ವಿಶ್ವವಿದ್ಯಾಲಯಗಳನ್ನು ಪಳಗಿಸುವ ಪ್ರಯತ್ನಗಳು

     ಅನು: ಶಿವಸುಂದರ್

ಸಮಾಜ ವಿಜ್ನಾನ ಸಂಶೋಧನೆಗೆ ನಿಧಿ ಕಡಿತ ಮಾಡಿರುವುದು ದೂರದೃಷ್ಟಿ ಇಲ್ಲದ ಕ್ರಮ.

ugc-logoಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ ಅದರಲ್ಲೂ ಅದರ ಸಮಾಜ ವಿಜ್ನಾನದ ಶಿಕ್ಷಣದ ಮೇಲೆ ಇದೀಗ ಮತ್ತೊಂದು ಪ್ರಹಾರ ನಡೆದಿದೆ. ವಿಶ್ವವಿದ್ಯಾಲಯ ಅನುದಾನ ಅಯೋಗ (ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್- ಯು.ಜಿ.ಸಿ)ವು ಸಮಾಜ ವಿಜ್ನಾನ ಶಿಕ್ಷಣಕ್ಕೆ ಕೊಡುತ್ತಿದ್ದ ಅನುದಾನವನ್ನು ಕಡಿತ ಮಾಡಿದೆ. ಪಂಚವಾರ್ಷಿಕ ಯೋಜನೆಗಳು ಸ್ಥಗಿತಗೊಂಡ ಮೇಲೆ  ೧೧ನೇ ಪಂಚವಾರ್ಷಿಕ ಯೋಜನೆಯಡಿ ಯುಜಿಸಿಯು ಸ್ಥಾಪಿಸಿದ್ದ ಹಲವಾರು ಸಮಾಜ ವಿಜ್ನಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಹಣಕಾಸಿನ ಕೊರತೆಯಿಂದ ಕೊನೆಯುಸಿರೆಳೆಯುತ್ತಿವೆ. ಈ ಸಂಸ್ಥೆಗಳಿಗೆ ಹಣಕಾಸು ಅನುದಾನ ನೀಡುವ ಬಗ್ಗೆ ಯುಜಿಸಿ ಯ ದ್ವಂದ್ವಾತ್ಮಕ ನಿಲುವುಗಳು ಹಲವಾರು ಅಧ್ಯಾಪಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಹಾಗೂ ಉದಯೋನ್ಮುಖವಾದ ಹಲವಾರು ಅಧ್ಯಯನ ಶಿಸ್ತು ಮತ್ತು ಸಂಕಥನಗಳ ಭವಿಷ್ಯಗಳನ್ನೇ ಪ್ರಶ್ನೆಗೊಳಪಡಿಸಿವೆ.

ಭಾರತದ ಹಲವಾರು ಪ್ರಮುಖ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹರಡಿಹೋಗಿರುವ ಈ ಸಂಶೋಧನಾ ಸಂಸ್ಥೆಗಳು ವಿವಿಧ ಮಟ್ಟಗಳಲ್ಲಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆ. ಕೆಲವು ಕಡೆ ಈ ಸಂಸ್ಥೆಗಳನ್ನು ವಿಶ್ವವಿದ್ಯಾಲಯಗಳ ವಿಭಾಗಗಳನ್ನಾಗಿಸಲಾಗಿದೆ. ಇನ್ನೂ ಕೆಲವು ಕಡೆ ಅವು ರಾಜ್ಯ ಸರ್ಕಾರದ ಹಾಗು ಮತ್ತಿತರ ಮೂಲಗಳ ಹಣಕಾಸು ನೆರವನ್ನೇ ಆಧರಿಸಿವೆ. ಆದೇನೇ ಇದ್ದರೂ ಎಲ್ಲೆಲ್ಲಿ ಅವು ಸಂಪೂರ್ಣವಾಗಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆಯೋ ಅಲ್ಲೆಲ್ಲಾ ಒಂದೋ ಮುಚ್ಚಿಹೋಗುವ ಅಥವಾ ಸಿಬ್ಬಂದಿ/ಸಾಮರ್ಥ್ಯ ಕಡಿತದ ಅಪಾಯವನ್ನು ಎದುರಿಸುತ್ತಿವೆ.

