ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು (ಭಾಗ 2)

ಇಂಗ್ಲೀಷ್ : ಡೊಗ್ಲಸ್ ಕೆಲ್ನರ್ ಅನುವಾದ : ಬಿ.ಶ್ರೀಪಾದ ಭಟ್

school1ಜರ್ಮನಿಯ ‘ಬಿಲ್ಡಂಗ್’ ಸಂಪ್ರದಾಯದಲ್ಲಿ ಅಡಕವಾಗಿರುವ ಆದರ್ಶ ಒಲವಿನ ಶಿಕ್ಷಣದ ಕುರಿತಾಗಿ ಪರ್ಯಾಲೋಚನೆ ಮಾಡಲು ಇದೇ ಮಾದರಿಯ ಡಯಲೆಕ್ಟ್ ಪ್ರಸ್ತಾಪವು ಪ್ರಸಕ್ತ ಸಂದರ್ಭದಲ್ಲಿ ಸೂಕ್ತವಾಗಿದೆ. ಹೆಗೆಲ್ ಮತ್ತು ಮಾರ್ಕ್ಸ್ ರಂತಹ ಚಿಂತಕರು ಈ ಸಂಪ್ರದಾಯವನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಹೆಗೆಲ್ ಚೈತನ್ಯದ ರೂಪಿಸುವಿಕೆ ಮತ್ತು ಅಭಿವೃದ್ಧಿಯ ಪ್ರಕ್ರಿಯೆಯನ್ನು ಐತಿಹಾಸಿಕವೆಂದು ಒತ್ತಿ ಹೇಳುತ್ತಾನೆ. ಯುಕ್ತ ರೀತಿಯಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಇದರ ಕುರಿತಾಗಿ ಮತ್ತಷ್ಟು ಆಳವಾಗಿ ಸಂಶೋದನೆ ನಡೆಸಬೇಕೆಂದು ಮತ್ತು ಸೂಕ್ತವಾದ ಸಂಪ್ರದಾಯವನ್ನು ತಮ್ಮದಾಗಿಸಿಕೊಳ್ಳಲು ಅಧ್ಯಯನ ನಡೆಸಬೇಕೆಂದು ಜೊತೆಗೆ ವಿಮರ್ಶಿಸುತ್ತಾ ಅದನ್ನು ಮೀರಿ ಮುಂದುವರೆಯಬೇಕೆಂದು ಹೇಳುತ್ತಾನೆ. ಆದರೆ ಮನುಷ್ಯ ವರ್ತನೆಗಳ ವಿವಿಧ ಮಗ್ಗಲುಗಳನ್ನು ಬಿಚ್ಚಿಡುವ ಸಮಾಜವಾದಿ ಕಾಣ್ಮೆಗಳಿಂದ ಪ್ರೇರಿತನಾದ ಮಾಕ್ರ್ಸ ತನ್ನ ಆರಂಭದ ಬರವಣಿಗೆಗಳಲ್ಲಿ ಎಲ್ಲ ಪ್ರಜ್ಞೆ ಮತ್ತು ತಿಳುವಳಿಕೆಗಳ ಶಿಕ್ಷಣವು ಮನುಷ್ಯನ ಮುಖ್ಯ ಆಯಾಮಗಳಲ್ಲಿ ಒಂದು ಎಂದು ಬರೆಯುತ್ತಾನೆ ( ಮಾರ್ಕ್ಸ್  ಮತ್ತು ಎಂಗೆಲ್ಸ್,1978:88)

