ವ್ಯಂಗ್ಯಚಿತ್ರಗಳಲ್ಲಿ ದೇವರಾಜ ಅರಸು ಬಿಂಬ

- ಡಾ. ಎಸ್.ವೆಂಕಟೇಶ್. ಚಿತ್ರಕೃಪೆ: ಶ್ರೀಮತಿ ರತ್ನಾಮೂರ್ತಿ

ದೇವರಾಜ ಅರಸು (1915-1982) ಜನ್ಮಶತಮಾನೋತ್ಸವ
Urs

ಬಿ. ವಿ. ರಾಮಮೂರ್ತಿ(1932-2004) ಆರ್. ಕೆ. ಲಕ್ಷ್ಮಣರಂತೆ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ, ಅದ್ವಿತೀಯ, ಅಭಿಜಾತ ಕಾರ್ಟೂನಿಸ್ಟ್. ತಮ್ಮ ಅಂಕುಡೊಂಕಾದ, ಹರಿತ, ಖಚಿತ ರೇಖೆಗಳೊಂದಿಗೆ ನವಿರಾಗಿ ಕಚಗುಳಿಯಿಡುವ, ತಿಳಿಹಾಸ್ಯದೊಂದಿಗೆ ಪ್ರಹಾರ ಮಾಡುತ್ತಿದ್ದ ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ಬಹುಬೇಗ ಕನ್ನಡ ಜನರ ಮನಗೆದ್ದವು. ಆರಂಭದಲ್ಲಿ ಶೇಷಪ್ಪನವರ ‘ಕಿಡಿ’, ರಾಶಿಯವರ ‘ಕೊರವಂಜಿ’ ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಬರೆಯಲಾರಂಭಿಸಿ, ಕೊನೆಗೆ 1955 ರಲ್ಲಿ ‘ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ’ ಬಳಗವನ್ನು ಸೇರಿ ಕಳೆದ ಅರ್ಧಶತಮಾನದಿಂದ ಸಾಮಾನ್ಯ ಓದುಗರನ್ನು ರಂಜಿಸುತ್ತಾ, ರಾಜಕಾರಣಿಗಳನ್ನು ಕೆಣಕುತ್ತಾ, ರಾಜಕೀಯ ಪುಡಾರಿಗಳ, ಆಡಳಿತದ ಚುಕ್ಕಾಣಿ ಹಿಡಿದ ಅಧಿಕಾರಸ್ಥರ ಹಮ್ಮಿನ ಗುಳ್ಳೆಗಳನ್ನು ತಮ್ಮ ಕುಂಚದ ಕೊಕ್ಕೆಯಿಂದ ಚುಚ್ಚುತ್ತಾ, ಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುತ್ತಾ, ಸಮಾಜಕ್ಕೆ ತಮ್ಮ ಚಿತ್ರಗಳ ಮೂಲಕವೇ ಕನ್ನಡಿ ಹಿಡಿಯುತ್ತ ಜಗತ್ತಿನ ಗಮನ ಸೆಳೆದಿದ್ದರು.
