ವೈದ್ಯಕೀಯ ವೃತ್ತಿಯೇ ಕಾರ್ಪೋರೇಟ್ ವಶ

ನಾ ದಿವಾಕರ

ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯ ಪರ ಮತ್ತು ವಿರೋಧಿ ನಿಲುವುಗಳನ್ನು ವಸ್ತುನಿಷ್ಠ ನೆಲೆಯಲ್ಲಿ ವಿಮರ್ಶಿಸಬೇಕಾಗುತ್ತದೆ. ನಮ್ಮ ಆಡಳಿತ ವ್ಯವಸ್ಥೆ, ಆಳುವ ವರ್ಗಗಳ ಧೋರಣೆ ಮತ್ತು ಅಧಿಕಾರಸ್ಥ ಪಕ್ಷಗಳ ಕಾರ್ಯವೈಖರಿಯನ್ನು ಒಂದು ಕಲ್ಪಿತ ನಿದರ್ಶನದ ಮೂಲಕ ಪ್ರಸ್ತುಪಡಿಸಬಹುದು. “ ಒಬ್ಬ ವ್ಯಕ್ತಿಗೆ ಮಿದುಳು ನಿಷ್ಕ್ರಿಯವಾಗಿದೆ. ಕೆಲವೇ ದಿನಗಳಲ್ಲಿ ಆ ವ್ಯಕ್ತಿಯ ಮಿದುಳು ಸಾಯುವ ಸ್ಥಿತಿ ತಲುಪುತ್ತದೆ. ಮಧುಮೇಹ ವ್ಯಾಧಿಯಿಂದ ಬಳಲುತ್ತಿರುವ ಅದೇ ವ್ಯಕ್ತಿಯ ಕಾಲು ಗ್ಯಾಂಗ್ರಿನ್‍ಗೆ ತುತ್ತಾಗಿದೆ ” ಈ ಸಂದರ್ಭದಲ್ಲಿ ವ್ಯಕ್ತಿಯ ಕಾಲು ಕತ್ತರಿಸಿ ಜೀವ ಉಳಿಸಬೇಕೋ ಅಥವಾ ಸಾಯುತ್ತಿರುವ ಮಿದುಳಿಗೆ ಚಿಕಿತ್ಸೆ ನೀಡಬೇಕೋ ? ನಮ್ಮ ಆಡಳಿತ ವ್ಯವಸ್ಥೆಯನ್ನು ವೈದ್ಯರ ಸ್ಥಾನದಲ್ಲಿ ಕಲ್ಪಿಸಿಕೊಂಡರೆ, ಮಿದುಳಿನ ತಂಟೆಗೇ ಹೋಗದೆ ಕಾಲು ಕತ್ತರಿಸಿ , ಮಹತ್ತರ ಸಾಧನೆ ಮಾಡಿದಂತೆ ಸುಮ್ಮನಾಗಬಹುದು. ರಾಜ್ಯ ಸರ್ಕಾರದ ಈ ಮಸೂದೆಯನ್ನೂ ಈ ರೂಪಕದ ನೆಲೆಯಲ್ಲೇ ನೋಡಬಹುದಲ್ಲವೇ ?

