಚಿಗುರೊಡೆದ ಪ್ರೇಮವಂಶವೆಂಬ ‘ಶುದ್ಧವಂಶ’

-ಪುನೀತ್ ಕುಮಾರ್

ಭಾರತೀಯ ನಾಟಕಗಳಲ್ಲಿ ಪುರಾಣದ ಕಥೆಗಳನ್ನು ಇಟ್ಟುಕೊಂಡು ಸಮಕಾಲೀನಗೊಳಿಸುವುದೇ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮರಾಠಿಯ ‘ಪ್ರೇಮಾನಂದ ಗಜ್ವಿ’ಯವರು ರಚಿಸಿದ ‘ಶುದ್ಧ ಬೀಜಾಪೋಟಿ’ ನಾಟಕ ಭಿನ್ನವಾಗಿ ನಿಲ್ಲುತ್ತದೆ. ಇದನ್ನು ಕನ್ನಡದಲ್ಲಿ ‘ಡಿ.ಎಸ್.ಚೌಗಲೆ’ಯವರು ‘ಶುದ್ಧವಂಶ’ ಎಂದು ಅನುವಾದಿಸಿದ್ದಾರೆ. ಇದೊಂದು ಸಂಪೂರ್ಣವಾಗಿ ಸಾಮಾಜಿಕ ನಾಟಕವಾಗಿದೆ. ಅಲ್ಲದೆ ಪ್ರತಿಯೊಂದು ಪಾತ್ರಗಳು ಕಥೆಗೆ ಇಂಬುಕೊಡುತ್ತಾ ನಾಟಕದ ವಸ್ತುವನ್ನು ಪ್ರತಿನಿಧಿಸುತ್ತವೆ. ಪ್ರಸ್ತುತ ಭಾರತದ ಸಮಸ್ಯೆಗಳಾದ ಧಾರ್ಮಿಕ ಸಂಘರ್ಷದ ಕೋಮುವಾದವು ನಾಟಕದ ಮುಖ್ಯ ವಸ್ತುವಾದರೂ ಇದರೊಂದಿಗೆ ಅಂಟಿಕೊಂಡೆ ಸಾಗುವ ಜನಾಂಗಿಯ ದ್ವೇಷದ ಸುತ್ತ ಯುವ ಪೀಳಿಗೆಯ ಪ್ರೇಮದ ಮೇಲೆ ನಾಟಕ ಸಾಗುತ್ತದೆ.

ತನ್ನ ಮತೀಯವಾದದಿಂದ ಯುವ ಪ್ರೇಮಿಗಳನ್ನು ದೂರಮಾಡಲು ಯತ್ನಿಸುತ್ತಾ, ಮನುಷ್ಯ ಜನಾಂಗದ ದ್ವೇಷದ ಬೀಜವನ್ನು ಬಿತ್ತುವ, ಮತ್ತು ಇತಿಹಾಸದ ಪ್ರಾಧ್ಯಾಪಕನಾದ ಪ್ರೊ. ಬಾಳ ಪೇಶವೆ ತನ್ನ ಮಗಳಾದ ವೇದಿಕಾಳ ಅಂತರ ಜಾತಿ ವಿವಾಹದಿಂದ ತನ್ನ ಆರ್ಯವಂಶದ ಶುದ್ಧತೆಗೆ ಚ್ಯುತಿ ಬರುವುದೆಂದು ಭಾವಿಸುತ್ತಾನೆ. ಇದೇ ಸಮಯದಲ್ಲಿ ಸನಾತನ ಎಂಬ ಆರ್ಯವಂಶದ ಹುಡುಗನೊಂದಿಗೆ ಮದುವೆಯನ್ನು ನಿಶ್ಚಯಿಸುತ್ತಾನೆ. ಮತ್ತೊಂದು ತುದಿಯಲ್ಲಿ ಪ್ರಿಯಕರ ಸಮ್ಯಕನ ತಂದೆ ಸಂಬುದ್ಧ ಕಾಂಬ್ಳೆ ವೃತ್ತಿಯಲ್ಲಿ ನ್ಯಾಯಮೂರ್ತಿಯಾದರು ತನ್ನ ಮಗನ ಪ್ರೇಮಕ್ಕೆ ನ್ಯಾಯ ಒದಗಿಸಲು ಹೋಗಿ ವಿಫಲನಾಗುತ್ತಾನೆ. ಈ ಎರಡೂ ಕುಟುಂಬಗಳನ್ನು ಯುವ ಜನಾಂಗವು ಪ್ರೇಮ ಸಂಕೋಲೆಯೊಂದಿಗೆ ಎದುರುಗೊಳ್ಳುವಂತೆ ಮಾಡಿ ಪ್ರಸ್ತುತ ಸಮಾಜವನ್ನು ಪ್ರೇಕ್ಷಕರೆದುರು ತೆರೆದಿಡುವಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ.

