ವಿರಾಗಿಯ ನೆಲದ ನೋವು ಮತ್ತು ನಾವು

-ಎಚ್.ಕೆ.ಶರತ್

ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಬರುವ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ಪೂರ್ವಸಿದ್ಧತೆ ಶುರುವಾಗಿದೆ. ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದಲೂ ಅನುದಾನ ದಕ್ಕಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಹಾಗು ಕೇಂದ್ರದ ಸಚಿವರು ಪದೇ ಪದೇ ಇಲ್ಲಿಗೆ ಭೇಟಿ ನೀಡಿ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲು ಅಗತ್ಯವಿರುವ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಮಸ್ತಕಾಭಿಷೇಕ ಸಮೀಪಿಸಿದರೂ ಪೂರ್ವಸಿದ್ಧತಾ ಕಾರ್ಯಗಳು ವೇಗ ಪಡೆದುಕೊಳ್ಳದ ಕುರಿತು ಮಾಧ್ಯಮಗಳು ಸಾಕಷ್ಟು ಗಮನ ಸೆಳೆದಿವೆ.

ಇವೆಲ್ಲದರ ಆಚೆಗೂ ಶ್ರವಣಬೆಳಗೊಳ ನಮ್ಮೆಲ್ಲರ ‘ಗಮನ’ ಬೇಡುತ್ತಿದೆ. ಮಹಾಮಜ್ಜನದ ವೇಳೆ ಸರ್ವಸ್ವವನ್ನೂ ತ್ಯಜಿಸಿ ವಿರಾಗಿಯಾದ ಬಾಹುಬಲಿಯ ಕಲ್ಲಿನ ಮೂರ್ತಿ ಅದೆಷ್ಟು ಸುಂದರವಾಗಿ ಕಂಗೊಳಿಸಲಿದೆ ಎಂಬ ಕುರಿತು ರಮ್ಯ ವಿವರಣೆಗಳಲ್ಲಷ್ಟೆ ಎಲ್ಲವೂ ಮುಗಿದರೆ, ಅದು ನಾವೆಲ್ಲರೂ ನಮಗೆ ನಾವೇ ಮಾಡಿಕೊಳ್ಳುವ ವಂಚನೆಯಾಗುತ್ತದೆ. ಮಹಾಮಸ್ತಕಾಭಿಷೇಕದ ಹೆಸರಿನಲ್ಲಿ ಹಾಲು-ತುಪ್ಪವನ್ನು ಕಲ್ಲಿನ ಮೂರ್ತಿಯ ಮೇಲೆ ಸುರಿದು ಅಪವ್ಯಯ ಮಾಡುವುದು ಒಪ್ಪತಕ್ಕದ್ದೇ ಎಂಬ ನೆಲೆಗಟ್ಟಿನಲ್ಲಷ್ಟೆ ನಾವು ವಿವೇಚಿಸಿದರೆ, ಅದು ಕೂಡ ತೀರಾ ಮೇಲ್ಮಟ್ಟದ ಗ್ರಹಿಕೆಗೆ ಜೋತು ಬಿದ್ದ ಚರ್ವಿತ ಚರ್ವಣ ವಾದ-ವಿವಾದಕ್ಕಷ್ಟೆ ಎಡೆಮಾಡುವ ಸಂಭವನೀಯ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಭವ್ಯ ಕಾರ್ಯಕ್ರಮವೆಂಬ ಒಂದೇ ಕಾರಣವನ್ನು ಮುನ್ನೆಲೆಯಲ್ಲಿಟ್ಟುಕೊಂಡು, ಇಡೀ ಶ್ರವಣಬೆಳಗೊಳವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುವ ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಒಂದಿಷ್ಟು ಸಕಾರಣಗಳಿಗಾಗಿಯೇ ಅನುಮಾನದ ದೃಷ್ಟಿ ನೆಟ್ಟಿರಬೇಕಾದ ಜರೂರತ್ತಿದೆ.

