ವಿಷ ಬಿತ್ತುವವರ ಬಗ್ಗೆ ಎಚ್ಚರವಿರಲಿ

-ಅರುಣ್ ಜೋಳದ ಕೂಡ್ಲಿಗಿ

ನಾಯಕ/ವಾಲ್ಮೀಕಿ ಸಮುದಾಯದ ಬಂಧುಗಳಿಗೆ

ಟಿಪ್ಪು ಸುಲ್ತಾನನ ಬಗ್ಗೆ ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ಹೀಗೆ ರವಾನೆ ಮಾಡುವವರನ್ನು ನಿಮ್ಮ ಮಾತಿಗೆ ದಾಖಲೆಗಳನ್ನು ತೋರಿಸಿ ಎಂದು ಕೇಳಿದರೆ ಅವರ ಬಣ್ಣ ಬಯಲಾಗುತ್ತದೆ.

TipuSultanಕಾರಣ ಟಿಪ್ಪು ಸುಲ್ತಾನನ ಬಗ್ಗೆ ಸುಳ್ಳು ಚರಿತ್ರೆಯನ್ನು ಧಾರ್ಮಿಕ ಮೂಲಭೂತವಾದಿಗಳು ಹಬ್ಬಿಸುತ್ತಿದ್ದಾರೆ. ಇದರ ಮೂಲ ಅಜೆಂಡಾವೆಂದರೆ ಈ ನಾಯಕ/ವಾಲ್ಮೀಕಿ ಸಮುದಾಯದವರು ಮುಸ್ಲೀಮರ ವಿರುದ್ಧ ಜಗಳ ತೆಗೆದು ಜೈಲು ಪಾಲಾಗಲಿ ಎನ್ನುವ ಹುನ್ನಾರವಿದೆ. ದೇಶದಲ್ಲಿ ಮುಸ್ಲೀಮರ ವಿರುದ್ಧ ನಡೆದ ಎಲ್ಲಾ ಕೋಮುಗಲಬೆಗಳಲ್ಲಿ ಸತ್ತವರು, ಜೈಲು ಪಾಲಾಗಿ ನಾಶವಾದವರು ಬೇಡರಂತಹ ಕೆಳಜಾತಿಗಳೇ ವಿನಃ, ಮೇಲು ಜಾತಿಯ ಲೀಡರುಗಳಲ್ಲ ಎನ್ನುವುದನ್ನು ಚರಿತ್ರೆಯಿಂದ  ನಾವು ಕಲಿಯಬೇಕಿದೆ.

17-18ನೇ ಶತಮಾನದ ಘಟನೆಗಳನ್ನಿಟ್ಟುಕೊಂಡು ಈಗ ನಾವುಗಳು ಬಡಿದಾಡಿ ಸಾಯುವುದು ಎಷ್ಟು ಸರಿ? ಒಮ್ಮೆ ಯೋಚಿಸಿ ನೋಡಿ.  ಟಿಪ್ಪು ಬ್ರಿಟೀಷರ ವಿರುದ್ಧ ಅಪ್ರತಿಮವಾಗಿ ಹೋರಾಡಿದ ಕಾರಣ ಆತನ ವಿರುದ್ಧ ಜನರನ್ನು ದಂಗೆ ಏಳಿಸಬೇಕೆಂದು ನಾಯಕ/ ವಾಲ್ಮೀಕಿಗಳನ್ನೂ ಒಳಗೊಂಡಂತೆ ಎಲ್ಲಾ ಸಮುದಾಯಗಳ ವಿರೋಧಿ ಟಿಪ್ಪು ಎಂದು ಬಿಂಬಿಸುವಂತೆ ಬ್ರಿಟೀಶ್ ಬರಹಗಾರರು ದಾಖಲಿಸಿದರು. ಇದೇ ದಾಖಲೆಗಳನ್ನು ಬಳಸಿಕೊಂಡು ಇಂದು ಧಾರ್ಮಿಕ ಸಾಮರಸ್ಯವನ್ನು ಕೆಲವು ಶಕ್ತಿಗಳು ಕದಡುತ್ತಿವೆ.

