ಲಾಟೀನ ಬೆಳಕು – 4: “ಮಾಸ್ತರನ ಮಗಳ ಮಾಸುಂದ್ರಿನ್ಯಾಕ ಕರ್ಕೊಂಡ ಬಂದರ್ಲೆ

- ಡಾ. ಅನಸೂಯ ಕ ಕಾಂಬಳೆ

kambleನಮ್ಮ ಜನರೆಲ್ಲರೂ ಕೂಲಿ ಕೆಲಸವನ್ನೇ ನೆಚ್ಚಿಕೊಂಡವರು. ಹೀಗಾಗಿ ನಾನು ಏಳುವಷ್ಟರಲ್ಲಿ ಅವರೆಲ್ಲ ನಸುಕಿನಲ್ಲೇ ಎದ್ದು, ರೊಟ್ಟಿ ಮಾಡಿ, ಜಳಕ ಮಾಡಿ, ಉಂಡು ಬುತ್ತಿಗಂಟು ಕಟ್ಟಿಕೊಂಡು ಕೂಲಿಗಾಗಿ ಹೋಗುತ್ತಿದ್ದರು. ವಯಸ್ಸಾಗಿ ಹಾಸಿಗೆ ಹಿಡಿದವರು ಮತ್ತು ಮಕ್ಕಳನ್ನು ಬಿಟ್ಟರೆ ಎಲ್ಲವೂ ಖಾಲಿ ಖಾಲಿ, ನಮ್ಮ ಮನೆಯಲ್ಲಿ ನನ್ನ ಆಯಿ (ತಂದೆಯ ತಾಯಿ) ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ತನ್ನ ಹರೆಯದ ವಯಸ್ಸಿನಲ್ಲಿ ಗಂಡ ತೀರಿಕೊಂಡಿದ್ದರಿಂದ ಆಯಿ ತನ್ನ ಮೂರು ಮಕ್ಕಳನ್ನು ಕೂಲಿ ಮಾಡಿಯೇ ಬೆಳೆಸಿದ್ದಳು. ನಮ್ಮ ಹೊಲದಲ್ಲಿ ಕೆಲಸವಿಲ್ಲದಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ನನ್ನ ತಾಯಿಯನ್ನು ಅಪ್ಪ ಹೊರಗೆಲ್ಲೂ ಕೆಲಸಕ್ಕೆ ಕಳುಸುತ್ತಿರಲಿಲ್ಲ. ನಾವು ಶಾಲೆಗೆ ಹೋಗುತ್ತಿದ್ದುದರಿಂದ ನಾವ್ಯಾರೂ ಕೂಲಿಕೆಲಸಕ್ಕೆ ಹೋಗುತ್ತಿರಲಿಲ್ಲ.

ಒಂದು ದಿನ ನಮ್ಮ ಪಕ್ಕದ ಹೊಸಬಾವಿ ಅವರ ತೋಟದಲ್ಲಿ ಬಮ್ಮುಕಾಯಿ (ಶೇಂಗಾ) ಹರಿಯುತ್ತಿದ್ದಾರೆಂದು ಎಲ್ಲರೂ ಸಡಗರದಿಂದ ಓಡಿ ಹೋಗುತ್ತಿದ್ದರು. ಏಕೆಂದರೆ ಎರಡೊತ್ತಿನ ಊಟಕ್ಕೂ ಪರದಾಡುತ್ತಿದ್ದ ನಮ್ಮ ಜನರಿಗೆ ಶೇಂಗಾ ಕೊಂಡು ತಿನ್ನುವದು ದೂರದ ಮಾತು. ಅಂದು ಯಾವುದೋ ಕಾರಣಕ್ಕೊ ಅಥವಾ ರಜೆವಿತ್ತೋ ನಾನು ಶಾಲೆಗೆ ಹೋಗಿರಲಿಲ್ಲ. ನನ್ನ ಓರಗೆಯ ಗೆಳತಿಯರೆಲ್ಲ ನೀನೂ ಬಾ ಬಮ್ಮು ಕಾಯಿ ಹರಿಯುತ್ತ ಎಷ್ಟು ಬೇಕಾದರೂ ತಿನ್ನಬಹುದು ಅಂದರು. ನನಗೆ ಏನಾದರೂ ತಿನ್ನುವ ಆಶೆ ಕಡಿಮೆ ಆದರೂ ಅವರೊಂದಿಗೆ ಹೋಗುವ ತುಡಿತ ಹೆಚ್ಚಿತು. ಅವ್ವನಿಗೆ ನಾನು ಬಮ್ಮುಕಾಯಿ ಹರಿಯಲು ಹೋಗುವೆ ಎಂದು ಹಠ ಹಿಡಿದೆ. ಅವ್ವ ಬೇಡ ಅಂದಳು. ನಿನಗೆ ಕೆಲಸ ಮಾಡಿ ರೂಢಿ ಇಲ್ಲ, ಬಿಸಲಾಗ ಕುಂತು ಜ್ವರಾ ಬಂದ್ರ ಅವ ನನ್ನ ಬಡೆದ್ಯಾ ಬಿಡ್ತಾನು ,,, ನೀ ಹೋಗೋದು ಬ್ಯಾಡ ಅಂದಳು. ನನ್ನ ಗೆಳತಿಯರು ಕಡೆಗೆ ಅವ್ವನನ್ನು ಒಪ್ಪಿಸಿದರು. ನಾನು ಒಂದು ಯೂರಿಯಾ ಚೀಲ ಹಾಗೂ ಒಂದು ಸಣ್ಣ ಹಾಗೂ ಒಂದು ದೊಡ್ಡ ಬುಟ್ಟಿ ತಲೆ ಮೇಲೆ ಇಟ್ಟುಕೊಂಡು ಹೊರಟೆ. ಅವ್ವ ನನ್ನ ಗೆಳತಿಯರಿಗೆ ಇವಳನ್ನು ಜೋಪಾನ ಕರೆದುಕೊಂಡು ಬರಬೇಕೆಂದು ಹೇಳಿದಳು.