ಈ ಅನುದಾನದ ಕಡಿತದ ತತ್‌ಕ್ಷಣದ ಪರಿಣಾಮಗಳೇನೆಂಬ ಸೂಚನೆ ಹೋದ ತಿಂಗಳೇ ದೊರೆತಿತ್ತು. ಕಳೆದ ತಿಂಗಳು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಯು ತನ್ನ ಆಡ್ವಾನ್ಸ್ಡ್ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ (ಮಹಿಳಾ ಅಧ್ಯಯನಗಳ ಉನ್ನತ ಕೇಂದ್ರ), ಸೆಂಟರ್ ಫಾರ್ ಸ್ಟಡಿಸ್ ಆಫ್ ಸೊಷಿಯಲ್ ಎಕ್ಸ್ಲೂಷನ್ ಅಂಡ್ ಇನ್‌ಕ್ಲೂಸೀವ್ ಪಾಲಿಸೀಸ್ (ಸಾಮಾಜಿಕ ಹೊರದೂಡುವಿಕೆ ಮತ್ತು ಒಳಗೊಳ್ಳುವಿಕೆ ನೀತಿಗಳ ಅಧ್ಯಯನ ಕೇಂದ್ರ), ನೋಡಲ್ ಸೆಂಟರ್ ಫಾರ್ ಎಕ್ಸ್‌ಲೆನ್ಸ್ ಫಾರ್ ಹ್ಯೂಮನ್ ರೈಟ್ ಎಜುಕೇಷನ್ (ಮಾನವ ಹಕ್ಕುಗಳ ಶಿಕ್ಷಣದ ಶ್ರೇಷ್ಠ ಸಂಯೋಜನಾ ಕೇಂದ್ರ)ಗಳ ಹಲವಾರು ಅಧ್ಯಾಪಕರು ಮತ್ತು ಸಂಶೋಧಕರಿಗೆ ಸೇವೆಯಿಂದ ಬಿಡುಗಡೆ ಮಾಡುವ ಪತ್ರಗಳನ್ನು ರವಾನಿಸಿತ್ತು. ಆದರೆ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ಬಂದ ಅಪಾರ ವಿಮರ್ಶೆಗಳಿಂದ ಮತ್ತು ಇತರ ಕಾರಣಗಳಿಂದ ಯುಜಿಸಿಯು ಯೋಜನಾ ಬಾಬತ್ತಿನಲ್ಲಿ ಅನುದಾನವನ್ನು ಪಡೆಯುತ್ತಿದ್ದ ಎಲ್ಲಾ ಯೋಜನೆಗಳನ್ನು ಒಂದು ವರ್ಷಗಳ ಕಾಲ ಅಂದರೆ ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಿತು.