1848ರಲ್ಲಿ ಪ್ರಕಟಗೊಂಡ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಪುಸ್ತಕದಲ್ಲಿ ಮಾರ್ಕ್ಸ್  ಮತ್ತು ಎಂಗೆಲ್ಸ್ ಅವರು ಶ್ರಮಿಕ ವರ್ಗಗಳನ್ನು ಬೂಜ್ರ್ವಾ ಮಾದರಿ ಶಿಕ್ಷಣದಿಂದ ಬಿಡುಗಡೆಗೊಳಿಸಿ ಅವರಿಗೆ ಸಾರ್ವಜನಿಕ ಶಿಕ್ಷಣ ದೊರೆಯುವಂತೆ ಮಾಡಲು ಈ ಶಿಕ್ಷಣವನ್ನು ವಿಕೇಂದ್ರೀಕರಣಗೊಳಿಸಬೇಕು. ಆ ಮೂಲಕ ಸಮಾಜವಾದಿ ಸಮಾಜವನ್ನು ಕಟ್ಟಬೇಕು ಎಂದು ಪ್ರತಿಪಾದಿಸಿದರು. “ ಶ್ರಮಿಕ ವರ್ಗಗಳ ಎಲ್ಲಾ ಮಕ್ಕಳಿಗೂ ಸಾರ್ವಜನಿಕ ಶಿಕ್ಷಣವು ಉಚಿತವಾಗಿ ದೊರಕಬೇಕು. ಬಾಲ ಕಾರ್ಮಿಕರನ್ನು ಮತ್ತು ಆ ಪದ್ಧತಿಯನ್ನು ನಿಷೇಧಿಸಬೇಕು ಮತ್ತು ಶಿಕ್ಷಣದಲ್ಲಿ ಶ್ರಮಿಕ ವರ್ಗಗಳು ಉತ್ಪಾದಿಸುವ ಸರಕುಗಳ ಕುರಿತಾಗಿಯೂ ಸೇರಿಸಬೇಕು, ಇತ್ಯಾದಿ, ಇತ್ಯಾದಿ” ( ಮಾಕ್ರ್ಸ ಮತ್ತು ಎಂಗೆಲ್ಸ್,1978:490). ಆದರೆ ಕುಖ್ಯಾತಿ ಗಳಿಸಿದ ಆ ಇತ್ಯಾದಿ, ಇತ್ಯಾದಿ ಶಬ್ದಗಳು ಮಾಕ್ರ್ಸವಾದಿ ಚಿಂತನೆಗಳು ಮತ್ತು ಸಿದ್ಧಾಂತಗಳು ಶಿಕ್ಷಣದ ಕುರಿತಾಗಿ ಅಮೂಲಾಗ್ರ ಸ್ಪಷ್ಟತೆ ಮತ್ತು ಪಕ್ವತೆ ಸಾಧಿಸಿರಲಿಲ್ಲ ಎಂದು ಸಾಬೀತು ಪಡಿಸುತ್ತವೇನೋ, ಆದರೆ ಮಾಕ್ಸಿಸ್ಟ್ – ಸೋಷಿಯಲಿಸಂ ಸಿದ್ಧಾಂತಗಳು ಸಾರ್ವಜನಿಕ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ಪ್ರತಿಪಾದಿಸಿದ್ದು ಮಾತ್ರ ಇಂದಿಗೂ ಐತಿಹಾಸಿಕ. ಈಗಿನ ಶಿಕ್ಷಣ ಪದ್ಧತಿಯು ಮರಳಿ ಬೂಜ್ರ್ವಾ – ಬಂಡವಾಳಶಾಹಿ ಸಮಾಜವನ್ನೇ ಸೃಷ್ಟಿಸುತ್ತದೆ, ಹೀಗಾಗಿ ಶಿಕ್ಷಣವನ್ನು ಆಳುವ ವರ್ಗಗಳ ಹಿಡಿತದಿಂದ ಬಿಡುಗಡೆಗೊಳಿಸಬೇಕೆಂದು ಮಾಕ್ರ್ಸ ಮತ್ತು ಎಂಗೆಲ್ಸ್ ಚಿಂತಿಸಿದರು (ಮಾಕ್ರ್ಸ ಮತ್ತು ಎಂಗೆಲ್ಸ್,1978:487). ತಮ್ಮ ಪ್ರಖ್ಯಾತ ಪ್ರಬಂಧವಾದ ‘Theses on Feuerbach’ನಲ್ಲಿ ತರುಣ ಮಾಕ್ರ್ಸ “ ಮನುಷ್ಯರು ವ್ಯವಸ್ಥೆಯ, ಸಂದರ್ಭಗಳ, ಪಾಲನೆ ಮತ್ತು ಪೋಷಣೆಯ ಉತ್ಪನ್ನಗಳು ಹಾಗೂ ಅದರ ಶಿಶುಗಳು ಎನ್ನುವ ಜಡವಾದ ಭೌತಿಕವಾದದ ತತ್ವಗಳು ಈಗ ಕೊಂಚ ಬದಲಾಗಿ ಮನುಷ್ಯರು ಬೇರೊಂದು ವ್ಯವಸ್ಥೆಯ, ಬದಲಾವಣೆಗೊಂಡ ಪೋಷಣೆಯ ನೀತಿಗಳ ಉತ್ಪನ್ನಗಳು ಎಂದು ಹೇಳುತ್ತಿದ್ದಾರೆ. ಆದರೆ ಇವರು ಮರೆತಿರುವುದೇನೆಂದರೆ ಈಗ ಮನುಷ್ಯರು ಈ ವ್ಯವಸ್ಥೆಯನ್ನು, ಸಂದರ್ಭಗಳನ್ನು ಬದಲಾಯಿಸುತ್ತಾರೆ, ಮತ್ತು ಶಿಕ್ಷಕನಿಗೆ ಶಿಕ್ಷಣ ಕೊಡುವುದು ಅವಶ್ಯಕವಾಗಿದೆ” (ಮಾರ್ಕ್ಸ್  ಮತ್ತು ಎಂಗೆಲ್ಸ್,1978:144)

20ನೇ ಶತಮಾನವು ಬಿಚ್ಚಿಕೊಳ್ಳತೊಡಗಿದಾಗ ಜಾನ್ ಡೇವೆ ಅವರು ಸುಸ್ಥಿರವಾದ ಪ್ರಗತಿಪರ ಶಿಕ್ಷಣವನ್ನು ರೂಪಿಸಿದರು ಶಿಕ್ಷಣದೊಂದಿಗೆ ಪ್ರಜಾಪ್ರಭುತ್ವವನ್ನು ಬೆಸೆದರು. ಯಾವುದೇ ರಾಜ್ಯ, ದೇಶವು ಶಿಕ್ಷಣವಿಲ್ಲದಂತಹ ಪ್ರಜಾಪ್ರಭುತ್ವದ ಸಮಾಜವನ್ನು ಒಪ್ಪಿಕೊಳ್ಳಬಾರದು, ಈ ಪ್ರಜಾಪ್ರಭುತ್ವವು ನಿರಂತರವಾಗಿ ಜೀವಂತವಾಗಿರಬೇಕೆಂದರೆ ಸಮಾನ ಶಿಕ್ಷಣ ನೀತಿ ಜಾರಿಯಲ್ಲಿರಬೇಕು ಇದು ಉತ್ತಮ ಜೀವನ ಮತ್ತು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ ಎಂದು ಡೇವೆ ಪ್ರತಿಪಾದಿಸಿದರು. ಬಲವಾದ, ಕಸುವುಳ್ಳ ಪ್ರಜಾಪ್ರಭುತ್ವದ ಪ್ರತಿಪಾದಕರಾದ ಡೇವೆಯವರು ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ ಸಮತಾವಾದದ, ಒಳಗೊಳ್ಳುವಿಕೆಯ, ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದರು.