023 022 017 018 019 020 021 03 0405
ರಾಮಮೂರ್ತಿಯವರು ಕಳೆದ ಶತಮಾನದ 60-80ರ ದಶಕಗಳಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ ವ್ಯಂಗ್ಯಚಿತ್ರಕಾರರಾಗಿದ್ದರು. ಈ ಕಾಲವು ಅವರ ರಾಜಕೀಯ ವ್ಯಂಗ್ಯಚಿತ್ರಗಳಿಗೆ ಹೇಳಿಮಾಡಿಸಿದಂತಿತ್ತು. ರಾಷ್ಟ್ರ ರಾಜಕಾರಣದಲ್ಲಿ ನೆಹರೂ ಅವರ ನಂತರ ಬದಲಾದ ಕಾಂಗ್ರೆಸ್ ಪಕ್ಷದ ದಿಕ್ಕು, ನಿಲುವು, ರಾಜಕೀಯ ಪುಡಾರಿಗಳು, ಇಂದಿರಾಗಾಂಧಿ ಅಧಿಕಾರಕ್ಕೆ ಬಂದುದು, ಅವರ ನೀತಿ-ನಿಲುವುಗಳು, ಸರ್ವಾಧಿಕಾರ, ಕಾಂಗ್ರೆಸ್‍ನಲ್ಲಿ ಒಡಕು, ತುರ್ತು ಪರಿಸ್ಥಿತಿ ಘೋಷಣೆ, ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದಾಗಿನ ರಾಜಕೀಯ ಪರಿಸ್ಥಿತಿ, ಜನತಾ ಪಕ್ಷದ ಉಗಮ, ವಚರ್Àಸ್ಸು, ದಿನನಿತ್ಯದ ವಿರೋಧಾಭಾಸಗಳು, 06ಪ್ರಹಸನಗಳು ಎಲ್ಲವೂ ಅವರ ಅಭಿವ್ಯಕ್ತಿಗೆ ಹೂರಣ(ಗ್ರಾಸ) ಒದಗಿಸಿದವು.

ತುಂಟತನ, ಹರಿತ ನಾಲಗೆ, ಸೂಕ್ಷ್ಮರೇಖೆಗಳೊಂದಿಗೇ ಕೆಲ ವ್ಯಂಗ್ಯಚಿತ್ರಕಾರರು ಕೆಲವು ರಾಜಕಾರಣಿಗಳ ಬಗ್ಗೆ ವಿಶೇಷ ವ್ಯಾಮೋಹವಿಟ್ಟುಕೊಳ್ಳುವುದೂ ಇದೆ. ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್‍ಪಿಳ್ಳೆ ಅವರಿಗೆ ಪಂಡಿತ್ ಜವಾಹರಲಾಲ್ ನೆಹರೂ ಅವರ ಮೇಲೆ ಮೋಹವಿದ್ದಂತೆ ಬಿ.ವಿ.ರಾಮಮೂರ್ತಿ ಅವರಿಗೆ ಕೆಲವೊಂದು ರಾಜಕಾರಣಿಗಳ ಬಗ್ಗೆ ಹೆಚ್ಚಿನ ವ್ಯಾಮೋಹವಿದ್ದಂತೆ ಕಾಣುತ್ತದೆ. ವ್ಯಂಗ್ಯದ ಹರಿತ ರೇಖೆಗಳಲ್ಲಿ ಮಣಿಸಿದಷ್ಟೂ ಮಣಿಯುವ ರಾಜಕಾರಣಿಗಳೆಂದರೆ ವ್ಯಂಗ್ಯಚಿತ್ರಕಾರರಿಗೆ ಅತೀವ ಮಮತೆ. ಬೆಂಬಿಡದ ವ್ಯಾಮೋಹ. ಅಂತೆಯೇ ರಾಮಮೂರ್ತಿಯವರು ಇಂಥ ರಾಜಕಾರಣಿಗಳನ್ನು ನವರಸಾಭಿನಯದ ರೇಖೆಗಳಲ್ಲೇ ಕುಣಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಅವರು ರಚಿಸಿರುವ ರಾಷ್ಟ್ರ ರಾಜಕಾರಣಿ ಇಂದಿರಾಗಾಂಧಿ ಮತ್ತು ರಾಜ್ಯ ರಾಜಕಾರಣದ ದೇವರಾಜ ಅರಸು ಅವರ ವ್ಯಂಗ್ಯಚಿತ್ರಗಳನ್ನು ಗಮನಿಸಬಹುದು.

