ವಿಕೃತ ಭಾವನೆಗಳನ್ನು ಕೊಲ್ಲಿ ದೇಹಗಳನ್ನು ಬದುಕಲು ಬಿಡಿ

ನಾ ದಿವಾಕರ

asdasdasdasdsadsad

ನಿರ್ಭಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಆದರೆ ಅಂತಿಮ ನ್ಯಾಯ ಇನ್ನೂ ಕಾಣಬೇಕಿದೆ. ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಅಪರಾಧಿಗಳು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುತ್ತಾರೆ. ಶೀಘ್ರದಲ್ಲೇ ನೂತನ ರಾಷ್ಟ್ರಪತಿ ಆಯ್ಕೆಯಾಗಲಿದೆ. ಈ ಪ್ರಕ್ರಿಯೆಯಿಂದ ಉಂಟಾಗುವ ವಿಳಂಬ ಶಿಕ್ಷೆಗೊಳಗಾಗಿರುವ ಅಪರಾಧಿಗಳಿಗೆ ಉಸಿರಾಡಲು ಮತ್ತಷ್ಟು ಅವಕಾಶ ಕಲ್ಪಿಸುತ್ತದೆ. ಬಹುಶಃ ನಿರ್ಭಯ ಪ್ರಕರಣ ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ಕೊಂಚ ಮಟ್ಟಿಗಾದರೂ ಸಂವೇದನೆಯ ತುಣುಕುಗಳನ್ನು ಕಾಣುವ ಅವಕಾಶ ಕಲ್ಪಿಸಿದೆ ಎನ್ನಬಹುದು. ಆದರೆ ಈ ಸಂವೇದನೆ ವ್ಯಕ್ತಿಗತ ನೆಲೆಯಲ್ಲಿ ವ್ಯಕ್ತವಾಗುತ್ತಿರುವುದೇ ಹೊರತು ಸಾಮುದಾಯಿಕ ಅಥವಾ ಸಾಂಸ್ಕೃತಿಕ ನೆಲೆಯಲ್ಲಿ ವ್ಯಕ್ತವಾಗುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಹುಡುಕುವುದೇ ಸಂವೇದನೆಯ ಕೊರತೆಯ ಲಕ್ಷಣ ಎನ್ನಬಹುದು. ಒಂದು ಪ್ರಬುದ್ಧ ಸುಶಿಕ್ಷಿತ ಸಮಾಜ ತನ್ನ ಅಂತರಾಳದಲ್ಲಿನ ವಿಕೃತ ಭಾವನೆಗಳನ್ನು ಕೊನೆಗಾಣಿಸಲು ಯತ್ನಿಸಿದರೆ ಬಹುಶಃ ಕಾನೂನು ಅವಲಂಬನೆ ಅಗತ್ಯ ಇರುವುದಿಲ್ಲ. ಆದರೆ ಪಿತೃ ಪ್ರಧಾನ ವ್ಯವಸ್ಥೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಈ ಆತ್ಮಾವಲೋಕನಕ್ಕೆ ಅವಕಾಶವೇ ಇರುವುದಿಲ್ಲ.

