ವಿಫಲವಾದ ಅನರ್ಥಕ್ರಾಂತಿಗೆ ಯಾರು ಹೊಣೆ ?

ನಾ ದಿವಾಕರ

ನವಂಬರ್ 8 2016ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವೇ ನಿಬ್ಬೆರಗಾಗುವ ರೀತಿಯಲ್ಲಿ 500 ಮತ್ತು 1000 ರೂ ನೋಟುಗಳನ್ನು ರದ್ದುಪಡಿಸಿದಾಗ ಭಾರತ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಎಲ್ಲೆಡೆ ಜಯಘೋಷ ಮೊಳಗಿತ್ತು. ಐವತ್ತು ದಿನಗಳ ಕಾಲಾವಕಾಶ ಕೊಡಿ, ನೋಟು ರದ್ದತಿ ಅಥವಾ ಅಮಾನ್ಯೀಕರಣ ವಿಫಲವಾದರೆ ಅಥವಾ ಸರ್ಕಾರದ ಉದ್ದೇಶಿತ ಧ್ಯೇಯ ಈಡೇರದಿದ್ದರೆ ನನ್ನನ್ನು ಸಾರ್ವಜನಿಕವಾಗಿ ಸುಟ್ಟುಬಿಡಿ ಎಂದು ತಮ್ಮ ಮನ್ ಕಿ ಬಾತ್ ಮೂಲಕ ಘೋಷಿಸಿದ ಪ್ರಧಾನಿ ಮೋದಿ ದೇಶದ ಮಧ್ಯಮ ವರ್ಗಗಳ ವಂದಿಮಾಗಧ ಪಡೆಗಳಿಗೆ ಏಕ್‍ದಂ ಹೀರೋ ಆಗಿಬಿಟ್ಟರು. ಅಧಿಕಾರಕ್ಕೆ ಬಂದ ನೂರು ದಿನಗಳೊಳಗಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ ಅಕ್ರಮ ಸಂಪತ್ತನ್ನು ಭಾರತಕ್ಕೆ ತರುತ್ತೇವೆ ಎಂದು ಘೋಷಿಸಿದ್ದ ಮೋದಿ ನೂರು ದಿನಗಳೊಳಗೆ ಕಂಡುಕೊಂಡ ಸತ್ಯ ಏನೆಂದು ಜನತೆಗೆ ತಿಳಿಸಬೇಕಿತ್ತು. ಹಾಗಾಗಿ ಅಮಾನ್ಯೀಕರಣದ ಮೂಲಕ ಈ ಸತ್ಯವನ್ನು ತಿಳಿಸಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿ ಭೂಗತವಾಗಿರುವ ಕಪ್ಪು ಹಣ ಹೇಗೆ ಅಗೋಚರವೋ, ಅತೀತವೋ ಹಾಗೆಯೇ ಭಾರತದ ಅರ್ಥವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಕಪ್ಪುಹಣವೂ ಅತೀತ ಎನ್ನುವುದನ್ನು ತಮ್ಮ ಅಮಾನ್ಯೀಕರಣದ ಮೂಲಕ ಸಾಬೀತುಪಡಿಸಿದ್ದಾರೆ. ದುರಂತ ಎಂದರೆ ನೋಟು ರದ್ದತಿ ಅಥವಾ ಅಮಾನ್ಯೀಕರಣ ಪ್ರಕ್ರಿಯೆಗೂ ಕಪ್ಪುಹಣದ ಶೋಧನೆಗೂ ಕಿಂಚಿತ್ತೂ ಸಂಬಂಧವಿಲ್ಲ ಎಂಬ ಅರ್ಥಶಾಸ್ತ್ರದ ಸರಳ ಸತ್ಯ ನಮ್ಮ ಪ್ರಜ್ಞಾವಂತ ಸಮಾಜಕ್ಕೆ ಹೊಳೆಯಲಿಲ್ಲ. ಯಾವುದೇ ರೀತಿಯ ಅಮಲು ಪ್ರಜ್ಞೆಯನ್ನು ಕೊಂದುಹಾಕುತ್ತದೆ ಎಂದು ನಿರೂಪಿಸಲು ಕಳೆದ ಮೂರು ವರ್ಷಗಳ ಬೆಳವಣಿಗೆಗಳೇ ಸಾಕ್ಷಿ.