ಶ್ರವಣಬೆಳಗೊಳದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಯುವ ಸಾಂಸ್ಕೃತಿಕ ಸಮ್ಮೇಳನದ ವೇಳೆ ಜರುಗಿದ ಅವಘಡವೊಂದು ಸುದ್ದಿಯಾಗದೆ, ಹೊರ ಜಗತ್ತಿನ ಗಮನಕ್ಕೂ ಬಾರದೆ ಉಳಿದಿದೆ. ಸಮ್ಮೇಳನ ಸಂಘಟಿಸಿದ ಆಯೋಜಕರ ನಿರ್ಲಕ್ಷ್ಯದಿಂದಾಗಿ, ಶ್ರವಣಬೆಳಗೊಳ ಸಮೀಪದ ಉತ್ತೇನಹಳ್ಳಿಯ ನೇತ್ರ ಎಂಬ ಮೂವತ್ತೆರಡು ವರ್ಷ ವಯಸ್ಸಿನ ಯುವತಿ ಜೀವ ಕಳೆದುಕೊಂಡಿದ್ದಾರೆ. ಯುವ ಸಮ್ಮೇಳನದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಭೋಜನ ಸಿದ್ಧಪಡಿಸುವ ಸ್ಥಳದಲ್ಲಿ ತೋಡಿದ್ದ ತ್ಯಾಜ್ಯ ಗುಂಡಿಗೆ ಬಿದ್ದು ಆಕೆ ಮೃತಪಟ್ಟ ಘಟನೆ ಪೊಲೀಸ್ ಠಾಣೆಯಲ್ಲಿ ‘ಅಸಹಜ ಸಾವು’ ಮಾತ್ರವಾಗಿ, ಮಾಧ್ಯಮಗಳಲ್ಲಿ ಸಿಂಗಲ್ ಕಾಲಮ್ಮಿನ ಸುದ್ದಿ ಕೂಡ ಆಗದೆ ಹೋಗಿದೆ. ಸಮ್ಮೇಳನ ಸಂಘಟಿಸಿದವರು ಒಂದಿಷ್ಟು ಸುರಕ್ಷತೆಗೆ ಆದ್ಯತೆ ನೀಡಿದ್ದರೂ ಅಮಾಯಕರೊಬ್ಬರು ಬಲಿಯಾಗುವುದನ್ನು ತಪ್ಪಿಸಬಹುದಿತ್ತು. ಈ ಅವಘಡ ಘಟಿಸಿದ ನಂತರ ‘ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಇಂತಹ ನಕಾರಾತ್ಮಕ ಕಾರಣಗಳಿಗಾಗಿ ಶ್ರವಣಬೆಳಗೊಳ ಸುದ್ದಿಯಲ್ಲಿರಬಾರದು’ ಎಂಬ ಕಾರಣ ಮುಂದೊಡ್ಡಿ ಇಡೀ ಪ್ರಕರಣ, ಅದು ಹೊರ ಜಗತ್ತಿಗೆ ತಲುಪಬೇಕಾದ ರೀತಿಯಲ್ಲಿ ತಲುಪದೆ, ಮಹಾಮಸ್ತಕಾಭಿಷೇಕವನ್ನು ಸುತ್ತುವರೆದಿರುವ ಅತಿ ರಮ್ಯ ವಿಶ್ಲೇಷಣೆಗಳ ಸಿಕ್ಕುಗಳ ನಡುವೆ ಸಿಲುಕಿ ತಣ್ಣಗಾಗಿದೆ.

‘ಶ್ರವಣಬೆಳಗೊಳ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಕೆಟ್ಟ ಹೆಸರು ಬರಬಾರದು’ ಎಂಬ ಒಂದೇ ನೆಪ ಮುಂದಿಟ್ಟುಕೊಂಡು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿ ಹಾಕುತ್ತಿರುವುದು ಕೇವಲ ಒಂದು ಅಸಹಜ ಸಾವನ್ನಷ್ಟೆ ಅಲ್ಲ. ವಿವೇಚನೆ ಇರುವ ಯಾರೇ ಆದರೂ ಕೇಳಬಹುದಾದ ಒಂದಿಷ್ಟು ಪ್ರಶ್ನೆಗಳು ಕೂಡ ಯಾರ ಕಿವಿಯನ್ನೂ ತಲುಪದಿರುವಂತೆ ವ್ಯವಸ್ಥಿತವಾಗಿ ‘ಮ್ಯಾನೇಜ್’ ಮಾಡಲಾಗುತ್ತಿದೆ. ಮಹಾಮಸ್ತಕಾಭಿಷೇಕದ ವೇಳೆ ಬಿಡುಗಡೆಯಾಗುತ್ತಿರುವ ಅನುದಾನದಲ್ಲಿ 75 ಕೋಟಿ ರೂ. ‘ತಾತ್ಕಾಲಿಕ ಟೌನಶಿಪ್’ ನಿರ್ಮಾಣಕ್ಕೆ ವ್ಯಯವಾಗುವುದನ್ನು ಹೇಗೆ ಅರ್ಥೈಸಿಕೊಳ್ಳುವುದು? ಮಹಾಮಸ್ತಕಾಭಿಷೇಕ ಜರುಗುವ ವೇಳೆ ಶ್ರವಣಬೆಳಗೊಳಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ ಎಂಬ ವಾದವನ್ನು ಒಪ್ಪಲು ಅದೇ ಊರಿನ ಹಲವರು ಸಿದ್ಧರಿಲ್ಲ. ಹೆಚ್ಚು ಜನ ಸೇರಲಿದ್ದಾರೆ ಎಂಬ ನೆಪ ಮುಂದಿಟ್ಟುಕೊಂಡೇ ಅವರಿಗೆ ಬೇಕಾದ ಮೂಲಸೌಕರ್ಯ ಒದಗಿಸುವ ಅಗತ್ಯತೆಯನ್ನೇ ಮುಂದು ಮಾಡಿ ಕೆಲವರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆಂದು ಕೆಲ ಸ್ಥಳೀಯರೆ ಆರೋಪಿಸುತ್ತಾರೆ. ಅವರ ಆರೋಪಗಳನ್ನು ಅಲ್ಲಗಳೆಯುವ ಮುನ್ನ ನಂಬಲರ್ಹ ಅಂಕಿ ಅಂಶಗಳನ್ನು(ಲಭ್ಯವಿದ್ದರೆ) ಕೂಲಂಕಶವಾಗಿ ಪರಿಶೀಲಿಸಬೇಕಿದೆ. ವಿರಾಗಿಯ ಮೂತರ್ಿಗೆ ಮಜ್ಜನ ನೆರವೇರಿಸುವ ಮಹೋತ್ಸವದಲ್ಲಿ ತಮ್ಮ ಖಜಾನೆ ಭರ್ತಿ ಮಾಡಿಕೊಳ್ಳುವ ಉತ್ಸಾಹ ತೋರುವ ಪಟ್ಟಭದ್ರ ಹಿತಾಸಕ್ತಿಗಳೆಡೆಗೂ ಮಾಧ್ಯಮಗಳು ಗಮನ ನೀಡಬೇಕಿದೆ.

