ವಿಚಾರವಾದದ ಮತ್ತೊಂದು ಕೊಂಡಿ ಕಳಚಿತು

ನಾ ದಿವಾಕರ

ಡಿಸೆಂಬರ್ 29 ಮಹಾನ್ ಕವಿ, ಮಾನವತಾವಾದಿ, ವಿಶ್ವಮಾನವ ತತ್ವದ ಪ್ರತಿಪಾದಕ ಮತ್ತು ದಾರ್ಶನಿಕ ಚಿಂತಕ ಕುವೆಂಪು ಅವರ ಜನ್ಮದಿನ. ಸಮಕಾಲೀನ ರಾಜಕೀಯ, ಸಾಂಸ್ಕøತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಕುವೆಂಪು ಹೆಚ್ಚು ಪ್ರಸ್ತುತ ಎನಿಸುತ್ತಿರುವ ಸಂದರ್ಭದಲ್ಲಿಯೇ ಕುವೆಂಪು ಪ್ರತಿಪಾದಿಸದ ಮಾನವತಾವಾದ ಎಲ್ಲೋ ಒಂದು ಕಡೆ ಹಿನ್ನಡೆ ಕಾಣುತ್ತಿರುವುದೂ ಸತ್ಯ. ನಾವು ಕುವೆಂಪು ಅವರನ್ನು ಕಳೆದುಕೊಳ್ಳುತ್ತಿದ್ದೇವೆಯೋ ಅಥವಾ ಕುವೆಂಪು ನಮ್ಮೊಳಗಿಂದ ಮರೆಯಾಗುತ್ತಿದ್ದಾರೋ ಎಂಬ ಜಿಜ್ಞಾಸೆಯ ನಡುವೆಯೇ ವೈಜ್ಞಾನಿಕ ಮನೋಭಾವ, ವಿಚಾರವಾದ ಮತ್ತು ದಾರ್ಶನಿಕತೆ ನಮ್ಮಿಂದ ಮರೆಯಾಗುತ್ತಿದೆ.

ಸಮಾಜದ ಅಭ್ಯುದಯದ ಹಾದಿಯಲ್ಲಿ ತಮ್ಮ ವೈಚಾರಿಕ ನಡೆ ನುಡಿಗಳ ಮೂಲಕವೇ ಒಂದು ಹೊಸ ಲೋಕವನ್ನು ತೆರೆದಿಟ್ಟ ಮಹಾನ್ ಚೇತನಗಳಲ್ಲಿ ಒಬ್ಬರಾದ ಜೆ ಆರ್ ಲಕ್ಷ್ಮಣರಾವ್ ಕಾಕತಾಳೀಯವಾಗಿ ಕುವೆಂಪು ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ. ಮಾಕ್ರ್ಸ್‍ವಾದ ನಶಿಸಿಹೋಗುತ್ತಿದೆ ಎಂದು ವಿತಂಡವಾದ ಮಾಡುವವರಿಗೆ ತಕ್ಕ ಉತ್ತರ ನೀಡುವಂತೆ ಅಂತಿಮ ಕ್ಷಣದವರೆಗೂ ಮಾಕ್ರ್ಸ್‍ವಾದವನ್ನೇ ಉಸಿರಾಡಿ ವಿಜ್ಞಾನ ಮತ್ತು ವೈಚಾರಿಕತೆಯನ್ನು ನಮ್ಮ ನಡುವೆ ಬಿಟ್ಟು ಹೋಗಿರುವ ಲಕ್ಷ್ಮಣರಾಯರಿಗೆ ವಿದಾಯ ಹೇಳುವುದು ನೋವಿನ ಸಂಗತಿಯಾದರೂ ಅನಿವಾರ್ಯ. ಮತ್ತೊಂದೆಡೆ 96 ವರ್ಷಗಳ ಸಾರ್ಥಕ ಜೀವನ ಸವೆಸಿ, ಪರಿಪೂರ್ಣತೆಯನ್ನು ಕಂಡ ಈ ದಾರ್ಶನಿಕರ ಬದುಕು ಹಲವು ಪೀಳಿಗೆಗಳಿಗೆ ಆದರ್ಶಪ್ರಾಯವಾಗುವುದನ್ನು ಕಂಡಾಗ ಈ ಅಗಲಿಕೆಯ ನೋವು ತಂತಾನೇ ಶಮನವಾಗುತ್ತದೆ. ಸಾವಿನಲ್ಲೂ ಬದುಕುವ ಚೇತನ ಜೆ ಆರ್ ಲಕ್ಷ್ಮಣರಾಯರು ಎಂದರೆ ಅತಿಶಯೋಕ್ತಿಯಲ್ಲ.