ಹೊಸಬಾವಿ ಅವರ ಹೊಲದಲ್ಲಿ ಹೋಗಿ ನಿಂತೆ, ನಮಗಿಂತ ಮೊದಲು ಹೋದವರು ಶೇಂಗಾ ಬಳ್ಳಿ ಕಿತ್ತು ಗುಂಪಿ ಹಾಕಿಕೊಂಡು ಕಾಯಿ ಹರಿಯುತ್ತಿದ್ದರು. ನನಗೇನೂ ಗೊತ್ತಿಲ್ಲ. ಸುಮ್ಮನೆ ನಿಂತೆ, ನಾನು ನಿಂತಿರುವದು ನೋಡಿ ಎಲ್ಲರೂ ನಕ್ಕರು. “ಮಾಸ್ತರನ ಮಗಳ ಮಾಸುಂದ್ರಿನ್ಯಾಕ ಕರ್ಕೊಂಡ ಬಂದರ್ಲೆ … ಅವರಿಗ್ಯಾನ ಕಡ್ಮಿ ಆಗೇತಿ …. ಅವರ ಅಪ್ಪ ರಗಡ ತಂದ ಹಾಕ್ತಾನು. ಅವು ಏನು ತಿನಲಾರ್ದ ರೋಗ ಹಾದ ಕೋಳಿ ಹಂಗ ಆದಾವು … ಬಿಸಲಾಗ ತಲಿ ತಿರಿಗಿ ಬಿದ್ದರೇನು ಮಾಡೂದು… ಎಂದು ನಗಾಡಿದರು. ಅವರ ಮಾತಿನಿಂದ ನನ್ನ ಮನಸ್ಸಿಗೆ ಕಸಿವಿಸಿ ಆತು. ದುಡಿವ ನನ್ನ ಗೆಳತಿಯರೆಲ್ಲ ಗಟ್ಟಿಗಿತ್ತಿಯರಾಗಿದ್ದರು. ಅವರು ನನ್ನ ಕೈಹಿಡಿದು ಅವಳು ಬರಾಕ ಬಿಲ್ಲ್ಯಾ ಅಂದಳು… ನಾವು ಜಗ್ಗಿ ಕರಕೊಂಡು ಬಂದೆವು. ನೀವು ಇನ್ನ ಸುಮ್ಮನಿರದಿದ್ರ ಆಕಿ ಅತ್ತ ಬಿಡ್ತಾಳು… ಗಪ್ಪ ಆಗ್ರಿ “ಎಂದು ಜಬರಿಸಿ, ನನ್ನ ಕೈಹಿಡಿದು ಹೀಂಗ ಬಳ್ಳಿ ಹಿಡಿದು ಹೀಂಗ ಕಿತ್ತಬೇಕು. ಮತ್ತು ಒಂದು ಕಡೆ ಗುಪ್ಪಿ ಹಾಕಬೇಕು” ಅಂತ ತೋರಿಸಿದರು. ನಾನು ಹೊಸ ಹುಮ್ಮಸ್ಸಿನಲ್ಲಿ ಬಳ್ಳಿ ಕಿತ್ತು ಗುಪ್ಪೆ ಹಾಕಿ ಕೂತು ಅವರಂತೆ ಶೇಂಗಾ ಕಾಯಿ ಹರಿದು ಬುಟ್ಟಿ ತುಂಬಿಸಿ, ಬುಟ್ಟಿ ತುಂಬಿದ ಮ್ಯಾಲ ಚೀಲದಲ್ಲಿ ಹಾಕುವದು ಮಾಡಿದೆ. ಮೊದಲ ಸಲಾ ಬಂದ್ರನೂ ಎಷ್ಟು ಕಾಯಿ ಹರದಾಳ ಅಂತ ಎಲ್ಲರೂ ಮೆಚ್ಚಿದರು.