ಪ್ರಯೋಗಾತ್ಮಕ ಮತ್ತು ವಾಸ್ತವತಾವಾದಿಯಾಗಿದ್ದ ಜಾನ್ ಡೇವೆಯವರು ಶಿಕ್ಷಣವನ್ನು ಕ್ರಮವಾಗಿ ವಿಕಸನಗೊಳ್ಳುವ, ಪ್ರಯೋಗಾತ್ಮಕವಾದ ವಿಧಾನ ಮತ್ತು ಈ ವಿಧಾನದಲ್ಲಿ ಪ್ರತಿಯೊಬ್ಬರೂ ವಾಸ್ತವದಲ್ಲಿ ತೊಡಗಿಕೊಳ್ಳುವುದರ ಮೂಲಕವೇ ವಿಚಾರವಂತರಾಗುತ್ತಾರೆ ಎಂದು ಅವಲೋಕಿಸಿದರು. ನಿಜಾರ್ಥದಲ್ಲಿ ಪರಿಪಾಠಗಳ ಮೂಲಕ, ವಾಸ್ತವ ಅನುಭವಗಳ ನೆಲೆಯಿಂದ ಸಿದ್ಧಾಂತಗಳು ರೂಪುಗೊಳ್ಳಬೇಕು, ಶಿಕ್ಷಣವು ಕಾರ್ಯೋಪಯೋಗಿ ಆಗಿರಬೇಕು ಎಂದ ಡೇವೆಯವರು ಪ್ರಯೋಗ ಮತ್ತು ದೋಷ ಪದ್ಧತಿಯನ್ನು ಬಳಸಿಕೊಂಡು ಕೌಶಲ್ಯವನ್ನು ಕಲಿಯಬೇಕು ಮತ್ತು ಹಂತಹಂತವಾಗಿ ಪ್ರಜಾಪ್ರಭುತ್ವ ಸಮಾಜ ಮತ್ತು ಶಿಕ್ಷಣವನ್ನು ಸುಧಾರಿಸಬೇಕು ಎಂದು ಆಶಿಸಿದರು

1960ರ ನಂತರ ಇದೇ ಮಾದರಿಯ “ಕಲಿಕೆಯರಿಮೆ”ಯ ಮುನ್ನೋಟವನ್ನೊಳಗೊಂಡ ಆದರೆ ವಿಭಿನ್ನವಾದ ಐತಿಹಾಸಿಕ ನೆಲೆಯಾದ ಬ್ರೆಜಿಲ್‍ನಿಂದ ಬಹುಪಾಲು ಗಡಿಪಾರಾಗಿರುವ ಪೌಲೋ ಫ್ರೈರೆ “ ದಮನಿತಗೊಂಡ ತಳಸಮುದಾಯಗಳು ಸಮಾನವಾದ ಶಿಕ್ಷಣವನ್ನು ಪಡೆದಿಲ್ಲ, ಅದರ ಪ್ರಯೋಜನವನ್ನು, ಒಳಿತನ್ನು ಅನುಭವಿಸಿಲ್ಲ, ಮತ್ತು ಈ ಶಿಕ್ಷಣವನ್ನು ಮೇಲ್ವರ್ಗಗಳಿಂದ, ಶೋಷಕ ವರ್ಗಗಳಿಂದ ನಿರೀಕ್ಷಿಸುವುದಕ್ಕಾಗಲಿ, ಅದನ್ನು ಒಂದು ಉಡುಗೊರೆಯಾಗಿ ದೊರೆಯುತ್ತದೆಂದು ಕಾಯುವುದಕ್ಕಾಗಲೀ ಸಾಧ್ಯವಿಲ್ಲ, ಬದಲಾಗಿ ಸ್ವತಃ ತಮ್ಮನ್ನು ತಾವೇ ಶಿಕ್ಷಿತಗೊಳಿಸಿಕೊಳ್ಳಬೇಕು ಮತ್ತು ತಳಸಮುದಾಯಗಳ ಅವೈದಿಕ “ಕಲಿಕೆಯರಿಮೆ”ಯನ್ನು ರೂಪಿಸಬೇಕು” ಎಂದು ಪ್ರತಿಪಾದಿಸಿದರು (1972 : 2000 ). ಫ್ರೈರೆ ಪ್ರಕಾರ ಶೋಷಿತ ಸಮುದಾಯಗಳಿಗೆ ವಿಮೋಚನೆಯ ದಾರಿಯನ್ನು ಸೃಷ್ಟಿಸುವ ಈ ಶಿಕ್ಷಣವು ಹೆಗೆಲ್ ಸಿದ್ಧಾಂತವಾದ ಶಿಕ್ಷಕ / ಗುಲಾಮ ಡಯಲೆಕ್ಟಿಕ್ ಅನ್ನು ಬುಡಮೇಲುಗೊಳಿಸುತ್ತದೆ.

ಈ ಪೌಲೋ ಫ್ರೈರೆ ಮಾದರಿಯ ಚಿಂತನೆಯಲ್ಲಿ ಶೋಷಿತ ವ್ಯಕ್ತಿಯು ವಸ್ತುವಿನಿಂದ ವಿಷಯಕ್ಕೆ ಪರಿವರ್ತನೆಗೊಂಡು ಸಂಪೂರ್ಣವಾಗಿ ವಿಷಯವಾಗಿ ರೂಪುಗೊಳ್ಳುತ್ತ ಮನುಷ್ಯನಾಗಿ ಬೆಳೆಯುತ್ತಾನೆ. ಪೌಲೋ ಫ್ರೈರೆಯ ಶೋಷಿತ ಸಮುದಾಯಗಳ “ಕಲಿಕೆಯರಿಮೆ”ಯು ಕಲೋನಿಯಲ್ ಮತ್ತು ಶೋಷಣೆಯ ವ್ಯವಸ್ಥೆಗೆ ಪ್ರತ್ಯುತ್ತರ ನೀಡುತ್ತಲೇ ನಿರ್ವಸಾಹುತೀಕರಣ(ಡಿಕಲೊನೈಸ್)ವನ್ನು ಒಳಗೊಳ್ಳುತ್ತಿರುತ್ತದೆ ಮತ್ತು ಪ್ರಜ್ಞೆಯನ್ನು ರೂಪಿಸುವ ಕೆಲಸವನ್ನೂ ಮಾಡುತ್ತದೆ ಮತ್ತು ಅ ಮೂಲಕ ಪ್ರತಿಯೊಬ್ಬನೂ ಶಿಕ್ಷಕರೊಂದಿಗೆ ನಿರಂತರವಾಗಿ ಸಂವಾದಿಸುತ್ತಾ ಶಿಕ್ಷಣದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತದೆ.