ರಾಜ ಪ್ರಭುತ್ವದಲ್ಲಿ ಇನ್ನೊಂದು ರಾಜ್ಯದ ಮೇಲೆ ದಂಡೆತ್ತಿ ಹೋಗುವುದು, ಅಪಾರ ಸಾವುನೋವು ಸಂಭವಿಸುವುದು ಎಲ್ಲವೂ ರಾಜಪ್ರಭುತ್ವದ ಲಕ್ಷಣಗಳೇ ಆಗಿದ್ದವು.  ಅದು ಹಿಂದು ದೊರೆಗಳಿರಲಿ ಮುಸ್ಲಿಂ ದೊರೆ ಇರಲಿ ತನ್ನ ರಾಜ್ಯದ ಉಳಿವಿಗಾಗಿ ಯುದ್ದ ಮಾಡುವುದು ಎದುರು ರಾಜ್ಯಗಳನ್ನು ಗೆಲ್ಲುವುದು, ಸೆರೆಯಾದ ಆಯಾ ರಾಜ್ಯದ ರಾಜ ಸೈನಿಕರನ್ನು ಬಂಧಿಸುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿದ್ದವು. ಇದನ್ನು ಟಿಪ್ಪೂ ಮಾಡಿದ್ದಾನೆ, ಅಂತೆಯೇ ವೀರ ಮದಕರಿಯೂ ಮಾಡಿದ್ದಾನೆ. ಇದನ್ನು ತಪ್ಪುಸರಿ ಎಂದು ನೋಡದೆ ರಾಜಪ್ರಭುತ್ವದ ಲಕ್ಷಣ ಎಂದು ತಿಳಿದು ಈ ಇಬ್ಬರೂ ನಾಯಕರನ್ನು ಗೌರವಿಸಿ, ಆರಾಧಿಸೋಣ.

ಹಾಗೆ ಮಾಡುವ ಮೂಲಕ ನಾಯಕ/ವಾಲ್ಮೀಕಿ ಸಮುದಾಯ ಪ್ರಭುದ್ಧವಾಗಿ ಚಿಂತಿಸುತ್ತದೆ ಎನ್ನುವುದನ್ನು ನಾಡಿಗೆ ತೋರಿಸಬೇಕಿದೆ. ಇಂದು ನಾಯಕ/ವಾಲ್ಮೀಕಿ ಸಮುದಾಯ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ  ಇದನ್ನು ಸಹಿಸದೆ ಈ ಸಮುದಾಯ ಬಡಿದಾಡಿಕೊಂಡು ಸಾಯಲಿ, ಹಿಂದುಳಿದು ಮೇಲುಜಾತಿಗಳ ಹಿಡಿತದಲ್ಲೇ ಇರಲಿ ಎಂದು ಕೆಲವು ವಿಷಜಂತುಗಳು ಸಮುದಾಯವನ್ನು ಕೆರಳಿಸುವ ಪ್ರಯತ್ನ ಮಾಡುತ್ತಿವೆ. ಪ್ರಜ್ಞಾವಂತ ನಾಯಕ/ವಾಲ್ಮೀಕಿ ಸಮುದಾಯ ಇಂತಹ ವಿಷಜಂತುಗಳ ಕಿಡಿಗೇಡಿತನಕ್ಕೆ ಬಲಿಯಾಗಬಾರದು. ಬಲಿಯಾಗುವುದಿಲ್ಲ ಕೂಡ.

ಸರಕಾರವೇ ಈ ಸಮುದಾಯದ ಜನ ಶಕ್ತಿಯನ್ನು ಗುರುತಿಸಿ ‘ವಾಲ್ಮೀಕಿ ಜಯಂತಿ’ಯನ್ನು ಆಚರಿಸುತ್ತಿದೆ. ಇದೀಗ ವಾಲ್ಮೀಕಿ/ನಾಯಕ ಸಮುದಾಯ ಶಿಕ್ಷಣದಲ್ಲಿ ಮೊದಲ ಸ್ಥಾನ ಪಡೆಯಲು ಸ್ಪರ್ಧೆ ಮಾಡಬೇಕಿದೆ, ತಮ್ಮ ಸಮುದಾಯದ ಮಕ್ಕಳನ್ನು ಶಾಲೆ ಬಿಡಿಸದೆ ಶಿಕ್ಷಿತರನ್ನಾಗಿ ಮಾಡಬೇಕಿದೆ. ಎಲ್ಲಾ ಕ್ಷೇತ್ರದಲ್ಲಿ ಅವಿರತವಾಗಿ ದುಡಿದು ಆರ್ಥಿಕವಾಗಿ ಸಬಲರಾಗಬೇಕಿದೆ. ಸರಕಾರದಿಂದ ಸಮುದಾಯಕ್ಕೆ ಸಲ್ಲಬೇಕಿರುವ ಸೌಲಭ್ಯಗಳನ್ನು ಹೋರಾಟ ಮಾಡಿ ಪಡೆಯಬೇಕಿದೆ. ಇದಕ್ಕಾಗಿ ಸಮುದಾಯ *ಸಂಘಟಿತ* ಹೋರಾಟ ಮಾಡಬೇಕಿದೆ.