ಹೀಗಾಗಿ ಟಾಟಾ ಸಾಮಾಜಿಕ ಅಧ್ಯಯನಗಳ ಸಂಸ್ಥೆಯೂ ಬಹುಪಾಲು ಅಧ್ಯಾಪಕರ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದುವರೆಸಿದೆ. ಈ ತುಂಡು ತುಂಡು ಕ್ರಮವು ಸದ್ಯದ ಹೋರಾಟಗಳನ್ನು ತಣ್ಣಗಾಗಿಸಿದ್ದರೂ ಇಂಥಾ ಕೇಂದ್ರಗಳ ದೀರ್ಘಕಾಲೀನ ಭವಿಷ್ಯವೇನು ಎಂಬ ಪ್ರಶ್ನೆಯನ್ನೇನು ಬಗೆಹರಿಸಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ೧೯೭೦ರ ಮೊದಲ ಭಾಗದಲ್ಲೇ ಸ್ಥಾಪಿತವಾಗಿದ್ದರೂ ಯುಜಿಸಿ ಅವಕ್ಕೆ ಅನುದಾನ ನೀಡಿದ್ದು ೧೯೮೦ರ ದಶಕದ ಮಧ್ಯಭಾಗದಲ್ಲಿ. ಹಾಗಿದ್ದರೂ ಇಂಥಾ ವಿಶೇಷ ಅಧ್ಯಯನ ಕೇಂದ್ರಗಳನ್ನು ಅಧ್ಯಾಪನ, ಸಂಶೋಧನೆ ಮತ್ತು ವಿಸ್ತರಣೆಗಳನ್ನು ಒಳಗೊಂಡಂಥ ಒಂದು ಪರಿಪೂರ್ಣ ವಿಭಾಗಗಳನ್ನಾಗಿ ಬೆಳೆಸಲು ಮತ್ತು ವಿಸ್ತರಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಅಗತ್ಯವಿದೆಯೆಂದು ೧೧ನೇ ಪಂಚವಾರ್ಷಿಕ ಯೋಜನೆಯಲ್ಲಿ ಬಲವಾದ ಪ್ರತಿಪಾದನೆ ಮಾಡಲಾಗಿತ್ತು. ಉದಾಹರಣೆಗೆ ಮಹಿಳಾ ಅಧ್ಯಯನ ಕೇಂದ್ರಗಳಿಗೆ ಅಂತರ್ ಶಿಸ್ತೀಯ ಅಧ್ಯಯನ ಚೌಕಟ್ಟನ್ನು ಅಭಿವೃದ್ಧಿಪಡಿಸುವ, ಇತರ ಶಿಸ್ತುಗಳನ್ನು ಪರಿವರ್ತನೆ ಮಾಡುವಂಥಾ ದೃಷ್ಟಿಕೋನವನ್ನು ರೂಪಿಸುವ, ನೀತಿಗಳನ್ನು ರೂಪಿಸುವ ಮತ್ತು  ಸಂಶೋಧನೆಯಲ್ಲಿ ಮತ್ತು ನೀತಿಗಳಲ್ಲಿ  ದಲಿತ, ಆದಿವಾಸಿ, ದುಡಿಯುವ ಮತ್ತು ಧಾರ್ಮಿಕ ಸಮುದಾಯಗಳಿಗೆ ಸೇರಿದ ಮಹಿಳೆಯರು ಎದ್ದು ಕಾಣುವಂಥ ಅಧ್ಯಯನಗಳನ್ನು ರೂಪಿಸುವ ನಿರ್ದೇಶನಗಳನ್ನು ನೀಡಲಾಗಿತ್ತು. ಅಂಥಾ ಕೇಂದ್ರಗಳು ಹೊಸ ಅಂತರ್ ಶಿಸ್ತೀಯ ವಿಧಾನಗಳಿಂದ ಸಬಲರಾದ ಅಧ್ಯಾಪನಾ ಸಿಬ್ಬಂದಿಗಳೊಂದಿಗೆ ಜಾತಿ, ವರ್ಗ ಮತ್ತು ಲಿಂಗಸಂಬಂಧೀ ಅಧ್ಯಯನಗಳಲ್ಲಿ ಹೊಸ ಮತ್ತು ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳನ್ನೇ ಮುಂದಕ್ಕೆ ತಂದರು.