ಶೋಷಿತ ತಳಸಮುದಾಯಗಳ “ಕಲಿಕೆಯರಿಮೆ”ಯನ್ನು ಅಭಿವೃದ್ಧಿಗೊಳಿಸಲು ಕಲಿಕೆಯ ಕ್ರಮಗಳನ್ನು ರೂಪಿಸಬೇಕಾಗುತ್ತದೆ. ಅದು ಪ್ರತಿಯೊಬ್ಬ ವ್ಯಕ್ತಿಗೆ ವೈಯುಕ್ತಿಕವಾಗಿ ಉತ್ತಮಗೊಳ್ಳಲು ಸಹಕರಿಸುತ್ತದೆ ಮತ್ತು ರೂಢಿಗತವಾದ ನೋಟಗಳು ಮತ್ತು ತತ್ವಗಳನ್ನು ಅನುಸರಿಸುವುದನ್ನು ತಿರಸ್ಕರಿಸಿ ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣದ ಮೂಲಕ ಉತ್ತಮ ಜೀವನವನ್ನು ಕಲ್ಪಿಸುತ್ತದೆ. ಶಿಕ್ಷಣವು ಎಂದಿಗೂ ಪ್ರಶ್ನಿಸದ ಒಪ್ಪಿತ ಪಾಠಗಳನ್ನು ಅನುಸರಿಸುವ ಒಂದು ರಚನೆ ಎಂದು ಫ್ರೈರೆ ಗ್ರಹಿಸಿದ್ದ. ರೂಢಿಗತ ತತ್ವಗಳನ್ನು ಅನುಸರಿಸುವಂತೆ ಹೇರುವ ಈ ಶಿಕ್ಷಣವು ಶೋಷಿತ ಸ್ಥಿತಿಯನ್ನು, ಕೆಳದರ್ಜೆಯ ಸ್ಥಾನವನ್ನು ಒಪ್ಪಿಕೊಂಡು ಶರಣಾಗತಿಯನ್ನು ಬೋದಿಸುತ್ತದೆ ಎಂದು ನಂಬಿದ್ದ ಫ್ರೈರೆ “ಶೋಷಿತರ ಕಲಿಕೆಯರಿಮೆ”ಯು ಈ ಪಟ್ಟಭದ್ರ ಹಿತಾಸಕ್ತಿಗಳ ಶಿಕ್ಷಣವನ್ನು ಮತ್ತು ಶಾಲಾ ವ್ಯವಸ್ಥೆಯನ್ನು ವಿರೋಧಿಸಬೇಕಾಗುತ್ತದೆ ಮತ್ತು ಕ್ರಾಂತಿಕಾರಿ ಪರಿವರ್ತನೆಯನ್ನು ಗುರಿಯಾಗಿಸಿಕೊಂಡು ವಿಮರ್ಶಾತ್ಮಕವಾದ, ವಿಮೋಚನೆಯ ಹುಡುಕಾಟದ “ಕಲಿಕೆಯರಿಮೆ”ಯನ್ನು ರೂಪಿಸುತ್ತದೆ

ಮಾರ್ಕ್ಸ್ , ಫ್ರೈರೆಯಿಂದ ಮೊದಲುಗೊಂಡು ನಾನು ಚರ್ಚಿಸಿದ ಶಿಕ್ಷಣದ ಕ್ಲಾಸಿಕಲ್ ಚಿಂತಕರೆಲ್ಲರೂ ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಕೇಂದ್ರ ಭೂಮಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ, ಸಂಪೂರ್ಣವಾಗಿ ಅರಿವನ್ನು ಪಡೆದ ವ್ಯಕ್ತಿಗಳನ್ನು, ಉತ್ತಮ ಸಮಾಜವನ್ನು ನಿರ್ಮಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಿಕ್ಷಣದ ವಿಮರ್ಶಾತ್ಮಕ ಫಿಲಾಸಫಿಯು ಪಶ್ಚಿಮದ ಪ್ರಜಾಪ್ರಭುತ್ವ ರಾಷ್ಟ್ರಗಳ ಶಿಕ್ಷಣದ ಮಾದರಿಗಳಿಗೆ ಪ್ರತಿಯಾಗಿ ಪ್ರಗತಿಪರ ದೃಷ್ಟಿಕೋನದ ಪರ್ಯಾಯ ಮಾದರಿಯ ಶಿಕ್ಷಣ ನೀತಿಗಳನ್ನು ನಿರೂಪಿಸಿದೆ. ಈ ಬದಲಿ ಶಿಕ್ಷಣ ನೀತಿಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿದೆ. ಈ ಶಿಕ್ಷಣದ ಫಿಲಾಸಫಿಯು “ಕಾರಣಗಳು, ವ್ಯಕ್ತಿ ನಿಷ್ಟತೆ ಮತ್ತು ಪ್ರಜಾಪ್ರಭುತ್ವ, ದೇಹ, ಲಿಂಗ, ಬಣ್ಣ, ಲೈಂಗಿಕತೆಯ ಪ್ರಾಮುಖ್ಯತೆಯ ನಿರ್ಲಕ್ಷ್ಯ ಹಾಗೂ ಮಾನವ ಬದುಕಿನ ಇನ್ನಿತರ ಆಯಾಮಗಳ” ಪ್ರಶ್ನಾತ್ಮಕವಾದ ಭಾವನೆಗಳೊಂದಿಗೆ ಕೆಲಸ ಮಾಡುತ್ತದೆ. ಆಧುನಿಕ ಸಿದ್ಧಾಂತಗಳ ರಾಚನಿಕೋತ್ತರವಾದ ವಿಮರ್ಶೆಯು ಇಂದಿನ ಕಾಲದ ವಿಮರ್ಶಾತ್ಮಕ ಸಿದ್ದಾಂತದ ಶಿಕ್ಷಣಕ್ಕೆ ಪ್ರಮುಖ ಹತಾರಗಳನ್ನು ಒದಗಿಸುತ್ತದೆ.

