ವಚನಕಾರ್ತಿಯರ ಲೋಕ ದೃಷ್ಟಿ : ಲಿಂಗ

-ಡಾ. ಅನಸೂಯ ಕಾಂಬಳೆ

ಭಾರತದ ಇತಿಹಾಸವೆಂದರೆ ಪ್ರಭುತ್ವದ ಯುದ್ಧ ಸಂಸ್ಕøತಿಯ ವೈಭವೀಕರಣ ಎಂಬಂತೆ ನಿರೂಪಣೆಗೊಂಡಿದೆ. ಮಹಿಳೆ ಗೆದ್ದವರ ಸೊತ್ತು ಮತ್ತು ಸೋತ ರಾಜರ ಕಪ್ಪುಕಾಣಿಕೆಯ ಜೊತೆಗಿನ ವಸ್ತುವೆಂಬಂತೆ ಕಂಡಿದೆ. ಹೆಣ್ಣೂ ಕೂಡ ವಶಪಡಿಸಿಕೊಂಡ ಆಳುವ ಭೂಮಿಯಂತೆ ಗಂಡಿನ ಸೊತ್ತಾಗಿ ಹೋಗಿದ್ದಾಳೆ. ಮುಂದೆ ಮನುವಿನ ವಿಸಡಮ್‍ನಲ್ಲೂ ಮಹಿಳೆಗೆ ಸ್ಥಾನವಿಲ್ಲ. ಆದರೆ ಜಾತಿ ಮತ್ತು ಸಂಸ್ಕøತಿಯ ನಿಯಂತ್ರಕಳಾಗಿ ಸಾಮಾಜಿಕ ಸಂರಚನೆಯಲ್ಲಿ ಸ್ಥಾಪನೆಗೊಂಡಳು. ಚರಿತ್ರೆಯಲ್ಲಿ ಕಳೆದು ಹೋದ ಅಂಚಿನ ಜನರ ಇತಿಹಾಸವನ್ನು ಬುದ್ಧಗುರು ಪ್ರಾಚೀನ ಭಾರತದ ಇತಿಹಾಸವನ್ನು ಶೋಧಿಸಿದ. ಆರ್ಯರು ತಮ್ಮ ಸುಖ ಭೋಗಕ್ಕಾಗಿ ಮಾಡಿದ ನಿಯೋಗ, ಅಯೋನಿಜ, ಲಾಜಾಹೋಮ, ಪಶುಗಮನ, ಪದ್ಧತಿಗಳಿಂದಾಗಿ ಮಹಿಳೆಯ ಬದುಕು ಹೀನಾಯವಾಗಿರುವುದನ್ನು ಗುರುತಿಸಿದ. ದೇವರು-ದೆವ್ವ-ಯಜ್ಞ-ಯಾಗಾದಿಗಳ ಹೆಸರಿನಲ್ಲಿ ಮಹಿಳೆ ಮತ್ತು ಪ್ರಾಣಿಗಳ ಮೇಲಾಗುತ್ತಿರುವ ಹಿಂಸೆಯನ್ನು ತಡೆಯಲು ಚಿಂತಿಸಿದ. “ಪುರುಷಮೇಧ” ಯಾಗದ ಹೆಸರಿನಲ್ಲಿ ಪುರುಷರ ನಡವಳಿಕೆಗಳನ್ನು ತಿದ್ದುವ ಮೂಲಕ ಸಮಸಮಾಜವನ್ನು ಕಟ್ಟಿದ, ಜಾಗೃತಿ, ವಿವೇಕ ಮತ್ತು ಪ್ರಜ್ಞೆಯೇ ಮುಖ್ಯವೆಂದು ಸಾರಿದ.

ಬುದ್ಧನ ನಂತರ ಬಂದ ಪುಷ್ಯಮಿತ್ರ ಮತ್ತು ಸುಮತಿ ಭಾರ್ಗವ (ಮನು) ಚಾತುರ್ವರ್ಣ ಪದ್ಧತಿ ಮತ್ತು ಜಾತಿಯನ್ನು ಸೃಷ್ಟಿಸುವ ಮೂಲಕ ಮೇಲು-ಕೀಳು ಸಂಸ್ಕøತಿಯನ್ನು ಹುಟ್ಟು ಹಾಕಿದರು. ಬಾಲಿಕಾ ವಿವಾಹ ಮತ್ತು ವಿಧವಾ ಪದ್ಧತಿಗಳ ಮೂಲಕ ಅವುಗಳನ್ನು ಗಟ್ಟಿಗೊಳಿಸಿದರು. ಮನುಸÀ್ಮøತಿಯನ್ನು ಜನಮಾನಸದಲ್ಲಿ ಸ್ಥಾಪಿಸಲು ಶಾಸ್ತ್ರ-ಪುರಾಣ-ಕಾವ್ಯಗಳ ಮೂಲಕ ಬಿತ್ತಿದರು.