ನಿಜ, ವೈದ್ಯಕೀಯ ಕ್ಷೇತ್ರದ ಖಾಸಗೀಕರಣ, ಔಷಧಿ ತಯಾರಿಕೆಯ ಕಾರ್ಪೋರೇಟ್ ಸಾಮ್ರಾಜ್ಯ ಮತ್ತು ಖಾಸಗಿ ವೈದ್ಯರ ಕಾರ್ಪೋರೇಟ್ ಧೋರಣೆ ಒಂದು ಸ್ವಾಸ್ಥ್ಯ ಸಮಾಜದಲ್ಲಿ ಸ್ವಾಗತಾರ್ಹವಲ್ಲ. ಹಾಗೆಯೇ ವೈದ್ಯಕೀಯ ಶಿಕ್ಷಣ ಮತ್ತು ಸಮಗ್ರ ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣವೂ ಸ್ವಾಗತಾರ್ಹವಲ್ಲ. ಬಂಡವಾಳ ತನ್ನ ಅಧಿಪತ್ಯ ಸಾಧಿಸುವ ಎಲ್ಲ ಕ್ಷೇತ್ರಗಳಲ್ಲೂ ಲಾಭಗಳಿಕೆ ಮತ್ತು ಸಂಪತ್ತಿನ ಕ್ರೋಢೀಕರಣ ಪ್ರಧಾನವಾಗುತ್ತದೆ. ಇದು ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯ ಒಂದು ಮುಖ್ಯ ಲಕ್ಷಣ. ಖಾಸಗಿ ವೈದ್ಯರು ಅಥವಾ ಖಾಸಗಿ ಆಸ್ಪತ್ರೆ ಎಂದಾಕ್ಷಣ ಧನದಾಹಿಗಳು, ಲಾಭಕೋರರು, ಧನಪೀಪಾಸುಗಳು ಎಂದು ಭಾವಿಸುವುದು ತಪ್ಪಾಗುತ್ತದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಅಕ್ರಮಗಳನ್ನು, ಲಾಭಕೋರ ಚಟುವಟಿಕೆಗಳನ್ನು , ವ್ಯಾಪಾರಿ ಧೋರಣೆಯನ್ನು ನಿರ್ಲಕ್ಷಿಸುವುದೂ ಅಪರಾಧವಾಗುತ್ತದೆ. ಸತ್ತ ವ್ಯಕ್ತಿಗೆ ಕೃತಕ ಆಮ್ಲಜನಕ ನೀಡುವಂತೆ ಮಾಡಿ ಮೂರು ನಾಲ್ಕು ದಿನಗಳ ತುರ್ತು ಚಿಕಿತ್ಸಾ ಘಟಕದ ಶುಲ್ಕ ವಸೂಲಿ ಮಾಡುವ ಮಟ್ಟಿಗೆ ಖಾಸಗಿ ಆಸ್ಪತ್ರೆಗಳು ವಾಣಿಜ್ಯೀಕರಣಗೊಂಡಿರುವುದು ಸತ್ಯ. ಹಾಗೆಯೇ ವೈದ್ಯರಿಗೆ, ಸರ್ಜನ್‍ಗಳಿಗೆ ನೀಡುವ ವೇತನದ ಹಿಂದೆ ಇಂತಿಷ್ಟು ಶಸ್ತ್ರ ಚಿಕಿತ್ಸೆ, ಇಂತಿಷ್ಟು ತಪಾಸಣೆ, ಇಂತಿಷ್ಟು ಎಂಅರ್‍ಐ ಇರಬೇಕೆಂಬ ಷರತ್ತುಗಳನ್ನು ಹೇರುವ ಪ್ರವೃತ್ತಿ ಇರುವುದೂ ಸತ್ಯ.

ಈ ಸತ್ಯಾಸತ್ಯತೆಗಳ ನಡುವೆಯೇ ವೈದ್ಯೋ ನಾರಾಯಣೋ ಹರಿ ಎಂದು ತಮ್ಮ ಕಾರ್ಯನಿರ್ವಹಿಸುವ ದಕ್ಷ ವೈದ್ಯರು ಇರುವುದೂ ಅಷ್ಟೇ ಸತ್ಯ. ಹೀಗಿರುವಾಗ ವೈದ್ಯಕೀಯ ಕ್ಷೇತ್ರಕ್ಕೆ ತಗುಲಿರುವ ರೋಗದ ಲಕ್ಷಣಗಳನ್ನು ಕಂಡುಹಿಡಿಯುವುದಾದರೂ ಹೇಗೆ ?