ನಿಜ, 1960-70ರ ದಶಕಗಳು ಭಾರತೀಯ ಸಮಾಜದ ಸಾಂಸ್ಕøತಿಕ ನೆಲೆಯಲ್ಲಿ ಮತ್ತು ಬೌದ್ಧಿಕ ಪರಿಸರದಲ್ಲಿ ವಿಪ್ಲವಕಾರಿ ಬದಲಾವಣೆಗಳನ್ನು ಕಂಡಿದ್ದವು. ಮಾಕ್ರ್ಸ್‍ವಾದ, ಸಮಾಜವಾದ, ಸಮತಾವಾದ, ಮಾನವತಾವಾದ ಮತ್ತು ವಿಶ್ವಮಾನವ ತತ್ವಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಹಪಹಪಿ , ಹತಾಶೆಗೊಳಗಾದ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿತ್ತು. ಭವಿಷ್ಯದ ಪೀಳಿಗೆಯ ಉಜ್ವಲ ದಿನಗಳನ್ನು ವೈಚಾರಿಕತೆಯಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ, ಮಾನವೀಯ ಸಂವೇದನೆಯಲ್ಲಿ ಕಾಣುವ ಹಂಬಲ ಬಹುಶಃ ಎಲ್ಲ ವರ್ಗಗಳನ್ನೂ ಆವರಿಸಿತ್ತು. ಇದೇ ಸಂದರ್ಭದಲ್ಲಿ ಆಳುವ ವರ್ಗಗಳ ವಿರುದ್ಧ ದೇಶದ ಜನಸಾಮಾನ್ಯರು, ಶ್ರಮಜೀವಿಗಳು ಮತ್ತು ಅವಕಾಶವಂಚಿತ ಸಮುದಾಯಗಳಲ್ಲಿ ಮಡುಗಟ್ಟಿದ ಆಕ್ರೋಶ ಒಮ್ಮೆಲೆ ಸ್ಫೋಟಿಸಿದಾಗ ವಿಚಾರವಾದ ಒಂದು ಸುಭದ್ರ ನೆಲೆಯಾಗಿ ಆಸರೆ ಒದಗಿಸಿತ್ತು. ಜನಸಾಮಾನ್ಯರನ್ನು ಮೌಢ್ಯದ ಕೂಪಕ್ಕೆ ತಳ್ಳಿ ಸಾಂಸ್ಕøತಿಕ ರಾಜಕಾರಣದ ಅಧಿಪತ್ಯ ಸಾಧಿಸುವ ಒಂದು ವರ್ಗದ ಕುತಂತ್ರ ಒಂದೆಡೆಯಾದರೆ ಮತ್ತೊಂದೆಡೆ ಪ್ರಜಾತಂತ್ರ, ಸಮಾಜವಾದದ ಹೆಸರಿನಲ್ಲಿ ಶ್ರಮಜೀವಿಗಳ ಬದುಕನ್ನೇ ಪಣಕ್ಕಿಟ್ಟು ತಮ್ಮ ಅಧಿಕಾರ ರಾಜಕಾರಣವನ್ನು ಸಂರಕ್ಷಿಸುವ ಪಿತೂರಿ ನಡೆದಿತ್ತು. ಈ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಮೌಢ್ಯವನ್ನು ತೊಗಲಿಸಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ತುಂಬುವ ಹೊಣೆ ಹೊತ್ತವರಲ್ಲಿ ದಿವಂಗತ ಜೆ ಆರ್ ಲಕ್ಷ್ಮಣರಾವ್ ಒಬ್ಬರು.

ಕಟ್ಟಕಡೆಯವರೆಗೂ ಸೈದ್ಧಾಂತಿಕವಾಗಿ ಮಾಕ್ರ್ಸ್‍ವಾದದಲ್ಲಿ ಅಚಲ ನಂಬಿಕೆ ವಿಶ್ವಾಸ ಉಳಿಸಿಕೊಂಡಿದ್ದ ಲಕ್ಷ್ಮಣರಾಯರು ವಿಜ್ಞಾನವನ್ನು ಸರಳೀಕರಿಸಿ ಜನಸಾಮಾನ್ಯರಿಗೆ, ಎಳೆಯ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಮಾಡಿದ್ದು ಅವರ ಜನಪರ ಕಾಳಜಿ ಮತ್ತು ಸಂವೇದನೆಯ ದ್ಯೋತಕ. ಜನಸಾಮಾನ್ಯರ ಹತಾಶೆ, ಆತಂಕ ಮತ್ತು ಕಷ್ಟ ವ್ಯಸನಗಳನ್ನು ತಮ್ಮ ಸಾಮ್ರಾಜ್ಯ ನಿರ್ಮಾಣದ ತಳಪಾಯದಂತೆ ಬಳಸುತ್ತಿದ್ದ ಆಳುವ ವರ್ಗಗಳಿಗೆ ಒಂದು ಪ್ರತಿರೋಧದ ಅಲೆ ಸೃಷ್ಟಿಸುವಲ್ಲಿ ವೈಜ್ಞಾನಿಕ ವಿಚಾರವಾದ ಪ್ರಮುಖ ಪಾತ್ರ ವಹಿಸಿತ್ತು. ಜಿ ಟಿ ನಾರಾಯಣರಾವ್, ಹೆಚ್ ನರಸಿಂಹಯ್ಯ, ಎ ಎನ್ ಮೂರ್ತಿರಾವ್ ಮತ್ತು ಜೆ ಆರ್‍ಲಕ್ಷ್ಮಣರಾಯರ ಕೊಡುಗೆ ಇಲ್ಲಿ ಹೆಚ್ಚು ಪ್ರಧಾನವಾಗಿ ಕಾಣುತ್ತದೆ. ಈ ರೀತಿಯ ಸೈದ್ಧಾಂತಿಕ ಬದ್ಧತೆಯೇ ಕೊರತೆ ಎನಿಸಿರುವ ಪ್ರಸ್ತುತ ಸಂದರ್ಭದಲ್ಲಿ ಲಕ್ಷ್ಮಣರಾಯರಂತಹ ಮುತ್ಸದ್ದಿಗಳು ಹೆಚ್ಚು ಹತ್ತಿರವಾಗುತ್ತಾರೆ. ಆದರೆ ಮತಾಂಧತೆ, ಕೋಮುವಾದ, ಜಾತಿವಾದ ಮತ್ತು ಫ್ಯಾಸಿಸ್ಟ್ ಧೋರಣೆಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಹಂತದಲ್ಲಿ ಲಕ್ಷ್ಮಣರಾಯರು ನಿರ್ಗಮಿಸಿದ್ದಾರೆ. ಇವರೊಂದಿಗೆ ವೈಜ್ಞಾನಿಕ ವಿಚಾರವಾದದ ಒಂದು ಪ್ರಮುಖ ಕೊಂಡಿಯೂ, ಹಿರಿ ಪೀಳಿಗೆಯ ಕೊನೆಯ ಕೊಂಡಿ ಎನ್ನಲೂಬಹುದು, ಕಳಚಿಕೊಂಡಿದೆ.

ನುಡಿದಂತೆ ನಡೆದು, ನಡೆದಂತೆ ಬಾಳುವ ಮೂಲಕ ಬದುಕಿಗೆ ಒಂದು ಸಾರ್ಥಕತೆ ಮತ್ತು ಅರ್ಥವತ್ತತೆಯನ್ನು ನೀಡಿದ ಶ್ರೇಯ ಈ ಮಹಾನ್ ಚಿಂತಕರಿಗೆ ಸಲ್ಲುತ್ತದೆ. ಈ ಸೈದ್ಧಾಂತಿಕ ಬದ್ಧತೆಯೇ ಇವರ ಗರಡಿಯಲ್ಲಿ ಪಳಗಿದ ಸಾವಿರಾರು ಸಂವೇದನಾಶೀಲ ಮನಸುಗಳಿಗೆ ದಾರಿದೀಪವಾಗಿ ಪರಿಣಮಿಸಿದಾಗ ಬಹುಶಃ ಲಕ್ಷ್ಮಣರಾಯರ ಬದುಕು ಮತ್ತಷ್ಟು ಸಾರ್ಥಕತೆ ಪಡೆದುಕೊಳ್ಳುತ್ತದೆ. ಸಾವು ನಿಶ್ಚಿತ ಆದರೆ ಸಾವಿನ ನಂತರವೂ ಬದುಕುವವರು ವಿರಳ. ಜೆ ಆರ್ ಲಕ್ಷ್ಮಣರಾವ್ ಇಂತಹ ವಿರಳ ಜೀವಿಗಳಲ್ಲಿ ಒಬ್ಬ ಸರಳ ಜೀವಿ. ಹುಟ್ಟು ಸಾವಿನ ನಡುವಿನ ಪಯಣದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಶಾಶ್ವತವಾಗಿ ಉಳಿಸಿ ಹೋಗಿರುವ ಹಿರಿಯ ಜೀವಕ್ಕೆ ಲಾಲ್ ಸಲಾಂ .

Leave a Reply

Your email address will not be published.