ಬುದ್ಧನ ನಂತರ ಈ ಆರ್ಯ ಸಂಸ್ಕøತಿಯನ್ನು ಎದುರುಕೊಂಡು ಪ್ರತಿರೋಧ ಒಡ್ಡಿದವರು ಹನ್ನೆರಡನೆ ಶತಮಾನದ ಬಸವಾದಿ ಶಿವಶರಣರು. ಶಿವಶರಣರ ಅನುಭವ ಮಂಟಪದಲ್ಲಿ ಮಹಿಳೆಗೆ ಸಮಾನ ವೇದಿಕೆ ಸಿಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಿಕ್ಕಿದ್ದಕ್ಕೆ ಅವರ ವಚನಗಳೇ ಸಾಕ್ಷೀಕರಿಸುತ್ತವೆ. ಅಧಿಕಾರ ವಂಚಿತಳಾಗಿದ್ದ ಮಾತು ಕಳೆದುಕೊಂಡಿದ್ದ ಮಹಿಳೆ ಮಾತಾಡಲು ಆರಂಭಿಸಿದ್ದು ಹೊಸ ಅನುಭವ ಲೋಕವನ್ನೇ ತೆರೆದಿಟ್ಟಿತು. ತಮ್ಮ ಸಮಕಾಲೀನ ವಚನಕಾರರೇ ತಬ್ಬಿಬ್ಬುಗೊಳ್ಳುವಂತೆ ಪ್ರಶ್ನಿಸುವ ಅವರ ಛಾತಿ ಅವರ ಲೋಕ ದೃಷ್ಟಿಯೇ ಆಗಿದೆ. “ಜಗವೆಲ್ಲಾ ಹೆಣ್ಣು ನೋಡಾ” ಎಂಬ ಅಕ್ಕನ ಮಾತು ಅನುಭಾವದ ಜಗತ್ತನ್ನು ದರ್ಶಿಸುತ್ತದೆ.

ವಚನಕಾರ್ತಿಯರ ‘ಲಿಂಗ’ದ ಪರಿಕಲ್ಪನೆಯ ವಿವೇಚನೆಗೆ ತೊಡಗುವಾಗ ಇಲ್ಲಿ ಎರಡು ಲಿಂಗಗಳನ್ನ ಎದುರುಗೊಳ್ಳಬೇಕಾಗುತ್ತದೆ. ಮೊದಲನೆಯದು ವಚನಕಾರರ ದೇಗುಲ ನಿರಾಕರಣೆಯ, ದೇಹವೇ ದೇಗುಲವಾದಾಗ ಅಲ್ಲಿ ಸ್ಥಾಪಿಸಿಕೊಳ್ಳುವ ದೈವತ್ವದ ಸಂಕೇತವಾದ ಲಿಂಗ. ನಮ್ಮ ಪರಂಪರೆಯಲ್ಲಿ ವಾಮ ಮತ್ತು ಅನುಭಾವಿ ಅಗೋರಿ ಪಂಥಗಳಲ್ಲಿ ಹೆಣ್ಣಿನ (ಯೋನಿ) ಪೂಜೆಯ (ತಂತ್ರ) basavanna1ಸಂಕೇತವೂ ಆಗಿ ಅದು ಪ್ರಕೃತಿ ತತ್ವವನ್ನು ಮಂಡಿಸುವ ಲಿಂಗಾಂಗ ಸಾಮರಸ್ಯವೂ ಆಗಿದೆ. ಇನ್ನು ಎರಡನೆಯದ್ದಾಗಿ ಹೆಣ್ಣು-ಗಂಡಿನ ನಡುವಿನ ಬೇಧ ಸಂಸ್ಕøತಿಯನ್ನು ಪ್ರಶ್ನಿಸಿದ ವಚನಕಾರ್ತಿಯ ಲಿಂಗ ಸಮಾನತೆಯ ಪರಿಕಲ್ಪನೆ.

• ಕರ್ಮಸಿದ್ಧಾಂತದ ಅಸಹಜ ಹುಟ್ಟಿನ ನಿರಾಕರಣೆ :
ವಚನಕಾರ್ತಿಯರು ಹಿಂದೂ ಧರ್ಮದ ಚಾತುರ್ವರ್ಣ ಸಿದ್ಧಾಂತವು ಮಂಡಿಸಿದ ಸೃಷ್ಟಿ ಮೂಲವನ್ನು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ದೇಹ-ಪ್ರತಿಮೆಯ ಮೂಲಕ ಕಟ್ಟಿಕೊಟ್ಟ ಅಸಜ ಹುಟ್ಟನ್ನು ನಿರಾಕರಿಸುವ ಅಕ್ಕಮಹಾದೇವಿ –
ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ಹೂವಾಗದು
ಸಂಗದಿಂದಲ್ಲದೆ ಸರ್ವಸುಖದೋರದು
ಚನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ
ಪೂರ್ಣತೆಯ ಮಾದರಿಯೊಂದನ್ನು ಮಂಡಿಸುತ್ತ ಜೀವಸೃಷ್ಟಿಕ್ರಿಯೆಯಲ್ಲಿ ಹೆಣ್ಣನ್ನು ನೇಪತ್ಯಕ್ಕೆ ಸರಿಸಿದ ಧಾರ್ಮಿಕ ಸಿದ್ಧಾಂತವನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸೃಷ್ಟಿ ಕ್ರಿಯೆಯಲ್ಲಿ ಹೆಣ್ಣಿನ ಪಾಲುದಾರಿಕೆ ಇಲ್ಲವೆಂದು ಸಾಧಿಸಲು ಸೃಷ್ಟಿಸಿದ “ಸ್ವಾಮಿ ಅಯ್ಯಪ್ಪನ” ಪುರಾಣ ಪ್ರತಿಮೆಯನ್ನು “ಸಂಗದಿಂದಲ್ಲದೆ ಬೀಜಮೊಳೆಯದು,… ಹೂವಾಗದು” ಎಂಬ ಮಾತು ಸಜಾತಿಲಿಂಗಿಯ ಅಸಹಜ ಹುಟ್ಟನ್ನು ಪ್ರಶ್ನಿಸುವಂತೆ ಮಾಡಿದೆ. ನೈಸರ್ಗಿಕ ಹುಟ್ಟು ಸ್ತ್ರೀ-ಪುರುಷ ಸಮಾನತೆಯತ್ತ ಆಲೋಚನೆಗಳನ್ನು ವಿಸ್ತರಿಸುತ್ತದೆ.

ಆರಂಭದಲ್ಲಿ ಸಂತಾನೋತ್ಪತ್ತಿಯಲ್ಲಿ “ಹೆಣ್ಣು” ಮಾತ್ರ ಕಾರಣವೆಂದು ಭಾವಿಸಿದ್ದ ಪುರುಷ ಮಾತೃ ಪೂಜಕನಾಗಿದ್ದ. ನಂತರ “ಬೀಜ”ವೂ ಕಾರಣವೆಂದು ಅರಿತಾಗ ಅವಳ ಸ್ಥಾನ-ಮಾನ, ಗೌರವದಲ್ಲಿ ಪಲ್ಲಟವಾಗಿ “ಮಹಾಮಾತೃತ್ವ”ದ ಪರಿಕಲ್ಪನೆಯಿಂದ ನೇಪತ್ಯಕ್ಕೆ ಸರಿಸಿದ. ಈ “ಬೀಜ”ದ ಸಾಂಸ್ಕøತಿಕ ರಾಜ-ರಾಜಕಾರಣವನ್ನು ಪ್ರಶ್ನಿಸಿದ ಮತ್ತು ತನ್ನ ಅಸ್ತಿತ್ವನ್ನು ದಾಖಲಿಸಿದ್ದು, ವಚನಕಾರ್ತಿಯರ ವೈಜ್ಞಾನಿಕ ದೃಷ್ಟಿಕೋನ ತಾತ್ವಿಕ ಪ್ರಶ್ನೆಗಳನ್ನು ಎತ್ತುವ ಮೂಲಕ ಲಿಂಗಬೇಧ ನೀತಿಯನ್ನು ಖಂಡಿಸಿತು. ಸಮಾನತೆಯ ಸಿದ್ಧಾಂತಿ ಎಂದೇ ದಾಖಲಾಗಿರುವ ಆಯ್ದಕ್ಕಿ ಲಕ್ಕಮ್ಮ ಕ್ಷೇತ್ರವಿಲ್ಲದೆ ಬೀಜಕ್ಕೆ ಅಸ್ತಿತ್ವವಿಲ್ಲವೆಂದು ಪ್ರತಿಪಾದಿಸಿದಳು.
ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ?
ನೀ ಮರೆದಲ್ಲಿ, ನಾನರಿದಲ್ಲಿ ಬೇರೊಂದೊಡಲುಂಟೆ?
ಮೂಲ ನಷ್ಟವಾದಲ್ಲಿ ಅಂಕುರ ನಂದಿತ್ತು.
ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ
ಬೇರೊಂದಡಿಯಿಡದಿರು,
ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.