ಧರ್ಮ ಯಾವುದಾದರು ಸರಿಯೇ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಲೆ ಇರುತ್ತದೆ. ಇದು ವೇದಿಕಾ ಮತ್ತು ಆಕೆಯ ತಾಯಿ ಜಾಯಿಯ ನಡುವಿನ ಸಂಭಾಷಣೆಯಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ. ಅದರಲ್ಲೂ ‘ಯಾವ ಮನೆಯೊಳಗ ಹೆಣ್ಣು ಹುಟ್ಟುತದೆಯೋ ಆಗ ಆ ಮನೆಯೊಳಗಿನ ವಾತಾವರಣ ಯಾರಾದರೂ ಸತ್ತಿದ್ದಾರೇನೋ ಅನ್ನೋ ಹಂಗ ಭೀಕರವಾಗಿರತದ’ ಮಾತು ಇಡೀ ಪುರುಷ ಸಮಾಜ ಹೆಣ್ಣಿನ ಹುಟ್ಟನ್ನು ನೋಡುವ ಮತ್ತು ಆಕೆಯ ಶತಶತಮಾನದ ನೋವಿನ ಕಥೆ ಹೇಳುತ್ತಾ ಪ್ರೇಕ್ಷಕರ ಜಾಗೃತಗೊಳಿಸುತ್ತದೆ. ಈ ಬವಣೆಯಿಂದ ಹೊರ ಬರಲು ವೇದಿಕಾ ಮದುವೆಯನ್ನೇ ನಿರಾಕರಿಸಿದಾಗ ತಾಯಿಯಾದ ಜಾಯಿ ಹೆಣ್ಣಿನ ಒಂಟಿ ಜೀವನ ಅದರ ಸಂಕಷ್ಟಗಳನ್ನು ವಿವರಿಸಿ ಆಕೆಯನ್ನು ಮದುವೆಗೆ ಒಪ್ಪಿಸಿ ಮಗಳ ಹಿತವನ್ನು ಕಾಯುತ್ತಿದ್ದರೂ ಆಕೆ ತನ್ನ ಗಂಡನ ಕೈ ಗೊಂಬೆಯಾಗಿದ್ದಾಳೆ. ಇದು ಹೆಣ್ಣಿನ ಅಸಹಾಯಕತೆಯ ಪ್ರತಿಬಿಂಬವಾಗಿದೆ.

ಇಂದು ಸಮಾಜದಲ್ಲಿ ವೈಚಾರಿಕಪ್ರಜ್ಞೆಯನ್ನು ಮುನ್ನೆಲೆಗೆ ತರುವ ಅವಶ್ಯಕತೆ ಇದೆ. ಹೀಗಿರುವಾಗ ಕೆಲವು ಸಂಘಟನೆಗಳು ಧರ್ಮದ ಹೆಸರಿನಲ್ಲಿ ನೈತಿಕ ಪೋಲಿಸ್‍ಗಿರಿ ಪ್ರದರ್ಶಿಸುತ್ತಿದೆ. ಇದು ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ. ಇದು ನಾಟಕದಲ್ಲಿ ಹಿಂದುರಾಷ್ಟ್ರ, ಹಿಂದೂ ಬಚಾವೋ, ಎಂದು ‘ಶ್ರೀ ರಾಮ ಸಂರಕ್ಷಕ ದಳ’ದ ಸಂಘಟನೆಯೊಂದಿಗೆ ಅಧಿಕಾರದ ಮೂಲಕ ಜನರನ್ನು ನಿಯಂತ್ರಿಸಲು ಧರ್ಮ ಒಂದು ಅಸ್ತ್ರವಾಗಿರುವುದು ಕಾಣುತ್ತದೆ. ಅಲ್ಲದೆ ನೂರಾರು ಜಾತಿಗಳು ಸೇರಿ ಹಿಂದು ಧರ್ಮ ಎಂದು ಹೇಳುತ್ತಿದ್ದರೂ ಇಲ್ಲಿ ಪರಸ್ಪರ ಜಾತಿ ದ್ವೇಷದಲ್ಲಿ ನಿರತರಾಗಿರುತ್ತಾರೆ. ಆದರೆ “ಪರಸ್ಪರ ದ್ವೇಷಿಸೋ ಈ ಜನ ಎದುರಾಬದುರು ಬಂದರು ಅಂದರ ಒಬ್ಬರಿಗೊಬ್ಬರು ರಾಮ-ರಾಮ ಮಾಡತಾರ ‘ರಾಮ’ ಇದು ಎಲ್ಲರನ್ನು ಸೇರಿಸೋ ಸಮೂಹಿಕ ದಾರ ಆಗೇದ” ಎಂದು ಈ ಸಂಘಟನೆಯ ಅಧ್ಯಕ್ಷನಾದ ಪ್ರೊ. ಬಾಳ ಪೇಶವೆಯ ಮಾತು ಮುಗ್ಧ ಜನರ ನಂಬಿಕೆಗಳಲ್ಲಿ ಹೇಗೆ ಧಾರ್ಮಿಕ ಮುಖಂಡರು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾರೆ ಎಂಬುದನ್ನು ತಿಳಿಸುತ್ತದೆ.

