ವರುಷ ಹೊಸತಾದರೇನು ಭಾವ ಪ್ರಾಚೀನ

ನಾ ದಿವಾಕರ

ಆಧುನಿಕತೆ ಮತ್ತು ಪ್ರಜ್ಞೆ ಈ ಎರಡೂ ವಿದ್ಯಮಾನಗಳು ಮಾನವ ಸಮಾಜವನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ನೆರವಾಗುವ ಆಕರಗಳು. ಆಧುನಿಕತೆ ಎಂಬ ಪದವನ್ನು ಸಾಮಾನ್ಯ ಪರಿಭಾಷೆಯಲ್ಲಿ ನಾಗರೀಕತೆಯ ಮುಂದುವರೆದ ಹಂತ ಎಂದು ಪರಿಗಣಿಸಲಾಗುತ್ತದೆ. ಮಾನವ ಸಮಾಜ ಶತಮಾನಗಳ ಕಾಲದ ಚರಿತ್ರೆಯ ಹಿನ್ನೆಲೆಯಲ್ಲಿ ನಾಗರೀಕತೆಯನ್ನು ಮೈಗೂಡಿಸಿಕೊಂಡಿದೆ ಎಂಬ ನಂಬಿಕೆಯೊಂದಿಗೇ ತನ್ನ ಆಧುನಿಕತೆಯ ಬಗ್ಗೆ ಹೆಮ್ಮೆ ಪಡುತ್ತದೆ. 21ನೆಯ ಶತಮಾನದ ಎರಡನೆಯ ದಶಮಾನದಲ್ಲಿರುವ ಮನುಕುಲ “ನಾಗರೀಕತೆಯತ್ತ ಮುನ್ನಡೆಯುವ” ಹಂತವನ್ನು ಮೀರಿ “ ಆಧುನಿಕತೆಯತ್ತ ದಾಪುಗಾಲು ಹಾಕುವ ” ಹಂತ ತಲುಪಿದೆ. ಮನುಕುಲದ ಅಭ್ಯುದಯದ ಹಾದಿಯಲ್ಲಿ ನಾಗರೀಕತೆ ಒಂದು ಸ್ಥಾವರ ಸ್ಥಿತಿಯನ್ನು ತಲುಪಿದೆ. ಆಧುನಿಕತೆ ತನ್ನ ಜಂಗಮ ಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ಏಕೆಂದರೆ ಆಧುನಿಕ ಮಾನವ ತಾನು ನಾಗರೀಕತೆಯ ಅತ್ಯುನ್ನತ ಹಂತ ತಲುಪಿರುವ ಭ್ರಮೆಯಲ್ಲಿದ್ದಾನೆ. ಹಾಗಾಗಿ ಆಧುನಿಕತೆ ತನ್ನ ನವ ನವೀನ ರೂಪಗಳಲ್ಲಿ ಅನಾವರಣಗೊಳ್ಳುತ್ತಿರುವಂತೆಯೇ ತನ್ನ ಸುತ್ತಲಿನ ಪೊರೆ ಕಳಚಿಕೊಂಡು ಹೊಸ ಸ್ವರೂಪ ಪಡೆಯುತ್ತಿದೆ. ವಿಷಾದ ಎಂದರೆ ಸ್ಥಾವರ ಸ್ಥಿತಿಯ ನಾಗರೀಕತೆ ಪುನರುಜ್ಜೀವನಕ್ಕಾಗಿ ಹಾತೊರೆಯುತ್ತಿದೆ. ಆಧುನಿಕತೆಯ ಭ್ರಮೆ ಮಾನವ ಸಮಾಜದಲ್ಲಿ ನಾವು ನಾಗರೀಕರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದ್ದರೆ ಅದು ವಾಸ್ತವದ ಕನ್ನಡಿಯಷ್ಟೆ.

