ರಾಷ್ಟ್ರಪತಿ ಚುನಾವಣೆ: ಒಮ್ಮತದ ಅಭ್ಯರ್ಥಿಯ ಆಯ್ಕೆಸಾದ್ಯವೇ?-2

-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

ಮುಂದಿನ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಪರವಾಗಿ ಒಮ್ಮತದ ಅಭ್ಯರ್ತಿಯನ್ನು ನಿಲ್ಲಿಸಬೇಕು, ತನ್ಮೂಲಕ 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಬಾಜಪವನ್ನು ಸಮರ್ಥವಾಗಿ ಎದುರಿಸಲು ಶಕ್ತಿಯಿರುವಂತಹ  ಸಮಾನಮನಸ್ಕ ಪಕ್ಷಗಳ ಮೈತ್ರಿಕೂಟವೊಂದನ್ನು ರಚಿಸಬೇಕೆಂದಿರುವ ಕಾಂಗ್ರೇಸ್ ಪಕ್ಷದ   ಪ್ರಯತ್ನಗಳಿಗೆ  ಪೂರಕವಾದ ವಾತಾವರಣವಿನ್ನೂ ನಿರ್ಮಾಣವಾಗಿರುವಂತೆ ಕಾಣುತ್ತಿಲ್ಲ.

ತನ್ನ ಅಧಿಕೃತ ಅಭ್ಯರ್ಥಿಯನ್ನು ಯಾವ ಕಷ್ಟವೂ ಇರದೆ ಗೆಲ್ಲಿಸಿಕೊಳ್ಳುವ ಸಾಮಥ್ರ್ಯ ಹೊಂದಿರುವ ಬಾಜಪ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಹೆಚ್ಚಿಗೇನೂ ಮಾತಾಡುತ್ತಿಲ್ಲ.  ಇಂತಹ ಸಂದರ್ಭದಲ್ಲಿ ಬಾಜಪದ ನಡೆಗೆ ಕಾಯದೆ ವಿರೋಧಪಕ್ಷಗಳ ಪರವಾಗಿ ಒಮ್ಮತದ ವ್ಯಕ್ತಿಯೊಬ್ಬರನ್ನು ಸ್ಪರ್ದೆಗೆ ಇಳಿಸುವುದರಿಂದ ಒಂದು ಮಹಾ ಮೈತ್ರಿಕೂಟದ ಮಾತುಕತೆಗಳಿಗೆ ಮುನ್ನುಡಿ ಬರೆಯಬಹುದೆಂಬ ಶ್ರೀಮತಿ ಸೋನಿಯಾಗಾಂದಿಯವರ ಮುಂದಾಲೋಚನೆಯನ್ನು ಅರ್ಥ ಮಾಡಿಕೊಂಡ ಕೆಲವು ಪಕ್ಷಗಳು ತಮ್ಮ ಸಮ್ಮತಿ ಸೂಚಿಸಿದ್ದರೆ ಉಳಿದಂತೆ ಕೆಲವು ಪಕ್ಷಗಳು ಈ ಬಗ್ಗೆ ಇನ್ನೂ ಮಾತನಾಡುವ ಇಂಗಿತ ತೋರಿಸಿಲ್ಲ.