ಇದರ ಮುಂದುವರಿಕೆ ಎಂಬಂತೆ ನೀಲಮ್ಮನ ವಚನ ಹೊಸ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ. ಅಧಿಕಾರದ ಸಂಕೇತವಾದ ಅರಸನೇ ಪ್ರಧಾನ ಭೂಮಿಕೆಯಲ್ಲಿರುವಾಗ-ಒಡೆತನದಿಂದ ನೋಡದೆ/ಒಪ್ಪಿಕೊಳ್ಳದೆ “ಅರಸಿಯಿಂದ ಅರಸನಾಗುವ” ನೋಟಕ್ರಮವೊಂದನ್ನು ಕಟ್ಟಿಕೊಡುತ್ತದೆ. ಅದು ಪೂರ್ಣತೆಯ ಪ್ರಜ್ಞೆಯನ್ನು ಹಾಗೂ ಶಕ್ತಿರಾಜ ಕಾರಣವನ್ನು ನೋಡುವ ರೀತಿ, ಭಿನ್ನತೆ ಮತ್ತು ಲಿಂಗ ಸಂವೇದನೆಯನ್ನು ಒಳಗೊಳ್ಳುವಿಕೆಯ ಮಾದರಿಯನ್ನು ತೋರುತ್ತದೆ.
ಪಯಣವಿಲ್ಲದೆ ಗಮನವ ಕಂಡವರುಂಟೆ?
ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ?
ಹೊಲ ನಿಲ್ಲದೆ ಫಲವನ್ನುಂಡವರುಂಟೆ?
ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ?
ಅರಸಿಯಿಲ್ಲದೆ ಅರಸಾದವರುಂಟೆ?
ಸಂಗಯ್ಯ, ಮುಖವಿಲ್ಲದ ಪ್ರಸಾದವನುಂಡವರುಂಟೆ?