shengaಶೇಂಗಾ ಹರಿಯಿತ್ತಲೇ ಎಲ್ಲರೂ ತಮ್ಮ ಕಣ್ಣಿಗೆ ನಟ್ಟಂತ ಕಾಯಿಗಳನ್ನು ಆರಿಸಿ ತಿನ್ನುತ್ತಿದ್ದರು. ನಾನು ಮಾತ್ರ ಕಾಳುಗಳಿಂದ ಹಾಲು ತುಂಬಿದ ಎಳೆ ಮೊಗ್ಗಿನಂತ ಬಿಳಿಬಿಳಿ ಹಾಲುಗಾಳುಗಳನ್ನು ಸಿಪ್ಪೆ ಸಮೇತ ತಿನ್ನುತ್ತಿದ್ದೆ. ಕಾಯಿ ಹರಿಯುವಾಗ ಕೈತುಂಬ ಮಣ್ಣು, ಅದರ ಖಬರೇ ಇಲ್ಲದೇ ಹಾಗೇ ತಿಂದಿದ್ದರಿಂದ ಬಾಯಿ ತುಟಿ ತುಂಬ ಕೆಸರು ಮೆತ್ತಿಕೊಂಡಂತೆ ಮಣ್ಣು ಆ ಶೇಂಗಾ ಜೊತೆಗೆ ನಮ್ಮ ಹೊಟ್ಟೆ ಸೇರಿತ್ತು.

ಮೂರು ಸಂಜೆ ನಮಗೆ ಕೂಲಿ ಕೊಡುವ ಸಮಯ, ಎಲ್ಲರೂ ಒಂದೆಡೆ ಚೀಲ, ಬುಟ್ಟಿ ಎತ್ತಿಕೊಂಡು ಬಂದು ಕುಳಿತರು. ನನಗೆ ಚೀಲ ಎತ್ತಲು ಬರಲಿಲ್ಲ. ನಾನು ಅದರ ತುದಿ ಹಿಡಿದು ಜಗ್ಗ ತೊಡಗಿದೆ. ನನ್ನ ಗೋಳು ನೋಡಿದ ದೊಡಮನಿ ಚಂಪವ್ವಾಯಿ ‘ ಅಲ್ಲ ನೋಡ್ರ ಆಕಿ ಹ್ಯಾಂಗ ಸತ್ತನಾಯಿ ಎಳದಾಂಗ ಚೀಲಾ ಎಳ್ಯಾಕ ಹತ್ತ್ಯಾಳ ಆಕಿ ಚೀಲಾ ತಂದ ಇಲ್ಲಿ ಇಡ್ರಿ’ ಅಂದಳು. ನನ್ನ ಗೆಳತಿಯರು ಬಂದು ಒಯ್ದರು. ನಾನು ಕೊನೆಗೆ ಹರಿದ ಶೇಂಗಾ ಒಂದು ಸೇರಿನಷ್ಟು ಸಣ್ಣ ಬುಟ್ಟಿಯಲ್ಲಿ ಇತ್ತು. ಅದನ್ನು ಹಾಗೇ ದೊಡ್ಡ ಬುಟ್ಟಿಯಲ್ಲಿಟ್ಟು, ಎತ್ತಿ ತಂದು ನಾನು ಅವರೊಂದಿಗೆ ಕೂಲಿಗಾಗಿ ಕಾದು ಕುಳಿತೆ. ಸಾವುಕಾರರು ಬೇಗ ಬರಲಿಲ್ಲ. ಅರ್ಧ ತಾಸಿನ ನಂತರ ಸಾಹುಕಾರರು ಬಂದರು. ಒಬ್ಬೊಬ್ಬರ ಬಂದು ಚೀಲಾ ಸುರುವಿ ನಿಮ್ಮ ನಿಮ್ಮ ಪಾಲಾ ತೊಗೊಳ್ರಿ ಅಂದರು. ಯಾರಾದ್ರೊ ಕದ್ದಗಿದ್ದ ಇಟಗೊಂಡ್ರಿ ಮತ್ತು ಪಾಡ ಆಗೋದಿಲ್ಲ. ಕದ್ದವರ್ನ ಸುಮ್ನ ಬಿಡಾಂಗಿಲ್ಲ ಎಂದು ಎಚ್ಚರಿಸಿದರು. ಇವರ್ಯಾಕ ಹೀಂಗ ಅಂತಾರು… ಕದಿತಾರ ಯಾಕ? ಸಂಜಿತನಾ ದುಡದಾರು… ಮನಸ್ಸು ಯೋಜಿಸಿತು.