ನಿಜ, ನಿರ್ಭಯ ಪ್ರಕರಣ ಭಾರತದ ಸಾಮಾಜಿಕ ಚೌಕಟ್ಟಿನ ಒಂದು ಕ್ರೂರ ಮುಖವಾಡವನ್ನು ಕಳಚಿಹಾಕಿತ್ತು. ಆಳುವ ವರ್ಗಗಳ ಆಡಳಿತ ಪೀಠದ ನೆರಳಿನಲ್ಲೇ ಅಮಾಯಕ ಜೀವಗಳ ಬಲಿಪೀಠಗಳು ಇರುವುದನ್ನು ಯಾವುದೇ ಪ್ರಜ್ಞಾವಂತ ಸಮಾಜ ಸಹಿಸಲಾಗುವುದಿಲ್ಲ. ಕನಿಷ್ಠ ಪಕ್ಷ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಮನಸುಗಳಿಗೆ ತಮ್ಮ ಕೈಚಾಚಿನ ವ್ಯಾಪ್ತಿಯಲ್ಲಾದರೂ ಒಂದು ಉತ್ತಮ ಮೌಲ್ಯಯುತ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗಬೇಕಲ್ಲವೇ ? ಆದರೆ ಹಾಗಾಗುತ್ತಿಲ್ಲ. ನಿರ್ಭಯ ಪ್ರಕರಣದ ನಂತರವೂ ಇದು ಸಾಧ್ಯವಾಗಿಲ್ಲ. ಗಲ್ಲು ಶಿಕ್ಷೆಯ ನಂತರವೂ ಬಹುಶಃ ಸಾಧ್ಯವಾಗುವುದಿಲ್ಲ. ಏಕೆಂದರೆ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆ ಮತ್ತು ಮೌಲ್ಯಗಳಲ್ಲೇ ಸಂವೇದನೆಯ ಕೊರತೆ ಇದೆ. ಆಡಳಿತ ವ್ಯವಸ್ಥೆ ಇದರಿಂದ ಹೊರತಾಗುವುದಿಲ್ಲ. ಸಂಸತ್ತಿನಲ್ಲಿ ನಡೆಯುವ ಮಹಿಳಾ ಮೀಸಲಾತಿಯ ಚರ್ಚೆಗಳನ್ನು ಗಮನಿಸಿದರೆ ಭಾರತ ಇನ್ನೂ ತನ್ನ ಮಧ್ಯಕಾಲೀನ ಬರ್ಬರತೆ ಮತ್ತು ಅಧಿಪತ್ಯದ ಅಹಮಿಕೆಯ ಚೌಕಟ್ಟಿನಿಂದ ಹೊರಬಂದಿಲ್ಲ ಎನ್ನುವುದು ಸಾಬೀತಾಗುತ್ತದೆ. ಜಾತಿ ವ್ಯವಸ್ಥೆಯ ಶ್ರೇಷ್ಠತೆ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ಅಹಮಿಕೆ ಈ ಎರಡು ವಿದ್ಯಮಾನಗಳ ಜುಗಲ್‍ಬಂದಿಗೆ ಬಲಿಯಾಗುತ್ತಿರುವುದು ನಿರ್ಭಯ, ಸೌಜನ್ಯ, ಬಿಲ್ಕಿಸ್ ಬಾನೋ ಮುಂತಾದ ಅಮಾಯಕ ಮಹಿಳೆಯರು. ನಮಗೆ ಬೇಕಿರುವುದು ಈ ಅಸಹಾಯಕ ಮಹಿಳೆಯರಿಗೆ ಸಾಂತ್ವನ ಅಲ್ಲ ಒಂದು ಸುಭದ್ರ ಜೀವನ. ಇದು ಕಾರಾಗೃಹದ ನೇಣುಗಂಬದಲ್ಲಿ ಇತ್ಯರ್ಥವಾಗುವುದಲ್ಲ. ನ್ಯಾಯಾಲಯದ ವಿದ್ವತ್ ಪೀಠದಿಂದ ನಿರ್ಣಯವಾಗುವುದಲ್ಲ. ಮಾನವ ಸಮಾಜದ ಸಂವೇದನೆಯ ಛಾಯೆಯಲ್ಲಿ ಇದು ಸಾಧ್ಯ. ಈ ಸಂವೇದನೆಯ ಪುನರುತ್ಥಾನ ನಮ್ಮಿಂದ ಸಾಧ್ಯವೇ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕ ಸಮಾಜವನ್ನು ಕಾಡಬೇಕಿದೆ.