ವೈದ್ಯಕೀಯ ಕ್ಷೇತ್ರವಾಗಲೀ, ಶಿಕ್ಷಣ ಕ್ಷೇತ್ರವಾಗಲಿ ಅಥವಾ ಸಾರ್ವಜನಿಕ ಜೀವನದ ಯಾವುದೇ ಕ್ಷೇತ್ರವಾಗಲಿ ವೃತ್ತಿ ಧರ್ಮ ಮತ್ತು ಮನೋಧರ್ಮದ ತಾಕಲಾಟಗಳ ನಡುವೆ ಮಾನವೀಯ ಸಂವೇದನೆ ಮುಖ್ಯವಾದಾಗ ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ದುರಂತ ಎಂದರೆ ಭಾರತೀಯ ಸಮಾಜದಲ್ಲಿ ಈ ಸಂವೇದನೆಗೆ ಕಿಂಚಿತ್ತೂ ಜಾಗ ದೊರೆಯುವುದಿಲ್ಲ. ವೈದ್ಯರು, ವಿಶೇಷವಾಗಿ ಖಾಸಗಿ ವೈದ್ಯರು ಜನಸಾಮಾನ್ಯರನ್ನು ಅನಗತ್ಯ ತಪಾಸಣೆಗಳಿಗೆ ಒಳಪಡಿಸುವುದು ಗುಟ್ಟಿನ ಮಾತೇನಲ್ಲ. ಮಾನವ ಸಮಾಜದಲ್ಲಿ ಶತಮಾನಗಳಿಂದಲೂ ಕಂಡುಬರುವ ಒಂದು ವಿದ್ಯಮಾನ ಎಂದರೆ ಅಸಹಾಯಕತೆ ಮತ್ತು ಅನಿವಾರ್ಯತೆಯ ದುರ್ಬಳಕೆ. ಆರೋಗ್ಯ ಕ್ಷೇತ್ರದಲ್ಲೂ ಇದು ಸತ್ಯ. ಅನಾರೋಗ್ಯಪೀಡಿತ ಜನರ ಆತಂಕ, ಹತಾಶೆ ಮತ್ತು ಅನಿವಾರ್ಯತೆಗಳು ವೈದ್ಯಕೀಯ ಉದ್ಯಮದ ಲಾಭಗಳಿಕೆಯ ಮಾನದಂಡಗಳಾಗಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯ. ಇದಕ್ಕೆ ಕಾರಣ ಏನು ? ಈ ಅವ್ಯವಸ್ಥೆಗೆ ವೈದ್ಯರನ್ನು ಮಾತ್ರ ದೂಷಿಸಲಾಗುವುದಿಲ್ಲ.

ವೈದ್ಯಕೀಯ ವೃತ್ತಿಯೇ ವಾಣೀಜ್ಯೀಕರಣಕ್ಕೊಳಗಾಗಿ ಕಾರ್ಪೋರೇಟ್ ವಶವಾಗುತ್ತಿದೆ. ವೈದ್ಯಕೀಯ ಪದವಿ ಪಡೆಯಲು ಬೇಕಿರುವುದು ಅಗತ್ಯ ಪ್ರತಿಭೆ, ಬುದ್ಧಿಮತ್ತೆ, ಬದ್ಧತೆ ಮತ್ತು ಕೊಂಚ ಹಣ. ಆದರೆ ನವ ಉದಾರವಾದದ ಸಂದರ್ಭದಲ್ಲಿ ಬೇಕಿರುವುದು ಬಂಡವಾಳ ಮಾತ್ರ. ಸಹಮಾನವರ ಸಾವು ಬದುಕಿನೊಡನೆ ಹೋರಾಡುತ್ತಲೇ ಜೀವ ಸವೆಸುವ ಒಂದು ವೃತ್ತಿಯನ್ನು ಪ್ರವೇಶಿಸಲು ಶಿಕ್ಷಣ ಎಂಬ ಮಾರುಕಟ್ಟೆಯಲ್ಲಿ , ಕಾರ್ಪೋರೇಟ್ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಾದ ಪರಿಸ್ಥಿತಿಯನ್ನು ನಾವಿಂದು ಎದುರಿಸುತ್ತಿದ್ದೇವೆ. ತಾನು ಹೂಡಿದ ಬಂಡವಾಳವನ್ನು ಲಾಭದ ಸಮೇತ ಹಿಂದಿರುಗಿಪಡೆಯುವುದು ವ್ಯಾಪಾರಿ ಧರ್ಮ. ಈ ಬಂಡವಾಳದ ನಿಯಂತ್ರಣ ಕಾರ್ಪೋರೇಟ್ ಉದ್ದಿಮೆಯ ಕೈವಶವಾದಾಗ ಮಾನವೀಯತೆ ನೇಪಥ್ಯಕ್ಕೆ ಸರಿಯುತ್ತದೆ. ವೈದ್ಯರು ಪಗಡೆಯ ದಾಳಗಳಂತಾಗುತ್ತಾರೆ. ತಮ್ಮ ಅಸ್ತಿತ್ವ ಮತ್ತು ಬದುಕಿನ ಸ್ವಾರ್ಥತೆಗೆ ಬಲಿಯಾಗುತ್ತಾರೆ. ರೋಗಿ ಮಾರುಕಟ್ಟೆಯ ಸರಕಿನಂತೆ ಕಾಣುತ್ತಾನೆ. ರೋಗಗಳು ಕಚ್ಚಾವಸ್ತುಗಳಾಗುತ್ತವೆ. ವೈದ್ಯಕೀಯ ಮಾರುಕಟ್ಟೆ ಒಂದು ಸಾಮ್ರಾಜ್ಯವಾಗುತ್ತದೆ. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಮಸೂದೆ ಈ ಅಂಶವನ್ನು ಪರಿಗಣಿಸಿದೆಯೇ ? ಖಂಡಿತವಾಗಿಯೂ ಇಲ್ಲ.