baalike21ನೆಯ ಶತಮಾನದಲ್ಲೂ ಮನುಕುಲದ ಮುಂದೆ ನಾಗರೀಕತೆ ಎಂದರೇನು ಅಥವಾ ನಾವು ನಾಗರೀಕರೇ ಎಂಬ ಪ್ರಶ್ನೆ ಎದುರಾದಲ್ಲಿ ಆಧುನಿಕತೆಯ ಹುಚ್ಚು ಹೊಳೆಯಲ್ಲಿ ಮಿಂದು ತೇಲುತ್ತಿರುವ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸಬೇಕಾಗುತ್ತದೆ. ದಾಸ್ಯ ಮತ್ತು ಗುಲಾಮಗಿರಿ ಅನಾಗರೀಕ ಸಮಾಜದ ಲಕ್ಷಣ. ಅಧಿಪತ್ಯ ಮತ್ತು ದಬ್ಬಾಳಿಕೆ ಈ ಸಮಾಜದ ಮೂಲ. ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಈ ಸಮಾಜದ ಪ್ರತಿರೋಧಿ ನೆಲೆಗಳು. ಒಂದು ಸಾಮಾಜಿಕ ಚೌಕಟ್ಟಿನಲ್ಲಿ ನಿರ್ದಿಷ್ಟ ಸಾಂಸ್ಕøತಿಕ ನೆಲೆಗಳನ್ನು ಗುರುತಿಸಿ ಸಮಾಜೋ ಸಾಂಸ್ಕøತಿಕ ಮೌಲ್ಯಗಳನ್ನು ರೂಪಿಸುವ ನಾಗರೀಕ ಸಮಾಜ ವ್ಯಕ್ತಿ ಸ್ವಾತಂತ್ರ್ಯವನ್ನು ಕಡೆಗಣಿಸಿ ಅಧಿಪತ್ಯ ಸಾಧಿಸಲು ಯತ್ನಿಸಿದಾಗ ದಾಸ್ಯ ದೌರ್ಬಲ್ಯದ ಸಂಕೇತವಾಗುತ್ತದೆ, ದಬ್ಬಾಳಿಕೆ ಮತ್ತು ದೌರ್ಜನ್ಯ ಸರ್ವಾಧಿಕಾರಕ್ಕೆ ನೆಲೆಯಾಗುತ್ತದೆ. ಈ ಸಾಂಸ್ಕøತಿಕ ಸರ್ವಾಧಿಕಾರ ಮತ್ತು ಸಾಮಾಜಿಕ ಏಕಸ್ವಾಮ್ಯತೆ ಭಾರತದ ನಾಗರೀಕತೆಯನ್ನು ಶತಮಾನಗಳಿಂದ ಕಾಡುತ್ತಿದೆ, ದುರಂತ ಎಂದರೆ 21ನೆಯ ಶತಮಾನದಲ್ಲೂ ಕಾಡುತ್ತಿದೆ. ಇದರ ಒಂದು ಛಾಯೆಯನ್ನು ಕಮ್ಮನಹಳ್ಳಿಯ ಘಟನೆಯಲ್ಲಿ, ಕಂಬಾಲಪಲ್ಲಿಯಲ್ಲಿ, ಖೈರ್ಲಾಂಜಿಯಲ್ಲಿ, ಊನ ಮತ್ತು ದಾದ್ರಿಯಲ್ಲಿ ವಿಭಿನ್ನ ಸ್ವರೂಪಗಳಲಿ ಕಾಣಬಹುದು. ಅಯೋಧ್ಯೆಯಲ್ಲೂ ಕಾಣಬಹುದು.

