ವೃತಿ ಧರ್ಮ, ಮನೋಧರ್ಮ ಮತ್ತು ಸಾಮಾಜಿಕ ಉತ್ತರದಾಯಿತ್ವ

-ನಾ ದಿವಾಕರ

ಯಾವುದೇ ವ್ಯಕ್ತಿಯ ಜೀವನದಲ್ಲಿ ಮನೋಧರ್ಮ ಅಥವಾ ಮನೋಭಾವ ಎನ್ನುವುದು ವ್ಯಕ್ತಿಗತವಾಗಿ ರೂಢಿಸಿಕೊಂಡ ಗುಣಲಕ್ಷಣಗಳನ್ನು ಆಧರಿಸಿರುತ್ತದೆ. ಸಾಂಪ್ರದಾಯಿಕ ಸಮಾಜದಲ್ಲಿ, ವಿಶೇಷವಾಗಿ ಭಾರತದಂತಹ ಶ್ರೇಷ್ಠತೆಯ ಗುಂಗಿನ ಸಾಮಾಜಿಕ ಪರಿಸರದಲ್ಲಿ ಮನೋಧರ್ಮವನ್ನು ವ್ಯಕ್ತಿಯ ಜನ್ಮದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. “ಜಾತಿ ಬುದ್ಧಿ” ಎಂಬ ಲೇವಡಿಯ ಮಾತು 21ನೆಯ ಶತಮಾನದ ಆಧುನಿಕ ಭಾರತೀಯ ಸಮಾಜದಲ್ಲೂ ಪ್ರಚಲಿತವಾಗಿದೆ.

ಜಾತಿ ಕೇಂದ್ರಿತ ಶ್ರೇಣೀಕೃತ ಸಮಾಜವೊಂದರಲ್ಲಿ ವ್ಯಕ್ತಿಗತ ಮನೋಧರ್ಮವನ್ನು ಜಾತಿಯ ನೆಲೆಯಲ್ಲಿ ಅಥವಾ ಸಾಮಾಜಿಕ ಶ್ರೇಣಿಯ ನೆಲೆಯಲ್ಲಿ ವ್ಯಾಖ್ಯಾನಿಸುವುದು ಅತಿಶಯದ ಮಾತೇನಲ್ಲ. ಆದರೆ ಒಂದು ಸಮಾಜದ ಅಭ್ಯುದಯದ ಹಾದಿಯಲ್ಲಿ ವ್ಯಕ್ತಿಗತ ಮನೋಧರ್ಮ ಎಷ್ಟು ಪ್ರಾಮುಖ್ಯತೆ ಹೊಂದಿರುವುದೋ ಅಷ್ಟೇ ಪ್ರಾಮುಖ್ಯತೆ ವೃತ್ತಿಧರ್ಮಕ್ಕೂ ಇರುತ್ತದೆ. ಏಕೆಂದರೆ ವ್ಯಕ್ತಿಗತ ಮನೋಧರ್ಮ ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಅಥವಾ ಒಂದು ನಿರ್ದಿಷ್ಟ ಸಮುದಾಯದ ಚೌಕಟ್ಟಿಗೆ ಸೀಮಿತವಾಗಿರುತ್ತದೆ. ಆದರೆ ವೃತ್ತಿಧರ್ಮ ಎನ್ನುವುದು ಹೆಚ್ಚಿನ ವ್ಯಾಪ್ತಿ ಮತ್ತು ಹರವು ಹೊಂದಿರುವುದೇ ಅಲ್ಲದೆ ಒಂದು ಇಡೀ ಸಮಾಜದ ಹೆಜ್ಜೆ ಗುರುತುಗಳನ್ನು ನಿರ್ಧರಿಸುತ್ತದೆ. ಹಾಗಾಗಿ ವ್ಯಕ್ತಿಗತ ಮನೋಧರ್ಮದ ಉತ್ತರದಾಯಿತ್ವ ಸೀಮಿತವಾಗಿರುತ್ತದೆ. ವೃತ್ತಿಧರ್ಮದ ಉತ್ತರದಾಯಿತ್ವ ಸಾರ್ವತ್ರಿಕತೆಯನ್ನು ಪಡೆಯುತ್ತದೆ.

policeಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಕೆಲವು ನಿರ್ದಿಷ್ಟ ವೃತ್ತಿಗಳಿಗೆ ಸಾಮುದಾಯಿಕ ಹೊಣೆಗಾರಿಕೆ, ಸಾಂವಿಧಾನಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಉತ್ತರದಾಯಿತ್ವ ಇರುತ್ತದೆ. ಈ ವೃತ್ತಿಗಳನ್ನು ನಿಭಾಯಿಸುವವರು ತಮ್ಮ ವೃತ್ತಿ ಸಂಬಂಧಿತ ನೈತಿಕತೆಯೊಂದಿಗೆ ಸಾರ್ವತ್ರಿಕ ನೈತಿಕತೆಯನ್ನೂ ಮನಗಾಣಬೇಕಾಗುತ್ತದೆ. ಏಕೆಂದರೆ ಈ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವವರು ಸಮಾಜದ ಅಭ್ಯುದಯದ ಹಾದಿಯನ್ನು ನಿರ್ಮಿಸುತ್ತಾರೆ ಸಮಾಜದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸಮಾಜದ ಮನೋಧರ್ಮವನ್ನು ನಿರ್ಮಿಸುವಲ್ಲಿ ಸಕ್ರಿಯರಾಗಿರುತ್ತಾರೆ. ನವ ಪೀಳಿಗೆಯ ಭವಿಷ್ಯದ ಮಾರ್ಗದ ನಿರ್ಮಾತೃಗಳಾಗಿರುತ್ತಾರೆ. ಸಮಾಜದ ನೈತಿಕ ನೆಲೆಯನ್ನು ನಿರ್ಮಿಸುವಲ್ಲಿ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಕಾಳಜಿ, ಸಾಂವಿಧಾನಿಕ ಬದ್ಧತೆ ಮತ್ತು ನೈತಿಕ ಹೊಣೆಗಾರಿಕೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ವೃತ್ತಿಪರರು ಹೆಚ್ಚಿನ ಹೊಣೆಗಾರಿಕೆ ಹೊರಬೇಕಾಗುತ್ತದೆ. ಆಗ ಮಾತ್ರವೇ ಒಂದು ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸಲು ಸಾಧ್ಯ. ಈ ವೃತ್ತಿಗಳಲ್ಲಿ ಪ್ರಮುಖವಾಗಿ ಪೊಲೀಸ್, ಶಿಕ್ಷಕ, ವಕೀಲ, ವೈದ್ಯರನ್ನು ಹೆಸರಿಸಬಹುದು. ಭಾರತದಂತಹ ಧರ್ಮ ಕೇಂದ್ರಿತ ಸಾಂಪ್ರದಾಯಿಕ ಸಮಾಜದಲ್ಲಿ ಪುರೋಹಿತ/ಪಾದ್ರಿ/ಮುಲ್ಲಾಗಳನ್ನೂ, ಆಧ್ಯಾತ್ಮ ಗುರುಗಳನ್ನೂ, ಮಠಾಧೀಶರನ್ನೂ ಈ ಪಟ್ಟಿಗೆ ಸೇರಿಸಬಹುದು.

ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕøತಿಕ ಮೌಲ್ಯಗಳನ್ನು ನಿರ್ಧರಿಸುವಲ್ಲಿ ಈ ವೃತ್ತಿಪರರ ಪಾತ್ರ ಮಹತ್ವದ್ದಾಗಿರುತ್ತದೆ. ಶಿಕ್ಷಕರು ಸಮಾಜದ ಜ್ಞಾನ ಭಂಡಾರಕ್ಕೆ ಶಿಲಾನ್ಯಾಸ ರೂಪಿಸುವ ಮೂಲಕ ಜನಸಮುದಾಯಗಳ ಬೌದ್ಧಿಕ ನೆಲೆಯನ್ನು ಗುರುತಿಸುತ್ತಾರೆ. ವೈದ್ಯರು ಸಮಾಜದ ಭೌತಿಕ ಸ್ವಾಸ್ಥ್ಯವನ್ನು ಕಾಪಾಡುತ್ತಾರೆ. ಪೊಲೀಸರು ಸಮಾಜದಲ್ಲಿನ ತಪ್ಪು ಒಪ್ಪುಗಳನ್ನು ನಿಯಂತ್ರಿಸುವ ಮೂಲಕ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುತ್ತಾರೆ. ವಕೀಲರು ದೇಶದ ಸಂವಿಧಾನ ಮತ್ತು ಕಾನೂನು ವಿಧಿಸುವ ಸಾಮಾಜಿಕ ನೀತಿ ಸಂಹಿತೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನ್ಯಾಯವಂಚಿತ ಜನಸಮುದಾಯಗಳಿಗೆ ನ್ಯಾಯ ಒದಗಿಸುತ್ತಾರೆ. ಈ ವೃತ್ತಿಪರರ ವ್ಯಕ್ತಿಗತ ಮನೋಧರ್ಮ ಮತ್ತು ವೃತ್ತಿಧರ್ಮಗಳು ಸಮೀಕರಣಗೊಂಡರೆ ಸಮಾಜದ ಸ್ವಾಸ್ಥ್ಯ ರಕ್ಷಿಸಲು ಸಾಧ್ಯ. ಆದರೆ ಸಮಕಾಲೀನ ಭಾರತೀಯ ಸಮಾಜದಲ್ಲಿ ಈ ಸಮೀಕರಣ ಸಾಧ್ಯವಾಗದಿರುವುದು ದುರಂತ. ಇಡೀ ವ್ಯವಸ್ಥೆಯೇ ಭ್ರಷ್ಟತೆಯ ನೆಲೆಯಲ್ಲಿ ಕಂಗೆಟ್ಟು ಕಂಗಾಲಾಗಿರುವಾಗ ಈ ನಿರ್ದಿಷ್ಟ ವೃತ್ತಿಪರರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ. ಆದಾಗ್ಯೂ ಜನಸಾಮಾನ್ಯರ ಜೀವನಶೈಲಿಗೆ ಪೂರಕವಾದ ಸ್ವಸ್ಥ ವಾತಾವರಣವನ್ನು ನಿರ್ಮಿಸಲು ಈ ವೃತ್ತಿಪರರು ಶ್ರಮಿಸಿದಲ್ಲಿ ಸಾಮಾಜಿಕ ಉನ್ನತಿ ಅರ್ಥಪೂರ್ಣವಾಗುತ್ತದೆ.