ಈ ಸಮುದಾಯದ ಶಿಕ್ಷಿತರು, ಉದ್ಯೋಗಸ್ತರು, ರಾಜಕಾರಣಿಗಳು ಈ ಸಮುದಾಯವನ್ನು ಮೇಲೆತ್ತುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ.
ಈ ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣಕೊಡಿಸಿ ಸಬಲರನ್ನಾಗಿ ಮಾಡಬೇಕಿದೆ. ಸಮುದಾಯಕ್ಕಾಗಿ ಕೆಲಸ ಮಾಡದ ರಾಜಕಾರಣಿಗಳ ಬೆನ್ನಿಗೆ ಬಿದ್ದು ಸಮುದಾಯಕ್ಕಾಗಿ ಹೆಚ್ಚಿನ ಕೆಲಸ ಮಾಡಲು ಒತ್ತಡ ತರಬೇಕಿದೆ. ಇದೇ ಸಮುದಾಯದಲ್ಲಿರುವ ಕಡುಬಡವರನ್ನು ಗುರುತಿಸಿ ಅವರುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ.

ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ತಾಂತ್ರಿಕ ಕಾಲೇಜುಗಳನ್ನು ಒಳಗೊಂಡಂತೆ ವಸತಿ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಂಜೂರು ಮಾಡಲು, ಅಂತಹ ಸಂಸ್ಥೆಗಳಲ್ಲಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ  ಸಿಗುವಂತೆ ಮಾಡಲು ಸರಕಾರಕ್ಕೆ ಒತ್ತಡ ತರಬೇಕಿದೆ.

ನಮ್ಮ ಜತೆ ಬದುಕುತ್ತಿರುವ ಎಲ್ಲಾ ಜಾತಿಯವರನ್ನು, ಧರ್ಮದವರನ್ನು ಪ್ರೀತಿಯಿಂದಲೂ ಸಹೋದರತ್ವದಿಂದಲೂ ಕಾಣಬೇಕಿದೆ. ಹೀಗೆ ಕಾಣುವ ಮೂಲಕ ಈ ಸಮುದಾಯ ಸಂವಿಧಾನಿಕ ಆಶಯಗಳನ್ನು ಗೌರವಿಸುತ್ತದೆ ಎನ್ನುವುದನ್ನು ಎತ್ತಿತೋರಿಸಬೇಕಿದೆ. ಇಷ್ಟೆಲ್ಲಾ ಕೆಲಸಗಳಿರುವಾಗ ನನ್ನ ಬಾಂಧವರು  ಯಾರದೋ ಕಿಡಿಗೇಡಿಗಳ  ಕ್ಷುಲ್ಲಕ ಕಾರಣಗಳಿಗೆ ಜಗಳವಾಡಿ ಸಮುದಾಯದ ಅಭಿವೃದ್ಧಿಗೆ ಹಿನ್ನೆಡೆ ತರುವುದಿಲ್ಲ ಎಂದು ಭಾವಿಸಿದ್ದೇನೆ. ದ್ವೇಶಕ್ಕೆ ದ್ವೇಶ ಉತ್ತರವಾದರೆ ಆ ಬೆಂಕಿ ಎಲ್ಲರೂ ಸುಡುತ್ತಾರೆ, ದ್ವೇಶಕ್ಕೆ ಪ್ರೀತಿಯನ್ನು ಉತ್ತರವಾಗಿ ನೀಡೋಣ. ನೀರು ಕೇಳಿದರೆ ಪಾಯಸ ಕೊಡುವ ಉದಾರ ನಾಯಕರು ಯಾರನ್ನೂ ದ್ವೇಷಿಸುವುದು ಬೇಡ, ಎಲ್ಲರನ್ನೂ ಪ್ರೀತಿಸೋಣ.

ಹೀಗೆ ನಾಯಕ ಸಮುದಾಯ ಟಿಪ್ಪುಜಯಂತಿಯನ್ನು ಆಚರಿಸುವ ಮೂಲಕ ಮುಸ್ಲೀಂ ಬಾಂಧವರಿಗೆ ಸಿಹಿ ಹಂಚೋಣ, ಪ್ರಬುದ್ಧ ನಾಯಕ/ವಾಲ್ಮೀಕಿ ಸಮುದಾಯದ ಘನತೆಯನ್ನು ಹೆಚ್ಚಿಸೋಣ.

ಇಂತಿ ನಾಯಕ/ವಾಲ್ಮೀಕಿ ಸಮುದಾಯದ ಶ್ರೇಯೋಭಿಲಾಸಿ.

Leave a Reply

Your email address will not be published.