ಉಳಿದಂತೆ ಬೇರೆ ಪಕ್ಷಗಳಿಗೆ ಇಂತಹದೊಂದು ಮೈತ್ರಿಕೂಟ ರಚನೆಯ ತುರ್ತು ಇದೆಯೊ ಇಲ್ಲವೊ ಕಾಂಗ್ರೇಸ್ಸಿಗಂತು ಇದೆ. ಯಾಕೆಂದರೆ ಮೊನ್ನೆ ನಡೆದ ಪಂಚರಾಜ್ಯಚುನಾವಣೆಗಳಲ್ಲಿ ಪಂಜಾಬನ್ನು ಹೊರತು ಪಡಿಸಿದಂತೆ  ಉಳಿದ ರಾಜ್ಯಗಳಲ್ಲಿ ಅದು ಅನುಭವಿಸಿದ ಸೋಲು ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳುವಂತಹುದ್ದಲ್ಲ.  2019ರ ಹೊತ್ತಿಗೆ ಪಕ್ಷವು ಆ ಸೋಲುಗಳಿಂದ ಚೇತರಿಸಿಕೊಂಡು ಬಾಜಪವನ್ನು ಎದುರಿಸಬೇಕಾಗಿದ್ದರೆ  ಅದಕ್ಕೆ ಹಲವು ರಾಜ್ಯಗಳಲ್ಲಿ ಮಿತ್ರ ಪಕ್ಷಗಳ ನೆರವು ಬೇಕೇ ಬೇಕು. ಈ ಹಿನ್ನೆಲೆಯಲ್ಲಿಯೇ ಕಾಂಗ್ರೇಸ್  ತನ್ನ ಅಹಮ್ಮನ್ನು ತೊರೆದು ಉಳಿದ ಪಕ್ಷಗಳ ಜೊತೆ ಮಾತನಾಡಲು ಬಯಸುತ್ತಿದೆ. ಆದರೆ ಈ ವಿಚಾರದಲ್ಲಿ ಇದುವರೆಗು ಬಿಹಾರದ ಸಂಯುಕ್ತಜನತಾದಳದ ಶ್ರೀನಿತೀಶ್ ಕುಮಾರ್, ರಾಷ್ಟ್ರೀಯ ಜನತಾದಳದ ಶ್ರೀ ಲಾಲು ಪ್ರಸಾದ್ ಯಾದವ್,  ತಮಿಳುನಾಡಿನ ಡಿ.ಎಂ.ಕೆ.ಪಕ್ಷದ ಶ್ರೀಕರುಣಾನಿಧಿ, ಜಮ್ಮುಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶ್ರೀಓಮರ್ ಅಬ್ದುಲ್ಲಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಪಿ. ಕುನ್ಹಿಲ ಕುಟ್ಟಿ, ಕರ್ನಾಟಕದ ಜಾತ್ಯಾತೀತ ಜನತಾದಳದ ಶ್ರೀ ದೇವೇಗೌಡ, ಎಡಪಕ್ಷಗಳ ಸೀತಾರಾಂ ಯಚ್ಯೂರಿ, ಡಿ.ರಾಜಾ, ಎನ್.ಸಿ.ಪಿ.ಯ ಶರದ್ ಪವಾರ್  ಮುಂತಾದ ನಾಯಕರುಗಳು ಕಾಂಗ್ರೇಸ್ ಪಕ್ಷದ ಈ ನಿಲುವಿಗೆ ಸಮ್ಮತಿ ಸೂಚಿಸಿದ್ದಾರೆ

soniaಆದರೆ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಲು ಇಷ್ಟು ಪಕ್ಷಗಳ ಬೆಂಬಲ ಸಾಕಾಗಲಾರದು.  ಆದರೆ ಉಳಿದಿರುವ ಕೆಲಪಕ್ಷಗಳು ಇಂತಹದೊಂದು ನಿದಾರಕ್ಕೆ ಸಮ್ಮತಿ ಸೂಚಿಸಲು ಅಥವಾ  ಮಾತುಕತೆಗೆ ಕೂರಲು ಹಿಂದೆಮುಂದೆ ನೋಡುತ್ತಿವೆ.  ಕಾಂಗ್ರೇಸ್ಸಿನ ಒಂದು ಮೂಲದ ಪ್ರಕಾರ ನಿಜವಾದ ಸಮಸ್ಯೆ ಇರುವುದು ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರುಗಳ್ನು ಮಾತುಕತೆಗಾಗಿ ಒಂದೆಡೆ ಸೇರಿಸುವುದೇ ಕಷ್ಟದ ಕೆಲಸವಾಗಿದ್ದು., ಒಂದೊಮ್ಮೆ ಇವರು ಒಟ್ಟಿಗೆ ಕೂತು ಮಾತಾಡಿದ್ದೇ ಆದರೆ ಒಮ್ಮತದ ಅಭ್ಯರ್ಥಿರ್ಯೊಬ್ಬರನ್ನು  ಆಯ್ಕೆ ಮಾಡುವುದು ಕಷ್ಟದ ಕೆಲಸವೇನಲ್ಲ.