ಮಾನವ ಸಹಜ ದೌರ್ಬಲ್ಯಗಳನ್ನು ಹತ್ತಿಕ್ಕಿ ವೃತ್ತಿ ಧರ್ಮವನ್ನು ಕಾಪಾಡುವ ದಾಷ್ಟ್ರ್ಯತೆ ಇರಬೇಕಾದರೆ ಅದಕ್ಕೆ ಪೂರಕವಾದ ಸಾಂಸ್ಕøತಿಕ-ಸಾಮಾಜಿಕ ವಾತಾವರಣವೂ ಅಗತ್ಯ. ಒಂದು ಪ್ರಜಾತಂತ್ರ ವ್ಯವಸ್ಥೆ ನ್ಯಾಯಯುತವಾಗಿ ಕಾರ್ಯ ನಿರ್ವಹಿಸಲು ಇದು ಅತ್ಯಗತ್ಯ. ಆದರೆ ಅಂತಹ ಒಂದು ಪ್ರಜಾತಂತ್ರ ವ್ಯವಸ್ಥೆ ಜನಪರ ಧೋರಣೆ ಹೊಂದಿರಬೇಕಾಗುತ್ತದೆ. ಸ್ವತಂತ್ರ ಭಾರತದ ದುರಂತ ಎಂದರೆ ಇಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ಪರಂಪರೆ ನೈತಿಕ ಮೌಲ್ಯಗಳಿಗೆ ಪ್ರಧಾನ ಸ್ಥಾನ ನೀಡಿಯೇ ಇಲ್ಲ. ಆಳ್ವಿಕೆ ಎಂದರೆ ನಿಯಂತ್ರಣ ಎಂಬ ಸರ್ವಾಧಿಕಾರಿ ಧೋರಣೆಯನ್ನೇ ತನ್ನ ಅಡಿಪಾಯವನ್ನಾಗಿ ಮಾಡಿಕೊಂಡಿರುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನಿರ್ವಹಣೆ ಮತ್ತು ನಿಯಂತ್ರಣದ ನಡುವಿನ ಸೂಕ್ಷ್ಮ ಸಂಬಂಧಗಳ ವಿಮರ್ಶೆಯೇ ನಡೆದಿಲ್ಲ.

ಸಮಾಜದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಬದ್ಧತೆಗಳು ತಮ್ಮ ಮೌಲ್ಯಯುತ ಸ್ಥಾನಗಳನ್ನು ಉಳಿಸಿಕೊಳ್ಳಬೇಕೆಂದರೆ ಈ ಸೂಕ್ಷ್ಮವನ್ನು ಪರಾಮರ್ಶಿಸುವುದು ಅಗತ್ಯ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಶತಮಾನಗಳಿಂದ ಮೈಗೂಡಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಮೇಲು-ಕೀಳು, ಅಧಿಪತ್ಯ-ಅಧೀನತೆ ಮತ್ತು ಆದೇಶ-ಪಾಲನೆ ಇವೆಲ್ಲವೂ ಸಹಜ ಪ್ರಕ್ರಿಯೆಯಾಗಿವೆ. ಶ್ರೇಷ್ಠತೆಯ ಅಹಮಿಕೆಯೇ ಭೂಮಿಕೆಯಾಗಿರುವ ಇಂತಹ ಸಾಂಪ್ರದಾಯಿಕ ಸಮಾಜದಲ್ಲಿ ಸಹಜವಾಗಿಯೇ ನಿಯಂತ್ರಣ ರೇಖೆಗಳು ತಾಂಡವಾಡುತ್ತಿರುತ್ತವೆ. ವಸುದೈವ ಕುಟುಂಬಕಂ ಎಂಬ ಘೋಷವಾಕ್ಯದಿಂದ ಪುಳಕಿತರಾಗುವ ನಾವು ಕುಟುಂಬ ವ್ಯವಸ್ಥೆಯೊಳಗಿನ ಶ್ರೇಣೀಕೃತ ಮೌಲ್ಯಗಳು ಮತ್ತು ಕಟ್ಟುಪಾಡುಗಳು ವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವುದನ್ನು ಗಮನಿಸುವುದೇ ಇಲ್ಲ. ಸಾಮಾಜಿಕ ಸ್ತರದಲ್ಲೂ ಇದು ಸತ್ಯ.