ಗರೀಬಿಯನ್ನು ಹಟಾಯಿಸುವ ಕೂಗು ಹಾಕುತ್ತಾ, ಅಂಗ-ವಂಗ-ಕಳಿಂಗ-ಕಾಶ್ಮೀರವೇ ಮುಂತಾದ ಛಪ್ಪನ್ನಾರು ರಾಜ್ಯಗಳ ಸರ್ಕಸ್ ಕಂಪೆನಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ 07ಇಂದಿರಾಗಾಂಧಿಯವರ ಏಕಪಾತ್ರಾಭಿನಯವನ್ನು ಮೂರ್ತಿಯವರು ಯಶಸ್ವಿಯಾಗಿ ರಚಿಸಿದ್ದಾರೆ. ಅಂತೆಯೇ ದೇವರಾಜ ಅರಸು ಅವರಿಗೆ ಇಂದಿರಾಗಾಂಧಿಯವರ ಬಗ್ಗೆಯಿದ್ದ ನಿಷ್ಠೆ, ಅವರಿಗೆ ತುರ್ತು ಪರಿಸ್ಥಿತಿಯ ನಂತರ ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ರಾಜಕೀಯದಲ್ಲಿ ಮರುಹುಟ್ಟು ನೀಡಿದ್ದು, ಇಂದಿರಾ ಗಾಂಧಿಗೆ ನಿಷ್ಠೆ ತೋರದೆ ಅವರ ವಿರುದ್ಧವೇ ಚುನಾವಣೆಗೆ ನಿಂತಿದ್ದ ಅವರದೇ ಪಕ್ಷದ ವೀರೇಂದ್ರ ಪಾಟೀಲರನ್ನು ದೇವರಾಜ ಅರಸು ಅವರು ಚುನಾವಣೆಯಲ್ಲಿ ಸೋಲಿಸುವ ಮೂಲಕ ಮಣಿಸಿದ್ದು, ಆ ಮೂಲಕ ಇಂದಿರಾಗಾಂಧಿ ರಾಜಕೀಯದಲ್ಲಿ ಮತ್ತೆ ತಲೆಯೆತ್ತಿ ನಡೆಯುವಂತೆ ಮಾಡಿದ್ದು, ಅದೇ ಇಂದಿರಾಗಾಂಧಿ ರಾಜಕೀಯದಲ್ಲಿ ಬಲಿತ ನಂತರ ತಮ್ಮನ್ನು ತೇಜೋವಧೆ ಮಾಡಲು ಯತ್ನಿಸಿದಾಗ ಸ್ವಾಭಿಮಾನದಿಂದ ಅವರಿಂದ ದೂರವಾದದ್ದು, ಹೀಗೆ ಎಲ್ಲ ಬೆಳವಣಿಗೆಯನ್ನು ಮೂರ್ತಿಯವರು ನಿಜವಾದ ವಿರೋಧ ಪಕ್ಷದಂತೆ ತಮ್ಮದೇ ಆದ ವ್ಯಂಗ್ಯನೋಟದಲ್ಲಿ, ನೈತಿಕ ನಿಲುವಿನಲ್ಲಿ ನೋಡಿ, ಕರ್ನಾಟಕದ ಜನತೆಯ ಅವ್ಯಕ್ತ ಭಾವಗಳಿಗೆ ದಿನನಿತ್ಯ ಮಾತು ಕೊಟ್ಟಿದ್ದಾರೆ. ಹಾಗೆ ಮಾತು ನೀಡುವಾಗ ವ್ಯಂಗ್ಯಚಿತ್ರದ ಚೌಕಟ್ಟಿಗೆ ಹಲವು ವಿಶಿಷ್ಠ ಉಪಮೆಗಳನ್ನು ಸೇರಿಸಿದ್ದಾರೆ. ಅಂದರೆ ತಮ್ಮ 08ಟೀಕೆ, ವಿಡಂಬನೆಗಳಿಗೆ ಪೂರಕವಾಗಿ ಪೌರಾಣಿಕ ಪಾತ್ರಗಳನ್ನು, ಪ್ರಸಂಗಗಳನ್ನು, ಇತಿಹಾಸವನ್ನು, ಐತಿಹ್ಯಗಳನ್ನು, ನಂಬಿಕೆ-ಆಚರಣೆಗಳನ್ನು, ಕ್ರೀಡೆ-ಸಾಹಿತ್ಯವನ್ನು ಸೃಜನಶೀಲವಾಗಿ ಬಳಸಿಕೊಂಡು ಪ್ರಸ್ತುತ ಪ್ರಸಂಗಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಅಂತೆಯೇ ವಿವರಗಳಲ್ಲಿ ಕಳೆದುಹೋಗದ ಎಚ್ಚರ ಕೂಡ ಅವರದ್ದು. ಇದಕ್ಕೆ ಉದಾಹರಣೆಯಾಗಿ ಇಲ್ಲಿ ನೀಡಿರುವ ಚಿತ್ರಗಳನ್ನೇ ಗಮನಿಸಿ.