ಒಬ್ಬೊಬ್ಬರ ಹೋಗಿ ಚೀಲಾ ಸುರುವಿ ಪಾಲಾ ತಗೊಂಡ ಬರ್ತಿದ್ರು. ಚೀಲದಾಗ ಕಾಯೀನ ಕಾಣ್ತಿರಲಿಲ್ಲ. ಎಲ್ಲಾ ಅವರ ಯಾಕ ತಕ್ಕೊತಾರು … ಕೂಲಿ ಅಂದ್ರ ಇಷ್ಟನಾ ಅಂತ ನನ್ನ ಗೆಳತಿ ಸುಗಿ (ಸುಗಂಧಿ)ಯನ್ನು ಕೇಳಿದೆ. ಅವಳು ಭೊಳ್ಳ ಅಂತ ನಕ್ಕು … ಸುಮ್ನ ಇರು. ನಿನಗ ಮಾಸ್ತರನ ಮಗಳು ಅಂತ ಬಾಲ ಕೊಡ್ತಾರು ಅಂದಳು. ಹೌದಾ… ಖರೇನ ಅಂದೆ ಹೌದು ಎಂದು ನಕ್ಕಳು . ಮುಂದೆ ನನ್ನ ಸರದಿ ಬಂದಾಗ ಎದ್ದ ಬಂದೆ ಚೀಲ ಸುರುವಿದಳು. ಸಾವುಕಾರರು ಅದರಲ್ಲಿ ಎರಡು ಭಾಗ ಮಾಡಿ ಒಂದು ಭಾಗ ತಮ್ಮ ಕಡೆ ಸರಿಸಿಕೊಂಡರು. ಮತ್ತೆ ಹಾಗೇ ಮಾಡಿದರು. ಮೂರನೇ ಸಲ ಮತ್ತೆ ಎರಡು ಭಾಗ ಮಾಡಿ ಒಂದು ಭಾಗ ತಮ್ಮ ಕಡೆ ಸರಿಸಿಕೊಂಡು, ಉಳಿದ ಮತ್ತೊಂದು ಭಾಗದಲ್ಲಿ ನಾಲ್ಕು ಭಾಗ ಮಾಡಿ ಒಂದು ಭಾಗ ತಗೊ ಅಂದರು. ನಾನು ಆ ನಾಲ್ಕು ಬೊಗಸೆ ಶೇಂಗಾ ಚೀಲದಲ್ಲಿ ಹಾಕಿಕೊಂಡು ಬಂದೆ. ಚೀಲದಲ್ಲಿ ಕಾಯಿ ಕಾಣುತ್ತಿಲ್ಲ ಸಾಹುಕಾರರ ರಾಶಿ ಎರುತ್ತಿದೆ. ಮತ್ತು ಚೀಲನೊಮ್ಮೆ ಸಾಹುಕಾರರ ರಾಶಿಯನ್ನೊಮ್ಮೆ ನೋಡಿದೆ. ಕಣ್ಣಲ್ಲಿ ದಳದಳ ನೀರಿಳಿಯಿತು. ನನ್ನ ಗೆಳತಿಯರೆಲ್ಲ ಹಿಂಗ್ಯಾಕ ಅಳಾಕತ್ತಿ ಅಂದ್ರು. ನನ್ನ ಶೇಂಗಾ ಎಲ್ಲಾ ಅವರ ತಗೊಂಡ್ರು ಅಂದೆ. ಅವರು ಮತ್ತೊಮ್ಮೆ ಗೊಳ್ಳಂತ ನಕ್ಕರು. “ಅವರ ಹೊಲಾ ಅವರ ಕಾಯಿ… ಇದು ಕೂಲ್ಯಾವ್ರ ಹಣೆ ಬರಾ” ಅಂದ್ರು ನನಗೆ ಏನೂ ಅರ್ಥ ಆಗಲಿಲ್ಲ. ತಟ್ಟಂತ ಬುಟ್ಯಾಗಿನ ಶೇಂಗಾ ನೆನಪಾಯಿತು. ಎದಿ ಒಂದೇ ಸವಾ ಹೊಡಕೊಳ್ಳಾಕ ಸುರು ಆತು. ಮೈಯೆಲ್ಲಾ ಬೆವೆತು ನಡಗಾಕ ಹತ್ತಿತು. ಯಾರ ಮುಂದ ಹ್ಯಾಂಗ ಹೇಳೊದು ತಿಳಿವಲ್ಲಾತು.