ಹಾಗಾಗಿಯೇ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸ್ ಎಂದರೆ ನಿಯಂತ್ರಣದ ಸಾಧನ ಎಂದೇ ಪರಿಗಣಿಸಲಾಗುತ್ತದೆಯೇ ಹೊರತು ಸಾಮಾಜಿಕ ಸೌಹಾರ್ದತೆಯನ್ನು ನಿರ್ವಹಿಸುವ ಒಂದು ವ್ಯವಸ್ಥಿತ ಸ್ವರೂಪ ಎಂದು ಪರಿಗಣಿಸಲಾಗುವುದಿಲ್ಲ. ಒಂದು ಜನಸ್ನೇಹಿ ಮೌಲ್ಯಯುತ ಪೊಲೀಸ್ ವ್ಯವಸ್ಥೆಯನ್ನು ಆರು ದಶಕಗಳ ನಂತರವೂ ರೂಪಿಸಲಾಗದ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವಸಾಹತು ಕಾಲದ ಧೋರಣೆಗಳೇ ಇಂದಿಗೂ ಪ್ರಾಬಲ್ಯ ಹೊಂದಿರುವುದನ್ನು ಗಮನಿಸಬಹುದು. ಸಾಂವಿಧಾನಿಕ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ಈ ಧೋರಣೆ ಬದಲಾಗುವುದು ಅತ್ಯವಶ್ಯ. ದುರಂತವೆಂದರೆ ಶಿಕ್ಷಕರಲ್ಲಾಗಲಿ, ವೈದ್ಯರಲ್ಲಾಗಲಿ, ವಕೀಲರಲ್ಲಾಗಲಿ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಯಲ್ಲಾಗಲೀ ಈ ಬದಲಾವಣೆ ಕಂಡುಬರುವುದಿಲ್ಲ. ಆಡಳಿತ ವ್ಯವಸ್ಥೆಯ ಭ್ರಷ್ಟ ಕೂಪದಲ್ಲಿ ಸಮ್ಮಿಳಿತಗೊಂಡು ಆಡಳಿತಾರೂಢ ಪಕ್ಷದ ನಿಷ್ಠಾವಂತ ಕಾಲಾಳುಗಳಾಗಿ ಕಾರ್ಯ ನಿರ್ವಹಿಸುವ ಆರಕ್ಷಕ ಪಡೆಗಳು ಜನಸ್ನೇಹಿಯಾಗಲು ಹೇಗೆ ಸಾಧ್ಯ ?

ಒಂದು ಸುಶಿಕ್ಷಿತ, ಆರೋಗ್ಯಕರ, ಮೌಲ್ಯಯುತ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಹೊಂದಿರುವ ಶಿಕ್ಷಕ ವೃಂದದಲ್ಲಿ ಕಪ್ಪು ಕುರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತಮ್ಮ ವೃತ್ತಿ ಧರ್ಮದ ಮೌಲ್ಯಗಳನ್ನೇ ಕಡೆಗಣಿಸಿರುವ ಶಿಕ್ಷಕ ಸಮುದಾಯದ ಒಂದು ವರ್ಗ ಜ್ಞಾನದಾಹಿಗಳಾಗುವ ಬದಲು ಧನಗಾಹಿಗಳಾಗುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ. ಭಾರತೀಯ ಪರಂಪರೆಯಲ್ಲಿ ಶಾಲೆ ಎಂದರೆ ದೇವಾಲಯ ಎಂಬ ಪವಿತ್ರ ಭಾವನೆಯಿದೆ. ವಿಪರ್ಯಾಸವೆಂದರೆ ಇಂದು ದೇವಾಲಯಗಳೂ ಧನಾರ್ಜನೆಯ ಕೂಪಗಳಾಗಿವೆ, ಶಾಲೆಗಳೂ ಬಂಡವಾಳದ ಕೂಪಗಳಾಗಿವೆ. ಜನಸಾಮಾನ್ಯರ ಮಡುಗಟ್ಟಿದ ಆತಂಕ ಮತ್ತು ಭವಿಷ್ಯದ ಹಪಾಹಪಿಗಳು ಈ ಕೂಪಗಳಲ್ಲಿ ತೇಲಿ ಮುಳುಗಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿವೆ. ಶಿಕ್ಷಣ ಕ್ಷೇತ್ರ ಮಾರುಕಟ್ಟೆಯಾಗಿದೆ, ಶೈಕ್ಷಣಿಕ ಸಂಸ್ಥೆಗಳು ವಾಣಿಜ್ಯ ಕೇಂದ್ರಗಳಾಗಿವೆ, ಶಿಕ್ಷಕರು ಈ ಮಾರುಕಟ್ಟೆಯ ಪ್ರವಾದಿಗಳಾಗಿದ್ದಾರೆ. ಇದು ಸಾರ್ವತ್ರಿಕ ಸತ್ಯ ಅಲ್ಲವಾದರೂ ಪ್ರಚಲಿತ ವಿದ್ಯಮಾನದ ವಾಸ್ತವ ಎನ್ನಲು ಅಡ್ಡಿಯಿಲ್ಲ.

