ವ್ಯಾಪಿಸುತ್ತಿರುವ ಹಿಂಸೆ ಕ್ಷೀಣಿಸುತ್ತಿರುವ ಸಂವೇದನೆ ಎತ್ತ ಸಾಗುತಿದೆ ನಾಗರಿಕ ಸಮಾಜ ?

ನಾ ದಿವಾಕರ

ನಾಗರಿಕ ಸಮಾಜ ಎಂದರೇನು ? 21ನೆಯ ಶತಮಾನದ 17ನೆಯ ವರ್ಷದಲ್ಲಿ ಈ ಪ್ರಶ್ನೆ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಒಂದೆಡೆ ದುರಂತವೂ ಹೌದು ಮತ್ತೊಂದೆಡೆ ಮಾನವ ಇತಿಹಾಸದ ವಿಡಂಬನೆಯೂ ಹೌದು. ಆಧುನಿಕ ಜೀವನ ಶೈಲಿ, ನೂತನ ತಂತ್ರಜ್ಞಾನ, ವೈಜ್ಞಾನಿಕ ಮುನ್ನಡೆ ಇವಿಷ್ಟೇ ಮನುಕುಲವನ್ನು ನಾಗರಿಕ ಸಮಾಜವನ್ನಾಗಿ ಮಾಡುತ್ತದೆ ಎನ್ನುವುದಾದರೆ ನಾವಿಂದು ಅತ್ಯುನ್ನತ ನಾಗರಿಕ ಸಮಾಜದಲ್ಲಿದ್ದೇವೆ ಎಂದು ಭಾವಿಸಬಹುದು. ಅಲ್ಲ ಎನ್ನುವುದಾದರೆ ನಮ್ಮ ಅಂತರಂಗದ ಪ್ರಜ್ಞೆಯನ್ನು ಬಡಿದೆಬ್ಬಿಸಿ ನಾವು ನಾಗರಿಕತೆಯನ್ನು ಪ್ರತಿನಿಧಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. “ ಅನಾಗರಿಕನಂತೆ ” ವರ್ತಿಸಬೇಡ ಎಂದು ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಹೀಯಾಳಿಸುವಾಗ ಆತನ ಮನಸ್ಸಿನಲ್ಲಿ ಏನು ಯೋಚನೆಗಳಿರುತ್ತವೆ ? ಅನಾಗರಿಕ ಎಂದರೇನು ? ಬಹುಶಃ ನಮ್ಮ ಸ್ಥಾಪಿತ ವ್ಯವಸ್ಥೆಯ ಸಾಮಾಜಿಕ ಚೌಕಟ್ಟುಗಳನ್ನು ಪ್ರತಿನಿಧಿಸುವ ಮನಸುಗಳು ಸ್ವತಃ ತಾವು ಪರಿಭಾವಿಸುವ ನಿಯಮಗಳನ್ನು ಉಲ್ಲಂಘಿಸುವವರನ್ನು ಹೀಗೆ ಹೀಯಾಳಿಸುತ್ತವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾರತದಲ್ಲಿ ಈ ಹೀಯಾಳಿಕೆ ಸಾಂಸ್ಕøತಿಕ, ಜಾತೀಯ, ಮತೀಯ ಅರ್ಥವನ್ನೂ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹೀಯಾಳಿಸುವವನ ಮನದಾಳದಲ್ಲಿ ನಾನು ನಾಗರಿಕತೆಯ ಸಂಕೇತ ಎಂಬ ಅಹಮಿಕೆಯೂ ಇರುತ್ತದೆ. ಆದರೆ ಈ ಅಹಮಿಕೆಯೇ ನಾಗರಿಕ ಸಮಾಜವನ್ನು ಅನಾಗರಿಕತೆಯತ್ತ ಕೊಂಡೊಯ್ಯುತ್ತಿರುವುದನ್ನು ಆಧುನಿಕ ಸಮಾಜ ಗಮನಿಸುತ್ತಲೇ ಇಲ್ಲ.