ಪುರಾಣ ಕಥನಗಳಲ್ಲಿ ಅಥವಾ ಆಧುನಿಕ ಮಾನವ ಇತಿಹಾಸದಲ್ಲಿ ಭಾರತ ಎಂದಿಗೂ ಮಹಿಳೆಯರಿಗೆ ಸಂವೇದನಾಶೀಲ ಸುರಕ್ಷತೆಯನ್ನು ನೀಡಿಲ್ಲ ಎನ್ನುವುದನ್ನು ಗ್ರಹಿಸಲು ಸಂಶೋಧನೆಯೇನೂ ಬೇಕಿಲ್ಲ. ಪುರುಷನ ಕಾಮ ತೃಷೆ, ಪುರುಷನ ದರ್ಪ ಮತ್ತು ದಬ್ಬಾಳಿಕೆ, ಪುರುಷ ಸಮಾಜದ ಅಧಿಪತ್ಯ ಮಹಿಳೆಯನ್ನು ಸದಾ ಸಲಾಕೆಗಳ ನಡುವೆ ಬಂಧಿಸಿಯೇ ಇಟ್ಟಿದೆ. ಮಹಾಭಾರತದ ದ್ರೌಪದಿ, ರಾಮಾಯಣದ ಸೀತೆ, ಹರಿಶ್ಚಂದ್ರ ಕಾವ್ಯದ ತಾರಾಮತಿ ಈ ಪಾತ್ರಗಳೆಲ್ಲವೂ ಇಂದಿಗೂ ಜೀವಂತವಾಗಿಯೇ ಇರುವುದಕ್ಕೆ ಕಾರಣ ಎಂದರೆ ಈ ಪೌರಾಣಿಕ ಪಾತ್ರಗಳ ಅಸ್ಮಿತೆಗಳನ್ನು ಆಧುನಿಕ ಭಾರತದಲ್ಲಿ ಶೋಷಣೆಗೊಳಗಾಗುವ ಮಹಿಳೆಯರಲ್ಲಿ ನಾವು ಇಂದಿಗೂ ಕಾಣುತ್ತಿದ್ದೇವೆ. ಈ ಶೋಷಿತ ಮಹಿಳೆಯರ ನಡುವೆ ನಮ್ಮ ನಾಗರಿಕ ಸಮಾಜ ತಾರತಮ್ಯ ಮಾಡುತ್ತಿರುವುದನ್ನೂ ಕಾಣುತ್ತಿದ್ದೇವೆ. ನಿರ್ಭಯ ಹೆಸರಿನ ಜ್ಯೋತಿ ಸಿಂಗ್ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದುರ್ದೈವಿ. ಬಿಲ್ಕಿಸ್ ಬಾನೋ ತನ್ನ ಕುಟುಂಬದ 14 ಜನರ ಹತ್ಯೆಯನ್ನು ಕಣ್ಣಾರೆ ಕಂಡು ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ಇನ್ನೂ ಬದುಕಿರುವ ದುರದೃಷ್ಟ ಮಹಿಳೆ. ಎರಡೂ ಘಟನೆಗಳಲ್ಲಿ ಕ್ರೌರ್ಯದ ಪರಾಕಾಷ್ಠೆ ಕಾಣಬಹುದು. ಆದರೆ ಅಪರಾಧಿಗಳನ್ನು ಶಿಕ್ಷಿಸುವಲ್ಲಿ ನ್ಯಾಯಾಂಗ ಭಿನ್ನ ನಿಲುವು ತಾಳುತ್ತದೆ. ಇಲ್ಲಿ ಕ್ರೌರ್ಯದ ಪ್ರಮಾಣ ಮತ್ತು ಶಿಕ್ಷೆಯ ಪ್ರಮಾಣವನ್ನು ಸಮೀಕರಿಸುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಇದೇ ವಿದ್ಯಮಾನವನ್ನು ಸಾಮಾಜಿಕ ನೆಲೆಯಲ್ಲಿ ವಿಸ್ತರಿಸಿ ನೋಡಿದಾಗ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ಸಣ್ಣ ಪುಟ್ಟ ಪಟ್ಟಣಗಳಲ್ಲಿ ದಿನನಿತ್ಯ ನೂರಾರು ಮಹಿಳೆಯರು ವಿಭಿನ್ನ ರೀತಿಯ ದೌರ್ಜನ್ಯ, ಅತ್ಯಾಚಾರ ಎದುರಿಸುತ್ತಲೇ ಇದ್ದಾರೆ. ನಿರ್ಭಯ ಪ್ರಕರಣದ ನಂತರ ದೇಶವ್ಯಾಪಿಯಾಗಿ ಹುಯಿಲೆಬ್ಬಿಸಿದ ಮಾಧ್ಯಮಗಳಿಗೆ ಖೈರ್ಲಾಂಜಿ ಹತ್ಯಾಕಾಂಡದ ಸಂದರ್ಭದಲ್ಲಿ ಪುರುಷರ ಕಾಮತೃಷೆಗೆ ಬಲಿಯಾದ ಅಸಹಾಯಕ ದಲಿತ ಮಹಿಳೆಯರ ಆರ್ತನಾದ ಕೇಳಲೇ ಇಲ್ಲ ಎನ್ನಬಹುದು. ಇಂದಿಗೂ ಸಹ ಖೈರ್ಲಾಂಜಿಯ ಸಂತ್ರಸ್ತರು ನ್ಯಾಯದೇವತೆಯ ಆದೇಶಕ್ಕಾಗಿ ಹಂಬಲಿಸುತ್ತಲೇ ಇದ್ದಾರೆ. ಖೈರ್ಲಾಂಜಿಯಂತಹ ಪ್ರಕರಣಗಳಿಗೇನೂ ಭಾರತದಲ್ಲಿ ಕೊರತೆ ಇಲ್ಲ. ಪ್ರತಿಯೊಂದು ಕೋಮು ಗಲಭೆಯ ಸಂದರ್ಭದಲ್ಲೂ ಮಹಿಳೆಯರು, ಬಾಲಕಿಯರು ಹಿಂದೂ ಮತ್ತು ಮುಸ್ಲಿಂ ಮತಾಂಧರ ಕಾಮತೃಷೆಗೆ ಬಲಿಯಾಗುವುದು ಗುಟ್ಟಿನ ಮಾತೇನಲ್ಲ. ದ್ವೇಷ ರಾಜಕಾರಣದ ನೆಲೆಯಲ್ಲಿ ನಡೆಯುವ ಕೋಮು ಗಲಭೆಗಳ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಒಂದು ಚರ್ಚೆಯ ವಿಷಯವೇ ಆಗುವುದಿಲ್ಲ. ಏಕೆಂದರೆ ಅಲ್ಲಿ ಕೋಮು ದ್ವೇಷವೇ ಪ್ರಧಾನವಾಗಿರುತ್ತವೆ. “ ನಮ್ಮವರಲ್ಲದವರ ಮೇಲೆ ನಡೆಯುವ ದೌರ್ಜನ್ಯ ಸ್ವೀಕೃತ ಎನ್ನುವ ವಿಕೃತ ಭಾವನೆ ನಮ್ಮ ಸಂಸ್ಕøತಿಯಲ್ಲೇ ಹಾಸುಹೊಕ್ಕಾಗಿದೆ ”

ನಿರ್ಭಯ, ಬಿಲ್ಕಿಸ್ ಬಾನೋ, ಸೌಜನ್ಯ, ಸುರೇಖ ಭೂತ್ ಮಾಂಗೆ ಮುಂತಾದ ಅಸಂಖ್ಯಾತ ಮಹಿಳೆಯರು ಬಲಿಯಾಗುತ್ತಿರುವುದು ವ್ಯಕ್ತಿಗತ ನೆಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಮಾತ್ರವೇ ಅಲ್ಲ. ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ವ್ಯವಸ್ಥಿತವಾದ ಬೌದ್ಧಿಕ ಅತ್ಯಾಚಾರ, ದೈಹಿಕ ಚಿತ್ರಹಿಂಸೆ, ಮಾನಸಿಕ ಕಿರುಕುಳ ಸಾಮಾಜಿಕ ನೆಲೆಯಲ್ಲೇ ನಡೆಯುತ್ತಿದೆ. ಮತಾಂಧ ಶಕ್ತಿಗಳು ಪ್ರಬಲವಾಗುತ್ತಿರುವಂತೆಲ್ಲಾ ಈ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. “ ನಾವು ಬಯಸಿದಂತೆ ನೀವಿದ್ದರೆ ಮಾತ್ರ ನಿಮ್ಮ ರಕ್ಷಣೆ ಸಾಧ್ಯ ” ಎಂಬ ಎಚ್ಚರಿಕೆಯ ಮಾತುಗಳು ಮಹಿಳೆಯರ ಅಸ್ಮಿತೆಯನ್ನೇ ಪ್ರಶ್ನಿಸಿ ಗಹಗಹಿಸುತ್ತಿದೆ. ಆದರೆ ನಮ್ಮ ಸುಶಿಕ್ಷಿತ ಪ್ರಜ್ಞಾವಂತ ಸಮಾಜ ಇಂತಹ ಕುಹಕ ಮನೋಭಾವವನ್ನು ಜೀರ್ಣಿಸಿಕೊಳ್ಳುತ್ತಿದೆ. ಸಂಘಪರಿವಾರದ ಹಿಂದೂ ಮತಾಂಧರು, ಇಸ್ಲಾಂ ಧರ್ಮದ ಜಿಹಾದಿ ಮುಸ್ಲಿಮರು ಮಹಿಳೆಯರನ್ನು ನಿಯಂತ್ರಿಸಲು ಧರ್ಮ, ಸಂಸ್ಕøತಿ ಮತ್ತು ಗ್ರಾಂಥಿಕ ಮೌಲ್ಯಗಳನ್ನು ಅಸ್ತ್ರಗಳನ್ನಾಗಿ ಬಳಸುತ್ತಿರುವಂತೆಯೇ ಈ ಮಹಿಳೆಯರ ಮೇಲಿನ ದೌರ್ಜನ್ಯಗಳು ಅಧಿಕೃತ ಸ್ವೀಕೃತಿಯನ್ನೂ ಪಡೆಯುತ್ತಿವೆ.

ಹೆಣ್ಣು ಹೆಣ್ಣಾಗಿದ್ದರೆ ಚೆನ್ನ ಎನ್ನುವ ಬಾಲಿಷ ಮತ್ತು ಅಮಾನುಷ ನುಡಿಗಳು ಗಾದೆ ಮಾತಿನಂತಾಗಿರುವುದೇ ನಮ್ಮ ಸಮಾಜದಲ್ಲಿ ಮಹಿಳಾ ಸಂವೇದನೆ ಅವಸಾನ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿಯೇ ಹೆಣ್ಣಿಗೆ ತನ್ನಿಚ್ಚೆಯಂತೆ ವಸ್ತ್ರ ಧರಿಸುವ ಹಕ್ಕನ್ನೂ ನೀಡಲಾಗುವುದಿಲ್ಲ. ಸುಶಿಕ್ಷಿತ ವಲಯದ ನಾಗರಿಕ ಸಮಾಜದಲ್ಲಿ ಎಲ್ಲಿಯವರೆಗೆ ಹೆಣ್ಣಿನ ದೇಹ ಮತ್ತು ಅಂಗಾಂಗಗಳು ಹಾಸ್ಯದ ವಸ್ತುವಾಗಿ ಅಥವಾ ಮನರಂಜನೆಯ ಸರಕಾಗಿ ಪರಿಗಣಿಸಲಾಗುವುದೋ ಅಲ್ಲಿಯವರೆಗೂ ಮಹಿಳೆಯರು ಇಂತಹ ಅತ್ಯಾಚಾರಗಳನ್ನು ಸಹಿಸುತ್ತಲೇ ಇರಬೇಕಾಗುತ್ತದೆ. ಭೋಗದ ವಸ್ತುಗಳಾಗಿಯೇ ಇರಬೇಕಾಗುತ್ತದೆ. ಏಕೆಂದರೆ ಇದು ಅಸ್ಮಿತೆಯ ಪ್ರಶ್ನೆಯಲ್ಲ ಅಧಿಪತ್ಯದ ಪ್ರಶ್ನೆ. ದುರಂತ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಲಿಂಗ ಸೂಕ್ಷ್ಮತೆ ಮತ್ತು ಲಿಂಗ ಸಂವೇದನೆಯನ್ನು ಕಲಿಸಿಯೇ ಇಲ್ಲ. ಹಾಗಾಗಿಯೇ ನಮ್ಮ ಸುಶಿಕ್ಷಿತ ಸಮಾಜದಲ್ಲಿ ಮಹಿಳೆಗೆ ಸ್ವಂತ ಅಸ್ಮಿತೆಯನ್ನು ನೀಡಲಾಗುತ್ತಿಲ್ಲ. ಈ ಅಸ್ಮಿತೆಗಾಗಿ ಹೋರಾಡುವ ಮಹಿಳೆಯರು ಸಂಸ್ಕøತಿ ವಿರೋಧಿಗಳೋ, ಧರ್ಮಭ್ರಷ್ಟರೋ ಅಥವಾ ಬಜಾರಿಗಳೋ ಆಗಿಬಿಡುತ್ತಾರೆ.