karnataka-policeಜನಸಾಮಾನ್ಯರ ಭೌತಿಕ ಸ್ವಾಸ್ಥ್ಯ ಮತ್ತು ಸಮಾಜದ ಲೌಕಿಕ ಸ್ವಾಸ್ಥ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆ ಹೊತ್ತಿರುವ ವೈದ್ಯ ವೃತ್ತಿಯೂ ಸಹ ವಾಮ ಮಾರ್ಗದಲ್ಲಿ ಮುನ್ನಡೆಯುತ್ತಿರುವುದನ್ನೂ ಗಮನಿಸಬಹುದು. ಅನಾರೋಗ್ಯದಿಂದ ಬಳಲುವ ಜನಸಾಮಾನ್ಯರು ಇಂದು ವೈದ್ಯಕೀಯ ಕ್ಷೇತ್ರದ ಪ್ರಯೋಗಾಲಯಗಳಿಗೆ ಬಂಡವಾಳವಾಗಿ ಪರಿಣಮಿಸಿದ್ದಾರೆ. ವಿಜ್ಞಾನದ ಮುನ್ನಡೆಯಿಂದ ಶ್ರೇಷ್ಠ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಿರುವ ಸಂದರ್ಭದಲ್ಲೇ ವೈದ್ಯಕೀಯ ಚಿಕಿತ್ಸೆ ಗಗನ ಕುಸುಮವಾಗಿ ಪರಿಣಮಿಸಿರುವ ವಿಚಿತ್ರ ಸಂದರ್ಭವನ್ನು ನಾವು ಎದುರಿಸುತ್ತಿದ್ದೇವೆ. ರೋಗಿಗಳ ಶುಶ್ರೂಷೆ ಎಂದರೆ ತಮ್ಮ ಲಾಭಗಳಿಕೆಯ ಹೆಜ್ಜೆ ಗುರುತುಗಳು ಎಂದು ಭಾವಿಸುವ ವೈದ್ಯಕೀಯ ಕ್ಷೇತ್ರದ ಒಂದು ವರ್ಗ ವೈದ್ಯಕೀಯ ವೃತ್ತಿಧರ್ಮವನ್ನೇ ಅಪಮಾನಗೊಳಿಸುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ. ಹಾಗಾಗಿಯೇ ಉಳ್ಳವರು ಶಿವಾಲಯ ಮಾಡುತ್ತಿದ್ದರೆ ಇಲ್ಲದವರು ಶಿವನ ಪಾದ ಸೇರುತ್ತಿದ್ದಾರೆ.

ಭಾರತದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಆತಂಕ, ಹತಾಶೆ ಮತ್ತು ತುಡಿತಗಳಿಗೆ ಸ್ಪಂದಿಸುವ ಏಕೈಕ ಸಾಂವಿಧಾನಿಕ ಅಂಗ ನ್ಯಾಯಾಂಗ. ಆದರೆ ನ್ಯಾಯಾಂಗದಲ್ಲಿ ದಿನೇ ದಿನೇ ವ್ಯಾಪಿಸುತ್ತಿರುವ ಭ್ರಷ್ಟ ಪರಂಪರೆ ಈ ಬುನಾದಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ತಮ್ಮ ಕಕ್ಷಿದಾರರ ಹಿತಾಸಕ್ತಿಯನ್ನು ಕಾಪಾಡುವುದು ವಕೀಲರ ಧ್ಯೇಯವೂ ಹೌದು, ಕರ್ತವ್ಯವೂ ಹೌದು. ಆದರೆ ಈ ಸಂರಕ್ಷಣೆ ಸಾಂವಿಧಾನಿಕ ಮೌಲ್ಯಗಳಿಗೆ, ಸಾಮಾಜಿಕ ಸ್ವಾಸ್ಥ್ಯದ ಅಗತ್ಯತೆಗಳಿಗೆ ಬದ್ಧವಾಗಿರುವುದೂ ಮುಖ್ಯ. ವಕೀಲಿ ವೃತ್ತಿ ಎಂದರೆ ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಬದ್ಧವಾಗಿ ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ನಿರ್ವಹಿಸುವ ಪವಿತ್ರ ವೃತ್ತಿ. ಆದರೆ ಇಂದಿನ ಸನ್ನಿವೇಶದಲ್ಲಿ ಈ ಪಾವಿತ್ರ್ಯತೆಯಾಗಲಿ, ಬದ್ಧತೆಯಾಗಲೀ ಉಳಿದಿಲ್ಲ. ತಮ್ಮ ವೃತ್ತಿ ಧರ್ಮ ಮತ್ತು ಪ್ರಮಾಣೀಕೃತ ಸಾಂವಿಧಾನಿಕ ಬದ್ಧತೆಯನ್ನು ಬದಿಗಿಟ್ಟು, ಧನಾರ್ಜನೆಗಾಗಿ ವಾಮಮಾರ್ಗಗಳನ್ನು ಅನುಸರಿಸುವ ಪ್ರವೃತ್ತಿ ವಕೀಲ ಸಮುದಾಯದಲ್ಲಿ ಆಳವಾಗಿ ಬೇರೂರಿದೆ.

ಇಂತಹ ವಿಷಮ ಸನ್ನಿವೇಶದಲ್ಲಿ ವೃತ್ತಿ ಧರ್ಮ ಮತ್ತು ಮನೋಧರ್ಮಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಸಂಘರ್ಷಕ್ಕೆ ಕೊಂಚ ಮಟ್ಟಿಗೆ ಮಾನವೀಯ ಸ್ಪರ್ಷ ನೀಡುವ ಮೂಲಕ ಮೌಲ್ಯಯುತ ಸಮಾಜವನ್ನು ರೂಪಿಸಬಹುದಾದ ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು ಔದ್ಯಮಿಕ ಬಂಡವಾಳದ ಕೇಂದ್ರ ಬಿಂದುಗಳಾಗಿರುವುದು ಈ ದೇಶದ ದುರಂತ. ಮಾನವೀಯ ಮೌಲ್ಯಗಳೇ ಸಾಕಾರಗೊಂಡ ಭವ್ಯ ಪರಂಪರೆಯ ಘೋಷವಾಕ್ಯವನ್ನು ಹೊತ್ತು ಆತ್ಮರತಿಯಲ್ಲಿ ತೊಡಗಿರುವ ಭಾರತೀಯ ಸಂಸ್ಕøತಿಯಲ್ಲಿ ಮಾನವೀಯ ಮೌಲ್ಯಗಳಿರಲಿ, ಸ್ವೀಕೃತ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಪ್ರಯತ್ನಗಳೂ ಸಹ ನಡೆಯುತ್ತಿಲ್ಲ. ಇಂತಹ ಕೆಲವು ಪ್ರಯತ್ನಗಳನ್ನು ಸ್ಥಾಪಿತ ವ್ಯವಸ್ಥೆ ವ್ಯವಸ್ಥಿತವಾಗಿ ದಮನಿಸುತ್ತಿರುವುದೂ ಸತ್ಯ. ಉತ್ತರದಾಯಿತ್ವ ಯಾರದು ?

Leave a Reply

Your email address will not be published.