ಡಿಜಿಟಲ್ ಭಾರತ, ನಗದು ರಹಿತ ಅರ್ಥವ್ಯವಸ್ಥೆ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅಮಾನ್ಯೀಕರಣ ನೀತಿಯನ್ನು ಜಾರಿಗೊಳಿಸಲಾಗಿದೆ, ಭಯೋತ್ಪಾದಕರ ನಿಯಂತ್ರಣ ಮತ್ತು ನಕಲಿ ನೋಟ್ ಹಾವಳಿಯ ನಿಯಂತ್ರಣ ಅಮಾನ್ಯೀಕರಣದಿಂದ ಸಾಧ್ಯ ಎಂಬ ಘೋಷಣೆಗಳನ್ನು ಸಾರ್ವತ್ರಿಕ ಸತ್ಯ ಎಂದು ನಿರೂಪಿಸಲು ಹೊರಟ ವಂದಿಮಾಗಧ ಪಡೆಗಳಿಗೆ ಬಹುಶಃ ಒಂದು ವರ್ಷದ ನಂತರ ಜ್ಞಾನೋದಯವಾಗಿರಲೇಬೇಕು. ಆರು ದಶಕಗಳ ಆಡಳಿತ ವ್ಯವಸ್ಥೆಯಿಂದ ಹತಾಶೆಯ ಶಿಖರ ತಲುಪಿದ್ದ ಭಾರತದ ಜನಸಾಮಾನ್ಯರಿಗೆ ಬದಲಾವಣೆ ಅಗತ್ಯವಾಗಿ ಬೇಕಿತ್ತು. ಬದಲಾವಣೆಯ ಹರಿಕಾರನ ಶೋಧದಲ್ಲಿದ್ದ ಜನತೆಯ ಹಪಾಹಪಿಗೆ ಕಾಯಕಲ್ಪ ಒದಗಿಸುವ ಒಬ್ಬ ವ್ಯಕ್ತಿ ಬೇಕಿತ್ತು. ಬಹುಶಃ ನರೇಂದ್ರ ಮೋದಿಯ ಆಕರ್ಷಣೀಯ ಭಾಷಣಗಳಿಗೆ ಈ ಹಪಾಹಪಿ ಬಲಿಯಾಗಿತ್ತು. ಅಧಿಕಾರ ರಾಜಕಾರಣವನ್ನು ನಡೆಸುವ ಸಾಮಥ್ರ್ಯಕ್ಕೂ ಅಡಳಿತ ನಿರ್ವಹಿಸುವ ಅರ್ಹತೆಗೂ ಇರುವ ವ್ಯತ್ಯಾಸವನ್ನೇ ಅರಿಯದ ಭಾರತದ ಮತದಾರ ಪ್ರಭುಗಳಿಗೆ ಭ್ರಮಾಲೋಕದಲ್ಲಿ ವಿಹರಿಸುತ್ತಾ ಮರೀಚಿಕೆಗಳನ್ನು ಬೆನ್ನಟ್ಟಿ ಮುನ್ನಡೆಯುವುದು ಕಳೆದ ನಾಲ್ಕು ದಶಕಗಳಲ್ಲಿ ಅಭ್ಯಾಸವಾಗಿಬಿಟ್ಟಿದೆ. ಇದರ ಪರಿಣಾಮವೇ ಅಮಾನ್ಯೀಕರಣದ ನಂತರದಲ್ಲಿ ಕಂಡುಬಂದ ಸಾರ್ವತ್ರಿಕ ನಿಷ್ಕ್ರಿಯತೆ ಮತ್ತು ಸಾರ್ವಜನಿಕ ಜಡತ್ವ.