ಇದರೊಂದಿಗೆ ಕೆಲವು ಪ್ರಾದೇಶಿಕ ಪಕ್ಷಗಳ ರಾಜ್ಯದೊಳಗಿನ ರಾಜಕೀಯ ಚಿತ್ರಣಗಳೂ ಸಹ ಇಂತಹ ಮಾತುಕತೆಗೆ  ಪೂರಕವಾಗಿಲ್ಲವೆಂಬುದು ಸಹ ನಿಜ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ  ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಯಾದವ್ ಮತ್ತು ಬಹುಜನ ಪಕ್ಷದ ಕುಮಾರಿ ಮಾಯಾವತಿಯವರು ಒಂದೇ ಸೂರಿನಡಿ ಕೂತು ಮಾತಾಡುವುದು ಸದ್ಯದ ಮಟ್ಟಿಗೆ ಅಸಾದ್ಯವೆನಿಸುತ್ತಿದೆ. ಇನ್ನು ಪಶ್ಚಿಮ ಬಂಗಾಳದ ವಿಷಯಕ್ಕೆ ಬಂದರೆ ಕಾಲದಿಂದಲೂ ಎಡಪಕ್ಷಗಳ ವಿರುದ್ದವೇ ರಾಜಕಾರಣ ಮಾಡುತ್ತ ಬಂದಿರುವ ಮಮತಾ ಬ್ಯಾನರ್ಜಿಯವರು ಎಡಪಕ್ಷಗಳ ನಾಯಕರ ಜೊತೆ ಕೂತು ಮಾತಾಡುತ್ತಾರೆಂದು ನಂಬುವುದೂ ಕಷ್ಟವೇ. ಇಷ್ಟಲ್ಲದೆ ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರುಗಳಿಗೆ ಕಾಂಗ್ರೇಸ್ಸಿನ ಕೆಲವು ರಾಜಕೀಯ ನಡೆಗಳ ಬಗ್ಗೆ ಇರುವ ಅಸಮಾದಾನವೂ ಮಾತುಕತೆಗೆ ಅಡ್ಡಿಯಾಗಿರುವಂತೆ ಕಾಣುತ್ತಿದೆ.

ಉತ್ತರಪ್ರದೇಶದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರನ ಜೊತೆ ಮೈತ್ರಿಮಾಡಿಕೊಂಡ ಕಾಂಗ್ರೇಸ್ಸಿನ ಬಗ್ಗೆ ಮುಲಾಯಂಸಿಂಗ್ ಯಾದವರಿಗೆ ಇರುವ ಕೋಪವಿನ್ನು ಇಳಿದಂತೆ ಕಾಣುತ್ತಿಲ್ಲ. ತನ್ನ ಅಸ್ಥಿತ್ವವನ್ನು ತಿರಸ್ಕರಿಸಿ, ತಮ್ಮ ಪುತ್ರ ಅಖಿಲೇಶ್ ಯಾದವರ ಜೊತೆ ಮೈತ್ರಿ ಕುದುರಿಸಿಕೊಂಡ ಕಾಂಗ್ರೇಸ್ ಪಕ್ಷವೇ ಉತ್ತರಪ್ರದೇಶದ ಸೋಲಿಗೆ ಕಾರಣವೆಂದು ಅವರು ನಂಬಿದ್ದಾರೆ. ಇದನ್ನು ಮನಗಂಡ ಕಾಂಗ್ರೇಸ್ ಸದ್ಯಕ್ಕೆ ಅಖಿಲೇಶ್ ಯಾದವರ ಜೊತೆಯೇ ಮಾತುಕತೆ ನಡೆಸಿದೆ.ಇನ್ನು ಪಶ್ಚಿಮಬಂಗಾಳಕ್ಕೆ ಹೋದರೆ 2016ರ ಚುನಾವಣೆಯ ವೇಳೆ ಕಾಂಗ್ರೇಸ್ ಎಡಪಕ್ಷಗಳ ಜೊತೆ ಮೈತ್ರಿಮಾಡಿಕೊಂಡು ತನ್ನ ವಿರುದ್ದವೇ ಸ್ಪರ್ದಿಸಿದ್ದನ್ನು ತೃಣಮೂಲ ಕಾಂಗ್ರೇಸ್ಸಿನ ಮಮತಾ ಬ್ಯಾನರ್ಜಿ ಮರೆತಂತೆ ಕಾಣುತ್ತಿಲ್ಲ ಕಾಂಗ್ರೇಸ್ಸಿನ ಈ ನಿಲುವನ್ನು ತೀಕ್ಷ್ಣವಾಗಿ ಟೀಕಿಸುವ ಮಮತಾ ಇದುವರೆಗು ಕಾಂಗ್ರೇಸ್ಸಿನ ಈ ಸೂಚನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂಬುದನ್ನು ನಾವು ಗಮನಿಸಬೇಕು. ಒಡಿಸ್ಸಾದ  ಬಿಜು ಜನತಾದಳದ ನವೀನ್ ಪಟ್ನಾಯಿಕ್ ಇದುವರೆಗು ಈ ಬಗ್ಗೆ ತುಟಿ ಬಿಚ್ಚಿಲ್ಲ.  ದೆಹಲಿರಾಜಕಾರಣದಲ್ಲಿ ಕೇಳಿ ಬರುತ್ತಿರುವ ವದಂತಿಗಳಂತೆ ಒಡಿಸ್ಸಾದ ಬುಡಕಟ್ಟು  ಜನಾಮಗದವರಾದ ದ್ರೌಪದಿ ಮರ್ಮು ಅವರನ್ನೇನಾದರು ಬಾಜಪ ಅಭ್ಯರ್ಥಿ ಮಾಡಿದರೆ ನವೀನ ಪಟ್ನಾಯಿಕ್ ಅವರನ್ನು ವಿರೋಧಿಸಲು ಕಾರಣಗಳೇ ಇಲ್ಲ.