ಇಲ್ಲಿ ಕಾಯ್ದೆ ಕಾನೂನುಗಳಿಗಿಂತಲೂ ಸಾಮಾಜಿಕ ಮೌಲ್ಯಗಳು ಮತ್ತು ಮಾನವ ಸಂವೇದನೆ ಮುಖ್ಯವಾಗುತ್ತದೆ. ಸರ್ಕಾರ ಸರಿಪಡಿಸಬೇಕಿರುವುದು ವೈದ್ಯರನ್ನಲ್ಲ, ವೈದ್ಯವೃತ್ತಿಯ ಮೇಲೆ ತಮ್ಮ ಅಧಿಪತ್ಯ ಸಾಧಿಸಿರುವ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು. ಒಬ್ಬ ವೈದ್ಯ ಮಾಲೀಕನ ಒತ್ತಡಕ್ಕೊಳಗಾಗಿಯೋ, ವ್ಯಕ್ತಿಗತ ಜೀವನದ ಒತ್ತಡಗಳಿಗೆ ಬಲಿಯಾಗಿಯೋ ಅಥವಾ ದುರಾಸೆಗೆ ಬಲಿಯಾಗಿಯೋ ರೋಗಿಯನ್ನು ಮಾರುಕಟ್ಟೆಯ ಸರಕಿನಂತೆ ಪರಿಗಣಿಸುವಂತಾದರೆ ಈ ಮನೋವೃತ್ತಿಯ ಹಿಂದೆ ಒಂದು ಔದ್ಯಮಿಕ ಹಿತಾಸಕ್ತಿ ಕಾರ್ಪೋರೇಟ್ ಉದ್ಯಮದ ರೂಪದಲ್ಲಿ ಇರುವುದನ್ನು ನಾವು ಗಮನಿಸಬೇಕು. ದಯೆ, ಕರುಣೆ, ಸೇವಾ ಮನೋಭಾವ ವೈದ್ಯ ವೃತ್ತಿಯ ಅಡಿಗಲ್ಲುಗಳು. ಈ ಮನೋಭಾವ ಮೂಡಬೇಕಾದರೆ ವೈದ್ಯಕೀಯ ವೃತ್ತಿ ಜನಸಾಮಾನ್ಯರ ಕೈಗೆಟುಕುವಂತಿರಬೇಕಲ್ಲವೇ ? ಭಾರತದಲ್ಲಿ ಒಬ್ಬ ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಮಂತ್ರಿಯಾಗಲು ಸಾಧ್ಯ ಆದರೆ ವೈದ್ಯಕೀಯ ಪದವಿ ಪಡೆಯುವುದು ಅಸಾಧ್ಯ ಏಕೆಂದರೆ ಕಾರ್ಪೋರೇಟ್ ಬಂಡವಾಳದ ಸಾಮ್ರಾಜ್ಯದಲ್ಲಿ ವೈದ್ಯಕೀಯ ವೃತ್ತಿ ಪಗಡೆಯ ಹಾಸಿನಂತಾಗಿದೆ. ವೈದ್ಯರು ದಾಳಗಳಾಗಿದ್ದಾರೆ. ಮುಷ್ಕರ ನಿರತ ವೈದ್ಯರಿಗೂ ಈ ಸತ್ಯದ ಅರಿವು ಇರಬೇಕು. ತಾನು ಪದವಿ ಗಳಿಸಲು ಹೂಡಿದ ಬಂಡವಾಳವನ್ನು ಹಿಂಪಡೆಯಲು ಬಯಸುವ ಪ್ರತಿಯೊಬ್ಬ ವೈದ್ಯನೂ ಈ ಕಾರ್ಪೋರೇಟ್ ಆಶ್ರಯ ತಾಣಗಳನ್ನು ಅರಸಿ ಹೋಗುತ್ತಾನೆ. ತಮ್ಮೊಳಗೂ ಮಾನವೀಯ ಮೌಲ್ಯಗಳಿವೆ ಎಂದು ನಿರೂಪಿಸಲು ಆಗಾಗ್ಗೆ ಸಾರ್ವಜನಿಕರಿಗೆ ಉಚಿತ ತಪಾಸಣೆಯ ಸೌಲಭ್ಯ ಒದಗಿಸುವ ಕಾರ್ಪೋರೇಟ್ ವೈದ್ಯಕ್ಷೇತ್ರ ತನ್ನ ಅಧಿಪತ್ಯವನ್ನು ಸಾಧಿಸಲು ಜನಸಾಮಾನ್ಯರ ಈ ಅಸಹಾಯಕತೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದನ್ನು ಗಮನಿಸಬೇಕಿದೆ.