school2ರಾಚನಿಕೋತ್ತರವಾದದ ಸಿದ್ಧಾಂತಗಳು ಭಿನ್ನತೆ, ಅವೈದಿಕತೆ, ಕನಿಷ್ಟತೆ, ಅಂಚಿನ ಸಮುದಾಯ, ಬಹುಸಂಸ್ಕøತಿಗಳಿಗೆ ಪ್ರಾಮುಖ್ಯತೆಗೆ ಹೆಚ್ಚಿನ ಒತ್ತು ಕೊಡುತ್ತದೆ. ಅನುಭವಗಳ ವಿಭಿನ್ನ ಆಯಾಮಗಳಿಗೆ, ಆಧುನಿಕ ಪರಂಪರೆಯಲ್ಲಿ ಹತ್ತಿಕ್ಕಲ್ಪಟ್ಟ ದನಿಗಳಿಗೆ ಅವುಗಳ ಸಾಂದ್ರತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳುತ್ತದೆ. ರಾಚನಿಕೋತ್ತರವಾದವು ವೈವಿಧ್ಯತೆಯಲ್ಲಿ ಏಕತೆ, ಬಹುಸಂಸ್ಕøತಿಯಲ್ಲಿನ ವಿಶೇಷತೆಗಳನ್ನು ಒಳಗೊಂಡಂತಹ ಹೊಸದಾದ ವಿಮರ್ಶಾತ್ಮಕವಾದ ಸಿದ್ಧಾಂತಗಳನ್ನು ರೂಪಿಸುತ್ತದೆ ಮತ್ತು ಈ ಸಿದ್ಧಾಂತಗಳು ಆಧುನಿಕ ಕಲಿಕೆಯರಿಮೆ”ಯು ಕಡೆಗಣಿಸಿದ ವರ್ಗ, ಲಿಂಗ, ವರ್ಣ, ಲೈಂಗಿಕತೆ, ಐಡೆಂಟಿಟಿಯ ವಿವಿಧ ಮಜಲುಗಳು ಮತ್ತು ಐಡೆಂಟಿಟಿ ಮತ್ತು ಜೀವನಕ್ರಮಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿರುತ್ತದೆ.

ರಾಚನಿಕೋತ್ತರವಾದಿಗಳು ಪೂರ್ವೋತ್ತರ ಸಂದರ್ಭಗಳ ಕುರಿತಾದ ಪ್ರಾಮುಖ್ಯತೆಗೆ ಒತ್ತುಕೊಡುತ್ತಾರೆ. ನಿರಂತರ ಚಲನಶೀಲತೆಗೆ ಮತ್ತು ಹೊಸಚಿಂತನೆಗಳ ಪುನನಿರ್ಮಾಣಕ್ಕೆ ಅನುವು ಮಾಡಿಕೊಡುವಂತಹ ಸಾಮಾಜಿಕ ರಚನಾಕ್ರಮದ ಅವಶ್ಯಕತೆಯನ್ನು ಪ್ರತಿಪಾದಿಸುತ್ತಾರೆ.
ವಿಮರ್ಶಾತ್ಮಕ ರಾಚನಿಕೋತ್ತರವಾದವು ಆಧುನಿಕ ಬುದ್ಧಿಜೀವಿಗಳಲ್ಲಿ ದಿಢೀರನೆ ಕಂಡುಬರುವ ಪ್ರತಿಫಲನಾತ್ಮಕ ತಿರುವುಗಳಿಗೆ ತಲಸ್ಪರ್ಶಿಯಾಗಿ ಮಾರ್ಪಾಡು ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವದೊಳಗಿನ ಪೂರ್ವಗ್ರಹಗಳನ್ನು, ಮಿತಿಗಳನ್ನು ಮೀರುತ್ತಲೇ, ತನ್ನ ನಂಬಿಕೆಗಳನ್ನು, ಆಚರಣೆಗಳನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಿಕೊಳ್ಳುತ್ತಲೇ ತಮ್ಮನ್ನು ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತಗೊಳಿಸಿಕೊಳ್ಳಬೇಕೆಂದು, ನಿರಂತರವಾಗಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಳಪಡಿಸಿಕೊಳ್ಳಬೇಕೆಂದು ಆಶಿಸುತ್ತದೆ. (ಬೆಸ್ಟ್ ಮತ್ತು ಕೆಲ್ಲರ್ 1991 & 1997)