ಸುಡುವ ಪ್ರಶ್ನೆಯನ್ನು ಈಗ ಬದಿಗಿಡೋಣ. ಭಾರತದ ಸಾಮಾಜಿಕ ವ್ಯವಸ್ಥೆ ಅನ್ಯರನ್ನು ಸುಡುವುದಕ್ಕಾಗಿಯೇ ಕೆಲವು ಸಾಂಸ್ಥಿಕ ಶಕ್ತಿಗಳನ್ನು ಸೃಷ್ಟಿಮಾಡಿದೆ. ಇಲ್ಲಿ ಗಮನಿಸಬೇಕಿರುವ ಮುಖ್ಯ ಸಂಗತಿ ಎಂದರೆ 120 ಕೋಟಿ ಜನಸಂಖ್ಯೆ ಇರುವ ಒಂದು ಪ್ರಬುದ್ಧ ದೇಶವನ್ನು, ಶೇ 60ರಷ್ಟು ಸಾಕ್ಷರತೆ ಇರುವ ಸಮಾಜವನ್ನು, ಅತ್ಯಧಿಕ ಯುವ ಸಮೂಹ ಇರುವ ರಾಷ್ಟ್ರವನ್ನು ಒಂದು ಆಡಳಿತಾರೂಢ ಪಕ್ಷ ಹೇಗೆ ಕ್ಷಣಮಾತ್ರದಲ್ಲಿ ಮೂರ್ಖರನ್ನಾಗಿ ಮಾಡಲು ಸಾಧ್ಯವಾಯಿತು ? ಏಳು ದಶಕಗಳ ಸ್ವತಂತ್ರ ಭಾರತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ದೇಶ ಎಷ್ಟೇ ಮುನ್ನಡೆ ಸಾಧಿಸಿದ್ದರೂ ಒಂದು ನೈಜ ಪ್ರಾಮಾಣಿಕ, ತತ್ವನಿಷ್ಠ, ಸಂವಿಧಾನಬದ್ಧ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯನ್ನು ಭಾರತದ ಜನತೆ ಕಾಣಲಾಗಿಲ್ಲ. ಗ್ರಾಮಪಂಚಾಯತಿಯ ಸದಸ್ಯರಿಂದ ಹಿಡಿದು ಪ್ರಧಾನಮಂತ್ರಿಯವರೆಗೆ ಭ್ರಷ್ಟಾಚಾರದ ಕಬಂಧ ಬಾಹುಗಳು ಚಾಚಿರುವುದನ್ನು ತಮ್ಮ ನಿತ್ಯ ಜೀವನದಲ್ಲೇ ಕಾಣುತ್ತಿದ್ದ ಶ್ರಮಜೀವಿಗಳಿಗೆ, ಮಧ್ಯಮ ವರ್ಗಗಳಿಗೆ ಭ್ರಷ್ಟಾಚಾರ ಮತ್ತು ಕಪ್ಪುಹಣ ಭಯೋತ್ಪಾದಕರಂತೆ ಕಾಣುತ್ತಿದ್ದುದು ವಾಸ್ತವ.

ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ನಿರ್ಮೂಲ ಮಾಡುವ ಈ ಹಪಾಹಪಿಯೇ 2014ರಲ್ಲಿ ಮೋದಿಯ ಗೆಲುವಿಗೆ ಕಾರಣವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಹತ್ತು ವರ್ಷಗಳ ಯುಪಿಎ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿತ್ತು. ಸ್ವಿಸ್ ಬ್ಯಾಂಕಿನಲ್ಲಿರುವ ಅಕ್ರಮ ಸಂಪತ್ತಿನ ವಾಪಸಾತಿ, ಕಪ್ಪು ಹಣದ ನಿಯಂತ್ರಣ, ಭಯೋತ್ಪಾದಕರ ಮೇಲಿನ ನಿಗ್ರಹ ಮತ್ತು ಉನ್ಮತ್ತ ರಾಷ್ಟ್ರೀಯವಾದ ಈ ನಾಲ್ಕೂ ಘೋಷಣೆಗಳು 2014ರ ಚುನಾವಣೆಯಲ್ಲಿ ವಿಭಿನ್ನ ಫಲಿತಾಂಶ ನೀಡಲು ನೆರವಾಗಿದ್ದವು. ಆದರೆ ತಮ್ಮ ಚುನಾವಣಾ ಘೋಷಣೆಗಳಿಗೂ, ವಾಸ್ತವ ಸನ್ನಿವೇಶಕ್ಕೂ ಇರುವ ಅಂತರ, ವ್ಯತ್ಯಾಸವನ್ನು ಅರಿತ ಮೋದಿ ಸರ್ಕಾರಕ್ಕೆ ಆಡಳಿತ ವ್ಯವಸ್ಥೆಯನ್ನು ಮೂಲತಃ ಸರಿಪಡಿಸುವ ಇಚ್ಚಾಶಕ್ತಿ ಇರಲಿಲ್ಲ. ಏಕೆಂದರೆ ಮೋದಿಯ ದಿಗ್ವಿಜಯಕ್ಕೆ ಕಾರಣರಾದ ಕಾರ್ಪೋರೇಟ್ ಉದ್ಯಮಿಗಳಿಗೆ ವ್ಯವಸ್ಥೆಯ ಯಥಾಸ್ಥಿತಿಯೇ ಅಪ್ಯಾಯಮಾನವಾಗಿತ್ತು. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕಪ್ಪುಹಣ ಅನಿವಾರ್ಯ ಎಂಬ ನಿತ್ಯಸತ್ಯವನ್ನು ಮೋದಿ ಸಹ ಬಲ್ಲವರಾಗಿದ್ದರು. ಈ ದೇಶದ ಅರ್ಥಶಾಸ್ತ್ರಜ್ಞರೂ ಬಲ್ಲವರಾಗಿದ್ದಾರೆ. ಕಪ್ಪುಹಣದ ಕೂಪಗಳು ಇಲ್ಲದಿದ್ದರೆ ಅಕ್ರಮ ಬಂಡವಾಳದ ನದಿ ಹರಿಯುವುದಿಲ್ಲ ಎಂದೂ ಅರಿತಿದ್ದಾರೆ. ಆದರೂ ಅಮಾನ್ಯೀಕರಣದ ಮೂಲಕ ನಗದು ರೂಪದಲ್ಲಿನ ಕಪ್ಪು ಹಣವನ್ನು ಬಯಲಿಗೆಳೆಯುತ್ತೇವೆ ಎಂದು ಘೋಷಿಸಿ ಜನಸಾಮಾನ್ಯರ ಒಕ್ಕೊರಲ ಮಾನ್ಯತೆ ಪಡೆದಿದ್ದು ಮೋದಿಯ ಚಾಣಕ್ಯ ನೀತಿಗೆ ಸೈ ಎನ್ನಲೇಬೇಕು.

ಅಮಾನ್ಯೀಕರಣ ಕಪ್ಪುಹಣವನ್ನು ಬಿಳುಪು ಮಾಡಲಿಲ್ಲ ಬದಲಾಗಿ ಮತ್ತಷ್ಟು ಕಗ್ಗತ್ತಲಿಗೆ ಸರಿಸಿತ್ತು. ಜನತೆಯ ಕಣ್ಣೆದುರೇ ಕಾಣುವ ಕಪ್ಪುಹಣದ ಭಂಡಾರಗಳು ಅಲುಗಾಡಲೇ ಇಲ್ಲ. ಶ್ರಮಿಕರ ಬೆವರು ನೆತ್ತರು ಬೆರೆಸಿ ಔದ್ಯಮಿಕ ಜಗತ್ತು ನಿರ್ಮಿಸಿದ ದಂತದ ಅರಮನೆಗಳು ಧ್ವಂಸವಾಗಲಿಲ್ಲ. ಕೋಟ್ಯಂತರ ಕೃಷಿಕರನ್ನು ನಿರ್ಗತಿಕರನ್ನಾಗಿಸಿ ತಮ್ಮ ಅಕ್ರಮ ಭಂಡಾರಗಳನ್ನು ಹುಗಿದಿಟ್ಟ ಶ್ರೀಮಂತರಲ್ಲಿ ಅಮಾನ್ಯೀಕರಣ ನಡುಕ ಹುಟ್ಟಿಸಲಿಲ್ಲ. ಈ ವೇದನೆ, ಯಾತನೆಗಳನ್ನು