ugcಈ ಪತ್ರಿಕೆಯ ೨೦೦೨ರ ಡಿಸೆಂಬರ್ ೧೫ರ ಸಂಚಿಕೆಯಲ್ಲಿ ಸಮಾಜಶಾಸ್ತ್ರಜ್ನ ಗೋಪಾಲ್ ಗುರು ಅವರು  ಸಮಾಜ ವಿಜ್ನಾನಗಳು ಎಷ್ಟರಮಟ್ಟಿಗೆ ಆದರ್ಶಮಯವಾಗಿವೆ (ಹೌ ಎಗಿಲಟೇರಿಯನ್ ಆರ್ ದಿ ಸೊಷಿಯನ್ ಸೈನ್ಸಸ್) ಎಂದು ಪ್ರಶ್ನಿಸಿದ್ದರು. ಅವರು ನಮ್ಮ ಅಕಡೆಮಿಕ್ ಮತ್ತು ಸಾಂಸ್ಥಿಕ ರಚನೆಗಳ ಗುಣಲಕ್ಷಣಗಳಲ್ಲಿ ಅಡಕವಾಗಿರುವ ಸಾಂಸ್ಕೃತಿಕ ಶ್ರೇಣೀಕರಣಗಳನ್ನು ಖಂಡಿಸಿದ್ದಲ್ಲದೆ ನಮ್ಮ ಸಮಾಜ ವಿಜ್ನಾನಗಳ ಪರಿಕಲ್ಪನಾತ್ಮಕ ಕಾಣ್ಕೆಗಳ ಸಾಮಾಜಿಕ ತಳಹದಿಯನ್ನೇ ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದರು. ನಿರ್ದಿಷ್ಟವಾಗಿ ಇಂಥಾ ಅಕೆಡೆಮಿಕ್ ವಾತಾವರಣದಲ್ಲಿಯೇ ಈ ಕೇಂದ್ರಗಳು ಸ್ಥಾಪಿತಗೊಂಡು ತಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದವು. ಅವು ಸಾಂಪ್ರದಾಯಿಕ ಸಮಾಜ ಶಾಸ್ತ್ರೀಯ ಶಿಸ್ತುಗಳಿಗೆ ಮತ್ತು ವಿದ್ವತ್ತುಗಳ ಜ್ನಾನ ಮೀಮಾಂಸೆಗಳಿಗೆ ಸವಾಲು ಹಾಕಿದವು.  ಸಿದ್ಧಾಂತ ಮತ್ತು ಆಚರಣೆ, ರಚನೆ ಮತ್ತು ಏಜೆನ್ಸಿ ಮತ್ತು ಎಡ ಮತ್ತು ಬಲಪಂಥೀಯ ರಾಜಕೀಯಗಳೆಂಬ, ಆವರೆಗೆ ಚಾಲ್ತಿಯಲ್ಲಿದ್ದ ಧ್ರೃವೀಕೃತ ಇಬ್ಬಗೆ ಪರಿಕಲ್ಪನೆಗಳನ್ನು ಮತ್ತೊಮ್ಮೆ ಪರೀಕ್ಷೆಗೊಡ್ಡಿದವು. ಉದಾಹರಣೆಗೆ ಪುಣೆಯ ಕ್ರಾಂತಿಜ್ಯೋತಿ ಸಾವಿತ್ರಿಭಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರವು ಈವರೆಗೆ ಕೇವಲ ಅಧ್ಯಯನಗಳ ವಸ್ತುವಾಗಿದ್ದ ಅಲಕ್ಷಿತ ಸಮುದಾಯಗಳ ವಿದ್ವಾಂಸರನ್ನು ಒಳಗೊಳ್ಳಲು ಬೇಕಾಗುವ ಪರ್ಯಾಯ ಶಿಕ್ಷಣಶಾಸ್ತ್ರ ಮತ್ತು ಸಂಪನ್ಮೂಲಗಳನ್ನು ಒಟ್ಟುಮಾಡಿತು.