ರಾಚನಿಕೋತ್ತರವಾದಿಗಳ ಸಿದ್ಧಾಂತಗಳು ಮಹಿಳೆಯರಿಗೆ, ಗೇ, ಸಲಿಂಗಕಾಮಿಗಳಿಗೆ, ಆಧುನಿಕ ಶಿಕ್ಷಣದಿಂದ ವಂಚಿತರಾದವರಿಗೆ ಸಬಲೀಕರಣಗೊಳಿಸುವುದನ್ನು ಪ್ರತಿಪಾದಿಸುತ್ತದೆ. ಉದಾಹರಣೆಗೆ ಮೇರಿ ವೊಲ್‍ಸ್ಟೋನ್‍ಕ್ರಾಫ್ಟ್ (1988) ಅವರು ಫ್ರೆಂಚ್ ಕ್ರಾಂತಿಯ ನಂತರ ಶಿಕ್ಷಣವು ಜ್ಞಾನೋದಯಕ್ಕೆ ರಹದಾರಿಯಾಗಿದ್ದು ಆ ಮೂಲಕ ವ್ಯಕ್ತಿ ಸ್ವಾತಂತ್ರಕ್ಕೆ, ಸಮಾನತೆಗೆ, ಪ್ರಜಾಪ್ರಭುತ್ವದ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾದದ್ದನ್ನು ಉದಾಹರಣೆಯ ಮೂಲಕ ವಿವರಿಸುತ್ತಾರೆ. ಮೇರಿ ವೊಲ್‍ಸ್ಟೋನ್‍ಕ್ರಾಫ್ಟ್‍ರವರ ಪರಿಕಲ್ಪನೆಯಲ್ಲಿ ಶಿಕ್ಷಣವು ಸಮಾಜವನ್ನು ಸಮಾನತೆಯ ಆಧಾರದ ಮೇಲೆ ಪುನರೂಪಿಸುವ, ಮಹಿಳೆಗೆ ಸಮಾನ ಹಕ್ಕುಗಳನ್ನು ನೀಡಿ ರಾಜಕೀಯ, ಸಾಂಸ್ಕøತಿಕ ವಲಯಗಳನ್ನು ಒಳಗೊಂಡಂತೆ ಸಮಾಜದ ಎಲ್ಲಾ ಸ್ಥರಗಳಲ್ಲಿ ಪಾಲ್ಗೊಳ್ಳುವಂತೆ ಅವಕಾಶ ಮಾಡಿಕೊಡುವ ( ಇಲ್ಲಿ ವೊಲ್‍ಸ್ಟೋನ್‍ಕ್ರಾಫ್ಟ್ ಅವರು ದುಡಿಯುವ ವರ್ಗದ ಮಹಿಳೆಯರ ಕುರಿತು ನಿರ್ಲಕ್ಷ ವಹಿಸಿದ್ದರೂ ಸಹ) ಒಂದು ಅವಕಾಶವೆಂದೇ ಪರಿಗಣಿತವಾಗಿದೆ. ಮೇರಿ ವೊಲ್‍ಸ್ಟೋನ್‍ಕ್ರಾಫ್ಟ್ ಅವರು ಮುಂದುವರೆದು ಶಿಕ್ಷಣವು ಮಹಿಳೆಯರಿಗೆ ತಮ್ಮ ಬಿಕ್ಕಟ್ಟುಗಳಿಂದ, ತಳಮಳಗಳಿಂದ ಹೊರಬರಲು ಏಕೈಕ ಮಾರ್ಗವೆಂದೇ ಹೇಳುತ್ತಾರೆ

ರಾಚನಿಕೋತ್ತರವಾದ ಮತ್ತು ಬಹುಸಂಸ್ಕøತಿಯಿಂದ ಪ್ರಭಾವಗೊಂಡ ಬೆಲ್ ಹುಕ್ಸ್ ( 1994) ರಂತಹ ಹೊಸ ತಲೆಮಾರಿನ ಸ್ತ್ರೀವಾದಿ ಹೋರಾಟಗಾರ್ತಿ ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರಾದ, ಅಂಚಿನಲ್ಲಿ ಬದುಕುತ್ತಿರುವ ಶೋಷಿತ ಸಮುದಾಯಗಳ ದನಿಯಾಗುವ, ಅವರ ವಕ್ತಾರರಾಗುವ ಅಗತ್ಯತೆಯನ್ನು ಕುರಿತು ಒತ್ತಾಯಿಸುತ್ತಾರೆ. ಶಿಕ್ಷಣದೊಳಗೆ ಇವರಿಗೆಲ್ಲ ಧ್ವನಿ ಇರಬೇಕೆಂದು ಚಿಂತಿಸಿದ ಹುಕ್ಸ್ ಸಂಪೂರ್ಣ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ.

ಮೇಲಿನ ಎಲ್ಲಾ ದೃಷ್ಟಿಕೋನಗಳ ಆಧಾರದ ಮೇಲೆ ಚಿಂತಿಸುವುದಾದರೆ ಶಿಕ್ಷಣದ ದಾರ್ಶನಿಕತೆಯು ಒಳಗೊಳ್ಳುವಿಕೆಯ ಫಿಲಾಸಫಿಯ ಕಾಣ್ಮೆಗೆ ಒತ್ತು ಕೊಡುತ್ತದೆ. ಇದು ನೇರವಾಗಿ ಸಾಮಾಜಿಕ ಸಂಬಂಧಗಳನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿಕ್ಕಿನೆಡೆಗೆ ಹೊರಳಿಸುತ್ತದೆ. ಏಕೆಂದರೆ ಸಾಮಾಜಿಕ ಅಂತಸ್ತು ಮತ್ತು ಜೀವನ ಕ್ರಮ ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುವಂತಹ ಇಂದಿನ ಸಂದರ್ಭದಲ್ಲಿ ಐತಿಹಾಸಿಕ ಸಂಗತಿಗಳು, ಭೌಗೋಳಿಕ ಪರಿಧಿಗಳು, ಸಾಂಸ್ಕøತಿಕ ಇತಿಹಾಸ ಎಲ್ಲವನ್ನೂ ಒಳಗೊಂಡಂತೆ ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ರೂಪುಗೊಳ್ಳಬೇಕು. ಪ್ರತಿನಿತ್ಯ ಬದಲಾಗುವ ಜೀವನಕ್ರಮದಲ್ಲಿ ಬೇಡಿಕೆಗಳು, ಬಿಕ್ಕಟ್ಟುಗಳು ಮತ್ತು ಸಾಧ್ಯತೆಗಳನ್ನು ಪರಿಗಣಿಸಿ ಈ ಮೂಲಕ ಪರ್ಯಾಯ ಕಲಿಕೆಯರಿಮೆಯನ್ನು ರೂಪಿಸಬೇಕು ಮತ್ತು ಈ ಪರ್ಯಾಯ ಕಲಿಕೆಯರಿಮೆಯು ವಾಸ್ತವವಾದದ ನೆಲೆಗಟ್ಟಿನಲ್ಲಿ ಬಿಕ್ಕಟ್ಟುಗಳನ್ನು ಅರಿಯಬೇಕು. ಅಲ್ಲದೆ ಫಿಲಾಸಪಿಕಲ್ ಮತ್ತು ಸಾಮಾನ್ಯತೆಯ ಒಳನೋಟಗಳ ಮತ್ತು ಆಸ್ತಿತ್ವದಲ್ಲಿರುವ ವಿಮರ್ಶೆಗಳ ಅವಶ್ಯಕತೆ ಸಹ ಇದೆ.