ಸಾಮಾಜಿಕ ನೆಲೆಯಲ್ಲಿ ನೋಡಿದಾಗ ಈ ಅಧಿಪತ್ಯ ರಾಜಕಾರಣ ಮಾನವ ಸಮಾಜದಲ್ಲಿ ಸ್ವಾತಂತ್ರ್ಯದ ಮೌಲ್ಯಗಳಿಗಿಂತಲೂ ದಾಸ್ಯ ಮತ್ತು ಗುಲಾಮಗಿರಿಯ ಮೌಲ್ಯಗಳನ್ನೇ ಬಿತ್ತುತ್ತಿರುವುದನ್ನು ಕಾಣಬಹುದು. ಹಾಗಾಗಿಯೇ ಯಾವುದೇ ನಿರ್ದಿಷ್ಟ ನೆಲೆ ಇಲ್ಲದ ಸಂಹಿತೆಗಳು ಸಾರ್ವತ್ರಿಕವಾಗಿ ಸ್ವೀಕೃತವಾಗಿಬಿಡುತ್ತವೆ. ಮಾನವ ಸಹಜ ಸಾಂಸ್ಕøತಿಕ ನೆಲೆಗಳು ಕ್ಷೀಣಿಸಿ ಕಲ್ಪಿತ ಸಾಮಾಜಿಕ ಪ್ರಜ್ಞೆಯೊಂದು ಮರುಹುಟ್ಟು ಪಡೆಯುತ್ತದೆ. ಈ ಸಾಮಾಜಿಕ ಪ್ರಜ್ಞೆ ಅಧಿಪತ್ಯ ರಾಜಕಾರಣದ ಸಾಂಸ್ಕøತಿಕ ದಾಳಿಗೆ ತುತ್ತಾದರೆ ದಾಸ್ಯ ಮೇಳೈಸುತ್ತದೆ. ಸ್ವಾತಂತ್ರ್ಯ ಸಾಪೇಕ್ಷವಾಗಿಬಿಡುತ್ತದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಮಾನವ ಸಹಜ ಅಭಿವ್ಯಕ್ತಿಯಾಗಿ ಉಳಿಯುವುದಿಲ್ಲ. ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾನವ ಸಮಾಜ ಪಡೆದುಕೊಳ್ಳಬೇಕಾದ ಸಾಧನವಾಗುತ್ತದೆ. ಈ ಸಾಧನದ ಮೇಲೆ ನಿಯಂತ್ರಣ ಸಾಧಿಸುವ ಸಾಮಾಜಿಕ ವ್ಯವಸ್ಥೆಯ ಪಾರಮ್ಯ ಸ್ವಾತಂತ್ರ್ಯದ ಪರಿಕಲ್ಪನೆಯನ್ನೇ ಹೊಸಕಿಹಾಕಲು ಯತ್ನಿಸುತ್ತದೆ. ಈ ವಿಲಕ್ಷಣ ವಿದ್ಯಮಾನವನ್ನು ನಾವಿಂದು ಕಾಣುತ್ತಿದ್ದೇವೆ. ನಿರ್ಭಯ, ಸೌಜನ್ಯ ಘಟನೆಗಳ ಪರಂಪರೆ ಇಂದಿಗೂ ಮುಂದುವರೆದಿರುವುದನ್ನು ಈ ಸಾಂಸ್ಕøತಿಕ ನೆಲೆಯಲ್ಲೇ ನೊಡಬೇಕಾಗುತ್ತದೆ.