ಕರ್ನಾಟಕದ ಸಂದರ್ಭದಲ್ಲಿ ಹೇಳುವುದಾದರೆ ಖಾಸಗಿ ವೈದ್ಯಕೀಯ ಕ್ಷೇತ್ರ ಇರುವುದೇ ರಾಜಕಾರಣಿಗಳ ನಿಯಂತ್ರಣದಲ್ಲಿ, ಮತಧಾರ್ಮಿಕ ಮಠಗಳ ನಿಯಂತ್ರಣದಲ್ಲಿ ಮತ್ತು ಉದ್ಯಮಿಗಳ ಹಿಡಿತದಲ್ಲಿ. ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ನಾಗರಿಕ ಸಮಾಜದ ಅಭ್ಯುದಯಕ್ಕೆ ಅತ್ಯಗತ್ಯವಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಚಿಮ್ಮುಹಲಗೆಯಂತೆ ಬಳಸುತ್ತಿರುವ ಮಠೋದ್ಯಮಿಗಳು ರಾಜ್ಯ ಸರ್ಕಾರದ ಮಸೂದೆಯ ಬಗ್ಗೆ ಏಕೆ ಮೌನ ವಹಿಸಿವೆ ಎಂದು ಒಮ್ಮೆ ಯೋಚಿಸೋಣ. ಏಕೆಂದರೆ ಸರ್ಕಾರದ ಮಸೂದೆ ವೈದ್ಯರನ್ನು ಗುರಿಮಾಡುತ್ತಿದೆ ವೈದ್ಯಕೀಯ ಸಾಮ್ರಾಜ್ಯವನ್ನಲ್ಲ. ಸಹಜವಾಗಿಯೇ ನಿಷ್ಠೆಯಿಂದ ತಮ್ಮ ಕಾಯ ಮಾಡುವ ವೈದ್ಯರು ಸರ್ಕಾರದ ಮಸೂದೆಯನ್ನು ಆಕ್ಷೇಪಿಸುತ್ತಾರೆ. ಇಲ್ಲಿ ವ್ಯಕ್ತಿಗತ ಮನೋಭಾವ ಮುಖ್ಯವಾಗುತ್ತದೆ. ಸಾರಾಸಗಟಾಗಿ ಸಮಸ್ತ ವೈದ್ಯ ಸಮುದಾಯವನ್ನು ಧನದಾಹಿಗಳೆಂದೋ, ಶೋಷಕರೆಂದೋ ಪರಿಗಣಿಸಲಾಗುವುದಿಲ್ಲ. ಅಥವಾ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾಗುವ ಅವಘಡಗಳಿಗೆ ಕಾರಣಕರ್ತರನ್ನಾಗಿ ಮಾಡಲಾಗುವುದಿಲ್ಲ. ವ್ಯವಸ್ಥೆಯ ಕ್ರೂರ ಕಾಲ ಚಕ್ರದಲ್ಲಿ ಸಿಲುಕಿರುವಾಗ ಕೆಲವೊಮ್ಮೆ ನಿರಪರಾಧಿಗಳೂ ಅಪರಾಧಿಗಳಾಗಿಬಿಡುತ್ತಾರೆ. ಗೋರಖ್‍ಪುರದ ದುರಂತ ಒಂದು ಉದಾಹರಣೆ.
ವೈದ್ಯರು ಈ ಕ್ರೂರ ವ್ಯವಸ್ಥೆಯ ಬಂಧಿಗಳಾಗಿರುವುದಕ್ಕೆ ಕಾರಣವಾದರೂ ಏನು ?