ವ್ಯಂಗ್ಯಭಾವಚಿತ್ರ ಕಲೆಯಲ್ಲಿ ಮೂಗಿನ ವಿಕೃತಿಗೇ ಪ್ರಾಧಾನ್ಯ. ಚಿತ್ರಕಾರರು ಎಲ್ಲಕ್ಕಿಂತ ಮುಂಚೆ ಮೂಗಿನ ಮೇಲೆಯೇ ದಾಳಿ ಮಾಡುತ್ತಾರೆ. ಮೂಗಿನ ಅತೀಶಯೀಕರಣದ ಮೂಲಕವೇ ರಾಜಕಾರಣಿಗಳ ಅಧಿಕಾರದಾಹದ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಅಂತೆಯೇ ರಾಮಮೂರ್ತಿಯವರು ದೇವರಾಜ ಅರಸು 09ಅವರ ದಪ್ಪ ಮೂಗು ಮತ್ತು ಧಡೂತಿ ಶರೀರ, ಇಂದಿರಾಗಾಂಧಿಯವರ ಬಿಳಿಕೂದಲು ಮತ್ತು ಚೂಪು ಮೂಗನ್ನು ಕೆಲವೇ ವ್ಯಂಗ್ಯದ ಮೊನಚು ರೇಖೆಗಳಲ್ಲಿ ರಚಿಸುವ ಮೂಲಕ ಅವರ ಒಟ್ಟು ವ್ಯಕ್ತಿತ್ವವನ್ನು ಮುಖ್ಯವಾಗಿ ಬಾಹ್ಯ ವ್ಯಕ್ತಿತ್ವವನ್ನು ಸೆರೆಹಿಡಿಯಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ.
‘ಅರಸುಗಳಿಗಿದು ವೀರ?’ ಎಂ010ಬ ತಲೆಬರಹವಿರುವ ಈ ಚಿತ್ರವನ್ನು ನೋಡಿ. ಇದು ಇಂದಿರಾ ಗಾಂಧೀಯವರು ತುರ್ತು ಪರಿಸ್ಥಿತಿ ಘೋಷಿಸಿದ ನಂತರ, ಅಂದರೆ 1977 ರಲ್ಲಿ ಕಾಂಗ್ರೆಸ್ ಒಡೆದು, ಎಲ್ಲರೂ ಅವರ ವಿರುದ್ಧ ನಿಂತಿದ್ದಾಗ ರಚಿಸಿದ ಚಿತ್ರ. ಆಗ ಇಂದಿರಾಗಾಂಧಿಯವರ ಜೊತೆ ಉಳಿದಿದ್ದು ನಮ್ಮ ಕರ್ನಾಟಕದ ದೇವರಾಜ ಅರಸು ಮಾತ್ರ. ಈ ರಾಜಕೀಯ ವಿದ್ಯಮಾನವನ್ನು ಮೂರ್ತಿಯವರು ವ್ಯಾಖ್ಯಾನಿಸಿದ್ದು ಹೀಗೆ. ಪಲ್ಲಕ್ಕಿಯೊಳಗೆ ಇಂದಿರಾಗಾಂಧಿ ಕುಳಿತಿದ್ದಾರೆ. ನಾಲ್ಕಾರು ಜನ ಹೊರಬೇಕಾಗಿದ್ದ ಆ ಪಲ್ಲಕ್ಕಿಯನ್ನು ದೇವರಾಜ ಅರಸು ಒಬ್ಬರೇ ಏಕಾಂಗಿಯಾಗಿ, ಕಷ್ಟಪಟ್ಟು, ತಮ್ಮ ಶಕ್ತಿಮೀರಿ ಎಳೆದುಕೊಂಡು ಹೊರಟಿದ್ದಾರೆ. ಅದಕ್ಕೊಂದು ಶೀರ್ಷಿಕೆ ‘ಅರಸುಗಳಿಗಿದು ವೀರ ?’