ನಿಜ, ಆಧುನಿಕತೆ ಕೆಲವು ಸಂದರ್ಭಗಳಲ್ಲಿ ಮಾನವ ಸಮಾಜದ ದಿಕ್ಕು ತಪ್ಪಿಸುತ್ತದೆ. ಆದರೆ ಈ ಅಪಭ್ರಂಶಗಳನ್ನು ಸರಿಪಡಿಸುವ ನೈತಿಕ ಹೊಣೆಗಾರಿಕೆ ನಾಗರೀಕತೆಯ ಪ್ರಜ್ಞೆಯಲ್ಲಿ ಅಡಗಿರುತ್ತದೆ. ನಾಗರೀಕ ಪ್ರಜ್ಞೆಯೇ ನಶಿಸಿಹೋದಾಗ ಆಧುನಿಕತೆ ಮದಗಜದ ಹಾಗೆ ಮುನ್ನಡೆಯುತ್ತದೆ. ತನ್ನ ಅಭ್ಯುದಯದ ಹಾದಿಯಲ್ಲಿ ಶತಮಾನಗಳ ಇಂದ್ರಿಯಾನುಭವಗಳನ್ನು ದಾಟಿ ಮುನ್ನಡೆದಿರುವ ಮಾನವ ಸಮಾಜ ಆಧುನಿಕತೆಯನ್ನು ಅನಿವಾರ್ಯ ಎಂದೇ ಒಪ್ಪಿಕೊಳ್ಳುತ್ತಾ ಬಂದಿದೆ. ಆದರೆ ಆಧುನಿಕತೆ ಸೃಷ್ಟಿಸುವ ಕೆಲವು ಸೂಕ್ಷ್ಮ ಸಂವೇದನೆಗಳನ್ನು ನಿಯಂತ್ರಿಸುವ ಮೂಲಕ ಸ್ಥಾಪಿತ ಸಾಮಾಜಿಕ ವ್ಯವಸ್ಥೆ ತನ್ನ ಸಾಂಸ್ಕøತಿಕ ಅಧಿಪತ್ಯದ ಪ್ರಾಬಲ್ಯ ಮೆರೆಯಲು ಯತ್ನಿಸುತ್ತದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಇಂತಹ ಸಾಂಸ್ಕøತಿಕ ಅಧಿಪತ್ಯ ವ್ಯಕ್ತಿ ಸ್ವಾತಂತ್ರ್ಯಕ್ಕೇ ಸಂಚಕಾರ ತರುವುದನ್ನು ಕಾಣಬಹುದು. ಇದರ ಪರಿಣಾಮವೇ ಮಂಗಳೂರಿನ ಪಬ್ ದಾಳಿ, ಬೆಂಗಳೂರಿನ ಕಮ್ಮನಹಳ್ಳಿ, ಕೋಲಾರದ ಕಂಬಾಲಪಲ್ಲಿ. ಈ ಮೂರೂ ಘಟನೆಗಳಲ್ಲಿ ಕಾಣಬಹುದಾದ ಸಾಮ್ಯತೆ ಎಂದರೆ ಸಾಂಸ್ಕøತಿಕ ಅಧಿಪತ್ಯ ಮಾತ್ರ.

ಹೊಸ ವರ್ಷದ ಆಚರಣೆ ಕಾಲದಿಂದ ಕಾಲಕ್ಕೆ ತನ್ನದೇ ಆದ ನವನವೀನ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ತನ್ನ ಗತಕಾಲದ ಪೊರೆ ಕಳಚಿ ಹೊಸ ರೂಪಗಳನ್ನು ತಾಳುತ್ತಾ ಬಂದಿದೆ. ಇದು ಆಧುನಿಕತೆಯ ಪರಿಣಾಮ. ಸಂಪೂರ್ಣವಾಗಿ ತಿರಸ್ಕಾರ ಭಾವದಿಂದ ನೋಡುವ ಮಡಿವಂತಿಕೆ ಬೇಕಿಲ್ಲ. ನವ ಪೀಳಿಗೆಯ ಹಪಾಹಪಿಗಳನ್ನು ಹಳಹಳಿಸುವ ಭರದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲು ಯತ್ನಿಸುವುದು ನಾಗರೀಕತೆಯನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ, ಆಧುನಿಕತೆಯ ಪ್ರಜ್ಞೆಯನ್ನು ಹೊಸಕಿಹಾಕುತ್ತದೆ. ನಿರ್ಭಯ, ಸೌಜನ್ಯ ಘಟನೆಗಳ ನಂತರ ಕಮ್ಮನ ಹಳ್ಳಿಯ ಘಟನೆಯ ಸುತ್ತ ನಡೆಯುತ್ತಿರುವ ಸಂಕಥನಗಳು, ಚರ್ಚೆಗಳು ಈ ಅಪಾಯದ ಮುನ್ಸೂಚನೆಯಾಗಿದೆ. ಪುರುಷಾಧಿಪತ್ಯದ ಪಾರಮ್ಯವನ್ನು ಸಮರ್ಥಿಸುವ ಸಾಂಸ್ಕøತಿಕ ಅಭಿವ್ಯಕ್ತಿ ಸಾಮಾಜಿಕ ನೆಲೆಗಳನ್ನು ಆಕ್ರಮಿಸಿಕೊಂಡಿರುವ ಸಂದರ್ಭದಲ್ಲಿ ಭಾರತದ ಮಹಿಳೆಯರು ಅಲಿಖಿತ ಸಂಹಿತೆಗಳಿಗೆ ಬಲಿಯಾಗುತ್ತಿರುವುದನ್ನು ಗಮನಿಸಬೇಕಿದೆ. ಮಾನ ಹರಣ, ಶೀಲ ಹರಣದ ನೆಲೆಯಲ್ಲಿ ಸಂಭವಿಸುತ್ತಿರುವ ಸ್ವಾತಂತ್ರ್ಯ ಹರಣ ಚರ್ಚೆಗೊಳಗಾಗುತ್ತಿಲ್ಲ.