• ಒಳಗೆ ಸುಳಿವ ಆತ್ಮ – ಲಿಂಗಭೇದ :
ಆಧ್ಯಾತ್ಮಿಕ ಮೀಮಾಂಸೆಯಲ್ಲಿ ಆತ್ಮದ ಜಿಜ್ಞಾಸೆ ವೈದಿಕ ಶಾಹಿ ನಡೆಸಿದ್ದು ಆತ್ಮೋನ್ನತಿ ದಾರಿಯಲ್ಲಿ. ಆದರೆ ವಚನಕಾರ್ತಿಯರು “ಆತ್ಮ”ವನು ಸಮಾಜ ಕೇಂದ್ರೀತಗೊಳಿಸಿ ಮಾತಾಡಿದ್ದಾರೆ.
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಮೀಸೆಕಾಸೆ ಬಂದೆಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾತಾ?
ಜೈವಿಕ ಲಿಂಗಭೇದ ನಿಸರ್ಗದತ್ತ ಜೈವಿಕ ಪ್ರಕ್ರಿಯೆಯಾದರೆ, ಲಿಂಗಾಧಾರಿತ ಅಸಮಾನತೆ ಮಾನವ ನಿರ್ಮಿತ ಸಾಮಾಜಿಕ ಕ್ರಿಯೆ. ಇದು ಧಾರ್ಮಿಕ ಹೇರಿಕೆಯಾದ್ದರಿಂದ ಅದನ್ನು ಗೊಗ್ಗವ್ವೆ ಆಧ್ಯಾತ್ಮಿಕ ನೆಲೆಯಲ್ಲಿ ಪ್ರಶ್ನಿಸಿದ್ದಾಳೆ. ಮುಂದುವರೆದು ತನ್ನ ಮತ್ತೊಂದು ವಚನದಲ್ಲಿ –
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ
ಆಧ್ಯಾತ್ಮದಿಂದ ಮಹಿಳೆಯನ್ನು ದೂರವಿಟ್ಟ ಮೂಲಭೂತವಾದ ಮಹಿಳೆ ಅಷ್ಟೇ ಅಲ್ಲ ಯಾರಿಂದಲೂ ಪ್ರಶ್ನಿಸಲ್ಪಡದೆ ಪ್ರಶ್ನಾತೀತ ಆಯಾಮವನ್ನು ಅಪೌರುಷಯ ನೆಲೆಯಲ್ಲಿ ಕಲ್ಪಿಸಿಕೊಂಡಿತ್ತು. ಲೋಕೋದ್ದಾರದ ಪರಂಪರೆ ಉಪದೇಶ ಮಾಡುವುದು ಮತ್ತು ಮೋಕ್ಷವನ್ನು ದಕ್ಕಿಸಿಕೊಡಲು ತೋರಿದ ಮಾರ್ಗಗಳು ಕರ್ಮಸಿದ್ಧಾಂತದ ಚಾರ್ತುವರ್ಣದ ಶ್ರೇಣಿಕ ಪದ್ಧತಿಯಲ್ಲಿ ನಿರ್ಬಂಧಕ್ಕೊಳಗಾಗಿದ್ದವು. ಸ್ಥಾಪಿತ ಅಧಿಕಾರ ಕೇಂದ್ರದ ನಿಯಂತ್ರಣಕ್ಕೊಳಪಟ್ಟಿದ್ದವು. ಗೊಗ್ಗವ್ವೆಯ ಲೋಕದೃಷ್ಟಿ ಆಧ್ಯಾತ್ಮಿಕ ಆವರಣದೊಳಗೆ ಸಾಮಾಜಿಕ ಲಿಂಗಸಮಾನತೆಯ ಪ್ರಶ್ನೆಗಳನ್ನೆತ್ತುವ ಮೂಲಕ ಪರಿಪೂರ್ಣ ಮನುಷ್ಯನ ಮಾದರಿ ಗಂಡುತನ ಮತ್ತು ಹೆಣ್ಣುತನ ಎರಡನ್ನೂ ಕಳೆದುಕೊಂಡು ಒಂದಗಿರುವ ಅಥವಾ ಎರಡನ್ನೂ ಒಳಗೊಂಡೇ ರೂಪುಗೊಂಡದ್ದು ಎಂಬುದರತ್ತ ಆಲೋಚಿಸುವಂತೆ ಮಾಡಿದೆ.
ಗೊಗ್ಗವ್ವೆಯ ಈ ಸಾಮಾಜಿಕ ಆಧ್ಯಾತ್ಮಿಕತೆಯನ್ನು ವಿಸ್ತರಿಸಿದ ನೀಲಮ್ಮ –
ಆಡಲಿಲ್ಲವಯ್ಯಾ ನಾನು ಹೆಣ್ಣ ರೂಪಧರಿಸಿ;
ನುಡಿಯಲಿಲ್ಲವಯ್ಯ ನಾನು ಹೆಣ್ಣು ರೂಪಧರಿಸಿ;
ನಾನು ಹೆಣ್ಣಲ್ಲದ ಕಾರಣ, ನಾನು ಇರಪರ ನಾಸ್ತಿಯಾದವಳಯ್ಯ,
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ,
ಸಂಗಯ್ಯ ಬಸವ ಬಯಲ ಕಂಡ ಕಾರಣ.
ಎನ್ನುತ್ತ ನನ್ನೊಳಗಿನ ನುಡಿಗೆ ಕೃತಿಗೆ ಹೆಣ್ತವಿಲ್ಲ ಎನ್ನುತ್ತಾಳೆ. ಪಿತೃಪ್ರಧಾನತೆ ಸೃಷ್ಟಿಸಿದ ಮಾದರಿಯಲ್ಲ. ಹೀಗಾಗಿ ಇವರ ಲೋಕ ದೃಷ್ಟಿ ಸ್ಥಾಪಿತ ಮಹಿಳಾ ಮಾದರಿಗಳ ಒಡೆಯುವಿಕೆಯನ್ನು ಕಾಣುತ್ತೇವೆ. ನೀಲಮ್ಮ ತಾನು ಪ್ರತ್ಯೇಕ ಅಸ್ತಿತ್ವವನ್ನು ಸ್ಥಾಪಿಸಿಕೊಂಡದ್ದರ ಕುರಿತು ಹೇಳುತ್ತಾಳೆ. ಮತ್ತು ಬಸವಣ್ಣನ ಪ್ರಭಾವಲಯದಲ್ಲಿ ಕರಗಿ ಹೋಗದೆ ತನ್ನ ಇರವನ್ನು ಜೀವಪರವಾಗಿಸಿಕೊಂಡದ್ದರ ಬಗ್ಗೆ ದಾಖಲಿಸುತ್ತಾಳೆ.