ಈ ಬಗೆಯ ಅಂತರ್‌ಶಿಸ್ತೀಯ ಕೇಂದ್ರಗಳು ಸ್ಥಾಪನೆಯಾಗುತ್ತಿರುವ ಕಾಲದಲ್ಲೇ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಮೀಸಲಾತಿ ಕಾಯಿದೆ-೨೦೦೬ ಕೂಡ ಜಾರಿಗೆ ಬಂದಿತ್ತು. ಇದರಿಂದಾಗಿ ೨೦೦೭ರಿಂದ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ಜಾತಿಗಳ ಮೀಸಲಾತಿಯೂ ಜಾರಿಗೆ ಬಂದಿತು ಮತ್ತು ಒಟ್ಟಾರೆಯಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯು ಹೆಚ್ಚಿತು. ಈ ಮೀಸಲಾತಿಯು ಉನ್ನತ ಶಿಕ್ಷಣದಲ್ಲಿನ ವಿದ್ಯಾರ್ಥಿ ಸಮುದಾಯದ ಹಿನ್ನೆಲಗಳ ವೈವಿಧ್ಯತೆಯನ್ನು ವಿಸ್ತರಿಸಿತು. ಹೊಸದಾಗಿ ಸ್ಥಾಪಿತವಾದ ಈ ಸಂಸ್ಥೆಗಳು ಜಾತಿ, ಪಿತೃಪ್ರಾಧಾನ್ಯತೆ, ಮುಖ್ಯಧಾರೆ ಸಂಕಥನಗಳನ್ನು ಮತ್ತು ಪ್ರಭುತ್ವ ದಮನಗಳನ್ನು ಪ್ರಶ್ನಿಸಲು ಬೇಕಾದ ಸೈದ್ಧಾಂತಿಕ ಪ್ರೇರಣೆಯನ್ನು ಒದಗಿಸಿತು. ಇದು ಜಸ್ಟೀಸ್ ಫಾರ್ ರೋಹಿತ್ ವೇಮುಲ (ದಮನಿತ ಸಮುದಾಯಗಳು ಎದುರಿಸುವ ಸಾಂಸ್ಥಿಕ ತಾರತಮ್ಯಗಳ ವಿರುದ್ಧ), ಪಿಂಜಿರಾ ಥೋಡ್ (ವಿದ್ಯಾರ್ಥಿನಿ ನಿಲಯಗಳಲ್ಲಿ ಮತ್ತು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿನಿಯರು ಮಾತ್ರ ಎದುರಿಸುವ ಲಿಂಗ ತಾರತಮ್ಯ ಮತ್ತು  ಕಣ್ಗಾವಲುಗಳ ವಿರುದ್ಧ), ಹೋಕ್ ಕೋಲೋರೋಬ್ (ಜಾಧವ್‌ಪುರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಎದುರಿಸಬೇಕಾಗಿಬಂದ ಲೈಂಗಿಕ ಕಿರುಕುಳದ ವಿರುದ್ಧ), ಮದ್ರಾಸಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿದ್ದ  ಅಂಬೇಡ್ಕರ್ ಸ್ಟಡಿ ಸರ್ಕಲ್‌ಗೆ ಆಡಳಿತ ಮಂಡಳಿ ಮಾನ್ಯತೆ ರದ್ದುಪಡಿಸಿದರ ವಿರುದ್ಧದ ವಿದ್ಯಾರ್ಥಿಗಳು ರಚಿಸಿಕೊಂಡ ವಿದ್ಯಾರ್ಥಿ ಗುಂಪುಗಳಂಥಾ ಹೊಸ ವಿದ್ಯಾರ್ಥಿ  ಗುಂಪುಗಳು ಹೆಚ್ಚಿನ ರೀತಿಯಲ್ಲಿ ಪ್ರಸರಣವಾಗುತ್ತಿರುವುದಕ್ಕೆ ಕೂಡಾ ಒಂದು ಕಾರಣವಾಗಿದೆ.

ಈ ಚಳವಳಿಗಳು ಇಂದು ವಿದ್ಯಾರ್ಥಿ ರಾಜಕಾರಣದಲ್ಲಿ ಮತ್ತು ಪ್ರತಿಪಾದನೆಗಳಲ್ಲಿ ಲಿಂಗ ಮತ್ತು ಜಾತಿ ಸಂಬಂಧೀ ಸಂಗತಿಗಳನ್ನು ಮುನ್ನೆಲೆಗೆ ತಂದಿವೆ, ಅಸ್ಥಿತ್ವದಲ್ಲಿರುವ ವಿದ್ಯಾರ್ಥಿ ಸಂಘಗಳ ನಾಯಕತ್ವವನ್ನೂ ಮತ್ತು ಸಂಘಟನಾ ತತ್ವಗಳನ್ನು ಪ್ರಶ್ನಿಸಿವೆ, ಮತ್ತು ಅವು ತಮಗೆಂದೇ ಒಂದು ಪ್ರತ್ಯೇಕ ಸ್ವಾಯತ್ತ ಎಡೆಯೊಂದನ್ನು ಗಳಿಸಿಕೊಂಡಿರುವುದಲ್ಲದೆ ಇತರ ಕೇಂದ್ರೀಯ ಮತ್ತು ರಾಜ್ಯ ವಿಶ್ವದ್ಯಾಲಯಗಳ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಮೈತ್ರಿ ಮತ್ತು  ಸಹಕಾರವನ್ನು ರೂಢಿಸಿಕೊಂಡಿವೆ.