“ ಪುರುಷ ಸಮಾಜ ತನ್ನ ಸಂಯಮವನ್ನು ಕಾಪಾಡಿಕೊಳ್ಳಬೇಕಾದರೆ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆ ರೂಪಿಸುವ ಯಜ್ಞ ಕುಂಡದ ಗೋಡೆಗಳನ್ನು ದಾಟುವಂತಿಲ್ಲ ” ಎಂದು ಹೇಳುವ ಒಂದು ಸಾಂಸ್ಕøತಿಕ ಪರಂಪರೆಯನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಗುತ್ತಿದೆ. ಹಾಗಾಗಿ ಕಮ್ಮನಹಳ್ಳಿಯಂತಹ ಘಟನೆಗಳಲ್ಲಿ ಆಧುನಿಕತೆಯ ಪರಿಭಾಷೆಗೆ ಬಲಿಯಾದ ಯುವ ಪೀಳಿಗೆಯ ಧೋರಣೆ ಚರ್ಚೆಗೀಡಾಗುತ್ತದೆಯೇ ಹೊರತು, ಈ ಆಧುನಿಕತೆಯ ಚೌಕಟ್ಟಿನಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ವ್ಯವಸ್ಥೆಯ ದೌರ್ಜನ್ಯ ಚರ್ಚೆಗೊಳಗಾಗುವುದಿಲ್ಲ. ಪುರುಷ ಸಮಾಜದ ಕಾಮುಕತೆಯ ದೌರ್ಜನ್ಯಕ್ಕೆ ಬಲಿಯಾದ ಯುವತಿಯರ ವ್ಯಕ್ತಿ ಸ್ವಾತಂತ್ರ್ಯವೇ ಪ್ರಶ್ನಾರ್ಹವಾಗಿಬಿಡುತ್ತದೆ. ವಿಕೃತ ಮನಸುಗಳ ಕ್ರೌರ್ಯ ನೇಪಥ್ಯಕ್ಕೆ ಸರಿಯುತ್ತದೆ. “ ನಮ್ಮ ಸಾಮಾಜಿಕ ಚೌಕಟ್ಟಿನಲ್ಲಿ ನಮ್ಮ ಸಾಂಸ್ಕøತಿಕ ಗೋಡೆಗಳ ನಡುವೆ ನಮ್ಮ ಸ್ಥಾಪಿತ ಪರಂಪರೆಗೆ ಅನುಗುಣವಾಗಿ ಇದ್ದರೆ ಮಾತ್ರವೇ ನೀವು ಕ್ಷೇಮ ಇಲ್ಲವಾದಲ್ಲಿ ,,,,,,,,?” ಎಂಬ ಪುರುಷ ಸಮಾಜದ ಎಚ್ಚರಿಕೆಯ ಮಾತುಗಳು ಮೊಳಗುತ್ತಲೇ ಇರುತ್ತವೆ.

Leave a Reply

Your email address will not be published.