ಅನುಭವಿಸಿದವರು , ತಮ್ಮ ಬಳಿ ಇರುವ ಅಲ್ಪ ಸ್ವಲ್ಪ ಉಳಿತಾಯದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಲು (ಬ್ಯಾಂಕುಗಳ ಮೂಲಕ) ದಿನಗಟ್ಟಲೆ ಸಾಲುಗಟ್ಟಿ ನಿಂತು 90 ಅಮಾಯಕ ಜೀವಗಳನ್ನು ಕಳೆದುಕೊಂಡ ಪ್ರಜ್ಞಾವಂತ ಪ್ರಜೆಗಳು. ಮೋದಿ ಪ್ರತಿನಿಧಿಸುವ ಆಳ್ವಿಕರಿಗೆ ಈ ಸಾವುಗಳು ದೇಶಕ್ಕಾಗಿ ಮಾಡಿದ ಬಲಿದಾನವಾಗಿ ಕಂಡವು. ಜನಸಾಮಾನ್ಯರಿಗೆ ದೇಶಕ್ಕಾಗಿ ಮಾಡಿದ ತ್ಯಾಗದಂತೆ ಕಂಡವು. ಅಕ್ರಮ ಸಂಪತ್ತಿನ ಒಡೆಯರಿಗೆ ಮತ್ತೊಂದು ಚಿನ್ನದ ಗಣಿಯಂತೆ ಕಂಡವು. ಇಷ್ಟೆಲ್ಲಾ ಯಾತನೆಗಳ ನಂತರ ಭಾರತದ ಸಾರ್ವಭೌಮ ಜನತೆ ಗಳಿಸಿದ್ದೇನು ?

ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಉತ್ಪಾದನಾ ಕ್ಷೇತ್ರ ಎಲ್ಲ ಕ್ಷೇತ್ರಗಳಲ್ಲೂ ದೇಶ ಹಿಂದಕ್ಕೆ ಸಾಗುತ್ತಿದೆ. ನಗದು ರಹಿತ ಅರ್ಥವ್ಯವಸ್ಥೆಯನ್ನು ಜಾರಿಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ ವಿಫಲವಾಗುತ್ತಿದೆ. ಡಿಜಿಟಲ್ ಭಾರತವನ್ನು ನಿರ್ಮಿಸುವ ಕನಸು ಕ್ರಮೇಣ ನನಸಾಗಬಹುದಾದರೂ ಪ್ರಸ್ತುತ ಸಂದರ್ಭದಲ್ಲಿ ಹಿನ್ನಡೆ ಸಾಧಿಸಿದೆ. ಮಾಜಿ ಪ್ರಧಾನಿ ಮತ್ತು ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ನಿರೀಕ್ಷೆಯಂತೆ ಜಿಡಿಪಿ ಶೇ 2ರಷ್ಟು ಕುಸಿದಿದೆ. ದೇಶದಲ್ಲಿ ಆರ್ಥಿಕ ಹಿಂಜರಿತ ಇರುವುದನ್ನು ವಿತ್ತಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಇನ್ನು ಆರು ತಿಂಗಳಲ್ಲಿ ಆರ್ಥಿಕ ಕುಸಿತ ಖಚಿತ ಎಂದು ಬಿಜೆಪಿ ಸಂಸದ ಮತ್ತು ಅರ್ಥಶಾಸ್ತ್ರಜ್ಞ ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ. ಇದಾವುದೂ ಅನಿರೀಕ್ಷಿತವಲ್ಲ ಎಂಬ ಸತ್ಯವನ್ನು ಅಮಾನ್ಯೀಕರಣದ ಸಂದರ್ಭದಲ್ಲೇ ಹಲವಾರು ಪ್ರಜ್ಞಾವಂತರು ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಉನ್ಮತ್ತ ರಾಷ್ಟ್ರೀಯತೆಯ ವಾತಾವರಣದಲ್ಲಿ ಪ್ರತಿರೋಧದ ದನಿಗಳೆಲ್ಲವೂ ದೇಶದ್ರೋಹದ ದನಿಗಳಾಗಿ ಪರಿಣಮಿಸಿದ್ದು ಈ ದೇಶದ ದುರಂತ. ಇಂದು ಈ ವಿದ್ರೋಹಿ ದನಿಗಳ ಮನದ ಮಾತುಗಳು ಪ್ರಧಾನಿಗಳ ಮನದ ಮಾತುಗಳನ್ನು ಮಸುಕಾಗಿಸುತ್ತಿರುವುದು ವಾಸ್ತವ.