ಹೀಗೆ  ವಿರೋಧಪಕ್ಷಗಳ ಕಡೆಯಿಂದ ಒಮ್ಮತದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕಾಂಗ್ರೇಸ್ಸಿನ  ಇಚ್ಚೆಗೆ ಹಲವು ಅಡೆತಡೆಗಳಿವೆ. ನಾನು ಮೊದಲೇ ಹೇಳಿದಂತೆ  ಹತ್ತು ಹಲವು ವಿಚಾರಗಳಿಗಾಗಿ ಒಂದೊಂದು ದಿಕ್ಕಿಗೆ ಮುಖಮಾಡಿರುವ ಈ ನಾಯಕರುಗಳನ್ನು ಒಂದೆಡೆ ಸೇರಿಸಿ ಮಾತುಕತೆ ನಡೆಸುವುದೇ ಅಸಾದ್ಯದ ವಿಷಯವಾಗಿದೆ. ಹಾಗೊಂದು ವೇಳೆ ಈ ನಾಯಕರುಗಳು ಒಟ್ಟಿಗೆ ಕೂತು  ಚರ್ಚೆ ಮಾಡಿದಲ್ಲಿ ಮೈತ್ರಿಕೂಟದ ಮಾತುಗಳಿಗೆ ಒಂದು ಅರ್ಥ ಬರಬಹುದು. ಈ ವಿಚಾರವಾಗಿ ಸದ್ಯಕ್ಕಿರುವ ಆಶಾಕಿರಣವೆಂದರೆ, ಇದೇ ಜೂನ್ ತಿಂಗಳ ಮೂರನೇ ತಾರೀಖು ತಮಿಳುನಾಡಿನ ಚೆನ್ನೈನಲ್ಲಿ ಕರುಣಾನಿಧಿಯವರ 94 ನೇ ಹುಟ್ಟು ಹಬ್ಬದ  ಸಂಭ್ರಮಾಚರಣೆಯ ಸಮಾರಂಭವೊಂದು ಆಯೋಜನೆಯಾಗಿದ್ದು, ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರುಗಳು ಇದರಲ್ಲಿ ಬಾಗವಹಿಸುವ ಸಾದ್ಯತೆ ಇದೆ. ಆ ಸಂದರ್ಭದಲ್ಲಿಯಾದರು  ರಾಷ್ಟ್ರಪತಿ  ಚುನಾವಣೆಯಬಗ್ಗೆ ಒಂದು ಅರ್ಥಪೂರ್ಣ ಮಾತುಕತೆ ನಡೆಯಬಹುದೆಂದು ಕಾಂಗ್ರೇಸ್ ನಂಬಿಕೊಂಡಿದೆ.

 

Leave a Reply

Your email address will not be published.