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದ ಆಶಯದ ಪ್ರಕಾರ ಸಮಾಜದ ಪರಿವರ್ತನೆಗೆ ಶಿಕ್ಷಣದಲ್ಲಿ ಯಾವ ಬಗೆಯ ಕ್ರಾಂತಿಕಾರಿ ಬದಲಾವಣೆಗಳ ಅವಶ್ಯಕತೆ ಇದೆ ಎನ್ನುವುದರ ಕುರಿತಾಗಿ ನಮಗೆಲ್ಲ ಸ್ಥೂಲವಾದ ಅಂದಾಜಿರಬೇಕು. ಈ ಪ್ರಬಂಧದಲ್ಲಿ ನಾನು ಕ್ಲಾಸಿಕಲ್ ಮತ್ತು ಸಮಕಾಲೀನವಾದ ಆಕರಗಳನ್ನೊಳಗೊಂಡ ವಿಸ್ತಾರವಾದ meta-theory ಯನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ನೀತ್ಸೆ, ವೇಬರ್, ಫ್ರಾಯ್ಡ್ರವರ ಡಯಲೆಕ್ಟಿಕ್ ಉದ್ದೇಶಗಳನ್ನೊಳಗೊಂಡ, ಪ್ರಸ್ತುತ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಸಿದ್ಧಾಂತಗಳಲ್ಲಿನ ಸುಧಾರಿಸಿದ ಅಂಶಗಳೊಂದಿಗೆ ತೊಡಗಿಸಿಕೊಂಡ, ಡಯಲೆಕ್ಟಿಕ್ ಚರ್ಚೆಗಳನ್ನು ಬೆಳೆಸುವ ಫ್ರಾಂಕಫರ್ಟ ಶಾಲೆಯ ಸಿದ್ಧಾಂತಗಳನ್ನು ಬಹುತೇಕ ಮಾಕ್ರ್ಸಿಸ್ಟ್ ಚಿಂತಕರು ಮತ್ತು ಪಕ್ಷಗಳು ‘ಬೂಜ್ರ್ವಾ ಐಡಿಯಾಲಜಿಗಳು’ ಎಂದೇ ಟೀಕಿಸುತ್ತಾರೆ. ಇದೇ ಭಾವದಲ್ಲಿ ನಾನು ಸಹ ಜಾನ್ ಡೇವೆಯ ಕ್ರಾಂತಿಕಾರಿ ಪ್ರಜಾಪ್ರಭುತ್ವದ ಆಶಯಗಳನ್ನೊಳಗೊಂಡ ವಾಸ್ತವವಾದಿ ಮಾದರಿಯನ್ನು ,ರಾಚನಿಕೋತ್ತರವಾದವನ್ನು ಮತ್ತು ಇನ್ನಿತರ ಸಮಕಾಲೀನ ವಿಮರ್ಶಾತ್ಮಕ ಸಿದ್ಧಾಂತಗಳನ್ನು ಒಳಗೊಂಡಂತ ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವನ್ನು ಪ್ರತಿಪಾದಿಸುತ್ತೇನೆ.

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ವಿಮರ್ಶಾತ್ಮಕ ಸಿದ್ಧಾಂತಗಳನ್ನೊಳಗೊಂಡ ಸಮಾಜದಲ್ಲಿ ಬೇರೂರಬೇಕು. ಈ ಸಮಾಜವು ಈಗಾಗಲೇ ಆಸ್ತಿತ್ವದಲ್ಲಿರುವ ಬಂಡವಾಳಶಾಹಿ ಸಮಾಜ ಮತ್ತು ಅದರ ಆಳುವ ಮತ್ತು ಶ್ರಮಿಕ ವರ್ಗಗಳ ಸಂಬಂಧಗಳು, ವಿರೋಧಾಭಾಸಗಳು ಮತ್ತು ಪ್ರಗತಿಪರ ಸಮಾಜದ ಬದಲಾವಣೆಯ ಆಶಯಗಳಿಗೆ ತೆರೆದುಕೊಳ್ಳುವಿಕೆ ಮತ್ತು ಪರಿವರ್ತನೆಗೊಳ್ಳುತ್ತಿರುವಂತಹ ಆಚರಣೆಗಳನ್ನು ಅಳವಡಿಸಿಕೊಂಡಿರುತ್ತದೆ. ಇಂತಹ ಸಮಾಜದಲ್ಲಿ ಬೇರೂರಿದ ವಿಮರ್ಶಾತ್ಮಕ ಸಿದ್ಧಾಂತವು ಅವಲೋಕನ ಮತ್ತು ಅಳವಡಿಕೆಯ ದೃಷ್ಟಿಕೋನವನ್ನು, ವಿವಿಧ ಪಂಗಡಗಳ ಕಟ್ಟುವಿಕೆಯನ್ನು ತೋರಿಸಿಕೊಡುತ್ತದೆ. ಸಂಪರ್ಕಗಳನ್ನು ಬೆಳೆಸುತ್ತದೆ. ಸಿದ್ಧಾಂತಗಳ ನೀಲನಕ್ಷೆಯನ್ನು ತಯಾರಿಸುತ್ತದೆ ಮತ್ತು ಈ ಸಿದ್ಧಾಂತಗಳನ್ನು ವಾಸ್ತವದ ಕಾರ್ಯೋಪಯೋಗಿ ಸಾಧ್ಯತೆಯೊಂದಿಗೆ ಸಮೀಕರಿಸುತ್ತದೆ. ಈ ಪುನರಚಿಸಲ್ಪಟ್ಟ ಸಿದ್ಧಾಂತಗಳು ಇಂದಿನ ಜಾಗತೀಕರಣದ, ತಂತ್ರಜ್ಞಾನದ ಹೈಟೆಕ್ ಡಿಜಿಟಲ್ ಮತ್ತು ಸಂಘರ್ಷಮಯ ಜಗತ್ತಿನಲ್ಲಿ, ಸಮಕಾಲೀನ ಸಂದರ್ಭದ ಸಾಮಾಜಿಕ-ಮಾನಸಿಕ ಸ್ಥಿತಿಗಳಲ್ಲಿ ಪ್ರತಿ ಕ್ಷಣಗಳಲ್ಲಿ ಜರಗುತ್ತಿರುವ ಮುಖ್ಯವಾದ ಬದಲಾವಣೆಗಳನ್ನು ಸಿದ್ಧಾಂತೀಕರಣಗೊಳಿಸುತ್ತದೆ. ಈ ಪ್ರ್ರಕ್ರಿಯೆಗೆ ಮುಖ್ಯವಾಗಿ ವಿಶಾಲ ವ್ಯಾಪ್ತಿಯುಳ್ಳ, ಸಧೃಡವಾದ ಪುನರಚಿಸಲ್ಪಟ್ಟ ಸಿದ್ಧಾಂತಗಳ ಅವಶ್ಯಕತೆ ಇದೆ ಎಂದು ನಾನು ವಾದಿಸುತ್ತೇನೆ. ಸಾಮಾಜಿಕ ಚಳುವಳಿಗಳು, ಆಕ್ಟಿವಿಸಂ, ಅಪೂರ್ವವಾದ ಐಡೆಂಟಿಟಿಗಳು, ಸಾಮಾಜಿಕ ಸಂಬಂಧಗಳು, ಸಾಂಸ್ಕøತಿಕ ಸ್ವರೂಪಗಳನ್ನು ಈ ಪುನರಚಿಸಲ್ಪಟ್ಟ ಸಿದ್ಧಾಂತಗಳು ವಿಸ್ತಾರಗೊಳ್ಳುತ್ತಿರುವ ಜಾಗತಿಕ ಸಮಾಜದೊಂದಿಗೆ ತಳುಕು ಹಾಕುತ್ತದೆ