ಹೆಣ್ಣು ಪಾಪಯೋನಿ ಎಂದ ಕೃಷ್ಣನ ಭಗವದ್ಗೀತೆ ಪ್ರತಿಪಾದಿಸುವ ಕರ್ಮಸಿದ್ಧಾಂತದ ಪುನರ್‍ಜನ್ಮದ ಪರಿಕಲ್ಪನೆಯಲ್ಲಿ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದರಿಂದ ಹೆಣ್ಣಾಗಿ ಹುಟ್ಟಿದೆ ಎಂಬುದರ ಧಾರ್ಮಿಕ ಹಕ್ಕಿನ ನಿರಾಕರಣೆಯನ್ನು ವಚನಕಾರ್ತಿಯರಲ್ಲಿ ಕಾಣುತ್ತೇವೆ. ಹೆಣ್ಣು ಮೋಕ್ಷಕ್ಕೆ ಅರ್ಹಳಲ್ಲ ಎಂಬುದಕ್ಕೆ ತೀವ್ರವಾದ ಪ್ರತಿರೋಧವನ್ನು ಒಡ್ಡುತ್ತಾರೆ. ವೇದ-ಶಾಸ್ತ್ರ-ಪುರಾಣಗಳನ್ನೂ ಜಾಲಾಡಿಸಿದ್ದಾರೆ. ಸ್ಥಾಪಿತ ಧರ್ಮ-ಭಕ್ತಿ ಮತ್ತು ಅವು ಕಟ್ಟಿಕೊಡುವ ಮಹಿಳಾ ಮಾದರಿಗಳನ್ನು ಪ್ರತಿರೋಧಿಸುವ ನೀಲಮ್ಮ “ಹೆಣ್ಣ’ ಪದದ ನಿರ್ವಚನ ಮಾಡಿದ್ದಾಳೆ.
ಏಕೆನ್ನ ಪುಟ್ಟಿಸಿದೆಯ್ಯ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ ಪಾಪಿಯ?
ನಾನು ಇಹಪರಕ್ಕೆ ದೂರಳಯ್ಯಾ,
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ,
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ,
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ,
ಎನಗೆ ಹೆಣ್ಣು ನಾಮವಿಲ್ಲವಯ್ಯ.
ಇದು ವಚನಕಾರರ ಪ್ರಭಾವಲದಲ್ಲಿ ಹುಟ್ಟಿದ ಬೆಳಕಲ್ಲ. ವಾಸ್ತವ ಬದುಕಿನಲ್ಲಿ ಹೆಣ್ಣಾಗಿದ್ದಕ್ಕಾಗಿ ಅನುಭವಿಸಿದ ಅವಮಾನ, ತಿರಸ್ಕಾರ, ಆಸ್ತಿ-ಅಧಿಕಾರ ನಿರಾಕಾರಣೆ ಅವಳನ್ನು ಸಂಕಷ್ಟಕ್ಕೆ ದೂಡಿದ್ದರಿಂದ ಆ ಸಾಮಾಜಿಕ ಮಾನ್ಯತೆಯನ್ನು ಪಡೆಯುವಲ್ಲಿ ಪ್ರತಿಯೊಬ್ಬ ಹೆಣ್ಣೂ ನಡೆಸುವ ಒಳಹೋರಾಟದ ಮಾತುಗಳಾದ್ದರಿಂದ ವಚನಕಾರ್ತಿಯರು “ಎನಗೆ ಹೆಣ್ಣು ನಾಮವಿಲ್ಲ” ಎನ್ನುವಲ್ಲಿ ಧಾರ್ಮಿಕವಾಗಿ ಕಟ್ಟಿಕೊಟ್ಟಿರುವ ನಿರ್ಮಿತಿಗಳನ್ನು ಮೀರುವ ಮತ್ತು ತಿರಸ್ಕರಿಸುವ ಹೋರಾಟವಾಗಿಯೂ ಕಾಣುತ್ತದೆ. ಆಧ್ಯಾತ್ಮವನ್ನು ಧಾರ್ಮಿಕ ಆವರಣದಿಂದ ಹೊರಗಿಡುವ ಮತ್ತು ಅದನ್ನು ವೈಯಕ್ತಿಕ ಆಯ್ಕೆಯಾಗಿಸುವ ಮೂಲಕ ಹೆಣ್ಣು ದೇಹಕ್ಕೆ ಹೊಸ ಪರಿಕಲ್ಪನೆಯನ್ನು ವಚನಕಾರ್ತಿಯರ ಲೋಕದೃಷ್ಟಿ ನೀಡುತ್ತದೆ.