ಮಹಾಮಸ್ತಕಾಭಿಷೇಕದ ವೇಳೆ ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಎಷ್ಟು? ಅದರಿಂದಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡವರಿಗೆ ಆಗುತ್ತಿರುವ ಲಾಭವಾದರೂ ಏನು ಎಂಬ ಕುರಿತು ಈ ಬಾರಿಯಾದರೂ ಮಾಹಿತಿ ಸಂಗ್ರಹಿಸುವುದು ಸೂಕ್ತ. ‘ಮಹಾಮಸ್ತಕಾಭಿಷೇಕದ ವೇಳೆ ಈ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಕೈ ಮಿಲಾಯಿಸುವ ಬೆರಳೆಣಿಕೆಯಷ್ಟು ಮಂದಿಗಷ್ಟೆ ಲಾಭವಾಗಲಿದೆಯೇ ಹೊರತು ನಮ್ಮಂತಹವರಿಗಲ್ಲ’ ಎಂದು ಅಳಲು ತೋಡಿಕೊಳ್ಳುವವರಿಗೆ ಕಿವಿಯಾಗುವ ಸಂಯಮವನ್ನು ನಾವು ಕಳೆದುಕೊಳ್ಳಬಹುದೇ?

ಮಹಾಮಸ್ತಕಾಭಿಷೇಕ ನಡೆಯುವ ಶ್ರವಣಬೆಳಗೊಳದ ಹಿರಿಮೆಗೂ ಯುವತಿಯ ಅಸಹಜ ಸಾವಿಗೂ ಸಂಬಂಧ ಕಲ್ಪಿಸಿ, ಜನಸಾಮಾನ್ಯರ ಬಾಯಿ ಮುಚ್ಚಿಸಲು ಹೊರಡುವುದು ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸುವುದಿಲ್ಲವೇ?

ಶ್ರವಣಬೆಳಗೊಳ ಕ್ಷೇತ್ರದಲ್ಲಿನ ಎಲ್ಲ ಚಟುವಟಿಕೆಗಳ ಮೇಲೂ ತಮ್ಮ ಹಿಡಿತ ಸಾಧಿಸಲು ಹೊರಟವರ ಬೆನ್ನಿಗೆ ನಿಲ್ಲುವುದಷ್ಟೇ ತಮ್ಮ ಜವಾಬ್ದಾರಿ ಎಂದು ಮಾಧ್ಯಮ ಭಾವಿಸುವುದಾದರೆ, ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಕಷ್ಟು ಕಿರುಕುಳ ಅನುಭವಿಸುತ್ತಿರುವ ಸ್ಥಳೀಯರು ತಮ್ಮ ಅಸಮಾಧಾನವನ್ನು ಯಾರೆದುರು ತೋಡಿಕೊಳ್ಳಲು ಸಾಧ್ಯ?

ಬಾಹುಬಲಿಯ ಕಲ್ಲಿನ ಮೂರ್ತಿಗೆ ಹಾಲು-ತುಪ್ಪದ ಮಜ್ಜನ ಮಾಡಿ ಸಂಭ್ರಮಿಸುವುದರಲ್ಲೇ ನಾವು ಕಳೆದು ಹೋದರೆ, ಅದು ಆತ್ಮವಂಚನೆಯಾಗುವುದಿಲ್ಲವೇ? ‘ವಿರಾಗಿ’ಗಳನ್ನು ಸುತ್ತುವರೆದಿರುವ ‘ಭೋಗಿ’ಗಳ ಪಡೆಯ ಸತ್ಕಾರಗಳಲ್ಲಿ ಮೈಮರೆಯುವುದು ಲಜ್ಜೆಗೇಡಿತನದ ಪರಮಾವಧಿ ಆಗಲಾರದೆ?

 

Leave a Reply

Your email address will not be published.