ತಂತ್ರಜ್ಞಾನ ಮತ್ತು ವಿಜ್ಞಾನದ ಉತ್ತುಂಗ ಶಿಖರದಲ್ಲಿರುವ ಭಾರತೀಯ ಸಮಾಜದಲ್ಲಿ ನಾಗರಿಕತೆಯ ಕುರುಹುಗಳನ್ನು ಅರಸುತ್ತಾ ಹುಡುಕವಂತಹ ಪರಿಸ್ಥಿತಿ ಇಂದು ಎದುರಾಗಿದ್ದರೆ ಅದಕ್ಕೆ ಕಾರಣ ದೇಶದ ಸಾಮಾಜಿಕ, ಸಾಂಸ್ಕøತಿಕ ಮತ್ತು ರಾಜಕೀಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹಿಂಸೆಯ ಪರಿಭಾಷೆ. ನಾಗರಿಕ ಹಿಂಸೆಯನ್ನು ವ್ಯಾಖ್ಯಾನಿಸುವ ನಮ್ಮ ವಿಧಾನ ಮತ್ತು ಧೋರಣೆಯ ಬದಲಾಗದ ಹೊರತು ನಾವು ಈ ಹೊಸ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಸಾಮಾನ್ಯವಾಗಿ ಹಿಂಸೆ ಎಂದಾಕ್ಷಣ ನಾವು ಮತೀಯ ಗಲಭೆ, ಕೋಮು ಘರ್ಷಣೆ, ಹಿಂದುತ್ವ ರಾಜಕಾರಣ, ಭಯೋತ್ಪಾದನೆ, ಉಗ್ರವಾದ, ಕಾಶ್ಮೀರ, ಜಾತಿ ಸಂಘರ್ಷ ಹೀಗೆ ಮೇಲ್ನೋಟಕ್ಕೆ ಕಾಣುವ ಸಾಂಸ್ಕøತಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧತೆಗಳನ್ನು ಗಮನಿಸುತ್ತೇವೆ. ನಿಜ, ಇವೆಲ್ಲವೂ ಸಹ ಮಾನವ ಸಮಾಜದ ಆಂತರ್ಯದಲ್ಲಿ ಅಡಗಿರುವ ಹಿಂಸಾತ್ಮಕ ಧೋರಣೆಯ ಸಾರ್ವಜನಿಕ ಅಭಿವ್ಯಕ್ತಿ.

ಆದರೆ ಈ ಧೋರಣೆ ಸಾಮಾಜಿಕ ಜೀವನದಲ್ಲಿ ಹೇಗೆ ಆವಿರ್ಭವಿಸುತ್ತದೆ ? ಯಾವ ಹಂತದಲ್ಲಿ ಸಮಾಜ ತನ್ನ ಹಿಂಸಾತ್ಮಕ ಅಭಿವ್ಯಕ್ತಿಯನ್ನು ಹೊರಗೆಡಹುತ್ತದೆ ? ಯಾವ ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಪ್ರಭಾವ ಬೀರುತ್ತವೆ ? ಇದನ್ನು ಪ್ರಚೋದಿಸುವ ಶಕ್ತಿಗಳು ಯಾವುದು ? ಹಿಂಸಾತ್ಮಕ ಧೋರಣೆಯನ್ನು ಪ್ರಚೋದಿಸುವ ಕ್ಷುದ್ರ ಶಕ್ತಿಗಳನ್ನು ಗುರುತಿಸುವುದು ಹೇಗೆ, ನಿಯಂತ್ರಿಸುವುದು ಹೇಗೆ ? ಆಧುನಿಕ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳು ಈ ದುಷ್ಟ ಪ್ರವೃತ್ತಿಯನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ ? ಈ ಎಲ್ಲ ಪ್ರಶ್ನೆಗಳು ಇಂದು ನಮ್ಮನ್ನು ಬಾಧಿಸಬೇಕಿದೆ. ಇಲ್ಲವಾದರೆ ನಾವು ಬೌದ್ಧಿಕವಾಗಿ ನಿಷ್ಕ್ರಿಯವಾಗಿದ್ದೇವೆ ಎಂದೇ ಅರ್ಥ.

ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಲು ಇಚ್ಚಿಸುತ್ತೇನೆ. ನನ್ನ ಪರಿಚಯಸ್ಥ ಶಿಕ್ಷಕರೊಬ್ಬರು ಹೇಳಿದ ಪ್ರಸಂಗ. ಬಾಲಕನೊಬ್ಬನ ಹುಟ್ಟುಹಬ್ಬದ ಸಂಭ್ರಮ. ಸ್ನೇಹಿತರೆಲ್ಲರೂ ನೆರೆದಿದ್ದಾರೆ. ಹನ್ನೊಂದು ವರ್ಷ ತುಂಬಿದ ಬಾಲಕನ ಆಪ್ತ ಸ್ನೇಹಿತರು, ಕುಟುಂಬ ವರ್ಗದವರು, ಹಿತೈಷಿಗಳ ನಡುವೆ ಕೇಕ್ ಕತ್ತರಿಸಿದ್ದಾಯಿತು, ತಿಂದು ಮೋಜು ಮಾಡಿದ್ದೂ ಆಯಿತು. ಇವೆಲ್ಲವೂ ಸಹಜ ಪ್ರಕ್ರಿಯೆಗಳು. ಆದರೆ ಈ ಶಿಕ್ಷಕರಿಗೆ ಆಘಾತವಾದದ್ದು ನಂತರ ನಡೆದ ಘಟನೆಯಿಂದ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕನಿಗೆ ಅವನ ಸುತ್ತ ನೆರೆದು ಹ್ಯಾಪಿ ಬರ್ತ್‍ಡೇ ಹಾಡುತ್ತಿದ್ದ ಆಪ್ತ ಸ್ನೇಹಿತರು ಒಬ್ಬರಾದ ಮೇಲೊಬ್ಬರಂತೆ ಅವನಿಗೆ ಹನ್ನೊಂದು ಬಾರಿ ಕಾಲಿನಿಂದ ಒದೆಯುವ ಒಂದು ಕಾರ್ಯಕ್ರಮ. ಇದನ್ನು ಕಂಡು ಬೆರಗಾದ ಶಿಕ್ಷಕರು ವಿಚಾರಿಸಿದಾಗ ತಿಳಿದುಬಂದ ವಾಸ್ತವ ಎಂದರೆ ಇದು ಆಧುನಿಕ ಬಾಲಕರು ಹುಟ್ಟುಹಬ್ಬ ಆಚರಿಸುವ ಪರಿ. ಒದೆಯುವುದು ಒಂದು ಮೋಜಿನ ಪ್ರಕ್ರಿಯೆ. ಇದನ್ನು ಒದೆಸಿಕೊಳ್ಳುವವರೂ ಆನಂದದಿಂದ ಆಸ್ವಾದಿಸುತ್ತಾರೆ. ಅವರಿಗೂ ಇತರರರನ್ನು ಒದೆಯುವ ಅವಕಾಶ ಬರುತ್ತದೆ ಅಲ್ಲವೇ ?

ಈ ಪ್ರಸಂಗವನ್ನು ಕೇಳಿದಾಗ ನನಗನ್ನಿಸಿದ್ದು, ಹಿಂಸೆ ನಮ್ಮ ಸಾಮಾಜಿಕ ಜೀವನದಲ್ಲಿ ಒಂದು ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಸಂಭ್ರಮಾಚರಣೆಯಲ್ಲೂ ಹಿಂಸೆಯನ್ನು ಆಸ್ವಾದಿಸುವ ಮನೋಭಾವ ಬಹುಶಃ ಮಾನವನಲ್ಲಿ ಅಂತರ್ಗತವಾಗಿ, ಸುಪ್ತವಾಗಿರುವ ಹಿಂಸೆಯನ್ನು ಸಾತ್ವಿಕವಾಗಿ ಹೊರಗೆಡಹುವ ಒಂದು ಪ್ರಯತ್ನದಂತೆ ತೋರುತ್ತದೆ. ಹಿಂಸೆ ಎನ್ನುವುದು ಒಂದು ಮಾನಸಿಕ ಸ್ಥಿತಿ. ಬೌದ್ಧಿಕ ಚಿಂತನೆ ಮತ್ತು ತಾತ್ವಿಕ ನಿಲುವು ಆದಾಗ ಅದು ಸಾರ್ವತ್ರಿಕ ಆಯಾಮ ಪಡೆದುಕೊಳ್ಳುತ್ತದೆ. ಹಿಂದುತ್ವ, ಭಯೋತ್ಪಾದನೆ ಮತ್ತು ಜಾತಿ ಸಂಘರ್ಷಗಳು, ಜನಾಂಗೀಯ ಕಲಹಗಳು ಈ ಆಯಾಮವನ್ನು ಪ್ರತಿನಿಧಿಸುತ್ತವೆ. ಇಲ್ಲಿ ಆಧುನಿಕ ನಾಗರಿಕ ಸಮಾಜ ಎದುರಿಸುತ್ತಿರುವ ಮೂಲಭೂತ ಪ್ರಶ್ನೆ ಎಂದರೆ ಹಿಂಸೆಯನ್ನು ಪರಿಭಾವಿಸುವ ಬಗೆ ಮತ್ತು ವ್ಯಾಖ್ಯಾನಿಸುವ ರೀತಿ. ಇತ್ತೀಚಿನ ರಾಜಕೀಯ, ಸಾಂಸ್ಕøತಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಿಂಸೆ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಎಲ್ಲ ದಿಕ್ಕುಗಳಿಂದಲೂ ಆವರಿಸಿರುವುದನ್ನು ಗಮನಿಸಬಹುದು.