• ಆದಿಮಾವಾದದ ಪ್ರತಿಪಾದನೆ :

chitra: Murugeshappa

chitra: Murugeshappa

ಮನುವಿನ ‘ಮಹಿಳೆ ಪುರುಷ ರಕ್ಷಣೆಯಲ್ಲಿರಬೇಕು’ ಎಂಬ ವಾದವನ್ನು ತಮ್ಮ ಅಸ್ತಿತ್ವದ ಪ್ರಶÉ್ನಯನ್ನೆತ್ತುವ ಮೂಲಕವೇ ನಿರಾಕರಿಸುವ “ಮಡದಿ ಎನಲಾಗದು ಬಸವಂಗೆ ಎನ್ನನು” ಎನ್ನುವ ಮೂಲಕ ಕೌಟುಂಬಿಕ ಚೌಕಟ್ಟಿನ ಮೀರುವಿಕೆಯನ್ನು ಪ್ರತಿಪಾದಿಸುತ್ತಾರೆ. ಕೌಟುಂಬಿಕ ಆವರದಲ್ಲಿ ಉಸಿರುಗಟ್ಟಿಸುವ ಧಾರ್ಮಿಕತೆಯನ್ನು ತೊಲಗಿಸಲು “ಮಡದಿ” ಎಂಬ ಶಬ್ದ ನಿಶ್ಯಬ್ದವಾಗಬೇಕೆನ್ನುವ ಮೂಲಕ ಕೌಟುಂಬದೊಳಗಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾರೆ. ನೀಲಮ್ಮನ ಮಡದಿ ಶಬ್ದದ ನಿರ್ವಚನ ಗಂಡ-ಹೆಂಡತಿ ಎನ್ನವ ಶ್ರೇಣೀಕರಣವನ್ನು ನಿರಾಕರಿಸುತ್ತದೆ.

ಕದಿರರೆಮ್ಮವ್ವೆ “ಎಲ್ಲ ಗಂಡಂದಿರು ಗಜವೇಂಟೆಕಾರರು/ಎನ್ನ ಗಂಡ ಮನವೇಂಟೆಕಾರ” ಎನ್ನುವ ಮೂಲಕ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ಕುರಿತು ಪುರುಷಾಧಿಕಾರ ಕೇಂದ್ರವನ್ನು ಒಡೆಯುವ ಪ್ರಯತ್ನ ಮಾಡಿದ್ದಾಳೆ. ಹೆಣ್ಣಿಗೆ ಲೈಂಗಿಕ ಸ್ವಾತಂತ್ರ್ಯ ಅಥವಾ ಅಧಿಕಾರ ಇಲ್ಲ. ಮನು ಅವಳಿಗೆ ಆಯ್ಕೆ ಸ್ವಾತಂತ್ರ್ಯವನ್ನೇ ನೀಡಿಲ್ಲವಾದ್ದರಿಂದ “ಪಾತಿವೃತ್ಯ” ಪರಿಕಲ್ಪನೆಯ ಮೂಲಕ ನಿಯಂತ್ರಿಸಿದ್ದಾನೆ. ಹೆಣ್ಣು ಗಂಡಿನ ಅಧೀನತೆಯಲ್ಲಿರಬೇಕು ಮತ್ತು ಪ್ರಶ್ನಿಸಬಾರದು ಎನ್ನುವ ಮೂಲಕ ಅವಳ ಮೂಲಭೂತ ಹಕ್ಕು ಮತ್ತು ಹಸಿವು ಪ್ರತಿಪಾದಿಸಲ್ಪಡದಂತೆ ನಿರ್ಭಂಧಗಳನ್ನು ಹೇರಿದ್ದಾನೆ. ಅವನ್ನು ಪ್ರಶ್ನಿಸುವ ಮತ್ತು ಲೈಂಗಿಕ ಅಧಿಕಾರವನ್ನು ಹೊಂದುವ ಹಕ್ಕು ಹೆಣ್ಣಿಗಿದೆ ಎಂಬ ವಾದವನ್ನು ಕದಿರರೆಮ್ಮವ್ವೆ ಈ ವಚನದ ಮೂಲಕ ಕಟ್ಟಿಕೊಡುತ್ತಾಳೆ.
ಎಲ್ಲರ ಹೆಂಡಿರು ತೊಳಸಿಕ್ಕುವರು;
ಎನ್ನ ಗಂಡಂಗೆ ತೊಳಸುವುದಿಲ್ಲ;
ಎಲ್ಲರ ಗಂಡಂದಿರಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ;
ಎಲ್ಲರ ಗಂಡಂಸಿರಿಗೆ ಬೀಜವುಂಟು;
ಎನ್ನ ಗಂಡಂಗೆ ಅಂಡದ ಬೀಜವಿಲ್ಲ;
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ,
ಕದಿರರೆಮ್ಮೆಯೊಡೆಯ ಗುಹೇಶ್ವರಾ.