ನಮ್ಮ ಸಾಲಿ ನೆನಪಾಯಿತು. “ ಸತ್ಯವೇ ನಮ್ಮ ತಂದೆ ತಾಯಿ, ಸತ್ಯವೇ ನಮ್ಮ ಬಂಧು ಬಳಗಾ ಸತ್ಯವಾಕ್ಯಾವ ತಪ್ಪಿ ನಡೆದರೆ ಮೆಚ್ಚಲಾರನು ಪರಮಾತ್ಮನು…” ಹಾಡು ಹೊಟ್ಟೆ ಗಂಟನ್ನು ಸುಡತೊಡಗಿತು. ಗೆಳತಿಯ ಕಿವಿಯಲ್ಲಿ ಹೇಳಿದೆ. ಅಯ್ಯ ಸಮ್ನಿರು ಅದಕ್ಯಾಕ ಅಂಜಿತಿ ಎಲ್ಲಾರು ಒಂದೊಂದ ಬುಟ್ಟಿ ಬುಟ್ಟಿ ಮುಚ್ಚಿಟ್ಟಾರು. ಇಲ್ಲಾಂದ್ರ ಬಾಳ್ಯಾಕ ಆಗ್ತತೇನು?…” ಅಂದಳು, ಬ್ಯಾಡಯವ್ವಾ ನಿನ್ನ ಕೈ ಮುಗಿತೀನಿ, ನಾನು ಕದ್ಯಾಂಗಿಲ್ಲ ಅಂದೆ. ಇಲ್ಲೆ ಈ ಬಳ್ಯಾಗ ಸುರುವಿ ಬಿಡೂಣ ಅಂದೆ. ಒಂದ ಸೇರ ಕಾಯಿ ನಿನಗ ಮತ್ತು ಪಾಲಾ ಮಾಡಿ ಕೊಡ್ತಾರೇನು ಅವರು ಕದ್ದಿ ಅಂತ ಗಿಡಕ್ಕ ಕಟ್ಟಿ ಒದಿತಾರು. ನಾ ಎಲ್ಲಾ ಮಾಡ್ತೀನಿ, ನೀ ಸುಮ್ಮನೆ ಕೊಡು ಅಂದಳು. ಮೆಲ್ಲಗ ಸರಕೋತ ಹೋಗಿ ಪಾಲಾ ಕೊಟ್ಟ ನನ್ನ ಚೀಲಾ ತಗೊಂಡು ಯಾರಿಗೂ ಕಾಣದಾಂಗ ಸರಕೋತ ಸರಕೋತ ಬುಟ್ಯಾಗ ತಂದ ಇಟ್ಟಳು. ಮನಸ್ಸು ಸಲ್ಪ ಹಗರಾತು. ಆದರೂ ಅವರ ಹೊಲಾ ದಾಟಿ ಹೋಗೋ ತನಾ ಜೀವ ಹೊಡಕೊತಾನೇ ಇತ್ತು. ಮತ್ತೊಂದು ಇಂತ ಸಾಹಸ ಮಾಡಲಿಲ್ಲ. ಅವರೆಲ್ಲಾ ಕೂಲಿ ತಗೊಳೊ ಮುಂದ ಗುಂಪ ಗುಂಪ ಆಗಿ ನಿಲ್ಲೋದು ಒಂದೇ ಕಡೆ ಕೂಡೋದು ಕದಿಯಲು ಸುಲಭವಾಗಲಿ ಅಂತ ಇರಬೇಕು. ಅವರಲ್ಲಿ ಕೆಲವರು ಅವರಿಗೆ ಎದುರಾಗಿ ಮರೆಯಾಗುವಂತೆ ಎದ್ದು ನಿಂತೇ ಇರುತ್ತಾರೆ. ಹೊಟ್ಟೆ ಶಾಸ್ತ್ರಕ್ಕೆ ನೊರೆಂಟು ಯೋಜನೆಗಳು ರೂಪುಕೊಂಡಿರುತ್ತವೇನೊ? ಅನಿಸುತ್ತಿರುತ್ತದೆ.