ಒಂದು ರೀತಿಯಲ್ಲಿ ಆಧುನಿಕತೆ ಮತ್ತು ವಿದ್ಯುನ್ಮಾನ ಯುಗದ ತಂತ್ರಜ್ಞಾನಗಳು ಸುಶಿಕ್ಷಿತ ಸಮಾಜವನ್ನು ಹಿಂಸೆಯ ತಾಣವನ್ನಾಗಿ ಮಾಡುತ್ತಿವೆ. ಹಿಂಸೆಯನ್ನು ಪ್ರತಿರೋಧಿಸುವ ಮನಸುಗಳು ಮತ್ತೊಂದು ಹಿಂಸೆಯನ್ನು ಮುಖಾಮುಖಿಯಾಗಿಸುವ ಪ್ರಯತ್ನಗಳನ್ನು ಸಾಮಾಜಿಕ ತಾಣಗಳಲ್ಲಿ ಹೇರಳವಾಗಿ ಕಾಣಬಹುದು. ನಿದರ್ಶನ ರೂಪದಲ್ಲಿ ಹೇಳುವುದಾದರೆ, ಕಾಶ್ಮೀರದಲ್ಲಿ ನಡೆಯುವ ಒಂದು ಅಮಾನವೀಯ ಹತ್ಯೆಯನ್ನು ಖಂಡಿಸುವ ಬರಹಕ್ಕೆ ಸ್ಪಂದಿಸುವ ಕೆಲವು ಮನಸುಗಳು ಮತ್ತೆಲ್ಲೋ ನಡೆದ ಮತ್ತೊಂದು ಕೋಮಿನ ವ್ಯಕ್ತಿಯ ಹತ್ಯೆಯನ್ನು ಮುಂದಿರಿಸಿ ಇದಕ್ಕೇನನ್ನುತ್ತೀರಿ ಎಂದು ಕೇಳುತ್ತವೆ ? ಇಲ್ಲಿ ಅನಾಗರಿಕತೆ ಮತ್ತು ಪ್ರಜ್ಞಾಹೀನತೆಯನ್ನು ಸಂವೇದನೆಯ ನೆಲೆಯಲ್ಲಿ ಪ್ರಸ್ತುತಪಡಿಸುವ ವಿಕೃತ ಮನೋಭಾವವನ್ನು ಕಾಣಬಹುದು.

ಅಂದರೆ ಸಾವು ನಮ್ಮ ಪ್ರಜ್ಞೆಯನ್ನು ವಿಚಲಿತಗೊಳಿಸುತ್ತಿಲ್ಲ. ಮಾನವೀಯತೆಯ ಎಲ್ಲೆ ಮೀರಿದ ಕ್ರೌರ್ಯ ನಮ್ಮ ನಿದ್ದೆ ಕೆಡಿಸುತ್ತಿಲ್ಲ. ದೌರ್ಜನ್ಯಗಳು ನಮ್ಮ ಮನ ಕಲಕುತ್ತಿಲ್ಲ. ಅಲ್ಲೂ ಒಂದು ಜೀವ ಬಲಿಯಾಗಿದೆಯಲ್ಲವೇ ಮತ್ತೇಕೆ ಈ ಜೀವಕ್ಕೆ ಸಾಂತ್ವನ ಎನ್ನುವ ವಿಕೃತ ತಾತ್ವಿಕ ನಿಲುವು ವ್ಯಾಪಕವಾಗುತ್ತಿರುವಂತೆಯೇ ಪ್ರಜ್ಞಾವಂತ ಸಮಾಜದ ಮಾನ್ಯತೆಯನ್ನೂ ಪಡೆಯುತ್ತಿದೆ. ಹತ್ಯೆಗೀಡಾದ ವ್ಯಕ್ತಿಯ ಅಸ್ತಿತ್ವಕ್ಕಿಂತಲೂ ಹತ್ಯೆ ಮಾಡಿದ ವ್ಯಕ್ತಿಯ ಅಸ್ಮಿತೆ ಸಾರ್ವಜನಿಕ ಚರ್ಚೆಯ ಕೇಂದ್ರ ಬಿಂದು ಆಗುತ್ತದೆ. ಹಾಗಾಗಿ ಹಿಂಸೆ ಮಾನವನ ಹೃದಯಾಂತರಾಳದ ವಿಕೃತಿಯಾಗಿ ಕಾಣದೆ ಸಾರ್ವಜನಿಕ ವಿದ್ಯಮಾನವಾಗಿ ಕಾಣುತ್ತದೆ. ಇಂತಹ ವಿಷಮ ಪರಿಸ್ಥಿತಿಯನ್ನು ಸಾವಿನ ದಲ್ಲಾಳಿಗಳು, ಸಾವನ್ನು ಸಂಭ್ರಮಿಸುವ ವಿಕೃತ ಮನಸುಗಳು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಬಳಸಿಕೊಳ್ಳುತ್ತಿರುವುದನ್ನು ವಿಷಾದದಿಂದ ಒಪ್ಪಲೇಬೇಕಿದೆ.
ಈಗ ಹೇಳಿ ನಾವು ನಾಗರಿಕ ಸಮಾಜದ ಪ್ರತಿನಿಧಿಗಳಾಗಲು ಅರ್ಹರೇ ?
-0-0-0-0

Leave a Reply

Your email address will not be published.