. ಹತ್ತಾರು ಪುಟಗಳ ಲೇಖನ, ಸಂಪಾದಕೀಯ ಸಾರುವ ಸಂದೇಶವನ್ನು ಸಮರ್ಪಕವಾಗಿ ಈ ಚಿಕ್ಕದೊಂದು ವ್ಯಂಗ್ಯಚಿತ್ರವು ಓದುಗನಿಗೆ ಮುಟ್ಟಿಸುತ್ತದೆ.
ಹೀಗೆ ದಿನನಿತ್ಯದ ಸಾಮಾಜಿಕ ಮತ್ತು ರಾಜಕೀಯ ವಿಮರ್ಶೆಗೆ ನಿರಂತರ ಒಳನೋಟಗಳು ಹಾಗೂ ಕ್ಷಿಪ್ರ ವ್ಯಾಖ್ಯಾನಗಳನ್ನು ಕೊಡುತ್ತಿದ್ದ ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ಕರ್ನಾಟಕ ಸಂಸ್ಕøತಿಗೆ ಅಮೂಲ್ಯ ಕೊಡುಗೆಗಳಾಗಿವೆ. ಮೂರ್ತಿಯವರ ಚಿತ್ರಗಳ ಇನ್ನೊಂದು ಅತಿದೊಡ್ಡ ಗುಣವೆಂದರೆ ನೋಡಿಸಿಕೊಳ್ಳುವ ಸರಳತೆ. ಆ ಮೂಲಕ ಅವರು ತಮ್ಮ ಅಸ್ಮಿತೆಯನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೆ ಅವರ ಚಿತ್ರಗಳು ಲಗೇಜಿಲ್ಲದ ಪಯಣದಂತೆ ಹಾಯಾಗಿರುತ್ತವೆ, ಮುಕ್ತವಾಗಿರುತ್ತವೆ. ಕಂಡೂ ಕಾಣದಂತಿರುವ ಸತ್ಯದ ಹುಡುಕಾಟ ಇವರ ಚಿತ್ರಗಳ ಆಶಯ. ಇದು ಅವರ ಎಲ್ಲ ವ್ಯಂಗ್ಯಚಿತ್ರಗಳಲ್ಲಿ ಅನುರಣಗೊಂಡಿದೆ. ಕೊನೆಯದಾಗಿ ಟಿ.ಪಿ.ಕೈಲಾಸಂ 01ಅವರು ಹೇಳುವಂತೆ ‘ವ್ಯಂಗ್ಯಚಿತ್ರಗಳಿಗೆ ವಿವರಣೆ ಕೊಡೋದು ಮಹಾಪಾತಕ. ಯಾವ ವಿವರಣೆಯೂ ಇಲ್ಲದೆ ಅವು ಅರ್ಥವಾಗಬೇಕು’. ಈ ದೃಷ್ಟಿಯಿಂದಲೂ ಬಿ.ವಿ.ರಾಮಮೂರ್ತಿ ಅವರು ನಿಜಕ್ಕೂ ಒಬ್ಬ ಶ್ರೇಷ್ಠ ವ್ಯಂಗ್ಯಚಿತ್ರಕಾರ.

Leave a Reply

Your email address will not be published.