ಶ್ರೇಣೀಕರಣ ಪದ್ಧತಿಯಲ್ಲಿ ಅಧಿಕಾರ ವಂಚಿತ ಮಹಿಳೆ, ಮರಳಿ ಅಧಿಕಾರ ಪಡೆಯುವತ್ತ ಸಾಗಿರುವ ಚಿಂತನೆಯನ್ನು ಕೊಡುತ್ತದೆ. ವಚನಕಾರ್ತಿಯರು ಪುರುಷ ನಿರಾಕರಣೆ ಮಾಡಿಲ್ಲ. ಅವರ “ಸತಿ-ಪತಿ” ಸಿದ್ಧಾಂತ ನಿಸರ್ಗೋಪಾಸನೆಯ ಆದಿಮಾ ಸಮಾಜದ ಪರಿಕಲ್ಪನೆಯಾಗಿದೆ. ಅದು ಭೇದ ಸಂಸ್ಕøತಿಯೊಂದು ಇರದ ಸಮಾನತಾ ಸಿದ್ಧಾಂತದ ಬದುಕುಮುಖಿ ಚಿಂತನೆಯಾಗಿತ್ತು. ಮನುಕುಲದ ಹುಟ್ಟಿನ ಮೂಲವೇ ಲಿಂಗಸಮಾನತೆಯ ಆದಿಮಾ ಪರಿಕಲ್ಪನೆಯದು. ಮಾನವ ಉದಯದ ಆದಿಮಾವಾದವು “ಜೀವಶಕ್ತಿಯ ಮೂಲ ಮಾತೃ” ಕಲ್ಪನೆಯದು. ಅದು ಧರ್ಮ ಹೇರಿಕೆಯ ಪುರುಷ ರಕ್ಷಣೆಯ ನೆಲೆಯದಲ್ಲ; ಸ್ವರಕ್ಷಣೆಯದು. ತಮ್ಮ ವಚನಗಳ ಮೂಲಕ ಆದಿಮಾವಾದವನ್ನು ಪ್ರತಿಪಾದಿಸಿದಂತೆ ಕಾಣುತ್ತದೆ. ನೀಲಮ್ಮನ ವಚನ ಮೂಲ ಮಾತೃ ಕಲ್ಪನೆಯನ್ನು ಸಾರಿ ಹೇಳುವಂತಿದೆ.
ಅರುವೆರಳುದ್ದ ದೇಹವು ಮಾಡಿದೆ ಕರುಣಿ ಬಸವಾ
ಬೆರಸಿ ಬೇರಿಲ್ಲದೆ ಇದ್ದೆ ಬಸವಾ
ನೆರೆ ನಂಬಿದೆ ನಿಮ್ಮುವ ಬಸವಾ
ಬರುಕಾಯದ ಭ್ರಮೆಯ ಬಿಡಿಸೆದೆನಯ್ಯಾ ಬಸವಾ.
ನೀನು ತೃಪ್ತನಾಗಿ ನಾನು ತೃಪ್ತಳಲ್ಲ ಬಸವಾ
ಸಂಗನ ಬಸವಾ ಮೂಲಕರ್ತೃ ನಾನು ನಿನಗೆ.
*****

ವಿಳಾಸ :-  ಅನಸೂಯ ಕಾಂಬಳೆ
ಸಹಾಯಕ ಪ್ರಾಧ್ಯಾಪಕರು
ಕನ್ನಡ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ
ಸ್ನಾತಕೋತ್ತರ ಕೇಂದ್ರ, ಕೆರಿಮತ್ತಿಹಳ್ಳಿ,
ಹಾವೇರಿ-581110.

Leave a Reply

Your email address will not be published.