ಸಮಾಜವಿಜ್ನಾನ ಸಂಸ್ಥೆಗಳಿಗೆ ನೀಡಲಾಗಿರುವ ಈ ಒಂದು ವರ್ಷದ ವಿಸ್ತರಣೆ ವಿದ್ಯಾರ್ಥಿಗಳು-ಅಧ್ಯಾಪಕ ಸಿಬ್ಬಂದಿಗಳು ಹಾಗು ಯುಜಿಸಿಯ ನಡುವಿನ ಬಿಕ್ಕಟ್ಟಿನಲ್ಲಿ ಒದಗಿಬಂದಿರುವ ಒಂದು ತಾತ್ಕಾಲಿಕ ಪರಿಹಾರವಷ್ಟೇ ಆಗಿದೆ. ಆದರೆ ಇನ್ನೂ ಹೆಚ್ಚಿನ ಸಮಾನತೆ ಮತ್ತು ಪ್ರಾತಿನಿಧ್ಯಗಳ ಪರವಾಗಿರುವಂತೆ ಅಸ್ಥಿತ್ವದಲ್ಲಿರುವ ಶೈಕ್ಷಣಿಕ ಸಂಕಥನಗಳನ್ನು ಮತ್ತು ಸಂಸ್ಥೆಗಳನ್ನು ಮಾರ್ಪಾಡು ಮಾಡಬಯಸುವ ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳು ನಿಜವಾದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇಂಥಾ ಸಂಶೋಧನಾ ಕಾರ್ಯಸೂಚಿಗಳನ್ನು ಯೋಜನಾ ಅವಧಿ  ಮುಗಿದುಹೋದರೂ ಪ್ರಭುತ್ವವೇ ನೇರ ಅನುದಾನಗಳ ಮೂಲಕ ರಕ್ಷಿಸ್ಸಬೇಕು. ಇಂಥಾ ಸಂಸ್ಥೆಗಳು ಅತ್ಯಂತ ಅಲಕ್ಷಿತ ಸಮುದಾಯಕ್ಕೆ ಸಂಬಂಧಪಟ್ಟ ಮತ್ತು ಅಲಕ್ಷಿತ ಸಮುದಾಯಗಳೇ ಸೃಷ್ಟಿಸುವ ಜ್ನಾನವನ್ನು ಒಳಗೊಳ್ಳುವುದರಿಂದ ಅವುಗಳ ಅಸ್ಥಿತ್ವ ಮತ್ತು ವಿಸ್ತರಣೆಗಳು ವಿಶ್ವವಿದ್ಯಾಲಯಗಳನ್ನು ಬೌದ್ಧಿಕವಾಗಿ ಇನ್ನಷ್ಟು ಸಂಪದ್ಭರಿತಗೊಳಿಸುತ್ತವೆ. ಹಾಗೆ ಮಾಡುವ ಮೂಲಕ ಅವು ಸಾಂಪ್ರದಾಯಿಕ ಕಲಿಕಾ ಪದ್ಧತಿಗಳಿಗೆ ಸವಾಲು ಹಾಕುವುದಲ್ಲದೆ, ಮತ್ತಷ್ಟು ವಿಮರ್‍ಶಾತ್ಮಕವಾಗಿ ನೋಡುವುದಕ್ಕೂ ಮತ್ತು ತಿಳಿಯುವುದಕ್ಕೂ ವಿದ್ಯಾರ್ಥಿಗಳ ಮನಸ್ಸನ್ನು ಮುಕ್ತಗೊಳಿಸುತ್ತದೆ. ಒಂದು ವಿಶ್ವವಿದ್ಯಾಲಯ ಮತ್ತು ಒಟ್ಟಾರೆಯಾಗಿ ಶಿಕ್ಷಣ ಮಾಡಬೇಕಿರುವುದು ಇದನ್ನೇ ಅಲ್ಲವೇ?

ಕೃಪೆ: Economic and Political Weekly,                     April 22, 2017. Vol.52. No.16

 

Leave a Reply

Your email address will not be published.