ಮೋದಿ ಸರ್ಕಾರದ ಸ್ಮಾರ್ಟ್ ಸಿಟಿ, ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ದೇಶದೊಳಗೆ ಬಂಡವಾಳ ಪ್ರವೇಶಿಸಲು ನಿರ್ಮಿಸಿದ ಮಹಾದ್ವಾರಗಳು.

ಈಗ ಬುಲೆಟ್ ರೈಲಿನ ಮುಖಾಂತರ ಪ್ರವೇಶಿಸಿದೆ. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಬಿಇಎಂಎಲ್‍ನಂತಹ ಬೃಹತ್ ಸಾರ್ವಜನಿಕ ಉದ್ದಿಮೆಯ ಸಮಾಧಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಬ್ಯಾಂಕುಗಳ ಗೋರಿಗಳೂ ಸಿದ್ಧವಾಗುತ್ತವೆ. ಭಾರತದ ಆಳುವ ವರ್ಗಗಳಿಗೆ ಅರ್ಥವ್ಯವಸ್ಥೆಯ ವ್ಯಾಕರಣವೇ ತಿಳಿದಿಲ್ಲ ಎನಿಸಿದರೆ ಅಚ್ಚರಿಯೇನಿಲ್ಲ. ಮೂರು ತಿಂಗಳ ಕಾಲ ದೇಶದ ಅರ್ಥವ್ಯವಸ್ಥೆಯನ್ನು ಮತ್ತು ಸಾಮಾಜಿಕ ಜನಜೀವನವನ್ನು ಅಯೋಮಯಗೊಳಿಸಿದ ಸರ್ಕಾರ ಸಾಧಿಸಿದ್ದಾದರೂ ಏನು ? ನವಂಬರ್ 8ರ ಮುನ್ನ ಇದ್ದ ಪರಿಸ್ಥಿತಿ ಮರಳಿದೆ. ಅದೇ ನಗದು ವ್ಯವಹಾರ, ಅದೇ ರಿಯಲ್ ಎಸ್ಟೇಟ್, ಅದೇ ಭ್ರಷ್ಟಾಚಾರ, ಅದೇ ಭಯೋತ್ಪಾದನೆ ಎಲ್ಲವೂ ಇದ್ದಂತೆಯೇ ಇದೆ. ಅಂದರೆ ಅಮಾನ್ಯೀಕರಣದ ಉದ್ದೇಶವಾದರೂ ಏನು ? ಮನ್ ಕಿ ಬಾತ್ ಇದನ್ನು ಹೇಳದಿರಬಹುದು. ಆದರೆ ಪ್ರಜ್ಞೆ ಇರುವ ಯಾರಿಗಾದರೂ ಅರ್ಥವಾಗುತ್ತದೆ. ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡುವ ಮೊದಲ ಮೆಟ್ಟಿಲು ಅಮಾನ್ಯೀಕರಣ ಎಂದು. ಭಾರತದ ಪ್ರಜೆಗಳು ಪ್ರಜ್ಞಾಹೀನರಾಗಬಹುದು ಆದರೆ ಪ್ರಜ್ಞಾಶೂನ್ಯರಲ್ಲ. ಆಳ್ವಿಕರಿಗೆ ಇದು ನೆನಪಿರಲಿ.

Leave a Reply

Your email address will not be published.