ನಾನು ಕೂಲಿ ಕೆಲಸಕ್ಕೆ ಹೋಗಿದ್ದು ಅಪ್ಪನಿಗೆ ಗೊತ್ತಿರಲಿಲ್ಲ. ಮರುದಿನ ಜ್ವರ ಬಂದು ಕೆಮ್ಮ ತೊಡಗಿದಾಗಲೇ ನನ್ನ ತಂಗಿ ಅಪ್ಪನಿಗೆ ಹೇಳಿದಳು. ಅಪ್ಪ ಕಣ್ಣು ಕಿಸಿದು ಅವ್ವನನ್ನು ನೋಡತೊಡಗಿದರು. ಅವ್ವ ಆಕೀಗಿ ನಾ ಹೋಗಬ್ಯಾಡ ಅಂತ ಹೇಳಿನಿ. ಆದ್ರೊ ಹೋಗ್ಯಾಳ ನಂದೇನೂ ತಪ್ಪಿಲ್ಲ. ಹಠ ಮಾಡಿ ಗೆಳತೇರ ಜೋಡಿ ಹೋಗ್ಯಾಳು ಎಂದು ಸಮರ್ಥಿಸಿಕೊಂಡಳು… ನಮ್ಮ ಮನೆಗೆ ಬಂದಿದ್ದ ನಮ್ಮ ಬಾಜು ಮನೆಯ ಅಣ್ಣನ ಹೆಂಡತಿ ನಮ್ಮ ವೈನಿ ಇಲ್ರಿ ಬಿಡ್ರಿ ಮಾಮಾರ… ಅವಳು ಗಟ್ಟಿ ಆಗಬೇಕು. ಎಲ್ಲಾ ಕಲಿಲಿ,ಇನ್ನೂ ಸಣ್ಣಾಕಿ ಅದಾಳ ಗೆಳತ್ಯಾರ ಕೂಡ ಹೋಗ್ಯಾಳ ಅತ್ತಿದೇನು ತಪ್ಪಿಲ್ಲ ಅಂತ ಅವ್ವನ ಪರ ವಾದಿಸಿದಳು, ಅಪ್ಪ ಸುಮ್ಮನಾದರು.

ಆದರೆ ಅಂದು ಮದ್ಯಾನದಾಗ ಊಟಾ ಮಾಡೊ ಮುಂದ ಚಂಪವ್ವಾಯಿ ಹೇಳಿದ ಮಾತು ಆಗಾಗ ನೆನಪಾಗುತ್ತಲೇ ಇರುತ್ತದೆ. “ ಕೂಲಿ ಅಂದ್ರ ಕೂಲೀನ… ಅದ ಎಷ್ಟು ಬರತೈತೊ ಹೋಗತೈತೊ… ಅದು ಮನ್ಯಾಗಿನವ್ರ ತಿನ್ನಲ್ಲಿಕ್ಕ… ನೀವ ಮಾತ್ರ ಮನಸಾ ಹೊಟ್ಟಿ ತುಂಬೋತನಾ ಇಲ್ಲೇ ತಿನ್ರೀ” ಅಂತ ಗುಟ್ಟಿನ ಮಾತು ಹೇಳಿದ್ದು .– ಇಂದು ನೂರು ಸಂಕಟಗಳನ್ನು ಹೊರ ಹಾಕುತ್ತಲೇ ಹೋರಾಟದ ಬದುಕಿಗೆ ಹೊಸ ಅರ್ಥಗಳನ್ನು ಕಲ್ಪಿಸುತ್ತಿದೆ.

 

Leave a Reply

Your email address will not be published.