ವರ್ತಮಾನದ ಸಾಮಾಜಿಕ ಸ್ಥಿತಿಗತಿಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅರ್ಥೈಸಿಕೊಳ್ಳಲು, ಸಿದ್ಧಾಂತ ಮತ್ತು ಆಚರಣೆಗಳಿಗೆ ಎದುರಾಗುವ ಸವಾಲುಗಳನ್ನು ವಿಮರ್ಶಿಸಲು ಅಧುನಿಕೋತ್ತರವಾದದ ವ್ಯಾಖ್ಯಾನವು ಸಹಕಾರಿಯಾಗುತ್ತದೆ. ಆದರೆ ಆಧುನಿಕೋತ್ತರವಾದವನ್ನು ದುರುಪಯೋಗಪಡಿಸಿಕೊಳ್ಳಬಹುದು, ನಿಂದನೆಗಳಾಗಿ ಪರಿವರ್ತನೆಗೊಳಿಸಬಹುದು. ಹೀಗಾಗಿಯೇ ಲೈಟಾರ್ಡ, ಬೌದ್ರಿಲ್ಲಾರ್ಡ ಹಾಗೂ ಮತ್ತಿತರು ಚಿಂತಿಸಿದ ಆಧುನಿಕೋತ್ತರವಾದದ ಕೆಲವು ನಿಖರವಾದ ಸ್ವರೂಪಗಳನ್ನು ಆಧರಿಸಿ ಹೇಳುವುದಾದರೆ ಅವರು ಆಧುನಿಕೋತ್ತರ ಪರಿಸ್ಥಿತಿಯನ್ನು ವಿಶ್ಲೇಷಿಸಲು ಕೇವಲ ಸಿದ್ಧಾಂತಗಳ ಸಂಪನ್ಮೂಲಗಳ ಮೇಲೆ ಅವಲಂಬಿತವಾಗುವುದನ್ನು ತಿರಸ್ಕರಿಸುತ್ತಾರೆ. ಇದರ ಆಧಾರದ ಮೇಲೆಯೇ ನಾನು ಇಂದಿನ ಕಾಲಘಟ್ಟದ ಕತೃಸಂಬಂಧಗಳು, ಆರ್ಥಿಕ ನೀತಿಗಳು, ಪ್ರಜಾ ರಾಜ್ಯಾಡಳಿತ, ಸಮಾಜ, ದಿನನಿತ್ಯದ ಜೀವನಗಳ ಹರವುಗಳನ್ನು ಕರಾರುವಕ್ಕಾಗಿ ಅರ್ಥೈಸಲು ವಿಮರ್ಶಾತ್ಮಕ ಸಿದ್ಧಾಂತಗಳ ಮತ್ತು ಜಾಗತಿಕ meta-theory ಅವಶ್ಯಕತೆಯ ಪರವಾಗಿ ವಾದಿಸುತ್ತೇನೆ. ಆದರೆ ಮತ್ತೊಂದು ಕಡೆ ಡಯಲೆಕ್ಟಿಕ್ ಸಿದ್ಧಾಂತಗಳು ನಿರಂತರತೆ ಮತ್ತು ಸ್ಥಗಿತತೆಯನ್ನು ಪರಿಚಯಿಸುತ್ತದೆ, ಛಿದ್ರತೆ ಮತ್ತು ಹೊಸ ರೀತಿಯ ಅವಸ್ಥೆಯನ್ನು ಸೈದ್ಧಾಂತೀಕರಣಗೊಳಿಸುತ್ತದೆ ಮತ್ತು ಗತಕಾಲದೊಂದಿಗೆ ಜೊತೆಗೂಡಿಸುತ್ತದೆ
(ಮುಂದುವರೆಯುತ್ತದೆ)

Leave a Reply

Your email address will not be published.