ಒಂದು ಜನಪರ ಎನ್ನಲ್ಪಡುವ ಸರ್ಕಾರಕ್ಕೆ ಇದರ ಅರಿವಿಲ್ಲವೇ ? ಶಿಕ್ಷಣದ ವಾಣಿಜ್ಯೀಕರಣ ಮತ್ತು ಶಿಶುವಿಹಾರದಿಂದ ಹಿಡಿದು ವೈದ್ಯಕೀಯ ಸ್ನಾತಕೋತ್ತರ ಪದವಿಯವರೆಗೆ ಶೈಕ್ಷಣಿಕ ಕ್ಷೇತ್ರವನ್ನು ಆವರಿಸಿರುವ ಕಾರ್ಪೋರೇಟ್ ಸಂಸ್ಕøತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಚಿಂತನೆಯೇ ಕಾಣುತ್ತಿಲ್ಲವಲ್ಲಾ . ಸಮಸ್ಯೆಯ ಮೂಲ ಇರುವುದು ಇಲ್ಲಿ. ನಾವು ವಿಷಪೂರಿತ ಬೇರುಗಳನ್ನು ಬಲಿಷ್ಟವಾಗಲು ಅವಕಾಶ ನೀಡುತ್ತಿದ್ದೇವೆ. ರೋಗಗ್ರಸ್ತ ಕೊಂಬೆಗಳನ್ನು ಕಡಿದುಹಾಕುತ್ತಿದ್ದೇವೆ. ಕೊಂಬೆಗಳು ಪುನಃಪುನಃ ಚಿಗುರುತ್ತವೆ. ಮತ್ತೊಮ್ಮೆ ಕಡಿದುಹಾಕುತ್ತೇವೆ. ಬೇರುಗಳು ಭೂತಳದಲ್ಲಿ ಗಟ್ಟಿಯಾಗುತ್ತಲೇ ಹೋಗುತ್ತವೆ. ಈ ವಿಷಬೇರುಗಳನ್ನು ಕಿತ್ತೊಗೆಯುವ ಆಗ್ರಹ ಇದೆ, ಅಭಿಲಾಷೆ ಇದೆ, ಹಪಾಹಪಿ ಇದೆ ಆದರೆ ಆಳುವ ವರ್ಗಗಳಲ್ಲಿ ಮತ್ತು ಆಳುವ ವರ್ಗಗಳನ್ನು ನಿಯಂತ್ರಿಸುತ್ತಿರುವ ಕಾರ್ಪೋರೇಟ್ ಲೋಕದಲ್ಲಿ ಈ ಆಗ್ರಹಗಳನ್ನೂ ಖರೀದಿಸಲಾಗುತ್ತದೆ. ಇದು ಮಾರುಕಟ್ಟೆ ವ್ಯವಸ್ಥೆಯ ಒಂದು ಆಯಾಮ. ಇಲ್ಲಿ ಎಲ್ಲವೂ ಸರಕುಗಳೇ. ಬಿಕರಿಯಾಗುವ ವಸ್ತುಗಳೇ. ಮಾನವ ಜೀವವೂ, ಜೀವ ಸಂವೇದನೆಯೂ !

Leave a Reply

Your email address will not be published.