ಅಲ್ಲದೆ ವನವಾಸಿ ಜನರನ್ನು ಭಯೋತ್ಪಾದನೆಗೆ ಪ್ರೇರೇಪಿಸಲು ಅದೇ ರಾಮನಾಮವನ್ನು ದಾಳ ಮಾಡಿಕೊಳ್ಳುತ್ತಾನೆ. ಜೊತೆಗೆ ನಾವೆಲ್ಲರೂ ಒಂದೇ ಎಂದು ಹೇಳುವ ಡೊಂಗಿತನವನ್ನು ಪ್ರದರ್ಶಿಸುತ್ತಾನೆ. ಇದೇ ಸಂದರ್ಭದಲ್ಲಿ ಅದೇ ವನವಾಸಿ ಯುವತಿ ಆಶ್ರಮದ ಗುರುಗಳಾದ ಭಗವತಿಕಾ ದೇವನ ಮೂಲಕ ಗರ್ಭಿಣಿಯಾದಗ ಆಕೆಯನ್ನು ಕೊಲೆ ಮಾಡಿಸುವ ಮೂಲಕ ಧರ್ಮ ಮತ್ತು ಆಶ್ರಮದ ಹಿತ ಕಾಯಲೂ ಮುಂದಾಗುತ್ತಾನೆ. ಈ ಪ್ರಕರಣವನ್ನು ಬೆನ್ನು ಹತ್ತಿದ ಸಮ್ಯಕನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾದ ಬಾಳ ಪೇಶವೆ ಕೊನೆಗೆ ತಾನೆ ಹೆಣೆದ ಬಲೆಯಲ್ಲಿ ಸಿಕ್ಕಿ ಬೀಳುತ್ತಾನೆ. ತಂದೆಯ ಧಾರ್ಮಿಕ ಮುಖಂಡತ್ವದ ಮುಖ ಬಯಲಾಗುತ್ತಿದ್ದಂತೆ ವೇದಿಕ ತನ್ನ ತಂದೆಯ ಶುದ್ಧವಂಶದ ಸಂಕೋಲೆಯಿಂದ ಬಿಡಿಸಿಕೊಂಡು ಪ್ರಿಯಕರ ಸಮ್ಯಕನೊಂದಿಗೆ ಹೋಗುವ ಮೂಲಕ ಪ್ರೇಮವಂಶವನ್ನು ಎತ್ತಿ ಹಿಡಿಯುತ್ತಾಳೆ. ಇದರೊಂದಿಗೆ ತನ್ನ ವಂಶದ ಶ್ರೇಷ್ಠತೆಯನ್ನು ಬಯಸಿದ್ದ ಪ್ರೊ. ಬಾಳ ಪೇಶವೆ ಛಿದ್ರನಾಗಿ ಕುಸಿಯುವುದರಲ್ಲಿ ನಾಟಕದ ಮುಕ್ತಾಯವಾಗುತ್ತದೆ.

ಈ ನಾಟಕವನ್ನು ಡಿ.ಎಸ್. ಚೌಗಲೆಯವರು ಬೆಳಗಾವಿ ಕನ್ನಡದ ಸೊಗಡಿನಲ್ಲಿ ರಚಿಸಿರುವುದು ನಾಟಕಕ್ಕೆ ಮೆರುಗು ಬಂದಿದೆ. ಉಳಿದಂದೆ ಪ್ರೊ. ಬಾಳ ಪೇಶವೆ ಪಾತ್ರಕ್ಕೆ ಮೆರುಗು ನೀಡುವಂತೆ ಮಹೇಶ್ ಪಾಲಕ್ಕಿಯವರು ಆಭಿನಯಿಸಿದ್ದಾರೆ. ಉಳಿದ ಪಾತ್ರಗಳನ್ನು ಅಭಿಯಿದ ಎಲ್ಲಾ ನಟರು ನಾಟಕದಲ್ಲಿನ ರಸವನ್ನು ಪ್ರೇಕ್ಷಕನ ಎದೆಗೆ ಸುರಿಯುತ್ತಾರೆ. ನಿರ್ದೇಶನ ಮತ್ತು ಬೆಳಕಿನ ಜವಾಬ್ದಾರಿಯನ್ನು ಹೊತ್ತು ಪ್ರದೀಪ್ ತಿಪಟೂರುರವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ರಂಗಧರ್ಮ ತಂಡವು ಸಮಜಕ್ಕೆ ಅವಶ್ಯಕವಿರುವಂತ ನಾಟಕವನ್ನು ಪ್ರದರ್ಶಿಸುವ ಮೂಲಕ ತಮ್ಮ ರಂಗಧರ್ಮವನ್ನು ಮೆರೆದಿದ್ದಾರೆ.

Leave a Reply

Your email address will not be published.