ತನ್ನ ಹಾಸ್ಯ ಪ್ರಜ್ಞೆಯನ್ನು ಮೆರೆಯಲು ಮಹಿಳೆಯರ ಅಂಗಾಂಗಗಳನ್ನೇ ಹಾಸ್ಯದ ವಸ್ತುವನ್ನಾಗಿ ಬಳಸಿ ಗಹಗಹಿಸುವ ಪುರುಷನಿಗೆ ತನ್ನ ದೇಹದಲ್ಲಿ ಹರಿಯುತ್ತಿರುವ ರಕ್ತವೂ ಒಬ್ಬ ಮಹಿಳೆಯದೇ ಎಂದೇಕೆ ನೆನಪಾಗುವುದಿಲ್ಲ ? ಈ ನೆಲೆಯಲ್ಲೇ ನಮ್ಮ ಸಮಾಜದ ಕ್ರೌರ್ಯ ಅನಾವರಣಗೊಳ್ಳುತ್ತದೆ. ಅತ್ಯಾಚಾರ ಎಸಗುವವನು ಒಂದು ಕ್ಷಣದ ಪ್ರಮಾದ ಎಸಗುತ್ತಾನೆ ಆದರೆ ನಮ್ಮ ನಾಗರಿಕ ಸಮಾಜ ತಮ್ಮ ನಡುವೆ ಇರುವ ಮಹಿಳೆಯರ ಅಸ್ತಿತ್ವವನ್ನೇ ಪರಿಗಣಿಸದೆ ಅಪಮಾನಿಸುತ್ತಲೇ ಇರುತ್ತದೆ. ಬೌದ್ಧಿಕವಾಗಿ ಅತ್ಯಾಚಾರ ಎಸಗುತ್ತಲೇ ನಡೆಯುತ್ತದೆ. ಈ ಸಮಾಜವನ್ನು ತಿದ್ದುವುದು ಹೇಗೆ. ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಸತ್ತು ಹೋಗಿರುವ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಲು ಸಾಧ್ಯವೇ ? ನಶಿಸಿ ಹೋಗಿರುವ ಸಂವೇದನೆಯನ್ನು ಪುನರ್‍ಸೃಷ್ಟಿಸಲು ಸಾಧ್ಯವೇ ? ಜಾತಿ ಪ್ರಜ್ಞೆಯಂತೆಯೇ ಮಹಿಳೆಯನ್ನು ಕುರಿತಂತೆ ಪೂರ್ವಗ್ರಹ ಪೀಡಿತ ಭಾವನೆಗಳು ನಮ್ಮ ಸಮಾಜದಲ್ಲಿ-ಸಂಸ್ಕೃತಿಯಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿದೆ. ಈ ಗುಪ್ತಗಾಮಿನಿಯ ಮಾನಸ ಪುತ್ರರಂತೆ ಅತ್ಯಾಚಾರಿಗಳು, ಕಾಮುಕರು ಕಾಣುತ್ತಾರೆ. ಕಟು ಸತ್ಯ ಎಂದರೆ ಭಾರತೀಯ ಸಾಂಸ್ಕೃತಿಕ ಪುರುಷ ಸಮಾಜವೇ ಈ ಗುಪ್ತಗಾಮಿನಿಯಿಂದ ಹೊರಹೊಮ್ಮಿದೆ. ನಮ್ಮೊಳಗಿನ ವಿಕೃತಿಯನ್ನು ಕೊಲ್ಲದೆ ಹೋದರೆ ನೇಣುಗಂಬಗಳು ಹೆಚ್ಚಾಗುತ್ತವೆ. ಆದರೆ ದೌರ್ಜನ್ಯ ನಿಲ್ಲುವುದಿಲ್ಲ.

Leave a Reply

Your email address will not be published.